ಬಿಳಿ ಕಲೆಗಳೆಲ್ಲ ತೊನ್ನಲ್ಲ

ಬಿಳಿ ಕಲೆಗಳೆಲ್ಲ ತೊನ್ನಲ್ಲಬಿಳಿ ಕಲೆಗಳೆಲ್ಲ ತೊನ್ನಲ್ಲ.ಅನಾವಶ್ಯಕ ಆತಂಕ ಬೇಡ. ಶೇಕಡ 80ರಷ್ಟು ಜನರಲ್ಲಿ ಕೇವಲ ಒಂದೆರಡು ಕಲೆಗಳಷ್ಟೇ ಇದ್ದು, ಸೂಕ್ತ ಚಿಕಿತ್ಸೆಯಿಂದ ಗುಣವಾಗುವ ಸಾಧ್ಯತೆಗಳಿರುತ್ತವೆ.

ತೊನ್ನು ಎಂದಾಕ್ಷಣ ಒಂದು ರೀತಿ ಎಲ್ಲರಲ್ಲೂ ಭಯ ತರಿಸುವಂತಹದು. ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗಿಸುವ ಚರ್ಮ ವ್ಯಾದಿಯೇ ಹೌದು. ಇದನ್ನು ಬಿಳುಪು, ಸಫೇದ್ ದಾಗ್, ಶ್ವೇತ ಕುಷ್ಠ, ದವಳ ಕುಷ್ಠ, ಕಿಲಾಸ್ ಎಂದು ಕೂಡ ಕರೆಯಲ್ಪಡುತ್ತಾರೆ. ಇದರ ವೈಜ್ಞಾನಿಕ ನಾಮಧೇಯ ವಿಟಲಿಗೋ. ಇದು ಲ್ಯಾಟೀನ್ ಪದವಾದ `ವಿಟಲಿಯಸ್’ ಎಂಬ ಪದದಿಂದ ಬಂದಿದೆ. ಬಿಳುಪಿನ ಬಿಳಿ ಚುಕ್ಕೆಗಳು ಸೀಮೆಹಸುವಿನ ಬಿಳಿ ಚುಕ್ಕೆಗಳಂತೆ ಕಂಡುಬರುವುದರಿಂದ ವಿಟಲಿಗೋ ಎಂಬ ಹೆಸರು ಬಂದಿದೆ ಎಂಬುದು ವಿಜ್ಞಾನಿಗಳ ಉಲ್ಲೇಖ. ಮತ್ತೊಂದು ಮೂಲದ ಪ್ರಕಾರ ಇದು ಲ್ಯಾಟಿನ್ ಪದವಾದ ವಿಟಲಿಯಮ್ ಎಂದರೆ ಕಲೆ ಎಂಬ ಪದದ ಉಗಮ.

ಇದೊಂದು ಅನಾದಿ ಕಾಲದಿಂದಲೂ ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆ. ಆದರೆ, ಜನರು ಬಿಳಿತೊನ್ನು ಬರುವುದು ಶಾಪವೆಂದು ತಿಳಿದು ಮೂಢನಂಬಿಕೆಯಿಂದ ತೊಳಲಾಡುತ್ತಿದ್ದಾರೆ. ಇದೊಂದು ತಪ್ಪು ಗ್ರಹಿಕೆಗೆ ಗ್ರಾಸವಾಗುವ ಕಾಯಿಲೆ. ಅನಾದಿ ಕಾಲದಿಂದಲೂ ಈ ಕಾಯಿಲೆಗೆ ಸಮರ್ಪಕವಾದ ಚಿಕಿತ್ಸೆಯ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಆದರೆ, ಶಾಶ್ವತ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ಈವರೆಗೂ ಪತ್ತೆಯಾಗಿಲ್ಲ. ಮಕ್ಕಳಲ್ಲಿ ವಿರಳ. ಜಗದಾದ್ಯಂತ ಕಂಡುಬಂದರೂ, ಭಾರತ ಹಾಗೂ ಮೆಕ್ಸಿಕೋದಲ್ಲಿ ಅತಿ ಹೆಚ್ಚು ಕಂಡುಬಂದಿದೆ.

