ಮಾನವನನ್ನು ಕಾಡಿಸುವ ಪ್ರಮುಖ ಕಾಯಿಲೆಗಳಲ್ಲಿ ಕುಷ್ಠರೋಗವೂ ಒಂದು. ಇದು ಅತ್ಯಂತ ಪುರಾತನ ಕಾಯಿಲೆ. ಕ್ರಿ. ಪೂ. 800ರಷ್ಟು ಹಿಂದಿನ ವೈದ್ಯಕೀಯ ಗ್ರಂಥವಾದ “ಚರಕ ಸಂಹಿತೆ”ಯಲ್ಲಿ ಕುಷ್ಠರೋಗದ ಬಗೆಗೆ ವಿವರಗಳು ಸಿಗುತ್ತವೆ. ಆದರೆ ಇಂದಿನ ದಿನಗಳಲ್ಲಿನ ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರಗಳು, ಕುಷ್ಠರೋಗದ ನಿವಾರಣೆಗೆ ಕಂಡುಹಿಡಿದಿರುವ ಔಷಧೋಪಾಯಗಳು ರೋಗದ ಪ್ರಮಾಣವನ್ನು ಇಳಿಮುಖವಾಗಿಸಿವೆ. ಕುಷ್ಠರೋಗವು ಲೆಪ್ರೆಸಿ ಎಂಬ ರೋಗಾಣುವಿನಿಂದ ಬರುವ ಕಾಯಿಲೆ. ಇದನ್ನು ಲೆಪ್ರೋಸಿ ಅಥವಾ ಹ್ಯಾನ್‍ಸೆನ್ ಕಾಯಿಲೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ನಾರ್ವೆಯ ವೈದ್ಯ ಹ್ಯಾನ್ಸನ್ ಎಂಬಾತ 1873 ರಲ್ಲಿ ಕುಷ್ಠರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕಂಡು ಹಿಡಿದನು. ಕುಷ್ಠರೋಗಕ್ಕೆ ಹ್ಯಾನ್ಸನ್‍ನ ಹೆಸರನ್ನೇ ಇಡಲಾಗಿದ್ದರೂ ಕುಷ್ಠ ಎಂಬ ಹೆಸರು ಇಂದಿಗೂ ಮರೆಯಾಗಿಲ್ಲ. ಕುಷ್ಠರೋಗವು ಮುಖ್ಯವಾಗಿ ಚರ್ಮ, ನರ ಮತ್ತು ಶ್ವಾಸನಾಳದ ಮೇಲೆ ಪ್ರಭಾವ ಬೀರುವ ಕಾಯಿಲೆಯಾಗಿದೆ. ಕುಷ್ಠರೋಗವು ರೋಗಿಯ ನಿಕಟ ಸಂಪರ್ಕದಿಂದ ಹರಡುತ್ತದೆ. ದೇಹದ ಮೇಲೆ ಅಲ್ಲಲ್ಲಿ ಅಂದರೆ ಮುಖ, ಪೃಷ್ಠ, ಬೆನ್ನು ಮುಂತಾದ ಭಾಗಗಳಲ್ಲಿ ಸ್ಪರ್ಶಜ್ಞಾನವಿಲ್ಲದ ಮೃದುವಾಗಿರುವ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನೇ ಕುಷ್ಠರೋಗ ಎನ್ನಲಾಗುವುದು. ಇದು ಪ್ರಾರಂಭಿಕ ಹಂತವಾದರೂ ಮುಂದೆ ಇದೇ ಅಂಗವೈಕಲ್ಯತೆಯಂತೆ ಭೀಕರ ಸ್ವರೂಪಕ್ಕೂ ಗುರಿಯಾಗುತ್ತದೆ.
