ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಹೇಗೆ ಸಾಧ್ಯ ?

ರೋಗಗಳ ನಿಯಂತ್ರಣ  ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. 

ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಹೇಗೆ ಸಾಧ್ಯ ?ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ,ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ (ಆಸ್ಥಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ ಮಾನಸಿಕ, ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು ಬಳಸುತ್ತಾರೆ.

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿಯೋಗ ಮತ್ತು ಹಠಯೋಗ. ಪತಂಜಲಿಯ ಯೋಗಸೂತ್ರಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು. ಅನೇಕ ಇತರ ಹಿಂದೂ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖ/ಮಗ್ಗಲುಗಳನ್ನು ಚರ್ಚಿಸುತ್ತವೆ.

ಸಂಸ್ಕೃತ ಪದ ”ಯೋಗ ” ವು ಅನೇಕ ಅರ್ಥಗಳನ್ನು ಹೊಂದಿದೆ, ಮತ್ತು ಆ ಪದವು “ನಿಯಂತ್ರಿಸುವ,”, “ಐಕ್ಯವಾಗು” ಅಥವಾ “ಒಗ್ಗಟ್ಗು” ಎಂಬರ್ಥಗಳ ಸಂಸ್ಕೃತ ಮೂಲ ಅರ್ಥವನ್ನು ಹೊಂದಿದೆ. ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗ ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.

ಯೋಗದ ಇತಿಹಾಸ:

ವೇದ ಸಂಹಿತೆಗಳು ತಪಸ್ವಿಗಳ ಬಗ್ಗೆ ಪ್ರಸ್ತಾಪಿಸುತ್ತವೆ, ಆದರೆ ತಪಶ್ಚರ್ಯೆಗಳ (ತಪಸ್ಸು ಮಾಡುವಿಕೆ) ಬಗ್ಗೆ 900 ರಿಂದ 500 ಃಅ ಯಲ್ಲಿ ವೇದಗಳ ಮೇಲೆ ಬರೆದ ವ್ಯಾಖ್ಯೆಗಳಲ್ಲಿ ಉಲ್ಲೇಖಗಳಿವೆ. “ಶಾಸ್ತ್ರೀಯ ಚರ್ಯೆಗಳ ಒಂದು ವಿಧ” ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು” ಎಂಬುದು ಪುರಾತತ್ವಶಾಸ್ತ್ರಜ್ಞ ‘ಗ್ರೆಗೋರಿ ಪಾಸ್ಸೆಲ್”ರ ಅಭಿಪ್ರಾಯವಾಗಿತ್ತು. ಸಿಂಧೂ ಕಣಿವೆಯ ಮೊಹರುಗಳಿಗೂ ಹಾಗೂ ನಂತರದ ಸಿಂಧೂ ಯೋಗ ಮತ್ತು ಧ್ಯಾನಗಳ ಆಚರಣೆಗಳಿಗೂ ಯಾವುದೋ ವಿಧದ ಸಂಬಂಧವಿದೆ ಎಂಬುದನ್ನು ಅನೇಕ ತಜ್ಞರು ಊಹಿಸಿರುತ್ತಾರಾದರೂ, ಇದಕ್ಕೆ ಯಾವುದೇ ರೀತಿಯ ನಿರ್ಣಾಯಕ ಪುರಾವೆಗಳು ದೊರೆತಿಲ್ಲ.

