ಲುಂಪೆಕ್ಟೊಮಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ವಿಧಾನ

ಲುಂಪೆಕ್ಟೊಮಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ವಿಧಾನ .ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಮಹಾಮಾರಿಯಾಗಿದೆ. ಸ್ತನ ಕ್ಯಾನ್ಸರ್‍ಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಆಧ್ಯಯನ ಮತ್ತು ಪ್ರಯೋಗಗಳು ನಡೆಯುತ್ತಿವೆ.

ಸ್ತನದಿಂದ ಕ್ಯಾನ್ಷರ್ ಗೆಡ್ಡೆಗಳು ಅಥವಾ ಅಸಾಮಾನ್ಯ ಜೀವಕೋಶಗಳನ್ನು ತೆಗೆದು ಹಾಕಲು ಬಳಸುವ ಶಸ್ತ್ರಚಿಕಿತ್ಸಾ ವಿಧಾನವೇ ಲುಂಪೆಕ್ಟೊಮಿ. ಇದನ್ನು ಸ್ತನ ರಕ್ಷಕ ಅಥವಾ ಸ್ತನ ಉಳಿಸುವ ಸರ್ಜರಿ ಎಂದೂ ಕರೆಯಲಾಗುತ್ತದೆ. ಏಕೆಂದರೆ, ಈ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಸ್ತನದ ಒಂದು ಭಾಗವನ್ನು ಮಾತ್ರ ತೆಗೆದು ಹಾಕಲಾಗುತ್ತದೆ. ಆದರೆ, ಮಾಸೆಕ್ಪೊಮಿ ಸರ್ಜರಿಯಲ್ಲಿ ದೊಡ್ಡ ಪ್ರಮಾಣದ ಸರ್ಜರಿ ಮಾಡಲಾಗುತ್ತದೆ. ಆದರೆ, ಲುಂಪೆಕ್ಟೊಮಿ ಶಸ್ರ್ತಚಿಕಿತ್ಸೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕತ್ತರಿಸಲಾಗುತ್ತದೆ. ಈ ವಿಧಾನದ ಇನ್ನೊಂದು ಉಪಯೋಗವೆಂದರೆ, ಲುಂಪೆಕ್ಟೊಮಿ ಸರ್ಜರಿ ವೇಳೆ, ಸ್ತನದ ಗಂಟು ಅಥವಾ ಗೆಡ್ಡೆ ಸುತ್ತವಿರುವ ಸಾಮಾನ್ಯ ಜೀವಕೋಶದ ಸ್ವಲ್ಪ ಪ್ರಮಾಣವನ್ನು ಮತ್ರ ತೆಗೆದುಕೊಳ್ಳಲಾಗುತ್ತದೆ. ಇದು ಎಲ್ಲ ಕ್ಯಾನ್ಸರ್ ಅಥವಾ ಇತರ ಅಸಾಧಾರಣ ಜೀವಕೋಶಗಳನ್ನು ತೆಗೆದು ಹಾಕಲು ನೆರವಾಗುತ್ತದೆ.
ಲುಂಪೆಕ್ಟೊಮಿ ಕ್ಯಾನ್ಸರ್ ರೋಗ ಇರುವುದನ್ನು ಅಥವಾ ಇಲ್ಲದಿರುವುದನ್ನು ಖಾತ್ರಿ ಮಾಡಲು ನೆರವಾಗುತ್ತದೆ. ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವ ಕೆಲ ಮಹಿಳೆಯರಿಗೆ ಇದು ಮೊದಲ ಚಿಕಿತ್ಸಾ ಆಯ್ಕೆ. ಈ ಹಂತದಲ್ಲಿ ಕ್ಯಾನ್ಷರ್ ಪತ್ತೆಯಾದರೆ, ಅರ್ಬುದ ರೋಗ ಅಥವಾ ಏಡಿಗಂತಿ ಮತ್ತೆ ಮರುಕಳಿಸುವುದನ್ನು ತಗ್ಗಿಸಲು ಸಾಮಾನ್ಯವಾಗಿ ವಿಕಿರಣ ಚಿಕಿತ್ಸೆ (ರೇಡಿಯೇಷನ್ ಥೆರಪಿ) ಅನುಸರಿಸಲಾಗುತ್ತದೆ. ಎಲ್ಲಾ ರೀತಿಯ ಶಸ್ತ್ರಚಿಕಿತ್ಸಾ ವಿಧಾನದಂತೆ ಈ ವಿಧಾನದಲ್ಲೂ ಅಡ್ಡಪರಿಣಾಮಗಳು ಇವೆ. ಅವುಗಳೆಂದರೆ:

