ಮಳೆಗಾಲದಲ್ಲಿ ಯಾವ ಆಹಾರ ಸೂಕ್ತ?

ಮಳೆಗಾಲದಲ್ಲಿ ಯಾವ ಆಹಾರ ಸೂಕ್ತ? ಹಸಿವೆ ಸರಿಪಡಿಸಲು ನಾವು ಷಡ್ರಸಗಳನ್ನು ಹೊಂದಿರುವ ಆಹಾರವನ್ನು ಉಪಯೋಗಿಸಬೇಕು.ಮಳೆಗಾಲದಲ್ಲಿ ಹಗಲಿನಲ್ಲಿ ನಿದ್ರೆ ಮಾಡುವುದು, ಅಧಿಕ ವ್ಯಾಯಾಮ ಮಾಡುವುದನ್ನು ಮಾಡಬಾರದು.

ಬೇಸಿಗೆ ನಂತರ ಮಳೆಗಾಲ. ವರ್ಷ ಋತುವಿನ ಆಗಮನದಿಂದ, ಕಾಯ್ದ ಭೂಮಿ ಮೇಲೆ ವರ್ಷಧಾರೆ ಸುರಿದು ಧರಣಿ ತಂಪಾಗುತ್ತದೆ. ಬೇಸಿಗೆಯ ಬಿಸಿಲ ಬೇಗೆಯಲ್ಲಿ ನಾವು ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ತಂಪಾಗಿರುವ ಮಳೆಯ ನೀರನ್ನು ಕುಡಿಯುವುದರಿಂದ ಹಸಿವೆಯು ಮತ್ತಷ್ಟು ಕುಂದುತ್ತದೆ. ಹೀಗೆ ಹಿಂಗಿದ ಹಸಿವೆ ಸರಿಪಡಿಸಲು ನಾವು ಷಡ್ರಸಗಳನ್ನು ಹೊಂದಿರುವ ಆಹಾರವನ್ನು ಉಪಯೋಗಿಸಬೇಕು. ಅಂದರೆ ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಬಗರು ರುಚಿಯನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹುಣಿಸೆಹಣ್ಣು, ಟೊಮೆಟೊ, ನಿಂಬೆಹಣ್ಣನ್ನು ಆಹಾರದಲ್ಲಿ ಬಳಸಬೇಕು. ಏಕೆಂದರೆ ಈ ಕಾಲದಲ್ಲಿ ಜೀರ್ಣ ಶಕ್ತಿಯು ಕುಂದುವುದರಿಂದ ಹೊಟ್ಟೆ ತುಂಬ ಆಹಾರ ಸೇವಿಸಿದರೆ ಅಜೀರ್ಣ ಮುಂತಾದ ಕಾಯಿಲೆಗಳು ಬರಬಹುದು. ಹೊಸ ಅಕ್ಕಿಯ ಬದಲಾಗಿ ಹಳೆಯ ಅಕ್ಕಿಯನ್ನು ಬಳಸಿದರೆ ಸುಲಭವಾಗಿ ಜೀರ್ಣವಾಗುತ್ತದೆ.

ಮಜ್ಜಿಗೆ ಮಹತ್ವಮಳೆಗಾಲದಲ್ಲಿ ಯಾವ ಆಹಾರ ಸೂಕ್ತ?

