ವ್ಯಾಪಿಸುತ್ತಿದೆ ಪಿಂಕ್ ಐ ಕಣ್ಣಿನ ಸೋಂಕು. ಈ ಕಣ್ಣಿನ ಸೋಂಕು ತಡೆಗಟ್ಟುವುದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು – ಆಗಾಗ ಕೈ ತೊಳೆಯಬೇಕು, ಎದುರಿನಲ್ಲಿ ಇರುವವರ ಕಣ್ಣನ್ನು ನೋಡುತ್ತಾ ಮಾತನಾಡುವುದು ಸ್ವಲ್ಪ ಕಾಲ ನಿಲ್ಲಿಸಬೇಕು, ಸನ್ ಗ್ಲಾಸ್ ಅಥವಾ ಕಪ್ಪು ಕನ್ನಡಕವನ್ನು ಧರಿಸುವುದು ಉತ್ತಮ.
ಮುಂಗಾರು ಋತುವಿನ ಕಾರಣಕ್ಕೆ “ಪಿಂಕ್ ಐ” ಎಂದು ಕರೆಯುವಂಥ ಕಣ್ಣಿನ ಸೋಂಕು ಪ್ರಕರಣಗಳ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಸದ್ಯಕ್ಕೆ ಇಡೀ ಭಾರತದಲ್ಲೇ ಈ ಕಣ್ಣಿನ ಸಾಂಕ್ರಾಮಿಕ ಸೋಂಕು ಸಮಸ್ಯೆ ಕಾಣಿಸಿಕೊಂಡಿದೆ. ಕಲುಷಿತವಾದ ಫ್ಲುಯಿಡ್ ಗಳು ಅಥವಾ ಅಂಥ ಸ್ಥಳಗಳ ಸಂಪರ್ಕಕ್ಕೆ ಬಂದಾಗ ಈ ಕಣ್ಣಿನ ಸೋಂಕು ಹರಡುತ್ತದೆ. ಆರಂಭದಲ್ಲೇ ಹೇಳಿದ ಹಾಗೆ ಈ ಪಿಂಕ್ ಐ ಹಬ್ಬುವುದಕ್ಕೆ ಕಾರಣ ಬ್ಯಾಕ್ಟೀರಿಯಾ, ವೈರಲ್ ಅಥವಾ ಅಲರ್ಜಿಯ ಮೂಲಗಳೇ ಆಗಿರಬಹುದು. ಆದರೆ ಈಗ ಸದ್ಯಕ್ಕೆ ಕಾಣಿಸಿಕೊಂಡಿರುವ ಕಣ್ಣಿನ ಸೋಂಕು ಪ್ರಾಥಮಿಕವಾಗಿ ವೈರಲ್ ನಿಂದ ಆಗಿರುವಂತೆ ಕಂಡುಬರುತ್ತದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ ಅಡೆನೊವೈರಸ್ ಸ್ಟ್ರೈನ್ ಗೆ ಸಂಬಂಧಿಸಿದೆ. ಆದರೆ ಜನ ಸಾಮಾನ್ಯರ ಮಧ್ಯೆ ಈ “ಪಿಂಕ್ ಐ” ಸೋಂಕನ್ನು “ಮದ್ರಾಸ್ ಐ” ಎಂದು ಕರೆಯುತ್ತಾರೆ.
ಕಣ್ಣಿನ ಆರೈಕೆಗೆ ಪ್ರಮುಖ ಸಂಸ್ಥೆಯಾದ ನಾರಾಯಣ ನೇತ್ರಾಲಯವು ತನ್ನ ಎಲ್ಲ 4 ಘಟಕಗಳಿಂದ ಸೇರಿ ಪ್ರತಿದಿನ ಕಣ್ಣು ಸೋಂಕಿನಿಂದ ಬಳಲುತ್ತಿರುವ 100ಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸುತ್ತಿದೆ. ಆ ಪೈಕಿ ಶೇಕಡಾ 30ರಷ್ಟು ಮಕ್ಕಳು. ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುವುದರಲ್ಲಿ ದೊಡ್ಡ ಸವಾಲೇ ಇದೆ. ಸೋಂಕುಪೀಡಿತ ಶಿಶುಗಳು ಮತ್ತು ತಾಯಂದಿರನ್ನು ಒಳಗೊಂಡ ಅನೇಕ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ.
