ವೆಂಟಿಲೇಟರ್ : ಈ ಜೀವರಕ್ಷಕ ಯಂತ್ರವನ್ನು ಹೇಗೆ, ಯಾವಾಗ ಬಳಸುತ್ತಾರೆ?

ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರ. ಕೋವಿಡ್-19 ವೈರಾಣುವಿನ ಸೋಂಕಿನಿಂದಾಗಿ ರೋಗ ಬಾಧಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ, ಕೃತಕ ಉಸಿರಾಟದ ವ್ಯವಸ್ಥೆಯನ್ನು ವೆಂಟಿಲೇಟರ್ ಮುಖಾಂತರ ನೀಡುವುದು ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರವಾಗಿದ್ದು, ಶ್ವಾಸಕೋಶದ ಸೋಂಕು ಅಥವಾ ಗಾಯ ಮೆದುಳಿಗೆ ಉಂಟಾದ ಹಾನಿಯಿಂದ ಶ್ವಾಸಕೋಶಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಶ್ವಾಸಕೋಶಗಳಿಗೆ ಸಹಾಯ ಮಾಡುತ್ತವೆ. ಒತ್ತಡ ತಂತ್ರಜ್ಞಾನದ ಮುಖಾಂತರ ಶಿಥಿಲಗೊಂಡಿರುವ ಅಥವಾ ದುರ್ಬಲಗೊಳ್ಳುತ್ತಿರುವ ಶ್ವಾಸಕೋಶಗಳ ಒಳಗೆ ಹೆಚ್ಚುವರಿ ಶುದ್ಧ ಆಮ್ಲಜನಕವನ್ನು ಈ ಯಂತ್ರಗಳ ಮುಖಾಂತರ ಸರಬರಾಜು ಮಾಡಲಾಗುತ್ತದೆ. ಹೀಗೆ ಮಾಡಿದಾಗ ರಕ್ತದಲ್ಲಿ ನಿಗಧಿತ ಪ್ರಮಾಣದಲ್ಲಿ ಆಮ್ಲಜನಕ ಇರುವಂತೆ ಕಾಯ್ದುಕೊಳ್ಳುತ್ತದೆ. ನಮ್ಮ ದೇಹದಲ್ಲಿ ಹೃದಯದಷ್ಟೇ ಪ್ರಾಮುಖ್ಯವಾದ ಇನ್ನೊಂದು ಅಂಗವೆಂದರೆ ಶ್ವಾಸಕೋಶಗಳು. ಮಲಿನಗೊಂಡ ರಕ್ತ ಹೃದಯದಿಂದ ಶ್ವಾಸಕೋಶಗಳಿಗೆ ಹೋಗಿ ಆಮ್ಲಜನಕವನ್ನು ಪಡೆದುಕೊಂಡು ಪುನ: ಹೃದಯದ ಮುಖಾಂತರ, ದೇಹದ ಇತರ ಅಂಗಗಳಿಗೆ ನಿರಂತರವಾಗಿ ಪೂರೈಕೆಯಾಗುತ್ತಿರುತ್ತದೆ.

VENTILATORS

ನಮ್ಮ ದೇಹದ ಮೆದುಳು, ಕಿಡ್ನಿ, ಲಿವರ್ ಮುಂತಾದ ಬಹುಮುಖ್ಯವಾದ ಅಂಗಗಳಿಗೆ ನಿರಂತರವಾಗಿ ಆಮ್ಲಜನಕ, ಪೋಷಕಾಂಶ ಪೂರೈಕೆಯಾಗಬೇಕು. ಮೂರು ನಿಮಿಷಕ್ಕಿಂತ ಜಾಸ್ತಿ ಕಾಲ ಮೆದುಳಿಗೆ ರಕ್ತ ಹಾಗೂ ಆಮ್ಲಜನಕದ ಪೂರೈಕೆ ನಿಂತುಹೋದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಶ್ವಾಸಕೋಶಗಳು ನಿರಂತರವಾಗಿ ದಿನದ 24 ಗಂಟೆಗಳ ಕಾಲವೂ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ರೋಗಿಯ ಉಚ್ವಾಸಕ್ಕೆ ಸಹಾಯ ಮಾಡುವ ವೆಂಟಿಲೇಟರ್ ಒತ್ತಡವನ್ನು ಪಾಸಿಟಿವ್ ಪ್ರೆಶರ್ ವೆಂಟಿಲೇಷನ್ ಎನ್ನುತ್ತಾರೆ. ರೋಗಿಗಳು ನಿಶ್ವಾಸವನ್ನು ತಾವಾಗಿಯೇ ಮಾಡುತ್ತಾರೆ. ನಿಶ್ವಾಸ ಮಾಡಲು ಕಷ್ಟವಾದಾಗ ಅದಕ್ಕೂ ವೆಂಟಿಲೇಟರನ್ನು ಬಳಸಬಹುದಾಗಿದೆ. ರೋಗಿಯ ದೇಹಸ್ಥಿತಿ. ರೋಗದ ತೀವ್ರತೆ, ಗಾಯದ ತೀವ್ರತೆ ಇವುಗಳಿಗೆ ಅನುಗುಣವಾಗಿ ಆಮ್ಲಜನಕದ ಪ್ರಮಾಣವನ್ನು ಮತ್ತು ಪ್ರವಹಿಸುವಿಕೆಯನ್ನು ನಿಯಂತ್ರಿಸಬಹುದಾಗಿದೆ.

