ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?

ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?ಹೈ ಲೆವೆಲ್ಲು ಅಂದ್ಕಂಡಿರೋ ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ? ಯೋಚಿಸಿ. ಯಾವಾಗಲೂ ನಾವು ಕೆಲಸಕ್ಕೆ, ಸೌಕರ್ಯಕ್ಕೆ, ಹಣಕ್ಕೆ, ಲಾಭಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡುತ್ತೇವೆ, ಆದರೆ ಆನಂದಕ್ಕೆ ಇಂಪಾರ್ಟೆನ್ಸೇ ಕೊಡಲ್ಲ..!

ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?ಇವತ್ತು ಸೆಪ್ಟೆಂಬರ್ 21 ಅಂತಾರಾಷ್ಟ್ರೀಯ ಶಾಂತಿ ದಿನ ಅಂತ ಯುನೈಟೆಡ್ ನೇಶನ್ ಆರ್ಗನೈಸೇಶನ್ಸ್ ಆಚರಿಸ್ತಿವೆ. ಒಂದ್ಕಡೆ ಕೊರೋನಾ, ಇನ್ನೊಂದ್ಕಡೆ ಮಳೆ-ಪ್ರವಾಹ-ರೋಗ ರುಜಿನ, ಮತ್ತೊಂದ್ಕಡೆ ಆರ್ಥಿಕ ಸಂಕಷ್ಟ ಹೀಗೆ ಸಾಲು ಸಾಲು ಹೊಡೆತಗಳಿರುವಾಗ ಇನ್ನೆಲ್ಲಿಯ ಶಾಂತಿ ಅಂತ ನಿಮಗೆ ಅನ್ನಿಸ್ಬಹುದು. ಆಗ ಸೈಲೆಂಟಾಗಿ ನಿಮ್ಮ ರೋಡಲ್ಲೇನಾದ್ರೂ ಬೀದಿನಾಯಿಗಳಿದ್ರೆ ಸುಮ್ನೆ ಅದನ್ನ ಒಂದೈದು ನಿಮಿಷ ಗಮನಿಸಿ.

ನಾಯಿ ಮನುಷ್ಯರ ತರನೇ ತನ್ನದೇ ಆದ ಒಂದು ಗಡಿ ಮಾಡ್ಕಂಡಿರತ್ತೆ. ಹೊಸ ನಾಯಿಗಳು ಬಂದ್ರೆ ಯುದ್ಧಕ್ಕೆ ನಿಲ್ಲತ್ತೆ. ಯಾವ್ದೋ ಕಾರೋ ಬೈಕೋ ಕಂಡು ಕೆರಳಿದ್ರೂ ಅದನ್ನ ತನ್ನ ಗಡಿಯವರೆಗೆ ಮಾತ್ರ ಬೊಗಳುತ್ತಾ ಬೆನ್ನತ್ತುತ್ತೆ.. ಬಿಟ್ರೆ; ಅವರ ಮನೆಯವರೆಗೆ ಅಟ್ಟಿಸ್ಕೊಂಡು ಹೋಗಲ್ಲ. ಸಿಕ್ಕಿದ್ದು ತಿನ್ನತ್ತೆ, ನಾಯಿಗೆರೆ ಕಾಲಲ್ಲಿ ಇರೋದ್ರಿಂದ ಅದು ಯಾವಾಗಲೂ ರೋಡ್ ತುಂಬಾ ಗಿರಗಿರ ತಿರುಗುತ್ತೆ, ಬಹುತೇಕ ಸಮಯ ಬೀದೀಲಿ ಮಲಗಿ ಸುಖವಾಗಿರತ್ತ್ತೆ. ಎಲ್ಲರ ತಾತ್ಸಾರಕ್ಕೆ ಒಳಗಾಗುವ ಬೀದಿನಾಯಿಯೇ ತನ್ನ ಜನ್ಮವನ್ನ ಸಾರ್ಥಕವಾಗಿ ಕಳೆಯುತ್ತಾ ಬಹುತೇಕ ಸಮಯ ಆನಂದವಾಗಿರಬಹುದಾದ್ರೆ ಅದೆಲ್ಲಕ್ಕಿಂತಲೂ ಹೈ ಲೆವೆಲ್ಲು ಅಂದ್ಕಂಡಿರೋ ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ? ಯೋಚಿಸಿ.

ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ?

ಅಷ್ಟಕ್ಕೂ ಖುಷಿ ಅಂದ್ರೇನು? ಇದೊಂದು ಚಿಕ್ಕ ಪ್ರಶ್ನೆಯಾದ್ರೂ ಉತ್ತರಕ್ಕಾಗಿ ಬಹಳಷ್ಟು ತಡಕಾಡಬೇಕಾಗುತ್ತೆ. ಉತ್ತರ ಗೊತ್ತಾದ್ರೂ ಸರಿಯೋ ತಪ್ಪೋ ಗೊತ್ತಿಲ್ಲ. ತಮ್ಮದೇ ಸರಿ ಅಂದ್ಕೊಬಹುದು ಅಷ್ಟೆ! ‘ನಿಮ್ಮ ಮನಸ್ಸು ಯಾವಾಗ ಸಂತಸದಿಂದ ಇರತ್ತೆ?’ ಅಂತ ಪ್ರಶ್ನೆ ಕೇಳಿದ್ರೆ ಒಬ್ಬೊಬ್ಬರದು ಒಂದೊಂದು ಉತ್ತರ ಬರಬಹುದು. ನಾನು ಮಂತ್ರಿ, ಅಧಿಕಾರಿ ಆಗಬೇಕು ಅಂತಾನೋ, ನನಗೆ ಇಷ್ಟವಾದ ಹುಡುಗಿಯನ್ನೇ ಮದುವೆಯಾಗಬೇಕು ಅಂತಾನೋ, ದೊಡ್ಡ ಬಂಗಲೆ ಕಟ್ಟಿಸಬೇಕು ಅಂತಾನೋ, ನಮ್ಮ ಯಜಮಾನರ ತಲೇಲಿ ಕೂದಲು ಬೆಳಿಲಿ ಅಂತಾನೋ, ಹೀಗೇ ಕೋಟ್ಯಾಂತರ ಚಿತ್ರ ವಿಚಿತ್ರ ಉತ್ತರಗಳೆಲ್ಲಾ ನಮಗೆ ಸಿಗುತ್ವೆ! ಅವರು ಅಂದ್ಕೊಂಡಿದ್ದು ನಿಧಾನವಾಗಿಯಾದರೂ ಆಗಬಹುದು, ಆಗದೆಯೂ ಇರಬಹುದು. ಆದರೂ ಆ ಆಸೆ ಈಡೇರುವಿಕೆಯವರೆಗೆ ಅವರ ಮನಸ್ಸು ಒಂಥರಾ ದುಃಖದಲ್ಲೇ ಕೊರಗ್ತಾ ಇರತ್ತೆ. ಆಸೆ ಈಡೇರಿಯೇ ಬಿಡ್ತು ಅಂದ್ಕೊಳಿ.. ಮುಗಿದೋಯ್ತಾ? ಇಲ್ಲಾ.. ಮನದ ಮೂಲೆಯಲ್ಲಿ ಮತ್ತೊಂದು ಆಸೆ ಮೊಳಕೆಯೊಡೆಯಲು ಆರಂಭಿಸಿರುತ್ತೆ..!

