ಮದುವೆಯಲ್ಲಿ ವೈದ್ಯ ದಂಪತಿ

ಮದುವೆಯಲ್ಲಿ ವೈದ್ಯ ದಂಪತಿ.

ನೆಂಟರ ಮದುವೆಯಲ್ಲಿ ರೋಗಿಗಳಿಂದ ಬಿಡುವು ಮಾಡಿಕೊಂಡು ಸಮಾಜಿಕ ಜೀವನದ ಮಜಾ ತೆಗೆದುಕೊಳ್ಳಬೇಕೆಂದು ವೈದ್ಯ ದಂಪತಿಗಳು ಡಾ ಗುಣಾ, ಡಾ ಸತೀಷ ಹೋಗಿದ್ದರು. ಗಂಡ ಫಿಜಿಷಿಯನ್ ಮಡದಿ ಗೈನಕಾಲಜಿಸ್ಟ. ಮದುವೆ ಗಂಡು ಹೆಣ್ಣನ್ನು ಹರಸಿ ಬಫೆ ಊಟದತ್ತ ಹೋಗಿ, ಇಬ್ಬರು ತಟ್ಟೆಯಲ್ಲಿ ಪಲ್ಯ ರೋಟಿ, ಪುಲಾವು, ಮೊಸರನ್ನ ಮಿಠಾಯಿಗಳನ್ನು ಹಾಕಿಕೊಂಡು ಓಂದು ಕಡೆ ನಿಂತು ಊಟ ಮಾಡಬೇಕು ಎನ್ನುವಷ್ಟರಲ್ಲಿ.
” ಓ ನಮಸ್ಕಾರಾ….. ಸಾರ್ ಚೆನ್ನಾಗಿದ್ದೀರಾ?…. ಇಬ್ಬರೂ ಬಂದ್ಬಿಟ್ರಿ. ಫ್ರಿಯಾಗಿ..?” ಎಂದು ಪರಿಚಯದವರೊಬ್ಬರು ಮಾತನಾಡಿಸಿದರೆ
“ನಮಸ್ಕಾರಾ ಬನ್ನಿ” ಎನ್ನುತ್ತ ವೈದ್ಯ ದಂಪತಿಗಳಿಬ್ಬರು ಮಾತನಾಡಿಸಿದವರನ್ನು ಸ್ವಾಗತಿಸಿದರು. ಕೊಂಚಕಾಲ ರೋಗ, ಕಾಯಿಲೆ, ಹೆರಿಗೆ, ನೋವುಗಳ ಮಾತುಗಳ ಹೊರತಾಗಿ ಬೇರೆ ಮಾತುಗಳಾಡಲು ಸಿಗುತ್ತದೆಂದು ಆನಂದಿತರಾದರು.

ದಿನವೂ ಒಂದೆರಡು ಗಂಟೆ ಯೋಗ, ವ್ಯಾಯಾಮಗಳನ್ನು ಮಾಡಿ ಅರೋಗವನ್ನು ಸರಿಯಾಗಿಟ್ಟುಕೊಂಡ ದಂಪತಿಗಳ ಕೈಯಲ್ಲಿದ್ದ ತಟ್ಟೆಯತ್ತ ಎಲ್ಲರ ಕಣ್ಣು. ಇಬ್ಬರೂ ಪುಲಾವು, ಮೋಸರನ್ನ, ಜಹಂಗೀರು, ಗುಲಾಬ್ ಜಾಮೂನುಗಳನ್ನು ಹಾಕಿಕೊಂಡು ತಟ್ಟೆಯನ್ನು ಜಾಹಿರಾತಿನ ಚಿತ್ರದಂತೆ ಅಲಂಕರಿಸಕೊಂಡು ತಮ್ಮ ಮದುವೆಯ ಭೂರಿ ಭೋಜನ ಅಸ್ವಾದಿಸುತಿದ್ದರೆ. ಇವರ ತಟ್ಟೆ ನೋಡಿ
” ಎಲ್ಲಾ ರೈಸ್ ಐಟಂ ಹಾಕೊಂಡಿದೀರಾ, ನೀವಿಬ್ಬರೂ ಡಾಕ್ಟರಲ್ವೆ ನಿಮ್ ಶುಗರ್‍ಗಳನ್ನು ಸರಿಯಾಗಿ ಕಂಟ್ರೋಲ್ ಮಾಡ್ಕೊಳ್ತೀರಾ. ನಾನು ಒಂದು ಸ್ಪೂನು ಅನ್ನ ತಿಂದರೆ ರಾತ್ರಿಯಲ್ಲ ಮೂತ್ರ ಮಾಡಬೇಕು “ಎಂದು ಬಂದ ನೆಂಟರು ಹಲ್ಲು ಗಿಂಜಲು, ವೈದ್ಯ ದಂಪತಿಗೆ ಉಣ್ಣುವ ಸಮಯದಲ್ಲಿ ಮೂತ್ರದ ವಿಚಾರ ಕೇಳಿ ಕಸಿವಿಸಿಯಾದರೂ ತೋರಿಸಿಕೊಳ್ಳದೆ.

