ಒಮಿಕ್ರಾನ್ ವೈರಾಣು ಭಯಪಡಬೇಡಿ ಎಚ್ಚರಿಕೆಯಿಂದಿರಿ. ಒಮಿಕ್ರಾನ್ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದುವರೆಗೂ ಒಂದೂ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆದರೆ, ಅನಗತ್ಯ ಭಯ–ಭೀತಿಗಳು ಬೇಡ. ಚಿತ್ರಮಂದಿರ, ಹೋಟೆಲ್, ಮಾಲ್ ಗಳಂತಹ ಜನಸಂದಣಿ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು.
* ಪ್ರತಿ ಆರು ಅಥವಾ ಒಂಬತ್ತು ತಿಂಗಳಿಗೆ ರೂಪಾಂತರ ಹೊಂದುವ ಕೊರೋನಾ ವೈರಾಣು
* ಡೆಲ್ಟಾಗಿಂತ ವೇಗವಾಗಿ ಹರಡುವ ಒಮಿಕ್ರೋನ್
* ಸೋಂಕು ಹೆಚ್ಚಾಗುವ ಸಾಧ್ಯತೆ
ಒಮಿಕ್ರೋನ್ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರನೇ ಅಲೆ ಶುರುವಾಗಲಿದೆಯೇ ಎಂಬ ಭೀತಿ ಉಂಟಾಗಿದೆ. ಕೋವಿಡ್ನೊಂದಿಗೆ ಬದುಕಲು ಕಲಿಯಬೇಕು ಎಂಬ ಸಿದ್ಧಾಂತದಂತೆಯೇ ಸಂಪೂರ್ಣ ವಿಶ್ವವೇ ಸಿದ್ಧಗೊಂಡು ತಮ್ಮ ಎಂದಿನ ಜೀವನ ಕ್ರಮಕ್ಕೆ ಮರಳಿದ ಇದೇ ಸಂದರ್ಭದಲ್ಲಿ ಹೊಸ ರೂಪಾಂತರ ಓಮಿಕ್ರಾನ್ (Omicron) ವಿಶ್ವವನ್ನೇ ತಲ್ಲಣಗೊಳಿಸಿದೆ. ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ನಿಂದಾಗಿ ಅಕ್ಟೋಬರ್ ಅಥವಾ ಸೆಪ್ಟೆಂಬರ್‌ನಲ್ಲಿ ಮೂರಲೇ ಅಲೆ ಉಂಟಾಗಬಹುದು ಎಂಬ ಭೀತಿ ಇತ್ತು. ಆದರೆ, ಡೆಲ್ಟಾ ಪ್ಲಸ್ ರಾಜ್ಯದ ಮೇಲೆ ಅಷ್ಟು ಗಂಭೀರ ಪರಿಣಾಮ ಬೀರಲಿಲ್ಲ. ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರಿಕೆಯಾದರೂ ರಾಜ್ಯದಲ್ಲಿ ಏರಿಕೆಯಾಗಿರಲಿಲ್ಲ. ಇದೀಗ ರೂಪಾಂತರಿ ಒಮಿಕ್ರೋನ್ ಸೋಂಕು ವರದಿಯಾಗಿರುವುದರಿಂದಾಗಿ ಹಾಗೂ ಯಾವುದೇ ಪ್ರವಾಸದ ಇತಿಹಾಸ ಇಲ್ಲದ ವ್ಯಕ್ತಿಯಲ್ಲೂ ದೃಢಪಟ್ಟಿರುವುದರಿಂದ ಸೋಂಕು ತೀವ್ರವಾಗಿ ಹರಡುವ ಆತಂಕ ಎದುರಾಗಿದೆ. ಸೋಂಕು ತೀವ್ರವಾಗಿ ಹರಡಿದರೆ ಮೂರನೇ ಅಲೆಗೆ ಒಮಿಕ್ರೋನ್ ಸೋಂಕೇ ಕಾರಣವಾಗ ಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೈರಾಣು ರೂಪಾಂತರ:
ಕೊರೋನಾ ವೈರಾಣು ಪ್ರತಿ ಆರು ಅಥವಾ ಒಂಬತ್ತು ತಿಂಗಳಿಗೆ ರೂಪಾಂತರ ಹೊಂದುತ್ತದೆ. ಇದು ವೈರಾಣುವಿನ ಸಹಜ ಗುಣವಾಗಿದ್ದು, ಈ ಹಿಂದೆ ಅಲ್ಫಾ, ಬೀಟಾ, ಡೆಲ್ಟಾ, ಡೆಲ್ಟಾ ಪ್ಲಸ್, ಕಾಪ ಮತ್ತು ಈಟ ಆಗಿ ರೂಪಾಂತರ ಹೊಂದಿತ್ತು. ಈ ಪೈಕಿ ಎರಡನೇ ಅಲೆಯಲ್ಲಿ ಡೆಲ್ಟಾ ಜನರನ್ನು ತೀವ್ರವಾಗಿ ಬಾಧಿಸಿತ್ತು. ಈಗ ಒಮಿಕ್ರೋನ್ ಬಂದಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಇದು ತೀವ್ರವಾಗಿಲ್ಲವಾದರೂ, ಡೆಲ್ಟಾಗಿಂತ ವೇಗವಾಗಿ ಹರಡುತ್ತದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನರು ಜಾಗೃತೆ ವಹಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಒಮಿಕ್ರೋನ್ ಜನರು ಗಾಬರಿ ಪಡುವ ಅಗತ್ಯವಿಲ್ಲ
