ರೂಪಾಂತರಿ ಕೊರೋನಾ ಹಳೆಯ ವೈರಾಣುವಿಗಿಂತ ಹೆಚ್ಚು ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಮತ್ತು ಪರಿಪೂರ್ಣ ಅಂಕಿ-ಅಂಶಗಳು ದೊರೆತಿಲ್ಲ. ಅದೇನೇ ಇರಲಿ ನಾವು ಸುರಕ್ಷತೆ ಅಂತರ, ಕೈ ತೊಳೆಯುವಿಕೆ, ಮುಖ ಕವಚ ಧರಿಸುವಿಕೆ ಮತ್ತು ಸ್ಯಾನಿಟೈಸರ್ ಬಳಕೆ ಮುಂತಾದ ಸುರಕ್ಷಿತ ಕ್ರಮಗಳನ್ನು ಮುಂದುವರಿಸಬೇಕಾದ ಅನಿವಾರ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ರೂಪಾಂತರಗೊಂಡ ಕೊರೋನಾ ವೈರಾಣುಗಳ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಗಳು ಹುಟ್ಟಿಕೊಂಡಿದೆ. ಈ ಹೊಸತಾದ ರೂಪಾಂತರಿ ಕೋವಿಡ್ ವೈರಾಣುವನ್ನು VUI 202012/01 ಎಂದು ಹೆಸರಿಸಲಾಗಿದೆ. ಈ ರೂಪಾಂತರಿ ವೈರಾಣುವಿನಲ್ಲಿ ವೈರಾಣುವಿನ ಹೊರ ಮೈಯಲ್ಲಿರುವ ಪ್ರೊಟೀನ್ನ ಸ್ಪೈಕ್ನಲ್ಲಿ ಒಂದಿಷ್ಟು ವ್ಯತ್ಯಾಸಗಳು ಕಂಡು ಬಂದಿದೆ. ಬ್ರಿಟನ್ನ ದಕ್ಷಿಣ ಪೂರ್ವದ ಪ್ರಾಂತ್ಯದಲ್ಲಿ ಕಂಡು ಬಂದಿರುವ ಈ ವೈರಾಣು ಜಗತ್ತಿನೆಲ್ಲೆಡೆ ಭೀತಿ ಹುಟ್ಟಿಸಿದೆ. ಹಳೆ ವೈರಾಣುವಿಗೆ ಹೋಲಿಸಿದಲ್ಲಿ ಈ ವೈರಾಣುವಿನಿಂದ ರೋಗ ಬಹಳ ಬೇಗ ಹರಡುತ್ತದೆ ಮತ್ತು ರೋಗ ಮತ್ತಷ್ಟು ಉಗ್ರವಾಗಿ ಕಾಡುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸುಮಾರು 16ಕ್ಕೂ ಹೆಚ್ಚು ಮ್ಯುಟೇಶನ್ ಅಥವಾ ರೂಪಾಂತರ ಹೊಂದಿದ ವೈರಾಣುಗಳನ್ನು ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ. ಇಲ್ಲಿನ ಹಳೆಯ ಕೋವಿಡ್-19 ವೈರಾಣುವಿನಿಂದ ಹರಡುವ ರೋಗದಲ್ಲಿ ಸಾಂಪ್ರಾದಾಯಿಕವಾಗಿ ಜ್ವರ, ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆ, ವಾಸನೆ ಮತ್ತು ರುಚಿ ಇಲ್ಲದಿರುವಿಕೆ ಹೆಚ್ಚು ಕಂಡು ಬರುತ್ತದೆ. ಇದರ ಜೊತೆಗೆ ರೂಪಾಂತರಿ ಕೊರೋನಾ ವೈರಾಣುವಿನಿಂದ ಹರಡುವ ರೋಗದಲ್ಲಿ ಸುಸ್ತು, ಹಸಿವಿಲ್ಲದಿರುವುದು, ತಲೆ ನೋವು, ಭೇದಿ, ಸ್ನಾಯುಸೆಳೆತ, ಚರ್ಮದಲ್ಲಿ ಕೆರೆತ ಕಂಡು ಬರುತ್ತದೆ.
