ಮೂಲೆ ಗುಂಪಾಗುತ್ತಿರುವ ರೋಗಿ ಪರೀಕ್ಷೆಯ ‘ವಿಧಿ’ ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನ ಕ್ರಾಂತಿಯ ಫಲ.ರೋಗಿಯನ್ನು ಪರೀಕ್ಷ್ಷಿಸದೇ ಔಷಧಿಗಳನ್ನು ಕೊಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಯುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಮನದಟ್ಟುಮಾಡಿಕೊಡಬೇಕಾದ ಒಂದು ಘಟ್ಟಕ್ಕೆ ತಲುಪಿದ್ದೇವೆ. ತಪಾಸಣೆಗಳನ್ನು ನಡೆಸುವಲ್ಲಿ ಒಂದು ರೀತಿಯ ತರ್ಕಬದ್ಧತೆ ಹಾಗೂ ಸಮತೋಲನ ಮತ್ತು ಔಚಿತ್ಯ ಪ್ರಜ್ಞೆ ಬರಬೇಕಾಗಿದೆ.
ಬದಲಾವಣೆ ಎಂಬುದು ಕಾಲದ ಗುಣ ಹಾಗೂ ಅದರ ಪ್ರಭಾವ ಕೂಡಾ. ರಾತ್ರೆಯಾದಾಗ ನಿದ್ದೆ ಬಾರದಿರುವುದಕ್ಕೆ ಸಾಧ್ಯವೇ? ಬೆಳಗಾದಾಗ ಎಚ್ಚರವಾಗದಿರುವುದಕ್ಕೆ ಸಾಧ್ಯವೇ? ಅಥವಾ ಹಗಲಿನಲ್ಲಿ ನಿದ್ರೆ ರಾತ್ರೆಯಲ್ಲಿ ಜಾಗರಣೆ ಮಾಡುವುದನ್ನು ಪ್ರಕೃತಿಯ ನಿಯಮವನ್ನಾಗಿ ಪರಿವರ್ತಿಸಲು ನಮ್ಮಿಂದ ಸಾಧ್ಯವಿಲ್ಲ. ರಾತ್ರೆಯಾದಾಗ ನಿದ್ರೆಯ ಪ್ರಕ್ರಿಯೆಗೆ ಸಂದಾಯಮಾಡುವ ಮೆದುಳಿನ ರಾಸಾಯನಿಕಗಳು ಸುರಿಯಬೇಕೆಂಬುದನ್ನು ದೇಹಕ್ಕೆ ಕಲಿಸಿದವರಾದರೂ ಯಾರೋ? ಆದುದರಿಂದ ಕಾಲದೊಂದಿಗೆ ಬದಲಾವಣೆ ಬದ್ಧವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಾದ ಬದಲಾವಣೆಗಳಲ್ಲಿ ಯಾವುದು ತಿರಸ್ಕರಿಸುವುದಕ್ಕೆ ಯೋಗ್ಯ ಮತ್ತು ಯಾವುದು ಸ್ವೀಕಾರಾರ್ಹವಾದದ್ದು ಎಂಬುದನ್ನು ವಿವೇಚಿಸುವ ಅಗತ್ಯ ಇಂದು ಸೃಷ್ಟಿಯಾಗಿದೆ.
‘ಪುರಾಣ ಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತಿ ವಜ್ರ್ಯಂ’
ಹಳೆಯದು ಎಂದಾಕ್ಷಣ ಎಲ್ಲವೂ ಸರಿಯಿರಬೇಕೆಂದೇನಿಲ್ಲ ಹಾಗೂ ಹೊಸದು ಎಂದಾಕ್ಷಣ ಎಲ್ಲವೂ ತ್ಯಾಜ್ಯವಾಗಬೇಕಾಗಿಯೂ ಇಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಪೊಗದಸ್ತಾಗಿ ಹಬ್ಬಿರುವ ತಂತ್ರಜ್ಞಾನ ಕ್ರಾಂತಿಯ ಫಲಗಳಾದ ಮೇಲ್ಮಟ್ಟದ ತಪಾಸಣೆಗಳು ಅಗತ್ಯವಾದ ಪರಿವರ್ತನೆಗಳೇ ಆಗಿವೆ; ಆದರೆ ಅವು ಯುಕ್ತವಾಗಿದ್ದರೂ, ಯಾವಾಗ ಅಗತ್ಯ ಹಾಗೂ ಅನಿವಾರ್ಯ ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆಯೂ ವೈದ್ಯರ ಮೇಲಿದೆ. ಇಲ್ಲವಾದರೆ ಈ ಇಂಟರ್‍ನೆಟ್ ಯುಗದಲ್ಲಿ ಚಿಕಿತ್ಸೆಗೆ ವೈದ್ಯರೂ ಕೂಡ ಬೇಕಾಗುತ್ತಿರಲಿಲ್ಲ. ಎಲ್ಲವನ್ನೂ ಕಂಪ್ಯೂಟರ್ ನಿಭಾಯಿಸಬಹುದಿತ್ತು. ಇದಕ್ಕೆ ಕಾರಣ ಈಗಾಗಲೇ ದತ್ತವಾದ ಮಾಹಿತಿಗಳ ಆಧಾರದ ಮೇಲಿನಿಂದ ಅಗತ್ಯಗಳನ್ನು ನಿರ್ಧಾರಗಳನ್ನು ಪ್ರಕಟಿಸುವ ಕಂಪ್ಯೂಟರ್‍ಗಿಂತ ಭಿನ್ನವಾದ ‘ಅನುಭವ’ Experience ಎಂಬ ಸಂಗತಿ ಮಾನವನೊಳಗೆ ಇನ್ನೂ ಅಸ್ತಿತ್ವದಲ್ಲಿರುವುದು. ಅದು ಕಂಪ್ಯೂಟರಿಗೆ ಇಲ್ಲ.
