ಒತ್ತಡ ಮತ್ತು ದೈಹಿಕ ಕಾಯಿಲೆ

ಒತ್ತಡ ಮತ್ತು ದೈಹಿಕ ಕಾಯಿಲೆ ಮನಸ್ಸಿನ ಭಾವದಲ್ಲಿನ ಸ್ಥಿತ್ಯಂತರಗಳನ್ನು ಹುಟ್ಟಿಸಿ, “ಮೂಡ್” ಹಾಳುಮಾಡಬಹುದು. ದೇಹದ ಫಿಟ್ನೆಸ್ ಎಷ್ಟು ಮುಖ್ಯವೋ, ಮನಸ್ಸಿನ ಫಿಟ್ನೆಸ್ ಅಷ್ಟೇ ಪ್ರಾಮುಖ್ಯ.

ottada-mattu-dyhika-kayile/ಒತ್ತಡ ಮತ್ತು ದೈಹಿಕ ಕಾಯಿಲೆ

ಒತ್ತಡವು ದೇಹದಲ್ಲಿರುವ “ಲಿಂಪೋಸೈಟ್” ಗಳೆಂಬ ಸಹಜ ರಕ್ಷಕ ಕೋಶಗಳನ್ನು ಕಡಿಮೆ ಮಾಡುತ್ತದೆ. ಆಗ ವೈರಸ್, ಬ್ಯಾಕ್ಟೀರಿಯಾ ಗಳಂತಹ ಸೂಕ್ಷ್ಮಾಣುಗಳೊಂದಿಗೆ ಹೋರಾಟ ಮಾಡುವ ದೇಹದ ಸಾಮರ್ಥ್ಯ ಕುಗ್ಗುತ್ತದೆ. ಇದನ್ನು ಅಮೇರಿಕನ್ ಸೈಕಾಲಜಿಕಲ್ ಅಸೋಶಿಯೇಶನ್ ವರದಿ ಮಾಡಿದೆ. ಒತ್ತಡದಿಂದ ಇನ್ಫ್ಲಮ್ಮೇಶನ್( ಉರಿಯೂತ) ದೇಹದಲ್ಲಿ ವ್ಯಾಪಕವಾಗಿ ಬೇರೂರುತ್ತದೆ. ದೀರ್ಘಾವಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರಕ್ತನಾಳಗಳ ಒಳ ಗೋಡೆಗಳಲ್ಲಿ “ಪ್ಲೇಕ್” ( ರಕ್ತನಾಳಗಳ ಒಳ ಅವಕಾಶವನ್ನು ಕಡಿಮೆಗೊಳಿಸುವ ಅನಗತ್ಯ ಹಾನಿಕಾರಕ ಪದರ) ನಿರ್ಮಾಣವಾಗುತ್ತದೆ. ಒತ್ತಡದಿಂದ ಹಾರ್ಮೋನುಗಳ ಏರುಪೇರು ಉಂಟಾಗುತ್ತದೆ. “ಕಾರ್ಟಿಸಾಲ್” ಎಂಬ ಒತ್ತಡದ ಸಂದರ್ಭದಲ್ಲಿ ದೇಹವು ಒತ್ತಡವನ್ನು ನಿಭಾಯಿಸಲು ಉಂಟುಮಾಡುವ ಹಾರ್ಮೋನ್. ಅದರ ಪ್ರಮಾಣ ವಿಪರೀತವಾಗಿ ಏರತೊಡಗುವುದು. ಪರಿಣಾಮವಾಗಿ ಉರಿಯೂತದ ಪ್ರಭಾವವನ್ನು ನಿಭಾಯಿಸುವ ದೈಹಿಕ ಸಾಮರ್ಥ್ಯ ಕುಗ್ಗ ತೊಡಗಿ, ನಿರಂತರ ಸೂಕ್ಷ್ಮಾಣು ಸೋಂಕುಗಳಿಗೆ ದೇಹವು ಗುರಿಯಾಗುವುದು.

