ಶ್ರವಣ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದೀಗ ಬದಲಾಗುತ್ತಿರುವ ಜೀವನ ಶೈಲಿಯೂ ಅನೇಕ ವಿಧದ ಕಿವಿ ತೊಂದರೆಗಳನ್ನು ಉಂಟುಮಾಡುತ್ತದೆ. ಹೆಚ್ಚಿದ ಶಬ್ದಮಾಲಿನ್ಯ, ತೀವ್ರತರನಾದ ಶಬ್ದ ಕಾರಕಗಳ ಬಳಕೆ, ದಿನವೊಂದಕ್ಕೆ ನಾಲ್ಕರಿಂದ ಆರು ತಾಸುಗಳ ಕಾಲ ಇಯರ್ಫೋನ್ ಹೆಡ್ಫೋನ್ ಗಳ ಬಳಕೆಯಿಂದಾಗಿ ಈ ತೊಂದರೆ ಬರುತ್ತದೆ.
ಪಂಚೇಂದ್ರಿಯಗಳಲ್ಲಿ ಶ್ರವಣ ಶಕ್ತಿಯೂ ಒಂದು. ಇದು ಆಲಿಸುವಿಕೆ ಮತ್ತು ದೇಹದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಯು ಗ್ರಹಿಸಬಲ್ಲ ಆಲಿಸುವಿಕೆಯ ವ್ಯಾಪ್ತಿಯು ಆವರ್ತನ (ಫ್ರಿಕ್ವೆನ್ಸಿ) ಗಳಲ್ಲಿ ಹೇಳುವುದಾದರೆ 20- 20k Hz ಇರುತ್ತದೆ. ಅದೇ ರೀತಿ ತೀವ್ರತೆ ಯಲ್ಲಿ ಹೇಳುವುದಾದರೆ -10 ರಿಂದ 120 ಡೆಸಿಬೆಲ್ ಗಳಷ್ಟು ಇರುತ್ತದೆ. 1 ಬಿಲಿಯನ್ ಗೂ ಅಧಿಕ ಯುವಜನತೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ಅನುಸರಿಸದೆ ಅತಿಯಾದ ತೀವ್ರತೆ ಇರುವ ಶಬ್ದವನ್ನು ಕೇಳುವುದರಿಂದ ಶಾಶ್ವತ ಶ್ರವಣ ದೋಷಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು 63 ಮಿಲಿಯನ್ ಜನರು ಮಹತ್ತರವಾದ ಕಿವಿ ತೊಂದರೆಗಳಿಂದ ಬಳಲುತ್ತಿದ್ದಾರೆ. ವಿಶ್ವ ಶ್ರವಣ ದಿನವು ಪ್ರಪಂಚದಾದ್ಯಂತ ಕಿವಿ ಮತ್ತು ಶ್ರವಣ ಆರೈಕೆಯನ್ನು ಉತ್ತೇಜಿಸುತ್ತದೆ ಮತ್ತು ಕಿವುಡುತನ ಮತ್ತು ಶ್ರವಣ ನಷ್ಟವನ್ನು ಹೇಗೆ ತಡೆಯುವುದು ಎಂಬುದರ ಕುರಿತು ಜಾಗೃತಿ ಮೂಡಿಸುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸುತ್ತಿದೆ. ಈ ವರ್ಷದ ವಿಷಯ “ಜೀವನಕ್ಕಾಗಿ ಕೇಳಲು ಕಾಳಜಿಯಿಂದ ಆಲಿಸಿ”.
