ತ್ರಿದೋಷ ನಿವಾರಣೆಗಾಗಿ ಸಮಾನ ಮುದ್ರೆ ಅಭ್ಯಾಸ ಸಹಾಯ ಮಾಡುತ್ತದೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ.
ಆಯುರ್ವೇದದ ಪ್ರಕಾರ ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು ವಸ್ತುಗಳಲ್ಲಿ ಒಂದು. 20ನೇ ಶತಮಾನದ ಸಾಹಿತ್ಯದಿಂದ ಆರಂಭಗೊಂಡು, ಈ ಕಲ್ಪನೆಯನ್ನು ತ್ರಿದೋಷೋಪದೇಶ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಶರೀರದಲ್ಲಿ ಈ ಮೂರು ವಸ್ತುಗಳ ಪ್ರಮಾಣ ಮತ್ತು ಗುಣಮಟ್ಟಗಳು ಹೇಗೆ ಋತುಗಳು, ದಿನದ ಸಮಯ, ಆಹಾರ ಮತ್ತು ಹಲವು ಇತರ ಅಂಶಗಳ ಪ್ರಕಾರ ಏರಿಳಿಯುತ್ತವೆ ಎಂದು ವಿವರಿಸುತ್ತವೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ.
1. ವಾತ ದೋಷ : ವಾತದೋಷವು ಶುಷ್ಕ, ತಂಪು, ಬೆಳಕು, ನಿಮಿಷ ಮತ್ತು ಚಲನೆಯ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಶರೀರದಲ್ಲಿನ ಎಲ್ಲಾ ಚಲನೆಯು ವಾತದ ಗುಣಲಕ್ಷಣಗಳಿಂದ ಇರುತ್ತದೆ. ನೋವು ಅವ್ಯವಸ್ಥಿತ ವಾತದ ವಿಶಿಷ್ಟ ಗುಣಲಕ್ಷಣವಾಗಿದೆ. ಸಮತೋಲ ತಪ್ಪಿದ ವಾತಕ್ಕೆ ಸಂಬಂದಿಸಿದ ಕೆಲವು ರೋಗಗಳೆಂದರೆ ವಾಯು ತುಂಬಿರುವಿಕೆ, ಸಂಧಿವಾತ, ವಾಯುನೋವು ಇತ್ಯಾದಿ. ವಾತವನ್ನು ಗಾಳಿ ಎಂದು ವ್ಯಾಖ್ಯಾನಿಸಬಾರದು,
2. ಪಿತ್ತ ದೋಷ : ಪಿತ್ತವು ಚಯಾಪಚಯ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಉಷ್ಣ, ತೇವವಾದದು, ದ್ರವ, ತೀಕ್ಷ್ಣ ಮತ್ತು ಹುಳಿ ಇದರ ಗುಣಲಕ್ಷಣಗಳಾಗಿವೆ. ಉಷ್ಣ ಇದರ ಮುಖ್ಯ ಗುಣವಾಗಿದೆ. ಇದು ಜೀರ್ಣಕ್ರಿಯೆಯನ್ನು ನಿರ್ದೇಶಿಸಲು ಮತ್ತು ಚಯಾಪಚಯವನ್ನು ವರ್ಧಿಸಲು ಪಿತ್ತರಸವನ್ನು ಬಳಸುವ ಶಕ್ತಿ ತತ್ವವಾಗಿದೆ. ದೇಹದ ಉಷ್ಣ ಮತ್ತು ಸುಡುವ ಸಂವೇದನೆ ಇದರ ಪ್ರಾಥಮಿಕ ಗುಣಲಕ್ಷಣಗಳಾಗಿವೆ.