ಕುಷ್ಠರೋಗಕ್ಕೆ ಕಾರಣಗಳು:
ಕುಷ್ಠ ರೋಗವು ‘ಲೆಪ್ರೊಸಿ ಬ್ಯಾಸಲಿ’ ಅಥವಾ ‘ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆಸ್’ (Mycorobacterium Leprac) ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ನೈರ್ಮಲ್ಯದ ಅಭಾವವೇ ಕುಷ್ಠರೋಗ ಪ್ರಾಪ್ತಿಗೆ ಕಾರಣ ಎನ್ನಲಾಗುವುದು. ಆದ್ದರಿಂದ ಸಾಮಾನ್ಯವಾಗಿ ಇದು ಕೆಳವರ್ಗದ ಜನರಲ್ಲಿ ಹೆಚ್ಚಾಗಿ ಕಂಡುಬರುವುದು. ರೋಗಿಯ ನಿಕಟ ಸಂಪರ್ಕದಿಂದಲೂ ಕಾಯಿಲೆ ಹರಡಬಹುದು. ಇದು ಕ್ಷಯ ರೋಗದಂತೆಯೇ ಹಬ್ಬುವ ಕಾಯಿಲೆ. ಸಾಮಾನ್ಯವಾಗಿ ಚಿಕಿತ್ಸೆ ಪಡೆಯದೆ ಸಮುದಾಯದಲ್ಲಿರುವ ರೋಗಿಗಳು ಕೆಮ್ಮಿದಾಗ ಮತ್ತು ಸೀನಿದಾಗ ಕುಷ್ಠರೋಗಾಣುಗಳು ಶರೀರದಿಂದ ಹೊರಬಂದು ಇತರರಿಗೂ ರೋಗ ಹರಡಲು ಕಾರಣವಾಗುತ್ತದೆ.
ಕುಷ್ಠರೋಗದ ಲಕ್ಷಣಗಳು:
ಚರ್ಮದ ಮೇಲೆ ಮೂಡುವ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಇಲ್ಲವೆ ತಾಮ್ರದ ವರ್ಣದ ಕಲೆಗಳು ಕುಷ್ಠರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. ಆದರೆ ಈ ಕಲೆಗಳಲ್ಲಿ ನೋವು, ಕಡಿತ ಇರುವುದಿಲ್ಲ. ಮುಖ್ಯವಾಗಿ ಈ ಕಲೆಗಳಲ್ಲಿ ಸ್ಪರ್ಶ, ಸಂವೇದನೆಯ ಅರಿವೇ ಇಲ್ಲದಿರುವುದರಿಂದ ಶಾಖ, ಸ್ಪರ್ಶ, ನೋವುಗಳು ಗೊತ್ತಾಗುವುದಿಲ್ಲ. ಕಲೆಗಳು ಮೂಡಿದ ಚರ್ಮದ ಭಾಗದಲ್ಲಿ ಕೂದಲುಗಳು ಉದುರುತ್ತವೆ. ಅಲ್ಲಿ ಬೆವರೂ ಸಹ ಇರುವುದಿಲ್ಲ. ದೇಹದ ಮೇಲೆ ಮಚ್ಚೆಗಳು ಒಂದರಿಂದ ಅನೇಕ ಇರುತ್ತವೆ. ಸಾಮಾನ್ಯವಾಗಿ ಕಾಲು, ಬೆನ್ನು, ಪುಷ್ಠ, ಮುಖ ಇಲ್ಲಿ ಮಚ್ಚೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು.
ಇವು ಯಾವುದೂ ಕುಷ್ಠರೋಗದ ಲಕ್ಷಣವಲ್ಲ:ಹುಟ್ಟಿನಿಂದಲೇ ಇರುವ ತ್ವಚೆಯ ಮಚ್ಚೆಗಳು, ತುರಿಕೆ ಆಗುತ್ತಿರುವ, ಸ್ಪರ್ಶಜ್ಞಾನ ಇರುವ ಮಚ್ಚೆಗಳು, ಪೂರ್ತಿ ಬಿಳಿ, ಕಪ್ಪು ಅಥವಾ ದಟ್ಟ ಕೆಂಪು ಬಣ್ಣವಿರುವ ಮಚ್ಚೆಗಳು, ತಕ್ಷಣ ಕಾಣಿಸಿಕೊಂಡು ಮರೆಯಾಗುವ ಅಥವಾ ತೀವ್ರವಾಗಿ ಹರಡುವ ಮಚ್ಚೆಗಳು ಕುಷ್ಠರೋಗದ ಲಕ್ಷಣವಲ್ಲ.
