ಮಹಾಶಿವರಾತ್ರಿ ಹಬ್ಬದ ಆಚರಣೆ – ಆರೋಗ್ಯದ ದೃಷ್ಠಿಯಿಂದ ಪ್ರಾಮುಖ್ಯತೆ ಏನು?

ಮಹಾಶಿವರಾತ್ರಿ ಭಾರತದಾದ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಲ್ಪಡುವ ಶಿವನ ಆರಾಧಿಸುವ ಮಹತ್ತರ ಹಬ್ಬ.ಶಿವನ ಧ್ಯಾನ, ಪ್ರಾರ್ಥನೆ, ಸ್ವ ಅಧ್ಯಾಯ, ಆತ್ಮಮನನ, ಉಪವಾಸ, ರಾತ್ರಿ ಜಾಗರಣೆಯೊಂದಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮ ಶುದ್ದಿಯನ್ನು ಮಾಡಿಕೊಳ್ಳುವುದು ಮಾಹಾಶಿವರಾತ್ರಿಯ ಮಹತ್ವವಾಗಿದೆ. ಇದಕ್ಕೂ ಮೀರಿ ವೈಜ್ನಾನಿಕ ತತ್ವಗಳು ಇದರಲ್ಲಿ ಅಡಗಿದ್ದು ಹಬ್ಬದ ಆಚರಣೆಯಾಗಿ ಮಾಡುವ ಉಪವಾಸ ಮತ್ತು ಜಾಗರಣೆ ಆರೋಗ್ಯದ ದೃಷ್ಠಿಯಿಂದ ಮಹತ್ತ್ವದ್ದಾಗಿದೆ.

mahashivaratri ಮಹಾಶಿವರಾತ್ರಿ ಹಬ್ಬದ ಆಚರಣೆ - ಆರೋಗ್ಯದ ದೃಷ್ಠಿಯಿಂದ ಪ್ರಾಮುಖ್ಯತೆ ಏನು?

ಮಹಾಶಿವರಾತ್ರಿ ಭಾರತದಾದ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಲ್ಪಡುವ ಶಿವನ ಆರಾಧಿಸುವ ಮಹತ್ತರ ಹಬ್ಬ. ಬೇರೆ ಹಬ್ಬಗಳಿಗೆ ಹೋಲಿಸಿದರೆ ಮಹಾಶಿವರಾತ್ರಿ ಬಹಳ ವೈಶಿಷ್ಟ್ಯೆತೆಯಿಂದ ಕೂಡಿದೆ. ಇತರೆ ಹಬ್ಬಗಳು ಸಂತಸದ, ಸಂಭ್ರಮದ, ಧಾರ್ಮಿಕ ಆಚರಣೆಗಳ, ವಿಶಿಷ್ಠ ಭೋಜನದ, ಉಲ್ಲಾಸ ಭರಿತ ದಿನವಾದರೆ, ಶಿವರಾತ್ರಿಯು ರಾತ್ರಿಯ ವೇಳೆ ಆಚರಿಸಲ್ಪಡುವ ಹಬ್ಬ. ಶಿವನ ಧ್ಯಾನ, ಪ್ರಾರ್ಥನೆ, ಸ್ವ ಅಧ್ಯಾಯ, ಆತ್ಮಮನನ, ಉಪವಾಸ, ರಾತ್ರಿ ಜಾಗರಣೆಯೊಂದಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮ ಶುದ್ದಿಯನ್ನು ಮಾಡಿಕೊಳ್ಳುವುದು ಮಾಹಾಶಿವರಾತ್ರಿಯ ಮಹತ್ವವಾಗಿದೆ.

ಆರೋಗ್ಯದ ದೃಷ್ಠಿಯಿಂದ ಮಹಾಶಿವರಾತ್ರಿ

ಸಾಮಾನ್ಯವಾಗಿ ಜನರು ಪ್ರಾತಃಕಾಲದಲ್ಲಿ ಎದ್ದು, ಸ್ನಾನದಿ ಕರ್ಮಗಳನ್ನು ಮುಗಿಸಿ, ಶಿವನ ದೇವಾಲಗಳನ್ನು ದರ್ಶಿಸುತ್ತಾರೆ ಮತ್ತು ಹೂವು, ಹಾಲು, ವಿಶೇಷವಾಗಿ ಬಿಲ್ವಪತ್ರೆಯಿಂದ ಶಿವನನ್ನು ಆರಾಧಿಸುತ್ತಾರೆ. ಅಹೋರಾತ್ರಿ ಉಪವಾಸ ಮಾಡಿ, ರಾತ್ರಿ ಪೂರ್ತಿ ಎಚ್ಚರವಿದ್ದು, ದೇವರ ಸ್ಮರಣೆ, ಜಪ, ಸ್ತುತಿ, ದೇವರನಾಮ ಪಠಣದಲ್ಲಿ ತೊಡಗುತ್ತಾರೆ. ಈ ಆಚರಣೆಗಳು ಕೇವಲ ಒಂದು ಧಾರ್ಮಿಕ ಅಥವಾ ಸಾಂಪ್ರದಾಯಿಕ ಆಚರಣೆಯಲ್ಲ. ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ನಾನಿಕ ತತ್ವಗಳು ಇದರಲ್ಲಿ ಅಡಗಿದ್ದು ಇದಕ್ಕೂ ಮೀರಿ, ಹಬ್ಬದ ಆಚರಣೆಯಾಗಿ ಮಾಡುವ ಉಪವಾಸ ಮತ್ತು ಜಾಗರಣೆ ಆರೋಗ್ಯದ ದೃಷ್ಠಿಯಿಂದ ಮಹತ್ತ್ವದ್ದಾಗಿದೆ.

ಮಾನವನು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರಕೃತಿಯಲ್ಲಿ ವರ್ಷವಿಡೀ ನಿರಂತರವಾಗಿ ಆಗುವ ಬದಲಾವಣೆಯಿಂದ ಪ್ರಭಾವಿತನಾಗುತ್ತಾನೆ. ಆದ್ದರಿಂದ ಕಾಲಕ್ಕೆ ಅನುಗುಣವಾದ ಆಹಾರ ಮತ್ತು ಜೀವನಶೈಲಿಯನ್ನು ಸಾಂಪ್ರದಾಯಿಕ ಆಚರಣೆಗಳ ಮೂಲಕ ಅಳವಡಿಸಲಾಗಿದೆ.

ಶಿವರಾತ್ರಿ ಹಬ್ಬವನ್ನು ಉತ್ತರಾಯಣದ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ 13ನೇ ರಾತ್ರಿ ಹಾಗೂ 14ನೇ ದಿನ ಆಚರಣೆ ಮಾಡಲಾಗುವುದು. ಈ ಎರಡು ದಿನಗಳು ಮಾಘ ಮಾಸದ ಕೊನೆಯ ಎರಡು ದಿನಗಳಾಗಿದ್ದು, ಹಬ್ಬದ ನಂತರ ಅಮಾವಾಸ್ಯೆ ಕಳೆದು ಫಾಲ್ಗುಣ ಮಾಸ ಪ್ರಾರಂಭವಾಗುತ್ತದೆ. ಮಾಘ ಮಾಸ ಕಳೆದು ಫಾಲ್ಗುಣ ಮಾಸ ಪ್ರಾರಂಭವಾಗುವ ಮಧ್ಯೆ ಇರುವ ಈ ಎರಡು ದಿನಗಳು ಪ್ರಕೃತಿಯಲ್ಲಿ ಆಗುವ ಹಲವು ಬದಲಾವಣೆಯ ಸಂಧಿಕಾಲವಾಗಿದೆ.

ಆಯುರ್ವೇದದ ಪ್ರಕಾರ ಮಹಾಶಿವರಾತ್ರಿ

ಹೇಮಂತ ಋತುವಿನಿಂದ ಪ್ರಾರಂಭವಾಗಿ ಮಾಘಮಾಸದ ಕಡೆಯವರೆಗೂ, ಅಂದರೆ ಶಿವರಾತ್ರಿಯವರೆಗೂ ಚಳಿಗಾಲವಾಗಿದ್ದು, ಅತ್ಯಧಿಕ ಶೀತ, ಚಳಿ, ಗಾಳಿಯಿಂದಾಗಿ ಹಸಿವು, ಜೀರ್ಣಶಕ್ತಿ ಪ್ರಬಲವಾಗಿರುತ್ತದೆ. ದೇಹದಲ್ಲಿ ಪೋಷಕಾಂಶಗಳು, ದೇಹದ ಬಲ ಪ್ರಾಕೃತವಾಗಿ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿನ ಕಫದ ಅಂಶ ಹಾಗೂ ಕೊಬ್ಬಿನಾಂಶ ಅಧಿಕವಾಗಿ ಶೇಖರಿತವಾಗುತ್ತದೆ.