ಕಣ್ಣಿನ ಸೋಂಕು ತಡೆಯುವುದಕ್ಕೆ ಏನು ಮಾಡಬೇಕು?
ಈ ಕಣ್ಣಿನ ಸೋಂಕು ತಡೆಗಟ್ಟುವುದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗಾಗ ಕೈ ತೊಳೆಯಬೇಕು, ಎದುರಿನಲ್ಲಿ ಇರುವವರ ಕಣ್ಣನ್ನು ನೋಡುತ್ತಾ ಮಾತನಾಡುವುದು ಸ್ವಲ್ಪ ಕಾಲ ನಿಲ್ಲಿಸಬೇಕು, ಸನ್ ಗ್ಲಾಸ್ ಅಥವಾ ಕಪ್ಪು ಕನ್ನಡಕವನ್ನು ಧರಿಸುವುದು ಉತ್ತಮ. ಯಾರಿಗೆ ಈ ಪಿಂಕ್ ಐ ಸೋಂಕು ಬಂದಿರುತ್ತದೋ ಅಂಥವರ ವೈಯಕ್ತಿಕ ವಸ್ತುಗಳನ್ನು ಇತರರು ಬಳಸಬಾರದು. “ಪ್ರಮುಖವಾಗಿ, ಸ್ವಯಂ ವೈದ್ಯ ಮಾಡಿಕೊಳ್ಳಲೇಬಾರದು. ಪಿಂಕ್ ಐ ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು,” ಎಂದು ನಾರಾಯಣ ನೇತ್ರಾಲಯದ ಉಪಾಧ್ಯಕ್ಷರಾದ ಡಾ. ನರೇನ್ ಶೆಟ್ಟಿ ಸಲಹೆ ನೀಡುತ್ತಾರೆ.
ಕಣ್ಣು ಸೋಂಕಿನ (ಪಿಂಕ್ ಐ) ಪ್ರಮುಖ ಲಕ್ಷಣಗಳು
1. ಕಣ್ಣು ಕೆಂಪಾಗುವುದು
2. ಕಣ್ಣಿನ ತುರಿಕೆ
3. ಕಣ್ಣಿನ ಸುತ್ತ ಊತ
4. ಕಣ್ಣಿನಿಂದ ವಿಪರೀತ ನೀರು ಹೋಗುವುದು
5. ಕಣ್ಣುಗಳಿಂದ ದ್ರವ ಸ್ರವಿಸುತ್ತದೆ
6. ಕಣ್ಣುರೆಪ್ಪೆಗಳ ಹೊರಪದರದಲ್ಲೂ ಸೋಂಕು ಇರುತ್ತದೆ
ಈ ಸೋಂಕಿಗೆ ನೀಡುವ ಚಿಕಿತ್ಸೆಯಲ್ಲಿ ರೋಗ ಲಕ್ಷಣಗಳನ್ನು ಸರಿಯಾಗಿ ನಿರ್ವಹಿಸುವುದು ಸಹ ಒಳಗೊಂಡಿರುತ್ತದೆ. ಇದರ ಜತೆಗೆ ಆಂಟಿಬಯೋಟಿಕ್ ಹನಿಗಳು (ಡ್ರಾಪ್ಸ್), ಸ್ಟೆರಾಯ್ಡ್ ಹನಿಗಳು (ಡ್ರಾಪ್ಸ್), ವಿಟಮಿನ್ ಸಂಪ್ಲಿಮೆಂಟ್ ಗಳು, ಮತ್ತು ಬಾಯಿಯ ಮೂಲಕ ನೀಡುವಂಥ ಆಂಟಿಬಯೋಟಿಕ್ ಗಳನ್ನು ಸೋಂಕಿನ ತೀವ್ರತೆ ಆಧಾರದ ಮೇಲೆ ಚಿಕಿತ್ಸೆಯ ರೂಪದಲ್ಲಿ ನೀಡಲಾಗುತ್ತದೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಸೋಂಕು ಸಮಸ್ಯೆ ಬಗ್ಗೆ ಅಧ್ಯಯನ
ವಿವಿಧ ಸಂಶೋಧನೆಗಳನ್ನು ನಡೆಸುವುದಕ್ಕಾಗಿಯೇ ನಾರಾಯಣ ನೇತ್ರಾಲಯವು ಸದಾ ಸಮರ್ಪಿಸಿಕೊಂಡಿದೆ. ಕಣ್ಣಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಪರಿಹಾರ, ಶುಶ್ರೂಷೆ ನೀಡುವುದಕ್ಕೆ ಒತ್ತು ನೀಡುತ್ತಾ ಬಂದಿದೆ. ಈಗಂತೂ ಸಂಸ್ಥೆಯಲ್ಲಿನ ಗ್ರೋ (GROW – Genes Repair and Regeneration in Ophthalmic Workstation)- ಹೀಗಂದರೆ ಜೀನ್ಸ್ ರಿಪೇರ್ ಅಂಡ್ ರೀಜನರೇಷನ್ ಇನ್ ಅಪ್ತಾಲ್ಮಿಕ್ ವರ್ಕ್ ಸ್ಟೇಷನ್. ಈ ಪ್ರಯೋಗಾಲಯದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಬಯೋಮಾರ್ಕರ್ ಬಳಸಿ ಸೋಂಕು- ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲಾಗಿದೆ.