ಹೇಗೆ ವೆಂಟಿಲೇಟರ್ ಬಳಸುತ್ತಾರೆ?

ನೇರವಾಗಿ ಅಗತ್ಯ ರೋಗಿಗಳಿಗೆ ಈ ವೆಂಟಿಲೇಟರ್ ಯಂತ್ರವನ್ನು ರೋಗಿಯ ಶ್ವಾಸಕೋಶಕ್ಕೆ ಜೋಡಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ರೋಗಿಗಳಿಗೆ ಮೂಗು ಅಥವಾ ಬಾಯಿಯ ಮುಖಾಂತರ ಟ್ಯೂಬ್ ಅಥವಾ ನಳಿಕೆ ಗಂಟಲಿನ ಮಾರ್ಗವಾಗಿ, ಗಾಳಿನಾಳವಾದ ಟ್ರೀಕಿಯಾದ ಮುಖಾಂತರ ಶ್ವಾಸಕೋಶಕ್ಕೆ ಗಾಳಿ ತಲುಪುವಂತೆ ಮಾಡಲಾಗುತ್ತದೆ. ಇದನ್ನು ಇಂಟ್ಯುಬೇಷನ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ. ಸಾಮಾನ್ಯವಾಗಿ ಕೃತಕ ಉಸಿರಾಟದ ಅವಶ್ಯಕತೆ ಇರುವವರಿಗೆ ಈ ರೀತಿ ವ್ಯವಸ್ಥೆ ಮಾಡಲಾಗುತ್ತದೆ. ಈ ಶ್ವಾಸಕೋಶದ ತೊಂದರೆ ಇರುವವರಿಗಲ್ಲದೆ. ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದಾಗ ರೋಗಿಗಳನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಾಗಲೂ ಈ ರೀತಿ ಇಂಟ್ಯುಬೇಷನ್ ಮಾಡಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತದೆ.

ಇದಲ್ಲದೆ ಕೆಲವೊಮ್ಮೆ ರೋಗಿಗಳಿಗೆ ಅಪಘಾತದಿಂದಾಗಿ ಹಲವಾರು ಅಂಗಗಳಿಗೆ, ಮೆದುಳಿಗೆ ಹಾನಿಯಾಗಿದ್ದಲ್ಲಿ ಬಹಳ ದಿನಗಳವರೆಗೆ ಕೃತಕ ಉಸಿರಾಟದ ಅವಶ್ಯಕತೆ ಇದ್ದಲ್ಲಿ ನೇರವಾಗಿ ಗಾಳಿ ನಳಿಕೆಗಳಿಂದ ಇಂಟ್ಯುಬೇಶನ್ ಮುಖಾಂತರ ಆಮ್ಲಜನಕ ಪೂರೈಕೆ ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಗಂಟಲಿನ ಹೊರಭಾಗದಲ್ಲಿ ಗಾಳಿನಳಿಕೆಯಾದ ಟ್ರೀಕಿಯಾ ಎಂಬ ನಳಿಕೆಗೆ 4 ಅಥವಾ 5 ರಿಂಗ್‍ಗಳ ನಡುವೆ ಕೃತಕ ರಂಧ್ರವನ್ನು ಮಾಡಿ ಅದರಲ್ಲಿ ಟ್ರೇಕಿಯಾಸ್ಟಮಿ ಟ್ಯೂಬನ್ನು ಹಾಕಿ, ಅದರ ಮುಖಾಂತರ ವೆಂಟಿಲೇಟರನ್ನು ರೋಗಿಯ ಶ್ವಾಸಕೋಶಕ್ಕೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ ರೋಗಿಯ ಶ್ವಾಸಕೋಶಗಳಿಗೆ ನಿರಂತರವಾಗಿ ಆಮ್ಲಜನಕಯುಕ್ತ ಗಾಳಿ ಸರಬರಾಜು ಆಗುವಂತೆ ನೋಡಿಕೊಳ್ಳಲಾಗುವುದು. ಈ ಮೂಲಕ ದೇಹದೆಲ್ಲೆಡೆ ಆಮ್ಲಜನಕಯುಕ್ತ ರಕ್ತ ಸಿಗುವಂತೆ ಮಾಡಿ ರೋಗಿಯ ಬಹುಮುಖ್ಯ ಅಂಗಗಳಾದ ಮೆದುಳು, ಕಿಡ್ನಿ, ಲಿವರ್ ಮತ್ತು ಜೀವಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.