ತರಕಾರಿ, ಸಾಂಬಾರಗಳ ಬದಲಿಗೆ ತೊಗರಿಬೇಳೆ ಕಟ್ಟು, ಹುರುಳಿಯ ಕಟ್ಟಿನಿಂದ ತಯಾರಿಸಿದ ಸಾರು ಊಟಕ್ಕೆ ಬಳಸಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಬ್ರೆಡ್, ಚಪಾತಿಗಳ ಜೊತೆಗೆ ಜೇನುತುಪ್ಪ ಲೇಪಿಸಿ ಬಳಸಬಹುದು. ಮಳೆಗಾಲದಲ್ಲಿ ಮೊಸರು ಬಳಸಬಾರದು. ಗಟ್ಟಿ ಮೊಸರು ಜೀರ್ಣವಾಗಲು ತಡವಾಗುತ್ತದೆ. ಅದು ಕಫವನ್ನು ಕೆರಳಿಸಿ, ನೆಗಡಿ, ಕೆಮ್ಮು ಮತ್ತು ಉಬ್ಬಸವನ್ನು ಹೆಚ್ಚಿಸುತ್ತದ. ಮೊಸರನ್ನು ಸದಾ ಬಳಸುವವರು ಮಳೆಗಾಲದಲ್ಲಿ ಮೊಸರನ್ನು ಕಡೆದು ಸ್ವಲ್ಪ ಕರಿ ಮೆಣಸಿನ ಪುಡಿ, ಉಪ್ಪು ಬೆರೆಸಿ ಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು.

ಊಟದ ಕೊನೆಯಲ್ಲಿ ಮಜ್ಜಿಗೆ ಬಳಸುವುದು ಮಳೆಗಾಲದಲ್ಲಿ ಜೀರ್ಣಶಕ್ತಿ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಮೊಸರಿಗೆ ನೀರು ಸೇರಿಸಿ ಬಳಸುವುದು. ಹುಳಿ ಮೊಸರಿಗೆ ಹಾಲು ಬೆರೆಸಿ ಊಟ ಮಾಡುವುದು, ಮಜ್ಜಿಗೆಗೆ ಸಕ್ಕರೆ, ಉಪ್ಪು, ಒಗ್ಗರಣೆ ಮುಂತಾದವುಗಳನ್ನು ಹಾಕಿ ಬಳಸುವ ಕ್ರಮಗಳು ಆರೋಗ್ಯಕ್ಕೆ ಹಿತವಲ್ಲ. ಹದವಾಗಿ ಹೆಪ್ಪಾದ ಮೊಸರಿಗೆ ಸ್ವಲ್ಪ ನೀರನ್ನು ಸೇರಿಸಿ ಕಡೆದು ಮಜ್ಜಿಗೆ ತಯಾರಿಸಿ ಊಟಕ್ಕೆ ಬಳಸಬೇಕು. ಜೀರ್ಣಶಕ್ತಿ ಕಡಿಮೆ ಇರುವವರು ಮಜ್ಜಿಗೆಗೆ ಕರಿಬೇವು ಸೇರಿಸಿ ಕಡೆದು ನಂತರ ಉಪಯೋಗಿಸಬೇಕು. ಬೊಜ್ಜು ದೇಹವುಳ್ಳವರು ತಿಳಿ ಮಜ್ಜಿಗೆ ಕುಡಿಯುವುದು ಸೂಕ್ತ. ಮಳೆಗಾಲದಲ್ಲಿ ಆಹಾರದಲ್ಲಿ ಉಪ್ಪನ್ನು ಮಿತವಾಗಿ ಬಳಸಿದರೆ ಜೀರ್ಣಶಕ್ತಿ ಹಿತಕರ.

ವೈವಿಧ್ಯಮಯ ಆಹಾರಗಳು:

1. ಹುಣಿಸೇಹಣ್ಣು, ನಲ್ಲಿಕಾಯಿ, ಪುನರ್ಪುಳಿ, ದಾಳಿಂಬೆ-ಮಾವು ಮುಂತಾದವುಗಳನ್ನು ಮಳೆಗಾಲದಲ್ಲಿ ಉಪಯೋಗಿಸಬೇಕು. ಹುಣಿಸೇಹಣ್ಣಿನ ರಸ ಬೆರೆತ ಸಾರು, ಸಾಂಬಾರು ರುಚಿಯಾಗಿರುತ್ತದೆ. ಇದರ ಬಳಕೆಯಿಂದ ಆಹಾರದ ರುಚಿ ಹೆಚ್ಚುತ್ತದೆ. ಹಸಿವು ಹೆಚ್ಚಾಗುತ್ತದೆ. ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