“ಇಲ್ಲ ಅಂಕಲ್ ನಮಗೆ ಶುಗರ್ ಇಲ್ಲ ನಾವಿಬ್ಬರೂ ಡೇಲಿ ಯೋಗಾ ಮಾಡಿ ಹಿತ ಮಿತ ಆಹಾರ ಸೇವಿಸುತ್ತೆವೆ” ಎಂದಾಗ, ಕೇಳಿದವರ ಅಸಮಾಧಾನ ಇನ್ನೂ ಹೆಚ್ಚಾಗಿ
“ಅಯ್ಯೋ ಡಾಕ್ಟರೂ ಚೆನ್ನಾಗಿ ಸಂಪಾದನೆ ಮಾಡಿದೀರಾ. ಯೋಗಾ ಮಾಡ್ತೀರಾ ನಿಮ್ಮತ್ರ ಟೈಮಿದೆ ಹಣಾ ಇದೆ” ಎಂದು ಹಲುಬುತ್ತ ಊಟಮಾಡಲಾರಂಭಿಸಿದರು. ಇವರ ಮಧುಮೇಹಕ್ಕೆ ವೈದ್ಯ ದಂಪತಿಗಳೆ ಕಾರಣವೆಂದು ಮಾತನಾಡಿದ ವ್ಯಕ್ತಿಯ ಮಾತಿಗೆ ಕೊಂಚ ಕಸಿವಿಸಿಯಾದರು ದಂಪತಿಗಳು. ಕಷ್ಟಪಟ್ಟು ರೋಗಿಗಳ ಅರೈಕೆ ಮಾಡಿ ದಿನ ರಾತ್ರಿ ಹೆರಿಗೆಗಳನ್ನು ಮಾಡಿಸಿ ಸಂಪಾದಿಸಿದ ಹಣ ಕೆಲವರಿಗೆ ಹಗರಣ ಮಾಡಿ ಸಂಪಾದಿಸಿದಂತೆ ಅನ್ನಿಸುತ್ತದೆಂದು ದಂಪತಿಗಳಿಬ್ಬರು ಗಾಬರಿಯಾದರು. ತಾವು ಹತ್ತು ಹದಿನೈದು ವರ್ಷ ಕಷ್ಟಪಟ್ಟು ವೈದ್ಯಕೀಯ ಓದಿ, ಅದಕ್ಕಿಂತ ದುಪ್ಪಟ್ ಕಷ್ಟ ಪಟ್ಟು ದುಡಿಯುತ್ತಿರಯವುದು ಜನರಿಗೆ ಕಾಣುವುದೆ ಇಲ್ಲವಾ? ಎಂಬ ಯೋಚನೆ ಇಬ್ಬರ ತಲೆಯಲ್ಲೂ ಬಂತು.

