ಥರ್ಮಲ್ ಸ್ಕ್ಯಾನರ್ ಮತ್ತು ಕೋವಿಡ್-19

ಥರ್ಮಲ್ ಸ್ಕ್ಯಾನರ್ ಇತ್ತೀಚೆಗೆ ಸಾಂಕ್ರಾಮಿಕವಾಗಿ ಕೋವಿಡ್-19 ರೋಗ ಹರಡುತ್ತಿರುವಾಗ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಧನ. ವೈರಾಣು ಸೋಂಕಿತರಿಗೆ ಜ್ವರ ಇದ್ದಾಗ ಮಾತ್ರ ಈ ಯಂತ್ರ ಜ್ವರವನ್ನು ಪತ್ತೆಹಚ್ಚಬಲ್ಲದು.ದೇಹಕ್ಕೆ ಸೋಂಕು ತಗುಲಿದೆಯೇ ಎಂಬುದನ್ನು ಈ ಯಂತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದು.

thermal-scannerನಮ್ಮ ದೇಹದ ಉಷ್ಣತೆ ಹೆಚ್ಚಿದಾಗ ಜ್ವರ ಬಂದಿದೆ ಎನ್ನಲಾಗುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದ ಉಷ್ಣತೆ 98.6 F (370C) ಆಗಿರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಒಂದಷ್ಟು ವ್ಯತ್ಯಾಸ ಇರುತ್ತದೆ. ಜ್ವರ ಎನ್ನುವುದು ರೋಗವಲ್ಲ. ಇದು ರೋಗದ ಒಂದು ಲಕ್ಷಣವಾಗಿರುತ್ತದೆ. ದೇಹಕ್ಕೆ ಸೋಂಕು ತಗುಲಿದಾಗ ದೇಹದ ರಕ್ಷಣಾ ವ್ಯವಸ್ಥೆ ಆ ಸೋಂಕು ಉಂಟುಮಾಡಿದ ಕೀಟಾಣುವನ್ನು ಎದುರಿಸಿ ನಾಶ ಮಾಡಲು ಪ್ರಯತ್ನಿಸುತ್ತದೆ. ಆಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಮುಂತಾದ ರೋಗಾಣುಗಳಿಂದ ಸೋಂಕು ತಗಲಿದಾಗ ಜ್ವರ ಬರುವುದು ಸಹಜವಾದ ಪ್ರಕ್ರಿಯೆ. ಸಾಮಾನ್ಯವಾಗಿ 98.6 F ಅಥವಾ 370C ಗಿಂತ ಹೆಚ್ಚು ಉಷ್ಣತೆ ಇದ್ದಲ್ಲಿ ಜ್ವರ ಬಂದಿದೆ ಎಂದರ್ಥವಾದರೂ, ದೇಹದ ಉಷ್ಣತೆ 100.4 F ಅಥವಾ 380C ಗಿಂತ ಜಾಸ್ತಿ ಆದಾಗ ಮಾತ್ರ ಜ್ವರ ಬಂದಿದೆ ಎಂದು ಪರಿಗಣಿಸಲಾಗುತ್ತದೆ.