ಕುಷ್ಠರೋಗದ ನಮೂನೆಗಳು:
ಕುಷ್ಠರೋಗದಲ್ಲಿ ಸೋಂಕು ಹರಡುವ ಮತ್ತು ಹರಡದಿರುವ ಎರಡು ನಮೂನೆಗಳು.
- ಲೆಪ್ರೋಮಾಟಸ್ ರೋಗ: ಸೋಂಕು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ನಮೂನೆಯ ಕುಷ್ಠರೋಗದಲ್ಲಿ ಆರಂಭಿಕವಾಗಿ ಚರ್ಮದ ಬಣ್ಣ ಮತ್ತು ರಚನೆಯಲ್ಲಿ ಸ್ವಲ್ಪ ಬದಲಾವಣೆ ಕಾಣಬರುತ್ತದೆ. ಕಪ್ಪು ಚರ್ಮ ಹೊಂದಿರುವ ವ್ಯಕ್ತಿಗಳಲ್ಲಿ ಸುಮಾರು 2 ವರ್ಷದವರೆಗೆ ಗುರುತಿಸಲ್ಪಡದೆ ಉಳಿದುಕೊಳ್ಳಬಹುದು. ಈ ಪ್ರಕರಣಗಳು ಈ ಹಂತದಲ್ಲಿಯೂ ಸೋಂಕು ಹರಡಬಲ್ಲವು.
- ನಾನ್ ಲೆಪ್ರೋಮಾಟಸ್ ರೋಗ: ಸೋಂಕು ಒಬ್ಬರಿಂದೊಬ್ಬರಿಗೆ ಹರಡುವುದಿಲ್ಲ.ಈ ನಮೂನೆಯಲ್ಲಿ ಆರಂಭದ ಚಿಹ್ನೆಗಳೆಂದರೆ, ಒಂದು ಅಥವಾ ಎರಡು ಕಲೆಗಳು ಚರ್ಮದ ಮೇಲೆ ಪ್ರಕಟವಾಗುವುದು. ಅಥವಾ ಚರ್ಮದ ಮೇಲೆ ಕಲೆಗಳಿಲ್ಲದಿದ್ದರೂ ಶರೀರದ ಕೆಲ ಭಾಗಗಳಲ್ಲಿ ಸಂವೇದನೆ ನಾಶವಾಗಿರುತ್ತದೆ. ಆದರೆ, ಈ ಎರಡು ವಿಧದಲ್ಲಿಯೂ ಸೋಂಕು ಹರಡುವುದಿಲ್ಲ. ನಾನ್ ಲೆಪ್ರೋಮಾಟಸ್ ರೋಗದ ನಮೂನೆಯಲ್ಲಿ ಕಲೆಗಳು ಚರ್ಮದ ಸಹಜ ಬಣ್ಣಕ್ಕಿಂತ ಪೇಲವ ಅಥವಾ ಕೆಂಪಗಿರಬಹುದು.
ಕುಷ್ಠರೋಗದ ತೀವ್ರ ಪರಿಣಾಮಗಳು ಏನು?
