ನೋಮೋಪೋಬಿಯಾ – 21ನೆಯ ಶತಮಾನದ ಹೊಸ ರೋಗವೇ?

ನೋಮೋಪೋಬಿಯಾ 21ನೇ ಶತಮಾನದ ಅತಿದೊಡ್ಡ, ಔಷಧಿಗೆ ಹೊರತಾದ ವ್ಯಸನ  ಎಂದರೆ ಅತಿಶಯೋಕ್ತಿಯಾಗದು. ವಿಪರ್ಯಾಸವೆಂದರೆ ಹೆಚ್ಚು ಹೆಚ್ಚು ಕಾರ್ಯಶೀಲವಾಗಿರಬೇಕಾದ ಯುವಕ ಯುವತಿಯರೇ ಮೊಬೈಲ್‍ಗಳಿಗೆ ಬಲಿಯಾಗುತ್ತಿರುವುದು. ಹೆತ್ತವರು ಮತ್ತು ಸ್ನೇಹಿತರು ಸಕಾಲದಲ್ಲಿ ಎಚ್ಚೆತ್ತು, ಯುವಜನರನ್ನು ಎಚ್ಚರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅನಿವಾರ್ಯತೆ ಇದೆ. ಹಾಗಾದಲ್ಲಿ ಮಾತ್ರ ಒಂದು ಸುಂದರ ಸದೃಡ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ.

ನೋಮೋಪೋಬಿಯಾ - 21ನೆಯ ಶತಮಾನದ ಹೊಸ ರೋಗವೇ?ಅಧುನಿಕತೆ ಬೆಳೆದಂತೆ ಹೊಸ ಹೊಸ ಅವಿಷ್ಕಾರಗಳು ಮತ್ತು ಹತ್ತು ಹಲವು ಉಪಕರಣಗಳು ಹುಟ್ಟಿಕೊಂಡವು. ಈ ಅವಿಷ್ಕಾರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಉಪಕರಣವೇ “ಮೊಬೈಲ್ ಫೋನು”. ಅಚ್ಚ ಕನ್ನಡದಲ್ಲಿ ಸಂಚಾರಿ ದೂರವಾಣಿಎಂತಲೂ ಕರೆಯುತ್ತಾರೆ. ಒಂದಾನೊಂದು ಕಾಲದಲ್ಲಿ, ಊರಿನಲ್ಲಿನ ಒಂದು ಮನೆಯಲ್ಲಿ ಮಾತ್ರ ಸ್ಥಿರ ದೂರವಾಣಿ ಇರುತ್ತಿತ್ತು. ಅದು ರಿಂಗಣಿಸಿದರೆ ರೋಮಾಂಚನವಾಗುವ ಕಾಲವಿತ್ತು. ಆದರೆ ಈಗ ಮೊಬೈಲ್ ಯುಗ, ಪ್ರತಿಯೊಬ್ಬರಲ್ಲಿಯೂ ವಿಧ ವಿಧ ಬಣ್ಣದ, ಗಾತ್ರದ ಮತ್ತು ಶೋಕಿಯ ಮೊಬೈಲ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅಗ್ಗದ ಸಾಮಾನ್ಯ ಮೊಬೈಲ್‍ನಿಂದ ಹಿಡಿದು. ವಜ್ರ ಖಚಿತ, ಚಿನ್ನ ಲೇಪೀತ ಲಕ್ಷಾಂತರ ಬೆಲೆಬಾಳುವ ಮೊಬೈಲ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದೇ ಮನೆಯಲ್ಲಿ ಹತ್ತು ನಮೂನೆಯ, ಹತ್ತಾರು ಮೊಬೈಲ್‍ಗಳು ಕಾಣಸಿಗುತ್ತದೆ. ಮೊಬೈಲ್ ಫೋನು ಜೀವನದ ಅನಿವಾರ್ಯ ಅಂಗವಾಗಿ ಬೆಳೆದುಬಿಟ್ಟಿದೆ. ಕ್ಯಾಲೆಂಡರ್, ವಾಚು, ಕ್ಯಾಲುಕುಲೇಟರ್, ಕೆಮೆರಾ ರೇಡಿಯೋ, ಹಾಡು, ಸಂಗೀತ, ಜೋತಿಷ್ಯ, ಅಂತರ್ಜಾಲ ಹೀಗೆ ಎಲ್ಲಾವೂ, ಎಲ್ಲರಲ್ಲಿಯೂ, ಎಲ್ಲ ಕಾಲಕ್ಕೂ ಲಭ್ಯವಿದೆ. ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ಮನೋಸ್ಥಿತಿಗೆ ಬಂದು ನಿಂತಿದ್ದೇವೆ. 21ನೆಯ ಶತಮಾನದ ಹೊಸತಾದ ರೋಗವೇ ಈ “ನೋಮೋಪೋಬಿಯಾ”.