ಮನೋದೈಹಿಕ ರೋಗಗಳಲ್ಲಿ ಈ ಕೆಳಗಿನವು ಪ್ರಮುಖವಾದವು-

1. ಕಾರ್ಡಿಯೋ ವ್ಯಾಸ್ಕುಲರ್- ರಕ್ತದ ಒತ್ತಡ, ಹೃದಯದ ಕೊರೊನರಿ ರಕ್ತನಾಳಗಳ ರಕ್ತ ಸಂಚಾರದಲ್ಲಿ ಅಡಚಣೆ
2. ಜೀರ್ಣಾಂಗವ್ಯೂಹ- ಇರಿಟೇಬಲ್ ಬೋವೆಲ್ ಸಿಂಡ್ರೋಮ್( ಕರುಳಿನ ಕಿರಿಕಿರಿ ಕಾಯಿಲೆ)
3. ಶ್ವಸನ ವ್ಯವಸ್ಥೆ- ಆಸ್ತಮಾ, ಅಲರ್ಜಿ
4. ಮೂಳೆ ಮತ್ತು ಮಾಂಸ ಪೇಶಿ- ಬೆನ್ನು ನೋವು, ಒತ್ತಡದಿಂದ ಉಂಟಾಗುವ ತಲೆನೋವು
5. ಚರ್ಮ- ಮೊಡವೆಗಳು, ಎಕ್ಸಿಮಾ, ಸೋರಿಯಾಸಿಸ್

1950 ರಲ್ಲಿ ಫ್ರಾನ್ಸ್ ಅಲೆಗ್ಸಾಂಡರ್ ಎಂಬ ಮನೋವಿಶ್ಲೇಷಕ ನಿರ್ದಿಷ್ಟವಾದ ಸುಪ್ತ ಮನಸ್ಸಿನ ಆತಂಕ ಮತ್ತು ಗೊಂದಲಗಳು ವಿವಿಧ ಕಾಯಿಲೆಗಳಿಗೆ ಕಾರಣ ಎಂಬ ಸಿದ್ಧಾಂತವನ್ನು ಮಂಡಿಸಿದ. ಅದುಮಿ ಹಿಡಿದ ಕೋಪವು ರಕ್ತದೊತ್ತಡವನ್ನು, ಅಗಲುವಿಕೆಯ ಆತಂಕವು ಅಸ್ತಮಾವನ್ನು, ಪರಾವಲಂಬಿತ್ವದ ಖಿನ್ನತೆಯು ಜಠರದ ಹುಣ್ಣನ್ನು ಉಂಟುಮಾಡುತ್ತದೆ ಎಂದು ಪ್ರತಿಪಾದಿಸಿದ್ದ. ಆದರೆ ಆ ಕಾಲಕ್ಕೆ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಕೋಪವು ಕಾರಣ ಎಂಬುದಕ್ಕೆ ಸಂಶೋಧನೆಯ ರುಜುವಾತು ಸಿಕ್ಕಿರಲಿಲ್ಲ. ವರ್ಷಗಳ ನಂತರ ಫ್ರೀಡ್ ಮಾನ್ ಮತ್ತು ಬೂತ್ ಕ್ಯುಲಿ ಎಂಬವರು 1987 ನಲ್ಲಿ 101 ಅಧ್ಯಯನಗಳನ್ನು ಕಾಯಿಲೆ ಮತ್ತು ವ್ಯಕ್ತಿತ್ವದ ಸಂಬಂಧಗಳ ಕುರಿತಾಗಿ ಮಾಡಿದರು. ಖಿನ್ನತೆ ( ಡಿಪ್ರೆಶನ್), ಕೋಪ ಮತ್ತು ದ್ವೇಷ, ಆತಂಕ ಇರುವಂತಹ 61000 ನಾರ್ವೆ ದೇಶದ ಪ್ರಜೆಗಳನ್ನು ಅಧ್ಯಯನಕ್ಕೆ ಆಯ್ದುಕೊಂಡರು. ಪರಿಣಾಮವಾಗಿ, ಮರಣ ತರುವಂತಹ, ದೊಡ್ಡದೊಡ್ಡ ದೈಹಿಕ ಕಾಯಿಲೆಗಳಲ್ಲಿ ‘ ಡಿಪ್ರೆಶನ್ ‘ನ ಪಾತ್ರವನ್ನು ಕಂಡುಕೊಂಡರು.

Also Read: ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ?

ಕೆಲವೊಂದು ಸಲ ನಮ್ಮ ರಕ್ಷಣಾ ವ್ಯವಸ್ಥೆ ಆಗಿರುವ ರೋಗನಿರೋಧಕ ವ್ಯವಸ್ಥೆಯು ಅಡ್ಡಾದಿಡ್ಡಿ ಕೆಲಸ ಮಾಡುವುದಕ್ಕೆ ತೊಡಗುತ್ತದೆ. ವಿಚಿತ್ರ ಸಂಗತಿಯೆಂದರೆ, ಕೆಲವು ಸಲ ನಮ್ಮ ದೇಹದ ಆರೋಗ್ಯವಂತ ಕೋಶಗಳನ್ನು ಪರಕೀಯ ಕೋಶಗಳೆಂದು ಬಗೆದು ಅವುಗಳ ಮೇಲೆ ದಾಳಿ ಮಾಡುವುದಕ್ಕೆ ತೊಡಗುತ್ತದೆ. ಇದನ್ನೇ ನಾವು ವೈದ್ಯಕೀಯವಾಗಿ ಆಟೊಇಮ್ಯೂನ್ ಕಾಯಿಲೆ ಎಂದು ಕರೆಯುತ್ತೇವೆ. ಸಹ ಮಾನವರನ್ನು ನಮ್ಮ ಶತ್ರುಗಳೆಂದು ಬಗೆದು ಅವರನ್ನು ದ್ವೇಷಿಸುವ, ಹಿಂಸಿಸುವ ನಮ್ಮದೇ ಮನಸ್ಸಿನ ಪ್ರವೃತ್ತಿಯ ಪ್ರತಿಫಲನದಂತೆ ಇದು ಕಾಣಿಸಿಕೊಳ್ಳುತ್ತದೆ.

ಕೆಲವನ್ನು ಇಲ್ಲಿ ಉದಾಹರಿಸಬಹುದು. ‘ರುಮಾಟಾಯ್ಡ್ ಆರ್ಥೈಟಿಸ್‘ ನಲ್ಲಿ ಸಂಧಿಗಳ ವಿಕೃತಿಗೆ ಕಾರಣವಾಗಿ ಗಂಟು ನೋವು, ಗಂಟುಗಳ ಚಲನೆ ಕಷ್ಟವಾಗುವುದು. ‘ಸಿಸ್ಟಮಿಕ್ ಲೂಪಸ್ ಎರಿಥಿಮಾಟೋಸಸ್ ‘ ನಲ್ಲಿ ಚರ್ಮದಲ್ಲಿ ಗಂಧೆಗಳು ಕಾಣಿಸಿಕೊಂಡು ಊದಿಕೊಳ್ಳುವುದು, ನೋವಿನಿಂದ ಕೂಡಿದ ಊದಿಕೊಂಡ ಗಂಟುಗಳು, ಜ್ವರ, ಎದೆ ನೋವು, ಕೂದಲು ಉದುರುವುದು, ಬಾಯಿ ಹುಣ್ಣು, ಲಿಂಫ್ ನೋಡ್ ಊದಿಕೊಳ್ಳುವುದು. ಗ್ರೇವ್ಸ್ ಕಾಯಿಲೆಯಲ್ಲಿ ಥೈರಾಯಿಡ್ ಗ್ರಂಥಿಯ ವೈಪರೀತ್ಯದಿಂದ ಸುಸ್ತು, ತೂಕ ಕಳೆದುಕೊಳ್ಳುವುದು, ಥೈರಾಯ್ಡ್ ಗ್ರಂಥಿ ಗಾತ್ರದಲ್ಲಿ ದೊಡ್ಡದಾಗುವುದು, ಥೈರಾಯಿಡ್ ಹಾರ್ಮೋನ್ ಪ್ರಮಾಣ ಅಧಿಕವಾಗುವುದು, ಮಾನಸಿಕ ಕಿರಿಕಿರಿ, ಮಾಂಸಖಂಡಗಳ ಶಕ್ತಿ ಕುಂದುವುದು, ಏರಿದ ಎದೆಬಡಿತ, ನಿದ್ರೆಯ ಸಮಸ್ಯೆಗಳು, ಅತಿ ಸಾರ,ಮಾಂಸಖಂಡಗಳ ಸೆಳೆತ ಕಾಣಿಸಿಕೊಳ್ಳುವುದು. , ನಡುಕ, ಅತಿಯಾದ ಬೆವರುವಿಕೆ ಲಕ್ಷಣಗಳು.

Dr-R.P.-Bangaradka-Prasadini-Ayurnikethana.