ಆದರೆ ಮಾಘ ಮಾಸ ಮುಕ್ತಾಯಗೊಂಡಂತೆ, ಅಂದರೆ ಶಿವರಾತ್ರಿಯ ನಂತರ ಬೇಸಿಗೆ ಪ್ರಾರಂಭವಾಗುತ್ತದೆ. ಸೂರ್ಯನ ಕಿರಣಗಳು ಹೆಚ್ಚಾಗಿ, ಒಣ ಹವೆ, ಬಿಸಿಲು, ಕ್ರಮೇಣ ಹೆಚ್ಚಾಗುತ್ತದೆ , ಮತ್ತು ವಾತಾವರಣದ ಈ ಬದಲಾವಣೆಯು ದೇಹದ ಮೇಲೂ ಪ್ರಭಾವ ಬೀರುತ್ತದೆ. ಸೂರ್ಯನ ತೀಕ್ಷ್ಣ ಕಿರಣ ಹಾಗೂ ಅಧಿಕ ತಾಪದಿಂದಾಗಿ ದೇಹದಲ್ಲಿನ ಉಷ್ಣತೆ ಹೆಚ್ಚಾಗಿ ಶೇಖರಿತ ಕಫ ಹಾಗೂ ಕೊಬ್ಬಿನಾಂಶ ಕರಗುತ್ತದೆ,. ಇದರ ಪ್ರಭಾವ ಜೀರ್ಣಶಿಕ್ತಿ ಕುಗ್ಗುತ್ತದೆ ಹಾಗೂ ತಲೆನೋವು, ತಲೆಭಾರ, ಆಲಸ್ಯ, ಅಜೀರ್ಣ, ದೇಹಭಾರದಂತಹ ಹಲವು ರೋಗಗಳು ಉತ್ಪತ್ತಿಯಾಗುತ್ತದೆ.

ಆದ್ದರಿಂದ ಈ ಸಮಯದಲ್ಲಿ ಆಯುರ್ವೇದದಲ್ಲಿ ಕಟ್ಟಿದ ಕಫ ಅಥವಾ ಹೆಚ್ಚಾದ ಕೊಬ್ಬಿನಂಶವನ್ನು ಕಡಿಮೆಗೊಳಿಸಲು ಲಂಘನ ಚಿಕಿತ್ಸೆಯನ್ನು ಸೂಚಿಸಲಗಿದೆ. ಉಪವಾಸ ಮತ್ತು ರಾತ್ರಿಯಲ್ಲಿ ಜಾಗರಣೆಯು ಈ ಚಿಕಿತ್ಸೆಯ ಒಂದು ಪ್ರಕಾರವಾಗಿದ್ದು, ಕಫದ ಅಂಶವನ್ನು ಕಡಿಮೆ ಮಾಡಿ ಮುಂದೆ ಬರಬಹುದಾದ ಕಫದ ವ್ಯಾಧಿಗಳನ್ನು ತಡೆಗಟ್ಟುತ್ತದೆ.

ಹಿಂದಿನ ಮಾಸದಲ್ಲಿ(ಚಳಿಗಾಲದಲ್ಲಿ) ಅತೀ ಹೆಚ್ಚು ಜೀರ್ಣಶಕ್ತಿಯಿಂದ, ಹೆಚ್ಚೆಚ್ಚು ಆಹಾರ ಸೇವಿಸಿ ದೇಹದಲ್ಲಿ ಹೆಚ್ಚಾಗಿ ಉಳಿದಿರುವ ಟಾಕ್ಸಿನ್ಸ್ ಅಥವಾ ದೇಹಕ್ಕೆ ಬೇಡದ ಅಂಶಗಳನ್ನು ತೆಗೆದು ಹಾಕಿ, ದೇಹವನ್ನು ಶುದ್ದಗೊಳಿಸಿ, ಲಘುವಾಗಿಸುಲು ಉಪವಾಸ ಮತ್ತು ಜಾಗರಣೆ ಒಂದು ಉತ್ತಮ ಚಿಕಿತ್ಸೆಯಾಗುತ್ತದೆ. ಈ ಮೂಲಕ ಮತ್ತೆ ಜೀರ್ಣಶಕ್ತಿಯನ್ನು ಪ್ರಾಕೃತಾವಸ್ಥೆಗೆ ತಂದು ಮುಂದೆ ಬೇಸಿಗೆಗೆ ದೇಹವು ಹೊಂದಿಕೊಳ್ಳಲು ಉಪವಾಸ ನೆರವಾಗುತ್ತದೆ ಮತ್ತು ಮುಂಬರುವ ವ್ಯಾಧಿಗಳನ್ನು ತಪ್ಪಿಸಬಹುದು.

ಮಹಾಶಿವರಾತ್ರಿ ಹಬ್ಬದ ಆಚರಣೆ - ಆರೋಗ್ಯದ ದೃಷ್ಠಿಯಿಂದ ಪ್ರಾಮುಖ್ಯತೆ ಏನು?