ಮೇಲಿನ ಉದಾಹರಣೆಗಳೆಲ್ಲಾ ಯಾಕಂದ್ರೆ ನಾವಿರೋ ಸಮಾಜದಲ್ಲಿ material ಇಷ್ಟಪಡೋರು ಹಲವರಾದ್ರೆ moral ಹಾಗೂ ವಿಸ್ಡಮ್ (wisdom) ಅಂದ್ರೆ ಜ್ಞಾನವನ್ನ ಬಯಸೋರು ಕೆಲವರು ಮಾತ್ರ! ಇದರಲ್ಲಿ ಹಲವರದ್ದೂ ತಪ್ಪಿಲ್ಲ, ತಿಳುವಳಿಕೆಯ ಕೊರತೆ ಬಾಧಿಸುತ್ತಿದೆ ನಮಗೆಲ್ಲಾ. ನಮ್ಮ-ನಿಮ್ಮ ಪೂರ್ವಿಕರು ಒಂದು ನಿಯಮ ಮಾಡಿದ್ರು. ಅದನ್ನು ಮುಂದಿನವರಿಗೆ ಅನುಸರಿಸಲು ಹೇಳಿದರು. ಆಗ ಅನುಸರಿಸುವವರಿಗೆ ಕಾರಣ ಗೊತ್ತಿತ್ತೋ ಏನೊ? ನಂತರದ ತಲೆಮಾರಿನವರಿಗೆ ಆ ಆಚರಣೆಯ ಕಾರಣವೇ ತಿಳಿಯದೇ ಬಹಳಷ್ಟು ಆಚರಣೆಗಳು ನಿಲ್ಲುತ್ತಾ ಬಂದವು. ಇದರಲ್ಲಿ ತಪ್ಪು ಯಾರದ್ದು? ಈಗಿನ ಜಮಾನಾದವರದ್ದೋ? ಮಧ್ಯದ ತಲೆಮಾರಿನವರದೋ? ಗೊತ್ತಿಲ್ಲ. ಆದರೆ ಅವರು ತಿಳಿಸುವಲ್ಲಿ ವಿಫಲರಾದ್ರು, ನಾವು ತಿಳಿದುಕೊಳ್ಳುವಲ್ಲಿ ಆಸಕ್ತಿಯನ್ನೇ ಕಳೆದುಕೊಂಡ್ವಿ!

ಈಗಿನ ಬಹುದೊಡ್ಡ ವ್ಯಾಧಿ ಮನಸ್ಸಿನ ಮಾಲಿನ್ಯ

ಪರಿಣಾಮ ಹಲವು ಆಚರಣೆಗಳು ಮೂಢ ನಂಬಿಕೆಗಳಾದ್ವು, ಪೂರ್ವಕರ ಕೆಲವು ಅಮೂಲ್ಯ ಜ್ಞಾನ ಕಾಲಗರ್ಭದಲ್ಲಿ ಮರೆಯಾಯ್ತು. ಅಂತಹ ಮರೆಯಾದ ಹಲವಾರು ಟೆಕ್ನಿಕ್ಕುಗಳಲ್ಲಿ ಮನಸ್ಸನ್ನು ಸಂತೋಷವಾಗಿಡಬಲ್ಲಂತಹ ಅನೇಕ ಚಮತ್ಕಾರಿ ವಿದ್ಯೆಗಳೂ ಇದ್ದವು. ಈಗ ನಾವು ಉಪಯೋಗಿಸುತ್ತಾ ಇರುವ ಯೋಗ, ಪ್ರಾಣಾಯಾಮ, ಮುದ್ರೆ, ಸಂಗೀತಾ, ಧ್ಯಾನ, ಗಣಿತ ಇವೆಲ್ಲಾ ಇತ್ತೀಚಿನವರು ಶೋಧಿಸಿದ್ದೇನಲ್ಲ. ಕಂಪ್ಯೂಟರ್ ನಮಗೆ ಕಲಿಸಿದ ವಿದ್ಯೆಯೂ ಅಲ್ಲ.. ಈಗಿನ ಬಹುದೊಡ್ಡ ವ್ಯಾಧಿಯಾಗಿರುವ ಮನಸ್ಸಿನ ಮಾಲಿನ್ಯಕ್ಕೆ ಬಹಳಷ್ಟು ಜನರು ಔಷಧಿ ಕುಡುಕುತ್ತಾ ಅಲೆಯುತ್ತಿದ್ದಾರೆ.

