ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳು

ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕಾದರೆ ಹಣ್ಣು ತರಕಾರಿಗಳನ್ನು ಅವುಗಳ ತಾಜಾರೂಪದಲ್ಲಿ ಸೇವಿಸಬೇಕು. ಅವುಗಳನ್ನು ಯಂತ್ರದಲ್ಲಿ ಹಾಕಿ ರಸ ತೆಗೆದು ಸೇವಿಸುದರೆ ಆ ಅಂಶಗಳ ಪ್ರಭಾವ ತಗ್ಗುವುದು.

ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳುಜೊತೆಯಾದ ವಿದ್ಯುತ್ಕಾಂತೀಯ ಕಣಗಳನ್ನು ಹೊಂದಿರುವ ಅಸ್ಥಿರವಾದ ಅಣುಗಳನ್ನು ‘ಸ್ವತಂತ್ರ ಬಿಡಿಕಣಗಳು”(ಫ್ರೀರ್ಯಾಡಿಕಲ್ಸ್) ಅಥವಾ ‘ಅಸ್ಥಿರ ಬಿಡಿ ತುಣುಕುಗಳು” ಎನ್ನಬಹುದು. ಅಸ್ಥಿರವಾದದ್ದು, ತಾನು ಅಸ್ಥಿರವಾದ ಕಾರಣದಿಂದಲೇ ಹೆಚ್ಚು ವೇಗವಾಗಿ ಪ್ರತಿಕಿಯಿಸುತ್ತದೆ ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಹೆಚ್ಚು ವೇಗವಾಗಿ ಪ್ರತಿಕಿಯಿಸುವ ಸ್ಥಿತಿಯೇ ಅಸ್ಥಿರತೆ. ಆದರೆ ಸ್ವತಂತ್ರ ಬಿಡಿಕಣಗಳ ಈ ವೇಗ ಮಾತ್ರ ಅಗತ್ಯವಿರುವ ಇಲೆಕ್ಟ್ರಾನ್‍ನ್ನು ಕಬಳಿಸಿ, ಆ ಮೂಲಕ ಸ್ಥಿರತೆಯನ್ನು ಪಡೆಯುವುದಕ್ಕೆ. ಹಾಗೆ ಆಗುವುದಕ್ಕೆ ಅದು ಅನುಸರಿಸುವ ಮಾರ್ಗವೆಂದರೆ ತನ್ನ ಹತ್ತಿರದ ಸ್ಥಿರ ಅಣುವನ್ನು ಆಕ್ರಮಿಸುವುದು. ನಂತರ ತನಗೆ ಬೇಕಾದ ಇಲೆಕ್ಟ್ರಾನ್‍ನ್ನು ಕದಿಯುವುದು!

ಹಾಗೆ ಆಕ್ರಮಣಕ್ಕೆ ಒಳಗಾದ ಸ್ಥಿರಾಣುವು ತನ್ನ ಇಲೆಕ್ಟ್ರಾನ್‍ನ್ನು ಕಳೆದುಕೊಂಡು ತಾನೂ ಕೂಡಾ ಒಂದು ಅಸ್ಥಿರ ಬಿಡಿ ಕಣವಾಗಿ ಮಾರ್ಪಾಟಾಗುತ್ತದೆ. ಇದು ಇನ್ನೊಂದು ಸ್ಥಿರಾಣುವನ್ನು ಆಕ್ರಮಿಸುತ್ತದೆ. ಅದು ಮತ್ತೊಂದನ್ನು. ಇದೊಂದು ಸರಣಿ ಕ್ರಿಯೆಯಾಗಿ ಮುಂದುವರಿಯುತ್ತದೆ. ಈ ರೀತಿ ಆಗುವುದರ ಅಂತಿಮ ಪರಿಣಾಮವೇನು? ಈ ವಿಷವೃತ್ತ ಆರಂಭದಲ್ಲಿ, ಕೊನೆಗೊಳ್ಳುವುದು ಒಂದು ಜೀವಕೋಶದ ಸಾವಿನಲ್ಲಿ.ಇಂತಹ ಹಾನಿಕಾರಕ ಕಣಗಳಿಂದ ಸಂಭವಿಸಬಹುದಾದ ದುರಂತವನ್ನು ತಪ್ಪಿಸುವುದಕ್ಕಾಗಿಯೇ ದೇಹದಲ್ಲಿ ‘ಜಾಡಮಾಲಿ’ಗಳು ತಮ್ಮ ರಕ್ಷಣಾವ್ಯವಸ್ಥೆಯನ್ನು ಏರ್ಪಡಿಸಿಕೊಂಡಿವೆ. ಈ ಸ್ವತಂತ್ರ ಅಸ್ಥಿರ ಅಣುಗಳಿಂದ ಆಗಬಹುದಾದ ಅಪಾಯದ ತೀವ್ರತೆ ಯಾವಾಗ ಹೆಚ್ಚಾಗುತ್ತದೆ?

