Health Vision

ಸಂಬಾರ ಸುವಾಸಿನಿ – ‘ಜಾಯಿಕಾಯಿ’

ನಿಮ್ಮ ಮನೆ ಊಟ ರುಚಿಕಟ್ಟಾಗಿತ್ತು. ಊಟದ ಪದಾರ್ಥ ತುಂಬಾ ಸುಖವಾಗಿತ್ತು. ಚೆನ್ನಾಗಿ ನಿದ್ದೆ ಬಂತು. ಇತ್ಯಾದಿ ಅನುಭವಗಳು ಮಲೆನಾಡಿನಲ್ಲಿ ಊಟ ಮಾಡಿದವರದು. ಏನಿದು ಊಟ ಉಪಹಾರದಲ್ಲಿ ಬಳಸುವ ವಿಶಿಷ್ಟ ವಸ್ತು, ಅದೇ ಜಾಯಿಕಾಯಿ.
ಪ್ರಮುಖ ಸಂಬಾರ ವಸ್ತುವಾಗಿ ಜಾಯಿಕಾಯಿ ತನ್ನ ಸ್ಥಾನ ಪಡೆದಿದೆ. ಕಡುಬು, ಪಾಯಸ, ಭಕ್ಷ್ಯಗಳು ಹಾಗೂ ಉಪ್ಪಿನಕಾಯಿ ತಯಾರಿಕೆಯಲ್ಲಿ ಇದನ್ನು ತುರಿಯಾಗಿ ಉಪಯೋಗಿಸಲಾಗುವುದು. ಸೋಪು,. ಸುಗಂಧ ದ್ರವ್ಯ ತಯಾರಿಕೆಗೆ ಜಾಯಿಕಾಯಿಯ ಬೆಣ್ಣೆಯನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ ಹಲ್ಲುಪುಡಿ ಮಿಠಾಯಿ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ.
ಜಾಯಿಕಾಯಿ ಮರವು ಹದಿನೆಂಟನೇ ಶತಮಾನದ ಅಂತ್ಯಭಾಗದಲ್ಲಿ ಕೆಲವು ಪ್ರವಾಸಿಗಳ ಮೂಲಕ ಭಾರತಕ್ಕೆ ಬಂದಿತು. ಇದರ ಮೂಲ ಸ್ಥಾನ ಪಶ್ಚಿಮ ನ್ಯೂಗಿನಿ ಪ್ರದೇಶದ ಕೆಲವು ದ್ವೀಪಗಳು. ಇದಕ್ಕೆ ವೈಜ್ಞಾನಿಕ ಹೆಸರು ಮಿರಿಸ್ಟಕ್ ಫ್ರೆಗ್ರೆನ್ಸ್.
ಜಾಯಿಕಾಯಿ ಮರವೂ ಲವಂಗದಂತೆಯೇ ದಕ್ಷಿಣ ಭಾರತದ ನೀಲಗಿರಿ, ಕೇರಳದ ಸಮುದ್ರತೀರ ಪ್ರದೇಶ, ಚೆಂಕಾಸಿ ಗುಡ್ಡಗಳಲ್ಲಿ ಮಾತ್ರ ಮೊದಲಿಗೆ ಇತ್ತು. ಆದರೆ ಈಗ ಮೈಸೂರು, ಮಲೆನಾಡಿನ ಅಡಿಕೆ ತೋಟಗಳಲ್ಲಿಯೂ ಕಾಣಬಹುದು. ಆದರೂ ಈ ಜಾಯಿಕಾಯಿ ವ್ಯವಸಾಯ ಕ್ಷೇತ್ರ ನಾಲ್ಕೂ ನೂರು ಎಕರೆಗಳಿಗಿಂತ ಹೆಚ್ಚಿಲ್ಲ.