2. ಮಾದಳದ ಹಣ್ಣನ್ನು ಬಳಸುವುದರಿಂದ ಹೊಟ್ಟೆ ತೊಳಸುವುದು, ವಾಂತಿ ಕಡಿಮೆಯಾಗಿ ಹಸಿವು ಹೆಚ್ಚುತ್ತದೆ. ಪುನರ್ಪುಳಿ (ಕೋಕಮ್) ಬಾಯಾರಿಕೆ ತಗ್ಗಿಸಿ ಹಸಿವೆ ಹೆಚ್ಚಿಸುತ್ತದೆ. ಪಿತ್ತ ವಿಕಾರಗಳನ್ನು ಶಮನ ಮಾಡುತ್ತದೆ. ಇದು ಘಟ್ಟ ಪ್ರದೇಶದಲ್ಲಿ ಬೆಳೆಯುವುದರಿಂದ ಅಲ್ಲಿನ ಜನ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಹಣ್ಣನ್ನು ಒಣಗಿಸಿಟ್ಟುಕೊಂಡು ಎಲ್ಲ ಕಾಲದಲ್ಲೂ ಬಳಸುತ್ತಾರೆ.

3. ಮಳೆಗಾಲದಲ್ಲಿ ದಾಳಿಂಬೆ ಹಣ್ಣನ್ನು ಉಪಯೋಗಿಸಿದರೆ ಪಿತ್ತದ ತೊಂದರೆಗಳು ನಿವಾರಣೆಯಾಗುತ್ತವೆ. ಅಧಿಕ ಸಿಹಿ, ಸ್ವಲ್ಪ ಹುಳಿ ರುಚಿಯಿಂದ ಇದು ಹಸಿವೆ ಹೆಚ್ಚಿಸುತ್ತದೆ. ದಾಳಿಂಬೆ ತಂಪು ಗುಣ ಹೊಂದಿದ್ದು ದೇಹಶ್ರಮ ನಿವಾರಿಸುತ್ತದೆ. ಬಾಯಿಗೆ ಸಿಹಿ ನೀಡುತ್ತದೆ.

4. ಮಾವಿನಕಾಯಿ ಮಳೆಗಾಲದಲ್ಲಿ ಲಭಿಸುವುದಿಲ್ಲವಾದರೂ ಇದರ ವಿವಿಧ ಬಗೆಯ ಉಪ್ಪಿನಕಾಯನ್ನು ಮಿತವಾಗಿ ಬಳಸಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಮಾವಿನ ಕಾಯಿಯ ಉಷ್ಣಗುಣ ಹೊಂದಿದ್ದು, ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಚರ್ಮದ ಕಾಂತಿ ಹೆಚ್ಚಿಸುತ್ತದೆ.

5. ಟೊಮೊಟೋ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿಯಾಗಿದ್ದು, ಇದರ ಬಳಕೆಯಿಂದ ಜೀರ್ಣ ಶಕ್ತಿ, ದೇಹದ ಶಕ್ತಿ ಹೆಚ್ಚುತ್ತದೆ. ಇದು ಪ್ರತಿದಿನದ ಬಳಕೆಗೆ ಯೋಗ್ಯವಲ್ಲ. ದಿನನಿತ್ಯ ಅಡುಗೆಗೆ ಇದನ್ನು ಉಪಯೋಗಿಸಿದರೆ ಹುಳಿತೇಗು, ಆಮ್ಲಪಿತ್ತದ ತೊಂದರೆಗಳು ಹೆಚ್ಚಾಗಬಹುದು.