1. ರಕ್ತಸ್ರಾವ, ಸೋಂಕು, ನೋವು, ತಾತ್ಕಾಲಿಕ ಊತ

2. ಜೋಮು ಹಿಡಿಯುವಿಕೆ, ಸರ್ಜರಿ ನಡೆದ ಜಾಗದಲ್ಲಿ ದೃಢ ಜೀವಕೋಶ ಕಲೆ ರಚನೆ, ಗಂಟು ತೆಗೆದ ನಂತರ  ತೋಳಿನಲ್ಲಿ ಚಲನಶಕ್ತಿ ಇಲ್ಲದಿರುವಿಕೆ, ದೊಡ್ಡ ಪ್ರಮಾಣದ ಭಾಗವನ್ನು ಕತ್ತಿರಿಸಿದಾಗ ಸ್ತನದ ಆಕಾರ ಬದಲಾಗುವಿಕೆ.

ನೀವು ಹೇಗೆ ಸಿದ್ದರಾಗಬೇಕು ?

ಲುಂಪೆಕ್ಟೊಮಿ ಸರ್ಜರಿಗೆ  ಮುನ್ನ ಚಿಕಿತ್ಸಾ ವಿಧಾನ ಮತ್ತು ಅದರ ಸಾಧಕ-ಬಾಧಕಗಳನ್ನು ಅರ್ಥ ಮಾಡಿಕೊಳ್ಳಬೇಕು. ಶಸ್ತ್ರಚಿಕಿತ್ಸೆಗೆ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆ ಮತ್ತು ನಿಬಂಧನೆಗಳ ಬಗ್ಗೆ ಹಾಗೂ ನೀವು ತಿಳಿದುಕೊಳ್ಳಬೇಕಾದ ಇತರ ಸಂಗತಿಗಳ ಕುರಿತು ನಿಮಗೆ ಸೂಚನೆಗಳನ್ನು ನೀಡಲಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಸರ್ಜರಿಯನ್ನು ಹೊರರೋಗಿಗಳಿಗೆ ನೀಡಲಾಗುವ ಚಿಕಿತ್ಸಾ ವಿಧಾನದಂತೆ ನೀಡಲಾಗುತ್ತದೆ. ಹೀಗಾಗಿ ಶಸ್ತ್ರಚಿಕಿತ್ಸೆ ನಂತರ ಅದೇ ದಿನ ಮನೆಗೆ ಹಿಂದಿರುಗಬಹುದು.

1. ಸೇವಿಸುತ್ತಿರುವ ಯಾವುದೇ ಔಷಧಗಳು, ವಿಟಮಿನ್‍ಗಳು ಅಥವಾ ಸಪ್ಲಿಮೆಂಟ್‍ಗಳ ಬಗ್ಗೆ  ವೈದ್ಯರಿಗೆ ತಿಳಿಸಿ.