ಇದು ಯಾವುದೇ ವಯಸ್ಸಿನಲ್ಲಾದರೂ ಕಾಣಿಸಬಹುದು. ಆದರೆ, 10ರಿಂದ 20ರ ನಡುವಿನ ವರ್ಷಗಳ ಕಾಣಿಸಿಕೊಳ್ಳುವುದು ಹೆಚ್ಚು. 5 ವರ್ಷಕ್ಕಿಂತ ಸಣ್ಣಮಕ್ಕಳಲ್ಲಿ ಇದು ಬಹಳ ವಿರಳ. ಚರ್ಮದ ಬಣ್ಣಕ್ಕೆ ಬಹುಮುಖ್ಯ ಕಾರಣ ಮೆಲನ್ಸಿಟೆನ್ಸಿಗಳು. ಇವು ಮೆಲನಿನ್ ಎಂಬ ಕಪ್ಪು ಕಣಗಳನ್ನು ಉತ್ಪಾದಿಸುತ್ತದೆ. ಮೆಲನಿನ್ ಚರ್ಮವನ್ನು ಸೂರ್ಯ ಕಿರಣಗಳಿಂದ ರಕ್ಷಿಸುತ್ತದೆ. ಬಿಳುಪಿನಲ್ಲಿ ದೇಹದ ಮೆಲನೋಸೈಟ್‍ಗಳ ವಿರುದ್ದ ಆ್ಯಂಟಿಬಾಡಿಗಳನ್ನು ಉತ್ಪಾದಿಸಿ, ಅವುಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಮೆಲನಿನ್ ಉತ್ಪಾದನೆಯು ಕಡಿಮೆಯಾಗಿ ಚರ್ಮವು ಬಿಳಿಯಾಗುತ್ತದೆ. ಬಿಳುಪು ಅನುವಂಶೀಯವಾಗಿ ಬರುವ ಸಾಧ್ಯತೆ ಇರುತ್ತದೆ. ಸಂಬಂಧದಲ್ಲಿ ಮದುವೆ ಆಗುವುದರಿಂದ ಮಕ್ಕಳಲ್ಲಿ ಬಿಳುಪು ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನುವಂಶೀಯವಾಗಿ ಶೇ.30ರಷ್ಟು ಕಾಣಿಸಿಕೊಳ್ಳಬಹುದು ಎಂದು ವೈದ್ಯಕೀಯ ಸಂಶೋಧನೆಯಿಂದ ದೃಢಪಟ್ಟಿದೆ.

ಬಿಳಿ ಕಲೆಗಳೆಲ್ಲ ತೊನ್ನಲ್ಲ

ದೇಹದ ಮೇಲಿರುವ ಕಲೆಗಳೆಲ್ಲಾ ತೊನ್ನಾಗಿರುವುದಿಲ್ಲ. ತೊನ್ನು ಸಾಮಾನ್ಯವಾಗಿ ಹಾಲು ಬಣ್ಣದಾಗಿರುತ್ತದೆ. ದೇಹದ ಮೇಲೆ ಬಿಳಿ ಕಲೆ ಬಂದ ಕೂಡಲೇ ಗಾಬರಿಗೊಳ್ಳಬೇಡಿ. ಬಹುತೇಕ ಬಾರಿ ಇದು ಇಸುಬು ಅಥವಾ ಬೇರೆ ಯಾವುದೇ ಸಾಮಾನ್ಯ ಚರ್ಮ ಸಮಸ್ಯೆಯಾಗಿರಬಹುದು. ಬಹಳಷ್ಟು ಬಾರಿ ಇದು ತೊನ್ನಾಗಿರುವುದಿಲ್ಲ. ಚರ್ಮ ವೈದ್ಯರ ಸಲಹೆ ಕೇಳುವುದು ಉತ್ತಮ. ಬಿಳುಪು ದೇಹದ ಯಾವುದೇ ಭಾಗದಲ್ಲಾದರೂ ಕಂಡುಬರಬಹುದು. ಶೇಕಡ 80ರಷ್ಟು ಜನರಲ್ಲಿ ಕೇವಲ ಒಂದೆರಡು ಕಲೆಗಳಷ್ಟೇ ಇದ್ದು, ಸೂಕ್ತ ಚಿಕಿತ್ಸೆಯಿಂದ ಗುಣವಾಗುವ ಸಾಧ್ಯತೆಗಳಿರುತ್ತವೆ. ಬಹಳಷ್ಟು ವಿಧಗಳಿವೆ. ಇದರಲ್ಲಿ ತುಟಿ ಹಾಗೂ ಬೆರಳ ತುದಿಗಳಿಗಷ್ಟೇ ಸೀಮಿತವಾದ ವಿಧವು ಹರಡುವ ಸಾಧ್ಯತೆ ಬಹಳ ಕಡಿಮೆ. ಜತೆಗೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಹ ಕಾಯಿಲೆಯಲ್ಲ.