ಇನ್ನೊಂದು ಆತಂಕಕಾರಿ ವಿಚಾರವೆಂದರೆ ರೂಪಾಂತರಿ ಕೋವಿಡ್ ವೈರಾಣು ಮಕ್ಕಳಲ್ಲಿ ಕೂಡಾ ಹೆಚ್ಚು ಕಂಡು ಬರುತ್ತದೆ ಎಂದು ತಿಳಿದು ಬಂದಿದೆ. ಸಾಂಪ್ರಾದಾಯಿಕ ಹಳೆಯ ಕೋವಿಡ್-19 ವೈರಾಣು ವಯಸ್ಕರಲ್ಲಿ ಮಾತ್ರ ಹೆಚ್ಚು ಕಂಡು ಬರುತ್ತದೆ ಮತ್ತು ಮಕ್ಕಳಲ್ಲಿ ಹೆಚ್ಚೇನು ತೊಂದರೆ ಉಂಟುಮಾಡುವುದಿಲ್ಲ. ಆದರೆ ರೂಪಾಂತರಿ ಕೊರೋನಾ ವೈರಾಣು, ಹಳೆಯ ವೈರಾಣುವಿಗಿಂತ ಹೆಚ್ಚು ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಮತ್ತು ಪರಿಪೂರ್ಣ ಅಂಕಿ-ಅಂಶಗಳು ದೊರೆತಿಲ್ಲ.
ಏನಿದು ಮ್ಯುಟೇಶನ್?
ಬದಲಾಗುತ್ತಿರುವ ಬಾಹ್ಯ ಪರಿಸರ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಬದುಕಲು ಪೂರಕವಾದ ಮತ್ತು ಸಂತಾನೋತ್ಪತ್ತಿ ಮಾಡಲು ಅನುಕೂಲಕರವಾಗಲು ಎಲ್ಲಾ ವೈರಾಣುಗಳು ದೇಹದ ರೂಪಾಂತರ ಎಂದು ಕರೆಯಲಾಗುತ್ತದೆ. ತಮ್ಮ ದೇಹದ ಹೊರಮೈಯಲ್ಲಿ ಇರುವ ಪ್ರೊಟೀನ್ಗಳ ರಚನೆಯಲ್ಲಿ ಒಂದಿಷ್ಟು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ತಮ್ಮ ಆಕೃತಿಯನ್ನು ಬದಲಾಯಿಸಿಕೊಂಡು ಸನ್ನಿವೇಶದಲ್ಲಿ ಬದುಕುವ ಕಲೆಯನ್ನು ವೈರಾಣುಗಳು ಮೈಗೂಡಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ರೀತಿ ರೂಪಾಂತರಗೊಂಡಾಗ ವೈರಾಣುಗಳ ವರ್ತನೆ ಮತ್ತು ಸೋಂಕಿನ ಉಗ್ರಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ.
ವೈರಾಣುಗಳು ಮತ್ತಷ್ಟು ಉಗ್ರವಾಗಿ ರೋಗಿಗಳನ್ನು ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬದಲಾವಣೆ ಕೆಲವೊಮ್ಮೆ ಮೂಲ ವೈರಾಣುವಿಗಿಂತ ಪೂರ್ತಿ ಭಿನ್ನವಾದ ವೈರಾಣುವಿನ ರಚನೆಯಲ್ಲಿ ಪರ್ಯಾಯವಸನವಾದ ಉದಾಹರಣೆಗಳೂ ನಮ್ಮ ಮುಂದಿದೆ. ಒಂದಷ್ಟು ಸಣ್ಣಪುಟ್ಟ ಮ್ಯುಟೇಶನ್ಗಳಿಂದ ಲಸಿಕೆಗಳ ಕಾರ್ಯಕ್ಷಮತೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಲಸಿಕೆ ತೆಗೆದುಕೊಳ್ಳಬೇಕೋ ಬೇಡವೋ ಎಂಬ ವಿಚಾರಕ್ಕೆ ವಿಜ್ಞಾನಿಗಳು ತಾರ್ಕಿಕ ಅಂತ್ಯ ಹಾಡಿರುವುದು ಸಂತಸದ ಸಂಗತಿ.
ಒಟ್ಟಿನಲ್ಲಿ ಮನುಷ್ಯ ಹೇಗೆ ಪರಿಸ್ಥಿತಿ ಮತ್ತು ಸನ್ನಿವೇಶಕ್ಕೆ ಪೂರಕವಾಗಿ ವರ್ತಿಸುತ್ತಾನೆಯೋ ಹಾಗೇ ವೈರಾಣುಗಳು ಕೂಡಾ ತಮ್ಮ ರೂಪ ಮತ್ತು ವೇಷ ಬದಲಿಸುವ ಕಲೆ ಕಲಿತುಕೊಂಡಿರುವುದು ಬಹಳ ಸೋಜಿಗದ ಸಂಗತಿ. ಜೀವ ಸಂಕುಲದ ಅತ್ಯಂತ ನಿಕೃಷ್ಟ ಜೀವ ಎಂದು ಪರಿಗಣಿಸಲ್ಟಟ್ಟ ವೈರಾಣುಗಳು ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗುವುದು ಜೀವ ಜಗತ್ತಿನ ಒಂದು ವಿಚಿತ್ರವೇ ಸರಿ.