ಕೋಶಪೊರೆಯೊಂದಿಗೆ ಪ್ರತಿಕ್ರಿಯಿಸಿದಾಗ, ಕೋಶಕೇಂದ್ರಗಳಲ್ಲಿರುವ ‘ನ್ಯೂನ ಆಮ್ಲಜನಕ ಶರ್ಕರಾಮ್ಲ’ (ಡಿ.ಎನ್.ಎ.)ದೊಂದಿಗೆ ಪ್ರತಿಕ್ರಿಯಿಸಿದಾಗ , ಇಂತಹ ಸಂದರ್ಭದಲ್ಲಿ ಕೋಶಗಳ ಕ್ರಿಯೆಗಳು ದುರ್ಬಲವಾಗಬಹುದು ಇಲ್ಲವೇ ಕೋಶಗಳು ಸಾಯಲೂಬಹುದು. ಆದರೆ ಈ ರೀತಿಯ ಹಾನಿಕಾರಕ ಕಣಗಳು ದೇಹದಲ್ಲಿ ಉತ್ಪತ್ತಿಯಾಗಬಹುದಾದ ಸಂದರ್ಭಗಳನ್ನು ಪರಿಶೀಲಿಸೋಣ. ಸಕ್ಕರೆಯು ರಾಸಾಯನಿಕ ಕ್ರಿಯೆಯ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಬಿಡುಗಡೆ ಮಾಡುವ ಹಾಗೂ ಆಹಾರವನ್ನು ಪಚನಗೊಳಿಸುವುದರ ಸಲುವಾಗಿ ಜೀರ್ಣಕ್ರಿಯೆಯ ಕಿಣ್ವಗಳು ಸ್ರವಿಸಲ್ಪಡುವ ಸಹಜ ಪ್ರಕ್ರಿಯೆಗಳಲ್ಲಿ ಉಪಉತ್ಪನ್ನಗಳಾಗಿ ಈ ಅಸ್ಥಿರ ಕಣಗಳು ಉಂಟಾಗುವುದು. ಧೂಮಪಾನದಂತ ಮಾಲಿನ್ಯಕಾರಕ ಸಂಗತಿಗಳು, ಭಾರವಾದ ಲೋಹವಿಷಗಳು ಮತ್ತು ಔಷಧ ದ್ರವ್ಯಗಳು ದೇಹದೊಳಗೆ ವಿಘಟನೆಗೆ ಒಳಗಾಗುವ ಸಂದರ್ಭಗಳಲ್ಲೂ ಈ ಹಾನಿಕಾರಕ ಅಣುಗಳು ಉತ್ಪತ್ತಿಯಾಗಬಹುದು.

ದೇಹದಲ್ಲಿ ಜರುಗುವ ಬದಲಾವಣೆ- ‘ಡಿ ಜನರೇಟೀವ್ ಚೇಂಜಸ್’ :

ಈ ಸ್ವತಂತ್ರ ತುಣುಕುಗಳು ನಿಧಾನವಾಗಿ ದೇಹದಲ್ಲಿ ಹುಟ್ಟುಹಾಕುವ ಹಾನಿಕಾರಕ ಬದಲಾವಣೆಗಳು ಒಂದಲ್ಲ, ಅನೇಕ. ಆ ವಿನಾಶಕಾರೀ ಪರಿವರ್ತನೆಗಳು ಒಂದೋ ಕೋಶಗಳನ್ನು ದುರ್ಬಲಗೊಳಿಸುವ ರೂಪದಲ್ಲಿರಬಹುದು ಅಥವಾ ಒಂದು ಅಂಗವನ್ನೇ, ಬಲಿತೆಗೆದುಕೊಳ್ಳಬಹುದು. ಆದರೆ ಆ ರೀತಿ ಆಗುವ ದೈಹಿಕ ನಷ್ಟಗಳು ಈ ಭ್ರಷ್ಟ ತುಣುಕುಗಳಿಂದ ಎಂದು ನಿಮಗೆ ಅರಿವೂ ಆಗದು. ಅಷ್ಟೂ ಜಾಗ್ರತೆಯಾಗಿದೆ ಅದರ ಕಾರ್ಯವಿಧಾನ. ಇಂಜೆಕ್ಷನ್ ಕೊಟ್ಟು ಹಲ್ಲು ಕಿತ್ತಂತೆ! ಈ ರೀತಿಯ ನಿಧಾನವಾಗಿ ದೇಹದಲ್ಲಿ ಜರುಗುವ ಬದಲಾವಣೆಗಳಿಗೆ ‘ಡಿ ಜನರೇಟೀವ್ ಚೇಂಜಸ್’ ಎನ್ನುತ್ತಾರೆ. ಇದು ದೇಹದ ಒಳಗೊಳಗೇ ಮೆಲ್ಲಗೇ ನಡೆಯುವ ಪ್ರಳಯ.

