ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು – ಬಡವರ ಸೇಬು

ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಬಡವರ ಸೇಬು ಬಹಳಷ್ಟು ವೈದ್ಯಕೀಯ ಗುಣವನ್ನು ಹೊಂದಿರುತ್ತದೆ.ಪೇರಳೆ ಹಣ್ಣು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತೀ ಹೆಚ್ಚು ವೈದ್ಯಕೀಯ ಗುಣ ಮತ್ತು ಪೋಷಕಾಂಶ ನೀಡುವ ಹಣ್ಣು ಎಂದು ಅಂದಾಜಿಸಲಾಗಿದೆ. ದಿನದ ಯಾವುದೇ ಹೊತ್ತಿನಲ್ಲಿ ಈ ಹಣ್ಣು ಸೇವಿಸಬಹುದಾಗಿದೆ. 

perale-hannu-guava ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು - ಬಡವರ ಸೇಬುಪೇರಳೆ ಹಣ್ಣು ಅತ್ಯಂತ ಜನಪ್ರಿಯ ಆಗಿರುವ ಹಣ್ಣು ಆಗಿದ್ದು, ಬಹಳಷ್ಟು ವೈದ್ಯಕೀಯ ಗುಣವನ್ನು ಹೊಂದಿರುತ್ತದೆ. ಈ ಹಣ್ಣನ್ನು ‘ಬಡ ಜನರ ಸೇಬು’ ಎಂದೂ ಕರೆಯಲಾಗುತ್ತದೆ. ಸಾಕಷ್ಟು ಔಷಧಿ ಗುಣ ಹೊಂದಿರುವ ಈ ಹಣ್ಣನ್ನು ಅತಿಸಾರ, ಬೇಧಿ, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ರೋಗಿಗಳಲ್ಲಿ ಹೆಚ್ಚು ಬಳಸಬಹುದಾಗಿದೆ. ಉಷ್ಣವಲಯದಲ್ಲಿ ಹೆಚ್ಚು ಬೆಳೆಯುವ ಈ ಹಣ್ಣು ಮೆಕ್ಸಿಕೋ ವೆನಿಜುವೆಲಾ, ಕೊಲಂಬಿಯಾ ಮುಂತಾದ ದೇಶಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ.

ಹೆಚ್ಚಿನ ಜನರು ಪೇರಳೆ ಹಣ್ಣು ತಿಂದಲ್ಲಿ ಶೀತ ಆಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಅತೀ ಹೆಚ್ಚು ವಿಟಮಿನ್, ನಾರು ಅಂಶ ಹೊಂದಿರುವ ಈ ಹಣ್ಣನ್ನು ಪರಿಪೂರ್ಣ ಹಣ್ಣು ಎಂದೂ ಪರಿಗಣಿಸಲಾಗಿದೆ. ಅನಾನಸು ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಿದ್ದು, ಪೇರಳೆ ಹಣ್ಣನ್ನು ಹಣ್ಣುಗಳ ರಾಣಿ ಎಂದೂ ಸಂಭೋಧಿಸಲಾಗುತ್ತದೆ. ಪೇರಳೆ ಹಣ್ಣಿನಲ್ಲಿರುವ ಹೇರಳ ವಿಟಮಿನ್ ‘ಸಿ’ ಮತ್ತು ನಾರುಗಳು ಅತೀ ಹೆಚ್ಚು ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಕಾರಣದಿಂದ ಕ್ಯಾನ್ಸರ್ ಮುಂತಾದ ರೋಗಗಳಿಂದಲೂ ರಕ್ಷಿಸುತ್ತದೆ ಎಂದೂ ಅಂದಾಜಿಸಲಾಗಿದೆ.