ಕುಷ್ಠರೋಗ ಅತಿ ಮಂದಗತಿಯಲ್ಲ್ಲಿ ಬೆಳೆಯುವ ಕಾಯಿಲೆ. ಆದ್ದರಿಂದ ಕುಷ್ಠಾಣುಗಳು ದೇಹ ಸೇರಿದರೂ ಅವು ವೃದ್ಧಿಗೊಳ್ಳುವುದು ಅತಿ ನಿಧಾನ. ಹಾಗಾಗಿ ರೋಗ ಪ್ರಕಟಗೊಳ್ಳಲು ಹಾಗೂ ಬಲಿಯಲು ಹಲವು ವರ್ಷಗಳು ಬೇಕಾಗುತ್ತದೆ. ಆರಂಭದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ರೋಗ ಉಲ್ಬಣಿಸುತ್ತದೆ.ಕಾಲಕ್ರಮೇಣ ಏಕಾಏಕಿ ಅಂಗವಿಕಲತೆ, ಅಂಗ ವಿರೂಪತೆಯನ್ನುಂಟುಮಾಡುತ್ತದೆ. ಕುಷ್ಠಾಣುಗಳು ಆಕ್ರಮಣ ಮಾಡುವುದು ಚರ್ಮ ಹಾಗೂ ನರಗಳ ಮೇಲೆ, ಹೀಗಾಗಿ ಸ್ಪರ್ಶಜ್ಞಾನ ನಾಶ ಹಾಗೂ ಅಂಗವಿಕಲತೆ ಕುಷ್ಠರೋಗದ ಬಳುವಳಿಗಳು.
ಕುಷ್ಠರೋಗದ ತೀವ್ರತೆಯ ಪರಿಣಾಮಗಳು
- ಮಂಡಿಯ ಹಿಂದೆ ಮತ್ತು ಕಣಕಾಲುಗಳ ಮತ್ತು ಮಣಿಕಟ್ಟುಗಳ ಸುತ್ತ ಇರುವ ನರಗಳು ರೋಗಕ್ಕೊಳಗಾಗುತ್ತವೆ.
- ಹಸ್ತ ಮತ್ತು ಪಾದಗಳಲ್ಲಿ ಸ್ಪರ್ಶ ಮುಂತಾದ ಸಂವೇದನೆಗಳಿಲ್ಲದೆÀ ಬೆರಳುಗಳು ಡೊಂಕಾಗುತ್ತವೆ.
- ಸಂವೇದನೆಯ ಅರಿವೇ ಅಳಿದು ಹೋಗಿರುವ ಪರಿಣಾಮವಾಗಿ ಕೈಕಾಲುಗಳ ದೋಷಯುಕ್ತ ಬಳಕೆಯಿಂದ ಕೈಬೆರಳುಗಳು ಮತ್ತು ಕಾಲುಬೆರಳುಗಳು ಒಣಗಿ
- ಸಣ್ಣಗಾಗುವಿಕೆ, ಕೈ ಮತ್ತು ಕಾಲುಗಳಲ್ಲಿ ಹುಣ್ಣುಗಳು ಮುಂತಾದ ವಿಕೃತಿಗಳು ಉಂಟಾಗುತ್ತವೆ.
- ದೇಹದ ಕೆಲವು ನರಗಳು ಊದಿಕೊಳ್ಳುತ್ತವೆ. ಕ್ರಮೇಣ ಒಂದೊಂದೇ ನರ ನಿಶ್ಚೇತನಗೊಳ್ಳುತ್ತಾ ಅಂಗವಿಕಲತೆ ಉಂಟಾಗುತ್ತದೆ.
- ಕೈಕಾಲಿನ ಬೆರಳುಗಳು ಮುರುಟಿ ನಶಿಸುತ್ತವೆ.
- ‘ಲೆಪ್ರೋಮಾಟಿಸ್’ ನಮೂನೆಯ ರೋಗಿಗಳಲ್ಲಿ ಮೇಲೆ ತಿಳಿಸಿದ ವಿಕೃತಿಗಳಲ್ಲದೆ, ಮುಖದ ಮೇಲೆ ಕಿವಿಯ ಹಾಲೆಯ ಮೇಲೆ ಗಂಟುಗಳು ಉಂಟಾಗುತ್ತವೆ.