ಯೋಗದಿಂದ ಆರೋಗ್ಯ-ಆರೋಗ್ಯ ಸಾಧಿಸಲು ಯೋಗ ಹೇಗೆ ಸಹಾಯ ಮಾಡುತ್ತದೆ?ಬೌದ್ಧ ಧರ್ಮದ ಗ್ರಂಥಗಳೇ ಬಹುಶಃ ಧ್ಯಾನದ ತಂತ್ರ/ಪ್ರಕ್ರಿಯೆಗಳನ್ನು ವಿವರಿಸುವ ಪ್ರಾಚೀನ ಗ್ರಂಥಗಳಿರಬೇಕು.ಅವುಗಳಲ್ಲಿ ಬುದ್ಧನಿಗಿಂತ ಮುಂಚೆಯೇ ಚಾಲ್ತಿಯಲ್ಲಿದ್ದ ಧ್ಯಾನದ ಆಚರಣೆಗಳು ಮತ್ತು ಅದರ ಸ್ಥಿತಿ/ಭಂಗಿಗಳನ್ನು ಹಾಗೆಯೇ ಮೊದಲಿಗೆ ಬೌದ್ಧ ಧರ್ಮದಲ್ಲಿಯೇ ಉದಯವಾದ ಆಚರಣೆಗಳ ಬಗ್ಗೆ ಸಹಾ ವಿವರಣೆಗಳಿವೆ. ಹಿಂದೂ ಗ್ರಂಥಗಳಲ್ಲಿ “ಯೋಗ” ಎಂಬ ಪದವು ಮೊದಲಿಗೆ ಕಠೋಪನಿಷತ್‍ನಲ್ಲಿ ಮೊದಲಿಗೆ ಕಂಡುಬರುತ್ತದೆ, ಅದರಲ್ಲಿ ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ. ಯೋಗದ ಕಲ್ಪನೆಯ ವಿಕಾಸದ ಬಗೆಗಿನ ಪ್ರಮುಖ ಗ್ರಂಥಮೂಲಗಳೆಂದರೆ ಮಧ್ಯಕಾಲೀನ ಉಪನಿಷತ್ತುಗಳು, ಭಗವದ್ಗೀತೆಯೂ ಸೇರಿದಂತೆ ಮಹಾಭಾರತ ಮತ್ತು ಪತಂಜಲಿಯ ಯೋಗಸೂತ್ರಗಳು.

ಪತಂಜಲಿಯ ಯೋಗಸೂತ್ರಗಳು:

ಭಾರತೀಯ ತತ್ವಜ್ಞಾನದ ಪ್ರಕಾರ, ಯೋಗ ಎಂಬುದು ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ- ಇವು ರೂಢಿಯಲ್ಲಿ ಬಂದ  ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು) ಯೋಗದ ತಾತ್ವಿಕ ವ್ಯವಸ್ಥೆಯು ಸಾಂಖ್ಯ ಪಂಥದೊಂದಿಗೆ ಸಮೀಪದ ಸಂಪರ್ಕ ಹೊಂದಿದೆ. ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶ್ಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ.ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ.

ಯೋಗ ಮತ್ತು ಸಾಂಖ್ಯಗಳ ನಡುವಿನ ಹೋಲಿಕೆಯು ಎಷ್ಟು ಸಾಮ್ಯತೆ ಹೊಂದಿವೆಯೆಂದರೆ ಮ್ಯಾಕ್ಸ್ ಮುಲ್ಲರ್ “ಪರಸ್ಪರ ಸಾಮ್ಯತೆ ಹೊಂದಿರುವ ಎರಡೂ ತತ್ವಗಳನ್ನು ರೂಢಿಗತವಾಗಿ ದೇವರ ಅಸ್ತಿತ್ವದಲ್ಲಿ ನಂಬಿಕೆಯಿರುವ ಸಾಂಖ್ಯ ಮತ್ತು ಇಲ್ಲದ ಸಾಂಖ್ಯ ಎಂದು ಗುರುತಿಸಲಾಗುತ್ತದೆ ಎನ್ನುತ್ತಾರೆ. ಪತಂಜಲಿಯವರಿಗೆ ಔಪಚಾರಿಕ ಯೋಗ ತತ್ವಜ್ಞಾನದ ಸ್ಥಾಪಕರೆಂದು ವ್ಯಾಪಕವಾಗಿ ಮನ್ನಣೆ ನೀಡಲಾಗಿದೆ. ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆಯಾದ ಪತಂಜಲಿಯವರ ಯೋಗವನ್ನು ರಾಜಯೋಗವೆಂದು ಕರೆಯಲಾಗುತ್ತದೆ. ಪತಂಜಲಿ “ಯೋಗ” ಎಂಬ ಪದವನ್ನು ತಮ್ಮ ಎರಡನೇ ಸೂತ್ರದಲ್ಲಿ ನಿರೂಪಿಸುತ್ತಾರೆ. ಅದು ಅವರ ಸಂಪೂರ್ಣ ಸಾಧನೆಯ ನಿರೂಪಣೆಯನ್ನು ಕೊಡುವ ಸೂತ್ರ ಕೂಡ ಹೌದು.