“ಈ ಕೃತಕ ಬುದ್ಧಿಮತ್ತೆ ಆಧಾರಿತವಾದ ಸಂಶೋಧನೆಯಲ್ಲಿ ತಿಳಿದುಬಂದಂತೆ ಅಲರ್ಜಿಗೆ ಒಳಗಾಗುವವರು ಮತ್ತು ವಿಟಮಿನ್ ಡಿ ಮಟ್ಟ ಯಾರಲ್ಲಿ ಕಡಿಮೆ ಇರುತ್ತದೋ ಅಂಥವರ ಮೇಲೆ ಈ ಸೋಂಕು ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಕಂಡುಬಂದಿದೆ,” ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ. ರೋಹಿತ್ ಶೆಟ್ಟಿ ಹೇಳುತ್ತಾರೆ.
ಈ ಅಧ್ಯಯನದಲ್ಲಿ ಪ್ರಮುಖ ಸಂಗತಿ ಏನೆಂದರೆ, ಯಾರಿಗೆ ಸೋಂಕು ತಗುಲಿರುತ್ತದೋ ಅಂಥವರ ಕಣ್ಣಿನ ಹನಿಯ ಬಗ್ಗೆ ಪರೀಕ್ಷೆ ನಡೆಸಿ, ಸೋಂಕನ್ನು ತೀವ್ರಗೊಳಿಸುವ ಅಂಶಗಳು ಯಾವುವು ಎಂಬುದನ್ನು ಪತ್ತೆ ಹಚ್ಚುವುದಾಗಿತ್ತು. ಹೀಗೆ ಈ ಅಂಶವನ್ನು ಪತ್ತೆ ಹಚ್ಚಿದರೆ ರೋಗಿಯ ಸಮಸ್ಯೆಗೆ ಆರಂಭದಲ್ಲೇ ಪರಿಹಾರವನ್ನು ಮಾಡುವುದಕ್ಕೆ ಸಹಾಯ ಆಗುತ್ತದೆ. ಜತೆಗೆ ಯಾರಿಗೆ ಈ ಕಣ್ಣಿನ ಸೋಂಕು ಹೆಚ್ಚು ಗಂಭೀರವಾಗಿ ಪರಿಣಮಿಸುತ್ತದೆ ಮತ್ತು ಸವಾಲಿನಿಂದ ಕೂಡಿರುತ್ತದೆ ಎಂಬುದನ್ನು ಅಂದಾಜು ಮಾಡಬಹುದಾಗಿದೆ. ಹೀಗೆ ಮಾಡುವುದರಿಂದ ಚಿಕಿತ್ಸೆ ನೀಡುವವರು ನಿರ್ದಿಷ್ಟವಾಗಿ ಹಾಗೂ ನಿಖರವಾಗಿ ಶುಶ್ರೂಷೆಯನ್ನು ಮಾಡಬಹುದು. ಅದರಲ್ಲೂ ಕಣ್ಣೀರಿನ ಬಯೋಮಾರ್ಕರ್ ಆಗಿರುವಂಥದ್ದು ಬಹುಶಃ ದೇಶದಲ್ಲೇ ಮೊದಲನೆಯದಾಗಿದೆ ಮತ್ತು ಪ್ರಪಂಚದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಮೊದಮೊದಲ ಸೋಂಕು ಸಂಬಂಧಿತ ಕಣ್ಣೀರಿನ ಬಯೋಮಾರ್ಕರ್ ಸಂಶೋಧನೆಗಳಲ್ಲಿ ಇದೂ ಒಂದಾಗಿರಬಹುದು.
