ಮಕ್ಕಳಿಗೊಂದು ಕಿವಿ ಮಾತು
ಸತ್ಯ ಹೇಳುವುದರಿಂದ ಕಷ್ಟವಾಗಬಹುದು; ಆದರೆ ಅದೇ ಸರಿ. ಆದಿತ್ಯ ಶಾಲೆಯಿಂದ ಬಸ್ಸಿನಿಂದ ಬರಬೇಕಾದರೆ ಹಲ್ಲುಕಿರಿದು, ಎಲ್ಲರನ್ನು ನಕ್ಕು – ನಗಿಸಿ, ಕುಣಿಕುಣಿದು ಬರುವಾಗ ನೆನಪಾದ್ದು ಗಣಿತದ ಪಠ್ಯಪುಸ್ತಕ ಶಾಲೆಯಲ್ಲೇ ಉಳಿದಿದೆ ಎಂದು. ನಗು ಮಾಯವಾಗಿ ಸಪ್ಪೆ ಮೋರೆಯೊಂದಿಗೆ ಬಸ್ಸಿನಿಂದ ಇಳಿದ.
ಮನೆ ಬಾಗಿಲಲ್ಲೇ ಕಾದು ನಿಂತ ಅಮ್ಮ ಕೇಳಿದಳು, ಏನಾಯಿತು ಕಂದ?
“ಸಾಕಾಯ್ತು, ಹಸಿವು ಆಗ್ತಿದೆ… ತಲೆನೋಯ್ತಿದೆ….. ಅಂತ ಚಡಪಡಿಸತೊಡಗಿದ ಆದಿತ್ಯ.
ಅಮ್ಮ ಲಂಚ್ ಬಾಕ್ಸ್ ಬಗ್ಗಿಸಿ, ಬ್ಯಾಗನ್ನು ನೋಡಿ, “ಹೋಮ್‍ವರ್ಕ್ ಏನು ಕೊಟ್ಟಿದ್ದಾರೋ ಆದಿತ್ಯ ಅಂದಳು”. ಕಕ್ಕಾಬಿಕ್ಕಿಯಾದ ಆದಿತ್ಯ “ಟೀಚರ್‍ಗೆ ಈವತ್ತು ಜ್ವರ ಬಂತು, ಬೇಗ ಕ್ಲಾಸ್ ಮಗಿಸಿದರು, ಹೋಮ್‍ವರ್ಕ್ ಇಲ್ಲ. ನಾಳೆ ಶನಿವಾರ ನಾಳಿದ್ದು ಭಾನುವಾರ ಇನ್ನು ಹೊಂವರ್ಕ್ ಏನಿದ್ದರೂ ಸೋಮುವಾರವೇ …. ಎಂದ ಆದಿತ್ಯ.
ಏರಬಹುದು ಅಂತ ಸುಮ್ಮನಾದಳು ಅಮ್ಮ.
ಇತ್ತ ಸುಳ್ಳು ಹೇಳಿದ ಆದಿತ್ಯನಿಗೆ, ದುಗುಡ, ಆತಂಕ ಶುರುವಾಯ್ತು. ಪುಸ್ತಕ ತೆರದು ಓದಲು ಕುಳಿತ ಊ … ಹೂಂ …. ಆಗಲಿಲ್ಲ. ಕ್ರಿಕೆಟ್ ಆಡಲು ಹೋರಟ, ಊ … ಹೂಂ …. ಅದೂ ಆಗಲಿಲ್ಲ ಪಾರ್ಕಲ್ಲಿ ಸುಮಾರು ಜನ ಕುಳಿತು ಮಾತಾಡುತ್ತಿದ್ದರು. ಒಂದು ತಾಯಿ ಮಾತ್ರ ಸುಮ್ಮನೆ ಕುಳಿತು ಅಳುತಿದ್ದದ್ದು ಕಂಡು ಆದಿತ್ಯ ಕೇಳಿದ,
“ಆಂಟಿ ಏನಾಯ್ತು?”
“ನನ್ನ ಮಗ ಈವತ್ತು ಕಾಲೇಜ್ಗೆ ಹೋಗಿಲ್ಲ, ಅದೆಲ್ಲಿದ್ದನೋ ಗೊತ್ತಿಲ್ಲ. ಆಟ ಆಡುತಿದ್ದಾನೋ ? ಸಿನೆಮಾಗೆ ಹೋಗಿದ್ನೋ ಗೊತ್ತಿಲ್ಲ. ಕಡೆಗೆ ಊಟ ಮಾಡಿದ್ದನೋ ಇಲ್ಲವೋ “..?, ಅಂತ ಬೇಸರದಿಂದ ಹೇಳಿದ್ರು. ಅವನ ದುಗುಡ ಇನ್ನು ಜಾಸ್ತಿ ಆಯಿತು. ಆದರೂ ಧೈರದಿಂದ ಇದ್ದ. ಆಡಲು ಮನಸ್ಸಾಗಲಿಲ್ಲ, ಕಾಲು ನೋವು ಅಂತ ಸ್ನೇಹಿತರಿಗೆ ನೆಪ ಹೇಳಿ ಅಲ್ಲಿಂದ ಹೊರಟ.
ಆದಿತ್ಯನ ಛಾಯೆ ಗುರುತಿಸಿದ ಅಮ್ಮ, “ಕಂದ , ಏನಾಯ್ತು, ಯಾಕೆ ಹೀಗೆ ಇದ್ದೀಯ ಅಂತ ಕೇಳಿದಳು”.