1. ಒಂದನೆಯದಾಗಿ, ಜೀವಕೋಶಗಳ ಕೇಂದ್ರಕ (ನ್ಯೂಕ್ಲಿಯಸ್) ದಲ್ಲಿರುವ ಡಿ ಆಕ್ಸಿರೈಬೋ ಶರ್ಕರಾಮ್ಲ(ಡಿ. ಎನ್.ಎ)ವನ್ನು ಘಾಸಿಗೊಳಿಸುವುದು. ಜೀವಕೋಶಗಳ ಸಕಲ ಚಟುವಟಿಕೆಗಳ ‘ಜೀವಾಳ’ವೇ ಇದರಲ್ಲಿರುವುದು. ಡಿ.ಎನ್.ಎಯಲ್ಲಿನ ಕಾರ್ಯವ್ಯೆಖರಿ ಗೊತ್ತಾದರೆ ಅದು ಜೀವದ ಕಾರ್ಯವ್ಯೆಖರಿ ಗೊತ್ತಾದಂತೆ. ಅಷ್ಟೂ ಗಹನ ಅದು. ಆದುದರಿಂದ ಹಾನಿಗೊಳಗಾದ ಈ ಕೇಂದ್ರೀಯ ಅಂಶವು ಹಾನಿಗೊಳಗಾದರೆ ಮುಂದೇನು? ಕೋಶಗಳು ತಮ್ಮ ಸಹಜ ಗುಣಲಕ್ಷಣವನ್ನು ಕಳೆದುಕೊಂಡು, ವಿಕೃತವಾಗಿ ಬೆಳೆಯ ಹತ್ತುವವು. ವಿಕೃತವಾದ್ದು ವಿಪರೀತ ಸಂಖ್ಯೆಯಲ್ಲಿ ವೇಗವಾಗಿ ಬೆಳೆಯ ಹತ್ತುವುದು. ಇದೇ ಕ್ಯಾನ್ಸರ್ ಅಥವಾ ಅರ್ಬುದ. ಚಲನಚಿತ್ರದ ನಿರ್ದೇಶಕ ಅಪಘಾತಕ್ಕೊಳಗಾದರೆ ನಟರು ಚೆನ್ನಾಗಿದ್ದರೂ, ಎಲ್ಲಾ ಪರಿಕರಗಳು ತಯಾರಾಗಿದ್ದರೂ ಚಿತ್ರೀಕರಣ ನಿಲ್ಲುವುದು. ಅದೇ ರೀತಿ ಕೋಶಗಳ ಸಹಜ ಕ್ರಿಯಾವಿಧಾನ ವ್ಯತ್ಯಸ್ತಗೊಳ್ಳುವುದು. ಡಿ.ಎನ್.ಎ ಹಾನಿಗೊಳ್ಳುವುದು.

2. ಎರಡನೆಯದಾಗಿ, ಹೃದಯದ ಮಾಂಸಕೋಶಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳು ಹೃದಯದ ಅಳಿವು ಉಳಿವನ್ನು ನಿರ್ಧರಿಸುತ್ತವೆ. ಈ ರಕ್ತನಾಳಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯನ್ನು ಅಧಿಕಗೊಳಿಸುತ್ತವೆ. ಇದು ಸಾವಿನ ಮೂಲಕಾರಣವಾದ ಹೃದಯಾಘಾತದ ಕಾರಣ ಬೇರಲ್ಲ. ಈ ಹೃದಯದ ‘ಕೊರೊನರಿ ರಕ್ತನಾಳ’ ಗಳ ಹಾನಿಯೇ ಇವೆಲ್ಲದರ ಬೇರು ಆಗಿದೆ. ರಕ್ತನಾಳಗಳಲ್ಲಿನ ಅಡಚಣೆಗೆ ಅತ್ಯಂತ ಸಹಾಯಕ ಅಂಶವಾದ ಕಡಿಮೆ ಸಾಂದ್ರತೆಯ ಮೇದೋಆಮ್ಲಗಳು (ಎಲ್.ಡಿ.ಎಲ್-ಲೋ ಡೆನ್ಸಿಟಿ ಲಿಪೋಪ್ರೋಟೀನ್ ಅಥವಾ ಹಾನಿಕಾರಕ ಕೊಲೆಸ್ಟರಾಲ್) ರಕ್ತನಾಳಗಳ ಒಳಮೈಗೆ ಗಟ್ಟಿಯಾಗಿ ಅಂಟಿಕೊಳ್ಳುವುದನ್ನು ಉತ್ತೇಜಿಸುತ್ತವೆ.

3. ಮೂರನೆಯದಾಗಿ ಯುವಕರಾಗಿರುವುದೇ ನಮಗೆ ಅತ್ಯಂತ ಪ್ರಿಯ. ನಾವೆಲ್ಲರೂ ವಯಸ್ಸಾಗುವುದನ್ನು ಬಯಸಲಾರೆವು. ಆದರೆ ಈ ಬಿಡಿತುಣುಕುಗಳು ವಯಸ್ಸಾಗುವಿಕೆಯನ್ನು ತೀವ್ರಗೊಳಿಸುತ್ತವೆ. ಮುಖದಲ್ಲಿ ನೆರಿಗೆಗಳು, ಚರ್ಮ ಜೋತು ಬೀಳುವುದು, ಕೂದಲು ಬೆಳ್ಳಗಾಗುವುದು, ಕೂದಲು ಉದುರುವುದು ಇತ್ಯಾದಿಗಳಿಂದ ದೇಹವನ್ನು ಕುರೂಪಗೊಳಿಸುತ್ತವೆ.

4. ನಾಲ್ಕನೆಯದಾಗಿ, ಮೆದುಳಿನ ನರಕೋಶಗಳಿಗೆ ಹಾನಿಯನ್ನೆಸಗುತ್ತವೆ. ಇದರಿಂದಾಗಿ ‘ಪಾರ್ಕಿನ್‍ಸನ್ನನ ಕಾಯಿಲೆ’ ಮತ್ತು ಇತೀಚೆಗೆ ಚರ್ಚೆಗೊಳಗಾಗುತ್ತಿರುವ ‘ಆಲ್‍ಝೀಮರನ ಕಾಯಿಲೆ’ ಗಳು ಕಾಣಿಸಿಕೊಳ್ಳುತ್ತವೆ. ನರಮಂಡಲವು ಇಡೀ ದೇಹವನ್ನು ನಿಯಂತ್ರಣದಲ್ಲಿಡುವಂತದ್ದು. ಇದುವೇ ತೊಂದರೆಗೊಳಗಾದಾಗ ದೇಹದ ಚಟುವಟಿಕೆಗಳು ಮಾತ್ರವಲ್ಲ, ಬೌದ್ಧಿಕ ಸಾಮಥ್ರ್ಯಗಳೂ ಕುಂಠಿತಗೊಂಡು ಮತ್ತೆ ಶಿಶುತನಕ್ಕೆ ಮರಳುತ್ತಾನೆ.

