ಕಾಫಿ ಆರೋಗ್ಯಕ್ಕೆ ಒಳ್ಳೆಯದು : ನೀವು ತಿಳಿದಂತೆ ವಿಲನ್ ಅಲ್ಲ

ಕಾಫಿ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ. ಕಾಫಿಯನ್ನು ಇಡಿಯಾಗಿ, ಪೂರ್ಣವಾಗಿ ದಿನಕ್ಕೆ ಎರಡರಿಂದ ಮೂರು ಕಪ್ ಸೇವಿಸಿ.  ಆದರೆ ಸಕ್ಕರೆ ಹಾಕದೆ ಸೇವಿಸಿ.

ಕಾಫಿ ಆರೋಗ್ಯಕ್ಕೆ ಒಳ್ಳೆಯದು : ನೀವು ತಿಳಿದಂತೆ ವಿಲನ್ ಅಲ್ಲ

” ಕಾಫಿ ಕುಡಿದರೆ ನನಗೆ ಎಸಿಡಿಟಿ ಆಗುತ್ತದೆ”, ” ಕಾಫಿ ಕುಡಿದರೆ ನನಗೆ ಆಗಿಬರುವುದಿಲ್ಲ”, ” ಕಾಫಿ ಅಷ್ಟು ಒಳ್ಳೆಯದಲ್ಲ ಅಲ್ಲವೇ? “, ” ನನಗೆ ಕಾಫಿ ಕುಡಿಯದಿದ್ದರೆ ಉಲ್ಲಾಸವೇ ಇರುವುದಿಲ್ಲ”, ” ಕಾಫಿ ಕುಡಿಯಬಹುದೇ” ಇತ್ಯಾದಿ ಮಾತುಗಳನ್ನು, ಸಂಶಯಗಳನ್ನು ನಾವು ಬಹಳಷ್ಟು ಸಲ ಕೇಳಿರುತ್ತೇವೆ. ಅದರಲ್ಲೂ ಆಯುರ್ವೇದ ವೈದ್ಯರಂತೂ ಕೆಲವು ಸಲ ಕೆಲವರು ರೋಗಿಗಳಿಗೆ ಅವಶ್ಯಕತೆಗೆ ತಕ್ಕಂತೆ ಕಾಫಿಯನ್ನು ನಿಷೇಧಿಸುವುದೂ ಇದೆ. ಹಾಗಾದರೆ ಕಾಫಿಯ ಕುರಿತಾಗಿ ಇರುವ ಸತ್ಯ ಅಥವಾ ಸುಳ್ಳುಗಳು ಏನು?

ಕಾಫಿ ಸೇವನೆ ಹೃದಯ ರೋಗವನ್ನು ತಡೆಗಟ್ಟುವುದು:

ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಇದರ 71ನೇಯ ವೈಜ್ಞಾನಿಕ ವಿಚಾರ ಸಂಕಿರಣ. ಅಲ್ಲಿಯ ವೈಜ್ಞಾನಿಕ ವರದಿಗಳ, ಅಧ್ಯಯನಗಳ ಮಂಡನೆಯ ಪ್ರಕಾರ ದಿನಕ್ಕೆ 2ರಿಂದ 3 ಕಪ್ ಕಾಫಿ ಸೇವನೆ ಹೃದಯ ರೋಗವನ್ನು ತಡೆಗಟ್ಟುವುದು. ಹೃದಯದ ಬಡಿತದಲ್ಲಿ ಆಗುವ ಏರುಪೇರನ್ನು ತಡೆಗಟ್ಟುವುದು. ಜೀವಿತಾವಧಿಯನ್ನು ಹೆಚ್ಚಿಸುವುದು. ಇದು ಈಗಾಗಲೇ ಹೃದಯದ ಕಾಯಿಲೆ ಹೊಂದಿರುವ ಮತ್ತು ಹೊಂದದಿರುವ ಇಬ್ಬರಿಗೂ ಅನ್ವಯಿಸುವುದು. ಇದರಿಂದ ಹೃದ್ರೋಗದಲ್ಲಿ ಮತ್ತು ಮರಣದಲ್ಲಿ ಕಾಫಿಯ ಪಾತ್ರ ನಾವು ಈ ಮೊದಲು ಭಾವಿಸಿದಂತೆ ಋಣಾತ್ಮಕ ಪರಿಣಾಮವನ್ನು ಹೊಂದಿಲ್ಲ ಎಂಬುದು ಸಾಬೀತಾಯಿತು.