ಮಾತು ಮುಂದುವರಿಸಿದ ಪರಿಚಯದವರು “ನಮ್ಮ ತಾಯಿ ಶುಗರ್ ಜಾಸ್ತಿಯಾಗಿ ಕಾಲು ಗ್ಯಾಂಗ್ರೀನ್ ಆಗಿದೆ. ಈಗಿಗ ಕೀವು ಜಾಸ್ತಿಯಾಗಿದೆ, ಅದರ ಜೊತೆ ವಾಸನೆನೂ ಬರುತ್ತಿದೆ. ಎಲ್ಲಿ ಹೋಗಬೇಕೂ ತೋಚ್ತಾನೆ ಇಲ್ಲ ” ಎನ್ನುವಷ್ಟರಲ್ಲಿ ಫಿಜಿಷಿಯನ್ ಸತೀಷರು ತಟ್ಟೆಯಲ್ಲಿ ಘಮ ಘಮಿಸುವ ಭೋಜ್ಯಗಳ ಅಸ್ವಾದಿಸುವ ಹುನ್ನಾರದಲ್ಲಿದ್ದಾಗ ಡಯಾಬೆಟಿಕ್ ಗ್ಯಾಂಗ್ರೀನ್‍ನ ಕಾಲು ನೆನಪಾಗಿ ಅದರ ದುರ್ವಾಸನೆ ನೆನಪಾಗಿ ಹಸಿವು ಮಾಯವಾಯಿತು. ವೈದ್ಯರಿಗೆಲ್ಲಾ ಮಾಮೂಲಿ, ಯಾವ ಸಮಯದಲ್ಲಿ ಎಂತಹ ಪ್ರಶ್ನೆ ಬೇಕಾದರೂ ಕೇಳಬಹುದೆಂದೂ ಅದೂ ಮದುವೆಯಂತಹ ಸಂದರ್ಭದಲ್ಲಿ ಸಿಕ್ಕ ವೈದ್ಯರಿಗೆ ಬಿಟ್ಟಿ ಸಲಹೆಗೆ ಪ್ರಶ್ನೆಗಳ ಸುರಿಮಳೆ ಆರಂಭಿಸಿದ್ದರು ಪರಿಚಯದವರು. ಇತ್ತ ವೈದ್ಯ ದಂಪತಿಗಳು ಊಟದ ಸಮಯದಲ್ಲಿ ಊಟ ಮಾಡಲಾರದೆ, ಬರುತ್ತಿರುವ ಪ್ರಶ್ನೆಗಳನ್ನು ಉತ್ತರಿಸಲಾಗದೆ ಕಷ್ಟಪಡಲಾರಂಭಿಸಿದರು.

“ಈಗ ದಿನಾ ನಾನೆ ಡ್ರೆಸಿಂಗ್ ಮಾಡ್ತಿನಿ. ವಾಸನೆಗೆ ಮಾಸ್ಕ್ ಹಾಕಿಕೊಂಡು ಬೆಟಾಡಿನ್ ಹಾಕಿ ಕ್ಲೀನ್ ಮಾಡ್ತಿನಿ. ಗಲಿಜೆಲ್ಲ ಆಚೆ ಬರುತ್ತೆ ಪರ್ವಾಗಿಲ್ಲಾ ಸತೀಷ” ಎನ್ನುವಷ್ಟರಲ್ಲಿ. ಡಾ ಸತೀಷರವರ ಸಹನೆಯ ಕಟ್ಟೆಯೋಡೆದು ಹೋಗಿ