5. ಸಂಧಿಗಳಲ್ಲಿನ ಉರಿಯೂತ ಸಂಧಿವಾತ (ಆರ್ಥೈಟಿಸ್) ಕಾಯಿಲೆಯನ್ನು ಉಂಟುಮಾಡುತ್ತದೆ. ನಡೆಯಬೇಕೆಂದು ಬಯಸಿದರೂ ಗಂಟುನೋವಿನ ದೆಸೆಯಿಂದ ನಡೆಯಲಾರದೆ ಚಡಪಡಿಸುವಂತಾಗುತ್ತದೆ.

6. ಆರನೆಯದಾಗಿ, ಕಾಣಬೇಕೆನ್ನಿಸಿದರೂ ಕಾಣಲಾರದ ಅಂಧತ್ವ ಪ್ರಾಪ್ತಿ ಕಣ್ಣಿನ ಮಸೂರ (ಲೆನ್ಸ್) ದ ಸಾಮಥ್ರ್ಯವು ಒಂದೇ ಸಮನೆ ತಗ್ಗುತ್ತಾ ತಗ್ಗುತ್ತಾ ಹೋಗಿ ಕುರುಡುತನವೇ ಬಂದುಬಿಡುತ್ತದೆ. ಹಾನಿಕಾರಕವಾದ ಸ್ವಚ್ಛಂದ ತುಣುಕು (ಫ್ರೀರ್ಯಾಡಿಕಲ್ ) ಗಳೊಂದಿಗೆ ಅತ್ಯಂತ ಸುರಕ್ಷಿತವಾಗಿ ಪ್ರವರ್ತಿಸುವ ಅಣುಗಳೇ ಔಷಧೀಯ ಜಾಡಮಾಲಿಗಳು (ಫ್ರೀರ್ಯಾಡಿಕಲ್ ಸ್ಕೇವೆಂಜರ್ಸ್). ಆ ಮೂಲಕ ವಿನಾಶಕಾರಿಯಾದ ರಾಸಾಯನಿಕಗಳ ಸರಣಿ ಕ್ರಿಯೆಯನ್ನು ಸ್ಥಗಿತಗೊಳಿಸುವುದು. ಹೀಗಿರುವುದರಿಂದ ಪ್ರಾಣಪೋಷಕವಾದ ಜೈವಿಕ ಕಣಗಳ ಹಾನಿಯನ್ನು ತಪ್ಪಿಸುವುದು.

ದೇಹ ಪಾಲಕರು:

ಹಾನಿಕಾರಕವಾದ ಆ ಸ್ವಚ್ಛಂದ ಕಣಗಳನ್ನು ತೊಡೆದು ಹಾಕಬಲ್ಲ ಜೈವಿಕ ಕಿಣ್ವಗಳು ನಮ್ಮ ದೇಹದಲ್ಲೂ ಇವೆ. ಇವು ಸಹಜ ಮತ್ತು ಆಹಾರ ದ್ರವ್ಯಗಳ ಸೂಕ್ಷ್ಮ ಸತ್ವಗಳು. ಬಹಳ ಮುಖ್ಯವಾದದ್ದು ದೇಹ ವ್ಯಾಪಾರವನ್ನು ಕಾಯ್ದುಕೊಳ್ಳುವಲ್ಲಿ ಅತೀ ಅಗತ್ಯವಾದ ಸೂಕ್ಷ್ಮರೂಪಿಯಾದ ಜೀವಸತ್ವಗಳು (ವಿಟಾಮಿನ್). ಅವುಗಳಲ್ಲೂ ಮುಖ್ಯವಾಗಿ ‘ಇ’ ಜೀವಸತ್ವ. ‘ಎ’ ಜೀವಸತ್ವ ಮತ್ತು ‘ಸಿ’ ಜೀವಸತ್ವ. ಅಷ್ಟೇ ಅಲ್ಲದೆ ಲವಣಾಂಶಗಳಾದ ತಾಮ್ರ, ಸತು (ಝಿಂಕ್) ಮತ್ತು ಸೆಲೇನಿಯಮ್. ಇನ್ನು ಕೆಲವು ಆಹಾರ ಸಾಮಾಗ್ರಿಗಳಲ್ಲಿರುವ ಘಟಕ ದ್ರವ್ಯಗಳೂ ಈ ಗುಣವನ್ನು ಹೊಂದಿವೆ. ಅಂತಹವುಗಳಿಗೆ ಸಸ್ಯಮೂಲದ ರಾಸಾಯನಿಕಗಳು (ಫೈಟೋಕೆಮಿಕಲ್ಸ್) ಎನ್ನುತ್ತಾರೆ. ಗಮನಿಸಬೇಕಾದ ವೈಶಿಷ್ಟ್ಯದ ಸಂಗತಿಯೊಂದಿದೆ. ಈ ಸತ್ಯಮೂಲದ ರಾಸಾಯನಿಕಗಳ ಗುಂಪಿನ ದ್ರವ್ಯಗಳು ಜೀವಸತ್ವ ಹಾಗೂ ಲವಣಾಂಶಗಳಿಗಿಂತಲೂ ಅಧಿಕತರವಾದ ಜಾಡಮಾಲೀ ಗುಣವನ್ನು ಹೊಂದಿವೆ. ಅವು ಆಹಾರದಲ್ಲಿನ ಮುಖ್ಯ ಹಾಗೂ ಅಗತ್ಯ ಘಟಕ ಭಾಗಗಳಂತೆ ‘ದೇಹಪೋಷಕ’ಗಳಲ್ಲ. ಆದರೆ ದೇಹಪಾಲಕ’ರು. ಆದರೆ ‘ಆರೋಗ್ಯ’ ಎಂಬುವುದು ಸಿದ್ದಿಸುವುದು., ‘ಪಾಲನೆ’ ಮತ್ತು ‘ಪೋಷಣೆ’ ಗಳೆರಡೂ ಜೊತೆಯಾಗಿ ಸಾಗಿದಾಗ ತಾನೇ? ಈ ‘ದೇಹಪಾಲಕ’ ಅಂಶಗಳನ್ನು ದೇಹವು ಉತ್ಪಾದಿಸುವುದಿಲ್ಲ. ಅವುಗಳನ್ನು ನಮ್ಮ ಆಹಾರ ಪದಾರ್ಥಗಳೇ ದಯಪಾಲಿಸಬೇಕಷ್ಟೇ.

