ಅಗ್ಲಿ ಡಕ್ಲಿಂಗ್ ಹಂತ ತಾತ್ಕಾಲಿಕವಾದ ಬೆಳವಣಿಗೆಯ ಹಂತವಾಗಿದ್ದು ಹೆತ್ತವರು ಆತಂಕಕ್ಕೊಳಗಾಗಬಾರದು. ದಂತವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳತಕ್ಕದ್ದು. ಇದು ತನ್ನೀಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ ಜಾಗ ಮುಚ್ಚಿಕೊಂಡು ಸುಂದರವಾಗಿ ಕಾಣುತ್ತದೆ.
ಸಾಮಾನ್ಯವಾಗಿ ಮನುಷ್ಯನಿಗೆ ಎರಡು ರೀತಿಯ ಹಲ್ಲುಗಳಿರುತ್ತದೆ. ಹುಟ್ಟಿದ ಬಳಿಕ 6 ತಿಂಗಳಿಂದ ಹಾಲು ಹಲ್ಲುಗಳು ಹುಟ್ಟಲು ಆರಂಭವಾಗುತ್ತದೆ. ಸುಮಾರು 24 – 32 ತಿಂಗಳವರೆಗೆ ಹಾಲು ಹಲ್ಲುಗಳು ಬಾಯಿಯಲ್ಲಿ ಮೂಡುತ್ತವೆ. ಒಟ್ಟು 20 ಹಾಲು ಹಲ್ಲುಗಳು ಇದ್ದು 7ನೇ ವರ್ಷಕ್ಕೆ ಶಾಶ್ವತ ಹಲ್ಲು ಹುಟ್ಟಲು ಆರಂಭವಾಗುತ್ತದೆ. 7ರಿಂದ 12ನೇ ವರ್ಷದ ವರೆಗಿನ ಈ ಅವಧಿಯನ್ನು ಮಿಕ್ಸ್‍ಡ್ ದಂತಾವಸ್ಥೆ ಎಂದು ಕರೆಯುತ್ತಾರೆ. ಯಾಕೆಂದರೆ ಈ ಅವಧಿಯಲ್ಲಿ ಬಾಯಿಯಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳು ಬಾಯಿಯಲ್ಲಿ ಇರುತ್ತದೆ. ಆಡು ಭಾಷೆಯಲ್ಲಿ ಹೇಳುವುದಾದರೆ 10 ವರ್ಷದ ಹೊತ್ತಿಗೆ 10 ಹಾಲು ಹಲ್ಲು ಬಿದ್ದು ಹೋಗಿ 10 ಶಾಶ್ವತ ಹಲ್ಲುಗಳು ಮತ್ತು 10 ಹಾಲು ಹಲ್ಲುಗಳು ಇರುತ್ತವೆ. ಹೆಚ್ಚಾಗಿ 12ನೇ ವಯಸ್ಸಿಗೆ ಎಲ್ಲಾ ಹಾಲು ಹಲ್ಲುಗಳು ಬಿದ್ದು ಹೋಗುವುದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ.
ಏನಿದು ಅಗ್ಲಿ ಡಕ್ಲಿಂಗ್ ಹಂತ?
ಮೇಲಿನ ದವಡೆಯ ಮುಂಭಾಗದ ಬಾಚಿ ಹಲ್ಲುಗಳು ಹುಟ್ಟುವಾಗ ಸಾಮಾನ್ಯವಾಗಿ ದೊಡ್ಡದಾಗುತ್ತದೆ ಮತ್ತು ಎರಡು ಹಲ್ಲುಗಳು ನಡುವೆ ಜಾಗ ಬಿಟ್ಟುಕೊಂಡು ನೋಡಲು ಅಷ್ಟೊಂದು ಸಹ್ಯವಾಗಿರುವುದಿಲ್ಲ. 7 ರಿಂದ 11 ವರ್ಷಗಳ ಅವಧಿಯಲ್ಲಿ ಈ ರೀತಿ ಕಾಣಿಸಿಕೊಳ್ಳುವುದು ಸಹಜ. ಸಾಮಾನ್ಯವಾಗಿ ಹೆತ್ತವರು ಈ ಹಂತದಲ್ಲಿ ಆತಂಕಗೊಳ್ಳುತ್ತಾರೆ. ಹಾಲು ಹಲ್ಲಿಗೆ ಹೋಲಿಸಿದಾಗ ಈ ಹಲ್ಲುಗಳು ದೊಡ್ಡದಾಗಿರುತ್ತದೆ ಮತ್ತು ನೋಡಲು ಅಷ್ಟೊಂದು ಚಂದವಿರುವುದಿಲ್ಲ. ಈ ಹಲ್ಲುಗಳು ಕಚ್ಚುವ ಭಾಗದಲ್ಲಿ ನೇರವಾಗಿರದೆ ಮಾಮಿಲಾನ್ ಎಂಬ ಆಕೃತಿಗಳು ಕಂಡು ಬಂದು ಹಲ್ಲಿನ ಅಂದವನ್ನು ಹಾಳುಗೆಡುವುತ್ತದೆ.