ಸಮಶೀತೋಷ್ಣ ಮತ್ತು ತೇವ ಉಳ್ಳ ಪ್ರದೇಶಗಳಲ್ಲಿ ಜಾಯಿಕಾಯಿ ಗಿಡ ಹುಲುಸಾಗಿ ಬೆಳೆಯುತ್ತದೆ. ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಎತ್ತರ, ನೂರು ಇಂಚು ಮಳೆಯ ಪ್ರದೇಶ ನೂರು ಡಿಗ್ರಿ ಉಷ್ಣಾಂಶದ ಹವಾಮಾನ ಜಾಯಿಕಾಯಿಗೆ ಬೇಕಾಗುತ್ತದೆ. ಜಂಬಿಟ್ಟಿಗೆ ನೆಲ ಮತ್ತು ಜೇಡಿ, ಮರಳು ಮಿಶ್ರಿತ ಮಣ್ಣಿನಲ್ಲಿ ಜಾಯಿಕಾಯಿ ಗಿಡ ಫಲವತ್ತಾಗಿ ಬೆಳೆಯುತ್ತದೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಈ ಬೆಳೆ ಪ್ರಶಸ್ತವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಜಾಯಿಕಾಯಿ ಮರಗಳು ಎಂಟು ಅಥವಾ ಹತ್ತು ವರ್ಷ ಅವಧಿಯಲ್ಲಿ ಫಲ ಬಿಡುತ್ತವೆ. ಕಾಯಿ ಆರು ತಿಂಗಳ ನಂತರ ಹಣ್ಣಾಗಿ ಮಾಗುವವು. ಜುಲೈನಿಂದ ಡಿಸೆಂಬರ್ ತಿಂಗಳುಗಳಲ್ಲಿ ಅವುಗಳ ಸುಗ್ಗಿ ನಡೆಸಲಾಗುತ್ತದೆ. ವರ್ಷ ಒಂದಕ್ಕೆ ಒಂದು ಮರ 500 ರಿಂದ 1500 ರವರೆಗೆ ಹಣ್ಣುಗಳನ್ನು ನೀಡುತ್ತವೆ.
ಜಾಯಿಕಾಯಿಯು ಮಾಗಿದ ಹಣ್ಣುಗಳ ತಾಜಾ ತೊಗಟೆಯಲ್ಲಿ ಚೆಲ್ಲಿ ಮುಂತಾದ ವಸ್ತುಗಳಲ್ಲಿ ಬಳಸುತ್ತಾರೆ. ಜಾಯಿಕಾಯಿಯ ತೊಗಟೆ ಅಥವಾ ಸಿಪ್ಪೆ ದಪ್ಪವಾಗಿರುವುದಲ್ಲದೆ ಚಂದ್ರವರ್ಣದಲ್ಲಿದ್ದು ಮೆದುವಾಗಿರುತ್ತದೆ. ಇದೂ ಪರಿಮಳಯುಕ್ತ ಮಸಾಲೆ ವಸ್ತುವೇ ಮೇಲ್ಭಾಗ ಕಳಚಿದ ಒಳಭಾಗ ಬೀಜವನ್ನು ‘ಜಾಪತ್ರೆ’ ಎಂದು ಕರೆಯುತ್ತಾರೆ.
ಸೂಕ್ಷ್ಮ ಸಂವೇದಿನಿ :
ಜಾಯಿಕಾಯಿ ಗಿಡಗಳನ್ನು ಬೀಜಗಳಿಂದ ಉತ್ಪಾದಿಸುತ್ತಾರೆ. ಜಾಯಿಕಾಯಿ ಗಿಡವು ಗಂಡು ಹೆಣ್ಣು ಗಿಡಗಳಷ್ಟೇ ಕಾಯಿ ಬೀಜಗಳನ್ನು ಬಿಡುವುದು. ಗಿಡವು ಬೆಳೆಯುತ್ತಿರುವಾಗ ಅದರ ಲಿಂಗಭೇದವನ್ನು ಅಂದರೆ ಗಂಡೋ ಹೆಣ್ಣೋ ಎಂಬುದನ್ನು ನಿರ್ಧರಿಸುವುದು ಸುಲಭವಲ್ಲವಾಗಿದ್ದರಿಂದ ರೈತರು ಇದರ ಕೃಷಿಯಲ್ಲಿ ಕ್ರಿಯಾಶೀಲರಾಗಲು ಉತ್ಸಾಹ ತಾಳುವುದಿಲ್ಲ. ಮಲೆನಾಡಿನ ಅಡಿಕೆ ತೋಟ ಪಟ್ಟಿಯಲ್ಲಿ ಗಂಡು ಹೆಣ್ಣು ಗಿಡಮರಗಳಿರುವುದು ಸರ್ವೇಸಾಮಾನ್ಯ. ಹೆಣ್ಣು ಗಿಡ ಮಾತ್ರ ಫಲ ನೀಡುವುದನ್ನು ಇಲ್ಲಿ ಕಾಣಬಹುದು. ಜಾಯಿಕಾಯಿ ಸಂಗ್ರಹಿಸಿದ ಬೀಜಗಳಲ್ಲಿ ಅವು ಮುಂದೆ ಎಷ್ಟು ಗಂಡು ಗಿಡಗಳಾಗುತ್ತವೆ ಮತ್ತು ಎಷ್ಟು ಹೆಣ್ಣು ಗಿಡಗಳಾಗುತ್ತವೆ ಎಂಬುದನ್ನು ಮೊದಲು ಹೇಳಲು ಸಾಧ್ಯವಿಲ್ಲ. ಇದರಿಂದ ಇದರ ವ್ಯವಸಾಯ ಹಾಗೂ ಉತ್ಪಾದನೆಯ ವರ್ಧನೆಗೆ ಸಮಸ್ಯೆಯು ಒಂದು ದೊಡ್ಡ ಆತಂಕವೆನ್ನಬಹುದು.
ಆಯುರ್ವೇದದಲ್ಲಿ ಜಾಯಿಕಾಯಿಯ ಉಪಯೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಮಾಗಿದ ಜಾಯಿಕಾಯಿಯ ಹಣ್ಣುಗಳ ಸಿಪ್ಪೆಯನ್ನು ರಸಾಯನವಾಗಿ ತಯಾರಿಸುತ್ತಿದ್ದಾರೆ. ಪುಡಿ ಮಾಡಿದ ಜಾಯಿಕಾಯಿ ಬೀಜದಿಂದ ಸಾರವಿಳಿಸಿ ಎಣ್ಣೆಯನ್ನು ನೋವು ನಿವಾರಕಕ್ಕೆ ಬಳಸುತ್ತಾರೆ. ಬಟ್ಟೆಗಳ ಮೇಲೆ ಬಣ್ಣ ಅಚ್ಚು ಹಾಕುವ ಕಾರ್ಯವನ್ನು ಜಾಯಿಕಾಯಿಯ ರಸದಿಂದ ಪರಿಣಾಮಕಾರಿಯಾಗಿ ನೆರವೇರಿಸಬಹುದೆಂದು ಕಂಡುಕೊಳ್ಳಲಾಗಿದೆ. ಜಾಯಿಕಾಯಿ ಮರದ ಎಲೆಗಳಿಂದ ಭಟ್ಟಿ ಇಳಿಸಿ ತೆಗೆದ ಎಣ್ಣೆಯಿಂದ ಹೊಲಗಳಲ್ಲಿ ಬೆಳೆಯುವ ಕಳೆ ನಿರ್ಮೂಲನೆಗೆ ಉಪಯುಕ್ತ ಔಷಧಿಯೆಂದು ಶೋಧಿಸಲಾಗಿದೆ. ಸುಗಂಧ ಅಡಿಕೆ ಪುಡಿ, ಬೇರೆ ಬೇರೆ ರಸಂಗಳ ಮಸಾಲೆಯಾಗಿ ಬಳಸಲಾಗುತ್ತದೆ.

ಶಿವರಾಮ ಭಟ್ ಹತ್ತೊಕ್ಕಲು
82773 32130

Back To Top