ಈ ಕೆಳಗಿನ ಕೆಲವೊಂದು ಪದಾರ್ಥಗಳಲ್ಲಿನ ಚೌಡಮಾಲೀ ಅಂಶಗಳನ್ನು ಪಟ್ಟಿ ಮಾಡಬಹುದು.

fruits and vegetables

1. ದ್ರಾಕ್ಷೆ-ಆಂಥೋಸಯನಿನ್ಸ್,

2. ಈರುಳ್ಳಿ ಮತ್ತು ಬೆಳ್ಳುಳ್ಳಿ- ಎಲಿಯಂ ಗಂಧಕ ಸಂಯುಕ್ತಗಳು,

3. ಮಾವು &ಕ್ಯಾರೆಟ್- ಬೀಟಾ ಕೆರೋಟಿನ್ (ಜೀವಸತ್ವ ಎ’),

4. ಚಹಾ- ಕಾಟೆಚಿನ್ಸ್,

5. ಹಾಲು ಬೀಜಗಳು- ತಾಮ್ರ, ಮ್ಯಾಂಗನೀಸ್, ಸತು, (ಝಿಂಕ್)

6. ಕೆಂಪುಮೆಣಸು, ಮಾವು- ಕ್ರಿಪ್ಟೋಕ್ಸಾಂಥಿನ್ಸ್,.

7. ಈರುಳ್ಳಿ, ಸೇಬು, ಚಹಾ,ನಿಂಬೆಯ ವರ್ಗದ ಹಣ್ಣುಗಳು- ಪ್ಲೇವೋನಾಯ್ಡ್ಸ್,.

8. ಕ್ಯಾಬೇಜ್, ಕೋಲಿಫ್ಲವರ್, -ಇಂಡೋಲ್ಸ್,.

9. ಸೋಯಾಬೀಜ, ಬಟಾಣಿ, ಹಾಲು -ಐಸೋಫ್ಲೇವೊನಾಯ್ಡ್ಸ್

10. ತರಕಾರಿ ಮತ್ತು ಧಾನ್ಯಗಳು- ಲಿಗ್ನಾನ್ಸ್.

11. ದ್ರಾಕ್ಷೆ, ಟೊಮ್ಯಾಟೋ, ಕಲ್ಲಂಗಡಿ ಹಣ್ಣು- ಲೈಕೋಪೀನ್.

12. ಇಡಿ ಧಾನ್ಯಗಳು-ಸೆಲೇನಿಯಂ,

13. ’ಸಿ’ ಜೀವಸತ್ವ- ಕಿತ್ತಳೆ, ನಿಂಬೆ, ನೆಲ್ಲಿಕಾಯಿ, ಮಾವು, ಇತ್ಯಾದಿ.

14. ‘ಇ’ ಜೀವಸತ್ವ- ಬೀಜಗಳು, ಎಣ್ಣೆಕಾಳುಗಳು.