ಅಷ್ಟಾಂಗಗಳು:

1. ಯಮ (ಐದು “ವರ್ಜನೆಗಳು”): ಅಹಿಂಸೆ, ಸತ್ಯಪಾಲನೆ, ಅತಿ ಆಸೆ ಪಡದಿರುವುದು, ಇಂದ್ರಿಯ ನಿಗ್ರಹ, ಮತ್ತು ಸ್ವಾಧೀನತೆಯ ನಿಗ್ರಹ.

2. ನಿಯಮ (ಐದು “ಅನುಷ್ಠಾನಗಳು”): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ಮತ್ತು ದೇವರಲ್ಲಿ ಶರಣಾಗತಿ.

3. ಆಸನ : ಅಕ್ಷರಶಃ ಅರ್ಥವೆಂದರೆ (“ಪೀಠ/ಕುಳಿತುಕೊಳ್ಳುವಿಕೆ”), ಹಾಗೂ ಪತಂಜಲಿಯವರ ಸೂತ್ರಗಳಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉಲ್ಲೇಖಿಸಲಾಗುತ್ತದೆ.

4. ಪ್ರಾಣಾಯಾಮ (“ಉಸಿರನ್ನು ನಿಯಂತ್ರಿಸುವುದು”): ಪ್ರಾಣ , ಉಸಿರು, “ಆಯಾಮ”, ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅರ್ಥೈಸಲಾಗುತ್ತದೆ.

5. ಪ್ರತ್ಯಾಹಾರ (“ಆಮೂರ್ತವಾಗಿರುವಿಕೆ”): ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ.

6. ಧಾರಣ (“ಏಕಾಗ್ರತೆ”): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.

7. ಧ್ಯಾನ (“ಧ್ಯಾನ”): ಧ್ಯಾನದ ಗುರಿಯ ಸ್ವಭಾವದತ್ತ ಅತೀವ ಚಿಂತನೆ.

8. ಸಮಾಧಿ (“ಬಿಡುಗಡೆ”): ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು.

ಖರ್ಚಿಲ್ಲದೇ ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಸಾಧ್ಯ:

ಯಾವುದೇ ಖರ್ಚಿಲ್ಲದೇ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು. ಏಕೆಂದರೆ ಈಗೀಗ ಚಿಕಿತ್ಸೆಗೆಂದು ಸಾವಿರಾರು ಖರ್ಚು ಮಾಡಬೇಕಾಗುತ್ತದೆ. ಜೊತೆಗೆ ನೋವಿನ ಚಿಕಿತ್ಸೆಯನ್ನು ಅನುಭವಿಸುವುದು ಕೂಡ ತಪ್ಪುವುದಿಲ್ಲ. ಹೀಗಾಗಿ ಯಾವುದೇ ಹಣ ಖರ್ಚು ಮಾಡದೇ ಬರೀ ದೇಹದ ಬೆವರಿಳಿಸುವ ಮೂಲಕ ನಾವು ನಮ್ಮಲ್ಲಿರುವ, ಬಂದಿರುವ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇನ್ನು ರೋಗ ಬಂದಿಲ್ಲವಾದರೂ ರೋಗ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದು. ಮೊದಲು ಯೋಗ ಮಾಡಬೇಕೆನ್ನುವವರು ಸೋಮಾರಿತನ, ಆಲಸ್ಯತನವನ್ನು ಬಿಡಬೇಕು. ಮನಸ್ಸು ಕೆಲವೊಮ್ಮೆ ದೇಹ ದಂಡಿಸಲು ಬಯಸುವುದಿಲ್ಲ. ಆದರೆ ದೇಹದಂಡನೆಯಿಂದಲೇ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಮನಗಂಡು, ಮನಸ್ಸಿನ ಮಾತು ಕೇಳದೇ ಯೋಗಾಭ್ಯಾಸ ಶುರು ಮಾಡಬೇಕು. ಒಂದೆರಡು ದಿನ ಕಷ್ಟವೆನಿಸುತ್ತದೆ. ನಂತರ ಕ್ರಮೇಣ ತಾನಾಗಿಯೇ ರೂಢಿಯಾಗುತ್ತದೆ. ಉದಾಹರಣೆಗೆ ಚಿಕ್ಕಮಕ್ಕಳು ಮೊದ ಮೊದಲು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ನಂತರ ರೂಢಿಯಾಗಿ ಶಾಲೆ ತಪ್ಪಿಸಲು ಮನಸ್ಸು ಮಾಡಲ್ಲ. ಇದೇ ರೀತಿ ಯೋಗಾಭ್ಯಾಸವೂ ಕೂಡ ಒಂದು.