- ಕಣ್ಣಿನ ಮೇಲಿರುವ ಹುಬ್ಬಿನ ಕೆಲಭಾಗಗಳನ್ನು ಕಳೆದುಕೊಳ್ಳುತ್ತಾರೆ.
- ಮೂಗು ಚಪ್ಪಟೆಯಾಗುತ್ತದೆ.
- ಕಣ್ಣುಗಳಿಗೂ ಧಕ್ಕೆಯುಂಟಾಗುತ್ತದೆ
- ಮುಖದಲ್ಲಿ ಕಾಂತಿ ಮಾಯವಾಗುತ್ತದೆ
- ಕಣ್ಣು, ಮೂಳೆ, ವೃಷಣಗಳಿಗೂ ಸೋಂಕು ತಗಲುತ್ತದೆ.
ಕುಷ್ಠರೋಗದ ಬಗ್ಗೆ ಸಮಾಜದಲ್ಲಿರುವ ಮೂಢನಂಬಿಕೆಗಳು:
ಕುಷ್ಠರೋಗ ಜನ್ಮಾಂತರದ ಕಾಯಿಲೆ, ಅನುವಂಶಿಕ, ಪೂರ್ವಜನ್ಮದ ಪಾಪದ ಫಲ ಎಂಬೆಲ್ಲಾ ಮೂಢನಂಬಿಕೆಗಳು ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಆದರೆ ಕುಷ್ಠರೋಗ ಜನ್ಮಾಂತರದ ಕಾಯಿಲೆಯಲ್ಲ, ಅನುವಂಶಿಕವೂ ಅಲ್ಲ, ಪೂರ್ವಜನ್ಮದ ಪಾಪದ ಫಲವೂ ಅಲ್ಲ. ಇದೀಗ ಇದಕ್ಕೆ ಚಿಕಿತ್ಸೆ ಲಭ್ಯವಿದ್ದರೂ ಇದಕ್ಕಂಟಿರುವ ಕಳಂಕವಿನ್ನೂ ಸಂಪೂರ್ಣ ನಿವಾರಣೆಯಾಗಿಲ್ಲ. ಸಮಾಜ ಕುಷ್ಠರೋಗಿಯನ್ನು ಬಹಿಷ್ಕರಿಸಿ ಬೀದಿ ಪಾಲು ಮಾಡುವ ಧೋರಣೆಯೂ ಸಹ ಸಮಸ್ಯೆ ನಿವಾರಣೆಗೆ ಪೂರಕವಲ್ಲ.
ಭಾರತದಲ್ಲಿ ಕುಷ್ಠರೋಗಿಗಳ ಪ್ರಮಾಣ:
ವಿಶ್ವದಲ್ಲಿ ಕುಷ್ಠರೋಗಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕುಷ್ಠರೋಗವು ಸಂಪೂರ್ಣವಾಗಿ ನಿರ್ಮೂಲನವಾಗಿದೆ. ಬ್ರೆಜಿಲ್, ಭಾರತ, ಮಡಗಾಸ್ಕರ್, ಮೊಜಾಂಬಿಕ ಮತ್ತು ನೇಪಾಳಗಳಲ್ಲಿ ಕುಷ್ಠರೋಗದ ಪ್ರಮಾಣ ಗಮನಾರ್ಹವಾಗಿ ಇಳಿದಿಲ್ಲ. ಅದರಲ್ಲೂ ವಿಶ್ವದಲ್ಲಿನ ಪ್ರತಿ 4 ಕುಷ್ಠರೋಗಿಗಳಲ್ಲಿ ಮೂವರು ಭಾರತೀಯರು ಎಂದು ಅಂಕಿ ಅಂಶಗಳು ದೃಢಪಡಿಸಿವೆ. ಮಹಾತ್ಮಗಾಂಧೀಜಿ ಕುಷ್ಠರೋಗ ನಿರ್ಮೂಲನೆಗೆ ಕರೆ ನೀಡಿ ಅಹರ್ನಿಶಿ ದುಡಿದಿದ್ದರು. ಆದರೆ ಕುಷ್ಠರೋಗ ಇಂದಿಗೂ ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಕಂಡಿಲ್ಲ. ರೋಗದ ಬಗೆಗಿನ ಅಜ್ಞಾನ, ತಪ್ಪು ಕಲ್ಪನೆ, ವಕ್ರದೃಷ್ಟಿಯಿಂದಾಗಿ ಕುಷ್ಠರೋಗ ಹೆಚ್ಚಾಗಿ ಸಾಂದ್ರೀಕೃತಗೊಂಡಿದೆ.