ಜ್ವರ ಬಂದಾಗ ಅದರ ಜೊತೆಗೆ ಇತರ ಚಿಹ್ನೆಗಳಾದ ತಲೆನೋವು, ಬಿಸಿಯಾದ ಹಣೆ, ಚಳಿ, ನಡುಕ, ಸ್ನಾಯುಗಳಲ್ಲಿ ನೋವು, ಹಸಿವಿಲ್ಲದಿರುವುದು, ಕಣ್ಣಿನಲ್ಲಿ ಉರಿ, ಬಾಯಾರಿಕೆ, ನಿರ್ಜಲೀಕರಣ ಮುಂತಾದ ಇತರ ಚಿಹ್ನೆಗಳು ಕಂಡು ಬರುತ್ತದೆ. ತೀವ್ರವಾದ ಜ್ವರ ಅಂದರೆ 1080 F ಅಥವಾ 42.20C ಗಿಂತಲೂ ಜಾಸ್ತಿ ಉಷ್ಣತೆ ಇದ್ದಲ್ಲಿ ಅಪಸ್ಮಾರ ಉಂಟಾಗಿ ಮೆದುಳಿಗೆ ಹಾನಿಯಾಗಿ ಸಾವು ಸಂಭವಿಸಬಹುದು. ಸಾಮಾನ್ಯವಾಗಿ ಜ್ವರ ಬಂದಾಗ ಸೂಕ್ತವಾದ ವಿಶ್ರಾಂತಿ ಮತ್ತು ಸಾಕಷ್ಟು ದ್ರವಾಹಾರ ತೆಗೆದುಕೊಳ್ಳತಕ್ಕದ್ದು. ಜ್ವರದ ಜೊತೆಗೆ ಇತರ ಚಿಹ್ನೆಗಳಾದ ಗಂಟಲಕೆರೆತ, ಹೊಟ್ಟೆನೋವು, ತಲೆನೋವು, ವಾಂತಿ, ಕೆಮ್ಮು, ಉಸಿರಾಟ ತೊಂದರೆ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು. ಬರೀ ಜ್ವರ ಇದ್ದಲ್ಲಿ ಪಾರಾಸಿಟಮಾಲ್ ಔಷಧಿ ಸೇವಿಸಿ ಸಾಕಷ್ಟು ವಿಶ್ರಾಂತಿ ಮತ್ತು ಹೆಚ್ಚು ನೀರು ಸೇವಿಸಬೇಕಾಗುತ್ತದೆ.

ಜ್ವರವನ್ನು ಪತ್ತೆ ಹಚ್ಚುವುದು ಹೇಗೆ?

ಜ್ವರವನ್ನು ಹಲವಾರು ರೀತಿಯಿಂದ ಪತ್ತೆ ಹಚ್ಚಬಹುದಾಗಿದೆ
1. ಸ್ಪರ್ಶದ ಮುಖಾಂತರ
2. ಥರ್ಮೊಮೀಟರ್ ಮುಖಾಂತರ
3. ಥರ್ಮಲ್ ಸ್ಕ್ಯಾನರ್ ಮುಖಾಂತರ

ಥರ್ಮಲ್ ಸ್ಕ್ಯಾನರ್ ಮತ್ತು ಕೋವಿಡ್-19 1. ಸ್ಪರ್ಶದ ಮುಖಾಂತರ: ಇದನ್ನು ಸಾಮಾನ್ಯ ಮನುಷ್ಯರು ಹೆಚ್ಚು ಬಳಕೆ ಮಾಡುತ್ತಾರೆ. ಸಂಶಯಿತ ರೋಗಿಯ ಹಣೆಯ ಭಾಗವನ್ನು ಅಂಗೈಯ ಒಳಭಾಗದಿಂದ ಸ್ಪರ್ಶಿಸಿ, ರೋಗಿಯ ಉಷ್ಣತೆಯನ್ನು ಅಂದಾಜಿಸಲಾಗುತ್ತದೆ. ಹೀಗೆ ಮಾಡುವ ಮೊದಲು ತಮ್ಮ ದೇಹದ ಉಷ್ಣತೆಯನ್ನು ಪರೀಕ್ಷಿಸಿ ರೋಗಿಯ ಹಣೆಯ ಭಾಗದ ಉಷ್ಣತೆಯನ್ನು ತಾಳೆ ಹಾಕಿ, ಜ್ವರ ಇದೆಯೋ ಎಂದು ತಿಳಿಯಲಾಗುತ್ತದೆ. ಇದು ಅತ್ಯಂತ ಪುರಾತನವಾದ ಮತ್ತು ಹೆಚ್ಚು ಬಳಸುವ ವಿಧಾನವಾಗಿರುತ್ತದೆ. ಇದರ ಜೊತೆಗೆ ಮುಂಗೈಯ ಹೊರಭಾಗದ ಚರ್ಮವನ್ನು ಪಿಂಚ್ ಮಾಡಿ ನಿರ್ಜಲೀಕರಣವಾಗಿದೆಯೇ ಎಂದು ತಿಳಿಯಲಾಗುತ್ತದೆ. ಸಾಮಾನ್ಯವಾಗಿ ಜ್ವರ ಜಾಸ್ತಿ ಬಂದಾಗ ನಿರ್ಜಲೀಕರಣವಾಗಿ ಚರ್ಮ ತನ್ನ ಕಾಂತಿಯನ್ನು ಕಳೆದುಕೊಂಡು ಪಿಂಚ್ ಮಾಡಿದಾಗ ಕಳಾಹೀನವಾಗಿ ಕಂಡು ಬರುತ್ತದೆ.