ರೋಗಗಳ ಚಿಕಿತ್ಸೆಗೆ ವೈದ್ಯರು ನೀಡುವ ಔಷಧಿಗಳನ್ನು ನಾವು ಹೇಗೆ ತಪ್ಪಿಸದೇ ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿ ಯೋಗಾಭ್ಯಾಸವನ್ನು ಚಿಕಿತ್ಸೆ ಎಂದೇ ತಿಳಿದುಕೊಂಡರೆ ಸಾಕು. ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಸಮಸ್ಯೆಯೆಂದರೆ ಮಧುಮೇಹ, ಬೊಜ್ಜು, ಮೊಣಕಾಲು ನೋವು, ಬೆನ್ನು ನೋವು ಮತ್ತು ಸುಸ್ತು. ಇವೆಲ್ಲವುಗಳಿಗೆ ಬೇರೆ ಬೇರೆ ಆಸನಗಳನ್ನು ಮಾಡಬೇಕಾಗುತ್ತದೆ. ಎಲ್ಲ ಯೋಗಾಸನಗಳನ್ನು ಕೂಡ ಮಾಡಬಹುದು. ನಿರ್ದಿಷ್ಟ ಇಂತಹದೇ ಮಾಡಬೇಕೆಂದಿನಿಲ್ಲ. ಒಟ್ಟಿನಲ್ಲಿ ಎಲ್ಲ ಯೋಗಾಸನಗಳನ್ನು ಮಾಡುತ್ತಿದ್ದರೆ ತೊಂದರೆ ಏನಿಲ್ಲ. ಕೇವಲ ಪ್ರತಿನಿತ್ಯ ಒಂದು ಗಂಟೆ ಸಂಜೆಯಾಗಲಿ ಅಥವಾ ಮುಂಜಾನೆಯಾಗಲಿ ಯೋಗಾಭ್ಯಾಸ ಮಾಡಿದರೆ ಸಾಕು. ಎರಡೂ ಹೊತ್ತು ಮಾಡಿದರೆ ತಪ್ಪೇನಿಲ್ಲ.

ಯೋಗದಿಂದಾಗುವ ಉಪಯೋಗಗಳ ಪಟ್ಟಿ :

ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಹೇಗೆ ಸಾಧ್ಯ ?1. ಗರ್ಭಾವಸ್ಥೆಯಲ್ಲಿ ಯೋಗ : ನೀವು ಗರ್ಭಿಣಿಯಾಗಿದ್ದು ದೇಹರಚನೆ ಫಿಟ್ ಆಗಿರ ಬಯಸಿದರೆ ಯೋಗ ನಿಮಗೆ ಸಹಾಯ ಮಾಡಬಲ್ಲದು. ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ದೇಹ ಹೆಚ್ಚು ಬಲಯುತವಾಗುವುದು. ಪ್ರತೀದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ, ಉಸಿರಾಟ ಮತ್ತು ನರಗಳ ನಿಯಂತ್ರಣವನ್ನು ಹತೋಟಿಯಲ್ಲಿಡುತ್ತದೆ. ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಕಂಡುಬರುವ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಆದರೂ ತೊಡಕುಗಳನ್ನು ತಡೆಯಲು ಯೋಗ ಮಾಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳಿ ಸಲಹೆ ಪಡೆಯುವುದು ಒಳಿತು.

