Health Vision

Health Vision

SUBSCRIBE

Magazine

Click Here

ಉಷ್ಣಾಂಶ ಏರಿಕೆ ಪರಿಣಾಮ – ಹೇಗೆ ರಕ್ಷಿಸುವುದು?

ಪ್ರತಿ ವರ್ಷದ ಬೇಸಿಗೆ ಸಾಮಾನ್ಯವಾಗಿ ಅಧಿಕ ವೈರಸ್ ಸೋಂಕು ತಗುಲುವ ಕಾಲ. ಈ ವರ್ಷ ವಾಸ್ತವವಾಗಿ ಜಾಗತಿಕ ತಾಪಮಾನದ ಪರಿಣಾಮವಾಗಿ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಬಾರಿ ಬೇಸಿಗೆ ಬೇಗ ಆರಂಭವಾಗಿರುವುದು ಮತ್ತು ಹಗಲಿನ ವೇಳೆ ಅತ್ಯಧಿಕ ಉಷ್ಣಾಂಶ ದಾಖಲಾಗಿರುವುದು ಹಾಗೂ ರಾತ್ರಿಯ ವೇಳೆ ತಾಪಮಾನ ಕಡಿಮೆ ಇರುವುದು ಬೆಂಗಳೂರಿಗರ ಆರೋಗ್ಯಕ್ಕೆ ಮಾರಕವಾಗಿದೆ. ವಾತಾವರಣದಲ್ಲಿನ ಬದಲಾವಣೆ ಈಗಾಗಲೇ ಫ್ಲೂ, ಉಸಿರಾಟದ ತೊಂದರೆಗಳು ಮತ್ತು ಆಹಾರ ಸಂಬಂಧಿ ಸೋಂಕುಗಳಿಗೆ ಕಾರಣವಾಗಿದೆ.

ತಾಪಮಾನ ಏರಿಕೆಯ ಪರಿಣಾಮಗಳನ್ನು ವಿವರಿಸಿದ ನಾರಾಯಣ ಹೆಲ್ತ್ ಸಿಟಿ ಆಂತರಿಕ ಔಷಧಿಗಳ ಸಲಹೆಗಾರ ಡಾ.ಮಹೇಶ್ ಕುಮಾರ್, “ಹವಾಮಾನ ಬದಲಾವಣೆಯು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಸವಾಲಾಗಿದ್ದು, ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದಾಗ್ಯೂ ಬೇಸಿಗೆ ಮೊದಲೇ ಆರಂಭವಾಗಿರುವುದರಿಂದ ಹಾಗೂ ಅಧಿಕ ತಾಪಮಾನವು ನಮ್ಮ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ನಮಗೆ ಈಗಾಗಲೇ ಈ ವರ್ಷ ವೈರಸ್ ಸೋಂಕು ರೋಗಿಗಳಲ್ಲಿ ಶೇಕಡ 15ರಷ್ಟು ಹೆಚ್ಚಳ ಕಂಡುಬಂದಿದೆ. ಉಷ್ಣಾಂಶದ ವಿಧಾನ ಕೂಡಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯ ವೇಳೆ ಹೆಚ್ಚು ತಂಪು ಇರುವುದು ಮತ್ತು ಹಗಲಿನ ವೇಳೆ ಅಧಿಕ ತಾಪಮಾನ ಇರುವುದರಿಂದ ನಮ್ಮ ದೇಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಇನ್‍ಫ್ಲುಯೆಂಝಾ ಮತ್ತು ಶ್ವಾಸಕೋಶದ ಉರಿಯೂತದಂಥ ವೈರಸ್ ಸಂಬಂಧಿತ ಉಸಿರಾಟದ ಸೋಂಕು ಹೊಂದಿದ ರೋಗಿಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ. ಆಹಾರ ಮತ್ತು ನೀರು ಸಂಬಂಧಿತ ಸೋಂಕುಗಳು ಕೂಡಾ ಅಧಿಕವಾಗಿರುವುದು ಗಮನಕ್ಕೆ ಬಂದಿದೆ” ಎಂದು ಹೇಳಿದ್ದಾರೆ.