ವೆಂಟಿಲೇಟರ್ ಯಾವಾಗ ಬಳಸುತ್ತಾರೆ?

• ಪಪ್ಪುಸ ಜ್ವರ ಅಥವಾ ನ್ಯೂಮೋನಿಯಾ ಉಂಟಾದಾಗ ಶ್ವಾಸಕೋಶದ ಕಾರ್ಯಕ್ಷಮತೆ ಕ್ಷೀಣಿಸುತ್ತದೆ ಮತ್ತು ಸರಾಗವಾಗಿ ಆಮ್ಲಜನಿಕ ಪೂರೈಕೆಯಾಗುವುದಿಲ್ಲ.
ಕೋವಿಡ್-19 ಸೋಂಕು ಶ್ವಾಸಕೋಶಗಳಿಗೆ ತಗುಲಿದಾಗ ವೈರಾಣುಗಳು, ಶ್ವಾಸಕೋಶಗಳ ಮೇಲೆ ಭೀಕರವಾದ ದಾಳಿ ನಡೆಸಿ, ರೋಗಿ ಸರಾಗವಾಗಿ ಉಸಿರಾಡದಂತೆ ಮಾಡುತ್ತದೆ ಮತ್ತು ಆಮ್ಲಜನಕದ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ರೋಗಿ ನಿರಾಯಾಸವಾಗಿ ಉಸಿರಾಡದಿದ್ದಾಗ, ಸ್ವಯಂ ಉಸಿರಾಟದ ಶಕ್ತಿಯನ್ನು ಕಳೆದುಕೊಂಡಾಗ ಕೃತಕ ಉಸಿರಾಟದ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ 5 ರಿಂದ 6 ಶೇಕಡಾ ಕೋರೋನಾ ಪೀಡಿತರಿಗೆ ಈ ರೀತಿ ವೆಂಟಿಲೇಟರ್ ವ್ಯವಸ್ಥೆ ಅನಿವಾರ್ಯ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
• ಶಸ್ತ್ರಚಿಕಿತ್ಸೆ ಮಾಡುವಾಗ, ಅರವಳಿಕೆ ನೀಡಿರುವಾಗ ರೋಗಿಗಳು ತನ್ನಿಂತಾನೇ ಉಸಿರಾಡಲು ಸಾಧ್ಯವಾಗುವುದಿಲ್ಲ. ಎಲ್ಲಾ ಉಸಿರಾಟದ ಸ್ನಾಯುಗಳು ವಿಕಸನಗೊಂಡು ಸ್ವಯಂ ಉಸಿರಾಟ ಸಾಧ್ಯವಾಗದು. ಇಂತಹ ಸಂದರ್ಭಗಳಲ್ಲಿ ಅರಿವಳಿಕೆ ಪ್ರಭಾವದಲ್ಲಿರುವಾಗ ವೆಂಟಿಲೇಟರ್ ಬಳಕೆ ಸರ್ವೇಸಾಮಾನ್ಯ.
• ಧೀರ್ಘಕಾಲದ ಶಸ್ತ್ರ್ರಚಿಕಿತ್ಸೆ ನಡೆದು (12 ರಿಂದ 15 ಗಂಟೆಗಳ ಕಾಲ) ರೋಗಿಯ ಸ್ನಾಯುಗಳ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಶಸ್ತ್ರಚಕಿತ್ಸೆ ಬಳಿಕವೂ ಒಂದೆರಡು ದಿನ ವೆಂಟಿಲೇಟರ್ ವ್ಯವಸ್ಥೆ ಬೇಕಾಗಬಹುದು.
• ಹೃದಯಾಘಾತ, ಮೆದುಳಿನ ಆಘಾತ ಉಂಟಾದಾಗ ಸಮರ್ಪಕ ಆಮ್ಲಜನಕ ಪೂರೈಕೆಗಾಗಿ ವೆಂಟಿಲೇಟರ್ ಬಳಸುತ್ತಾರೆ.
• ಎದೆಗೂಡಿಗೆ ಏಟು ಬಿದ್ದಾಗ, ಎದೆಗೂಡಿನ ಸ್ನಾಯುಖಂಡಗಳಿಗೆ ಪೆಟ್ಟು ಬಿದ್ದಾಗ, ಸ್ವಯಂ ಶ್ವಾಸೋಚ್ಚಾಸ. ಮಾಡಲು ಸಾಧ್ಯವಾಗದಿದ್ದಾಗ ವೆಂಟಿಲೇಟರ್ ಬಳಕೆ ಅನಿವಾರ್ಯವಾಗುತ್ತದೆ.
• ನರ ಸಂಬಂಧ ಖಾಯಿಲೆಗಳು ಮತ್ತು ಮೆದುಳಿನ ಮೇಲೆ ತೀವ್ರ ಗಾಯವಾಗಿ ಶ್ವಾಸಕೋಶಗಳ ಮೇಲಿನ ನಿಯಂತ್ರಣ ತಪ್ಪಿದಾಗ, ಕೃತಕ ಉಸಿರಾಟದ ಅವಶ್ಯಕತೆ ಇರುತ್ತದೆ.