2. ಮನಃಶಾಂತಿ : ಯೋಗದಲ್ಲಿ ಬರುವ ಉಸಿರಾಟ ಮತ್ತಿತರ ಸಮತೋಲನ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ.ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

3. ಆರೋಗ್ಯಕ್ಕೆ ಬಲ : ಒಳ್ಳೆಯ ಆರೋಗ್ಯ ಎಂದರೆ ಕೇವಲ ರೋಗದಿಂದ ದೂರವಿರುವುದು ಮಾತ್ರವಲ್ಲ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಯೋಗ ಮಾಡುವುದರಿಂದ  ಹಲವಾರು ರೋಗಗಳಿಂದ ದೂರವಾಗಿ ಸಂತೋಷ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ.

4. ಒಳ್ಳೆಯ ಪ್ರಸರಣ (ಸಂಚಲನ) : ಉಸಿರಾಟದ ಮತ್ತು ಇತರ ಆಸನಗಳಿಂದ ದೇಹದ ರಕ್ತ ಸಂಚಲನವನ್ನು ಸರಾಗವಾಗಿಸುವಲ್ಲಿ ಯೋಗ ಸಹಕರಿಸುತ್ತದೆ. ಈ ಸರಾಗ ರಕ್ತಸಂಚಲನದಿಂದ ಆಮ್ಲಜನಕ ಮತ್ತು ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನವಾಗುವುದರಿಂದ ಆರೋಗ್ಯಯುತ ಅಂಗಗಳು ಮತ್ತು ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

5. ಸಮತಟ್ಟಾದ ಹೊಟ್ಟೆಗಾಗಿ ಯೋಗ : ಯೋಗ ಹೊಟ್ಟೆಯನ್ನು ಫ್ಲಾಟ್ ಆಗಿಸುವಲ್ಲಿ ಹೇಗೆ ಸಹಕರಿಸುತ್ತದೆ ಎಂಬುದನ್ನು ತಿಳಿಯುವ ಮೊದಲು ಬೇರೆ ಯಾವುದೇ ವ್ಯಾಯಾಮವು ಹೊಟ್ಟೆಯನ್ನು ಫ್ಲಾಟ್ ಅಗಿಸುವಲ್ಲಿ ಯಶಸ್ವಿಯಾಗಲಾರದೆಂಬುದನ್ನು ತಿಳಿಯಲೇ ಬೇಕು. ನಿಮಗೆ ಯಾರಾದರೂ ಕೆಲಸ, ಲೋ ಟೆಂಪೋ, ಮತ್ತು ವ್ಯಾಯಾಮಗಳಿಂದ ಹೊಟ್ಟೆಯನ್ನು ಫ್ಲಾಟ್ ಮಾಡಬಹುದು ಎಂದಲ್ಲಿ ನೀವು ಬೇರೆ ನುರಿತ ಸಲಹೆಗಾರರನ್ನು ಭೇಟಿ ಮಾಡುವುದು ಒಳಿತು. ಯೋಗಾದ ಆಸನಗಳಾದ ನೌಕಾಸನ, ಉಷ್ಟ್ರಾಸನ, ಮತ್ತು ಕೆಲವೊಂದು ಆಸನಗಳನ್ನು ಪ್ರತಿದಿನ ಮಾಡಿದರೆ ಇದು ಹೊಟ್ಟೆಯನ್ನು ನಿಧಾನವಾಗಿ ಒಳಹೊಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಯೋಗಾಭ್ಯಾಸ ಮತ್ತು ಸರಿಯಾದ ಆಹಾರ ಕ್ರಮದಿಂದ ಹೊಟ್ಟೆಯನ್ನು ಒಳಹಾಕಿ ಫ್ಲಾಟ್ ಆಗಿರುವಂತೆ ನೋಡಿಕೊಳ್ಳಬಹುದು.