ಒಮಿಕ್ರೋನ್ ವಿದೇಶದಿಂದಲೇ ಬರಬೇಕು ಎಂದೇನೂ ಇಲ್ಲ. ನಮ್ಮಲ್ಲೇ ರೂಪಾಂತರ ಆಗಿಯೂ ಇರಬಹುದು. ಹೀಗಾಗಿ ರಾಜ್ಯದಲ್ಲಿ ಒಮಿಕ್ರೋನ್ ಹರಡುವ ಸಾಧ್ಯತೆಯಿದ್ದು, ಕೊರೋನಾ ಲಸಿಕೆಯ ಮೂರನೇ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇದು ಸಕಾಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಮಂಜುನಾಥ್ ಹೇಳಿದ್ದಾರೆ.
ಕೊರೋನಾ ವೈರಸ್ ಪ್ರತಿ ಆರು, ಒಂಬತ್ತು ತಿಂಗಳಿಗೆ ರೂಪ ಬದಲಾಯಿಸುತ್ತ ಹೋಗುತ್ತದೆ. ರೂಪಾಂತರ ಗೊಳ್ಳುವುದು ವೈರಸ್‌ನ ಸಹಜ ಗುಣ. ಈ ಹಿಂದೆ ಅಲ್ಫಾ, ಬೀಟಾ, ಕಪ್ಪ ರೂಪಾಂತರ ಬಂತು. ಆ ಬಳಿಕ ಡೆಲ್ಟಾ ರೂಪಾಂತರ ಬಂತು. ಈಗ ಒಮಿಕ್ರೋನ್ ಬಂದಿದೆ. ಒಮಿಕ್ರೋನ್ ವೇಗವಾಗಿ ಹರಡುತ್ತದೆ ಆದರೆ ತೀವ್ರತೆ ಕಡಿಮೆ ಇದೆ. ಒಮಿಕ್ರೋನ್ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದಲ್ಲಿಯೂ(South Africa) ಸಾವಿನ ಪ್ರಮಾಣ, ಐಸಿಯು ದಾಖಲಾತಿ ಹೆಚ್ಚಾಗಿಲ್ಲ. ರಾಜ್ಯದ ಇಬ್ಬರು ಸೋಂಕಿತರು ಕೂಡ ಗುಣಮುಖರಾಗಿದ್ದಾರೆ. ಆದ್ದರಿಂದ ಜನರು ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಕೋವಿಡ್ ಮುನ್ಚೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು.
ಮುಂಜಾಗ್ರತಾ ಕ್ರಮ ಮತ್ತು ಹೊಸ ನಿಯಮಾವಳಿ
ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೊವಿಡ್ ಬೆಡ್, ಕಂಟ್ರೋಲ್ ರೂಂ, ಅಗತ್ಯ ಔಷಧಿಗಳನ್ನು, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವವರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ, ಮೆಟ್ರೋ ರೈಲು, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‍ಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಸಂತೆ ಮೈದಾನ ಸೇರಿದಂತೆ ಮತ್ತಿತರ ಕಡೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮ ಮತ್ತು ಹೊಸ ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಸರ್ಕಾರದ ಮಾರ್ಗಸೂಚಿ
* ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಸಮಾರಂಭಕ್ಕೆ ಅವಕಾಶವಿಲ್ಲ. 2022 ಜನವರಿ l5 ರವರೆಗೆ ಮುಂದೂಡಬೇಕು.