ದೇಹದ ರಕ್ಷಣಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ 12 ರಿಂದ 20 ಅಡಿಗಳವರೆಗೆ ಬೆಳೆಯುವ ಈ ಗಿಡಗಳು ವರ್ಷದಲ್ಲಿ 2 ಬಾರಿ ಹಣ್ಣು ನೀಡುತ್ತದೆ. 2 ವರ್ಷದ ಗಿಡಗಳಿಂದ 8 ವರ್ಷದ ಗಿಡಗಳ ವರೆಗೆ ಹೇರಳವಾಗಿ ಪೇರಳೆ ಹಣ್ಣು ನೀಡುತ್ತದೆ. ಅತೀ ಕಡಿಮೆ ದರಕ್ಕೆ ಎಲ್ಲೆಂದರಲ್ಲಿ ಸಿಗುವ ಕಾರಣ ಬಡವರ ಸೇಬು ಎಂದೂ ಪ್ರಖ್ಯಾತಿಗೊಳಿಸಿದೆ. ಇನ್ನು ಕೆಲವರು ಪೇರಳೆಯನ್ನು ‘ಸೂಪರ್ ಹಣ್ಣು’ ಎಂದೂ ಸಂಭೋದಿಸುತ್ತಾರೆ.

ಒಂದು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಯ ನಾಲ್ಕು ಪಟ್ಟು ಮತ್ತು ಅನಾನಸು ಹಣ್ಣಿನಲ್ಲಿರುವ ನಾರು ಹಾಗೂ ಪ್ರೊಟೀನ್‍ನ ಮೂರು ಪಟ್ಟು ಹೆಚ್ಚು ಅಂಶ ಪೇರಳೆಯಲ್ಲಿ ಇರುತ್ತದೆ ಹಾಗೂ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ ಎರಡು ಪಟ್ಟು ಹೆಚ್ಚು ಪೇರಳೆಯಲ್ಲಿ ಇರುತ್ತದೆ. ಈ ಕಾರಣದಿಂದಲೇ ಪೇರಳೆಯನ್ನು ’ಸೂಪರ್ ಫ್ರುಟ್’ ಎಂದೂ ಕರೆಯುತ್ತಾರೆ. ಪೇರಳೆಯಲ್ಲಿ ಶರ್ಕರಪಿಷ್ಟ ಪ್ರಕ್ಟೋಸ್ ರೂಪದಲ್ಲಿ ಇರುವ ಕಾರಣದಿಂದ ಅತೀ ಹೆಚ್ಚು ಪೇರಳೆ ಸೇವನೆಯಿಂದ ತೊಂದರೆ ಉಂಟಾಗುವ ಸಾಧ್ಯತೆಯೂ ಇದೆ.

ಪೇರಳೆಯಲ್ಲಿ ಏನೇನು ಇದೆ?

1) ಪೇರಳೆಯಲ್ಲಿ ಅತೀ ಹೆಚ್ಚು ವಿಟಮಿನ್ ’ಸಿ’ ಇರುತ್ತದೆ. ಇದು ದೇಹದ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

2) ಪೇರಳೆಯಲ್ಲಿ 21 ಶೇಕಡಾ ವಿಟಮಿನ್ ‘ಎ’ ಇರುತ್ತದೆ. ಇದು ನಮ್ಮ ದೇಹದ ಚರ್ಮದ ಕಾಂತಿ ಹಾಗೂ ಒಳಪದರಗಳ ರಕ್ಷಣೆಯನ್ನು ಮಾಡುತ್ತದೆ. ಇದಲ್ಲದೆ ವಿಟಮಿನ್ ‘ಇ’ ಕೂಡಾ ಇರುತ್ತದೆ.

3) ಪೇರಳೆಯಲ್ಲಿ ಅತೀ ಹೆಚ್ಚು ಪೋಟಾಸಿಯಂ ಇರುವ ಕಾರಣ ರಕ್ತದೊತ್ತಡ ನಿಯಂತ್ರಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.

4) ಪೇರಳೆಯಲ್ಲಿ 20 ಶೇಕಡಾ ಪೋಲೇಟ್ ಎಂಬ ಪೋಷಕಾಂಶ ಇದ್ದು, ಗರ್ಭಿಣಿಯರಲ್ಲಿ ಗರ್ಭದಲ್ಲಿನ ಶಿಶುವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

