ಪಿತ್ತಕೋಶದ ಕಲ್ಲುಗಳು – ಕೋಲಿಸಿಸೈಟಿಸ್‌ ಸಮಸ್ಯೆಗೆ ಚಿಕಿತ್ಸೆ ಏನು

ಪಿತ್ತಕೋಶದ ಕಲ್ಲುಗಳು ಕೆಲವೊಮ್ಮೆ ಬಹಳಷ್ಟು ಅನಾನುಕೂಲ ಮತ್ತು ತೊಂದರೆಗಳನ್ನು ಉಂಟು ಮಾಡಬಹುದು. ಕೋಲೆಸಿಸೈಟಿಸ್ ಎನ್ನುವುದು ಪಿತ್ತಕೋಶದಲ್ಲಿನ ಉರಿಯೂತವಾಗಿದ್ದು, ಪಿತ್ತಕೋಶದ ಕಲ್ಲುಗಳಿಂದ ಈ ತೊಂದರೆ ಬರುತ್ತದೆ. ಪಿತ್ತನಾಳದಲ್ಲಿ ಅಡ್ಡಿವುಂಟಾದಲ್ಲಿ ಪಿತ್ತರಸ ಒಂದಡೆ ಸೇರಿಕೊಂಡು ಕಿರಿಕಿರಿ ಮತ್ತು ಸೋಂಕು ಸಹ ಉಂಟಾಗುತ್ತದೆ. 

ಪಿತ್ತಕೋಶದ ಕಲ್ಲುಗಳು

ಆಹಾರದಲ್ಲಿರುವ ಕೊಬ್ಬಿನ ಅಂಶಗಳ ಪಚನಕ್ಕಾಗಿ ಯಕೃತ್ತು ಅಥವಾ ಪಿತ್ತಜನಕಾಂಗ ಉತ್ಪಾದಿಸುವ ಪಿತ್ತರಸವನ್ನು ಹಿಡಿದಿಡುವ ಸಣ್ಣ ಚೀಲ ಪಿತ್ತಕೋಶವಾಗಿರುತ್ತದೆ. ಆದರೆ, ಈ ಸಣ್ಣ ಅಂಗ ಕೆಲವೊಮ್ಮೆ ಬಹಳಷ್ಟು ಅನಾನುಕೂಲ ಮತ್ತು ತೊಂದರೆಗಳನ್ನು ಉಂಟು ಮಾಡಬಹುದು. ಅದರಲ್ಲಿಯೂ ವಿಶೇಷವಾಗಿ ಪಿತ್ತಕೋಶದ ಕಲ್ಲುಗಳು ಅಥವಾ ಉರಿಯೂತ ಇದ್ದಾಗ ಇದು ಬಹಳ ತೊಂದರೆ ಉಂಟುಮಾಡುತ್ತದೆ. ಪಿತ್ತಕೋಶದ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಲು ಪಿತ್ತಕೋಶದ ಕಲ್ಲುಗಳು ಅಲ್ಲದೆ ಕೋಲೆಸಿಸೈಟಿಸ್‌ಗಳ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಬೇಕು.

ಪಿತ್ತಕೋಶದ ಕಲ್ಲುಗಳು ಮತ್ತು ಕೋಲೆಸಿಸೈಟಿಸ್ ಎಂದರೇನು?

ಪಿತ್ತಕೋಶದಲ್ಲಿ ರಚನೆಯಾಗುವ ಗಟ್ಟಿಯಾದ ನಿಕ್ಷೇಪಗಳನ್ನು ಪಿತ್ತಕೋಶದ ಕಲ್ಲುಗಳು ಎಂದು ಹೇಳಲಾಗುತ್ತದೆ. ಇವು ಕೊಲೆಸ್ಟ್ರಾಲ್ ಅಥವಾ ಬಿಲಿರುಬಿನ್‌ಗಳಿಂದ ರಚನೆಯಾಗಿರುತ್ತದೆ. ಇವುಗಳ ಗಾತ್ರ ಬದಲಾಗಬಹುದಾಗಿದ್ದು, ಪಿತ್ತರಸದ ಹರಿವಿಗೆ ಅಡ್ಡಿ ಉಂಟುಮಾಡದಷ್ಟು ಇವು ಸಣ್ಣಗಿದ್ದಲ್ಲಿ ಇವುಗಳು ಪಿತ್ತನಾಳದಲ್ಲಿ ಕಾಣಸಿಗುವುದಿಲ್ಲ. ಆದರೆ, ಇತರೆ ಪ್ರಕರಣಗಳಲ್ಲಿ ಅವು ಪಿತ್ತನಾಳದಲ್ಲಿ ಅಡ್ಡಿವುಂಟು ಮಾಡುತ್ತಿದ್ದರೆ ತೀವ್ರ ನೋವು ಮತ್ತು ಸಂಕೀರ್ಣ ತೊಂದರೆಗಳನ್ನು ಉಂಟುಮಾಡಬಹುದು.

