ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ.
ಕುಂಬಳ ಬೀಜ
ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ ಬೀಜದ ಬಗ್ಗೆ ಆಸಕ್ತಿ ತೋರುವುದಿಲ್ಲ. ಇದು ಪೋಷಕಾಂಶಗಳ ಖಜಾನೆ. ಇದರಲ್ಲಿ ಮ್ಯಾಗ್ನಿಷಿಯಂ ಅಧಿಕವಾಗಿದೆ. ಇದರಿಂದಾಗಿ ಮೂಳೆ, ನರಗಳ ಕೆಲಸ ಸರಿಯಾಗಿ ಆಗಲು ಸಾಧ್ಯವಾಗುತ್ತದೆ. ಶಕ್ತಿ ಉತ್ಪಾದನೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತದೆ. ಹೊಟ್ಟೆ ಶುದ್ಧವಾಗಲು ಸಹಾಯ ಮಾಡುತ್ತದೆ. ಹೃದಯದ ಕೆಲಸವೂ ಸರಿಯಾಗಿ ಆಗುತ್ತದೆ.
ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಇದರಿಂದಾಗಿ ಮಲಬದ್ಧತೆಯಲ್ಲಿಯೂ ಸಹಾಯವಾಗುತ್ತದೆ. ಜೊತೆಗೆ ಮಧುಮೇಹ, ಬೊಜ್ಜು ಮುಂತಾದ ತೊಂದರೆಗಳಲ್ಲಿಯೂ ಅನುಕೂಲವಾಗುತ್ತದೆ. ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ನಿತ್ಯವೂ ಕುಂಬಳ ಬೀಜವನ್ನು ಸೇವಿಸುವುದರಿಂದ ವೀರ್ಯಾಣುವಿನ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿದೆ. ಸ್ತನದ ಕ್ಯಾನ್ಸರ್ ತಡೆಯುವಲ್ಲಿಯೂ ಇದು ಸಹಕಾರಿಯಾಗಿದೆ.
ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವ ಕಾರಣ ಇದು ಹಲವಾರು ಕಾಯಿಲೆಗಳು ಹೆಚ್ಚಾಗದಂತೆ ತಡೆಯುವಲ್ಲಿ ಸಹಕಾರಿ. ಮೂತ್ರಕೋಶ ಮತ್ತು ಪ್ರಾಸ್ಪೇಟ್ ನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಯೋಜನಕಾರಿ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಾಡುವ ಮೂತ್ರಮಾರ್ಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ಇದು ನೋಡಿಕೊಳ್ಳುತ್ತದೆ.
ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವ ಕಾರಣ ಮುಪ್ಪನ್ನು ದೂರ ಮಾಡುವುದರ ಜೊತೆಗೆ ಕ್ಯಾನ್ಸರ್ ನಂತಹ ಖಾಯಿಲೆಗಳು ಬರುವುದನ್ನು ತಡೆಯುತ್ತದೆ. ನಿದ್ದೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಮೆದುಳಿಗೆ ಶಕ್ತಿಯನ್ನು ಕೊಡುವ ಗುಣವನ್ನು ಹೊಂದಿರುವ ಕಾರಣ ಮರೆವು, ವಿನಾಕಾರಣ ಸಿಟ್ಟು, ಭಯ, ಆತಂಕಗಳನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟರ್ ಹಾಲನ್ನು ಹೆಚ್ಚಿಸಲು ಸಹಕಾರಿ. ಸಂಧಿಗಳ ಉರಿಯೂತವನ್ನು ಕಡಿಮೆ ಮಾಡಿ ಸಂಧಿನೋವು ಮತ್ತು ಬಾವುಗಳನ್ನು ನಿಯಂತ್ರಿಸುತ್ತದೆ.
ಸಸ್ಯಹಾರಿಗಳಿಗೆ ಪ್ರೋಟೀನ್ ಕೊರತೆ ಇರುವ ಕಾರಣ ಕುಂಬಳ ಬೀಜವನ್ನು ಸೇವಿಸುವುದರಿಂದ ತಕ್ಕಮಟ್ಟಿಗೆ ಪ್ರೋಟೀನ್ ಕೊರತೆ ಕಡಿಮೆಯಾಗಲು ಸಹಾಯವಾಗುತ್ತದೆ. ಜಿಂಕ್, ಫಾಸ್ಫರಸ್, ಪೋಟಾಸಿಯಂ, ಸೆಲೇನಿಯಂ ನಂತಹ ಪೋಷಕಾಂಶಗಳು ಹೇರಳವಾಗಿ ಇರುವ ಕಾರಣ ದೇಹದ ಹಲವು ಅಂಗಗಳಿಗೆ ಶಕ್ತಿಯನ್ನು ಕೊಡಲು ಇದು ತುಂಬಾ ಸಹಕಾರಿಯಾಗಿದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಕೂಡ ಈ ಪೋಷಕಾಂಶಗಳು ಸಹಾಯ ಮಾಡುತ್ತವೆ.