2. ಆಸ್ಪಿರಿನ್ ಅಥವಾ ರಕ್ತ ತೆಳುಗೊಳಿಸುವ ಇತರ ಔಷಧಗಳ ಸೇವನೆ ನಿಲ್ಲಿಸಿ. ರಕ್ತಸ್ರಾವ ತಡೆಗಟ್ಟಲು ಸರ್ಜರಿಗೆ ಮುನ್ನ ಒಂದು ವಾರ ಅಥವಾ ದೀರ್ಘ ಕಾಲ ಅವುಗಳನ್ನು ಸೇವಿಸದಂತೆ ವೈದ್ಯರು ಸೂಚನೆ ನೀಡುತ್ತಾರೆ.

3. ಚಿಕಿತ್ಸೆಗೆ ಒಳಪಡುವ ಮುನ್ನ ಇದು ಪಾಲಿಸಿ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವಿಮಾ ಕಂಪನಿ ಜೊತೆ ಪರಿಶೀಲಿಸಿ ಮತ್ತು ನಿರ್ಬಂಧಗಳಿದ್ದರೆ ಯಾವಾಗ ಸರ್ಜರಿಗೆ ಒಳಗಾಗಬಹುದು ಎಂಬುದನ್ನು ತಿಳಿದುಕೊಳ್ಳಿ.

4. ನಿರ್ದಿಷ್ಟವಾಗಿ ಸಾಮಾನ್ಯ ಅನಸ್ತೇಷಿಯಾಗೆ ಒಳಪಡುವವರಿದ್ದರೆ, ಸರ್ಜರಿಗೆ ಮುನ್ನ ಎಂಟರಿಂದ ಹತ್ತು ಗಂಟೆಗಳ ಕಾಲ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ.

5. ಚಿಕಿತ್ಸೆ ಸಂದರ್ಭದಲ್ಲಿ ನಿಮ್ಮೊಂದಿಗೆ ಯಾರನ್ನಾದರೂ ಕರೆ ತನ್ನಿ. ಇವರು  ನೆರವು ನೀಡುವ ಜೊತೆಗೆ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ಕರೆದ್ಯೊಯಲು ಮತ್ತು ಸರ್ಜರಿ ನಂತರದ ಸೂಚನೆಗಳನ್ಣು ಆಲಿಸಲು ಸಹಾಯವಾಗುತ್ತದೆ. ಏಕೆಂದರೆ, ಅನಸ್ತೇಷಿಯಾ ಪರಿಣಾಮವು ಕೆಲ ಗಂಟೆಗಳ ಕಾಲ ಇರುವುದರಿಂದ ರೋಗಿಗೆ ನೆರವಾಗಲು ಸಹಾಯಕರು ಬೇಕು.

ತೆಗೆದು ಹಾಕಬೇಕಾದ ಜಾಗವನ್ನು ಪತ್ತೆ ಮಾಡುವಿಕೆ:

ಸ್ತನದಲ್ಲಿನ ಅಸಾಧಾರಣ ಜಾಗವನ್ನು ಪತ್ತೆ ಮಾಡುವ ಮೂಲಕ ಲುಂಪೆಕ್ಟೊಮಿ ಚಿಕಿತ್ಸಾ ವಿಧಾನ ಆರಂಭವಾಗುತ್ತದೆ. ಮ್ಯಾಮೋಗ್ರಾಮ್ ಮುಖಾಂತರ ಸ್ತನದಲ್ಲಿನ ಅಸಾಮಾನ್ಯತೆ ಪತ್ತೆಯಾಗಿ ಬಯಾಪ್ಸಿಯಿಂದ ಅದು ದೃಢಪಟ್ಟರೆ, ರೇಡಿಯೊಲಾಜಿಸ್ಟ್ ಬಯಾಪ್ಸಿ ವೇಳೆ ಸ್ತನದಲ್ಲಿ ಪುಟ್ಟ ಗುರುತು ಅಥವಾ ಕ್ಲಿಪ್ ಇಡುತ್ತಾರೆ. ಇಂತಹ ಪ್ರಕರಣದಲ್ಲಿ ತೆಳುವಾದ ತಂತಿಯನ್ನು ಸ್ತನಕ್ಕೆ ಸೇರಿಸಿ ಅದನ್ನು ಗುರುತು ಅಥವಾ ಕ್ಲಿಪ್ ಬಳಿ ಹಾಯಿಸಲಾಗುತ್ತದೆ. ಸರ್ಜನ್ ತಂತಿಯನ್ನು ಸರ್ಜರಿ ವೇಳೆ ತೆಗೆಯಬೇಕಾದ ಸೂಕ್ಷ್ಮ ಜಾಗಕ್ಕೆ ಮಾರ್ಗದರ್ಶಿಯಾಗಿ ಬಳಸಿಕೊಳ್ಳಬಹುದು. ಸ್ತನದಲ್ಲಿ ಗಂಟು ಅಥವಾ ಗೆಡ್ಡೆ ಇದ್ದರೆ, ಚರ್ಮದ ಮೂಲಕ ಅದು ಸುಲಭವಾಗಿ ಅನುಭವಕ್ಕೆ ಬರುತ್ತದೆ. ಸ್ತನದ ಮೇಲಿರುವ ಅಸಾಧಾರಣ ಪ್ರದೇಶವನ್ನು ಸರ್ಜನ್ ಸುಲಭವಾಗಿ ಪತ್ತೆ ಹಚ್ಚುವುದರಿಂದ ತಂತಿಯ ವಿಧಾನದ ಅಗತ್ಯ ಇರುವುದಿಲ್ಲ.

ಗಂಟು-ಗೆಡ್ಡೆ ತೆಗೆಯಲು ಸಿದ್ದತೆ:

ಸ್ತನದಿಂದ ಆಚೆಗೆ ಕ್ಯಾನ್ಸರ್ ಏನಾದರೂ ವ್ಯಾಪಿಸಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಸರ್ಜರಿ ವೇಳೆ ಗಂಟಿನ ಮೂಲವನ್ನು ತೆಗೆದು ಹಾಕಲಾಗುತ್ತದೆ. ಈ ವಿಧಾನವನ್ನು ಅಕ್ಸಿಲ್ಲರಿ ನೋಡ್ ಡಿಸ್ಸೆಕ್ಷನ್ ಎಂದು ಕರೆಯಲಾಗುತ್ತದೆ. ಗೆಡ್ಡೆ ಅಥವಾ ಗಂಟು ಇದ್ದರೆ, ನಿಮ್ಮ ಕಂಕುಳಿನ ಅದರ ಪಾಶ್ರ್ವದಿಂದ ಅನೇಕ ಗಂಟುಗಳನ್ನು ಸರ್ಜನ್ ತೆಗೆದು ಹಾಕುತ್ತಾರೆ. ಇನ್ನೊಂದು ವಿಧಾನವಿದೆ. ಇದಕ್ಕೆ ಸೆಂಟಿನೆಲ್ ಲಂಪ್ ನೋಡ್ ಬಯಾಪ್ಸಿ ಎನ್ನುತ್ತಾರೆ. ಈ ವಿಧಾನದಲ್ಲಿ ಸರ್ಜನ್ ಮೊದಲ ಒಂದು ಅಥವಾ ಎರಡು ಗಂಟಗಳನ್ನು ಮಾತ್ರ ತೆಗೆದು ಹಾಕುತ್ತಾರೆ. ಬಳಿಕ ಇದನ್ನು ಕ್ಯಾನ್ಸರ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಕ್ಯಾನ್ಸರ್ ಪತ್ತೆಯಾಗದಿದ್ದಲ್ಲಿ, ಮತ್ತೆ ಇನ್ನಷ್ಟು ಗಂಟುಗಲನ್ನು ತೆಗೆಯಬೇಕಾದ ಅವಶ್ಯಕತೆ ಕಂಡು ಬರುವುದಿಲ್ಲ. ಕ್ಯಾನ್ಸರ್ ಪತ್ತೆಯಾದಲ್ಲಿ ಸರ್ಜನ್ ಇನ್ನಷ್ಟು ಗಂಟುಗಳನ್ನು ತೆಗೆಯುತ್ತಾರೆ. ಸೆಂಟಿನೆಲ್ ನೋಡ್ ಬಯಾಪ್ಸಿಗೆ ಒಳಗಾಗಿದ್ದರೆ, ಶಸ್ತ್ರಚಿಕಿತ್ಸೆಗೂ ಮುನ್ನ ಗೆಡ್ಡೆಯ ಸುತ್ತ ಅಥವಾ ಗೆಡ್ಡೆಯ ಮೇಲಿನ ಚರ್ಮದ ಜಾಗದಲ್ಲಿ ರೇಡಿಯೋ ವಿಕಿರಣ ವಸ್ತು ಅಥವಾ ಬ್ಲೂ ಡೈ ಅಥವಾ ಎರಡನ್ನು ಸೇರಿಸಲಾಗುತ್ತದೆ. ಡೈ ಸೆಂಟಿನೆಲ್ ಗಂಟು ಅಥವಾ ಗಂಟುಗಳತ್ತ ಸಾಗುತ್ತದೆ. ಇದು ಸರಿಯದ ಜಾಗವನ್ನು ಪತ್ತೆ ಮಾಡಲು ಮತ್ತು ಸರ್ಜರಿ ವೇಳೆ ಅದನ್ನು ತೆಗೆದು ಹಾಕಲು ವೈದ್ಯರಿಗೆ ನೆರವಾಗುತ್ತದೆ.