5) ಪಿಂಕ್ ಪೇರಳೆಯಲ್ಲಿರುವ ಲೈಕೋಪೀವ್ ಎಂಬ ರಾಸಾಯನಿಕ ನಮ್ಮ ದೇಹದ ಚರ್ಮವನ್ನು ಅಲ್ಟ್ರಾ ವಯೋಲೆಟ್ ಕಿರಣಗಳಿಂದ ರಕ್ಷಿಸಿ ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ಪೇರಳೆಯಲ್ಲಿರುವ ವೈದ್ಯಕೀಯ ಗುಣಗಳು:

perale-hannu-guava1 ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು - ಬಡವರ ಸೇಬುಪೇರಳೆಯಲ್ಲಿರುವ ವೈದ್ಯಕೀಯ ಗುಣಗಳಿಂದಾಗಿ ಪೇರಳೆಯನ್ನು ’ಹಣ್ಣುಗಳ ರಾಣಿ’ ಎಂದು ಸಂಭೋಧಿಸುತ್ತಾರೆ. ಪ್ರತಿ 100 ಗ್ರಾಂ. ಪೇರಳೆಯಲ್ಲಿ 68 ಕ್ಯಾಲರಿ ಮತ್ತು 9 ಗ್ರಾಂ ನಷ್ಟು ಸಕ್ಕರೆ ಇರುತ್ತದೆ. ಅತೀ ಹೆಚ್ಚು ಕ್ಯಾಲ್ಸಿಯಂ ಇದ್ದು, ಪ್ರತಿ 100 ಗ್ರಾಂ ನಲ್ಲಿ 18 ಗ್ರಾಂಗಳಷ್ಟು ಲವಣಗಳನ್ನು ಹೊಂದಿದೆ.

1) ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ. ಅತಿ ಹೆಚ್ಚು ವಿಟಮಿನ್ ‘ಸಿ’ ಇರುವ ಕಾರಣದಿಂದ ದೇಹಕ್ಕೆ ಸೋಂಕು ಬರದಂತೆ ರಕ್ಷಿಸುತ್ತದೆ. ಮತ್ತು ಗಾಯ ಒಣಗುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.

2) ಪೇರಳೆಯಲ್ಲಿ ಹೇರಳವಾಗಿರುವ ವಿಟಮಿನ್ ‘ಸಿ’, ಲೆಕೋಪೀನ್ ಮತ್ತು ಇತರ ಆಂಟಿ ಆಕ್ಸಿಡೆಂಟ್‍ಗಳಿಂದಾಗಿ ದೇಹದಲ್ಲಿ ಆಮ್ಲೀಯ ವಾತಾವರಣ ಸೃಷ್ಟಿಸುತ್ತದೆ. ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. ಪುರುಷರಲ್ಲಿ ಪ್ರೊಸ್ಪೇಟ್ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದೂ ಅಂದಾಜಿಸಲಾಗಿದೆ.

3) ಪೇರಳೆಯಲ್ಲಿರುವ ಅತೀ ಹೆಚ್ಚಿನ ನಾರು ಮತ್ತು ಅತೀ ಕಡಿಮೆ ಸಕ್ಕರೆ ಪ್ರಮಾಣದಿಂದ ಮಧುಮೇಹ ಬರದಂತೆ ತಪ್ಪಿಸುತ್ತದೆ.

4) ರಕ್ತದೊತ್ತಡ ನಿಯಂತ್ರಿಸಿ, ಹೃದಯ ವೈಫಲ್ಯವನ್ನು ತಡೆಯುತ್ತದೆ. ಪೇರಳೆಯಲ್ಲಿರುವ ಸೋಡಿಯಂ ಮತ್ತು ಪೋಟ್ಯಾಸಿಯಂ ರಕ್ತದೊತ್ತಡ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಹೃದಯ ರೋಗ ಬರದಂತೆ ತಡೆಯುತ್ತದೆ. ಒಳ್ಳೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

5) ಮಲಬದ್ಧತೆಯನ್ನು ನಿಯಂತ್ರಿಸುತ್ತದೆ. ಒಂದು ಪೇರಳೆಯಲ್ಲಿ ಶೇಕಡಾ 12ರಷ್ಟು ನಾರು ಇರುವ ಕಾರಣದಿಂದ ಕರುಳಿನ ಚಲನೆಯನ್ನು ಉತ್ತಮಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ,

6) ಪೇರಳೆಯಲ್ಲಿ ಹೇರಳವಾಗಿರುವ ವಿಟಮಿನ್ ‘ಸಿ’ ಕಣ್ಣಿನ ದೃಷ್ಟಿಯನ್ನು ವೃದ್ಧಿಸುತ್ತದೆ. ಕ್ಯಾಟರಾಕ್ಟ್ ಬರದಂತೆ ತಡೆಯುತ್ತದೆ.

7) ಮಾನಸಿಕ ಒತ್ತಡ ನಿಯಂತ್ರಿಸುತ್ತದೆ. ಪೇರಳೆಯಲ್ಲಿರುವ ಮ್ಯಾಗ್ನಿಷಿಯಂ ನಮ್ಮ ದೇಹದ ಸ್ನಾಯುಗಳನ್ನು ಮತ್ತು ನರಗಳನ್ನು ನಿಯಂತ್ರಿಸಿ ದೇಹದ ದಣಿವನ್ನು ಇಂಗಿಸುತ್ತದೆ. ಪೇರಳೆ ಒಂದು ರೀತಿಯ ‘ ಎನರ್ಜಿ ಬೂಸ್ಟರ್ ಎಂದೂ ಸಂಭೋದಿಸಲಾಗಿದೆ.

8) ಗರ್ಭಿಣಿಯರಲ್ಲಿ ಪೇರಳೆ ಬಹಳ ಉಪಯುಕ್ತವಾದ ಹಣ್ಣು ಆಗಿರುತ್ತದೆ. ಅದರಲ್ಲಿರುವ ಪೋಲಿಕ್ ಆಸಿಡ್ ಮತ್ತು ವಿಟಮಿನ್ ಃ-9 ಕಾರಣದಿಂದಾಗಿ ಗರ್ಭದಲ್ಲಿರುವ ಶಿಶುವಿನ ನರಮಂಡಲದ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುತ್ತದೆ.

9) ಪೇರಳೆ ಎಲೆಯನ್ನು ಜಗಿಯುವುದರಿಂದ ಹಲ್ಲಿನ ನೋವು ತಾತ್ಕಾಲಿಕವಾಗಿ ಶಮನವಾಗುತ್ತದೆ ಮತ್ತು ಬಾಯಿ ಹುಣ್ಣು ಇದ್ದಲ್ಲಿ ಅದರ ನೋವು ಶಮನ ಮಾಡಲು ಪ್ರಾಚೀನ ಕಾಲದಲ್ಲಿ ಪೇರಳೆ ಎಲೆಗಳನ್ನು ಜಗಿಯುತ್ತಿದ್ದರು ಎಂದೂ ಪುರಾಣಗಳಲ್ಲಿ ದಾಖಲಾಗಿದೆ.

10) ದೇಹದ ತೂಕ ನಿಯಂತ್ರಿಸುವಲ್ಲಿ ಪೇರಳೆ ಬಹಳ ಉತ್ತಮ ಎಂದು ಸಾಬೀತಾಗಿದೆ. ದೇಹದ ಪಚನ ಕ್ರಿಯೆಯನ್ನು ನಿಯಂತ್ರಿಸಿ ದೈಹಿಕ ಕ್ರಿಯೆಯನ್ನು ಪೇರಳೆ ಸಹಾಯ ಮಾಡುತ್ತದೆ. ಹಸಿ ಪೇರಳೆ ಹಣ್ಣಿನಲ್ಲಿ ಅತೀ ಹೆಚ್ಚು ನಾರು ಇದ್ದು ಕಡಿಮೆ ಕ್ಯಾಲರಿ ಹಾಗೂ ಶರ್ಕರಪಿಷ್ಟ ಇರುವ ಕಾರಣ ದೇಹದ ತೂಕ ನಿಯಂತ್ರಿಸುವಲ್ಲಿ ಉತ್ತಮ ಎಂದೂ ಸಾಬೀತಾಗಿದೆ. ಸೇಬು, ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣಿಗೆ ಹೋಲಿಸಿದಲ್ಲಿ ಪೇರಳೆಯಲ್ಲಿ ಅತೀ ಕಡಿಮೆ ಸಕ್ಕರೆ ಅಂಶ ಇರುತ್ತದೆ.