ಉನ್ನತ ತಪಾಸಣೆಗಳ ಅಗತ್ಯ ಹಾಗೂ ಅನಿವಾರ್ಯತೆಯನ್ನು ನಿರ್ಧರಿಸುವ ಗೋಜಿಗೆ ಹೋಗುವಲ್ಲಿ ಈಗಿನ ತಜ್ಞ ವೈದ್ಯರು ತಾಳ ತಪ್ಪುತ್ತಿರುವುದು ಯಾಕಾಗಿ ಎಂಬುದನ್ನು ಪರಾಮರ್ಶೆ ಮಾಡಬೇಕಾಗಿದೆ. ವೈದ್ಯಕೀಯ ರಂಗದಲ್ಲಿ ಯಂತ್ರ ಹಾಗೂ ತಂತ್ರಗಳಿಂದ ಬಂದ ವರದಿಗಳು ಪರಾಮರ್ಶೆಯನ್ನು ಹೊರತಾಗಿಸುವುದಿಲ್ಲ. ಪರಿಶೀಲನೆಯನ್ನು ನಿರಾಕರಿಸುವ ಹಂತಕ್ಕೆ ಅವು ಬೆಳೆಯಬಾರದು. ಎರಡು ಅಥವಾ ಮೂರು ದಶಕಗಳ ಹಿಂದಿನ ವೈದ್ಯಕೀಯ ಲೋಕದ ಆಗುಹೋಗು ಗಳನ್ನು ಸಿಂಹಾವಲೋಕನ ಮಾಡಿದರೆ ನಮಗೆ ಇದು ಇನ್ನಷ್ಟು ಅರ್ಥವಾದೀತು. ಆ ಕಾಲದಲ್ಲಿ ಸವಿವರವಾದ ರೋಗಿಯ ಪರೀಕ್ಷೆಯನ್ನು ಸೂಕ್ತ ಕಾಲಾವಧಿಯನ್ನು ಉಪಯೋಗಿಸಿಕೊಂಡು ವೈದ್ಯರು ಮಾಡುತ್ತಿದ್ದರು. ಆಗ ತಪಾಸಣೆಯ ಉನ್ನತ ತಾಂತ್ರಿಕ ವಿಧಾನಗಳು ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಬೇರೆ. ಆದರೆ ಅಂತಹ ರೋಗಿ ಪರೀಕ್ಷೆಯಿಂದಲೇ ವೈದ್ಯರು ರೋಗ ನಿರ್ಧಾರ ಮಾಡುವಲ್ಲಿ ಸಮರ್ಥರಾಗಿದ್ದರು ಎಂಬುದು ಬಹಳ ಗಮನಾರ್ಹವಾದ ಅಂಶ.
ಆ ತಲೆಮಾರಿನ ಹಿರಿಯರನ್ನು ಕೇಳಿದರೆ ಅವರು ಹೇಳುವುದನ್ನು ಕೇಳಿದ್ದೇನೆ; ಕೆಲವು ವೈದ್ಯರ ಗುಣಗಾನ ಮಾಡುವುದನ್ನು ಕೇಳಿದ್ದೇನೆ. ‘ನಮ್ಮ ಆ ಡಾಕ್ಟರರು.. ಆ ಕಾಲದಲ್ಲಿ .. ರೋಗಿಯನ್ನು ಮುಟ್ಟಿ ನೋಡಿದರೆ ಸಾಕು. ಅದು ಇಂಥದ್ದೇ ಕಾಯಿಲೆ ಎಂದು ಹೇಳುತ್ತಿದ್ದರು’ ಎಂಬುದು ಉತ್ಪ್ರೇಕ್ಷೆಯ ಮಾತೆಂದು ನನಗೆ ಅನ್ನಿಸುವುದಿಲ್ಲ. ಆದರೆ ರೋಗ ಪತ್ತೆಯಲ್ಲಿ ವೈದ್ಯರಿಂದ ತಪ್ಪುಗಳು ಸರ್ವಥಾ ಆಗುತ್ತಿರಲಿಲ್ಲ ಎಂದೇನೂ ಇಲ್ಲ. ಕೆಲವು ದಶಕಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಕ್ಷಯ ರೋಗ (Tuberculosis) ಇದೆ ಎಂದು ವೈದ್ಯರೊಬ್ಬರು ಗುರುತಿಸಿ ಚಿಕಿತ್ಸೆ ಕೊಟ್ಟು ಗುಣವಾಗದಿದ್ದಾಗ ಮಂಗಳೂರಿನ ನುರಿತ ಹಾಗೂ ಅನುಭವಿ ವೈದ್ಯರೊಬ್ಬರ ಬಳಿ ಒಯ್ದರು. ರೋಗಿಯನ್ನು ವಿವರವಾಗಿ ಪರಿಶೀಲಿಸಿ, ರೋಗದ ಇತಿಹಾಸವನ್ನು ಪರಿಶೀಲಿಸಿದ ವೈದ್ಯರು ಅದು Tuberculosis (ಕ್ಷಯರೋಗ) ಅಲ್ಲ ಎಂದೂ, ಬೇರೆ ಕಾರಣದಿಂದ ಎಂದೂ ಚಿಕಿತ್ಸೆ ನೀಡಿ ಗುಣಪಡಿಸಿದರಂತೆ. ಆದರೆ ಈಗ Tuberculosis ಗೆ ಪರಿಪೂರ್ಣ ಪತ್ತೆಯ ವಿಧಾನಗಳು ಹಾಗೂ ನೂರಕ್ಕೆ ನೂರು ಪರಿಣಾಮಕಾರಿಯಾದ ಔಷಧ ಚಿಕಿತ್ಸೆ ಇದೆ ಎಂಬ ವಿಚಾರ ಬೇರೆ.