6. ನೆಲ್ಲಿಕಾಯಿಯ ಬಳಕೆಯಿಂದ ರುಚಿ ಹೆಚ್ಚುವುದಲ್ಲದೇ ವಾಕರಿಕೆ, ಮಲಬದ್ಧತೆ, ಹೊಟ್ಟೆ ಉಬ್ಬರ ನಿವಾರಣೆಯಗುತ್ತದೆ. ನೆಲ್ಲಿಕಾಯಿಯು ನಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫಗಳು ಕೆರಳಿದ್ದರೆ ಅದನ್ನು ಶಮನಗೊಳಿಸಿ ದೇಹದ ಎಲ್ಲ ಧಾತುಗಳಿಗೂ ಶಕ್ತಿ ನೀಡುತ್ತದೆ. ನೆಲ್ಲಿಕಾಯಿಯು ಮಳೆಗಾಲದಲ್ಲಿ ಲಭಿಸುವುದಿಲ್ಲವಾದರೂ ಇದರ ಉಪ್ಪಿನಕಾಯನ್ನು ಮಿತವಾಗಿ ಬಳಸಬಹುದು.

ಸಾಮಾನ್ಯ ಸಂಗತಿಗಳು

dr hegde add1. ಮಳೆಗಾಲದಲ್ಲಿ ಹಗಲಿನಲ್ಲಿ ನಿದ್ರೆ ಮಾಡುವುದು, ಅಧಿಕ ವ್ಯಾಯಾಮ ಮಾಡುವುದನ್ನು ಮಾಡಬಾರದು.

2. ಮಳೆ ಸುರಿಯುವಾಗ ಮಳೆಯಲ್ಲಿ ತಿರುಗಾಡಬಾರದು. ಮಳೆಗಾಲದಲ್ಲಿ ಅಧಿಕ ಮೈಥುನವೂ ಒಳ್ಳೆಯದಲ್ಲ.

3. ರಾತ್ರಿ ಜಾಗರಣೆ ಮಾಡಬಾರದು.

4. ಆಕಾಶದಲ್ಲಿ ಮೋಡ ಮುಸುಕಿರುವ ಸಮಯದಲ್ಲಿ ಮಲಬದ್ಧತೆಯಿದ್ದಲ್ಲಿ ಮಲಪ್ರವೃತ್ತಿಯ ಔಷಧಿ ತೆಗೆದುಕೊಳ್ಳಬಾರದು.

5. ಮಳೆಗಾಲದಲ್ಲಿ ಚರ್ಮರೋಗಗಳು ಹೆಚ್ಚಾಗಿ ಕಾಡುವುದರಿಂದ ಶರೀರವನ್ನು ಸ್ವಚ್ಚವಾಗಿಡಿ.ತೇವವಿರದ ಹಾಗೆ ನೋಡಿಕೊಳ್ಳಬೇಕು.

6. ಅರಿಶಿನ ಪುಡಿ ಹಾಗು ಸಕ್ಕರೆಯನ್ನು ಬಿಸಿ ಹಾಲಿನಲ್ಲಿ ಕುಡಿಯುವುದರಿಂದ ಈ ಕಾಲದಲ್ಲಿ ನೆಗಡಿ, ಕಫದ ತೊಂದರೆಗಳು, ಚರ್ಮದ ಕಾಯಿಲೆಗಳು ಬಾಧಿಸುವುದಿಲ್ಲ.

ಮಳೆಗಾಲದಲ್ಲಿ ಈ ಪ್ರಕಾರ ಆಹಾರ- ವಿಹಾರಗಳಲ್ಲಿ ಅನುಸರಿಸಿದರೆ ಯಾವುದೇ ತೊಂದರೆಗಳು ಉದ್ಭವಿಸದೇ ಆರೋಗ್ಯವಂತರಾಗಿ, ಸಂತೋಷದಿಂದ ಇರಲು ಸಾಧ್ಯ.

ಡಾ||ವೆಂಕಟ್ರಮಣ ಹೆಗಡೆ ನಿಸರ್ಗಮನೆ,  ಶಿರಸಿ, ಉ.ಕ. ದೂ:9448729434/9731460353 Email: drvhegde@yahoo.com; nisargamane6@gmail.com
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!