3. ಕಫ ದೋಷ : ಕಫವು ನೀರಿನಂಥ ಅಂಶವಾಗಿದೆ. ಭಾರತ್ವ, ತಂಪು, ಮೃದುತ್ವ, ನಿಧಾನ, ಮತ್ತು ಪೋಷಕಾಂಶಗಳ ವಾಹಕವಾಗಿರುವುದು ಇದರ ಗುಣಲಕ್ಷಣವಾಗಿದೆ. ಇದು ಶರೀರದ ಪೋಷಕ ಘಟಕವಾಗಿದೆ. ಎಲ್ಲ ಮೃದು ಅಂಗಗಳು ಕಫದಿಂದ ಮಾಡಲ್ಪಟ್ಟಿವೆ ಮತ್ತು ಇದು ಪೋಷಣೆಯ ಜೊತೆಗೆ ರುಚಿಯ ಗ್ರಹಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಸಾಮಾನ್ಯವಾಗಿ ಮೂರು ದೋಷಗಳಲ್ಲಿ ಒಂದು ದೋಷವು ಪ್ರಬಲವಾಗಿರುತ್ತದೆ ಮತ್ತು ಒಬ್ಬರ ದೇಹ ಪ್ರಕೃತಿ ಅಥವಾ ಮನಸ್ಸು-ದೇಹದ ಬಗೆಯನ್ನು ತೀರ್ಮಾನಿಸುತ್ತದೆ. ವ್ಯಕ್ತಿಗತ ರೂಢಿಗಳು, ಭಾವನಾತ್ಮಕ ಪ್ರತಿಕ್ರಿಯೆಗಳು ಮತ್ತು ದೇಹದ ಬಗೆಯನ್ನು ತಿಳಿದುಕೊಂಡು ಅದರ ಅನುಸಾರ ಯೋಗಾಭ್ಯಾಸ ಹಾಗೂ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ಯೋಗ ಕೇವಲ ಆಸನ ಮತ್ತು ಭಂಗಿ ಮಾತ್ರವಲ.್ಲ ಕೆಲವೊಂದು ಯೋಗ ಮುದ್ರೆಗಳ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಯೋಗ ಮುದ್ರಾಗಳಿಂದ ಸಿಗುವ ಆರೋಗ್ಯಲಾಭವು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಪ್ರತಿಯೊಂದು ಯೋಗ ಮುದ್ರವು ವಿಶೇಷವಾಗಿದ್ದು, ಅದನ್ನು ಸರಿಯಾದ ವಿಧಾನದಲ್ಲಿ ಅಭ್ಯಾಸ ಮಾಡಬೇಕು. ಹಾಗೆಯೇ ಮೇಲೆ ತಿಳಿಸಿದ ತ್ರಿದೋಷ ನಿವಾರಣೆಗೆ ಸಮಾನ ಮುದ್ರೆಯ ಅಭ್ಯಾಸ ಸಹಾಯ ಮಾಡುತ್ತದೆ.
ಸಮಾನ ಮುದ್ರೆ ಮಾಡುವ ವಿಧಾನ :
1. ಕಿರುಬೆರಳು, ಉಂಗುರದ ಬೆರಳು, ನಡುಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಹೆಬ್ಬೆರಳ ತುದಿಗೆ ಜೋಡಿಸುವುದರಿಂದ ಸಮಾನ ಮುದ್ರೆ ಎನ್ನಿಸುವುದು.
2. ಈ ಮುದ್ರೆಯ ಅಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಆಹಾರವನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ಮಲ ಮೂತ್ರಾದಿಗಳನ್ನು ದೇಹದಿಂದ ಹೊರಹಾಕಲು ಈ ಮುದ್ರೆ ಸಹಾಯ ಮಾಡುತ್ತದೆ.
3. ಮುದ್ರೆಯ ಹೆಸರೇ ಹೇಳುವಂತೆ ಶರೀರದ ಮೂರು ದೋಷಗಳನ್ನು ಸಮಾನ ಸ್ಥಿತಿಗೆ ತರುವಲ್ಲಿ ಇದು ಸಹಾಯ ಮಾಡುತ್ತದೆ. ಈ ಮುದ್ರೆಯನ್ನು ದಿನದಲ್ಲಿ ಕಡಿಮೆ ಎಂದರೂ 10 ನಿಮಿಷ ಏಕಾಗ್ರತೆಯಿಂದ ಪದ್ಮಾಸನ, ವಜ್ರಾಸನ ಅಥವಾ ಸುಖಾಸನದಲ್ಲಿ ಕುಳಿತು ಅಭ್ಯಾಸ ಮಾಡಬೇಕು.
4. ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದವರು, ಕುರ್ಚಿಯಲ್ಲಿ ಕುಳಿತು ಅಭ್ಯಾಸವನ್ನು ಮಾಡಬಹುದು. ಸಮಾನ ಮುದ್ರೆಯನ್ನು ಪ್ರತಿನಿತ್ಯವೂ ಅಭ್ಯಾಸ ಮಾಡಿ, ಶರೀರದ ಸಮತೋಲನವನ್ನು ಕಾಪಾಡಿಕೊಳ್ಳಿ. ಆರೋಗ್ಯದಿಂದ ಸಂತೋಷವಾಗಿರಿ. ಆರೋಗ್ಯವೇ ಭಾಗ್ಯ.
ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
mobiಟe – 98803 86687
email : sri.ycaofficial@gmail.com