” ಅಣ್ಣಾ ದಿನಾ ಬೆಳಿಗೆ ರಾತ್ರಿ ಶುಗರ್ರು ಗ್ಯಾಂಗ್ರೀನು ನೋಡಿ ನೋಡಿ ಸಾಕಾಗಿದೆ. ನೆಮ್ಮದಿಯಾಗಿ ಮದುವೆಯಲ್ಲಿ ಮಡದಿ ನೆಂಟರಜೊತೆ ಕಾಯಿಲೆ ಕಸಾಲೆ ಹೊರತು ಪಡಿಸಿ ಬೇರೆ ಮಾತು ಹೇಳಿ ನಗೋಣ ಅಂದ್ರೆ ಊಟದ ಟೈಮಲ್ಲೆ ದುರ್ವಾಸ್ನೆ, ಗ್ಯಾಂಗ್ರೀನು ಕೀವು ಅಂತೀರಲ್ಲಣ್ಣಾ ನಾನೇನು ಮನುಷ್ಯಾನಾ ಪ್ರಾಣಿನಾ? ಇದೆ ಮಾತು ಊಟಾ ಮಾಡಿ ಎಲೆ ಅಡಿಕೆ ಹಾಕೋ ಟೈಮಲ್ಲಿ ಕೇಳ್ಬೋದಾಗಿತ್ತಲ್ವಾ?” ಎಂದು ತಮ್ಮ ಅಸಮಾಧಾನ ಹೊರಹಾಕಲು ಪರಿಚಯದ ಅಣ್ಣ
“ಅಯ್ಯೋ ನಿಮಗೆಲ್ಲಾ ಮಾಮೂಲಿ ಅಲ್ವಾ ಅಂತೇಳಿ ಕೇಳ್ದೆ ಅದಕ್ಕೆ ಬೇಜಾರು ಯಾಕೆ. ಊಟಾ ಮಾಡಿ ಇನ್ನೊಂದು ಸ್ವಲ್ಪ ಪಲಾವು ಗುಲಾಬ್ ಜಾಮೂನ್ ನಾನೆ ತಂದು ಕೊಡಲಾ?” ಎಂದು ಕೇಳಲು ಡಾ ಸತೀಷ ” ನಮಗೇನು ಬೇಕು ನಾವು ಹಾಕೊಂಡು ತಿಂತಿವಿ, ನೀವು ದಯಮಾಡಿ ನಮ್ಮನ್ನಾ ನೆಮ್ಮದಿಯಾಗಿ ಉಣ್ಣಲು ಬಿಟ್ರೆ ಸಾಕು” ಎನ್ನಲು
“ಏನೋ ನಮ್ಮ ದೂರದ ನೆಂಟರು ಅಂತ ಕಷ್ಟ ಹೇಳಕೊಂಡ್ರೆ ಇಷ್ಟ ಕೋಪಾನಾ?” ಎಂದು ಗೊಣಗುತ್ತ ಪರಿಚಯದ ಅಣ್ಣ ಹೊರಟು ಹೋದರು.

“ರೀ ಟೆನ್ಷನ್ ಮಾಡ್ಕೋ ಬೇಡಿ ಊಟಾ ಮಾಡಿ ” ಎಂದು ಡಾ ಗುಣಾ ಗಂಡನ ಸಮಾಧಾನಿಸುವ ಪ್ರಯತ್ನಕ್ಕಿಳಿದರು. ಅಷ್ಟರಲ್ಲಿ
” ಅಯ್ಯೋ ಗುಣಾ ಇಲ್ಲಿದಿಯಾ ಮಾರಾಯ್ತಿ? ಮಂಟಪಾ ಎಲ್ಲಾ ಹುಡುಕ್ದೆ ನೋಡು ” ಎನ್ನುತ್ತ ದೂರದ ಸಂಬಂಧಿ ಸೋದರಿಯೊಬ್ಬಳು ನಾಲ್ಕೈದು ಮಹಿಳೆಯರೊಂದಿಗೆ ಡಾ. ಗುಣರವರ ಮುಂದೆ ಬಂದು ನಿಂತುಕೊಂಡಾಗ
“ಓ ಅಕ್ಕಾ ಚೆನ್ನಾಗಿದ್ದೀರಾ?” ಎಂದು ಡಾ. ಗುಣಾ ಸ್ವಾಗತಿಸಿದರು.