ವಾಸ್ತವ ವಿಚಾರ:

ಈಗ ನಮ್ಮ ದೇಶದಲ್ಲಿ ಕರೋನಾ ವಂಶದ ಕೋವಿಡ್-19 ಎಂಬ ವೈರಾಣುವಿನ ರುದ್ರನರ್ತನ ಎಲ್ಲೆಡೆ ಕಂಡು ಬಂದಿದೆ. ನಮ್ಮ ದೇಶದ ಜನಸಂಖ್ಯೆಯಾದ 130 ಕೋಟಿಯ 2 ಶೇಕಡಾ ರೋಗಿಗಳು ಈ ರೋಗಕ್ಕೆ ತುತ್ತಾದಲ್ಲಿ ಕನಿಷ್ಠ 2.6 ಕೋಟಿ (260 ಲಕ್ಷ) ಮಂದಿ ಈ ರೋಗಕ್ಕೆ ತುತ್ತಾಗಬಹುದು. ಅಂಕಿ ಅಂಶಗಳಿಂದ ಶೇಕಡಾ 5 ಮಂದಿಗೆ ಅಂದರೆ ಪ್ರತಿ ಸೋಂಕಿತ ನೂರು ರೋಗಿಗಳಲ್ಲಿ 5 ಮಂದಿಗೆ ವೆಂಟಿಲೇಟರ್‍ನ ಅವಶ್ಯಕತೆ ಬರಬಹುದು ಎಂದು ಅಂದಾಜಿಸಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ನಮಗೆ ಕನಿಷ್ಠ ಪಕ್ಷ, ನಮ್ಮ ದೇಶದಲ್ಲಿ ಇದೇ ರೀತಿ ಕೋವಿಡ್-19 ನ ಆರ್ಭಟ ಮುಂದುವರೆದಲ್ಲಿ ಮುಂದಿನ ಎರಡು ವಾರಗಳಲ್ಲಿ 1.25 ರಿಂದ 1.5 ಲಕ್ಷ ವೆಂಟಿಲೇಟರ್‍ಗಳ ಅವಶ್ಯಕತೆ ಉಂಟಾಗಬಹುದು.