2. ಥರ್ಮಾಮೀಟರ್: ಇದೊಂದು ಉಷ್ಣತೆಯನ್ನು ಅಳೆಯುವ ಸಾಧನವಾಗಿದ್ದು, ತಾಪಮಾಪಕ ಎಂದು ಕರೆಯುತ್ತಾರೆ. ಇದನ್ನು ನಾಲಗೆಯ ಕೆಳಭಾಗದಲ್ಲಿ, ಕಂಕುಳಿನ ಭಾಗದಲ್ಲಿ ಮತ್ತು ಗುದದ್ವಾರದಲ್ಲಿ ಬಳಸಲಾಗುತ್ತದೆ. ಸೀಸದ ಕಂಬ ಇರುವ ಈ ತಾಪಮಾಪಕದಲ್ಲಿ ಉಷ್ಣತೆಯ ಕಾರಣದಿಂದಾಗಿ ಸೀಸ ಚಲಿಸುತ್ತದೆ. ಸೀಸದ ಚಲನೆಯ ಎತ್ತರವನ್ನು ಆಧರಿಸಿ ಉಷ್ಣತೆಯನ್ನು ಪತ್ತೆಹಚ್ಚಲಾಗುತ್ತದೆ. ಬಾಯಿ ಅಥವಾ ಕಂಕುಳಿನ ಭಾಗದಲ್ಲಿ 37.60F (99.70 C) ಅಥವಾ ಗುದದ್ವಾರದ ಭಾಗದಲ್ಲಿ 38.10F (100.60C) ಕ್ಕಿಂತ ಜಾಸ್ತಿ ಇದ್ದಲ್ಲಿ ಜ್ವರ ಬಂದಿದೆ ಎಂದು ತಿಳಿಯಲಾಗುತ್ತದೆ. ಇದು ನಿಖರವಾದ ಜ್ವರವನ್ನು ಪತ್ತೆ ಹಚ್ಚುವ ಸಾಧನವಾಗಿದ್ದು, ಅತೀ ಹೆಚ್ಚು ಬಳಕೆಯಲ್ಲಿದೆ.

3.ಥರ್ಮಲ್ ಸ್ಕ್ಯಾನರ್: ಇದು ಕೂಡಾ ದೇಹದ ಉಷ್ಣತೆಯನ್ನು ಅಳೆಯುವ ಸಾಧನವಾಗಿರುತ್ತದೆ. ನೋಡಲು ಪಿಸ್ತೂಲಿನಂತಿರುವ ಈ ಸಾಧನಕ್ಕೆ ಥರ್ಮಾಮೀಟರ್ ಗನ್ ಎಂದೂ ಕರಡಯುತ್ತಾರೆ. ಈ ಸಾಧನದ ವಿಶೇಷವೆಂದರೆ ರೋಗಿಗಳನ್ನು ಮುಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಈ ಯಂತ್ರದ ಬಳಕೆ ಹೆಚ್ಚು ಚಾಲ್ತಿಯಲ್ಲಿದೆ. ಶಂಕಿತ ವ್ಯಕ್ತಿ ಜ್ವರ ಬಂದಾಗ, ದೇಹದ ಚರ್ಮದಿಂದ ಇನ್ಪ್ರಾರೆಡ್ (ಅವೆಕೆಂಪು) ಬೆಳಕು ಕಿರಣಗಳ ರೂಪದಲ್ಲಿ ಹೊರಹೊಮ್ಮಿ, ಶಾಖವನ್ನು ದೂರದಿಂದಲೇ ಅಳೆಯುವ ಶಕ್ತಿಯನ್ನು ಈ ಯಂತ್ರಗಳು ಹೊಂದಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಾಯಿ, ಕಂಕುಳ ಅಥವಾ ಗುದದ್ವಾರದ ಬಳಿ ಉಷ್ಣತೆ ಅಳೆಯುವುದು ಸುರಕ್ಷಿತವಲ್ಲ ಮತ್ತು ಬಹಳ ಸಮಯ ಹಿಡಿಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾಗ ಬೇಗನೆ ಉಷ್ಣತೆ ಅಳೆಯಲು ಈ ಥರ್ಮಲ್ ಸ್ಕ್ಯಾನರ್ ಅತೀ ಉಪಯುಕ್ತವಾಗಿರುತ್ತದೆ.