ಚಿಕಿತ್ಸಾ ವಿಧಾನದ ವೇಳೆ:

ಲುಂಪೆಕ್ಟೊಮಿ ಚಿಕಿತ್ಸೆಯನ್ನು ಅನಸ್ತೇಶಿಯಾ ನೀಡಿ ನಡೆಸಲಾಗುತ್ತದೆ. ಚಿಕಿತ್ಸೆ ನಡೆಯುವ ವೇಳೆ ಅದರ ನೋವು ರೋಗಿಯ ಅರಿವಿಗೆ ಬರುವುದಿಲ್ಲ. ವೈದ್ಯರು ಗೆಡ್ಡೆಯ ಮೇಲೆ ಅಥವಾ ತಂತಿ ಒಳಗೊಂಡ ಪ್ರದೇಶದಲ್ಲಿ ಚಿಕ್ಕ ರಂಧ್ರ ಮಾಡಿ ಗೆಡ್ಡೆ ಮತ್ತು ಅದರ ಸುತ್ತವಿರುವ ಜೀವಕೋಶಗಳನ್ನು ತೆಗೆದು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ನಂತರ ಸರ್ಜನ್ ಸ್ತನದ ಆಕಾರವನ್ನು ಉಳಿಸಲು ಹೊಲಿಗೆಗಳಿಂದ ರಂಧ್ರವನ್ನು ಮುಚ್ಚುತ್ತಾರೆ. ಈ ಹೊಲಿಗೆ ತಾನಾಗಿಯೇ ಕಾಣೆಯಾಗುತ್ತದೆ ಅಥವಾ ವೈದ್ಯರು ಹೊಲಿಗೆಗಳನ್ನು ಬಳಿಕ ತೆಗೆಯುತ್ತಾರೆ.