2008ರಲ್ಲಿ ಇಂಗ್ಲೆಂಡಿನಲ್ಲಿ ಒಂದು ಸರ್ವೆ ನಡೆಸಿ ಯುವಜನರ ಮನೋಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಲಾಯಿತು. ಮೊಬೈಲ್ ಇಲ್ಲದಾಗ ಯುವಜನರು ಯಾವ ರೀತಿ ವರ್ತಿಸುತ್ತಾರೆ ಮತ್ತು ಚಡಪಡಿಸುತ್ತಾರೆ ಎಂಬ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪ್ರಶ್ನೋತ್ತರ ನಡೆಸಿ ಈ ಸರ್ವೆ ನಡೆಸಲಾಗಿತ್ತು. ಅದರ ಪರಿಣಾಮವಾಗಿಯೇ ನೋ ಮೊಬೈಲ್ ಪೋಬಿಯಾ ಎಂಬ ರೋಗದ ಉಗಮವಾಯಿತು. ಇದನ್ನೇ ‘ನೋಮೋಪೋಬಿಯಾ’ ಎಂದು ಕರೆಯಲಾಯಿತು. ಇಂಗ್ಲೆಂಡಿನಲ್ಲಿ ನಡೆದ ಈ ಸರ್ವೆಯಲ್ಲಿ 53 ಶೇಕಡಾ ಮಂದಿ ಮೊಬೈಲ್ ಬಳಕೆ ಸಾಧ್ಯವಾಗದೇ ಇದ್ದಾಗ ಮಾನಸಿಕವಾಗಿ ಒತ್ತಡಕೊಳಗಾಗುತ್ತಾರೆ ಎಂದು ತಿಳಿದು ಬಂತು.

ಮೊಬೈಲ್ ಬ್ಯಾಟರಿ ಚಾರ್ಜ್ ಖಾಲಿಯಾಗಿ, ಮಾತನಾಡಲು ಹಣದ ಬ್ಯಾಲನ್ಸ್ ಖಾಲಿಯಾದಾಗ ಅಥವಾ ಅಂತರ್ಜಾಲದ ಅಲಭ್ಯತೆ ಹಾಗೂ ನೆಟ್‍ವರ್ಕ್ ಕವರೇಜ್ ಕ್ಷೇತ್ರದಿಂದ ಹೊರಹೋದಾಗ ಜನರು ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸುತ್ತಾರೆ ಎಂಬುದರ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಯಿತು. 2163 ಮಂದಿಯಲ್ಲಿ ನಡೆಸಿ ಈ ಸರ್ವೆಯಲ್ಲಿ 58 ಶೇಕಡಾ ಪುರುಷರು ಮತ್ತು 42 ಶೇಕಡಾ ಮಹಿಳೆಯರು ಈ ನೋಮೋಪೋಬಿಯಾ ರೋಗದಿಂದ ಒತ್ತಡಕ್ಕೊಳಗಾಗುತ್ತಾರೆ ಎಂದು ತಿಳಿಯ ಬಂದಿದೆ. ಅದೇ ರೀತಿ 10 ಶೇಕಡಾ ಮಂದಿ ಕವರೇಜ್ ಕ್ಷೇತ್ರದಿಂದ ಹೊರ ಹೋದಾಗ ಮಾನಸಿಕವಾಗಿ ಕುಗ್ಗುತ್ತಾರೆ ಎಂದು ತಿಳಿದುಬಂದಿದೆ.

ರೋಗದ ಲಕ್ಷಣಗಳು ಏನು?

ನೋಮೋಪೋಬಿಯಾ - 21ನೆಯ ಶತಮಾನದ ಹೊಸ ರೋಗವೇ?ಒಬ್ಬ ವ್ಯಕ್ತಿ ದಿನವೊಂದರಲ್ಲಿ 6 ಗಂಟೆಗಳಿಗಿಂತಲೂ ಜಾಸ್ತಿ ಮೊಬೈಲ್ ಬಳಸುತ್ತಿದ್ದಲ್ಲಿ, ದಿನವೊಂದರಲ್ಲಿ 100ಕ್ಕಿಂತಲೂ ಹೆಚ್ಚು ಬಾರಿ ಮೊಬೈಲ್‍ನ್ನು ಪದೇ ಪದೇ ಪರಿಶೀಲಿಸುತ್ತಿದ್ದಲ್ಲಿ ಅಥವಾ ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ಬಳಸುತ್ತಿದ್ದಲ್ಲಿ ಆತ ಈ ನೋಮೋಪೋಬಿಯಾದಿಂದ ಬಳಲುವ ಸಾಧ್ಯತೆ ಜಾಸ್ತಿ ಇರುತ್ತದೆ. ಇಂತಹ ವ್ಯಕ್ತಿಗಳು ಯಾವತ್ತೂ ತಮ್ಮ ಮೊಬೈಲನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಒಂದು ಕ್ಷಣವೂ ಅದನ್ನು ಬಿಟ್ಟು ಇರುವುದಿಲ್ಲ.

ರಾತ್ರಿ ಮಲಗುವಾಗಲೂ ದಿಂಬಿನ ಬಳಿಯಲ್ಲಿ ಇಟ್ಟಿರುತ್ತಾರೆ. ಯಾರಾದರೂ ಅವರ ಮೊಬೈಲ್ ಮುಟ್ಟಿದಾಗ ಅಥವಾ ಪರಿಶೀಲಿಸಿದಲ್ಲಿ ಅವರಿಗೆ ವಿಪರೀತ ಅಸಹನೆ ಸಿಟ್ಟು ಮತ್ತು ಯಾತನೆ ಉಂಟಾಗುತ್ತದೆ. ಮೊಬೈಲ್ ಅವರಿಗೆ ಸಿಗದೇ ಇದ್ದಾಗ ಅಸಹನೆ, ಸಿಟ್ಟು, ಒತ್ತಡ, ಮಾನಸಿಕ ಕಿರಿಕಿರಿ, ವಾಂತಿ ಬಂದಂತಾಗುವುದು ಮತ್ತು ಕೆಲವೊಮ್ಮೆ ಉಸಿರಾಟದ ವೇಗವೂ ಹೆಚ್ಚುತ್ತದೆ. ಬೇಗನೆ ಉದ್ವೇಗಕ್ಕೆ ಒಳಗಾಗುತ್ತಾರೆ. ಸಿಕ್ಕಸಿಕ್ಕವರ ಮೇಲೆ ವಿನಾಕಾರಣ ರೇಗಾಡುತ್ತಾರೆ.

ಯಾರು ಹೆಚ್ಚಾಗಿ ನೋಮೋಪೊಬಿಯಾ ರೋಗಕ್ಕೆ ತುತ್ತಾಗುತ್ತಾರೆ?

1. ಹದಿ ಹರೆಯದ ಯುವಕ ಯುವತಿಯರು.

2. ಮನೆಯಲ್ಲಿ ತಂದೆ ತಾಯಂದಿರಿಂದ ಸರಿಯಾದ ಮಾರ್ಗದರ್ಶನ ಗಮನ ಅಥವಾ ಪ್ರೋತ್ಸಾಹ ದೊರಕದ, ದಾರಿ ತಪ್ಪಿದ ಮಕ್ಕಳು.

3. ತಂದೆ ತಾಯಂದಿರ ಅತಿಯಾದ ವ್ಯಾಮೋಹದಿಂದ, ದಾರಿ ತಪ್ಪಿದ ಧನವಂತ ಹೆತ್ತವರ ಏಕಮಾತ್ರ ಪುತ್ರ ಅಥವಾ ಪುತ್ರಿಯರು.

4. ಕೀಳರಿಮೆಯಿಂದ ಬಳಲುತ್ತಿರುವ ಯುವಕ ಯುವತಿಯರು

ಹೇಗೆ ತಡೆಗಟ್ಟುವುದು?

1. ದಿನವೊಂದರಲ್ಲಿ ಒಂದೆರಡು ಘಂಟೆ ಮಾತ್ರ ಮೊಬೈಲ್‍ಗೆ ಮೀಸಲಿಡಿ. ಅತೀ ಅನಿವಾರ್ಯವಾದಲ್ಲಿ ಮಾತ್ರ ಬಳಸಬೇಕು. ಸಂಪೂರ್ಣವಗಿ ಮೊಬೈಲ್ ಮೇಲೆ ಅವಲಂಬಿತವಾಗಲೇಬಾರದು.

2. ಮೊಬೈಲ್‍ನಲ್ಲಿ ಬರುವ ಮೇಸೇಜ್, ಸಂದೇಶಗಳನ್ನು ಬಂದ್ ಮಾಡಿದಲ್ಲಿ ಉತ್ತಮ. ಅನಿವಾರ್ಯದಲ್ಲಿ ಮಾತ್ರ ಬಳಸಿ.

3. ಕೆಲಸದ ಸಮಯದಲ್ಲಿ ಮೊಬೈಲ್ ಬಳಸಲೇಬಾರದು.

4. ಮನಸ್ಸಿಗೆ ನೋವಾದಾಗ, ಹತಾಶೆಯಾದಾಗ ಸೋಶಿಯಲ್ ಮೀಡಿಯವನ್ನು ಬಳಸಲೇಬೇಡಿ. ಮನಸ್ಸಿಗೆ ಇಷ್ಟವಾಗುವ ಹಾಡು ಸಂಗೀತ ಆಲಿಸಬಹುದು.

5. ಅತೀ ಅಗತ್ಯವಾದಲ್ಲಿ ಮಾತ್ರ ಅಂತರ್ಜಾಲವನ್ನು ಬಳಸಿ.

6. ಜಾಸ್ತಿ ಮನುಷ್ಯರ ಜೊತೆ ಸಂಪರ್ಕದಲ್ಲಿರಿ. ಹೆಚ್ಚು ಹೆಚ್ಚು ಹೊಸ ಸ್ನೇಹಿತರನ್ನು ಮಾಡಿಕೊಂಡು ಮುಕ್ತವಾಗಿ ಬೆರೆಯಬೇಕು. ಏಕಾಂಗಿಯಾಗಿ ರೂಮಿನಲ್ಲಿ ಕುಳಿತು ಯಾರೋ ಅಪರಿಚಿತ ವ್ಯಕ್ತಿಯ ಜೊತೆ ವ್ಯವಹರಿಸುವುದು ಸರ್ವಥಾ ಸಹ್ಯವಲ್ಲ.

7. ಮನಸ್ಸಿಗೆ ಮತ್ತು ದೇಹಕ್ಕೆ ಮುದ ನೀಡುವ ಹೊರಾಂಗಣ ಕ್ರೀಡೆಗಳು, ಹವ್ಯಾಸಗಳು ಅಥವಾ ಚಟುವಟಿಕೆಗಳಿಗೆ ಹೆಚ್ಚು ಗಮನ ಹರಿಸಬೇಕು.

 

Dr.-Murali-Mohana-Chuntaru.ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323 ದೂ.: 04998-273544, 235111 ಮೊ: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323
ದೂ.: 04998-273544, 235111 ಮೊ: 9845135787
www.surakshadental.com

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!