ಕೊನೆ ಮಾತು: ರೂಪಾಂತರ ಎನ್ನುವುದು ಒಂದು ಸಾಮಾನ್ಯ ಪ್ರಕ್ರಿಯೆ. ಮನುಷ್ಯ ಕೂಡಾ ಕಾಲಕಾಲಕ್ಕೆ ಮತ್ತು ವಂಶದಿಂದ ವಂಶಕ್ಕೆ ಬದಲಾಗುತ್ತಾನೆ. ಅನಗತ್ಯವಾದ ದೇಹದ ಭಾಗಗಳನ್ನು ಕಳಚಿಕೊಂಡು ಅಗತ್ಯವಿದ್ದ ಭಾಗಗಳನ್ನು ಮತ್ತಷ್ಟು ವಿಕಸಿತಗೊಳ್ಳುವಂತೆ ಪ್ರಕೃತಿಯೇ ವ್ಯವಸ್ಥೆ ಮಾಡುತ್ತದೆ. ಅದೇ ರೀತಿ ವೈರಾಣುಗಳು ಕೂಡಾ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತನ್ನ ರೂಪ ಬದಲಾಯಿಸುವುದು ಸಹಜವಾದ ಪ್ರಕ್ರಿಯೆ. ಇದೇನು ಹೊಸತಾದ ಬೆಳವಣಿಗೆ ಅಲ್ಲ. ಬಹಳ ಹಿಂದೆಯೇ ಮ್ಯುಟೇಶನ್ ಅಥವಾ ರೂಪಾಂತರ ಎಂಬ ವಿಚಾರವನ್ನು ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.
ಈ ಕೊರೋನಾ ವೈರಾಣು ಕೂಡಾ ತನ್ನ ಜೀವ ಸಂಕೋಲೆಯ ಸರಪಳಿಯಲ್ಲಿ ವೇಗವಾಗಿ ಹರಡುವಾಗ ಮತ್ತು ಬಾಹ್ಯ ಪರಿಸ್ಥಿತಿಯ ಒತ್ತಡದಲ್ಲಿ ತನ್ನ ರೂಪ ಬದಲಾಯಿಸಿರುವುದು ಸಾಮಾನ್ಯ ವಿಚಾರ. ಆದರೆ ಬದಲಾವಣೆ ಎಷ್ಟರ ಮಟ್ಟಿಗೆ ಆ ವೈರಾಣುವಿನ ಉಗ್ರತೆ ಮತ್ತು ವರ್ತನೆಯನ್ನು ಬದಲಾಯಿಸಿದೆ ಎನ್ನುವುದು ಬಹಳ ಕೌತುಕದ ವಿಚಾರ. ಈಗ ತಿಳಿದ ಮಾಹಿತಿಯಂತೆ ಸುಮಾರು 25 ಬಗೆಯ ರೋಪಾಂತರಿ ಕೋವಿಡ್ ವೈರಾಣು ಕಂಡು ಬಂದಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಬದಲಾದ ವೈರಾಣುಗಳು ಮನುಷ್ಯ ಜೀವಕೋಶಗಳ ಜೊತೆ ಸೇರಿಕೊಳ್ಳುವ ಮತ್ತು ವರ್ತಿಸುವ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಇನ್ನು ಬರಬೇಕಾಗಿದೆ. ಅದೇನೇ ಇರಲಿ ನಾವು ನಮ್ಮ ಜಾಗ್ರತೆಗಳಾದ ಸುರಕ್ಷತೆ ಅಂತರ, ಕೈ ತೊಳೆಯುವಿಕೆ, ಮುಖ ಕವಚ ಧರಿಸುವಿಕೆ ಮತ್ತು ಸ್ಯಾನಿಟೈಸರ್ ಬಳಕೆ ಮುಂತಾದ ಸುರಕ್ಷಿತ ಕ್ರಮಗಳನ್ನು ಮುಂದುವರಿಸಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿ ಇದೆ. ಹಾಗೆ ಮಾಡಿದರೆ ಮಾತ್ರ ಹಳೆ ಕೋವಿಡ್-19 ವೈರಾಣು ಮತ್ತು ರೂಪಾಂತರಿ ವೈರಾಣು ಇವೆರಡರಿಂದಲೂ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111 ಮೊ.: 98451 35787
www.surakshadental.com
email: drmuraleemohan@gmail.com