ಚಿಕಿತ್ಸಾ ವಿಧಾನದ ನಂತರ:

ಶಸ್ತ್ರಚಿಕಿತ್ಸೆ ನಂತರ  ರಿಕವರಿ ರೂಮ್‍ಗೆ ಕೊಂಡ್ಯೊಯಲಾಗುತ್ತದೆ. ಈ ಅವಧಿಯಲ್ಲಿ  ರಕ್ತದೊತ್ತಡ, ನಾಡಿ ಬಡಿತ ಮತ್ತು ಉಸಿರಾಟದ ಮೇಲೆ ನಿಗಾ ವಹಿಸಲಾಗುತ್ತದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ – ಸಾಮಾನ್ಯವಾಗಿ ಲುಂಪೆಕ್ಟೊಮಿ ಮತ್ತು ಸೆಂಟಿನೆಲ್ ನೋಡ್ ಬಯಾಪ್ಸಿ ವಿಧಾನದಲ್ಲಿ  ಸ್ಥಿರವಾಗಿದ್ದರೆ, ಅದೇ ದಿನ ಮನೆಗೆ ಕಳುಸಹಿಸಲಾಗುತ್ತದೆ. ಅಕ್ಸಿಲ್ಲರಿ ನೋಡ್ ಬಯಾಪ್ಸಿ ವಿಧಾನಕ್ಕೆ ಒಳಪಟ್ಟಿದ್ದರೆ, ಒಂದೆರಡು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ವೈದ್ಯಕೀಯ ಸಿಬ್ಬಂದಿ  ಆರೋಗ್ಯ ಸ್ಥಿತಿ ಬಗ್ಗೆ ನಿಗಾ ಇಡುತ್ತಾರೆ.

ಚಿಕಿತ್ಸೆ ನಂತರ ಗಮನಿಸಬೇಕಾದ ಸಂಗತಿ:

1. ಶಸ್ತ್ರಚಿಕಿತ್ಸೆ ನಡೆದ ಜಾಗದಲ್ಲಿ ಡ್ರೆಸಿಂಗ್ (ಬ್ಯಾಂಡೇಜ್ ಹಾಕುವಿಕೆ)

2.  ಕಂಕುಳ ಜಾಗದಲ್ಲಿ ಸ್ವಲ್ಪ ನೋವು, ಊತ ಮತ್ತು ಚಿವುಟಿದ ಅನುಭವ

3. ಛೇದನ ಮತ್ತು ಡ್ರೆಸಿಂಗ್ ಬಗ್ಗೆ ಆರೈಕೆ ಒಳಗೊಂಡಂತೆ ಶಸ್ತ್ರಚಿಕಿತ್ಸೆ ನಂತರದ ಕಾಳಜಿ ಬಗ್ಗೆ ಲಿಖಿತ ಸೂಚನೆಗಳು. ಸೋಂಕು ಲಕ್ಷಣಗಳನ್ನು ಗುರುತಿಸುವಿಕೆ.

4. ನೋವು ನಿವಾರಕ ಔಷಧಗಳು, ಆಂಟಿಬಯೋಟಿಕ್‍ಗಳ ಬಳಕೆಗೆ ಸಲಹೆ

5. ಕೆಲವು ಚಟುವಟಿಕೆಗಳಿಗೆ ನಿರ್ಬಂಧ

6.ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ನಂತರ ಏಳರಿಂದ ಹದಿನಾಲ್ಕು ದಿನಗಳಲ್ಲಿ  ವೈದ್ಯರ ಜೊತೆ ಫಾಲೊ-ಅಪ್ ಅಪಾಯಿಂಟ್‍ಮೆಂಟ್.

ಫಲಿತಾಂಶಗಳು:

1. ರೋಗನಿರ್ಣಯ ವರದಿಯ ಫಲಿತಾಂಶ ಒಂದೆರಡು ವಾರದಲ್ಲಿ ಲಭಿಸಬೇಕು. ಸರ್ಜರಿ ನಂತರ ವೈದ್ಯರ ಜೊತೆ ಫಾಲೊ-ಅಪ್ ಅಪಾಯಿಂಟ್‍ಮೆಂಟ್‍ಗಾಗಿ ಭೇಟಿ ನೀಡಿದಾಗ ವರದಿ ಬಗ್ಗೆ ವಿವರಿಸಲಾಗುತ್ತದೆ.  ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ  ವೈದ್ಯರು ಶಿಫಾರಸು ಮಾಡುತ್ತಾರೆ.