ಕಾಫಿಯು ಹೃದಯದ ಬಡಿತವನ್ನು ವೇಗವನ್ನು ಹೆಚ್ಚಿಸುವುದರಿಂದ ಈ ಕಾಫಿ ಹಾನಿಕಾರಕ ಎಂಬ ತಪ್ಪುಕಲ್ಪನೆ ಬಂದಿರಬಹುದು. ಆದರೆ ಅಧ್ಯಯನಗಳ ಆಧಾರದಲ್ಲಿ ಕಾಫಿ ಸೇವನೆಯನ್ನು ಖಂಡಿತವಾಗಿ ನಾವು ಉತ್ತೇಜಿಸಬಹುದು. ಹೃದಯದ ತೊಂದರೆ ಇದ್ದವರು ಮತ್ತು ಇಲ್ಲದವರು,ಆರೋಗ್ಯಕರ ಆಹಾರದ ಭಾಗವಾಗಿ ಇದನ್ನು ಮಾಡಿಕೊಳ್ಳಬಹುದು. ಆಸ್ಟ್ರೇಲಿಯಾದಲ್ಲಿನ ಮೆಲ್ಬೋರ್ನ್ ಎಂಬಲ್ಲಿನ ಆಲ್ಫ್ರೆಡ್ ಹಾಸ್ಪಿಟಲ್ ಮತ್ತು ಬೇಕರ್ ಹಾರ್ಟ್ ಇನ್ಸ್ಟಿಟ್ಯೂಟ್ ನಲ್ಲಿರುವ ಹೃದಯದ ಏರುಪೇರಿನ ಅಧ್ಯಯನ ವಿಭಾಗವು ಕಾಫಿಯ ಪ್ರಯೋಜನಕಾರಿ ಅಂಶವನ್ನು ಒತ್ತಿ ಹೇಳಿದೆ- ” ನಾವು ನೋಡಿದ ಪ್ರಕಾರ ಕಾಫಿಯು ಒಂದು ಹಾನಿಮಾಡದ ತಟಸ್ಥ ದ್ರವ್ಯ, ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ”.

ಯು.ಕೆ.ಬಯೋ ಬ್ಯಾಂಕ್ ಎಂಬ ಆರೋಗ್ಯ ಮಾಹಿತಿಗಳ ದೊಡ್ಡಮಟ್ಟದ ಡಾಟಾಬೇಸ್ ಇದೆ. ಸಂಶೋಧಕರು ಇದನ್ನು ಆಧರಿಸಿ ಅರ್ಧ ಮಿಲಿಯಕ್ಕೂ ಹೆಚ್ಚು ಜನರನ್ನು ಹತ್ತು ವರ್ಷಗಳ ಅಧ್ಯಯನದ ಆಧಾರದಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಸಂಶೋಧಕರು ಇದಕ್ಕೆ ವಿಧಾನವೊಂದನ್ನು ಅನುಸರಿಸಿದ್ದಾರೆ. ಒಂದು ಕಪ್ ನಿಂದ ತೊಡಗಿ ಆರು ಕಪ್ ಗಳವರೆಗೆ ಪ್ರತಿದಿನ ಕಾಫಿ ಸೇವಿಸಿದ ಜನರ ಹೃದಯದ ಬಡಿತವನ್ನು, ಸ್ಥಿತಿಯನ್ನು ಶೋಧನೆಗೆ ಒಳಪಡಿಸಿದರು. ಹೃದಯದ ಕೊರೊನರಿ ರಕ್ತನಾಳಗಳು, ಹೃದಯದ ವೈಫಲ್ಯ , ಹೃದಯಾಘಾತಗಳು ಕೂಡ ಈ ಅಧ್ಯಯನದ ಭಾಗವಾಗಿದ್ದವು.

ಮೊದಲ ಹಂತದ ಅಧ್ಯಯನದಲ್ಲಿ ಹೃದಯದ ಕಾಯಿಲೆ ಇಲ್ಲದ, 3,82,535 ವ್ಯಕ್ತಿಗಳನ್ನು ಆಯ್ದುಕೊಂಡರು. ಹತ್ತು ವರ್ಷಗಳ ಕಾಲ ಅವರ ಹೃದಯದ ಚಟುವಟಿಕೆ ಮತ್ತು ಸ್ಥಿತಿಗತಿಗಳನ್ನು ಗಮನಿಸಿದರು. ಅವರ ಸರಾಸರಿ ವಯಸ್ಸು 57 ವರ್ಷಗಳು. ಅವರಲ್ಲಿ ಅರ್ಧದಷ್ಟು ಮಹಿಳೆಯರೇ ಆಗಿದ್ದರು. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಸೇವನೆ ಅಗಾಧವಾದ ಪ್ರಯೋಜನವನ್ನು ಉಂಟುಮಾಡಿತು. ಕೊರೊನರಿ ರಕ್ತನಾಳಗಳ ತೊಂದರೆ, ಹೃದಯದ ವೈಫಲ್ಯ, ಹೃದಯದ ಬಡಿತದ ಏರುಪೇರು, ಹಠಾತ್ ಮರಣಗಳನ್ನು ಹತ್ತರಿಂದ ಹದಿನೈದು ಶೇಕಡಾದಷ್ಟು ಕಡಿಮೆ ಮಾಡಿತು. ಹೃದಯಾಘಾತದ ಅಪಾಯವು ಒಂದರಿಂದ ಎರಡು ಕಪ್ ಕಾಫಿ ಸೇವನೆ ಮಾಡಿದವರಲ್ಲಿ ಕನಿಷ್ಠ ಪ್ರಮಾಣದಲ್ಲಿ ಇತ್ತು. ಗರಿಷ್ಠ ಪ್ರಯೋಜನವು ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಸೇವನೆ ಮಾಡಿದವರಲ್ಲಿ ಕಂಡುಬಂತು. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಸೇವನೆ ಮಾಡಿದವರಲ್ಲಿ, ಬೇರೆಯವರಿಗೆ ಹೋಲಿಸಿದಾಗ, ಪ್ರಯೋಜನ ಕನಿಷ್ಠ ಪ್ರಮಾಣದಲ್ಲಿ ಇತ್ತು.