ಈಗಿನ Sophisticated investigation ಗಳು ಇಲ್ಲದ ಆ ಕಾಲದಲ್ಲೂ ರೋಗವನ್ನು ಸರಿಯಾಗಿ ಪತ್ತೆ ಹಚ್ಚುವ ಬುದ್ದಿವಂತ ವೈದ್ಯರುಗಳು ಇದ್ದರು ಎಂಬುದನ್ನು ಸೂಚಿಸುವುದಕ್ಕಾಗಿ ಇದನ್ನು ಹೇಳುತ್ತಿರುವೆ. ಆದರೆ ಇಂದು ಘಟೋತ್ಕಚನಂತೆ ಬೆಳೆಯುತ್ತಿರುವ ಉನ್ನತ ತಪಾಸಣಾ ಕೇಂದ್ರಗಳಿಂದಾಗಿ ವೈದ್ಯರಲ್ಲಿನ ರೋಗ ಪರೀಕ್ಷೆಯ ರೀತಿ, ವಿಧಾನಗಳು ಪಾಶ್ರ್ವವಾಯು ಪೀಡಿತವಾಗಿವೆ. ಅದರಿಂದಾಗಿ ಸಮಕಾಲೀನವಾದ ವೃತ್ತಿಪರ ವಾಣಿಜ್ಯದ ಸುಂಟರಗಾಳಿಗೆ ಸಿಕ್ಕಿ ವೈದ್ಯಕೀಯ ಲೋಕದ ಮೆದುಳಿನ ಜಾಣ್ಮೆ ನಲುಗಿಹೋಗುತ್ತಿದೆ. ರೋಗದ ವಿವರಗಳನ್ನು ರೋಗಿಯ ಮಾತುಗಳಿಂದಲೇ ಪ್ರಶ್ನಿಸಿ ತಿಳಿಯುವ ‘History Taking’ ಎಂಬ ಪ್ರಾಥಮಿಕ ರೀತಿ ಹಾಗೂ ಅಗತ್ಯ ಇಂದು ಕೊಂಚ ಮರೆಯಾಗುತ್ತಲೇ ಇದೆ. ವೈದ್ಯರು ಹೆಚ್ಚು ಕಾಲಾವಧಿಯನ್ನು ವಿನಿಯೋಗಿಸಬೇಕಾಗಿರುವ ‘ರೋಗಿ ಚರಿತ್ರೆ’ಯು ಕಡಿಮೆ ಕಾಲಾವಧಿಗೆ ಬಂದು ಇತಿಹಾಸ ಗರ್ಭದಲ್ಲಿ ಸೇರುತ್ತಿದೆ.
ಹಿಂದಿನ ಕಾಲದ ತಜ್ಞರು ಸಾಕಷ್ಟು ಸಮಯವನ್ನು ಬಳಸಿಕೊಂಡು ರೋಗಿಯ ಪ್ರಧಾನ ತೊಂದರೆ, ಅದರೊಂದಿಗೆ ಸೇರಿಕೊಂಡ ಇತರ ತೊಂದರೆಗಳು, ಹಳೆ ರೋಗಗಳು ಯಾವುದಾದರೂ ಇದ್ದಲ್ಲಿ ಅವುಗಳ ಇತಿವೃತ್ತ, ರೋಗಿಯು ಈ ಮೊದಲು ತೆಗೆದುಕೊಂಡ ಚಿಕಿತ್ಸೆ, ರೋಗಿಯ ಮಾನಸಿಕ ಸ್ಥಿತಿಗತಿ ಮತ್ತು ರೋಗಿಯಲ್ಲಿನ ಚಟಗಳು ಇತ್ಯಾದಿ ಎಲ್ಲವನ್ನೂ ಪರಿಶೀಲಿಸಿ, ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ರೋಗಿಯನ್ನು ಕೇಳಿದ ವಿವರಗಳು ಹಾಗೂ ರೋಗಿಯ ದೈಹಿಕ ಪರೀಕ್ಷೆಗಳಿಂದ ಆ ಕಾಲದ ಎಷ್ಟೋ ವೈದ್ಯರಿಗೆ ರೋಗ ಗೊತ್ತಾಗಿಬಿಡುತ್ತಿತ್ತು. ಅಂದರೆ ಅಂತಹ ಒಂದು ಸಾಧ್ಯತೆ ಆಗ ವೈದ್ಯಕೀಯ ವಲಯದಲ್ಲಿ ಇತ್ತು ಮತ್ತು ಅದು ಅನಿವಾರ್ಯವೂ ಆಗಿತ್ತು. ಈಗಿನ ಎಷ್ಟೋ ತಜ್ಞ ವೈದ್ಯರುಗಳು ಎಷ್ಟೋ ಸಲ ರೋಗಿಯು ತಾನು ಬೇರೆ ವೈದ್ಯರಿಂದ ತೆಗೆದುಕೊಂಡ ಚಿಕಿತ್ಸೆಯ ವಿವರಗಳನ್ನು ತೋರಿಸಿದಲ್ಲಿ ವೈದ್ಯರ ಸಿಡುಕೇ ಅದಕ್ಕೆ ಪ್ರತ್ಯುತ್ತರವಾಗುವ ಸಂಭವವೂ ಇದೆ. ಏಕೆಂದರೆ ಅದು ಆ ವೈದ್ಯರ ಹೃದಯದಲ್ಲಿ ಚಿಕಿತ್ಸೆಯ ಚರಿತ್ರೆ ಯನ್ನು ಅರಿಯುವುದಲ್ಲ,. ಬದಲಿಗೆ ಅದು ವೈದ್ಯರಿಗೆ ಒಂದು ಅವಮಾನ (insult)! ಕಡಿಮೆ ಅವಧಿಯಲ್ಲಿ ಹೆಚ್ಚು ರೋಗಿಗಳನ್ನು ನೋಡಿ ಚಿಕಿತ್ಸೆ ಕೊಡುವ ತರಾತುರಿಯೇ ಈ ಅಸಡ್ಡೆಗಳಿಗೆ ಕಾರಣವಿರಬಹುದು.