ಮೇಲಿನ ದವಡೆಯ ಒಳಭಾಗದಲ್ಲಿರುವ ಕೋರೆ ಹಲ್ಲುಗಳು ಹುಟ್ಟುವಾಗ ತನ್ನ ಪಕ್ಕದ ಎರಡನೇ ಬಾಚಿ ಹಲ್ಲುಗಳ ಬೇರಿನ ಮೇಲೆ ಒತ್ತಡ ಹಾಕುತ್ತದೆ ಮತ್ತು ಹಲ್ಲುಗಳು ದೇಹದ ಮಧ್ಯಭಾಗದಿಂದ ಎರಡೂ ಕಡೆಗೆ ವಾಲುವಂತೆ ಮಾಡುತ್ತದೆ. ಈ ಕಾರಣದಿಂದಲೇ ಮೇಲಿನ ದವಡೆಯ ಬಾಚಿ ಹಲ್ಲುಗಳ ನಡುವೆ ಅಸಹ್ಯವಾಗಿ ಜಾಗ ಹುಟ್ಟಿಕೊಂಡು ನೋಡಲು ಹಿತವಾಗಿರಿರುವುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ‘ಅಗ್ಲಿ ಡಕ್ಲಿಂಗ್ ಹಂತ’ ಎಂದು ಬಿ.ಹೆಚ್ ಬ್ರಾಡ್‍ಬೆಂಟ್ ಎಂಬಾತ 1937ರಲ್ಲಿ ನಾಮಕರಣ ಮಾಡಿದ. ಬಾತುಕೋಳಿಗಳ ಮರಿಗಳು ಹುಟ್ಟಿದ ಬಳಿಕ ನಡೆದಾಡುವಾಗ ನೇರವಾಗಿ ನಡೆಯದೆ, ಓರೆಕೋರೆಯಾಗಿ ವಾಲಿಕೊಂಡು ನಡೆಯುವುದಕ್ಕೆ ಈ ಹಲ್ಲಿನ ಬೆಳವಣಿಗೆಯ ಹಂತವನ್ನು ಹೋಲಿಕೆ ಮಾಡಿ ಈ ರೀತಿ ‘ಅಗ್ಲಿ ಡಕ್ಲಿಂಗ್ ಹಂತ’ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಸುಂದರವಾದ ಚಿಕ್ಕದಾದ ಹಾಲು ಬಣ್ಣದ ಹಾಲುಹಲ್ಲುಗಳು ಬಿದ್ದು ಹೋಗಿ ದೊಡ್ಡದಾದ ಶಾಶ್ವತ ಹಲ್ಲುಗಳು ಬಂದಾಗ ಹೆತ್ತವರು ಆತಂಕಗೊಳ್ಳುವುದು ಸಹಜ. ಇದೊಂದು ತಾತ್ಕಾಲಿಕವಾದ ಬೆಳವಣಿಗೆಯ ಹಂತವಾಗಿದ್ದು ಹೆತ್ತವರು ಆತಂಕಕ್ಕೊಳಗಾಗಬಾರದು. ದಂತವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳತಕ್ಕದ್ದು. ಇದು ತನ್ನೀಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ ಜಾಗ ಮುಚ್ಚಿಕೊಂಡು ಸುಂದರವಾಗಿ ಕಾಣುತ್ತದೆ. ಈ ಹಂತಕ್ಕೆ ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ.