ಎರಡನೆಯ ಅಧ್ಯಯನದಲ್ಲಿ, ಈಗಾಗಲೇ ಹೃದಯದ ಕಾಯಿಲೆ ಹೊಂದಿರುವ 34,279 ವ್ಯಕ್ತಿಗಳನ್ನು ಆರಿಸಿಕೊಂಡರು. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಸೇವನೆ ಮಾಡಿದಾಗ, ಕಾಫಿ ಸೇವನೆ ಮಾಡದವರಿಗೆ ಹೋಲಿಸಿದರೆ, ಇದರಲ್ಲಿ ಹಠಾತ್ ಮರಣದ ಪ್ರಮಾಣ ಕಡಿಮೆಯಾಗಿತ್ತು. ಕಾಫಿಯನ್ನು ಯಾವುದೇ ಪ್ರಮಾಣದಲ್ಲಿ ಸೇವಿಸಿದರೂ ಕೂಡ, ಈಗಾಗಲೇ ಎಲ್ಲರೂ ಭಾವಿಸಿದಂತೆ ಹೃದಯದ ಬಡಿತದ ಲಯದಲ್ಲಿ ವ್ಯತ್ಯಾಸ , ತೊಂದರೆ ಉಂಟಾಗಲಿಲ್ಲ. ಅಧ್ಯಯನಕ್ಕೆ ಒಳಗೊಂಡ ಇವರಲ್ಲಿ 24,111 ವ್ಯಕ್ತಿಗಳು ಮೂಲತಃ ಇಂತಹ ತೊಂದರೆ ಮೊದಲಿನಿಂದ ಹೊಂದಿದವರಾಗಿದ್ದರು.

Atrial fibrillation ಎಂಬ ಹೃದಯದ ಲಯದ ತೊಂದರೆ ಹೊಂದಿದವರಲ್ಲಿ ದಿನಕ್ಕೆ ಒಂದು ಕಪ್ ಕಾಫಿ ಸೇವಿಸಿದಾಗ , ಕಾಫಿ ಕುಡಿಯದವರಿಗೆ ಹೋಲಿಸಿದರೆ, ಮರಣ ಪ್ರಮಾಣ ಕಡಿಮೆಯಾಗಿತ್ತು. ಬಹಳಷ್ಟು ಜನ ವೈದ್ಯರು ಈ ರೀತಿ ತೊಂದರೆ ಇರುವವರಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡುವುದಕ್ಕೆ ಅಥವಾ ನಿಲ್ಲಿಸುವುದಕ್ಕೆ ಹೇಳುವ ಸಂದರ್ಭಗಳು ಅನೇಕ. ಇದಕ್ಕೆ ಕಾಫಿ ಹೃದಯದ ಬಡಿತದ ಏರುಪೇರನ್ನು ಉಂಟುಮಾಡಬಹುದು ಎಂಬ ವೈದ್ಯರ ಭಯವೇ ಕಾರಣ.

Dr-R.P.-Bangaradka-Prasadini-Ayurnikethana.