ಕೆಲವೊಂದು ಜಾಡಮಾಲೀ ಅಂಶಗಳು ಕೆಲವು ರೋಗಗಳನ್ನು ಬಾರದಂತೆ ತಡೆಗಟ್ಟುವಲ್ಲಿ ಪ್ರಧಾನಪಾತ್ರ ವಹಿಸುವುದೆಂದು ಪ್ರಮಾಣೀಕೃತವಾಗಿದೆ. ‘ಲೈಕೋಪಿನ್’ ಎಂಬ ಅಂಶವು ವೃಷಣ ಗ್ರಂಥಿ (ಪ್ರೋಸ್ಟೇಟ್) ಯು ಊದಿಕೊಳ್ಳುವುದನ್ನು ಮತ್ತು ವೃಷಣಗ್ರಂಥಿಯ ಕ್ಯಾನ್ಸರ್‍ನ ಸಾಧ್ಯತೆಯನ್ನು ಕಡಿಮೆಗೊಳಿಸುವುದು, ‘ಲೈಕೋಪೀನ್’ ಅಂಶವು ಟೊಮ್ಯಾಟೋ, ಕಲ್ಲಂಗಡಿ, ದ್ರಾಕ್ಷೆಗಳಲ್ಲಿ ಹೆಚ್ಚಾಗಿರುವುದು. ಪ್ರೋಸ್ಟೇಟ್ ತೊಂದರೆಯು ವೃದ್ಧಾಪ್ಯದಲ್ಲಿ ಸರ್ವೇ ಸಾಮಾನ್ಯ. ಇವೆಲ್ಲದರ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕಾದರೆ ಹಣ್ಣು ತರಕಾರಿಗಳನ್ನು ಅವುಗಳ ತಾಜಾರೂಪದಲ್ಲಿ ಸೇವಿಸಬೇಕು. ಅವುಗಳನ್ನು ಯಂತ್ರದಲ್ಲಿ ಹಾಕಿ ರಸ ತೆಗೆದು ಸೇವಿಸುದರೆ ಆ ಅಂಶಗಳ ಪ್ರಭಾವ ತಗ್ಗುವುದು.

‘ಚಹಾ’ ದಲ್ಲಿ ‘ಕ್ಯಾಟೆಚಿನ್’ ಎಂಬ ಜಾಡಮಾಲೀ ಅಂಶವಿದೆ. ಆದರೆ ಇದು ‘ಚಹಾ’ದ ಮೂರು ಪ್ರಭೇದಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿದೆ. ಆದರೆ ಆ ಮೂರು ರೂಪಗಳೂ ಕೂಡ ‘ಕ್ಯೇಮೇಲ್ಲಿಯಾ ಸೈನೆನಿಸ್’ ಎಂಬ ಒಂದೇ ಸಸ್ಯಮೂಲದಿಂದಲೇ ತಯಾರಾಗುವುದು. ‘ಹಸಿರು ಚಹಾ’ (ಗ್ರೀ ನ್ ಟೀ) ದಲ್ಲಿ ‘ಕಾಟೆಚಿನ್’ ಅತ್ಯಧಿಕವಾಗಿರುವುದು. ‘ಕಪ್ಪು ಚಹಾ’ ಹಸಿರು ಚಹಾವನ್ನು ಸಂಸ್ಕರಣೆಗೊಳಪಡಿಸಿ ತಯಾರುಮಾಡುವುದರಿಂದ ಆ ಅಂಶವು ಕಡಿಮೆಯಾಗುವುದು. ಶ್ವಾಸಕೋಶದ ಅರ್ಬುದವನ್ನು ತಡೆಗಟ್ಟುವಲ್ಲಿ ಪಾತ್ರವಹಿಸುತ್ತದೆ ಎಂದು ಹೇಳಲಾದ ಅಂಶ. ‘ಬೀಟಾಕೆರೋಟೀನ್’ ಹಳದಿ ವರ್ಣದ ಇದನ್ನು 150 ವರ್ಷಗಳ ಹಿಂದೆಯೇ ಕ್ಯಾರೆಟ್ ಗಳಿಂದ ಪ್ರತ್ಯೇಕಿಸಲಾಗಿತ್ತು. ಅದಕ್ಕಾಗಿ ಕೆರೋಟಿನ್ ಎಂಬ ಹೆಸರು.

ಸ್ತನ, ಅನ್ನನಾಳ, ಮೂತ್ರಜನಕಾಂಗ, ಜಠರ ಹಾಗೂ ಮೇದೋಜೀರಕಗ್ರಂಥಿಯ ಅರ್ಬುದಗಳನ್ನು ತಡೆಗಟ್ಟುವಲ್ಲಿ ‘ಸಿ’ ಜೀವಸತ್ವದ ಪಾತ್ರವು ಪ್ರಮಾಣೀಕೃತವಾಗಿದೆ ಮತ್ತು ವಿಫುಲವಾಗಿ ಸ್ವೀಕೃತವಾಗಿದೆ. ‘ಇ’ ಜೀವಸತ್ವವು ರಕ್ತಹೆಪ್ಪುಗಟ್ಟಲು ಕಾರಣವಾದ ‘ಪ್ಲೇಟ್‍ಲೆಟ್’ ಕಣಗಳ ಒಗ್ಗೂಡುವಿಕೆಯನ್ನು ತಡೆಗಟ್ಟುತ್ತದೆ. ಇದರಿಂದಾಗಿ ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟಲಾರದು. ಬಹುತೇಕ ಹೃದಯಾಘಾತ ಹಾಗೂ ಪಕ್ಷಘಾತಗಳಲ್ಲಿ ರಕ್ತಹೆಪ್ಪುಗಟ್ಟುವುದು ಒಂದು ಮುಖ್ಯ ಕಾರಣವಾಗಿರುತ್ತದೆ. ‘ಇ’ ಜೀವಸತ್ವವು ದೇಹದಲ್ಲಿನ ಎಲ್ಲಾ ಪೊರೆಗಳನ್ನು ಸುಸ್ಥಿಯಲ್ಲಿಡುವುದೆಂದು ಹೇಳಲಾಗಿದೆ. ಅದು ದೇಹವನ್ನು, ಪೊರೆಯುವ ಅದರ ರೀತಿ ಮತ್ತು ಸ್ವಭಾವ.