ಮಗು ಮತ್ತು ಮಕ್ಕಳ ಹೆತ್ತವರಿಗೆ ಸೂಕ್ತವಾದ ಮಾರ್ಗದರ್ಶನ ಮತ್ತು ಮಾನಸಿಕವಾಗಿ ದೈರ್ಯ ಮತ್ತು ಸ್ಥೆರ್ಯ ತುಂಬಿಸುವುದು ಅತೀ ಅವಶ್ಯಕ. 11 ರಿಂದ 12 ವರ್ಷದಲ್ಲಿ ಕೋರೆ ಹಲ್ಲು ಬಂದ ಬಳಿಕವೂ, ಬಾಚಿ ಹಲ್ಲುಗಳ ನಡುವೆ ಜಾಗ ತುಂಬಿಕೊಳ್ಳದಿದ್ದಲ್ಲಿ, ಕ್ಷಕಿರಣ ತೆಗೆದು ಹೆಚ್ಚವರಿ ಹಲ್ಲು ಇದೆಯೇ ಎಂದು ಖಾತರಿಗೊಳಿಸತಕ್ಕದ್ದು. ಸಾಮಾನ್ಯವಾಗಿ 100ರಲ್ಲಿ 90 ಶೇಕಡಾ ಮಕ್ಕಳಲ್ಲಿ ಈ ತಾತ್ಕಾಲಿಕ ಹಂತ ತನ್ನೀಂತಾನೇ ಸರಿಯಾಗುತ್ತದೆ. ಇನ್ನು ಹತ್ತು ಶೇಕಡಾ ಮಕ್ಕಳಲ್ಲಿ ಇತರ ಕಾರಣಗಳಿಂದ ಎರಡು ಬಾಚಿ ಹಲ್ಲುಗಳ ನಡುವೆ ಜಾಗ ಇದ್ದಲ್ಲಿ ಮಕ್ಕಳ ದಂತ ವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳತಕ್ಕದ್ದು.
ಹೇಗೆ ಕಾಣಿಸುತ್ತವೆ?
1. ಮಧ್ಯದ ಬಾಚಿ ಹಲ್ಲುಗಳ ನಡುವೆ ಖಾಲಿಜಾಗ ಇರುತ್ತದೆ.
2. ಎರಡನೇ ಬಾಚಿ ಹಲ್ಲುಗಳು ಓರೆ ಕೋರೆಯಾಗಿ ಇರುತ್ತದೆ.
3. ಹೊಸದಾಗಿ ಹುಟ್ಟಿದ ಹಲ್ಲುಗಳು ಹಾಲಿನಂತೆ ಬೆಳ್ಳಗಿರದ, ಸ್ವಚ್ಛ ಕಡು ಬಿಳಿ ಬಣ್ಣ ಹೊಂದಿರುತ್ತದೆ.
4. ಶಾಶ್ವತ ಬಾಚಿ ಹಲ್ಲುಗಳು, ಹಾಲು ಹಲ್ಲುಗಳಿಗಿಂತ ಗಾತ್ರದಲ್ಲಿ ಬಹಳ ದೊಡ್ಡದಾಗಿರುವಂತೆ ಬಸವಾಗುತ್ತದೆ.
5. ತುಟಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ದೊಡ್ಡ ಹಲ್ಲುಗಳು ಮಾತ್ರ ಬಾಯಿಯಲ್ಲಿ ಕಾಣುತ್ತದೆ.
6. ಮುಖ ಉದ್ದವಾಗಿ ಕೋಲು ಮುಖದಂತೆ ಬಾಸವಾಗಬಹುದು.
ಈ ಎಲ್ಲಾ ಕಾರಣಗಳಿಂದ ಮುಖದ ಅಂದ ಹಾಳಾಗಿ ಹೆಚ್ಚಿನ ಪೋಷಕರು ಆತಂಕಕೊಳ್ಳಗಾಗುವುದು ಸಹಜ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ ಬಾಚಿ ಹಲ್ಲುಗಳು ನೇರವಾಗಿ ನಡುವಿನ ಜಾಗ ತುಂಬಿಕೊಂಡು ಸಹಜ ಸ್ಥಿತಿಗೆ ಬರುತ್ತದೆ. ಯಾವುದೇ ರೀತಿಯ ಚಿಕಿತ್ಸೆಯ ಅಗತ್ಯವಿಲ್ಲದೆ ದೇಹ ಸ್ಥಿತಿ ಇದಾಗಿದ್ದು ದಂತವೈದ್ಯರ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ಅತೀ ಅಗತ್ಯ.
Also Read: ಮಕ್ಕಳ ಬಾಯಿಯ ಸ್ವಚ್ಚತೆ- ಆರೋಗ್ಯ ಸೋಂಕನ್ನು ಕಡಿಮೆ ಮಾಡಬಹುದು
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111 ಮೊ.: 98451 35787
www.surakshadental.com
email: drmuraleemohan@gmail.com