ಆದರೆ ಈ ಮೇಲಿನ ಅಧ್ಯಯನಗಳ ಪ್ರಕಾರ ಕಾಫಿ ಸುರಕ್ಷಿತ ಮತ್ತು ಆರೋಗ್ಯಕರ ಆಹಾರದ ಒಂದು ಭಾಗ ಆಗಬೇಕು. 2 ರಿಂದ 3 ಕಪ್ ಸೇವನೆ ಯೋಗ್ಯ. ಆದರೆ ಇದಕ್ಕಿಂತ ಹೆಚ್ಚು ಸೇವನೆ ಮಾಡಿದಾಗ ಒಂದು ವೇಳೆ ಆತಂಕ ಅಥವಾ ಕಿರಿಕಿರಿ ಭಾವನೆ ಉಂಟಾದಲ್ಲಿ ಮಿತವಾಗಿ ಸೇವಿಸಬೇಕು. ಕಾಫಿ ಉಲ್ಲಾಸದಾಯಕ. ಮನಸ್ಸನ್ನು ಚುರುಕುಗೊಳಿಸುವುದು. ಕಾಫಿಯನ್ನು ಕೆಫೀನ್ ಎಂಬ ರಾಸಾಯನಿಕಕ್ಕೆ ಸರಿದೂಗಿಸಿ, ಆ ರಾಸಾಯನಿಕದ ಅಡ್ಡಪರಿಣಾಮಗಳೆಲ್ಲವನ್ನೂ ಕಾಫಿಯ ಮೇಲೆ ಆರೋಪಿಸುವುದು ತಪ್ಪಾಗುವುದು. ಏಕೆಂದರೆ ಕಾಫಿಯಲ್ಲಿ ಕೆಫಿನ್ ಮಾತ್ರವಲ್ಲ, ನೂರಕ್ಕೂ ಹೆಚ್ಚು ಇತರ ಅಂಶಗಳಿವೆ. ಈ ಅಂಶಗಳು ಔಷಧೀಯ ಜಾಡಮಾಲಿಗಳಾಗಿ (antioxidant) ಮತ್ತು ಉರಿಯೂತ ನಿವಾರಕಗಳಾಗಿ ( Antiinflammatory) ಕಾರ್ಯನಿರ್ವಹಿಸುತ್ತವೆ.

Also Read: ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳು 

ಜೀವಕೋಶಗಳನ್ನು ಇನ್ಸುಲಿನ್ ಹಾರ್ಮೋನಿಗೆ ಸೂಕ್ಷ್ಮಸಂವೇದಿ ( sensitivity) ಆಗಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಆಗುತ್ತದೆ. ಕರುಳಿನಿಂದ ಕೊಬ್ಬಿನ ಅಂಶದ ಹೀರುವಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಬೊಜ್ಜು ಉಂಟಾಗುವುದು ತಪ್ಪುತ್ತದೆ. ಹೃದಯದ ಬಡಿತವನ್ನು ಏರುಪೇರು ಮಾಡುವ ಕೆಲವೊಂದು ಮಧ್ಯವರ್ತಿ ರಾಸಾಯನಿಕಗಳನ್ನು ದಮನ ಮಾಡುತ್ತದೆ. ಕೆಫಿನ್ ತೆಗೆದ ಕಾಫಿಯನ್ನು ಪ್ರಯೋಗ ಮಾಡಿದಾಗ ಅದು ಹೃದಯದ ಕಾಯಿಲೆಯನ್ನು ಕಡಿಮೆ ಮಾಡುವ ಪರಿಣಾಮ ಕಂಡುಬರಲಿಲ್ಲ. ಆದಕಾರಣ ಕೆಫಿನ್ ರಹಿತ ಕಾಫಿ ಸೇವನೆ ಮಾಡುವುದರಿಂದ ಹೃದಯಕ್ಕೆ ಹೆಚ್ಚು ಪ್ರಯೋಜನ ಎಂಬುದನ್ನು ಪ್ರಮಾಣಿಸಿ ತೋರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ.

ಆದಕಾರಣ, ಕೊನೆಯದಾಗಿ,
ಕಾಫಿಯನ್ನು ಇಡಿಯಾಗಿ, ಪೂರ್ಣವಾಗಿ ದಿನಕ್ಕೆ ಎರಡರಿಂದ ಮೂರು ಕಪ್ ಸೇವಿಸಿ. ಆರೋಗ್ಯಕ್ಕೆ, ಹೃದಯಕ್ಕೆ ಒಳ್ಳೆಯದು. ಆದರೆ ಸಕ್ಕರೆ ಹಾಕದೆ ಸೇವಿಸಿ. ಏಕೆಂದರೆ ಕಾಫಿ ಅಮೃತ, ಸಕ್ಕರೆ ವಿಷ. ಆದರೆ, ಹಿತವಾದದ್ದನ್ನು ಸೇವಿಸಿ. ಮಿತವಾಗಿ ಸೇವಿಸಿ, ಅತಿಯಾದರೆ ಅಮೃತವೂ ವಿಷ.

Also watch our video on ಕಾಫಿ ಆರೋಗ್ಯಕ್ಕೆ ಹಾನಿಕಾರಕವೇ?

dr-prasad-bangaradka

ಡಾ.ಆರ್ .ಪಿ .ಬಂಗಾರಡ್ಕ.
ಖ್ಯಾತ ಆಯುರ್ವೇದ ತಜ್ಞ ವೈದ್ಯರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು .ದ.ಕ.574202
www.prasadini.com
mail id:rpbangaradka@gmail.com
Mob. 9740545979

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!