ವ್ಯಾಪಿಸುತ್ತಿದೆ ‘ಪಿಂಕ್ ಐ’:
ಈ ಮೇಲಿನ ಅಂಶಗಳನ್ನು ಎಲ್ಲವೂ ಸೇರಿಸಿ, ಅಂತಿಮ ಎಂಬಂತೆ ಹೇಳಬೇಕು ಅನ್ನೋದಾದರೆ ಈ ಕಾಯಿಲೆಯ ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಮೇಲೆ ನಾರಾಯಣ ನೇತ್ರಾಲಯದ ಗಮನ ಕೇಂದ್ರೀಕೃತವಾಗಿದೆ. ಸೋಂಕುಪೀಡಿತರಾದ ರೋಗಿಯ ಕಣ್ಣೀರಿನಿಂದ ಪಡೆದ ವಿಶಿಷ್ಟ ಬಯೋಮಾರ್ಕರ್ ಮಾಹಿತಿಯು ಆತನ ಅಥವಾ ಆಕೆಯ ಸ್ಥಿತಿಯಲ್ಲಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಈ ಸೋಂಕಿನಿಂದ ಬಳಲುವ ನಿರ್ದಿಷ್ಟ ವ್ಯಕ್ತಿಗೆ ನಿರ್ದಿಷ್ಟ ವೈದ್ಯೋಪಚಾರವನ್ನು ಯೋಜಿಸುವುದಕ್ಕೆ ವೈದ್ಯರಿಗೆ ಇದರಿಂದ ಅನುಕೂಲ ಆಗುತ್ತದೆ. ಕೃತಕ ಬುದ್ಧಿಮತ್ತೆಯಂಥ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡ ಸಂಶೋಧನೆಯ ಮೂಲಕವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಇನ್ನೂ ಉತ್ತಮ ಫಲಿತಾಂಶ ನೀಡಬಹುದು.
ಇದನ್ನೂ ಓದಿ: ನೇತ್ರ ಆರೈಕೆ
ನಾರಾಯಣ ನೇತ್ರಾಲಯದ ಬಗ್ಗೆ:
ನಾರಾಯಣ ನೇತ್ರಾಲಯವನ್ನು 1982ನೇ ಇಸವಿಯಲ್ಲಿ ಡಾ. ಕೆ. ಭುಜಂಗ್ ಶೆಟ್ಟಿ ಅವರು ಸ್ಥಾಪಿಸಿದರು. ನಾಲ್ಕು ದಶಕಗಳಿಂದ ಅತ್ಯುತ್ತಮ ಚಿಕಿತ್ಸೆ ನೀಡುತ್ತಾ ಜನರ ಮನಸ್ಸಿನಲ್ಲಿ ಭದ್ರವಾದ ಸ್ಥಾನವನ್ನು ಪಡೆದಿರುವ ಈ ಸಂಸ್ಥೆಯು ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡಿದೆ. ಕರ್ನಾಟಕದಲ್ಲಿ ಐದು ಸುಧಾರಿತ ಅತ್ಯುತ್ಕೃಷ್ಟ ಕಣ್ಣಿನ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ಅತ್ಯಾಧುನಿಕ ಆಪರೇಷನ್ ಥಿಯೇಟರ್‌ಗಳು ಮತ್ತು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಕಣ್ಣಿನ ಆರೈಕೆಗೆ ಸಂಸ್ಥೆಯ ಬದ್ಧತೆಯ ಕಾರಣಕ್ಕೆ ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕದ ಅತ್ಯುತ್ತಮ ಕಣ್ಣಿನ ಆಸ್ಪತ್ರೆ ಎಂಬ ಮನ್ನಣೆಯನ್ನು ಗಳಿಸಿದೆ. ನಾರಾಯಣ ನೇತ್ರಾಲಯ ಫೌಂಡೇಷನ್, ನಾರಾಯಣ ನೇತ್ರಾಲಯದ ಆಶ್ರಯದಲ್ಲಿ ರೋಗಿಗಳ ಸುಧಾರಿತ ಆರೈಕೆಗೆ ಕಾರಣವಾಗುವಂಥ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು, ಹೊಸ ಬಗೆಯ ಪರಿಹಾರಗಳನ್ನು ಒದಗಿಸಲು ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಬದ್ಧವಾಗಿದೆ.