2.  ಗೆಡ್ಡೆಯ ಸುತ್ತವಿರುವ ಅಂಚುಗಳು ಕ್ಯಾನ್ಸರ್-ಮುಕ್ತವಾಗಿರದಿದ್ದರೆ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

3. ಆಪರೇಷನ್ ನಂತರ ಚಿಕಿತ್ಸೆಯ ಇತರೆ ವಿಧಾನಗಳ ಬಗ್ಗೆ ಕ್ಯಾನ್ಸರ್ ರೋಗ ತಜ್ಞರು ಚರ್ಚಿಸುತ್ತಾರೆ. ಹಾರ್ಮೋನ್‍ಗೆ ಕ್ಯಾನ್ಸರ್ ಸಂವೇದನೆಯಾಗಿದ್ದರೆ ಹಾರ್ಮೋನು ಆಥವಾ ಕೆಮೋಥೆರಪಿ ಅಥವಾ ಎರಡನ್ನು ಚಿಕಿತ್ಸಾ ರೂಪದಲ್ಲಿ ನೀಡಲಾಗುತ್ತದೆ.

4. ರೇಡಿಯೇಷನ್ ಚಿಕಿತ್ಸೆ ಬಗ್ಗೆ ರೇಡಿಯೇಷನ್ ಆಂಕೊಲಾಜಿಸ್ಟ್ ಚರ್ಚಿಸುತ್ತಾರೆ. ಲುಂಪೆಕ್ಟೊಮಿ ನಂತರ ಇದನ್ನು ಸಾಮಾನ್ಯವಾಗಿ ಶಿಫಾರಸ್ಸು ಮಾಡಲಾಗುತ್ತದೆ.

5. ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಆಪ್ತ ಸಮಾಲೋಚಕರು ಅಥವಾ ಆಧಾರ ಸಮೂಹ ನೆರವಾಗುತ್ತವೆ.

ಇದನ್ನು ಏಕೆ ಮಾಡುತ್ತಾರೆ ?

 ಸ್ತನದ ಆಕಾರವನ್ನು ಉಳಿಸುವ ಜೊತೆಗೆ ಕ್ಯಾನ್ಸರ್ ಅಥವಾ ಇತರೆ ಅಸಾಧಾರಣ ಜೀವಕೋಶಗಳನ್ನು ತೆಗೆದು ಹಾಕುವುದು ಲುಂಪೆಕ್ಟೊಮಿ ಉದ್ದೇಶ.ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರಿಗೆ ಲುಂಪೆಕ್ಟೊಮಿ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನವೆಂದು ಅಧ್ಯಯನಗಳಿಂದ ದೃಢಪಟ್ಟಿದೆ. ಇನ್ನೊಂದು ವಿಧಾನವಾದ ಮಾಸೆಕ್ಟೊಮಿಯಲ್ಲಿ ಇಡೀ ಸ್ತನವನ್ನೇ ತೆಗೆದು ಹಾಕಬೇಕಿರುವುದರಿಂದ ಲುಂಪೆಕ್ಟೊಮಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಿದೆ. ಬಯಾಪ್ಸಿಯಿಂದ  ಕ್ಯಾನ್ಸರ್ ಇರುವುದು ಪತ್ತೆಯಾದರೆ ಹಾಗೂ ಕ್ಯಾನ್ಸರ್ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡು ಆರಂಭಿಕ ಹಂತದಲ್ಲಿದ್ದರೆ ನಿಮ್ಮ ವೈದ್ಯರು ಲುಂಪೆಕ್ಟೊಮಿಗೆ ಶಿಫಾರಸು ಮಾಡುತ್ತಾರೆ. ಕ್ಯಾನ್ಸರ್‍ಕಾರಕವಲ್ಲದ ಮತ್ತು ಪೂರ್ವ ಕ್ಯಾನ್ಸರ್ ಲಕ್ಷಣವಿರುವ ಸ್ತನದ ಅಸಾಧಾರಣತೆಗಳನ್ನು ತೆಗೆದು ಹಾಕಲು ಲುಂಪೆಕ್ಟೊಮಿಯನ್ನು ಬಳಸಬಹುದು.