ಒತ್ತಡದಿಂದಾಗಿ ಕರುಳಿನ “ಪರ್ಮಿಯೇಬಿಲಿಟಿ ” ಹೆಚ್ಚುವುದು. ಇದರಿಂದಾಗಿ ಶರೀರಕ್ಕೆ ಬೇಕಾದ ಪೌಷ್ಟಿಕಾಂಶಗಳು ಮಾತ್ರವಲ್ಲದೆ ಇತರ ಹಾನಿಕಾರಕ, ಉರಿಯೂತಕಾರಕ, ವಿಷಕಾರಕ ಅಂಶಗಳನ್ನು ಕರುಳಿನ ಗೋಡೆಯು ರಕ್ತಕ್ಕೆ ಸೇರಿಸಲು ಅನುವು ಮಾಡಿಕೊಡುವುದು. ಕ್ರಾನ್ಸ್ ಕಾಯಿಲೆಯಲ್ಲಿ , ಆಹಾರದ ಅಲರ್ಜಿ ಯಲ್ಲಿ ಇದರ ಪಾತ್ರವು ಪ್ರಮುಖ. ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾದ ಜೀರ್ಣಾಂಗವ್ಯೂಹದ ಉರಿಯೂತ, ಅಲ್ಸರೇಟಿವ್ ಕೊಲೈಟಿಸ್, ಆಘಾತ ಮತ್ತು ಸೋಂಕಿನಿಂದ ಉಂಟಾದ ಬಹುಅಂಗಾಂಗ ವೈಫಲ್ಯ ಇತ್ಯಾದಿಗಳಲ್ಲೂ ಇದರ ಪಾತ್ರವಿದೆ. ಕರುಳು ಈ ರೀತಿಯಲ್ಲಿ ಅನಗತ್ಯವಾದ, ಅಪಾಯಕಾರಿ ಅಂಶಗಳನ್ನು ರಕ್ತಕ್ಕೆ ಬಿಟ್ಟುಕೊಡುವ ಸ್ಥಿತಿಯೇ “ಲೀಕಿ ಗಟ್ ಸಿಂಡ್ರೋಮ್”. ಅಂದರೆ ಕರುಳಿನ ಸೋರುವಿಕೆ! ಇದು ವಿಜ್ಞಾನಿಗಳ ಇಂದಿನ ಆಸಕ್ತಿಯ ವಿಷಯ.

ಒತ್ತಡವು ಮೆದುಳು ಮತ್ತು ಜೀರ್ಣಾಂಗವ್ಯೂಹದ ಸಂವಹನವನ್ನು ವ್ಯತ್ಯಾಸ ಗೊಳಿಸಿ ಕರುಳನ್ನು ಈ ಸ್ಥಿತಿಗೆ ನೂಕಬಹುದು. ಪರಿಣಾಮವಾಗಿ, ತಿರುಗಿ ಮನಸ್ಸಿನ ಭಾವದಲ್ಲಿನ ಸ್ಥಿತ್ಯಂತರಗಳನ್ನು ಹುಟ್ಟಿಸಿ, “ಮೂಡ್” ಹಾಳುಮಾಡಬಹುದು. ಆದ ಕಾರಣದಿಂದಲೇ ಆಯುರ್ವೇದದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ದಂಭ, ದ್ವೇಷ, ಅಸೂಯೆ ಇತ್ಯಾದಿಗಳನ್ನು ಧಾರಣೀಯ ವೇಗಗಳು ಎಂದು ಕರೆದದ್ದು. ಅವುಗಳು ಕೂಡ ಮಾನಸಿಕ ಕಾಯಿಲೆಗಳು ಎಂಬುದಾಗಿ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅಂದರೆ ಇದು ಮನಸ್ಸು ತ್ಯಜಿಸಬೇಕಾದ ಸಂಗತಿಗಳು. ಸಹಿಸಬೇಕಾದ ಸಂಗತಿಗಳು. ಅಂದರೆ ಅದುಮಿಟ್ಟುಕೊಳ್ಳುವುದು ಅಲ್ಲ, ಮನಸ್ಸನ್ನು ಉದಾರೀಕರಿಸಿ, ಅಂತಹ ಭಾವನೆಗಳಿಗೆ ಸ್ಥಾನ ಕೊಡದೇ ಇರುವುದು.

ಈಗ ಅರ್ಥವಾಯಿತಲ್ಲವೇ?
ದೇಹದ ಫಿಟ್ನೆಸ್ ಎಷ್ಟು ಮುಖ್ಯವೋ, ಮನಸ್ಸಿನ ಫಿಟ್ನೆಸ್ ಅಷ್ಟೇ ಪ್ರಾಮುಖ್ಯ.

dr-prasad-bangaradka

ಡಾ. ಆರ್. ಪಿ. ಬಂಗಾರಡ್ಕ.
ಆಡಳಿತ ನಿರ್ದೇಶಕರು, ಆಯುರ್ವೇದ ತಜ್ಞ ವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು ದ.ಕ..- 574202
www.prasadini.com
mob:9740545979

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!