ಉಪವಾಸ ಹಾಗೂ ಜಾಗರಣೆಯಿಂದ  ವಿಶೇಷ ಲಾಭ:

ಉಪವಾಸದಲ್ಲಿ ಹಲವು ಪ್ರಕಾರಗಳಿದ್ದು, ಶಕ್ತಿ ಹಾಗೂ ವಯಸ್ಸಿನ ಅನುಸಾರವಾಗಿ ಸೂಚಿಸಲಾಗಿದೆ. ನಿರಾಹಾರ ಉಪವಾಸ ಮಾಡಲು ಕಷ್ಟ ಆದವರು, ಹಾಲು, ನೀರು, ಗಂಜಿ, ಹಣ್ಣುಗಳನ್ನು, ಲಘುವಾದ ಸಾತ್ವಿಕ ಆಹಾರಗಳನ್ನು ಸೇವಿಸಬಹುದು.
ಆದರೆ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಹಾಗೂ ಅಧಿಕವಾಗಿ ವ್ಯಾಯಮ ಮಾಡುವವರು, ಪಿತ್ತ ಪ್ರಕೃತಿಯವರು ಉಪವಾಸ ಮಾಡಬಾರದು.

ಅಷ್ಟೇ ಅಲ್ಲದೆ ಉಪವಾಸ ಹಾಗೂ ಜಾಗರಣೆಯಿಂದ ಮತ್ತಷ್ಟು ವಿಶೇಷ ಲಾಭ ಪಡೆದುಕೊಳ್ಳಬಹುದು.

1. ಉಪವಾಸವು ದೇಹದ ಭಾರ ಕಡಿಮೆಮಾಡುತ್ತದೆ. ದೇಹವನ್ನು ಲಘುವಾಗಿಸುತ್ತದೆ
2. ಮನಸ್ಸನ್ನು ಹಗುರ ಹಾಗೂ ಆಹ್ಲಾದಕರವಾಗಿಸುತ್ತದೆ.
3. ದೇಹ ಹಾಗೂ ಮನಸ್ಸಿಗೆ ನವ ಉತ್ಸಾಹವನ್ನು ತುಂಬುತ್ತದೆ
4. ಇಂದ್ರಿಯಗಳ ಶುದ್ದಿಯಾಗುತ್ತದೆ
5. ದೇಹವು ಚಟುವಟಿಕೆಯಿಂದಿರಲು ನೆರವಾಗುತ್ತದೆ

Also read: ಮಹಾಶಿವರಾತ್ರಿ ಹಬ್ಬ  – ವೈದ್ಯಕೀಯ ಪ್ರಯೋಜನಗಳು

ಆದ್ದರಿಂದ ಶಿವರಾತ್ರಿಯ ಹಬ್ಬದಂದ ಧಾರ್ಮಿಕವಾಗಿ, ಸಂಪ್ರದಾಯವಾಗಿ ಮಾಡುವ ಉಪವಾಸ ಹಾಗೂ ರಾತ್ರಿ ಜಾಗರಣೆ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಬೇಸಿಗೆಯ ಪ್ರಾರಂಭದೊಂದಿಗೆ ಶುರು ಆಗಬಹುದಾದ ರೋಗಗಳನ್ನು ತಡೆಟ್ಟಲು ನೆರವಾಗುತ್ತದೆ ಮತ್ತು ಕಫ ಹಾಗೂ ಬೊಜ್ಜಿನ ರೋಗಗಳಿಗೆ ಉತ್ತಮ ಚಿಕಿತ್ಸೆಯಾಗುತ್ತದೆ. ಪ್ರಕೃತಿಯಲ್ಲಾಗುವ ಬದಲಾವಣೆಗೆ ದೇಹವು ಸುಲಭವಾಗಿ ಒಗ್ಗಿಕೊಳ್ಳಲು ಸಹಕಾರಿಯಾಗುತ್ತದೆ.

ನಮ್ಮ ಹಿರಿಯರು ಆರೋಗ್ಯವನ್ನು ರಕ್ಷಿಸಿಕೊಳ್ಳಲು, ರೋಗಗಳಿಗೆ ಚಿಕಿತ್ಸೆಯಾಗಿ, ರೋಗಗಳನ್ನು ತಡೆಗಟ್ಟಲು ಕಾಲಕಾಲಕ್ಕೆ ಅವಶ್ಯವಿರುವ ಆರೋಗ್ಯದ ಸೂತ್ರಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆ ಹಾಗೂ ಹಬ್ಬಗಳಲ್ಲಿ ಬಲು ಸೂಕ್ಮವಾಗಿ ಬೆಸಿದಿದ್ದಾರೆ.

Dr.Mahesh-Sharma

ಡಾ. ಮಹೇಶ್ ಶರ್ಮಾ ಎಂ
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊಬೈಲ್: 9964022654
ಇಮೇಲ್: drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!