ಇಂದು ಭಾರತದಲ್ಲಿ ಸುಮಾರು 20 ಲಕ್ಷ ಕುಷ್ಠರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ 4 ಲಕ್ಷ ಸೋಂಕು ಹರಡುವವರ ಗುಂಪಿನಲ್ಲಿದ್ದಾರೆ. ಈ 20 ಲಕ್ಷ ಕುಷ್ಠರೋಗಿಗಳನ್ನು ಚಿಕಿತ್ಸೆಗೊಳಪಡಿಸಿದರೆ ಆರಂಭಿಕ ಹಂತದಲ್ಲಿರುವವರು ಅಂಗವೈಕಲ್ಯ ತಲೆದೋರುವುದರೊಳಗೆ ಗುಣ ಹೊಂದುತ್ತಾರೆ. ಸೋಂಕು ಅಂಟಿಸುವಂಥವರು ಕ್ರಮೇಣ ಸೋಂಕು ಅಂಟಿಸದವರಾಗಿ ಹಾನಿ ಮಾಡದವರಾಗುತ್ತಾರೆ. ಇದು ಸಾರ್ವತ್ರಿಕವಾಗಿ ಕುಷ್ಠರೋಗ ನಿರ್ಮೂಲನ ದೃಷ್ಟಿಯಿಂದ ಮುಖ್ಯ.
ಕುಷ್ಠರೋಗ ನಿವಾರಣೆ ದಿಸೆಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಆದರೂ ಸಾಕಾಗಿಲ್ಲ.
ಕುಷ್ಠರೋಗವನ್ನು ಪತ್ತೆ ಹಚ್ಚಲು ರೋಗಿಯನ್ನು ಪರೀಕ್ಷಿಸುವ ಬಗ್ಗೆ:
- ತ್ವಚೆಯನ್ನು ಹಗಲು ಬೆಳಕಿನಲ್ಲಿ ಅಥವಾ ಒಳ್ಳೆಯ ಪ್ರಕಾಶವಿರುವ ಕೊಠಡಿಯಲ್ಲಿ ಪರೀಕ್ಷಿಸಬೇಕು.
- ರೋಗಿಗೆ ಮುಜುಗರವಾಗದಂತೆ ಇಡೀ ಶರೀರದ ಅಂಗಾಂಗಗಳನ್ನು ಪರೀಕ್ಷಿಸ ಬೇಕು.
- ಸ್ಪರ್ಶಜ್ಞಾನದ ಬಗ್ಗೆ ತಿಳಿದುಕೊಳ್ಳಲು ಒಂದು ಅಥವಾ ಎರಡು ಮಚ್ಚೆಗಳನ್ನು ಪರೀಕ್ಷಿಸಿದರೆ ಸಾಕು.
- ಕಣ್ಣು, ಮುಖ, ಕೈ ಮತ್ತು ಕಾಲುಗಳಲ್ಲಿ ಎದ್ದು ಕಾಣುವಂತಹ ಊನಗಳಿವೆಯೇ ಎಂದು ಪರೀಕ್ಷಿಸಬೇಕು.
