ಉದ್ಯಾನನಗರಿ ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ವೃದ್ದಾಶ್ರಮಗಳು ಸಹ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ನಗರದಲ್ಲಿ ವೃದ್ದರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವೃದ್ದಾಶ್ರಮಗಳು, ವೃದ್ದಾಲಯಗಳು, ಓಲ್ಡ್ ಏಜ್ ಹೋಮ್‍ಗಳು, ಮತ್ತು ಡೇ ಕೇರ್ ಸೆಂಟರ್‍ಗಳು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಆಧುನಿಕ ಜೀವನಶೈಲಿ ಮತ್ತು ಬದಲಾಗುತ್ತಿರುವ ಸಮಾಜ ದೃಷ್ಟಿಕೋನದಿಂದಾಗಿ ಬದುಕಿನಲ್ಲಿ ಸಂಬಂಧ-ಬಾಂಧವ್ಯದ ಬೆಸುಗೆಯ ಕೊಂಡಿ ಕಳಚಿಕೊಳ್ಳುತ್ತಿದೆ. ತಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯನ್ನು ಅಥವಾ ಪೋಷಕ-ಪಾಲಕರನ್ನು ನೋಡಿಕೊಳ್ಳಲು ಅವರ ಆರೈಕೆ ಮಾಡಲು ಅವರ ಬೇಕು-ಬೇಡಗಳನ್ನು ಆಲಿಸಲು ಮಕ್ಕಳಿಗೆ ಸಮಯದ ಅಭಾವ. ಆಧುನಿಕತೆಯ ಪ್ರಭಾವದಿಂದ ಪ್ರೀತಿ-ವಾತ್ಸಲ್ಯ, ಮಮತೆ-ಮಮಕಾರ, ವಿಶ್ವಾಸ-ಆತ್ಮೀಯತೆ ಮರೆಯಾಗುತ್ತಿದೆ. ನವೀನ ಜೀವನ ಕ್ರಮದಿಂದ ಸಂಬಂಧಗಳು ದೂರವಾಗುತ್ತಿದೆ.
ಹೆತ್ತವರ ಬಗ್ಗೆ ಮಕ್ಕಳ ನಿರ್ಲಕ್ಷ್ಯ
ಇಂಥ ಸಂದಿಗ್ಧ ಸಂದರ್ಭದಲ್ಲಿ, ಹೆತ್ತ ಮಕ್ಕಳ ತಾತ್ಸಾರ-ನಿರ್ಲಕ್ಷಕ್ಕೆ ಒಳಗಾಗಿ ಅವರಿಂದ ದೂರವಾಗಿ ಜೀವನ ನಡೆಸುವ ವಯಸ್ಸಾದ ಅಪ್ಪ-ಅಮ್ಮಂದಿರು ಮತ್ತು ವಯೋವೃದ್ದರಿಗೆ ವೃದ್ದಾಶ್ರಮಗಳೇ ಶಾಂತಿ ನೆಮ್ಮಡಿ ನೀಡುವ ಆಶ್ರಯ ತಾಣಗಳಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿನ ವೃದ್ದಾಶ್ರಮಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಜೀವನದಲ್ಲಿ ಎದುರಾಗುವ ನಾನಾ ರೀತಿಯ ಸಮಸೈಗಳು ಮತ್ತು ಕೆಲಸದ ಒತ್ತಡ ಆಧುನಿಕ ಜೀವನಶೈಲಿ, ಹೊಸ ಬದುಕಿನ ಕ್ರಮ-ವಿಧಾನಗಳಿಂದಾಗಿ, ಹೆತ್ತವರು ಮುಪ್ಪಿಗೆ ಹತ್ತಿರವಾಗುತ್ತಾ, ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ದರು ದೂರ ಹೋಗುತ್ತಾರೆ. ಹೀಗಾಗಿ ನಗರದಲ್ಲಿ ವ್ಯಾಪಾರ ಮನೋಭಾವ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರಗಳು ವiತ್ತು ಹೊರವಲಯಗಳಲ್ಲಿ ವೃದ್ದಾಶ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳಲು ಕಾರಣವಾಗಿದೆ.