ತೊನ್ನು ಕೆಲವೊಮ್ಮೆ ಶುರುವಾಗಿ ಕೆಲವರ್ಷಗಳಲ್ಲಿ ತಾನಾಗಿಯೇ ನಿಲ್ಲುವ ಲಕ್ಷಣಗಳೂ ಉಂಟು. ಇತ್ತೀಚೆಗೆ ಸಂಶೋಧನೆಯ ಫಲವಾಗಿ ಹಲವಾರು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ. ಪ್ರಾಥಮಿಕ ಹಂತದಲ್ಲೇ ತಜ್ಞ ವೈದ್ಯರ ಸಲಹೆ ಪಡೆಯುವುದರಿಂದ, ಇದನ್ನು ಕೂಲಂಕುಷವಾಗಿ ಪರಿಶೀಲಿಸಿ, ನಿಖರವಾದ ಚಿಕಿತ್ಸೆಯನ್ನು ನೀಡಬಹುದು. ಅತ್ಯಾಧುನಿಕ ಮುಲಾಮು ಹಾಗೂ ಔಷಧಗಳು ಲಭ್ಯವಿದ್ದು, ಬಿಳುಪಿಗೆ ಅಂಜುವ ಅಗತ್ಯವಿಲ್ಲ. ಜೊತೆಗೆ ಪೋಟೋಥೆರಪಿಯಂತಹ ಆಧುನಿಕ ತಂತ್ರಜ್ಞಾನವು ಇದಕ್ಕೆ ಪರಿಣಾಮಕಾರಿ. ಯಾವುದೇ ಚಿಕಿತ್ಸೆಗೂ ಬಿಳುಪು ಬಗ್ಗದಿದ್ದರೆ, ಶಸ್ತ್ರಚಿಕಿತ್ಸೆಯ ಮೂಲಕವೂ ಇದನ್ನು ಗುಣಪಡಿಸಬಹುದು. ಬಿಳುಪಿನ ಬೆಳವಣಿಗೆಯನ್ನು ನಿಖರವಾಗಿ ಹೇಳುವುದು ಕಷ್ಟ. ಆದರೆ, ಸರಿಯಾದ ಚಿಕಿತ್ಸಾ ಕ್ರಮದಿಂದ ಇದನ್ನು ತಹಬದಿಗೆ ತರಬಹುದು. ಇತ್ತೀಚೆಗೆ ಸರ್ಜಿಕಲ್ಸ್ ಟಿಂಟ್‍ಮೆಂಟ್ಸ್ ಹೆಚ್ಚು ಪ್ರಚಲಿತವಾಗುತ್ತಿದೆ. ಇದರಲ್ಲಿ ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚರ್ಮ ತೆಗೆದು ಕಸಿ ಮಾಡಲಾಗುತ್ತದೆ

ಕಿವಿಮಾತು

1. ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ.

2. ಆಹಾರದಲ್ಲಿ ಸಾಕಷ್ಟು ತರಕಾರಿ ಮತ್ತು ಹಣ್ಣುಗಳರಲಿ.

3. ಹುಳಿ ಪದಾರ್ಥಗಳನ್ನು ಸೇವಿಸಬೇಡಿ.

4. ಮಾನಸಿಕ ಒತ್ತಡದಿಂದ ಬಿಳುಪು ಹೆಚ್ಚಾಗುತ್ತದೆ.

5. ಗಾಯವಾದ ಕಡೆ ಬಿಳುಪು ಹರಡುತ್ತದೆ. ಸಣ್ಣ ಗಾಯವಾದರೂ ಅಲಕ್ಷಿಸಬೇಡಿ.

6. ಬಿಳುಪಿಗೆ ಅತ್ಯಾಧುನಿಕ ಚಿಕಿತ್ಸೆಗಳಿದ್ದು, ಇದನ್ನು ತಹಬಂದಿಗೆ ತರಬಹುದು.

7. ಅನಾವಶ್ಯಕ ಆತಂಕ ಬೇಡ.  ಬಿಳಿತೊನ್ನು ಶಾಶ್ವತವಾಗಿ ಹೋಗಲಾಡಿಸಿದ್ದರೂ ಶೇ.85ರರಷ್ಟು ಗುಣಪಡಿಸುವ ಸಾಧ್ಯತೆಗಳು ಉಂಟು.

ಡಾ. ಭಾನುಪ್ರಕಾಶ್ ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, #82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080- 49069000 Extn: 1147/1366  

http://www.vims.ac.in/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!