ಆದರೆ ವಾಸ್ತವದಲ್ಲಿ ನಮ್ಮ ದೇಶದಲ್ಲಿ ಹೆಚ್ಚೆಂದರೆ 45,000 ದಿಂದ 50,000 ವೆಂಟಿಲೇಟರ್ ಸೌಲಭ್ಯ ಮಾತ್ರ ಸಧ್ಯಕ್ಕೆ ಲಭ್ಯವಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಮುಂದಿನ ದಿನದಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದು ಪರಿಪೂರ್ಣ ವೆಂಟಿಲೇಟರ್‍ನ ವೆಚ್ಚ 35 ರಿಂದ 40 ಲಕ್ಷ ಇದೆ. ಆದರೆ ಸಂಚಾರಿ ವೆಂಟಿಲೇಟರನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ಎಂದು ಐಐಟಿ ಕಾನ್ಪುರದ ಸಂಶೋಧನಾ ವಿಧ್ಯಾರ್ಥಿಗಳು ತೋರಿಸಿದ್ದಾರೆ. ಮತ್ತು ಕೇವಲ 70 ಸಾವಿರ ರೂಪಾಯಿ ವೆಂಟಿಲೇಟರ್ ತಯಾರಿಸಿದ್ದಾರೆ ಎಂಬ ವದಂತಿಗಳು ಬರುತ್ತಿದೆ. ಅದೇನೇ ಇರಲಿ ಸರ್ಕಾರ ಈ ವಿಚಾರವಾಗಿ ತಕ್ಷಣವೇ ತುರ್ತು ಆದೇಶ ನೀಡಿ ಹೆಚ್ಚಿನ ವೆಂಟಿಲೇಟರ್ ತಯಾರಿಸಲು ವಿಜ್ಞಾನಿಗಳಿಗೆ ಮತ್ತು ತಂತ್ರಜ್ಞರಿಗೆ ಆದೇಶ ಹಾಗೂ ಅನುಮತಿ ನೀಡಬೇಕಾಗಿದೆ.

ವೆಂಟಿಲೇಟರ್ ಅಪಾಯಗಳು:

1. ನಿರಂತರವಾಗಿ ರೋಗಿ, ನಳಿಕೆಗಳ ಮುಖಾಂತರ ವೆಂಟಿಲೇಟರ್ ಬಳಸಿದಲ್ಲಿ, ಬ್ಯಾಕ್ಟೀರಿಯಾಗಳು ಶ್ವಾಸಕೋಶಗಳಿಗೆ ಸೇರಿಕೊಂಡು ನ್ಯೂಮೋನಿಯಾ ಅಥವಾ ಶ್ವಾಸಕೋಶದ ಸೋಂಕು ಉಂಟಾಗಬಹುದು.

2. ನಿಗಧಿತ ಪ್ರಮಾಣಕ್ಕಿಂತ ಜಾಸ್ತಿ ಆಮ್ಲಜನಕ ಶ್ವಾಸಕೋಶಕ್ಕೆ ಹೋದಲ್ಲಿ ಅಪಾಯ ಉಂಟಾಗಬಹುದು. ಸರಿಯಾದ ಪ್ರಮಾಣದ ಒತ್ತಡ ಮತ್ತು ನಿಗಧಿತ ಪ್ರಮಾಣದ ಆಮ್ಲಜನಕವನ್ನು ಮಾತ್ರ ನೀಡಬೇಕಾಗುತ್ತದೆ. ನಿರಂತರವಾಗಿ ಇದರ ಮೇಲೆ ನಿಗಾ ವಹಿಸಬೇಕಾಗುತ್ತದೆ.

3. ಜಾಸ್ತಿ ಕಾಲಗಳ ಕಾಲ ವೆಂಟಿಲೇಟರ್ ಬಳಸಿದಲ್ಲಿ ಶ್ವಾಸಕೋಶಗಳ ಸ್ನಾಯುಗಳ ಕ್ಷಮತೆ ಕ್ಷೀಣಿಸಬಹುದು.

4. ಎದೆ ಮತ್ತು ಶ್ವಾಸಕೋಶಗಳ ನಡುವಿನ ಪದರಗಳಲ್ಲಿ ಗಾಳಿ ಸೇರಿಕೊಂಡಲ್ಲಿ ಅಲ್ಲಿ ಪುನ: ಸೋಂಕು ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಒತ್ತಡದಿಂದ ಈ ರೀತಿ ತೊಂದರೆ ಉಂಟಾಗಬಹುದು.