ಆಧುನಿಕ ಜೀವನ ಶೈಲಿ ಮತ್ತು ಪಾಶ್ಚಿಮಾತ್ಯ ಸಂಸ್ಕøತಿ ಅನುಕರಣೆ ಭಾರತದ ಸಾಂಪ್ರಾದಾಯಕ ಕುಟುಂಬ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುತ್ತಿದೆ. ಹೆತ್ತು ಹೊತ್ತು ಸಾಕಿ ಸಲುಹಿದವರು, ಮಕ್ಕಳು ಬೆಳೆದು ದೊಡ್ಡವರಾಗಿ ಉದ್ಯೋಗಸ್ಥರಾಗುತ್ತಿದ್ದಂತೆ ಹೆತ್ತವರು ಒಂದು ರೀತಿಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಹೆತ್ತವರು ಒಂಟಿ ಜೀವನ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಒಂಟಿತನದ ಭಾವನೆ ವೃದ್ದರನ್ನು ಮುಪ್ಪಿನಂತೆ ಆವರಿಸಿಕೊಳ್ಳುತ್ತದೆ. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ವೃದ್ದರಿಗೆ ನೆಲೆ ಕಲ್ಪಿಸುವುದು ವೃದ್ಧಾಶ್ರಮ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಸ್ವ ಇಚ್ಚೆಯಿಂದ ವೃದ್ದಾಶ್ರಮ ಸೇರುವವರು ಸಂಖ್ಯೆ ಕಡಿಮೆ. ಮಕ್ಕಳು-ಸೊಸೆಯರ ನಿರ್ಲಕ್ಷ್ಯ, ಒತ್ತಾಯ ಮೊದಲಾದ ಕಾರಣಗಳಿಂದಾಗಿ ವೃದ್ದಾಶ್ರಮಕ್ಕೆ ಸೇರುವವರ ಸಂಖ್ಯೆ ಹೆಚ್ಚು ಎಂದು ಹೇಳಬಹುದು.
ವೃದ್ದಾಶ್ರಮಗಳಿಂದ ಹಣ ವಸೂಲಿ
ವೃದ್ದಾಶ್ರಮಕ್ಕೆ ಸೇರುವ ವೃದ್ದರು ತೋಡಿಕೊಳ್ಳುವ ಸಮಸ್ಯೆಗಳು ಹಲವಾರು. ಮಗ ಸೊಸೆ ಇಬ್ಬರು ಉದ್ಯೋಗಸ್ಥರಾಗಿರುವುದರಿಂದ ಮನೆ ಚಾಕರಿ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ವೃದ್ದರು ಸಿಲುಕುತ್ತಾರೆ. ಮಗ ಹೆಂಡತಿಯ ಪರ ವಹಿಸಿ ಮಾತನಾಡುತ್ತಾನೆ. ಇದರಿಂದಾಗಿ ವೃದ್ದರು ಏಕಾಂಗಿತನದ ಸುಳಿಗೆ ಸಿಲುಕುತ್ತಾರೆ. ಹೀಗಾಗಿ ವೃದ್ದಾಶ್ರಮ ಸೇರುವುದು ಅನಿವಾರ್ಯ. ಹೆತ್ತವರು ಮಕ್ಕಳಿಗೆ ಹೊರೆಯಾದ ಹಲವು ವೃದ್ದರು ಊಟೋಪಚಾರವಿಲ್ಲದೇ ನರಳುವ ಪಾಡಂತೂ ಹೇಳತೀರದು.
ಕೆಲವು ತಂದೆ-ತಾಯಂದಿರು ಮಗ-ಸೊಸೆಯ ಒತ್ತಡಕ್ಕೆ ಮಣಿದು ವೃದ್ದಾಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ವೃದ್ದಾಶ್ರಮಕ್ಕೆ ಅಪ್ಪ-ಅಮ್ಮನನ್ನು ಸೇರಿಸಿ ಕೈ ತೊಳೆದುಕೊಳ್ಳುವ ಮಗ ಸೊಸೆ ನಂತರ ಅವರ ಆರೋಗ್ಯ ಯೋಗಕ್ಷೇಮ, ಬೇಕು-ಬೇಡಗಳನ್ನು ವಿಚಾರಿಸುವ ಗೋಜಿಗೇ ಹೋಗದೆ ದಿವ್ಯ ನಿರ್ಲಕ್ಷ್ಯ ತೋರುತ್ತಾರೆ.
ಇನ್ನು ಬೆಂಗಳೂರಿನಲ್ಲಂತೂ ವೃದ್ದಾಶ್ರಮಗಳು, ಓಲ್ಡ್ ಏಜ್ ಹೋಮ್‍ಗಳು ಮತ್ತು ಡೇ ಕೇರ್‍ಗಳು ಸಹ ಉದ್ಯಮವಾಗಿ ಬೆಳೆಯುತ್ತಿದೆ. ಉದ್ಯಾನನಗರದಲ್ಲಿ ನೂರಕ್ಕೂ ಹೆಚ್ಚು ವೃದ್ದಾಶ್ರಮಗಳಿವೆ. ಕೆಲವು ವೃದ್ದಾಶ್ರಮಗಳು ಫಲಾನುಭವಿಗಳಿಂದ ಸಾಕಷ್ಟು ಹಣ ಪಡೆಯುತ್ತಿವೆ. ವೃದ್ದಾಶ್ರಮ ಎಂದ ಮಾತ್ರಕ್ಕೆ ಅಲ್ಲಿ ವೃದ್ದರು ಸುರಕ್ಷಿತವಾಗಿರುತ್ತಾರೆ ಎಂದು ಹೇಳಲಾಗದು. ಅನೇಕ ವೃದ್ದಾಶ್ರಮಗಳು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಸ್ವಚ್ಚತೆ, ನೈರ್ಮಲ್ಯ ಕಾಪಾಡುವಲ್ಲಿ ವೃದ್ದರ ಯೋಗಕ್ಷೇಮ ವಿಚಾರಿಸುವಲ್ಲಿ ಇವುಗಳು ವಿಫಲವಾಗಿವೆ.