“ಅಮ್ಮ, ನಾನು ತಪ್ಪು ಮಾಡಿದ್ದೇನೆ, ಗಣಿತದ ಪುಸ್ತಕ ಶಾಲೆಲೇ ಇದೆ, ಹೋಮ್‍ವರ್ಕ್ ಕೂಡ ಇದೆ, ಸುಳ್ಳು ಹೇಳಿದ್ದೇನೆ ತಪ್ಪಾಯ್ತು. ಇನ್ಯಾವತ್ತೂ ಸುಳ್ಳು ಹೇಳಲ್ಲ ” ಎಂದ.
“ಅಯ್ಯೋ ಕಂದಾ ಇಷ್ಟೇನಾ, ಹೋಮ್‍ವರ್ಕ್ ತಾನೇ?” ಅಂತ ಹೇಳಿ ಅವನ ಸ್ನೇಹಿತರ ಮನೆಗೆ ಫೋನ್ ಮಾಡಿ, ಎಲ್ಲವನ್ನವು ಸಜ್ಜು ಮಾಡಿ ಕೊಟ್ಟಳು.
ಆದಿತ್ಯ ಪಟಪಟನೆ ಹೋಮೇವರ್ಕ್ ಮುಗಿಸಿ, “ಅಮ್ಮ ನಾ ಆಡಲು ಹೊಗಲ?” ಅಂತ ಕೇಳಿದ. ಅಮ್ಮ ಹ್ಞೂ ಅಂದಳು.
ಸ್ವಯಂ, ರಿಷಬ್ ಮತ್ತು ಇನ್ನೂ ಕೆಲವರು, “ಏನೋ ಇದು ಈಗ ತಾನೇ ಕಾಲು ನೋವು ಅಂತ ಹೋದೆಯೆಲ್ಲ” ಅಂತ ಕೇಳಿದ್ರು. “ನೋವು ಮಂಗಮಾಯ ಆಯಿತು” ಎಂದು ಕುಣಿದು ಕುಪ್ಪಳಿಸಿ, ಮರಳಲ್ಲಿ ಹೊರಳಾಡಿ, ಬೆವತು ಬಸವಳಿದು ಮೆನೆಗೆ ಬಂದ. ಬಾಗಿಲಿಗೆ ಬಂದ ಕೂಡಲೇ ಆಹಾ…. ಆಲೂ ಬಜ್ಜಿ ಸುವಾಸನೆ ಮೂಗಿಗೆ ಬಡಿದಕೂಡಲೆ ಮುಖದಲಿ ಆಹಾ ರಾಜ ಕಳೆ…!
ಆದಿತ್ಯ ತಿಂದು ತೇಗಿ, ನೀರು ಕುಡಿವ ರಭಸದಲ್ಲಿ ನೆತ್ತಿ ಏರಿಸಿಕೊಂಡು ಕೆಮ್ಮಿದಾಗ ಅಮ್ಮ ತಲೆ ತತ್ತಿ, ಬೆನ್ನು ಸವರಿ ಸಮಾಧಾನ ಮಾಡಿ ಅವನ ಮುಖವನ್ನೇ ನೋಡುತ್ತಿದ್ದಳು .
ಅಮ್ಮ ಕೇಳಿದಳು, “ಮಗು ನೀ ನನಗೆ ನಿಜ ಹೇಳಿ ಒಳ್ಳೆಯ ಕೆಲಸ ಮಾಡಿದೆ. ಶಭಾಷ್”
ಆದಿತ್ಯ ತಲೆ ತಗ್ಗಿಸಿ, ದುಗುಡ ಮನಸ್ಸಿನಿಂದ ಹೇಳಿದ, “ಆಗ ನಿನ್ನ ಬೈಗುಳ ತಪ್ಪಿಸೋಕ್ಕೆ ಮಾಡಿದೆ, ನಂತರ ಗೊತ್ತಯ್ತು ಸುಳ್ಳು ಹೇಳೋದ್ರಿಂದಾ ಹೇಳಿದವನಿಗೂ, ಅಪ್ಪ ಅಮ್ಮನಿಗೂ ನೋವು ಆಗುತ್ತೆ ಅಂತ ಗೊತ್ತಾಯ್ತು”.
“ಸತ್ಯ ಹೇಳೋದ್ರಿಂದ ಸ್ವಲ್ಪ ಕಷ್ಟ ಆಗಬಹುದು, ಆದರೆ ಅದೇ ಸರಿ” ಅಂತ ಅಮ್ಮ ಹೇಳಿ ಮುಗುಳ್ನಕ್ಕಳು.
ನಿಜ ಎಂದಿಗೂ ನಿಜವೇ. ಸುಳ್ಳು ಸತ್ಯವಾಗಲ್ಲ.
ಡಾ. ಮಂಜುನಾಥ್ ಶರ್ಮ
ಮಕ್ಕಳು ಹಾಗೂ ನವಜಾತ ಶಿಶುರೋಗ ತಜ್ಞರು
ಚಿಗುರು ಮಕ್ಕಳ ಕ್ಲಿನಿಕ್, 65/ಎ, 3ನೇ ಬ್ಲಾಕ್, 80 ಅಡಿ ರಸ್ತೆ, ನಾಗೇಂದ್ರ ಬ್ಲಾಕ್, ಬೆಂಗಳೂರು-560050
ಮೊ.: 9342620484