“ಅಯ್ಯೋ ಸರಿಯಾದ ಟೈಮ್ಗೆ ಸಿಕ್ದೆ ನೋಡು. ಆಮೇಲೆ ನಾನು ಎರಡುಮೂರು ತಿಂಗಳಿಂದ ಸರಿಯಾಗಿ ಮುಟ್ಟೆ ಆಗಿಲ್ಲ, ಮನೆ ಹತ್ರ ತೋರ್ಸುದ್ರೆ ಪಿಸಿಓಡಿ ಸ್ಕ್ಯಾನಿಂಗು ಬ್ಲಡ್ ಟೆಸ್ಟು ಅಂದ್ರು. ನೀನೇಂಗಾದ್ರೂ ಮದುವೆಗೆ ಬಂದೇ ಬರ್ತಿಯಾ ಅಂತ ಗೋತ್ತಿತ್ತು ನೋಡು ಅದಕ್ಕೆ ಯಾವ ಟೆಸ್ಟು ಮಾಡಸಿಲ್ಲ. ನೀನೆ ಒಂದೆರಡು ಮಾತ್ರೆ ಬರ್ಕೊಡಮ್ಮ……. ಆ…. ಮೇಲೆ ಇವರು ನಮ್ಮ ಪಕ್ಕದ ಮನೆಯವರು ಇವರಿಗೆ ವಿಪರೀತಾ ವೈಟು” ಎಂದು ಒಂದೇ ಉಸಿರಿನಲ್ಲಿ ಹೇಳಿದರೆ ಡಾಗುಣಾರವರ ಕೈಯಲ್ಲಿದ್ದ ತಟ್ಟೆ ನಡುಗಲಾರಂಭಿಸಿತು. ಇವರ ಸಂವಾದ ಕೇಳಿಸಿಕೊಳ್ಳುತಿದ್ದ ಡಾ ಸತೀಷರತ್ತ ನೋಡಿದ ಅಪರಿಚಿತ ಮಹಿಳೆ

“ಸರ್ ಕೊಂಚ ಲೇಡೀಸ್ ಡಿಸ್ಕಶನ್ ಸ್ವಲ್ಪ ಆಕಡೆ ಹೋಗ್ತೀರಾ” ಎನ್ನಲು ಡಾ. ಸತೀಷ ತಮ್ಮ ತಟ್ಟೆಯನ್ನು ಮುಸುರೆ ಪಾತ್ರೆಗೆ ಹಾಕಿ
” ಗುಣಾ ಕಾರತ್ರ ಇರ್ತಿನಿ, ” ಎಂದು ಕಣ್ಣಲ್ಲೆ ಎನೋ ಸನ್ನೆ ಮಾಡಿ ಹೊರಟು ಬಿಟ್ಟರು. ಖುಷಿಯಲ್ಲಿದ್ದ ಡಾ. ಗುಣಾ ಸಂಪೂರ್ಣವಾಗಿ ಬೇಸರಗೊಂಡು ಮುಖದಲ್ಲಿ ಕಷ್ಟಪಟ್ಟು ನಗೆ ತರಿಸಿಕೊಳ್ಳುತ್ತ ಉಣ್ಣದೆ ಹೊರಟ ಗಂಡನ ನೋಡಿ ಬಾಧೆ ಪಡುತ್ತ ಗಂಭೀರ ಗುಪ್ತ ಕಾಯಿಲೆಯ ಮಹಿಳೆಯತ್ತ ನೋಡಲು, ದೂರದ ಅಕ್ಕನ ಪಕ್ಕದ ಮನೆಯ ಮಹಿಳೆ
“ಅಯ್ಯೋ ಡಾಕ್ಟರಮ್ಮಾ ನಂಗೆ ಒಂದಾರ್ತಿಂಗ್ಳಿಂದ ವಿಪರೀತ ವೈಟು. ಈಗಿಗ ಜಾಸ್ತಿ ಒಂದೋಂದು ಸಲ ಗಟ್ಟಿ ಮೊಸರಿನಂಗೆ ಬರುತ್ತೆ ನವೆ ವಾಸ್ನೆ ಬೇರೆ ” ಎನ್ನಲು ತಟ್ಟೆಯಲ್ಲಿದ್ದ ಮೊಸರನ್ನ ನೋಡಿಕೊಂಡ ಡಾ ಗುಣಾರಿಗೆ ವಾಂತಿಬಂದಂತಾಗಿ ಹಸಿವು ಪೂರ್ತಿಯಾಗಿ ಹೊರಟು ಹೋಯಿತು. “ಅಲ್ಲಮ್ಮಾ ನಾನು ಮದ್ವೆಗೆ ಬಂದಿದಿನಿ ಇದು ನನ್ನ ಓಪಿಡಿ ಅಲ್ಲ. ನನ್ನ ಊಟದ ಪರಿವೆ ಇಲ್ಲದೆ ನೀವುಗಳು ನನ್ನ ಮುಂದೆ ನನ್ನ ಗಂಡನ ಬೇರೆ ಕಡೆ ಕಳಿಸಿ. ಹಿಂದೆ ಮುಂದೆ ನೋಡದೆ ಮುಟ್ಟು, ಬಿಳುಪು, ಮೋಸರು ಮಜ್ಜಿಗೆ ಅಂತಿರಲ್ಲಾ?. ನಿಮಗೇನಾದ್ರೂ ಶಿಷ್ಟಾಚಾರ ಇದೆಯಾ ? ” ಎನ್ನುವಷ್ಟರಲ್ಲಿ ಇನ್ನೊಂದೆರಡು ಮಹಿಳೆಯರು ಸೇರಲು ಕೊಂಚ ಗಲಾಟೆಯುಂಟಾಗಿ ಮಹಿಳೆಯರು

“ಸಾರಿ ಗುಣಾ ಊಟಾ ಮಾಡು ನಿಧಾನಕ್ಕೆ ಡಿಸ್ಕಸ್ ಮಾಡೋಣಾ. ಇನ್ನು ಸ್ವಲ್ಪ ಮೊಸರನ್ನಾ ತರ್ಲಾ?. ನಿನೇಲ್ಲೋ ಹೋರಟ್ರ್ಹೋಗ್ತಯಾಂತಾ ಭಯಕ್ಕೆ ಹಿಂದೆ ಮುಂದೆ ನೋಡ್ದೆ ಹೇಳಬಿಟ್ಟೆ. ಅವರು ನಿಮ ಹಸ್ಬೇಂಡಾ? ಹೇಳ್ಲೆ ಇಲ್ಲಾ ನೋಡು ನೀನು, ತುಂಬಾ ಹ್ಯಾಂಡ್ಸಮ್ಮಾಗಿದಾರಮ್ಮಾ. ಇಂಟ್ರೋಡ್ಯುಸು ಮಾಡಿಲ್ಲಾ ನೀನು ಕಳ್ಳಿ” ಎನ್ನುವಷ್ಟರಲ್ಲಿ ಗುಣಾರವರ ಕೋಪ ಹೆಚ್ಚಾಗಿ
“ನನ್ನ ಪಕ್ಕ ಇನ್ಯಾರ ನಿಂತ್ಕೋತಾರೆ ಅಷ್ಟು ಕ್ಲೋಸಾಗಿ ನಿಮಗ್ ಜ್ಞಾನ ಇಲ್ಲವಾ? ಏನೇನೋ ಮಾತಾಡ್ತೀರಾ? ಯಾರೋ ಎಲ್ಲೋ ಇದ್ದೋರು ನಿಮ್ ಮುಖಗಳು ನಂಗೋತ್ತಿಲ್ಲ ನನ್ನ ಮುಂದೆ ನನ್ನ ಗಂಡನ್ನಾ ಬೇರೆಕಡೆ ಹೋಗು ಅಂತೇಳಿ ಅದರ ಮೇಲೆ ಎಲ್ಲಾ ಡ್ರಾಮಾ ಬೇರೆ. ಒಂಚೂರು ಕಾಮನ್ ಸೆನ್ಸೆ ಇಲ್ಲಾ” ಎನ್ನುತ್ತ ಗಂಡ ಬಿಟ್ಟು ಹೋದ ತಟ್ಟೆಯ ಮೇಲೆ ತನ್ನ ತಟ್ಟೆಯಿಟ್ಟು ಪಾರ್ಕಿಂಗ್ನತ್ತ ವೇಗವಾಗಿ ಡಾ. ಗುಣಾ ಹೊರಟರೆ ಯಾರಿಗೂ ತಡೆಯುವ ಧೈರ್ಯವೇ ಆಗಲಿಲ್ಲ. ಅದರಲ್ಲಿ ಯಾರೋ
“ನಮ್ಮ ರಿಲೆಟಿವ್ ಅಂತಾ ಒಂದ ಪ್ರಶ್ನೆ ಕೇಳಿದ್ದಕ್ಕೆ ಏನ ದರ್ಪಾ ನೋಡು. ನೂರು ಬಿಸಾಕದ್ರೆ ಎಂತಾ ಡಾಕ್ಟರೂ ಸಿಕ್ತಾರೆ ಬೆಂಗ್ಳೂರಲ್ಲಿ “ಎಂಬ ಮಾತು ಗುಣಾರ ಕಿವಿಗೆ ಬೀಳದಿರಲಿಲ್ಲ. ಗಂಡ ಕಾರನಲ್ಲಿ ಕುಳಿತು ಮಡದಿಗಾಗಿ ಕಾಯುತಿದ್ದರೆ ಮಡದಿಯ ಮುಖ ನೋಡಿ ಎಲ್ಲ ಅರ್ಥವಾದಂತೆ ಯಾವ ಮಾತಿಲ್ಲದೆ ಕಾರು ಚಲಾಯಿಸತೋಡಗಿದರು ಡಾ ಸತೀಷ.