ಹದಗೆಟ್ಟ ಕೌಟುಂಬಿಕ ವ್ಯವಸ್ಥೆ
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವ್ಯವಸ್ಸೆ ಹದಗೆಟ್ಟಿದೆ. ವೃದ್ದರ ಬಗ್ಗೆ, ಹಿರಿಯರ ಬಗ್ಗೆ ಕಿರಿಯರಲ್ಲಿ ಗೌರವವಿಲ್ಲ. ನಗರ ಪ್ರದೇಶಗಳಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ನ್ಯೂಕ್ಲಿಯರ್ ಕುಟುಂದ ಭಾವನೆ ಬೆಳೆಯುತ್ತಾ ವೃದ್ದರನ್ನು ದೂರ ಮಾಡುತ್ತಿದೆ. ಬಹುತೇಕ ಮನೆಗಳಲ್ಲಿ ವೃದ್ದರನ್ನು ತಾತ್ಸಾರ-ಉಪೇಕ್ಷೆ-ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಬೀದಿಗೆ ಬೀಳುವ ವೃದ್ದರಿಗೆ ಆಸರೆ ನೀಡುವುದೇ ವೃದ್ದಾಶ್ರಮಗಳು.
ಇನ್ನು ಪ್ರತಿ ಬಡಾವಣೆಗೆ ಒಂದರಂತೆ ಓಲ್ಡ್ ಏಜ್ ಹೋಮ್‍ಗಳು ಜನ್ಮ ತಾಳಿವೆ. ವೃದ್ದಾಶ್ರಮ, ಓಲ್ಡ್ ಏಜ್ ಹೋಮ್‍ಗಳು ವiತ್ತು ಡೇ ಕೇರ್ ಸೆಂಟರ್‍ಗಳು – ಹೀಗೆ ಶ್ರೀಮಂತರು, ಮಧ್ಯಮವರ್ಗದವರು ಮತ್ತು ಕೆಳವರ್ಗದ ವೃದ್ದರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಬಗೆ ಬಗೆಯ ಆಶ್ರಮಗಳು ಹುಟ್ಟುತ್ತಿವೆ. ತೀರಾ ಸಾಮಾನ್ಯ ವೃದ್ದಾಶ್ರಮದಿಂದ ಹೈಟೆಕ್ ಓಲ್ಡ್ ಏಜ್ ಹೋಮ್‍ಗಳವರೆಗೆ ಅನೇಕ ವೃದ್ದಾಶ್ರಮಗಳಿವೆ. ಆಶ್ರಯ, ಊಟೋಪಚಾರ, ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ಸೇವೆ ಕಲ್ಪಿಸುವ ವೃದ್ದಾಶ್ರಮಗಳು ಪ್ರತಿ ತಿಂಗಳಿಗೆ ಸಾವಿರಾರು ರೂ.ಗಳನ್ನು ವಸೂಲಿ ಮಾಡುತ್ತವೆ.
ವೃದ್ದಾಶ್ರಮ ಸೇವೆಗಳಲ್ಲಿ ಭಿನ್ನವಾದುದು ಡೇ ಕೇರ್ ಸೆಂಟರ್. ಜೀವನದ ಅಂತ್ಯದವರೆಗೂ ವೃದ್ದರು ಆಶ್ರಮದಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆ ಇಲ್ಲ. ಗಂಡ-ಹೆಂಡತಿ ಇಬ್ಬರೂ ಉದ್ಯೋಗದಲ್ಲಿದ್ದರೆ, ಈ ಸೇವೆ ಸೂಕ್ತ ಎನಿಸುತ್ತದೆ. ಮಗ-ಸೊಸೆ ಇಲ್ಲದ ಸಮಯದಲ್ಲಿ ಅವರನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳುತ್ತದೆ ಡೇ ಕೇರ್ ಸೆಂಟರ್. ಮನೆಯಿಂದ ಕಚೇರಿಗೆ ಹೋಗುವಾಗ ತಂದೆ ಅಥವಾ ತಾಯಿಯನ್ನು ಡೇ ಕೇರ್ ಕೇಂದ್ರಗಳಿಗೆ ಕಳುಹಿಸುತ್ತಾರ. ಸಂಜೆ ಮತ್ತೆ ಮನೆಗೆ ವಾಪಸ್ ಕರೆತರಲಾಗುತ್ತದೆ.