ಕೋಲೆಸಿಸೈಟಿಸ್ ಎನ್ನುವುದು ಪಿತ್ತಕೋಶದಲ್ಲಿನ ಉರಿಯೂತವಾಗಿದ್ದು, ಸಿಸ್ಟಿಕ್ ಡಕ್ಸ್‌ನಲ್ಲಿರುವ ಪಿತ್ತಕೋಶದ ಕಲ್ಲುಗಳಿಂದ ಈ ತೊಂದರೆ ಬರುತ್ತದೆ. ಪಿತ್ತನಾಳದಲ್ಲಿ ಅಡ್ಡಿವುಂಟಾದಲ್ಲಿ ಪಿತ್ತರಸ ಒಂದಡೆ ಸೇರಿಕೊಂಡು ಕಿರಿಕಿರಿ ಮತ್ತು ಸೋಂಕು ಸಹ ಉಂಟಾಗುತ್ತದೆ. ಪಿತ್ತಕೋಶದಿಂದ ಪಿತ್ತರಸ ವಿತರಣೆಯಾಗುವುದನ್ನು ಪಿತ್ತಕೋಶದ ಕಲ್ಲುಗಳು ತಡೆದಲ್ಲಿ ಇದರಿಂದ ತೀವ್ರ ರೀತಿಯ ಕೋಲಿಸಿಸೈಟಿಸ್ ಉಂಟಾಗುತ್ತದೆ. ಇದು ಪ್ರಗತಿಯಾದಂತೆ ಪಿತ್ತಕೋಶದ ಗಾತ್ರ ಹೆಚ್ಚಾಗಿ ಮತ್ತಷ್ಟು ಪರಿಸ್ಥಿತಿ ಹದಗೆಡುತ್ತದೆ. ಚಲಿಸುವ ಪಿತ್ತಕೋಶದ ಕಲ್ಲು ಆಗೊಮ್ಮೆ ಈಗೊಮ್ಮೆ ಭಾಗಶಃ ಅಡ್ಡಿವುಂಟು ಮಾಡಬಹುದು.

ಲಕ್ಷಣಗಳು :

ಹೊಟ್ಟೆನೋವು : ಹೊಟ್ಟೆಯ ಬಲ ಮೇಲ್ಬಾಗದಲ್ಲಿ ತೀವ್ರವಾದ ಮತ್ತು ಥಟ್ಟನೆ ಕಾಡುವಂತಹ ಹೊಟ್ಟೆನೋವು ಅತ್ಯಂತ ಪ್ರಮುಖವಾದ ಚಿಹ್ನೆಯಾಗಿರುತ್ತದೆ. ಈ ಅನಾನುಕೂಲವನ್ನು ಬಿಲಿಯರಿ ಕೋಲಿಕ್ ಎಂದು ಹೇಳಲಾಗುತ್ತದೆಯಲ್ಲದೆ, ಇದು ಬೆನ್ನು ಅಥವಾ ಬಲ ಭುಜದ ಭಾಗಕ್ಕೆ ಹರಡಬಹುದು. ಸಾಮಾನ್ಯವಾಗಿ ರಾತ್ರಿಯ ಭೋಜನ ಅಥವಾ ಯಾವುದೇ ಹೊಟ್ಟೆ ತುಂಬುವಂತಹ ಊಟ ಮಾಡಿದ ನಂತರ ಈ ನೋವಿನ ಅನುಭವ ಉಂಟಾಗಬಹುದು. ಈ ನೋವು ಹಲವು ನಿಮಿಷಗಳು ಅಥವಾ ಗಂಟೆಗಳವರೆಗೆ ಇರಬಹುದು

ವಾಕರಿಕೆ ಮತ್ತು ವಾಂತಿ : ವ್ಯಕ್ತಿಗಳಿಗೆ ಗಮನಾರ್ಹವಾದ ಪಚನಕ್ರಿಯೆಯಲ್ಲಿನ ಒತ್ತಡದ ಅನುಭವವಾಗಬಹುದು. ಇದರಿಂದ ಪದೇ ಪದೇ ವಾಕರಿಕೆ ಮತ್ತು ವಾಂತಿಯಾಗುವುದಕ್ಕೆ ದಾರಿಯಾಗಬಹುದು.