“ಇದಕ್ಕಿಂತ ಹೆಚ್ಚಾಗಿ ಈ ವರ್ಷ ಆತಂಕಕಾರಿ ಅಂಶವೆಂದರೆ ಸೋಂಕಿನ ತೀವ್ರತೆ. ಈ ಬಾರಿ ಹೆಚ್ಚು ತೀವ್ರ ಸ್ವರೂಪದ ಸೋಂಕುಗಳು ಕಂಡುಬರುತ್ತಿವೆ” ಎಂದು ಡಾ.ಮಹೇಶ್ ಕುಮಾರ್ ವಿವರಿಸಿದ್ದಾರೆ. ಈ ಪೈಕಿ ಕೆಲ ಸ್ಥಿತಿಗಳು ತಪ್ಪಿಸಲು ಅಸಾಧ್ಯವಾದದ್ದಾಗಿದ್ದರೂ, ಈ ಪೈಕಿ ಬಹುತೇಕ ಪ್ರಕರಣಗಳನ್ನು ನಮ್ಮ ದೇಹದ ರೋಗನಿರೋಧಕ ಶಕ್ತಿ ಸುಧಾರಿಸಿಕೊಳ್ಳುವುದು, ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಸೋಂಕು ತಡೆಯುವಂಥ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಇದನ್ನು ನಿಭಾಯಿಸಬಹುದಾಗಿದೆ”.

ಇಂಥ ಸೋಂಕುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೆಳಗೆ ಸೂಚಿಸಲಾಗಿದೆ:

  1. ಸದಾ ದ್ರವಾಂಶ ಇರುವಂತೆ ನೋಡಿಕೊಳ್ಳಿ: ಪ್ರತಿದಿನ 2.5 ರಿಂದ 3 ಲೀಟರ್‍ವರೆಗೆ ನೀರು ಕುಡಿಯುವುದರಿಂದ ಮಾಂಸಖಂಡದ ಆದ್ರ್ರತೆ ಪ್ರಮಾಣ ಸುಧಾರಿಸುವುದು ಮಾತ್ರವಲ್ಲದೇ ಇದು ಮಾಂಸಖಂಡಗಳ ನೋವನ್ನು ತಡೆಯುತ್ತದೆ ಹಾಗೂ ಬೇಸಿಗೆಯಲ್ಲಿ ಸಾಮಾನ್ಯವಾಗಿರುವ ಆಯಾಸ ಅಥವಾ ಬಳಲಿಕೆಯನ್ನು ಕಡಿಮೆ ಮಾಡುತ್ತದೆ.
  2. ಪ್ಯಾಕ್ ಮಾಡಿದ ಮತ್ತು ಫ್ರಿಡ್ಜ್ ಆಹಾರಗಳು ಬೇಡ: ತಾಜಾ ಹಾಗೂ ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸಾಧ್ಯವಾದಷ್ಟೂ ಹೆಚ್ಚು ಸೇವಿಸಿ. ಫ್ರಿಡ್ಜ್‍ನಲ್ಲಿಟ್ಟ ಆಹಾರ, ದಾಸ್ತನು ಮಾಡಿದ ಮತ್ತು ಪ್ಯಾಕ್ ಮಾಡಲಾದ ಆಹಾರವಸ್ತುಗಳನ್ನು ಸೇವಿಸುವುದು ಪದೇ ಪದೇ ಸೋಂಕು ಆಹ್ವಾನಿಸಲು ಕಾರಣವಾಗುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಅಜೀರ್ಣತೆ ಹಾಗೂ ಗ್ಯಾಸ್ಟ್ರಾಯಿಟೀಸ್‍ಗೆ ಇದು ಕಾರಣವಾಗುತ್ತದೆ.
  3. ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ: ವ್ಯಾಯಾಮದ ಮೂಲಕ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವುದು ಹೆಚ್ಚು ಚೇತೋಹಾರಿ. ಇದು ಎಲುಬು ಮತ್ತು ಮಾಂಸಖಂಡಗಳಲ್ಲಿನ ಪೋಷಕಾಂಶ ಹೀರಿಕೊಳ್ಳುವ ಹಾಗೂ ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
  4. ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ: ಇನ್‍ಫ್ಲುಯೆಂಝಾ ಮತ್ತು ಟೈಫಾಯ್ಡ್ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಖಂಡಿತವಾಗಿಯೂ ಜನರಿಗೆ ನೆರವಾಗುವುದು ಮಾತ್ರವಲ್ಲದೇ, ಸಮುದಾಯದಲ್ಲಿ ಇಂಥ ಸೋಂಕುಗಳು ಮತ್ತೆ ಹರಡುವುದನ್ನು ತಡೆಯುವಲ್ಲಿ, ರೋಗ ಪ್ರಮಾಣ ಹಾಗೂ ಪದೇ ಪದೇ ಆಂಟಿಬಯಾಟಿಕ್ಸ್ ಬಳಕೆಯನ್ನು ಕಡಿಮೆ ಮಾಡುವಲ್ಲೂ ಇದು ನೆರವಾಗುತ್ತದೆ.
Back To Top