ಥರ್ಮಲ್ ಸ್ಕ್ಯಾನರ್ ಲಾಭಗಳು ಏನು?

thermal-scanner-at-mall ಥರ್ಮಲ್ ಸ್ಕ್ಯಾನರ್ ಮತ್ತು ಕೋವಿಡ್-19 1. ರೋಗಿಗಳ ಮುಟ್ಟದೆ ಅಥವಾ ಸ್ಪರ್ಶಿಸದೇ ಶಂಕಿತ ರೋಗಿಯ ಉಷ್ಣತೆಯನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಉದಾಹರಣೆಗೆ SARS, MERS, ಎಬೋಲಾ, ಕೋವಿಡ್-19 ಮುಂತಾದ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜ್ವರ ಪತ್ತೆ ಹಚ್ಚಲು ಈ ಉಪಕರಣ ಅತೀ ಉಪಯುಕ್ತ ಎನ್ನಲಾಗಿದೆ.
2. ಬಹಳ ಕಡಿಮೆ ಸಮಯ ಹಿಡಿಯುತ್ತದೆ. ಒಂದೆರಡು ಸೆಕೆಂಡುಗಳ ಅವಧಿಯಲ್ಲಿ ದೇಹದ ಉಷ್ಣತೆಯನ್ನು ಪತ್ತೆಹಚ್ಚಬಹುದು. ಸಾಮಾನ್ಯ ಥರ್ಮೋಮೀಟರ್ ಬಳಸಿದಲ್ಲಿ ಎರಡರಿಂದ ಮೂರು ನಿಮಿಷ ಹಿಡಿಯುತ್ತದೆ.
3. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾಗ ಬೇಗನೆ ಜ್ವರ ಪತ್ತೆ ಹಚ್ಚಲು ಥರ್ಮಲ್ ಸ್ಕ್ಯಾನರ್ ಅತೀ ಉಪಯುಕ್ತ. ಉದಾಹರಣೆ ಬಸ್ ನಿಲ್ದಾಣಗಳಲ್ಲಿ, ಏರ್‍ಪೋರ್ಟ್‍ಗಳಲ್ಲಿ ಜನರನ್ನು ಸಾಮೂಹಿಕವಾಗಿ ತಪಾಸಣೆ ಮಾಡುವಾಗ ಪದೇ ಪದೇ ಥರ್ಮೋಮೀಟರ್ ಬಳಸುವುದು ಸೂಕ್ತವಲ್ಲ ಮತ್ತು ಸುರಕ್ಷಿತವಲ್ಲ. ಆದರೆ ಥರ್ಮಲ್‍ಸ್ಕ್ಯಾನರ್ ಬಹಳ ಉಪಯೋಗಕಾರಿ ಎಂದು ಸಾಬೀತಾಗಿದೆ.
4. ಒಮ್ಮೆ ಬಳಸಿದ ಬಳಿಕ ಮತ್ತೊಮ್ಮೆ ಬಳಸುವ ಮೊದಲು ಯಾವುದೇ ದ್ರಾವಣದ ಅಗತ್ಯವಿಲ್ಲ. ರೋಗ ಹರಡುವ ಸಾಧ್ಯತೆ ಅತೀ ಕಡಿಮೆ ಇರುತ್ತದೆ. ಆದರೆ ಥರ್ಮೊಮೀಟರ್ ಬಳಸುವಾಗ ಪದೇ ಪದೇ ಶುಚಿಗೊಳಿಸಬೇಕಾಗುತ್ತದೆ ಮತ್ತು ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
5. ಈ ಯಂತ್ರವನ್ನು ಬಳಸಲು ವೈದ್ಯರೇ ಆಗಬೇಕೆಂದಿಲ್ಲ. ಸಾಮಾನ್ಯ ಜ್ವರ ಇರುವ ಎಲ್ಲರೂ ಈ ಯಂತ್ರವನ್ನು ಬಳಸಬಹುದಾಗಿದೆ. ಜ್ವರ ಇರುವ ವ್ಯಕ್ತಿ ಬಂದಾಗ ಈ ಸಾಧನದಲ್ಲಿ ಬೆಳಕು ಕಂಡು ಬರುತ್ತದೆ. ಅತೀ ಸುಲಭದ ಮತ್ತು ಕ್ಷಣಾರ್ಧದಲ್ಲಿ ಜ್ವರ ಪತ್ತೆ ಹಚ್ಚುವ ಸಾಮಥ್ರ್ಯ ಈ ಸಾಧನ ಹೊಂದಿರುತ್ತದೆ.

ಕೊನೆಮಾತು

ಇತ್ತೀಚೆಗೆ ಸಾಂಕ್ರಾಮಿಕವಾಗಿ ಕೋವಿಡ್-19 ರೋಗ ಹರಡುತ್ತಿರುವಾಗ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಧನ ‘ಥರ್ಮಲ್ ಸ್ಕ್ಯಾನರ್’. ಇದು ದೇಹದ ಉಷ್ಣತೆಯನ್ನು ಮಾತ್ರ ಪತ್ತೆಹಚ್ಚುವ ಯಂತ್ರವಾಗಿರುತ್ತದೆ. ದೇಹಕ್ಕೆ ಸೋಂಕು ತಗುಲಿದೆಯೇ ಎಂಬುದನ್ನು ಈ ಯಂತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದು. ಯಾಕೆಂದರೆ ಸೋಂಕಿತರೆಲ್ಲರಿಗೂ ಜ್ವರ ಬರಲೇ ಬೇಕೆಂದಿಲ್ಲ. ವೈರಾಣು ಸೋಂಕಿತರಿಗೆ ಜ್ವರ ಇದ್ದಾಗ ಮಾತ್ರ ಈ ಯಂತ್ರ ಜ್ವರವನ್ನು ಪತ್ತೆಹಚ್ಚಬಲ್ಲದು. ಇನ್ನು ಕೆಲವೊಮ್ಮೆ ಜ್ವರ ಪತ್ತೆ ಹಚ್ಚಲು ಸಾಧ್ಯವಾಗಬಾರದೆಂಬ ದುರುದ್ದೇಶದಿಂದ ವೈರಾಣು ಸೋಂಕಿತರು ಪಾರಾಸಿಟಮೊಲ್ ಔಷಧಿ ಸೇವಿಸಿ ಈ ಪರೀಕ್ಷೆಯಲ್ಲಿ ಹಾದಿ ತಪ್ಪಿಸುವ ಅತೀ ಬುದ್ದಿವಂತಿಕೆ ಪ್ರದರ್ಶಿಸಿರುವುದು ಕೂಡಾ ವೈದ್ಯರ ಗಮನಕ್ಕೆ ಬಂದಿದೆ. ಒಟ್ಟಿನಲ್ಲಿ ಶಂಕಿತ ಅಥವಾ ಸೋಂಕಿತ ವ್ಯಕ್ತಿಯ ದೇಹದ ಉಷ್ಣತೆ ಹೆಚ್ಚಿದಾಗ ಈ ಥರ್ಮಲ್ ಸ್ಕ್ಯಾನರ್ ಖಂಡಿತವಾಗಿಯೂ ಬಹಳ ಉಪಯೋಗಕಾರಿ. ಆದರೆ ಇಂತಹ ಥರ್ಮಲ್ ಸ್ಕ್ಯಾನರ್‍ಗಳು ತೋರಿಸುವ ಉಷ್ಣತೆ ಎಷ್ಟು ನಿಖರವಾಗಿರುತ್ತದೆ ಎನ್ನುವುದು ಬಳಕೆಯ ವಿಧಾನ, ಬಳಕೆಯಾಗುತ್ತಿರುವ ಪರಿಸರ ಅಥವಾ ಬಳಸಲಾಗುತ್ತಿರುವ ಸ್ಕ್ಯಾನರಿನ ಗುಣಮಟ್ಟವೂ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಕಾರಣದಿಂದ ಸಂಪೂರ್ಣವಾಗಿ ಯಂತ್ರಕ್ಕೆ ಅವಲಂಬಿತವಾಗಬಾರದು ಎಂಬುದನ್ನು ಜನರು ಅರಿತುಕೊಳ್ಳಬೇಕಾದ ಅನಿವಾರ್ಯತೆಯೂ ಈಗಿನ ಕಾಲಘಟ್ಟದಲ್ಲಿ ಇದೆ.

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!