* ಸಿನಿಮಾ ಹಾಲ್, ಮಾಲ್‌ನಲ್ಲಿ, ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆದಿರಬೇಕು.
* ಮದುವೆಗಳಲ್ಲಿ 500ರೊಳಗೆ ಮಾತ್ರ ಜನ ಸೇರಬೇಕು.
* ಪ್ರತಿನಿತ್ಯ 1 ಲಕ್ಷ ಕೊವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚನೆ
* ಸರ್ಕಾರಿ ನೌಕರರಿಗೆ ಎರಡು ಡೋಸ್ ಕೋವಿಡ್ 9 ಲಸಿಕೆ ಕಡ್ಡಾಯ
* ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೇ ದಂಡ
* ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಚಕ್ ಪೋಸ್ಟ್.
ರಾಜಧಾನಿ ಬೆಂಗಳೂರಿನಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿರುವುದರಿಂದ ಇದು ವೇಗವಾಗಿ ಹಬ್ಬುವ ಸಾಧ್ಯತೆ ಇರುವುದರಿಂದ 10 ಗಂಟೆ ನಂತರ ಕಫ್ರ್ಯೂ ವಿಸುವ ಬಗ್ಗೆಯೂ ಸರ್ಕಾರ ಮರುಪರಿಶೀಲನೆ ನಡೆಸುವಂತೆ ತಜ್ಞರ ಸಮಿತಿ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಸಭೆ-ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಮದುವೆ, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಜನರು ಹೆಚ್ಚು ಗುಂಪುಗೂಡದಂತೆ ಈ ಹಿಂದೆ ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಅನುಸರಿಸಿದ ಕಾರ್ಯತಂತ್ರಗಳನ್ನೇ ಸರ್ಕಾರ ತೆಗೆದುಕೊಳ್ಳಬೇಕೆಂದು ಸೂಚಿಸಿದೆ.
ರಾಜ್ಯದಲ್ಲಿ ಇನ್ನೂ 45 ಲಕ್ಷ ಮಂದಿ ಎರಡನೆ ಲಸಿಕೆ ಪಡೆದಿಲ್ಲ. ಇಂತಹವರಿಗೆ ಕಡ್ಡಾಯವಾಗಿಯಾದರೂ ಸರಿಯೇ ಲಸಿಕೆ ನೀಡಬೇಕು. ಪ್ರತಿದಿನ ಟೆಸ್ಟಿಂಗ್ ಮತ್ತು ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು, ಕೋವಿಡ್ ವಾರಿಯರ್ಸ್‍ಗಳಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ತಜ್ಞರು ಹೇಳಿದ್ದಾರೆ.
ಜನರಿಗೆ ಓಮಿಕ್ರಾನ್ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸುವ ಬದಲು ಜಾಗೃತಿ ಮೂಡಿಸಲು ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಬೇಕು. ವಿಮಾನ ನಿಲ್ದಾಣದಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ತಜ್ಞ ವೈದ್ಯರನ್ನು ನಿಯೋಜನೆ ಮಾಡುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಹೇಳಿದ್ದಾರೆ.
ಭಯಪಡಬೇಡಿ ಎಚ್ಚರಿಕೆಯಿಂದಿರಿ:
ನಾವು ಜಾಗರೂಕರಾಗಿದ್ದು ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಆದರೆ ಹೆಚ್ಚು ಪ್ರತಿಕ್ರಿಯಿಸಬಾರದು. ಕೋವಿಡ್ ಸಂಬಂಧಪಟ್ಟಂತೆ ನಿಮ್ಮ ಮುತುವರ್ಜಿಗಳ ಮೇಲೆ ಗಮನಹರಿಸಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸ್ಯಾನಿಟೈಸೇಶನ್ ಮೊದಲಾದ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅಂತೆಯೇ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಓಮಿಕ್ರಾನ್ ರೂಪಾಂತರದಲ್ಲಿ S ಜೀನ್ ಇರುವುದಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ರೂಪಾಂತರದಲ್ಲಿ S ಜೀನ್ ಇರುವುದಿಲ್ಲ ಎಂದು ಹೇಳಿದೆ. ಈ ಹೊಸ ರೂಪಾಂತರದೊಂದಿಗೆ ಕಂಡುಬಂದ ವೈರಸಿನ ಲಕ್ಷಣಗಳೆಂದರೆ, ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ. ಇದು ಸೋಂಕಿತರಿಗೆ ತೀವ್ರ ಅನಾರೋಗ್ಯವನ್ನು ತಂದೊಡ್ಡಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ.