ನಾಯಿ ನಂಜು ನುಂಗುವ ನಂಜುಂಡ

ನಾಯಿ ನಂಜು ನುಂಗುವ ನಂಜುಂಡ

ಪ್ರಪಂಚದ ಎಲ್ಲ ಭೂಖಂಡಗಳಲಿ ಭಯಾನಕವಾಗಿರುವ ಈ ನಾಯಿ ನಂಜು ರೋಗ ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ನಾಮಾವಶೇಷವಾಗಿದೆ. ನ್ಯೂಜಿಲ್ಯಾಂಡ್, ಸೈಪ್ರಸ್, ಹವಾಯಿ, ಯು.ಕೆ.ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಈ ರೋಗದಿಂದ ಮುಕ್ತವಾಗಿವೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಈ ರೋಗದ ಹಾವಳಿ ಇಂದಿಗೂ ತಪ್ಪಿಲ್ಲ. ಈ ರೋಗವು ಹೆಚ್ಚಾಗಿ ಕಂಡುಬರುವ ದೇಶಗಳೆಂದರೆ, ಆಗ್ನೇಯ ಏಷಿಯಾ ನಡುಗಡ್ಡೆಗಳು. ಅದರಲ್ಲೂ ಭಾರತದಲ್ಲಿ ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ದೇಶದ ಎಲ್ಲ ಪ್ರದೇಶಗಳಲ್ಲೂ ವರ್ಷದುದ್ದಕ್ಕೂ ಈ ರೋಗದ ಹಾವಳಿ ಕಂಡುಬರುವುದು. ಪ್ರತಿವರ್ಷ ಮೂರು ಲಕ್ಷಕ್ಕೂ ಹೆಚ್ಚು ಜನರು ಪ್ರಾಣಿಗಳಿಂದ ಕಚ್ಚಿಸಿಕೊಂಡು ಚುಚ್ಚುಮದ್ದಿನ ಉಪಚಾರ ಪಡೆಯುತ್ತಾರೆ ಮತ್ತು ಮೂರು ಸಾವಿರಕ್ಕೂ ಹೆಚ್ಚು ಜನ ಮರಣ ಹೊಂದುತ್ತಾರೆ.

ಸೋಂಕಿನ ಮೂಲ ಮತ್ತು ಪ್ರಸಾರ

ಸಸ್ತನಿ ವರ್ಗಕ್ಕೆ ಸೇರಿದ ಎಲ್ಲಾ ಪ್ರಾಣಿಗಳೂ ನಿಗೂಢ ವಾಹಕ (Potential vector) ಗಳಾಗಿರುತ್ತವೆ. ಆದರೆ ಮಾನವ ಮತ್ತು ಪ್ರಾಣಿಗಳಲ್ಲಿ ಕಾಣುವ ಕಾಯಿಲೆಗೆ ಮಾಂಸಾಹಾರಿ ಪ್ರಾಣಿಗಳು ಕಾರಣವಾಗಿವೆ. ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತ, ಅನೇಕ ದಿವಸಗಳು ಮುಂಚಿತವಾಗಿಯೇ ಜೊಲ್ಲಿನಲ್ಲಿ ಈ ವೈರಸ್‍ಗಳು ಕಾಣುವುವು ಮತ್ತು ರೋಗಪೀಡಿತ ಪ್ರಾಣಿಯ ಪ್ರಾಣಪಕ್ಷಿ ಹಾರಿ ಹೋಗುವವರೆಗೂ ಜೊಲ್ಲಿನಲ್ಲಿರುತ್ತವೆ. ಈ ರೋಗ ಸರ್ವೇಸಾಮಾನ್ಯವಾಗಿ ಪ್ರಾಣಿಗಳು ಕಚ್ಚುವುದರಿಂದ ಬರುತ್ತದೆ. ಅಪರೂಪವಾಗಿ ಗೀರು ಗಾಯಗಳ ಅಥವಾ ಉಜ್ಜು ಗಾಯಗಳ ಮೇಲೆ ವೈರಸ್‍ಗಳಿರುವ ಜೊಲ್ಲು ಬೀಳುವುದರಿಂದಲೂ, ಚಿಕ್ಕ ಪುಟ್ಟ ಗಾಯಗಳನ್ನು ರೋಗಪೀಡಿತ ಪ್ರಾಣಿಗಳು ನೆಕ್ಕುವುದರಿಂದಲೂ ತುಂಬಾ ಅಪರೂಪವಾಗಿ ಶ್ಲೇಷ್ಮ ತ್ವಚೆಯನ್ನು ವೈರಸ್‍ಗಳು ಭೇದಿಸಿಕೊಂಡು ಹೋದಾಗ ಈ ಕಾಯಿಲೆ ಬರುತ್ತದೆ.

ಮನುಷ್ಯರಲ್ಲಿಯ ಕಾಯಿಲೆಗೆ ನಾಯಿ ಕಡಿತ ಪ್ರಮುಖ ಕಾರಣ. ಬೆಕ್ಕು, ಮಂಗ, ನರಿ, ತೋಳಗಳು ಕಚ್ಚುವುದರಿಂದಲೂ ಈ ರೋಗ ಬರಬಹುದು. ಮಹಿಳೆಯರಿಗಿಂತ ಪುರುಷರಿಗೆ ಚಿಕ್ಕ ಮಕ್ಕಳಿಗೆ ಈ ರೋಗ ಸುಲಭವಾಗಿ ತಗಲುತ್ತದೆ. ವಿಷಾಣುಗಳ ಪ್ರಯೋಗಾಲಯದಲ್ಲಿ ಕೆಲಸ ಮಾಡುವವರಿಗೆ, ಪಶುವೈದ್ಯ ಶಾಲೆಯವರಿಗೆ, ನಾಯಿ, ಬೆಕ್ಕುಗಳೊಡನೆ ಚೆಲ್ಲಾಟವಾಡುವವರಿಗೆ, ಇದರ ಒಡನಾಟ ಹೆಚ್ಚು. ಒಮ್ಮೆ ವ್ಯಕ್ತಿಗೆ ಈ ರೋಗ ತಗಲಿದರೆ ಈ ವ್ಯಕ್ತಿಯಲ್ಲಿಯೇ ವೈರಸ್‍ಗಳು, ತಮ್ಮ ಅಂತ್ಯವನ್ನು ಕಂಡುಕೊಳ್ಳುತ್ತವೆ. ಅಂದರೆ ವ್ಯಕ್ತಿ ಸತ್ತ ನಂತರ ಅವನಿಂದ ಬೇರೆಯವರಿಗೆ ಈ ರೋಗ ಹರಡುವುದಿಲ್ಲ.

ಆದಿಶಯನ ಕಾಲ

ಈ ರೋಗದ ಆದಿಶಯನ ಕಾಲ ಸಾಮಾನ್ಯವಾಗಿ 1-3 ತಿಂಗಳಿದ್ದು, ಕೆಲವೊಮ್ಮೆ 10 ದಿನಗಳಷ್ಟು ಕಡಿಮೆಯಾಗಿಯೂ, ವರ್ಷದಷ್ಟು ದೀರ್ಘವೂ ಆಗಬಹುದು. ಈ ರೋಗದಲ್ಲಿಯಷ್ಟು ಆದಿಶಯನ ಕಾಲದಲ್ಲಿಯ ವೈಪರೀತ್ಯ ಬೇರಾವ ಸಾಂಕ್ರಾಮಿಕ ರೋಗದಲ್ಲಿ ಕಾಣುವುದಿಲ್ಲ. ಆದಿಶಯನ ಕಾಲಾವಧಿಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ-
• ಕಚ್ಚಿದ ಶರೀರದಲ್ಲಿಯ ಸ್ಥಳ
• ಗಾಯದ ತೀವ್ರತೆ
• ಶರೀರವನ್ನು ಸೇರುವ ರೋಗಾಣುಗಳ ಸಂಖ್ಯೆ
• ಕಚ್ಚಿದ ಪ್ರಾಣಿಗಳ ಜಾತಿ
• ಕಚ್ಚುವಾಗ ದೇಹಕ್ಕೆ ಬಟ್ಟೆಗಳಿಂದ ದೊರೆತ ರಕ್ಷಣೆ
• ಗಾಯವಾದ ತಕ್ಷಣವೇ ನೀಡಿದ ಔಷಧೋಪಚಾರ.

ಸಾಮಾನ್ಯವಾಗಿ ಮುಖ, ಕುತ್ತಿಗೆ, ಕೈ ಮೇಲೆ ಕಚ್ಚಿದಾಗ ಕಾಲಿಗೆ ಕಚ್ಚಿದಾಗಿನಕ್ಕಿಂತಲೂ ಕಡಿಮೆ ಅವಧಿಯಲ್ಲಿ ರೋಗ ಕಂಡುಬರುವುದು. ವನ್ಯ ಪ್ರಾಣಿಗಳ ಕಡಿತ ಸಾಕುಪ್ರಾಣಿಗಳ ಕಡಿತಕ್ಕಿಂತ ಮಾರಕವಾಗಿರುತ್ತದೆ. ದೊಡ್ಡವರಿಗಿಂತ ಚಿಕ್ಕಮಕ್ಕಳಲ್ಲಿ ಕಡಿಮೆ ಅವಧಿಯಲ್ಲಿ ರೋಗದ ಲಕ್ಷಣಗಳು ಕಂಡುಬರುವುವು. ಅಧ್ಯಯನಗಳು ಸಾದರಪಡಿಸಿದ ಸರಾಸರಿ ಆದಿಶಯನ ಕಾಲಾವಧಿ ಹೀಗಿದೆ:
• ತಲೆ, ಮುಖ, ಕುತ್ತಿಗೆಗೆ ಕಚ್ಚಿದ್ದರೆ – 34 ದಿನಗಳು
• ಕೈಗಳಿಗೆ ಕಚ್ಚಿದ್ದರೆ – 46 ದಿನಗಳು
• ಕಾಲುಗಳಿಗೆ ಕಚ್ಚಿದ್ದರೆ – 78 ದಿನಗಳು

ನಾಯಿ ನಂಜು ನುಂಗುವ ನಂಜುಂಡ

ರೋಗ ವಿಕಾಸ:

ಪ್ರಾಣಿ ಕಚ್ಚಿದ ಸ್ಥಳದಲ್ಲಿ ಬಿಟ್ಟ ವೈರಸ್‍ಗಳು ಅಲ್ಲಿಯೇ ನೆಲೆ ನಿಲ್ಲುತ್ತವೆ. ಆದಿಶಯನ ಕಾಲಾವಧಿಯಲ್ಲಿಯ ಬಹಳಷ್ಟು ದಿನ ಸ್ಥಳೀಯ ಮಾಂಸ ಖಂಡಗಳಲ್ಲಿ ವೃದ್ಧಿಗೊಳ್ಳುತ್ತವೆ. ನಂತರ ದಾಳಿಯಿಡಲು ಸಜ್ಜಾಗುವುವು. ಜ್ಞಾನವಾಹಿ ನರಗಳ ಮುಖಾಂತರ ಚಲಿಸಿ ಕೇಂದ್ರ ನರಮಂಡಲಕ್ಕೆ ಮುತ್ತಿಗೆ ಹಾಕುವುವು. ಸ್ರವಿಸುವ ಗ್ರಂಥಿಗಳತ್ತಲೂ ತಮ್ಮ ಕಣ್ಣು ಹಾಕುತ್ತವೆ.

ಲಾಲಾರಸ ಗ್ರಂಥಿಗಳು, ಕರುಳು, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡದ ನಳಿಕೆಗಳಿಗೆ ಮತ್ತು ಅಡ್ರಿನಲ್ ಗ್ರಂಥಿಯ ಮಧ್ಯ ಭಾಗಗಳಿಗೆ ಸ್ವಾಯತ್ತ ನರಗಳ ಮೂಲಕ ಈ ವೈರಸ್‍ಗಳು ಹರಡುತ್ತವೆ. ವೈರಸ್ ರಕ್ತ ಕಂಡುಬರಬಹುದು. ಭಕ್ಷಕ ಕಣಗಳಿಂದ ನರಕೋಶಗಳ ನಾಶ, ನರತಂತುಗಳ ಹೊರಪದರಿನ ನಾಶ, ರಕ್ತ ಸ್ರಾವಗಳು ಮತ್ತು ರಕ್ತನಾಳಗಳ ಸುತ್ತ ಏಕಜೀವಕಣ ಕೋಶಗಳಿಂದ ಆಕ್ರಮಣಗಳನ್ನು ನರಮಂಡಲದ ಎಲ್ಲಾ ಭಾಗಗಳಲ್ಲೂ ಕಾಣಬಹುದು. ರೋಗ ಸೂಚಕ ನೆಗ್ರಿ ಕಾಯಗಳ ಇರುವಿಕೆಯಿಂದ ಜಲಭಯ ರೋಗವನ್ನು ಇತರೆ ವೈರಸ್‍ಗಳಿಂದಾಗುವ ಮಿದುಳಿನ ಉರಿಯೂತಗಳಿಂದ ಗುರುತಿಸಬಹುದು. ನೆಗ್ರಿ ಕಾಯಗಳು ಇದ್ದಲ್ಲಿ ಅವು ಜಲಭಯ ರೋಗವನ್ನು ಖಚಿತಪಡಿಸುತ್ತವೆ. ಬೇರಾವ ರೋಗದಲ್ಲೂ ಅವು ಕಾಣುವುದಿಲ್ಲ.

ರೋಗದ ಲಕ್ಷಣಗಳು:

ನಾಯಿ ಇಲ್ಲವೆ ಇತರೇ ಪ್ರಾಣಿಗಳು ಕಚ್ಚಿದಾಗ ಯಾವ ಔಷಧೋಪಚಾರ ಪಡೆಯದಿದ್ದರೂ ಗಾಯಗಳು ಮಾಯುತ್ತವೆ. ಶೇ. 80 ಜನ ರೋಗಿಗಳಲ್ಲಿ ಆದಿಭಾಗದಲ್ಲಿ ಕಂಡುಬರುವ ಅತ್ಯಂತ ಪ್ರಾಮುಖ್ಯವಾದ ಲಕ್ಷಣಗಳೆಂದರೆ- ಹುಚ್ಚು ಪ್ರಾಣಿ ಕಚ್ಚಿದ ಸ್ಥಳದಲ್ಲಿ ಜುಮುಗುಡುವಿಕೆ ಅಸಹಜ ಇಂದ್ರಿಯ ಜನ್ಮಜ್ಞಾನ (Paraesthesiasis) ಮತ್ತು ಮಂದವಾದ ಅಥವಾ ಇರಿತದ ನೋವು ಕಂಡುಬರುತ್ತದೆ. ನಾಯಿ ಕಚ್ಚಿದ ನೆನಪಾದರೆ ಕೆಲವೊಂದು ಮಾನಸಿಕ ಬದಲಾವಣೆಗಳು ಆಗುತ್ತವೆ. ಸಾಮಾನ್ಯವಾಗಿ ರೋಗವನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು.

1. ಮೊದಲ ಹಂತ (Premonitory Stage)

ಈ ಹಂತದಲ್ಲಿ ರೋಗಿ ಸಣ್ಣ ಪುಟ್ಟ ವಿಷಯಗಳಿಗೂ ಸಿಟ್ಟಿಗೇಳುವನು. ಹಸಿವಾಗದೆ ಇರುವುದು, ನಿದ್ರೆ ಹತ್ತದಿರುವುದು. ಬಾಯಿರುಚಿ ಇಲ್ಲದಾಗುವುದು, ನುಂಗಲು ತೊಂದರೆಯಾಗುವುದು ಮತ್ತು ಧ್ವನಿಯಲ್ಲಿ ಬದಲಾವಣೆಯಾಗುತ್ತದೆ. ತಲೆನೋವು, ಆಲಸ್ಯ, ಹೊಟ್ಟೆ ತೊಳಸುವಿಕೆ, ವಾಂತಿ, ಗಂಟಲುನೋವು ಮತ್ತು ಏಕಪ್ರಕಾರವಾಗಿರುವ ಕಫಪೂರಿತ ಕೆಮ್ಮುಗಳು ಕಾಣಿಸುವುವು.

2. ಉದ್ರೇಕದ ಹಂತ (Excitement Stage)

dog-biteಈ ಘಟ್ಟದಲ್ಲಿ ರೋಗಿಯಲ್ಲಿ ತಳಮಳ ಗಮನಾರ್ಹವಾಗಿರುತ್ತದೆ. ಸಕಾರಣವಾಗಿರದ ಭಯ ಮತ್ತು ಕೋಪೋದ್ರೇಕಗಳು ಒಂದಾದ ಮೇಲೊಂದರಂತೆ ಮತ್ತು ಅಗಾಧವಾದ ಖಿನ್ನತೆಗಳೂ ಕಾಣುವುವು. ಅಪರೂಪವಾಗಿ ನೋಟದ ಅಥವಾ ಆಲಿಸುವ ಭ್ರಮೆಗಳ ಬಾಹುಬಂಧನದಲ್ಲಿ ರೋಗಿ ಬಂಧಿತನಾಗಬಹುದು. ಕೆಲ ನಿಮಿಷ ಸುಮ್ಮನೆ ಕೂಡುವುದಿಲ್ಲ. ಹುಚ್ಚರಂತೆ ವರ್ತಿಸುವರು. ಕೈಕಾಲುಗಳು ನಡುಗುತ್ತವೆ. ನೀರಡಿಕೆಯಾಗಿ ಗಂಟಲಾರುತ್ತದೆ. ನೀರು ನೀರು ಎಂದು ಎಡಬಿಡದೇ ಕೂಗುತ್ತಾರೆ. ಆದರೆ ನೀರು ಕುಡಿಯಲು ಹೋದರೆ ಗಂಟಲಿನ ಸ್ನಾಯುಗಳಲ್ಲಿ ಸೆಳೆ ಉಂಟಾಗಿ ನೋವಾಗುತ್ತದೆ. ಕೊನೆಯಲ್ಲಿ ನೀರನ್ನು ನೋಡಿದರೆ ಅದರ ಸಪ್ಪಳ ಇಲ್ಲವೆ ಬರೀ ಅದರ ಹೆಸರು ಕೇಳಿದರೂ ಗಂಟಲಿನ ಮಾಂಸಖಂಡಗಳಲ್ಲಿ ಸೆಳೆತಗಳುಂಟಾಗಿ ಬಹಳ ತೊಂದರೆಯಾಗುವುದು. ಉಸಿರು ಕಟ್ಟುತ್ತದೆ. ಅಂಜಿ ಚೀರುತ್ತಾರೆ. ಅಂತೆಯೇ ಇದಕ್ಕೆ ‘ಜಲಭಯ’ ಅಥವಾ ‘ನೀರಸೆಳಕು’ ಎನ್ನುತ್ತಾರೆ.

ವಾಣಿಕರವಿಗಳಿಗೆ (Vocal cords) ಲಕ್ವ ಹೊಡೆಯುವು ದರಿಂದ ದನಿ ಒರಟಾಗಿರುತ್ತದೆ. ನಾಯಿಯಂತೆ ಒದರಬಹುದು. ಸ್ವಲ್ಪ ಸಪ್ಪಳ, ಪ್ರಕಾಶಮಾನವಾದ ಬೆಳಕು, ಸ್ಪರ್ಶ, ಗಾಳಿ ಬೀಸುವುದು ಸಹ ಸ್ನಾಯುಗಳಲ್ಲಿ ಸೆಳೆತವನ್ನುಂಟು ಮಾಡುವುದು. ನಾಡಿ ವೇಗವಾಗಿ ಹೊಡೆದುಕೊಳ್ಳುವುದಲ್ಲದೇ ತುಂಬ ಕೃಶವಾಗಿರುತ್ತದೆ ಮತ್ತು ಸತ್ವಹೀನವಾಗಿರುತ್ತದೆ. ಹೆಚ್ಚು ಬೆವರುವಿಕೆ, ಕಣ್ಣೀರಿನ ಅಧಿಕೋತ್ಪತ್ತಿ ಲಾಲಾರಸದ ಅಧಿಕೋತ್ಪತ್ತಿ ಕಂಡುಬರುತ್ತವೆ. ಅನೇಕ ರೋಗಿಗಳಲ್ಲಿ ತಲೆ ಸುತ್ತುವಿಕೆ, ನೇತ್ರ ಕಂಪನ (Nystagnus) ನೇತ್ರ ನರದುರಿತ, ಅದರೊಡನಿರುವ ನಡು ಅಂಧತ್ವ (Central Blindness), ಯುಗ್ಮನೋಟ (Diplopia) ಹಣಕಿ ಹಾಕುತ್ತವೆ. ಸಾಯುವ ಭಯ ಆವರಿಸುತ್ತವೆ. ಬೇರೆಯವರನ್ನು ಕಂಡರೆ ಕಚ್ಚುವ ಚಪಲ ಹೆಚ್ಚುತ್ತದೆ. ಈ ಹಂತದಲ್ಲಿ ರೋಗಿಯು ಉಸಿರುಗಟ್ಟಿ ಸಾವನ್ನು ಸ್ವಾಗತಿಸುವುದು ಸ್ವಾಭಾವಿಕ.

3. ನಿಸ್ಸತ್ವದ ಹಂತ (Paralytic Stage)

ಈ ಹಂತದಲ್ಲಿ ಉದ್ರೇಕ ಅಳಿದು ಹೋಗುತ್ತದೆ. ಖಿನ್ನತೆ, ನಿರಾಸಕ್ತಿ, ನಶಿಸಿದ ಪ್ರತಿಕ್ರಿಯೆ ಮತ್ತು ಮಯಕಗಳು ಮೆತ್ತಗೆ ಮುತ್ತಿಗೆ ಹಾಕುತ್ತವೆ. ಆಹಾರವನ್ನು ನುಂಗುವ ಚೈತನ್ಯ ಕ್ಷಣಿಕವಾಗಿ ಮರುಕಳಿಸಬಹುದು. ಹಾಗೆಯೇ ಹೃದಯ ಮಿಡಿತ ಉಸಿರಾಟದ ವೇಗ ಕಡಿಮೆಯಾಗಬಹುದು. ಮೂತ್ರಕೋಶ ತನ್ನ ಹಿಗ್ಗುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ದೇಹವನ್ನೆಲ್ಲಾ ಆವರಿಸಿರುವ ಲಕ್ವ, ಗುಲಿಯನ್ ಬಾರಿ ಲಕ್ಷಣ (Gullian Barre Syndrome) ಕೂಟವನ್ನು ಹೋಲುತ್ತದೆ. ಆಶ್ಚರ್ಯವೆಂದರೆ ಸಾಯುವ ಪೂರ್ವದಲ್ಲಿ ಕೆಲಹೊತ್ತು ಎಲ್ಲ ಲಕ್ಷಣಗಳೂ ಮಾಯವಾಗಿ ದ್ರವ ಪದಾರ್ಥಗಳನ್ನು ನುಂಗಲು ಶಕ್ತರಾಗುವರು. ಸಾಮಾನ್ಯವಾಗಿ ಲಕ್ವ ಪ್ರಾರಂಭವಾದ 2-3 ದಿನಗಳಲ್ಲಿ ರೋಗಿ ಅಸುನೀಗಬಹುದು.

ರೋಗ ನಿದಾನ

ರೋಗಿ ರೋಗದ ಇತಿಹಾಸದಲ್ಲಿ ಕೆಲ ದಿನಗಳ ಹಿಂದೆ ನಾಯಿ ಕಚ್ಚಿದ್ದನ್ನು ಹೇಳಬಹುದು. ಗಾಯದ ಸ್ಥಳದಲ್ಲಿ ನೋವು, ತುರಿಕೆಗಳು ಕಂಡುಬರಬಹುದು. ತಲೆಶೂಲೆ, ಜ್ವರ, ಭಯ, ನಿಶ್ಶಕ್ತಿ, ಹವಳಿಕೆ, ನೀರಡಿಕೆ ಆಗಬಹುದು. ಆದರೆ ನೀರು ಕುಡಿಯಲು ಹೋದರೆ ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ನಂತರ ಬರಿ ನೀರು ನೋಡಿದರೂ, ನೀರಿನ ಸಪ್ಪಳ ಅಥವಾ ಹೆಸರು ಕೇಳಿದರೂ ಅಂಜುವರು. ಈ ವಿಶಿಷ್ಟ ಲಕ್ಷಣಗಳಿಂದಲೇ ರೋಗ ನಿದಾನ ಸಾಧ್ಯ. ರೋಗ ನಿದಾನ ಖಚಿತಪಡಿಸಲು -ಕಚ್ಚಿದ ಪ್ರಾಣಿಯು ಸತ್ತ ನಂತರ ಅದರ ಮೆದುಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ನೆಗ್ರಿಕಾಯಗಳು ಕಂಡುಬರುತ್ತವೆ.

ಚಿಕಿತ್ಸೆ:

ಈ ಕಾಯಿಲೆಗೆ ನಿಶ್ಚಿತ ಚಿಕಿತ್ಸೆಯಿಲ್ಲ. ಆದರೂ ಬದುಕುವನೆಂಬ ಆಸೆಯನ್ನಿಟ್ಟು ಕೊಂಡು, ರೋಗ ನಿರ್ಣಯವೇ ತಪ್ಪಾಗಿರ ಬಹುದೆಂದು ಭಾವಿಸಿ ಎಲ್ಲಾ ಸಹಾಯಕ ಚಿಕಿತ್ಸೆಯನ್ನು ಕೊಡಬೇಕು. ಪ್ರಾಣಿಗಳು ಕಚ್ಚಿದ ನಂತರ ಜಲಭಯ ರೋಗ ಬರದಂತೆ ತಡೆಗಟ್ಟುವ ಒಂದೇ ಒಂದು ಉಪಾಯವೆಂದರೆ -ತಡಮಾಡದೇ ಚುಚ್ಚುಮದ್ದನ್ನು ಹಾಕಿಸುವುದು. ಇದರ ಉದ್ದೇಶ ಕಚ್ಚಿಸಿಕೊಂಡ ವ್ಯಕ್ತಿಯಲ್ಲಿ ಬೇಗನೆ ರೋಗ ಪ್ರತಿರೋಧಕ ಶಕ್ತಿಯನ್ನು ಬೆಳೆಸುವುದು. ಇದನ್ನು ರೋಗಾಣುಗಳು ನರಮಂಡಲ ಅಥವಾ ಮೆದುಳಿಗೆ ಮುತ್ತಿಗೆ ಹಾಕುವ ಮುನ್ನವೇ ಕೈಕೊಳ್ಳಬೇಕು. ಒಂದು ವೇಳೆ ರೋಗಾಣುಗಳು ನರಮಂಡಲಕ್ಕೆ ಸೇರಿದರೆ ಚಿಕಿತ್ಸೆ ಫಲಕಾರಿಯಾಗಲಾರದು.

ಕಚ್ಚಿದ ನಂತರ ಕೊಡುವ ಲಸಿಕೆಯೆಂದರೆ, ಇದೊಂದೇ ಎಂದು ಹೇಳಬಹುದು. ಯಾಕೆಂದರೆ ಉಳಿದ ಸಾಂಕ್ರಾಮಿಕ ರೋಗಗಳಲ್ಲಿ ರೋಗ ತಗಲದಂತೆ ಲಸಿಕೆಯನ್ನು ಮುಂಜಾಗ್ರತಾ ಕ್ರಮವಾಗಿ ಹಾಕಲಾಗುತ್ತದೆ. ಒಮ್ಮೆ ಕಾಯಿಲೆ ಪ್ರಾರಂಭವಾದ ನಂತರ ಯಾವ ವಿಧವಾದ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮೂಢನಂಬಿಕೆ, ಅಂಧಶ್ರದ್ಧೆಗಳ ಅನುಕರಣೆಯಿಂದ ಅಪಾಯ ತಪ್ಪಿದ್ದಲ್ಲ. ಈ ಹಿಂದೆ ಲಸಿಕೆಯನ್ನು ಹೊಕ್ಕುಳ ಸುತ್ತಲೂ ಕೊಡಲಾಗುತ್ತಿತ್ತು. ಆದರೆ, ಈಗ ಆವಿಷ್ಕಾರಗೊಂಡಿರುವ ನೂತನ ಲಸಿಕೆಯನ್ನು ತೋಳಿಗೆ ಐದು ಬಾರಿ ಚುಚ್ಚುಮದ್ದಿನ ರೂಪದಲ್ಲಿ ಕೊಡಲಾಗುವುದು. ಇದನ್ನು 0, 3, 7, 14, 28ನೇ ದಿನಗಳಂದು ನೀಡಲಾಗುವುದು.

ಪ್ರಥಮ ಚಿಕಿತ್ಸೆ:

ನಾಯಿ ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆಯನ್ನು ತಕ್ಷಣ ಕೈಕೊಂಡಿದ್ದಾದಲ್ಲಿ, ಮುಂದಿನ ಅನಾಹುತಗಳಿಗೆ ಅಡ್ಡಿಯನ್ನೊಡ್ಡಬಹುದಾಗಿದೆ: ಕಾರಣ ಇಲ್ಲಿ ಪ್ರಥಮ ಚಿಕಿತ್ಸೆಯ ಪಾತ್ರ ಪ್ರಮುಖವಾಗಿದೆ.

  • ನಾಯಿ ಕಡಿದ ನಂತರ ಸಾಬೂನಿನಿಂದ ಗಾಯವನ್ನು ಚೆನ್ನಾಗಿ ತೊಳೆಯಬೇಕು.
  • ಪೊಟ್ಯಾಶಿಯಂ ಪರಮಾಂಗನೇಟ್ ದ್ರಾವಣ, ಸ್ಪಿರಿಟ್, ಕಾರ್ಬಾಲಿಕ್ ಆಮ್ಲ, ನೈಟ್ರಿಕ್ ಆಮ್ಲ ಮುಂತಾದವುಗಳು ಸಿಕ್ಕರೆ, ಯಾವುದಾದರೂ ಒಂದರಿಂದ ಗಾಯವನ್ನು ಸುಡಬೇಕು.
  • ಕಡಿದ ನಾಯಿ ಸಾಕಿದ್ದೊ, ಬಿಡಾಡಿಯೋ, ಅಡವಿ ನಾಯಿಯೋ, ಹುಚ್ಚು ನಾಯಿಯೋ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
  • ಗಾಯಗಳು ಯಾವ ಭಾಗದಲ್ಲಿ, ಎಷ್ಟು ಪ್ರಮಾಣದಲ್ಲಿ ಆಗಿವೆ ಎಂಬುದನ್ನು ಲಕ್ಷ್ಯದಲ್ಲಿಡಬೇಕು.
  •  ಅಲಕ್ಷ ಮಾಡದೇ ಆದಷ್ಟು ಬೇಗನೆ ವೈದ್ಯರ ಸಲಹೆ ಪಡೆಯಲು ಮರೆಯಬಾರದು.

ಪ್ರತಿಬಂಧಕೋಪಾಯಗಳು

dog-rabies1. ಜಲಭಯರೋಗಕ್ಕೆ ನಾಯಿ ಕಚ್ಚುವಿಕೆ ಪ್ರತಿಶತ 99ರಲ್ಲಿ ಕಾರಣವಾಗಿರು ವುದರಿಂದ ಈ ಭಯಾನಕ ಸಮಸ್ಯೆಯ ಪರಿಹಾರ ಕೆಳಗಿನ ಅಂಶಗಳನ್ನು ಅವಲಂಬಿಸಿದೆ.

  • ಎಲ್ಲ ಬೀದಿ ನಾಯಿಗಳನ್ನು, ಬಿಡಾಡಿ ನಾಯಿಗಳನ್ನು, ಮಾಲೀಕರಿಲ್ಲದ ನಾಯಿಗಳನ್ನು ನಿರ್ನಾಮಗೊಳಿಸಬೇಕು.
  • ನಾಯಿ ಸಾಕಲು ಪರವಾನಗಿ ಇರಬೇಕು ಮತ್ತು ಪಶು ವೈದ್ಯಶಾಲೆ ಯಲ್ಲಿ ಅದರ ನೋಂದಣಿ ಮಾಡಬೇಕು.
  • ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
  • ನಾಯಿಗಳಿಗೆ ರೋಗದ ವಿರುದ್ಧ ಚುಚ್ಚುಮದ್ದನ್ನು ತಪ್ಪದೇ ಹಾಕಿಸಬೇಕು.
  • ಸಾಕುನಾಯಿ ಮತ್ತು ಬೆಕ್ಕುಗಳಿಗೆ ಹುಚ್ಚುನಾಯಿ ಕಚ್ಚಿದಾಗ ಸಾಕುಪ್ರಾಣಿಗಳ ಮೇಲಿನ ಪ್ರೀತಿಯನ್ನು ಅದುಮಿಟ್ಟು ಕೊಲ್ಲಬೇಕು.
  • ಜಲಭಯರೋಗದಿಂದ ಮುಕ್ತವಾದ ಸ್ಥಳಗಳಿಗೆ, ಸೋಂಕಿನ ಸ್ಥಳದಿಂದ ಬರುವ ನಾಯಿ ಮತ್ತು ಬೆಕ್ಕುಗಳ ಆಯಾತವನ್ನು ನಿಷೇಧಿಸಬೇಕು. ನಾಯಿ ಸಾಕುವಿಕೆ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು.

2. ಮುಂಜಾಗ್ರತೆಯ ಕ್ರಮವಾಗಿ ಆಯ್ದ ವ್ಯಕ್ತಿಗಳಿಗೆ ಲಸಿಕೆಯನ್ನು ಕೊಡಬೇಕು. ಇಂತಹ ಗುಂಪಿಗೆ ಪಶು ವೈದ್ಯರು ಮತ್ತು ಪಶು ವೈದ್ಯಶಾಲೆಯ ಕೆಲಸಗಾರರು, ನಾಯಿ ಹಿಡಿಯುವವರು, ಅಂಚೆ ನೌಕರರು ಅದರಲ್ಲೂ ಅಂಚೆ ಬಟವಾಡೆ ಮಾಡುವವರೂ ಸೇರಿರುತ್ತಾರೆ.

3. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳೆಲ್ಲರೂ ರೋಗಪ್ರತಿರೋಧಕ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ತಾತ್ಕಾಲಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಎ.ಆರ್.ಎಸ್. ಕೊಡಿಸಬೇಕು.

4. ರೋಗಿಗಳನ್ನು ಉಪಚರಿಸುವವರು ಕೈಚೀಲ ಹಾಗೂ ಮುಖವಾಡ ಧರಿಸಿ, ಉಪಚಾರ ಮಾಡಬೇಕು.

5. ರೋಗಿ ಉಪಯೋಗಿಸಿದ ಪಾತ್ರೆ ಪಗಡಗಳನ್ನು, ಹಾಸಿಗೆ, ಹೊದಿಕೆಗಳನ್ನು, ಬಟ್ಟೆಬರೆಗಳನ್ನು ಕ್ರಿಮಿನಾಶಕಗಳಲ್ಲಿ ತೊಳೆಯಬೇಕು.

ಡಾ|| ಕರವೀರಪ್ರಭು ಕ್ಯಾಲಕೊಂಡ
ಕ್ಯಾಲಕೊಂಡ ಆಸ್ಪತ್ರೆ, ಕಾಲೇಜ ರೋಡ, ಬಾದಾಮಿ-587201
ಜಿಲ್ಲಾ: ಬಾಗಲಕೋಟ.
ಮೋ: 9448036207   ಇ-ಮೇಲ್ : drkvkyalakond@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!