ಅಜೀರ್ಣ ಮತ್ತು ಹೊಟ್ಟೆ ಉಬ್ಬಿಕೊಳ್ಳುವುದು : ದೀರ್ಘಕಾಲದ ಅಜೀರ್ಣ, ಹೊಟ್ಟೆ ಉಬ್ಬಿಕೊಳ್ಳುವುದು ಮತ್ತು ವಾಯು ಪ್ರಕೋಪಗಳು ಅತ್ಯಂತ ಸಾಮಾನ್ಯವಾಗಿದ್ದು, ಪಿತ್ತರಸದ ಹರಿವಿಗೆ ಅಡ್ಡಿವುಂಟಾಗಿ ಕೊಬ್ಬಿನ ಅಂಶಗಳು ಸೂಕ್ತ ರೀತಿಯಲ್ಲಿ ಪಚನವಾಗದೆ ಇರುವುದರ ಲಕ್ಷಣಗಳು ಇವುಗಳಾಗಿರುತ್ತವೆ.

ಜ್ಯಾಂಡೀಸ್ (ಕಾಮಾಲೆ) : ಪಿತ್ತಜನಕಾಂಗದ ಕಲ್ಲು ಪಿತ್ತನಾಳದ ಒಳಗೆ ತಲುಪಿದಲ್ಲಿ ಅದು ಸಣ್ಣ ಕರುಳಿಗೆ ಪಿತ್ತರಸ ಹರಿಯುವುದನ್ನು ತಡೆಯಬಹುದು. ಅಲ್ಲದೆ, ಈ ರಸ ಮರಳಿ ಪಿತ್ತಜನಕಾಂಗದ ಕಡೆಗೆ ಹರಿಯುವಂತೆ ನಂತರ ಅದು ರಕ್ತದಲ್ಲಿ ಸೇರುವಂತೆ ಮಾಡಬಹುದಾಗಿದ್ದು, ಇದರಿಂದ ಜ್ಯಾಂಡಿಸ್‌ಗೆ ದಾರಿಯಾಗುತ್ತದೆ.

ಜ್ವರ ಮತ್ತು ನಡುಕ : ಹೊಟ್ಟೆನೋವಿನ ಜೊತೆಗೆ ಜ್ವರ ಮತ್ತು ಮೈ ನಡುಕ ಇದ್ದಲ್ಲಿ ಇದು ಕೋಲಾಂಜೈಟಿಸ್ ಎನ್ನಲಾಗುವ ಹೆಚ್ಚು ತೀವ್ರವಾದ ಸೋಂಕನ್ನು ಸೂಚಿಸಬಹುದು. ಇದಕ್ಕೆ ತಕ್ಷಣ ವೈದ್ಯಕೀಯ ಗಮನದ ಅಗತ್ಯವಿರುತ್ತದೆ.

ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಯಾವಾಗ ಪರಿಗಣಿಸಬಹುದು

ಕೋಲೆಸಿಸೈಟಿಸ್‌ ತೊಂದರೆಗೆ ಚಿಕಿತ್ಸೆ ನೀಡುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದರೆ ಅದು ಪಿತ್ತಕೋಶವನ್ನು ತೆಗೆದುಹಾಕುವ ಕ್ರಮವಾಗಿರುತ್ತದೆ. ಆದರೆ, ಪಿತ್ತಕೋಶದ ಕಲ್ಲುಗಳಿಂದಲ್ಲದೆ, ಬೇರೆ ರೀತಿಯಿಂದ ಸೋಂಕು ಉಂಟಾಗಿ ಕೋಲೆಸಿಸೈಟಿಸ್ ಬಂದಿದ್ದ ಪ್ರಕರಣದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗದೆ ಇರಬಹುದು. ಪಿತ್ತಕೋಶದ ದೀರ್ಘಕಾಲದ ಉರಿಯೂತ ಹಾಗೂ ತೀವ್ರ ಕೋಲಿಸಿಸೈಟಿಸ್‌ನ ಚಿಹ್ನೆ ಇಲ್ಲದಿರುವುದರ ಪ್ರಕರಣದಿಂದಲೂ ಕೂಡ ಹಾನಿಕಾರಕ ಪರಿಣಾಮಗಳು ಪಿತ್ತಕೋಶದ ಮೇಲೆ ಉಂಟಾಗಿ ಇದರಿಂದ ಗಾಯಗಳು ಉಂಟಾಗಬಹುದಲ್ಲದೆ, ಪಿತ್ತಕೋಶದ ಕಾರ್ಯಲೋಪ ಕಂಡುಬರಬಹುದು.