6. ಆರೋಗ್ಯಯುತವಾದ ಹೃದಯ : ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನ ವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

7. ನೋವುಗಳನ್ನು ತಡೆಯುತ್ತದೆ : ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ ಇದು ಬೆನ್ನು ನೋವು ಮತ್ತು ಕೀಳು ನೋವುಗಳನ್ನು ತಡೆಯುತ್ತದೆ. ಕುಳಿತು ಕೆಲಸಮಾಡುವವರು ಮತ್ತು ಲಾಂಗ್ ಡ್ರೈವ್ ಮಾಡುವವರು ಪ್ರತಿದಿನ ಯೋಗ ಮಾಡಬೇಕು. ಇದರಿಂದ ಬೆನ್ನು ಮೂಳೆಯ ಸಂಕೋಚನ ಮತ್ತು ಬೆನ್ನು ಬಿಗಿತವನ್ನು ಹೋಗಲಾಡಿಸಬಹುದು. ಇದು ತಪ್ಪು ಭಂಗಿಯಿಂದಾಗಿ ನಂತರದ ದಿನಗಳಲ್ಲಿ ಕಾಡುವ ಎಲ್ಲಾ ನೋವುಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

8. ಉತ್ತಮ ಉಸಿರಾಟ : ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮಥ್ರ್ಯವನ್ನು ಹೆಚ್ಚಿಸಬಹುದು . ಇದು ದೈನಂದಿನ ಕಾರ್ಯನಿರ್ವಹಣೆ ಸಾಮಥ್ರ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಧೀರ್ಘ ಉಸಿರಾಟದ ಯೋಗವು ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

9. ಸಮತೋಲನವನ್ನು ಹೆಚ್ಚಿಸುತ್ತದೆ : ದಿನನಿತ್ಯದ ಜಂಜಾಟದಲ್ಲಿ ಕುಳಿತುಕೊಳ್ಳುವ ಬೇರೆಬೇರೆ ಭಂಗಿಯಿಂದಾಗಿ ವಯಸ್ಸಾಗುತ್ತಿದ್ದಂತೆ ನಾವು ನಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೇವೆ.ಈ ಕಾರಣದಿಂದಾಗಿ ಬೆನ್ನು ನೋವು, ಮೂಳೆಯ ಒಡೆತ, ಸೆಳೆತ ಇವುಗಳೆಲ್ಲ ಕಾಣಿಸಿಕೊಳ್ಳುತ್ತವೆ. ಯೋಗ ಮಾಡುವುದರಿಂದ ಈ ನೋವನ್ನು ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಯೋಗದ ಮೂಲಕ ಬಲವನ್ನು ಮತ್ತೆ ಪಡೆದುಕೊಳ್ಳಬಹುದು. ಇದು ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಕೂಡ ಸಹಕರಿಸುತ್ತದೆ.

10. ಒತ್ತಡ ಕಡಿಮೆ ಮಾಡುತ್ತದೆ : ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಅಂದಮಾತ್ರಕ್ಕೆ ಯೋಗ ಒಂದೇ ಒತ್ತಡವನ್ನು ನಿವಾರಿಸಲು ಇರುವ ಮಾರ್ಗ ಎಂದಲ್ಲ. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶೃದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಡಾ. ನಿತಿನ್ ವಿ.-ಪಂಚಕರ್ಮ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಅಂಚೆಪಾಳ್ಯ, ಕುಂಬಳಗೋಡ್ ಪೋಸ್ಟ್,  ಬೆಂಗಳೂರು. ದೂ.: +91 99018 65656, 080-22718025   Email: dr.nitin.v.89@gmail.com

ಡಾ. ನಿತಿನ್ ವಿ.-ಪಂಚಕರ್ಮ ವಿಭಾಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ

ಅಂಚೆಪಾಳ್ಯ, ಕುಂಬಳಗೋಡ್ ಪೋಸ್ಟ್,  ಬೆಂಗಳೂರು.
ದೂ.: +91 99018 65656, 080-22718025   Email: dr.nitin.v.89@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!