- ಸ್ಪರ್ಶಜ್ಞಾನವಿಲ್ಲದವರನ್ನು ಪರೀಕ್ಷಿಸುವ ಬಗೆ
- ಕುಷ್ಠರೋಗವೆಂದು ಅನುಮಾನ ಕಂಡುಬಂದಲ್ಲಿ ಅವರನ್ನು ಕೂರಿಸಿ, ಕಣ್ಣು ಮುಚ್ಚಿಕೊಳ್ಳಲು ಹೇಳಿ ನಂತರ ಪೆನ್ನಿನಂತಹ ಮೊನಚಾದ ಒಂದು ವಸ್ತು ತೆಗೆದುಕೊಂಡು ಹಗುರವಾಗಿ ಕಲೆಗಳಿರುವ ತ್ವಚೆಯನ್ನು ಸ್ಪರ್ಶಿಸಿ, ನಂತರ ಪೆನ್ನು ಎಲ್ಲಿ ಸ್ಪರ್ಶಿಸಿದೆ ಎಂಬುದನ್ನು ಅವರಿಂದ ಕೇಳಿ. ಇದೇ ವಿಧಾನವನ್ನು ಸಹಜವಾಗಿರುವ ತ್ವಚೆ ಮತ್ತು ಅದೇ ಮಚ್ಚೆಯ ಮೇಲೆ ಪುನಃ ಅನುಸರಿಸಿ. ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಅದು ಕುಷ್ಠರೋಗವೆಂದು ತೀರ್ಮಾನಿಸಿ ತಕ್ಷಣ ಚಿಕಿತ್ಸೆ ಕೊಡಬೇಕು.
ಕುಷ್ಠರೋಗಕ್ಕೆ ಚಿಕಿತ್ಸೆ ಏನು?
ಪ್ರಸ್ತುತ ಕುಷ್ಠರೋಗದ ಕಾಯಿಲೆಯನ್ನು ಸಂಪೂರ್ಣ ನಿವಾರಿಸಬಲ್ಲ ಔಷಧಿಗಳನ್ನು ಕಂಡು ಕಂಡು ಹಿಡಿಯಲಾಗಿದೆ. ಇವುಗಳಲ್ಲಿ ಮುಖ್ಯವಾಗಿ ಡ್ಯಾಪ್ಸೋನ್ (Dapsone), ರಿಫ್ಯಾಮ್‍ಪಿಸಿನ್ (Rifampicin), ಕ್ಲೋಪ್ಯಾಜ್ಜಿಮಿನ್ (Clofzimine), ಇಥಿಯೋನಮೈಡ್ (Eithionamide), ಆಸ್ಪಿರಿನ್ (Aspirin) ಔಷಧಿಗಳು ಸೇರಿವೆ.
ಬಹು ಔಷಧಿ ವಿಧಾನ (Multidrug treatment): ಈ ವಿಧಾನದಲ್ಲಿ ಕಾಯಿಲೆಯನ್ನು ಆರು ತಿಂಗಳುಗಳ ಒಳಗೆ ವಾಸಿಮಾಡಬಹುದು.ಹಾಗೆಯೇ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟುವ ಹಾಗೂ ಸರಿಪಡಿಸುವ ವಿಧಿವಿಧಾನಗಳು ಸಹ ಬಳಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಕುಷ್ಠರೋಗದ ಸೋಂಕನ್ನು ಕಡಿಮೆ ಮಾಡುವಂತಹ ಮತ್ತು ಗುಣ ಪಡಿಸುವಂತಹ ಬಹು ಸಾಮಥ್ರ್ಯದ ಔಷಧಿಗಳು ಲಭ್ಯವಿದೆ.
ಕುಷ್ಠರೋಗದ ನಿವಾರಣೆಗೆ ಇರುವ ಉಪಾಯಗಳು ಯಾವುವು?