ಸಂತಸಭರಿತ ಮನಸ್ಸಿಗಾಗಿ ಹಾತೊರೆಯುತ್ತಿದ್ದಾರೆ. ಚಿಕ್ಕ ಚಿಕ್ಕ ಖುಷಿಯನ್ನೆಲ್ಲಾ ಮರೆತು ದೊಡ್ಡ ಸಂತೋಷಕ್ಕಾಗಿ ಹಪಹಪಿಸುತ್ತಿದ್ದಾರೆ. ದೂರದಲ್ಲಿರೋ ಜಾಮೂನು ಬೇಕೆಂದು ಆಸೆಪಡುತ್ತಾ ಕೈಯಲ್ಲಿರುವ ಜಿಲೇಬಿ ಸವಿಯನ್ನೇ ಸವಿಯದೇ ಬಾಳುವಂತ- ಜೀವನ ಬೇಕಾ ನಮಗೆ? ಯಾವಾಗಲೂ ನಾವು ಕೆಲಸಕ್ಕೆ, ಸೌಕರ್ಯಕ್ಕೆ, ಹಣಕ್ಕೆ, ಲಾಭಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡುತ್ತೇವೆ, ಆದರೆ ಆನಂದಕ್ಕೆ ಇಂಪಾರ್ಟೆನ್ಸೇ ಕೊಡಲ್ಲ..! ನಾವ್ಯಾರೂ ಹುಟ್ಟುತ್ತಾನೇ ಮಶಿನ್ನುಗಳ ಜೊತೆ ಕೊಡೋ ಯೂಸರ್ ಮ್ಯಾನುವಲ್ ಜೊತೆ ಹುಟ್ಟಿಲ್ಲ. ಎಲ್ಲರಿಗೂ ಅವರದೇ ಆದ ಒಂದು ಗುರುತರ ಜವಾಬ್ದಾರಿಯಂತೂ ಇದ್ದೇ ಇದೆ.

ನಾವೀಗ ಇಲ್ಲಿ ಹುಟ್ಟಿದೀವಿ ಅಂದ್ರೆ ಸುಮ್ಸುಮ್ನೆ ಅಂತೂ ಹುಟ್ಟಿಲ್ಲ ಏನೋ ಒಂದು ಕಾರಣ ಇರತ್ತೆ. ನಾನಂತೂ ಅದೇ ಒಂದು ಕಾಣದ ರಹಸ್ಯದ ತಲಾಷ್‍ನಲ್ಲಿರುವೆ. ಇದು ಹುಡುಕಾಟವೇ ಹೊರತು, ದಯವಿಟ್ಟು ಕಾಟ ಅಂತ ಅಂದ್ಕೋಬೇಡಿ. ಎಲ್ಲಾ ಓದಿ ಇಲ್ಲೇನೋ ಮಿಸ್ ಆಗಿದೆ ಅಂತ ನಿಮ್ಮ ಮನಸ್ಸಿಗೆ ಅನ್ನಿಸಿದ್ರ್ರೆ ಈ ಒಂದು ವಿಷಯವನ್ನು ನೆಸಪಿಸಿಕೊಳ್ಳಿ ಶಾಂತ ಮನಸ್ಸಿಗೆ ನೂರಾರು ಕನಸುಗಳು. ನೂರಾರು ಕನಸಿನ ಭೇಟೆಯೇ ಈ ಜೀವನ. ಹಾಗಾಗಿ ಲೈಫನ್ನ ಜಾಸ್ತಿ ಸೀರಿಯಸ್ ಆಗಿ ತಗೊಳ್ದೆ ಆರಾಮಾಗಿ ಕಣ್ಮುಚ್ಚಿ ಧ್ಯಾನ ಮಾಡಿ..

sachin-sharma

ಸಚಿನ್ ಶರ್ಮಾ ಬೆಂಗಳೂರು
ಆರೋಗ್ಯ ಚಿಂತಕರು
ಮೊ: 9036723369

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!