ಈ ಕೆಳಕಂಡ ಅಂಶಗಳು ನಿಮ್ಮಲ್ಲಿದ್ದರೆ ನೀವು ಸ್ತನ ಕ್ಯಾನ್ಸರ್‍ಗೆ ಲುಂಪೆಕ್ಟೊಮಿ ಶಸ್ತ್ರಚಿಕಿತ್ಸೆಗೆ ಅಭ್ಯರ್ಥಿ ಅಲ್ಲದಿರಬಹುದು :

1. ಚರ್ಮ ಮತ್ತು ಇತರೆ ಜೀವಕೋಶಗಳನ್ನು ಜಡಗೊಳಿಸುವ ರೋಗಗಳ ಸಮೂಹವಾದ ಸ್ಕ್ಲೇರೋಡೆರ್ಮಾ ಎಂಬ ಚರ್ಮ ಕಾಯಿಲೆಯ ಹಿನ್ನೆಲೆ ಇದ್ದರೆ.

2. ದೀರ್ಘ ಕಾಲದ ಉರಿಯೂತ ರೋಗವಾದ ಸಿಸ್ಟೆಮಿಕ್ ಲುಪಸ್ ಎರಿಥೆಮತೊಸಸ್ ಕಾಯಿಲೆಯ ಹಿನ್ನೆಲೆ ಹೊಂದಿದ್ದರೆ

3. ಸ್ತನದ ವಿವಿಧ ಜಾಗಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗೆಡ್ಡೆಗಳಿದ್ದರೆ

4. ಸ್ತನ ಪ್ರದೇಶದಲ್ಲಿ ಈ ಹಿಂದೆ ರೇಡಿಯೇಷನ್ ಚಿಕಿತ್ಸೆಗೆ ಒಳಗಾಗಿದ್ದರೆ

5. ಸ್ತನದಾದ್ಯಂತ ಕ್ಯಾನ್ಸರ್ ವ್ಯಾಪಿಸಿದ್ದರೆ ಪುಟ್ಟ ಸ್ತನಗಳು ಮತ್ತು ದೊಡ್ಡ ಗೆಡ್ಡೆ ಇದ್ದರೆ. ಇದು ದುರ್ಬಲ ಸೌಂದರ್ಯ ಚಿಕಿತ್ಸೆಯ ಫಲಿತಾಂಶಕ್ಕೆ ಕಾರಣವಾಗುತ್ತದೆ.

6.ವಿಕಿರಣ ಚಿಕಿತ್ಸೆಗೆ (ರೇಡಿಯೋ ಥೆರಪಿ) ಒಳಗಾಗದಿದ್ದರೆ

ಡಾ.ರಮೇಶ್ ರೆಡ್ಡಿ ಜಿ. ಪ್ರೊಫೆಸರ್, ಡಿಪಾರ್ಟ್‍ಮೆಂಟ್ ಆಫ್ ಸರ್ಜರಿ, ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್ ವೈಟ್‍ಫೀಲ್ಡ್, ಬೆಂಗಳೂರು-66

ಡಾ.ರಮೇಶ್ ರೆಡ್ಡಿ ಜಿ.
ಪ್ರೊಫೆಸರ್, ಡಿಪಾರ್ಟ್‍ಮೆಂಟ್ ಆಫ್ ಸರ್ಜರಿ,
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್ ವೈಟ್‍ಫೀಲ್ಡ್, ಬೆಂಗಳೂರು-66
ಫೋನ್ : 080-284113381/2/3/4
http://www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!