11) ಶೀತ ಮತ್ತು ಕೆಮ್ಮು ನಿಯಂತ್ರಣದಲ್ಲಿಯೂ ಪೇರಳೆ ಉಪಕಾರಿ ಎಂದೂ ತಿಳಿದು ಬಂದಿದೆ. ಅತೀಹೆಚ್ಚು ವಿಟಮಿನ್ ‘ಸಿ’, ಕಬ್ಬಿಣದ ಅಂಶ ಮತ್ತು ಪ್ರೊಟೀನ್ ಅಂಶದಿಂದ ಶ್ವಾಸಕೋಶ ಸೋಂಕು ಬರದಂತೆ ಪೇರಳೆ ನಿಯಂತ್ರಿಸುತ್ತದೆ ಎಂದು ಅಂದಾಜಿಸಲಾಗಿದೆ.

ದಿನಕ್ಕೊಂದು ಸೀಬೆ ಹಣ್ಣು  ಹೆಚ್ಚಿನ ರೋಗಗಳು  ತಡೆಯಲು ಸಾಧ್ಯ :

ಸೀಬೆ ಹಣ್ಣು, ಪೇರಳೆ ಹಣ್ಣು, ಚೇಪೇ ಹಣ್ಣು ಬಡವರ ಸೇಬು, ಹಣ್ಣುಗಳ ರಾಣಿ ಹೀಗೆ ಹಲವಾರು ನಾಮಧೇಯಗಳಿಂದ ಕರೆಯಲ್ಪಡುವ ಪೇರಳೆ ಹಣ್ಣು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತೀ ಹೆಚ್ಚು ವೈದ್ಯಕೀಯ ಗುಣ ಮತ್ತು ಪೋಷಕಾಂಶ ನೀಡುವ ಹಣ್ಣು ಎಂದು ಅಂದಾಜಿಸಲಾಗಿದೆ. ದಿನದ ಯಾವುದೇ ಹೊತ್ತಿನಲ್ಲಿ ಈ ಹಣ್ಣು ಸೇವಿಸಬಹುದಾಗಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ. ಅದೇ ರೀತಿ ಆಹಾರ ಸೇವಿಸಿದ 30 ನಿಮಿಷಗಳ ನಂತರ ಸೇವಿಸುವುದು ಉತ್ತಮ. ಪಿಂಕ್ ಮತ್ತು ಬಿಳಿ ಬಣ್ಣದಲ್ಲಿ ಬರುವ ಪೇರಳೆ ಹಣ್ಣು ಪೋಷಕಾಂಶದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಮಧುಮೇಹಿಗಳಲ್ಲಿ ಸೇಬಿಗಿಂತಲೂ ಉತ್ತಮವಾದ ಹಣ್ಣು ಪೇರಳೆಯಾಗಿರುತ್ತದೆ. ಕಡಿಮೆ ಸಕ್ಕರೆ ಮತ್ತು ಹೆಚ್ಚು ನಾರು ಇರುವುದರಿಂದ ಯಾವುದೇ ಭಯವಿಲ್ಲದೆ ಮಧುಮೇಹಿಗಳು ಸೇವಿಸಬಹುದಾಗಿದೆ. ಈ ಕಾರಣದಿಂದ ಬಡವರ ಸೇಬು ಎಂದು ಪ್ರಖ್ಯಾತಿ ಪಡೆದಿದೆ. ಒಟ್ಟಿನಲ್ಲಿ ಸೀಬೆ ಹಣ್ಣು ಜನಪ್ರಿಯವಾದ ಹಣ್ಣು ಆಗಿದ್ದು, ಮಾನವನ ಶರೀರಕ್ಕೆ ಬೇಕಾಗಿರುವ ಎಲ್ಲಾ ಖನಿಜಾಂಶ, ಪೋಷಕಾಂಶ, ನಾರು ಮತ್ತು ಇತರ ಲವಣಗಳನ್ನು ಹೊಂದಿದ್ದು, ಸೇಬು ಹಣ್ಣನ್ನು ತಿನ್ನಲು ಸಾಧ್ಯವಾಗದವರು ದಿನಕ್ಕೊಂದು ಸೀಬೆ ಹಣ್ಣು ತಿಂದಲ್ಲಿ ಹೆಚ್ಚಿನ ಎಲ್ಲಾ ರೋಗಗಳು ಬರದಂತೆ ತಡೆಯಲು ಸಾಧ್ಯ ಎಂದು ತಿಳಿದು ಬಂದಿದೆ.

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!