” ಥೂ ಎನ್ ಜನಾನೋ ಏನೋ. ರೀ ಹೊಟ್ಟೆ ಚುರಗುಡ್ತಿದೆ. ಯಾವ್ದಾರಾ ರೆಸ್ಟೋರೆಂಟ್‍ಗೆ ಡ್ರೈವ್ ಮಾಡಿ ” ಎಂದು ಡಾ ಗುಣಾ ಹೇಳಲು.
“ಅಲ್ಲಾ ಕಣೆ ರೆಸ್ಟೋರೆಂಟಲ್ಲಿ ಯಾರಾದ್ರೂ ಪರಿಚಯದವ್ರು ಬಂದು ಗ್ಯಾಂಗ್ರೀನು ವೈಟು ಮುಟ್ಟು ಅಂದ್ರೆ?” ಎನ್ನಲು ಇಬ್ಬರೂ ಪರಸ್ಪರ ನೋಡಿಕೊಂಡು ಜೋರಾಗಿ ನಕ್ಕು
” ಹೌದು ರೀ ಅದು ಆಗಬಹುದು. ” ಎಂದು ಭಯದ ನಟನೆ ಮಾಡಿದರು ಡಾ ಗುಣಾ.
“ಹೆಂಗೂ ಟೈಮಿದೆ, ನೀನು ಸ್ವಿಗ್ಗಿಲಿ ಏನ್ ಬೇಕೋ ಅದು ಹೋಮ್ಡೆಲಿವರಿ ಆರ್ಡರ್ ಹಾಕು ಮನೆಗೆ ಬರೋವಷ್ಟರಲ್ಲಿ ನೈಸ್ ರೋಡ್ ಮೇಲೆ ಒಂದು ರೋಮಾಂಟಿಕ್ ಲಾಂಗ್ ಡ್ರೈವ್ ಮಾಡೋಣಾ?” ಎಂದು ಸತೀಷ್ ಹೇಳಲು.
“ಒಳ್ಳೆ ಐಡಿಯಾ. ಮೋಸರನ್ನ ಒಂದ ಬಿಟ್ಟು ಬೇರೆನಾದ್ರೂ ಅರ್ಡರ್ ಹಾಕ್ತಿನಿ “ಎಂದು ಡಾ ಗುಣಾ ಮೋಬೈಲ್ ನೋಡಲು
” ಮೋಸರನ್ನಾ ಯಾಕೆ ಬೇಡ..?” ಎಂದರು ಡಾ ಸತೀಷ
“ಅದರ ಕತೆ ಬೇಡ. ಈಗ ಗ್ಲಾಸ್ ಇಳ್ಸಿ ಜೋರಾಗಿ ಡ್ರೈವ್ ಮಾಡಿ”
ಎಂದು ಗಂಡನ ಹೆಗಲಿಗೆ ತಲೆ ವಾಲಿಸಿ ಕಣ್ಣು ಮುಚ್ಚಿದರು ಡಾ ಗುಣಾ…..

-ಅಬುಯಾಹ್ಯಾ

ಡಾ. ಸಲೀಮ ನದಾಫ
ಡಾ. ಸಲೀಮ ನದಾಫ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!