fruitsಆಹಾರವನ್ನು ಸಾಧ್ಯವಾದಷ್ಟು ಅವುಗಳ ಅಸಲಿ ರೂಪದಲ್ಲಿ ಸೇವಿಸಿ. ತಾಜಾ ಹಣ್ಣು ಮತ್ತು ತರಕಾರಿಗಳನ್ನು ದಿನಕ್ಕೆ ನಾಲ್ಕೈದು ಬಾರಿಯಾದರು ಸೇವಿಸಿ. ಔಷಧೀಯ ಜಾಡಮಾಲೀ ಅಂಶಗಳನ್ನು ಮಾತ್ರೆಗಳ ರೂಪದಲ್ಲಿ ಸೇವಿಸಿದರೆ ನೈಸರ್ಗಿಕವಾದ ಜಾಡಮಾಲೀ ಅಂಶಗಳನ್ನು ತರಕಾರಿ ಮತ್ತು ಹಣ್ಣುಗಳ ಮೂಲಕ ಸೇವಿಸಿದಷ್ಟು ಪ್ರಯೋಜನ ಲಭಿಸಲಾರದು. ಆದುದರಿಂದ ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ನೈಸರ್ಗಿಕ ರೂಪದಲ್ಲೇ ಸೇವಿಸುವುದು ಹೆಚ್ಚು ಶ್ರೇಯಸ್ಕರ.

ಬೇರೆ ಬೇರೆ ವರ್ಣದ ತರಕಾರಿ, ಹಣ್ಣುಗಳನ್ನು ಸೇವಿಸಿ. ಪ್ರತಿಯೊಂದು ವರ್ಣಕ್ಕೆ ಸಂಬಂದಿಸಿದ ಗುಂಪಿನ ತರಕಾರಿಗಳು ವಿಧವಿಧದ ವಿಶಿಷ್ಟ ಜಾಡಮಾಲೀ ಅಂಶಗಳನ್ನು ಒಳಗೊಂಡಿವೆಯೆಂದು ತಜ್ಞರು ಹೇಳುತ್ತಾರೆ. ಕೆಂಪು, ನೇರಳೆ, ಕಡುಹಸಿರು, ತಿಳಿಹಸಿರು, ಹಳದಿ, ಕಿತ್ತಳೆ ವರ್ಣ, ಬಿಳಿವರ್ಣಗಳಲ್ಲಿ ಒಂದೊಂದರಿಂದಲೂ ಆಯ್ಕೆ ಮಾಡಿ. ಜಾಡಮಾಲೀ ಅಂಶಗಳು ಈ ರೀತಿ ನಾನಾರೂಪಗಳಲ್ಲಿ ದೇಹದ ಒಳಸೇರುವುದರಿಂದ ದೇಹವು ಸೂಕ್ಷ್ಮಾಣುಗಳನ್ನು ನಿರ್ಬಂಧಿಸಲು ಸಮರ್ಥವಾಗಿರುತ್ತದೆ. ರೋಗಾಣು ಸೋಂಕನ್ನು ತಡೆಗಟ್ಟುವಲ್ಲಿ ಇದು ಸಹಕಾರಿ. ಒಂದು ಮುಷ್ಟಿ ಬೀಜಗಳನ್ನು (ಗೋಡಂಬಿ, ಬಾದಾಮಿ ಇತ್ಯಾದಿ) ದಿನವೂ ಸೇವಿಸಿ. ಅವುಗಳಲ್ಲಿ ಹೃದಯಕ್ಕೆ ಹಿತಕಾರಿಯಾದ ಕೊಬ್ಬಿನಂಶವಿದೆ. ಅಲ್ಲದೇ, ಆರೋಗ್ಯಕರವಾದ ಸೆಲೇನಿಯಂ ಅಂಶವೂ ಇದೆ. ಆದುದರಿಂದ ಆಯುಷ್ಯವು ಅಧಿಕಗೊಳ್ಳುವುದೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಆಯುರ್ವೇದಲ್ಲಿ ಜಾಡಮಾಲಿಗಳು:

ಆಯುರ್ವೇದದಲ್ಲಿ ಈ ಜಾಡಮಾಲೀ ಅಂಶಗಳನ್ನು ಆಧಿಕವಾಗಿ ಹೊಂದಿರುವ ದ್ರವ್ಯಗಳನ್ನು ‘ರಸಾಯನ’ಗಳೆಂಬುದಾಗಿ ಅರ್ಥಪೂರ್ಣವಾಗಿ ಕರೆದಿದ್ದಾರೆ. ಈ ವಿವರಗಳು ವೈಜ್ಞಾನಿಕವೆಂದು ಆಂಟಿಆಕ್ಸಿಡೆಂಟ್ ಗುಣವು ಸಾಬೀತುಪಡಿಸಿದೆ. “ರಸಾಯನಂ ಯತ್ ಜರಾವ್ಯಾದಿನಾಶನಂ”. ಯಾವುದು ಮುಪ್ಪು ಮತ್ತು ರೋಗವನ್ನು ದೂರವಿಡುವುದೋ ಅದೆಲ್ಲವನ್ನು ರಸಾಯನವೆಂದು ಕರೆದಿರುವುದು ’ಔಷಧೀಯ ಚೌಡಮಾಲೀ ಅಂಶ’ಗಳಿಗೆ ಸಾಮ್ಯತೆಯನ್ನು ಹೊಂದಿವೆ. ಗುಗ್ಗುಲು, ಆಮಲಕ್ಕಿ(ನೆಲ್ಲಿಕಾಯಿ), ತುಪ್ಪ, ಶುಂಠೀ ಇತ್ಯಾದಿ ಅನೇಕ ದ್ರವ್ಯಗಳನ್ನು ಆಯುರ್ವೆದದಲ್ಲಿ ಹೆಸರಿಸಲಾಗಿದೆ. ‘ಕಾಫಿ’ ಸೇವನೆಯು ಒಳ್ಳೆಯದೋ ಕೆಟ್ಟದೋ ಎಂಬುದರ ಬಗ್ಗೆ ಬೇರೆ ಬೇರೆ ವಿಜ್ಞಾನಿಗಳಲ್ಲಿ, ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ.