ಆಸ್ಪತ್ರೆಗಳೆಂಬ ಮಾರುಕಟ್ಟೆ:
ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೋಗಿ ಪರೀಕ್ಷೆಯಲ್ಲಿ ಈ ಪ್ರಮಾದದ ಜವಾಬ್ದಾರಿ ಯಾರು ಹೊತ್ತುಕೊಳ್ಳುವವರು? ಮೇರೆಮೀರಿ ತಲೆಯೆತ್ತಿದ ವೈದ್ಯಕೀಯ ಸಂಸ್ಥೆಗಳು ತಮ್ಮ ಪ್ರದರ್ಶನದ ಭವ್ಯತೆಯಿಂದ ರೋಗಿಗಳನ್ನು ಆಕರ್ಷಿಸಿ, ರೋಗಿಗಳು ಆ ಭವ್ಯತೆಗೆ ಮಾರುಹೋಗುವುದರಿಂದ ಅನಗತ್ಯ ತಪಾಸಣೆಗಳನ್ನು ಮಾಡಿ ಸುಲಿಗೆಯ ಕೇಂದ್ರಗಳಾಗಿ ವಿಜ್ರಂಭಿಸುತ್ತಿವೆ. ವೈದ್ಯಕೀಯ ಕೇಂದ್ರವೆಂದರೆ ಅದೊಂದು ಮಾರುಕಟ್ಟೆ ಎಂಬ ಕಲ್ಪನೆ ರೋಗಿಗಳಿಗೂ ಇಂದು ಬಂದಿದೆ?!
ಮೊಸಳೆಯು ಬಾರದೆಯೇ ಮೊಸಳೆ ಬಂತು ಎಂದು ಬೊಬ್ಬೆ ಹೊಡೆದ ಅಗಸನ ಮಾತಿಗೆ ಊರ ಜನರೆಲ್ಲರೂ ಬಂದು ಗಾಬರಿಯಾಗಿ ಸೇರುತ್ತಿದ್ದರು. ಆದರೆ ಅದು ಸುಳ್ಳು ಎಂದು ಗೊತ್ತಾಗಿ ಮನೆಗೆ ತೆರಳುವ ಪ್ರಸಂಗ ಹಲವು ಬಾರಿ ನಡೆಯಿತು. ಆದರೆ ಒಮ್ಮೆ ನಿಜವಾಗಿಯೂ ಮೊಸಳೆ ಬಂತು. ಅಗಸನು ಬೊಬ್ಬೆ ಹೊಡೆದ. ಯಾರೂ ಬರಲಿಲ್ಲ! ಮಡಿವಾಳನ ಅವಸ್ಥೆಯಂತೆ, ಈ ತಪಾಸಣೆಗಳನ್ನು ಹೀಗೆ ಬೇಕಾಬಿಟ್ಟಿ ಮಾಡಿಸುವ ಈ ವ್ಯವಸ್ಥೆಯಲ್ಲಿ, ನಿಜವಾದ ತಪಾಸಣೆಯ ಅಗತ್ಯವಿದ್ಯಾಗ ತಪಾಸಣೆಯನ್ನು ಸಂದೇಹ ದೃಷ್ಟಿಯಿಂದ ನೋಡಿ ನಿರಾಕರಿಸುವ ಪರಿಸ್ಥಿತಿ ರೋಗಿಯದ್ದಾಗುತ್ತದೆ.
ಇದರ ಇನ್ನೊಂದು ಮಗ್ಗುಲನ್ನು ಗಮನಿಸಬೇಕು ತಾನೇ? ಒಮ್ಮೆ ಮೂವತ್ತಾರು ವರ್ಷದ ಮಹಿಳಾ ರೋಗಿಯೊಬ್ಬರು ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ಬಂದರು. ಅವರ ಮುಖ್ಯ ಸಮಸ್ಯೆ ಹೊಟ್ಟೆನೋವು ಮತ್ತು ಜ್ವರ ಆಗಿತ್ತು. ಆ ನೋವು ಕೆಳ ಹೊಟ್ಟೆಯ ಬಲಪಾಶ್ರ್ವ (right iliac fossa)ದಲ್ಲಿತ್ತು. ರೋಗಿಯಲ್ಲಿ ನೋವು ಎಂದು ಶುರುವಾಯಿತೆಂದು ಕೇಳಿದರೆ ಇಂದೇ ಶುರುವಾದದ್ದು ಎಂದರು. ಮೊದಲು ಎಂದಾದರೂ ನೋವು ಬಂದಿತ್ತೇ ಎಂದರೆ ‘ಇಲ್ಲ’ ಎಂದರು. ನೋವಿನ ಮೊದಲು ಎಂದಾದರು ನೋವು ಬಂದಿತ್ತೇ ಎಂದರೆ ಇಲ್ಲ ಎಂದರು. ನೋವಿನ ಜಾಗ ಹಾಗೂ ಬಂದ ಜ್ವರವನ್ನು ಗಮನಿಸಿದರೆ ಅವರಲ್ಲಿ ‘ಅಪೆಂಡಿಸೈಟಿಸ್’ ಇರಬಹುದೆಂದು ವೈದ್ಯರಾದವರು ಸಂದೇಹಿಸಬಹುದಿತ್ತು. ಆ ಜಾಗದಲ್ಲಿ ಕೆಳ ಹೊಟ್ಟೆಯ ಬಲಪಾಶ್ರ್ವದ ಬಿಂದು (ಮ್ಯಾಕ್‍ಬರ್ನಿ ಬಿಂದು) ಭಾಗದಲ್ಲಿ ಕೈಯಿಂದ ಒತ್ತಿದಾಗ ಗರಿಷ್ಠ ಪ್ರಮಾಣದ ನೋವು ಇತ್ತು. ಇದು ವೈದ್ಯ ಶಾಸ್ತ್ರದ ಪ್ರಕಾರ ಅಪೆಂಡಿಸೈಟಿಸ್‍ನ ನಿಖರವಾದ ಲಕ್ಷಣ. ರೋಗಿಗೆ ಈ ವಿಷಯವನ್ನು ತಿಳಿಸಿ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿಸಬೇಕು ಎಂದೆ. ಏಕೆಂದರೆ ಅಪೆಂಡಿಸೈಟಿಸ್‍ನ್ನು ಬಿಟ್ಟು ಮೂತ್ರನಾಳದಲ್ಲಿ ಕಲ್ಲು ಇರುವ ಲಕ್ಷಣಗಳಾವುದೂ ರೋಗಿಯಲ್ಲಿ ಇರಲಿಲ್ಲ. ಮೂತ್ರನಾಳದಲ್ಲಿ ಕಲ್ಲು ಇದ್ದಾಗ ಕಂಡುಬರುವ ವಂಕ್ಷಣದ ಕಡೆಗೆ ಹರಿಯುವ ತೀವ್ರ ನೋವು ಅಥವಾ ಮೂತ್ರ ವಿಸರ್ಜನೆಯಲ್ಲಿ ಕಷ್ಟವಾಗುವುದು ಇತ್ಯಾದಿ ಯಾವುದೇ ಲಕ್ಷಣಗಳಿಲ್ಲದ ಕಾರಣ ಅಪೆಂಡಿಸೈಟಿಸ್ ಸಂದೇಹವನ್ನು ದೃಢಪಡಿಸಬೇಕಿತ್ತು. ಆದರೆ ಸ್ಕ್ಯಾನಿಂಗ್‍ನ್ನು ನಿರಾಕರಿಸುತ್ತಾ, ಮೊದಲು ತನಗೇನೂ ತೊಂದರೆ ಇರಲಿಲ್ಲವೆಂದು ಹೇಳಿದ್ದ ರೋಗಿ ಮೂರು ತಿಂಗಳ ಮೊದಲು ಹೊಟ್ಟೆನೋವಿಗಾಗಿ ಬೇರೆ ಸ್ಕ್ಯಾನಿಂಗ್ ಮಾಡಿಸಿದಾಗ ವೈದ್ಯರು ಅಪೆಂಡಿಸೈಟಿಸ್ ಇರುವುದನ್ನು ತಿಳಿಸಿದ್ದರು ಎಂದರು!
ರೋಗಿಗಳು ವೈದ್ಯರಲ್ಲಿ ಈ ರೀತಿ ಸಂಗತಿಗಳನ್ನು ಮರೆಮಾಚಿದರೆ ವೈದ್ಯರಿಗಾದರೂ ಹೇಗನ್ನಿಸಬೇಕು?ಈ ಮೊದಲೇ ಅವಳಿಗೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು. ಇಷ್ಟೆಲ್ಲ ಹಿನ್ನೆಲೆ ಇದ್ದರೂ ನಮ್ಮ ಸಲಹೆಯನ್ನು ರೋಗಿ ಸ್ವೀಕರಿಸದೆ ‘ಒಂದು ನೋವಿನ ಇಂಜೆಕ್ಷನ್ ಕೊಟ್ಟು ಮನೆಗೆ ಕಳುಹಿಸಿ’ ಎಂದರು. ಆಕೆಯ ಗಂಡನೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವನಾಗಿದ್ದ. Acute appendicitis ತೀವ್ರ ಅಪೆಂಡಿಸೈಟಿಸ್ ಎಂಬ ಕರುಳಬಾಲದ ಬೇನೆಯನ್ನು ತಕ್ಷಣ ತುರ್ತು ಶಸ್ತ್ರಚಿಕಿತ್ಸೆ ಮಾಡದೇ ಇರುವುದರಿಂದ ಅಪೆಂಡಿಕ್ಸ್ ಒಡೆದು ಹೋಗಿ ಹೊಟ್ಟೆಯೊಳಗಿನ ಇತರ ಭಾಗಗಳಿಗೆ ಬ್ಯಾಕ್ಟೀರಿಯಾಗಳು ಹರಡಿ ಸಂಭವಿಸಬಹುದಾದ ಅಪಾಯದ ಜಟಿಲ ಪರಿಸ್ಥಿತಿಯನ್ನು ವಿವರಿಸಿದರೂ ವಿದ್ಯಾವಂತನಾದ ಆಕೆಯ ಗಂಡ ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆಗಳೆರಡಕ್ಕೂ ಒಪ್ಪಿಗೆ ನೀಡಲಿಲ್ಲ. ಒಂದು ನೋವಿನ ಇಂಜೆಕ್ಷನ್ ಮತ್ತು ಕೆಲವು ನೋವಿನ ಮಾತ್ರೆಗಳನ್ನು ಕೊಟ್ಟು ಮನೆಗೆ ಕಳುಹಿಸಿದರು. ಮುಂದೇನಾಯಿತೋ ಯಾರಿಗೆ ಗೊತ್ತು?