ಒಂದು ಸೆಂಟಿಮೀಟರ್ ವ್ಯಾಸಕ್ಕೂ ಹೆಚ್ಚಿನ ಗಾತ್ರವಿರುವ ದೊಡ್ಡ ಗಡ್ಡೆ ಅಥವಾ ಚೀಲಗಳು ಪಿತ್ತಕೋಶದ ಗೋಡೆಗಳಲ್ಲಿ ಇದ್ದಲ್ಲಿ, ಇದು ಪಿತ್ತಕೋಶದ ಕ್ಯಾನ್ಸರ್‌ನ ಉನ್ನತ ಅಪಾಯಕ್ಕೆ ದಾರಿ ಮಾಡಿಕೊಡಬಹುದಾಗಿದ್ದು, ಕೋಲೆಸಿಸ್ಟೆಕ್ರೋಮಿ ಕೈಗೊಳ್ಳಬೇಕಾಗುವುದನ್ನು ಸೂಚಿಸುತ್ತವೆ. ದೈಹಿಕ ಪರೀಕ್ಷೆಗಳು, ರಕ್ತ ತಪಾಸಣೆಗಳು ಮತ್ತು ಅಲ್ವಾಸೌಂಡ್ ಅಥವಾ ಸಿಟಿ ಸ್ಕ್ಯಾನ್‌ನಂತಹ ಪರೀಕ್ಷೆಗಳು ಸೇರಿದಂತೆ ಕೂಲಂಕಷವಾಗಿ ವೈದ್ಯಕೀಯ ಮೌಲೀಕರಣಗಳನ್ನು ನಡೆಸಿ ನಿಮ್ಮ ಲಕ್ಷಣಗಳ ಕಾರಣಗಳನ್ನು ನಿರೂಪಿಸಬಹುದು. ರೋಗನಿರ್ಣಯಗಳನ್ನು ಆಧರಿಸಿ ಪಿತ್ತಕೋಶದ ಶಸ್ತ್ರಚಿಕಿತ್ಸೆ(ಕೋಲೆಸಿಸ್ಪೆಕ್ಟೋಮಿ)ನಡೆಸಲು ವೈದ್ಯರು ಶಿಫಾರಸ್ಸು ಮಾಡಬಹುದು.

ಹೀಗಾಗಿ, ಶಸ್ತ್ರಕ್ರಿಯೆ ಮೂಲಕ ಪಿತ್ತಕೋಶವನ್ನು ತೆಗೆಯುವ ಅವಶ್ಯಕತೆಯನ್ನು ಮೌಲೀಕರಿಸಲು ಪಿತ್ತಕೋಶದ ಕಲ್ಲುಗಳು ಮತ್ತು ಕೋಲೆಸಿಸೈಟಿಸ್‌ನ ಸೂಚಕಗಳನ್ನು ಗುರುತಿಸುವುದು ಮುಖ್ಯವಾಗಿರುತ್ತದೆ. ಈ ಮೇಲೆ ಹೇಳಿದ ಯಾವುದೇ ಲಕ್ಷಣಗಳ ಅನುಭವ ನಿಮಗೆ ಆಗಿದ್ದಲ್ಲಿ ತಕ್ಷಣ ವೈದ್ಯರೊಂದಿಗೆ ಸಮಾಲೋಚಿಸುವುದು ಒಳಿತು. ಕೋಲೆಸಿಸ್ಪೆಕ್ಟೋಮಿ ಸಾಮಾನ್ಯವಾದ ಶಸ್ತ್ರಚಿಕಿತ್ಸೆಯಾಗಿದ್ದು, ಕಡಿಮೆ ಅಪಾಯ ಇರುತ್ತದೆ. ಜೊತೆಗೆ ವ್ಯಕ್ತಿಯ ಜೀವವನ್ನು ಉಳಿಸುವುದಲ್ಲದೆ, ಜೀವನದ ಗುಣಮಟ್ಟವನ್ನು ಬಹಳಷ್ಟು ಸುಧಾರಿಸಬಹುದು. ಪಿತ್ತಕೋಶವನ್ನು ಕಾಡುತ್ತಿರುವ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಈ ಮೇಲೆ ಹೇಳಿದ ತೊಂದರೆಗಳು ಉಂಟಾಗದಂತೆ ತಡೆಯುವುದು ಮತ್ತು ಶೀಘ್ರ ರೋಗನಿರ್ಣಯ ಕೈಗೊಳ್ಳುವುದು ಮುಖ್ಯವಾಗಿರುತ್ತದೆ.

Dr. Manas Ranjan Tripathy, Laparoscopy and Minimal Access Surgery, Apollo Spectra Hospital, Bengaluru

ಡಾ. ಮಾನಸ್ ರಂಜನ್ ತ್ರಿಪಾಠಿ
ಲ್ಯಾಪರೊಸ್ಕೋಪಿ ಮತ್ತು ಮಿನಿಮಲ್ ಆಕ್ಸೆಸ್ ಸರ್ಜರಿ
ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆ, ಬೆಂಗಳೂರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!