ಕಾಫಿ ಸೇವನೆಯಿಂದ ಜಠರದ ಹುಣ್ಣು ಉಂಟಾಗುವುದೆಂದು ಒಬ್ಬರು ಹೇಳಿದರೆ, ಅದು ಸಂತಾನೋತ್ಪತ್ತಿ ಸಾಮಥ್ರ್ಯವನ್ನು ಕುಂಠಿತಗೊಳಿಸುವುದೆಂದು ಮತ್ತೊಬ್ಬರು ಅಭಿಪ್ರಾಯ ಪಡುತ್ತಾರೆ. ಆದರೆ ಯೂ.ಎಸ್.ಎ.ನಲ್ಲಿನ ವಾಂಡರ್ ಬಿಲ್ಟ್ ಯೂನಿವರ್ಸಿಟಿಯಲ್ಲಿನ ‘ಇನ್ಸ್ಟಿಟ್ಯೂಷನ್ ಫಾರ್ ಕಾಫಿ ಸ್ಟಡೀಸ್’ ನಲ್ಲಿರುವ ಪ್ರೊ. ಪೀಟರ್ ಮಾರ್ಟಿನ್ ಎಂಬ ವಿಜ್ಞಾನಿ ಕಾಫಿಯಲ್ಲಿ ಜಾಡಮಾಲೀ ಅಂಶಗಳು ಹೇರಳವಾಗಿವೆ ಎನ್ನುತ್ತಾರೆ. ಕಾಫಿಯಲ್ಲಿರುವ ‘ಕ್ಲೋರೋಜೆನಿಕ್ ಆಸಿಡ್’ಈ ಪ್ರಯೋಜನವನ್ನು ಸಾಧಿಸುತ್ತದೆ ಎಂಬುದಾಗಿ ತಮ್ಮ ಸಂಶೋಧನೆಯ ವಿವರಗಳನ್ನು ಬಿಡಿಸಿ ಹೇಳುತ್ತಾರೆ. ‘ಏನ್ ಅಪಲ್ ಎ ಡೇ ಕೀಪ್ಸ್ ದಿ ಡಾಕ್ಟರ್ ಎವೇ’ ಎಂಬುದು ನಾಣ್ಣುಡಿ. ಒಂದು ಸೇಬು ದಿನವೂ ತಿಂದರೆ ವೈದ್ಯರನ್ನು ದೂರವಿಡಬಹುದು. ಅಂದರೆ ಕಾಯಿಲೆಯನ್ನು ದೂರವಿಡಬಹುದು ಎಂದು ತಾನೇ ಅದರ ಅರ್ಥ?

ಆದರೆ, ಕಾಫಿ ಕುಡಿಯುವವರ ಬಗ್ಗೆ ಹೇಳುವುದಾದರೆ ಅವರು ವೈದ್ಯರನ್ನು ದೂರವಿಡುವ ಪ್ರಸಂಗವಿಲ್ಲ. ಬದಲಾಗಿ ಒಂದು ಗ್ಲಾಸ್ ಕಾಫಿ ಕುಡಿಯಲು ವೈದ್ಯರನ್ನು ಮನೆಗೆ ಆಮಂತ್ರಿಸಬಹುದು! ಇವೆಲ್ಲವು ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ ಅಲ್ಲವೇ? ‘ಯೂನಿವರ್ಸಿಟಿ ಆಫ್ ಮಿಯಾಮಿ ಮಿಲ್ಲರ್ ಸ್ಕೂಲ್ ಆಫ್ ಮೆಡಿಸಿನ್’ ಇಲ್ಲಿನ ಮಕ್ಕಳ ಚಿಕಿತ್ಸಾ ತಜ್ಞರಾದ ಡಾ|| ಟ್ರೇಸಿ ಮಿಲ್‍ರೆಟ್- ಇವರು – “ಅಧಿಕ ಸಿಹಿತಿಂಡಿಗಳಿಲ್ಲದ ಮತ್ತು ಕೃತಕ ರಾಸಾಯನಿಕಗಳಿಂದ ಕೂಡಿರದ, ಪ್ರೋಟೀನ್ ಹಣ್ಣು ತರಕಾರಿಗಳಿಂದ ಕೂಡಿರುವ ಸಮತೋಲಿತ ಆಹಾರವೇ ನಮ್ಮ ಅಗತ್ಯ’’ ಎಂಬುದನ್ನು ಎಚ್ಚರಿಸುತ್ತಾರೆ.

ಡಾ.  ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್ ಪುರುಷರಕಟ್ಟೆ ಪುತ್ತೂರು. ಅಸಿಸ್ಟೆಂಟ್ ಪ್ರೊಫೆಸರ್, ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.

ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ,ಸುಳ್ಯ
ಮೊಬೈಲ್:9740545979 email: rpbangaradka@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!