ಮರೆಯಾಗುತ್ತಿರುವ ಈ ರೋಗಿಯ ವಿವರವಾದ ಪರೀಕ್ಷಾ ಪದ್ಧತಿ:
ತಪಾಸಣೆಯ ಅಗತ್ಯವನ್ನು ರೋಗಿಯನ್ನು ಪರೀಕ್ಷಿಸಿದ ತಜ್ಞ ವೈದ್ಯರು ನಿರ್ಧರಿಸುವುದಲ್ಲದೆ ತಪಾಸಣೆಗಳನ್ನು ನಡೆಸುವ ತಂತ್ರಜ್ಞರು ಅಲ್ಲವಲ್ಲ? ಆದರೆ ದೊಡ್ಡ ದೊಡ್ಡ ಮೆಗಾಸಿಟಿಗಳಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಂದ ಮರೆಯಾಗುತ್ತಿರುವ ಈ ರೋಗಿಯ ವಿವರವಾದ ಪರೀಕ್ಷಾ ಪದ್ಧತಿ, ಕ್ಲಿನಿಕಲ್ ಎಕ್ಸಾಮಿನೇಶನ್ ಇಂದು ಸಣ್ಣ ಸಣ್ಣ ನಗರಗಳಲ್ಲಿ, ಅಲ್ಲಿನ ಆಸ್ಪತ್ರೆಗಳಲ್ಲಿ ಇನ್ನೂ ಸ್ವಲ್ಪ ಮಟ್ಟಿಗೆ ಜೀವಂತವಾಗಿ ಉಳಿದುಕೊಂಡಿದೆ. ‘Reckless’ ಎನ್ನುವಂತೆ ಈ ಉನ್ನತ ತಪಾಸಣೆಗಳನ್ನು ನಡೆಸುವ ಉನ್ನತ ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಮಾಹಿತಿಗಳನ್ನು ಮಾಧ್ಯಮಗಳ ಮೂಲಕ ತಲುಪಿಸುವ ನೆಪದಲ್ಲಿ ಈ ಉನ್ನತ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ತಮ್ಮ ಜಾಹೀರಾತಿನ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತವೆ. ಅವುಗಳಲ್ಲಿರುವ ನಿಗೂಢತೆಯು ರೋಗಿಗಳು ಅವುಗಳನ್ನು ಪೂರ್ತಿ ನಂಬುವಂತೆ ಮಾಡಿ, ಆ ಯಂತ್ರಗಳೆಲ್ಲ, ತಮ್ಮ ಭವಿಷ್ಯವನ್ನು ಹೇಳುವ ದಿವ್ಯ ಚಕ್ಷುಗಳನ್ನು ಹೊಂದಿವೆಯೆಂದು ಭ್ರಮಿಸುವಂತೆ ಮಾಡುತ್ತವೆ. ಆದರೆ ತಪಾಸಣೆಗಳಿಗೆ ನೇರವಾಗಿ ಈ ರೀತಿ ಧುಮ್ಮಿಕ್ಕುವುದರಿಂದ ತಪಾಸಣೆಗಳೇ ನಮ್ಮಿಂದ ತಪ್ಪಿಸಿಕೊಳ್ಳುತ್ತವೆ! ಯಾವ ತಪಾಸಣೆಗಳು ಸೂಕ್ತ ಎಂಬುದೂ ಕೂಡಾ ರೋಗಿ ಪರೀಕ್ಷೆ ಯಿಲ್ಲದೆ ನಿರ್ಧರಿಸುವುದು ಅಸಾಧ್ಯ.
ಎದೆನೋವು ಇರುವ ರೋಗಿಗಳು ವೈದ್ಯರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿದ ಕೂಡಲೇ ತಾವಾಗಿಯೇ ಇಸಿಜಿಗಾಗಿ ಒತ್ತಡ ತರುವ ಪರಿಸ್ಥಿತಿ ಬಂದಿದೆ. ಅದು ಅವರ ‘ಡಿಮಾಂಡ್, ಮತ್ತು ‘ರೈಟ್’. ಅದನ್ನು ವೈದ್ಯರಿಗೆ ನೆರವೇರಿಸದೇ ಇರುವುದಕ್ಕೆ ಆಗುತ್ತದೆಯೇ? ಆದರೆ ಒಂದು ವೇಳೆ ಇಸಿಜಿ ಮಾಡಿ ಅದರಲ್ಲಿ ಕಂಡು ಬರುವ ಸಣ್ಣ ಹೃದಯದ ತೊಂದರೆಗಳನ್ನು ರೋಗಿಗೆ ತಿಳಿಸಿದಲ್ಲಿ ರೋಗಿಗೆ ಹೃದಯ ಬಾಯಿಗೆ ಬಂದಂತಾಗಬಹುದು. ತನ್ನ ಪೂರ್ವಾಗ್ರಹ ಹಾಗೂ ಸಂಶಯಗಳಲ್ಲಿ ತಾನೇ ಬಂಧಿಯಾದ ರೋಗಿಗೆ ವೈದ್ಯರು ರೋಗಿಯ ಆಡುಭಾಷೆಯಲ್ಲಿಯೇ ವಿವರಿಸಿ ಅವನ ಮೂಢನಂಬಿಕೆಗಳನ್ನು ಮೂಲೋತ್ಪಾಟನೆ ಮಾಡಬೇಕಾದ ಅಗತ್ಯವಿದೆ. ಆದರೆ ಎಷ್ಟೋ ತಜ್ಞ ವೈದ್ಯರುಗಳು ಬಹಳ ತಾಂತ್ರಿಕ ಪದಗಳನ್ನು ಬಳಸಿ ವಿವರಿಸುತ್ತಾರೆ. ಇದರಿಂದ ತಜ್ಞರ ವಿವರಣೆ ಹಾಗೂ ರೋಗಿಯ ಗ್ರಹಿಕೆಯಲ್ಲಿ ಅಂತರವು ನಿರ್ಮಾಣವಾಗುತ್ತದೆ. ಪರಿಣಾಮವಾಗಿ ರೋಗಿಗೆ ಸಂದೇಹಗಳು ಹೆಚ್ಚಾಗಬಹುದು; ವೈದ್ಯರ ಸಲಹೆಗಳನ್ನು ನಿರಾಕರಿಸಬಹುದು. ಆದರೆ ತಾಂತ್ರಿಕ ಪದಗಳನ್ನು ಮಾತೃಭಾಷೆಯಲ್ಲಿ ಹೇಳುವುದು ಕಠಿಣ ಅಥವಾ ಅಸಾಧ್ಯ ಎಂಬ ಸನ್ನಿವೇಶ ಕಡಿಮೆಯಾಗಬೇಕಿದೆ.