ಕುಷ್ಠರೋಗದಿಂದ ರಕ್ಷಿಸಿಕೊಳ್ಳಲು ಸಮುದಾಯದ ಪ್ರತಿಯೊಬ್ಬರೂ ಪಾಲಿಸಬೇಕಾದ ನಿಯಮಗಳೆಂದರೆ,
1.ಕುಷ್ಠರೋಗದ ಚಿಹ್ನೆ ಕಾಣಿಸಿಕೊಂಡಿದ್ದರೆ, ಕೂಡಲೇ ಚಿಕಿತ್ಸೆ ಪಡೆಯಲು ಮುಂದಾಗಬೇಕು.
2.ಕುಷ್ಠರೋಗದ ಬಗ್ಗೆ ನಿರ್ಲಕ್ಷ್ಯ ಹೊಂದಬಾರದು.
3.ಕುಟುಂಬದ ಪ್ರತಿಯೊಬ್ಬ ಸದಸ್ಯರೂ ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷೆಗೊಳಪಡಬೇಕು ಹಾಗೂ ಚಿಕಿತ್ಸೆ ಪಡೆಯುವುದು ಅವಶ್ಯಕ.
4.ಕುಷ್ಠರೋಗದ ಸೋಂಕು ಇರುವುದು ಕಂಡುಬಂದಲ್ಲಿ ಅಂತಹ ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇಡಬೇಕು ಹಾಗೂ ಚಿಕಿತ್ಸೆ ನೀಡಬೇಕು.
5.ಎರಡು ವಾರ್ಷಿಕ ವೈದ್ಯಕೀಯ ಪರೀಕ್ಷೆಗಳ ನಡುವೆ ಕುಷ್ಠರೋಗ ಕಾಣಿಸಿಕೊಂಡಿದೆ ಎಂದು ಅನುಮಾನ ಬಂದಲ್ಲಿ ಕುಟುಂಬದ ವೈದ್ಯರ ಸಲಹೆಯನ್ನು ಪಡೆಯಬೇಕು.
6.ಸ್ವಯಂ ಸೇವಾಸಂಸ್ಥೆಗಳೂ ಸಹ ಕುಷ್ಠರೋಗದ ಬಗೆಗಿನ ಅಜ್ಞಾನ ಹಾಗೂ ಕಾಯಿಲೆ ನಿವಾರಣೆಗೆ ಶ್ರಮಿಸಬೇಕು.
7.ಕುಷ್ಠರೋಗಿಯೆಂದು ಕಂಡುಬಂದಾಕ್ಷಣ ತುಚ್ಛ ಭಾವನೆಯಿಂದ ಕಾಣದೆ ಚಿಕಿತ್ಸೆ ಕೊಡಿಸುವಲ್ಲಿ ಕಾರ್ಯ ತತ್ಪರರಾಗಬೇಕು.
8.ಕುಷ್ಠರೋಗದ ಬಗ್ಗೆ ಮುಂಚೆ ಇದ್ದ ಮೂಢನಂಬಿಕೆಗಳು ಇಂದು ಅಷ್ಟಿಲ್ಲವಾದರೂ ಇನ್ನೂ ಅಲ್ಪಸ್ವಲ್ಪ ಹಾಗೆಯೇ ಇದೆ. ಸರ್ಕಾರ, ಸ್ವಯಂ ಸೇವಾಸಂಸ್ಥೆಗಳು ಕುಷ್ಠರೋಗ ನಿವಾರಣೆಗಾಗಿ ಮತ್ತಷ್ಟು ಸಮರೋಪಾದಿಯಲ್ಲಿ ಶ್ರಮಿಸಿದರೆ ಕುಷ್ಠರೋಗ ನಿವಾರಣೆ ಖಂಡಿತಾ ಸಾಧ್ಯವಿದೆ.
“ಕುಷ್ಠರೋಗ ಎಂದಿಗೂ ಅನಿಷ್ಠ ಅಲ್ಲ. ಚಿಕಿತ್ಸೆಯಿಂದ ಪರಿಹಾರ ಸಾಧ್ಯ”
ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net