ಬೆಂಗಳೂರು ನಗರದ ಕೆಲವೆಡೆ ಡೇ ಕೇರ್ ಕೇಂದ್ರಗಳಿದ್ದು ಬೆಳಿಗ್ಗೆಯಿಂದ ಸಂಜೆವರೆಗೆ ವೃದ್ದರ ಯೋಗಕ್ಷೇಮ ನೋಡಿಕೊಳ್ಳಲಾಗುತ್ತದೆ. ಸಮಯ ಕಳೆಯಲು ಅವರು ಇಲ್ಲಿ ಪುಸ್ತಕ ಓದಬಹುದು. ಅನಾರೋಗ್ಯ ಪೀಡಿತರಾದರೆ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ. ವೃದ್ದಾಶ್ರಮಗಳು ಇಂದಿನ ಬದುಕಿನ ಜಂಜಾಟದ ನಡುವೆ ಉದ್ಯೋಗಸ್ಥ ಯುವ ಜನರ ಪಾಲಿಗೆ ಸ್ವಲ್ಪ ಭಾರ ಇಳಿಸುವ ಸಹಾಯ ಕೇಂದ್ರಗಳಾಗಿ ಕಂಡುಬಂದರೂ ಇದು ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆ ಮೇಲೆ ದುಷ್ಟರಿಣಾಮ ಬೀರುತ್ತದೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ಅಧ:ಪತನ ಎಂದೇ ಹೇಳಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ಅನುಭವಗಳನ್ನು ಬಳಸಿಕೊಳ್ಳಲು ಯತ್ನಿಸಬೇಕು. ಜೊತೆಗೆ ನ್ಯಾಯ ಒದಗಿಸುವಂತೆ ಮತ್ತು ಉತ್ತಮ ಆಡಳಿತ ಅಳವಡಿಸಿಕೊಂಡ ಕಡೆಗಳಲ್ಲಿ ಅವರನ್ನು ನೇಮಕ ಮಾಡಿಕೊಂಡು ಅವರ ಸೇವೆಯನ್ನು ಪಡೆಯುವ ಜೊತೆಗೆ, ಹಿರಿಯ ನಾಗರಿಕರನ್ನು ಸಕ್ರಿಯಗೊಳಿಸಿ ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳುವಂತೆ ಮಾಡಬಹುದಾಗಿದೆ. ಉದಾಹರಣೆಗೆ ಹಿರಿಯ ನಾಗರಿಕರನ್ನು ಸ್ಥಳೀಯ ಒಂಬುಡ್ಸ್‍ಮನ್, ಗ್ರಾಮ ರಕ್ಷಣಾ ಸಮಿತಿ, ಅರಣ್ಯ ಸಮಿತಿ, ಜ£ನಿರ್ವಹಣಾ ಸಮಿತಿಗಳಿಗೆ ನೇಮಕ ಮಾಡಿಕೊಳ್ಳಬಹುದು.
ಅನೇಕ ತಜ್ಞ ವೈದ್ಯರು, ಮತ್ತು ಸಮಾಜ ಸೇವಕರು ಹೇಳುವಂತೆ ವೃದ್ದಾಶ್ರಮಗಳನ್ನು ನಿಷೇಧಿಸಬೇಕು. ಇದರಿಂದ ಮಕ್ಕಳೇ ತಮ್ಮ ತಂದೆ-ತಾಯಿಗಳನ್ನು ನೋಡಿಕೊಳ್ಳುವಂತಾಗುತ್ತದೆ. ‘ಮಜ್ಜಿಗೆ ಇರೋ ಊಟ ಚೆಂದ ; ಅಜ್ಜಿ ಇರೋ ಮನೆ ಚೆಂದ’ ಅನ್ನುವ ಗಾದೆ ಮಾತಿನಂತೆ ಹಿರಿಯರಿರುವ ಮನೆ ಚೆನ್ನ, ಅವರಿಲ್ಲದ ನಿವಾಸ ತುಂಬಿದ ಮನೆ ಎನಿಸಿಕೊಳ್ಳಲಾರದು. ಕಿರಿಯರಿಗೆ ಬುದ್ದಿ ಹೇಳಲು, ಮಕ್ಕಳೊಂದಿಗೆ ಆಟವಾಡಲು, ನಿರ್ಧಾರಗಳನ್ನು ಕೈಗೊಳ್ಳಲು, ಯಾವುದೇ ಕೆಲಸ ಕಾರ್ಯವಿರಲಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಲು ಹಿರಿಯ ಜೀವಗಳು ಬೇಕೇ ಬೇಕು.
ಡಾ| ಶ್ರೀಕೃಷ್ಣ ಮಾಯ್ಲೆಂಗಿ