ಆಕ್ಯುಪಂಕ್ಚರ್ ಅಥವಾ ಸೂಜಿ ಚಿಕಿತ್ಸೆ ಯಲ್ಲಿ ಬೇರೆ ಬೇರೆ ಗಾತ್ರದ ಸೂಜಿಯನ್ನು ವಿವಿಧ ಆಳಕ್ಕೆ ದೇಹದ ನಿರ್ಧಿಷ್ಟ ಭಾಗದಲ್ಲಿ ಚುಚ್ಚಲಾಗುತ್ತದೆ. ಈ ಶಬ್ಧದಲ್ಲಿ, ಆಕ್ಯು ಎಂದರೆ ಸೂಜಿ ಎಂದರ್ಥ, ಪಂಕ್ಚರ್ ಎಂದರೆ ಚುಚ್ಚುವುದು ಎಂದರ್ಥ.
ಈ ಚಿಕಿತ್ಸೆಯ ಉಗಮ ಸರಿಸುಮಾರು ಕ್ರಿ. ಸ. 100 ರಲ್ಲಿ ಚೀನಾದಲ್ಲಿ ಹುಟ್ಟಿಕೊಂಡಿದ್ದು, ಇಲ್ಲಿ ಚಿಕಿತ್ಸೆ ನೀಡುವ ಪರಿಣಿತರು ರೋಗಾಣುರಹಿತ ಸೂಜಿಯನ್ನು ಬಳಸುತ್ತಾರೆ. ಈ ಚಿಕಿತ್ಸೆಯು 20-30 ನಿಮಿಷದ ಕಾಲ ನಡೆಯುತ್ತದೆ. ಸಾಂಪ್ರದಾಯಿಕ ಚೀನೀ ಔಷಧ ಶಾಸ್ತ್ರ ಪ್ರಕಾರ, ನಮ್ಮ ದೇಹದಲ್ಲಿ ಶಕ್ತಿ ಪ್ರವಾಹಿಸುವ ದಾರಿಯನ್ನು ಮೆರಿಡಿಯನ್ ಎನ್ನುತ್ತಾರೆ. ಒಂದು ವೇಳೆ ಇಂಥ ದಾರಿ ತೊಂದರೆಗೊಳಗಾದರೆ, ಶಕ್ತಿಯ ಪ್ರವಾಹ ಏರುಪೇರು ಆಗುತ್ತದೆ. ಇದನ್ನು ಸೂಜಿ ಚಿಕಿತ್ಸೆಯ ಮೂಲಕ ಸಮತೋಲನಕ್ಕೆ ತರಬಹುದು. ಇಂಥಹ 400 ಕ್ಕು ಹೆಚ್ಚು ಮೆರಿಡಿಯನ್ ಬಿಂದುಗಳು ದೇಹದಲ್ಲಿ ಇರುತ್ತದೆ.
ಸೂಜಿ ಚಿಕಿತ್ಸೆಯು ವಿಧಾನ
• ರೋಗಿಯ ಪರೀಕ್ಷೆ: ಇಲ್ಲಿ ಮುಖ, ನಾಲಿಗೆ ಮೊದಲಾದ ಪರೀಕ್ಷೆ.
• ರೋಗಿಯ ಧ್ವನಿ ಪರೀಕ್ಷೆ
• ರೋಗಿಯ ವಿಚಾರಣೆ
• ರೋಗಿಗೆ ಸ್ಪರ್ಶ ಜ್ಞಾನ ಇದೆಯಾ? ಎಂದು ಪರೀಕ್ಷೆ
ಸೂಜಿ ಚಿಕಿತ್ಸೆಗೆ ಬಳಸುವ ಸ್ಟೇನ್ಲೆಸ್ ಸ್ಟೀಲ್ ಸೂಜಿಯನ್ನು ಒಮ್ಮೆ ಮಾತ್ರ ಬಳಸಲಾಗುತ್ತದೆ.
ಸರಿಯಾದ ಜಾಗದಲ್ಲಿ ಸೂಜಿ ಚುಚ್ಚಿದರೆ ರೋಗಿಗೆ ಬೇರೆ ಬೇರೆ ರೀತಿಯ ಅನುಭವ ಆಗುತ್ತದೆ. ಉದಾ: ಮರಗಟ್ಟುವಿಕೆ, ನೋವು, ಭಾರದ ಅನುಭವ. ಈ ಅನುಭವಗಳನ್ನು ದೆ-ಚಿ ಎನ್ನುತ್ತಾರೆ.
ಅಕ್ಯುಪಂಕ್ಚರ್ ಪಾಯಿಂಟ್‌ಗಳು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಇದರ ಪ್ರತಿಯಾಗಿ, ಸ್ನಾಯುಗಳು, ಬೆನ್ನುಹುರಿ ಮತ್ತು ಮೆದುಳಿಗೆ ರಾಸಾಯನಿಕ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಜೀವರಾಸಾಯನಿಕ ಬದಲಾವಣೆಗಳು ದೇಹದಲ್ಲೆ ಹುಟ್ಟಿನಿಂದ ಇರುವ ಗುಣಪಡಿಸುವ ಸಾಮರ್ಥ್ಯಗಳನ್ನು ಉತ್ತೇಜಿಸುತ್ತದೆ ಮತ್ತು ದೈಹಿಕ, ಭಾವನಾತ್ಮಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಪ್ರಯೋಜನಗಳು
• ನೋವು ನಿವಾರಕ: ಬೆನ್ನು ನೋವು, ಸಂಧಿವಾತ, ಮೈಗ್ರೇನ್ ಮತ್ತು ಫೈಬ್ರೊಮ್ಯಾಲ್ಗಿಯ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿಯಾಗಿದೆ.
• ಮಾನಸಿಕ ಆರೋಗ್ಯ: ಅಕ್ಯುಪಂಕ್ಚರ್ ಆತಂಕ, ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಉತ್ತಮ ನಿದ್ರೆ: ಅಕ್ಯುಪಂಕ್ಚರ್ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಇದು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ನಿದ್ರಾಹೀನತೆಗೆ ಉತ್ತಮ ಚಿಕಿತ್ಸೆಯಾಗಿದೆ.
• ಜೀರ್ಣಕ್ರಿಯೆ: ಕೆರಳಿಸುವ ಕರುಳಿನ ಸಹಲಕ್ಷಣಗಳು (IBS) ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಅಕ್ಯುಪಂಕ್ಚರ್ ಮೂಲಕ ಗುಣಪಡಿಸಬಹುದು (ಸುಧಾರಿತ ರಕ್ತದ ಹರಿವು ಮತ್ತು ವಿಶ್ರಾಂತಿಯ ಮೂಲಕ).
• ರೋಗನಿರೋಧಕ ಶಕ್ತಿ: ಅಕ್ಯುಪಂಕ್ಚರ್ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಆದುನಿಕ ಚಿಕಿತ್ಸೆಯಲ್ಲಿ ಅಕ್ಯುಪಂಕ್ಚರ್
• ಕ್ಯಾನ್ಸರ್ ಚಿಕಿತ್ಸೆ: ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ನೋವು, ವಾಕರಿಕೆ ಮತ್ತು ಆಯಾಸವನ್ನು ನಿರ್ವಹಿಸಲು ಅಕ್ಯುಪಂಕ್ಚರ್ ಅನ್ನು ಬಳಸಲಾಗುತ್ತದೆ.
• ಮಹಿಳೆಯರ ಆರೋಗ್ಯ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಬಂಜೆತನ ಮತ್ತು ಋತುಬಂಧ ಸಮಸ್ಯೆಗಳನ್ನು ಅಕ್ಯುಪಂಕ್ಚರ್ ಮೂಲಕ ಚಿಕಿತ್ಸೆ ನೀಡಬಹುದು.
• ಪುನರ್ವಸತಿ ಮತ್ತು ದೈಹಿಕ ಚಿಕಿತ್ಸೆ: ಅಕ್ಯುಪಂಕ್ಚರ್ ಅನ್ನು ದೈಹಿಕ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಕ್ರೀಡಾ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರದ ತ್ವರಿತ ಚೇತರಿಕೆಗೆ ಸಹಾಯ ಮಾಡುತ್ತದೆ.
• ಉಸಿರಾಟದ ತೊಂದರೆಗಳು: ಅಕ್ಯುಪಂಕ್ಚರ್ ಆಸ್ತಮಾ ಮತ್ತು ಕಾಲೋಚಿತ ಅಲರ್ಜಿಗಳನ್ನು ಸಹ ಕಡಿಮೆ ಮಾಡುತ್ತದೆ.
ಪರ್ಯಾಯ ಚಿಕಿತ್ಸೆಗಳು
ಆಕ್ಯುಪ್ರೆಶರ್: ಬೇರೆ ಬೇರೆ ಸಲಕರಣೆಗಳ ಸಹಾಯದಿಂದ ದೇಹದ ಮೇಲೆ ಒತ್ತಡವನ್ನು ಪ್ರಯೋಗಿಸಿ ಗುಣಪಡಿಸಬಹುದಾದ ಚಿಕಿತ್ಸೆ.
ಕಪ್ಪಿಂಗ್ ಥೆರಪಿ: ಕಪ್ ಗಳನ್ನು ಉಪಯೋಗಿಸಿ ದೇಹದ ಮೇಲೆ ಒತ್ತಡವನ್ನು ಪ್ರಯೋಗಿಸಿ, ರಕ್ತ ಪರಿಚಾಲನೆಯಾಗುವಂತೆ ಮಾಡುವುದು.
ಎಲೆಕ್ಟ್ರೋ ಆಕ್ಯುಪಂಕ್ಚರ್ : ಇದು ಸೂಜಿಚಿಕಿತ್ಸೆಯ ವಿಧಾನವೇ ಆದರೆ ಇಲ್ಲಿ ನಿರ್ದಿಷ್ಟ ಪ್ರಮಾಣದ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ಆರಿಕ್ಯುಲೋಥೆರಪಿ: ಇದು ಕಿವಿಯ ಸೂಜಿ ಚಿಕಿತ್ಸೆ
ನೆತ್ತಿಯ ಅಕ್ಯುಪಂಕ್ಚರ್: ಈ ಚಿಕಿತ್ಸೆಯಲ್ಲಿ ನೆತ್ತಿಯ ಮೇಲಿನ ಬಿಂದುಗಳು ಅಥವಾ ಪ್ರದೇಶಗಳನ್ನು ಸೂಜಿಯ ಮೂಲಕ ಉತ್ತೇಜಿಸಿ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು, ನರವೈಜ್ಞಾನಿಕ ಮತ್ತು ಮಾನಸಿಕ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಸೂಜಿ ಚಿಕಿತ್ಸೆಯಿಂದ ಗುಣ ಪಡಿಸಬಹುದಾದ ರೋಗಗಳು: ದೈಹಿಕ ನೋವು, ತಲೆ ನೋವು, ಮೈಗ್ರೇನ್, ಗಂಟು ನೋವು, ಕಿವಿ ನೋವು, ಬೆನ್ನು ನೋವು, ನಿದ್ರಾಹೀನತೆ.
ಡಾ. ಸುಜಾತ ಕೆ. ಜೆ (ಹಿರಿಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ತಜ್ಞರು)
ಡಾ. ಶೋಭಿತಾ ತಂತ್ರಿ (ಸ್ನಾತಕೋತ್ತರ ವಿದ್ಯಾರ್ಥಿನಿ)SDMCNYS