5. ಸೈನುಸೈಟಿಸ್ ಎಂಬ ತೊಂದರೆ ಇರುವವರಿಗೆ ತುಂಬ ದಿನಗಳ ಕಾಲ ಇಂಟ್ಯುಬೇಷನ್ ಮಾಡಿ ನಳಿಕೆ ಇಟ್ಟಲ್ಲಿ ಸೈನುಸೈಟಿಸ್ ತೊಂದರೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಸೈನಸ್‍ಗಳಲ್ಲಿ ಸೋಂಕು, ಉರಿಯೂತದ ತೊಂದರೆ ಹೆಚ್ಚಾಗಬಹುದು.

6. ಟ್ರೇಕಿಯೋ‌ಸ್ಟ್ಕಮಿ ಮಾಡಿ ವೆಂಟಿಲೇಟರ್ ಸಂಪರ್ಕ ನೀಡಿದಲ್ಲಿ ಗಂಟಲಿನ ಟ್ರೇಕಿಯಾದ ಮೇಲಿನ ಭಾಗದಲ್ಲಿ ಸೋಂಕು ಉಂಟಾಗಬಹುದು. ನಿರಂತರವಾದ ಆರೈಕೆ ಮತ್ತು ಎಚ್ಚರಿಕೆ ವಹಿಸದಿದ್ದಲ್ಲಿ ಸೋಂಕು ಎಲ್ಲೆಡೆ ಹರಡಿ ನ್ಯೂಮೋನಿಯಾ ಆಗಿ ಪರಿವರ್ತನೆ ಆಗಬಹುದು.

ವೆಂಟಿಲೇಟರ್ ಅಥವಾ ಕೃತಕ ಉಸಿರಾಟದ ಯಂತ್ರದ ಬಳಕೆಯನ್ನು ಎಲ್ಲಿ ಮಾಡಬೇಕು., ಹೇಗೆ ಮಾಡಬೇಕು ಮತ್ತು ಎಷ್ಟು ದಿನ ಮಾಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಸಧ್ಯದ ಪರಿಸ್ಥಿಇಯಲ್ಲಿ ದೇಶದೆಲ್ಲೆಡೆ ತೀವ್ರವಾಗಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್-19 ಎಂಬ ವೈರಾಣುವಿನ ಆರ್ಭಟದಿಂದಾಗಿ ವೆಂಟಿಲೇಟರ್ ಯಂತ್ರದ ಕೃತಕ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಕೋವಿಡ್-19 ವೈರಾಣು ನೇರವಾಗಿ ರೋಗಿಯ ಶ್ವಾಸಕೋಶಕ್ಕೆ ದಾಳಿ ಮಾಡಿ, ಶ್ವಾಸಕೋಶವನ್ನೇ ಹಾಳು ಮಾಡುವ ಕಾರಣದಿಂದಾಗಿ ಈ ವೆಂಟಿಲೇಟರ್‍ಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.

ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್-19 ವೈರಾಣುವಿನ ಸೋಂಕಿನಿಂದಾಗಿ ರೋಗ ಬಾಧಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ, ಕೃತಕ ಉಸಿರಾಟದ ವ್ಯವಸ್ಥೆಯನ್ನು ವೆಂಟಿಲೇಟರ್ ಮುಖಾಂತರ ನೀಡುವುದು ಅನಿವಾರ್ಯವಾಗಿದೆ. ಸೋಂಕು ಹರಡುವಿಕೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲಿ,್ಲ ರೋಗ ನಿಯಂತ್ರಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ನಮ್ಮಲ್ಲಿರುವ ವೆಂಟಿಲೇಟರ್‍ಗಳ ಸಂಖ್ಯೆ ಕಡಿಮೆ ಇರುವುದರಿಂದ, ಇನ್ನಷ್ಟು ವೆಂಟಿಲೇಟರ್ ಸೌಲಭ್ಯ ಸಿಗುವಂತೆ ಮಾಡುವ ಗುರುತರ ಹೊಣೆಗಾರಿಕೆ ಸರಕಾರ ಮತ್ತು ಆರೋಗ್ಯ ಇಲಾಖೆಯ ಮೇಲಿದೆ. ಅದೇನೆ ಇರಲಿ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಿ ರೋಗ ಹರಡದಂತೆ ಮಾಡಿದಲ್ಲಿ ರೋಗ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!