ಈಗಿನ ಹೊಸ ತಲೆಮಾರಿನ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡುವ ಪರಿಪಾಠ ವರ್ಧನೆಯಾಗಿ, ರೋಗಿ ಪರೀಕ್ಷೆಯ ಕ್ರಮಗಳು ಕುಂಠಿತವಾಗಿವೆ. ಉದಾಹರಣೆಗೆ ನರಮಂಡಲಕ್ಕೆ ಸಂಬಂಧಿಸಿದ ರೋಗಗಳಲ್ಲಿ ರೋಗಿಯ ವಿವರವಾದ ಪರೀಕ್ಷೆಗಳಿಂದಲೇ ರೋಗದ ಬಗ್ಗೆ ನಿರ್ಧಾರ ತಳೆಯಬಹುದು. ಆದರೆ ವರ್ತಮಾನದಲ್ಲಿ ಇದಕ್ಕೆ ಬದಲಾಗಿ ಸಿ.ಟಿ. ಸ್ಕ್ಯಾನ್ ಮಾಡುವುದರ ಮೂಲಕ ಪರೀಕ್ಷೆ ಆರಂಭವಾಗುತ್ತದೆ. ರೋಗಿಗಳೇಅದಕ್ಕಾಗಿ ವೈದ್ಯರಿಗೆ ದುಂಬಾಲು ಬೀಳುವ ಪ್ರಸಂಗಗಳೂ ಇವೆ. ಇಲ್ಲವಾದರೆ ಬೇರೆ ಆಸ್ಪತ್ರೆಗೆ ತೆರಳುತ್ತೇವೆ ಎಂದು ವೈದ್ಯರಿಗೇ ತಾಕೀತು ಮಾಡುವ ರೋಗಿಯ ಕಡೆಯವರೂ ಇರುತ್ತಾರೆ. ದಶಕಗಳ ಹಿಂದೆ ನರಮಂಡಲದ ಪರೀಕ್ಷೆಯಾದ ‘ಇ.ಇ.ಜಿ. (ಇಲೆಕ್ಟ್ರೋ ಎನ್ಸೆಫಲೋಗ್ರಾಂ) ಕೊನೆಯ ಆಯ್ಕೆಯಾಗಿತ್ತು. ಆದರೆ ಈಗ ಎಂ.ಆರ್.ಐ. ಮತ್ತು ಇ.ಇ.ಜಿ.ಗಳಿಂದಲೇ ರೋಗಿಯ ಪರೀಕ್ಷೆ ಆರಂಭವಾಗುತ್ತದೆ!
ಈಗ ‘ಸಾಕ್ಷ್ಯಾಧಾರಿತ ಚಿಕಿತ್ಸೆ’ ಹೆಚ್ಚು ಪ್ರಚಲಿತ:
ಈಗ ‘ಸಾಕ್ಷ್ಯಾಧಾರಿತ ಚಿಕಿತ್ಸೆ’ ಹೆಚ್ಚು ಪ್ರಚಲಿತವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಾನೂನಿನ ಅಂಶಗಳು ಇರುವಂತಹ ವೈದ್ಯಕೀಯ ಸಂದರ್ಭಗಳಲ್ಲಿ ಮತ್ತು ಆರೋಗ್ಯ ವಿಮೆಗೆ ಸಂಬಂಧಿಸಿದ ರೋಗಗಳಲ್ಲಿ ವೈದ್ಯರು ತಪಾಸಣೆಗಳ ಮೂಲಕವೇ ರೋಗವನ್ನು ದೃಡೀಕರಿಸಬೇಕಾದ ಒತ್ತಡಕ್ಕೆ ಒಳಗಾಗುತ್ತಾರೆ.
ಸಾಕ್ಷ್ಯಾಧಾರಿತ ಚಿಕಿತ್ಸೆ’ಯಿಂದಾಗಿ ವೈದ್ಯರ ರೋಗಿ ಪರೀಕ್ಷಾ ವಿಧಾನಗಳ ಜ್ಞಾನಕ್ಕೆ ಗ್ರಹಣ ಹಿಡಿದಂತಾಗಿದೆ. ಆದರೆ ಈ ಸ್ಥಿತಿ ರೋಗಿಯನ್ನು ಒಂದು ಶನಿಯಂತೆ ಕಾಡಿದರೂ ಕಾಡಬಹುದು. ಆದರೆ, ಒಬ್ಬ ನಿಗದಿತ ರೋಗಿಯಲ್ಲಿ ಈ ಸಾಕ್ಷ್ಯಾಧಾರಿತ ಚಿಕಿತ್ಸೆಯು (ಎವಿಡೆನ್ಸ್ ಬೇಸ್ಡ್ ಮೆಡಿಸಿನ್) ಹೆಚ್ಚಾಗಬಹುದಾದ ಸಾಧ್ಯತೆಯೆಂದರೆ ಈಗ ವೈದ್ಯರಿಗೆ ಎದುರಾಗುವ, ಶಾಸನ ರೀತ್ಯಾ ಒದಗಿಬರುವ ಎಡರು ತೊಡರುಗಳು. ವೈದ್ಯರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಾಕ್ಷಿಗಳನ್ನು, ಆಧಾರಗಳನ್ನು ಇಡುವುದಕ್ಕಾಗಿ ತಪಾಸಣೆಗಳನ್ನು ಸಾಧನಗಳನ್ನಾಗಿ ಮಾಡಿಕೊಳ್ಳುತ್ತಾರೆ. ತಪಾಸಣೆಗಳು ರೋಗಿಯ ಅಗತ್ಯವಾಗಿರುವಂತೆ ವೈದ್ಯರ ಅಗತ್ಯಗಳಾಗಿಯೂ ಪರಿಣಮಿಸುತ್ತವೆ.
ಕೆಲವೊಂದು ವೈದ್ಯಕೀಯ ಕೇಂದ್ರಗಳ ವಾಣಿಜ್ಯ ಕೇಂದ್ರಿತ ವಿಧಿ ವಿಧಾನಗಳು ರೋಗಿಗಳಿಗೆ ದು:ಖದಾಯಕ ಸಂಗತಿಗಳಾಗಿ ಪರಿಣಮಿಸಿವೆ. ಹಿರಿಯ ವೈದ್ಯರುಗಳನ್ನು ವಿಚಾರಿಸಿದರೆ ಒಂದು ಸಂಗತಿ ನಮಗೆ ಅರಿವಾಗುತ್ತದೆ. ಇಪ್ಪತ್ತು ವರುಷಗಳ ಹಿಂದೆ ಸಿಂಹಾವಲೋಕನ ಮಾಡಿದರೆ ಆಗ, ಒಬ್ಬ ಎದೆನೋವಿನ ರೋಗಿ ಬಂದಲ್ಲಿ ವೈದ್ಯರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಅವಧಿಯನ್ನು ರೋಗಿಪರೀಕ್ಷೆಗಾಗಿ ಮೀಸಲಾಗಿಡುತ್ತಿದ್ದರು. ನೇರವಾಗಿ ತಪಾಸಣೆಗಳಿಗೆ ಹಾರುವುದಕ್ಕಿಂತ ಪೂರ್ವಭಾವಿಯಾದ ವೈದ್ಯರ ಉಪಕ್ರಮ ಅದುವೇ ಆಗಿತ್ತು. ಆದರೆ ಗಂಭೀರಾವಸ್ಥೆ ಯಲ್ಲಿರುವ ರೋಗಿಗಳ ವಿಷಯದಲ್ಲಿ ಹೇಳುವಾಗ ತುರ್ತು ಅಗತ್ಯವಿರುವ ಔಷಧಿಗಳನ್ನು ಆ ರೋಗಿ ಪರೀಕ್ಷೆಯ ಮಧ್ಯದಲ್ಲೇ ನೀಡುವುದು ಸೂಕ್ತವಾಗಿತ್ತು.
ಅತಿ ದೊಡ್ಡ ಎನಿಸಿಕೊಂಡಿರುವ ನಗರಗಳಲ್ಲಿ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸ ಬಹುದಾದ ಘಟನೆ ನಡೆಯುತ್ತದೆ. ಸೂಪರ್ ಸ್ಪೆಷಾಲಿಸ್ಟು ವೈದ್ಯರು ರೋಗಿಗಳನ್ನು ತಾವು ನೋಡುವುದಕ್ಕಿಂತ ಮುಂಚೆಯೇ ತಮ್ಮ ಸಹಾಯಕ ವೈದ್ಯರಿಗೆ ಉನ್ನತ ತಪಾಸಣೆಗಳನ್ನು ಮಾಡುವುದಕ್ಕೆ ಆಜ್ಞೆ ಮಾಡಿರುತ್ತಾರೆ. ಅವರಿಗಾದರೂ ಒಡೆಯರ ಆಜ್ಞೆ! ಪಾಲಿಸದೇ ಇರುವುದಕ್ಕೆ ಆಗುತ್ತದೆಯೇ?! ದಶಕಗಳ ಹಿಂದೆ ವೈದ್ಯರು ರೋಗಿಯನ್ನು ನೋಡದೇ, ಪರೀಕ್ಷೆ ಮಾಡದೇ ಔಷಧ ಕೊಡುವುದಕ್ಕೆ ಮುಂದಾಗುತ್ತಿರಲಿಲ್ಲ. ಆದರೆ ಈಗಲಾದರೂ ರೋಗಿಯನ್ನು ಪರೀಕ್ಷ್ಷಿಸದೇ ಔಷಧಿಗಳನ್ನು ಕೊಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಯುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಮನದಟ್ಟುಮಾಡಿಕೊಡಬೇಕಾದ ಒಂದು ಘಟ್ಟಕ್ಕೆ ತಲುಪಿದ್ದೇವೆ. ತಪಾಸಣೆಗಳನ್ನು ನಡೆಸುವಲ್ಲಿ ಒಂದು ರೀತಿಯ ತರ್ಕಬದ್ಧತೆ ಹಾಗೂ ಸಮತೋಲನ ಮತ್ತು ಔಚಿತ್ಯ ಪ್ರಜ್ಞೆ ಬರಬೇಕಾಗಿದೆ.
ನೆನಪಿನಲ್ಲಿಡಿ –
ರೋಗಿಯನ್ನು ಪರೀಕ್ಷಿಸದೆ ತಪಾಸಣೆಗಳನ್ನು ಪತ್ತೆಹಚ್ಚಿ ತಪಾಸಣೆ ಮಾಡುವುದೂ ಅಸಾಧ್ಯ. ಆದುದರಿಂದ ವೈದ್ಯರಿಗೂ ಹಾಗೂ ರೋಗಿಗಳಿಗೂ ಒಂದು ಕಿವಿಮಾತು. ರೋಗಿಗಳನ್ನು ಪರೀಕ್ಷಿಸಿದ ನಂತರವೇ ತಪಾಸಣೆಗಳನ್ನು ಮಾಡಬೇಕು ಎಂಬುದು ಸತ್ಯ. ತಪಾಸಣೆಗಳು ಹಿಂದಿನ ಕಾಲಕ್ಕಿಂತ ಶೀಘ್ರವಾಗಿ ರೋಗವನ್ನು ಪತ್ತೆಹಚ್ಚುವುದಲ್ಲದೇ ನಿಖರವಾಗಿ ರೋಗವನ್ನು ದೃಢೀಕರಿಸುವುದು ಎಂಬ ವಾಸ್ತವವನ್ನು, ತಂತ್ರಜ್ಞಾನ ಉಂಟುಮಾಡಿದ ಪಾರದರ್ಶಕತೆಯನ್ನು ಬಳಸಿಕೊಳ್ಳುತ್ತಾ, ರೋಗಿ ಪರೀಕ್ಷೆಯ ರಾಜಮಾರ್ಗದಿಂದ ವಿಚಲಿತರಾಗಬಾರದೆಂಬುದು ನಾವು ವಹಿಸಬೇಕಾದ ಎಚ್ಚರಿಕೆ. ಅಷ್ಟೇ ಅಲ್ಲ, ಅದು ವೈದ್ಯರು ನಿರ್ವಹಿಸಲೇಬೇಕಾದ ಜವಾಬ್ದಾರಿ.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್, ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.,
ಮೊಬೈಲ್:9740545979