ಹಾಗಾಗಿ ನಿತ್ಯ ಒಂದೆರಡು ಚಮಚ ಕುಂಬಳ ಬೀಜವನ್ನು ಸೇವಿಸಬೇಕು. ರಾತ್ರಿ ನೆನೆಸಿ ಬೆಳಿಗ್ಗೆ ಕೂಡ ಇದನ್ನು ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ಸ್ವಲ್ಪ ಕಷ್ಟಕರವಾದದರಿಂದ ಅಜೀರ್ಣ, ಅಗ್ನಿಮಾಂದ್ಯ, ಐಬಿಎಸ್ ನಂತಹ ಖಾಯಿಲೆಗಳನ್ನು ಹೊಂದಿರುವವರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಅಥವಾ ಸಂಜೆ ಊಟದ ಮೊದಲು ಸೇವಿಸಬಹುದು. ಊಟದ ನಂತರ ಅಥವಾ ರಾತ್ರಿ ಸೇವಿಸುವುದು ಅಷ್ಟು ಸರಿಯಲ್ಲ.
ಸೂರ್ಯಕಾಂತಿ ಬೀಜ:
ಇಷ್ಟೇ ಪೋಷಕಾಂಶ ಭರಿತ ಮತ್ತು ಪ್ರಯೋಜನಕಾರಿಯಾದ ಇನ್ನೊಂದು ಬೀಜವೆಂದರೆ ಅದು ಸೂರ್ಯಕಾಂತಿ ಬೀಜ. ಇದರಲ್ಲಿ ವಿಟಮಿನ್ ಇ, ಆಂಟಿ ಆಕ್ಸಿಡೆಂಟ್ ಗಳು, ಸೆಲೆನಿಯಂ, ಪ್ರೋಟೀನ್, ನಾರಿನ ಅಂಶಗಳು ಹೇರಳವಾಗಿವೆ. ಇದರಲ್ಲಿ ಕ್ಯಾನ್ಸರ್ ನಿರೋಧಕ ಅಂಶಗಳಿವೆ. ಹೃದಯಕ್ಕೆ ಶಕ್ತಿಯನ್ನು ಕೊಡುತ್ತದೆ ಮತ್ತು ಕೆಟ್ಟ ಕೊಲೆಸ್ಟೆರಾಲ್ ಅನ್ನು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ. ಥೈರಾಯ್ಡ್ ಗೆ ಸಂಬಂಧಪಟ್ಟ ಸಮಸ್ಯೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವಿಸಿದರೆ ಮಾಂಸಖಂಡದ ಸೆಳೆತ ಮತ್ತು ಬಿಗಿತ ಕಡಿಮೆಯಾಗುತ್ತವೆ.
ದೇಹದಲ್ಲಿ ಇನ್ಫ್ಲಮೇಷನ್ ಅನ್ನು ಕಡಿಮೆ ಮಾಡುವುದರಿಂದ ಅಲರ್ಜಿ, ಸಂಧಿಗಳ ಸಮಸ್ಯೆಗಳು, ಮಧುಮೇಹ ಮತ್ತು ರಕ್ತನಾಳಗಳಿಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಿಸುತ್ತದೆ. ವಿಟಮಿನ್ ಇ ಹೇರಳವಾಗಿರುವುದರಿಂದ ಮಹಿಳೆಯರ ಆರೋಗ್ಯಕ್ಕೆ ತುಂಬಾ ಸಹಾಯಕ. ವಿಶೇಷವಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ಹಲವು ಏರುಪೇರುಗಳಿಗೆ ಇದು ಸಹಾಯಮಾಡುತ್ತದೆ. ಕುಂಬಳ ಬೀಜದ ಜೊತೆಗೆ ಸೂರ್ಯಕಾಂತಿ ಬೀಜವನ್ನು (sunflower seeds) ಕೂಡಾ ಒಂದೆರಡು ಚಮಚ ಸೇವಿಸಿದರೆ ಒಳ್ಳೆಯದು.
ತುಂಬಾ ಅಪರೂಪಕ್ಕೆ ಕೆಲವೊಬ್ಬರಿಗೆ ಇದರಿಂದ ಅಲರ್ಜಿ ಆಗುವ ಸಂಭವ ಇರುವುದರಿಂದ ತೆಗೆದುಕೊಂಡಾಗ ದೇಹದಲ್ಲಿ ಏನಾದರೂ ಏರುಪೇರು ಆಗುತ್ತಿದೆಯೇ ಎಂದು ಮೊದಲ ಮೂರ್ನಾಲ್ಕು ದಿನ ಗಮನಿಸಬೇಕು. ಸೂರ್ಯಕಾಂತಿ ಬೀಜ ಒಳ್ಳೆಯದೆಂದು ಸೂರ್ಯಕಾಂತಿ ಎಣ್ಣೆಯನ್ನು ತಂದು ಸೇವಿಸಿದರಾಯಿತು ಎಂಬ ಭಾವನೆ ಬೇಡ. ಸೂರ್ಯಕಾಂತಿ ಬೀಜಗಳನ್ನೇ ತಂದು ಸೇವಿಸಬೇಕು.
ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ
ಡಾ ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕ.
Ph:9448729434, 9731460353
www.vedawellnesscenter.com www.nisargamane.com
email: drvhegde@yahoo.com