ಕಿವಿ ತೊಂದರೆಯನ್ನು ಉಂಟು ಮಾಡುವ ಕೆಲವೊಂದು ಕಾರಣಗಳು/ ಸೂಚನೆಗಳು
1. ವಯೋಸಹಜ ಆಂತರಿಕ ಕಿವಿ ಕ್ಷೀಣತೆ: ವಯಸ್ಸು ಹೆಚ್ಚಾದಂತೆ ಒಳಕಿವಿ ಇಂದ ಮೆದುಳಿಗೆ ಸಂದೇಶವನ್ನು ರವಾನಿಸುವ ನರದ ಶಕ್ತಿಯು ಕ್ಷೀಣಿಸುತ್ತದೆ. ಇದರಿಂದಾಗಿ ಕಿವಿ ಕೇಳುವುದು ಕಡಿಮೆ ಆಗುತ್ತದೆ.
2. ಮೆಲುಧ್ವನಿಯಲ್ಲಿ ಮಾತನಾಡಿದರೆ ಕೇಳದಿರುವುದು ಅಥವಾ ಅಸ್ಪಷ್ಟವಾಗಿ ಕೇಳುವುದು
3. ಇನ್ನೊಬರ ಮಾತನ್ನು ಅರ್ಥೈಸಿಕೊಳ್ಳಲು ಕಷ್ಟವಾಗುವುದು
4. ಜೋರಾದ ಶಬ್ದವನ್ನು ಸುದೀರ್ಘಕಾಲ ಆಲಿಸುವುದು
5. ಅನುವಂಶೀಯತೆ
6. ವೃತ್ತಿ ಸಂಬಂಧಿತ ಕಿವಿ ತೊಂದರೆಗಳು
7. ಕೆಲವು ಔಷಧಿಗಳು : ಕೆಲವು ಅಂಟಿಬಿಯೋಟಿಕ್ಸ್ ಮತ್ತು ಅಂಟಿ ಮಲೇರಿಯ ಮಾತ್ರೆಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಒಳ ಕಿವಿ ಗೆ ತೊಂದರೆಯಾಗುವ ಸಂಭವವಿರುತ್ತದೆ.
8. ಕಿವಿ ಗುಂಯಿಗುಡುವುದು
9. ತಲೆ ಭಾಗಕ್ಕೆ ಬಲವಾದ ಪೆಟ್ಟು ಬೀಳುವುದು
10. ಮಧ್ಯಕಿವಿಯ ಸೋಂಕುಗಳು
11. ಕಿವಿ ತಮಟೆಯಲ್ಲಿನ ರಂದ್ರಗಳು
ಶ್ರವಣ ದೋಷ – ಮೂರು ವಿಧ:
ಶ್ರವಣ ದೋಷವನ್ನು ಮೂರು ವಿಧವಾಗಿ ವಿಂಗಡಿಸಬಹುದು.
1. ಹೊರ ಕಿವಿ ಮತ್ತು ಮಧ್ಯ ಕಿವಿಗೆ ತೊಂದರೆ ಆದರೆ ವಾಹಕ (ಕಂಡಕ್ಟಿವ್) ಶ್ರವಣ ದೋಷ
2. ಒಳ ಕಿವಿಗೆ ತೊಂದರೆ ಆದರೆ ಸಂವೇದನಾ (ಸೆನ್ಸರಿ ನ್ಯೂರಲ್) ಶ್ರವಣ ದೋಷ
3. ಮಧ್ಯ ಕಿವಿ ಮತ್ತು ಒಳ ಕಿವಿ ಎರಡರಲ್ಲೂ ತೊಂದರೆ ಇದ್ದರೆ ಮಿಶ್ರ (ಮಿಕ್ಸೆಡ್) ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ
ಶಬ್ದ ಪ್ರೇರಿತ ಶ್ರವಣ ನಷ್ಟ (ನಾಯ್ಸ್ ಇಂಡುಸ್ಡ್ ಹಿಯರಿಂಗ್ ಲಾಸ್)
ಇದು ಶಾಶ್ವತವಾಗಿ ಒಳಕಿವಿಗೆ ಹಾನಿ ಉಂಟುಮಾಡುವುದರಿಂದ ಸಂವೇದನಾ ದೋಷದ ಒಂದು ವಿಧವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿರುವ ಹೊಸ ತೊಂದರೆ ಎಂದರೆ ತಪ್ಪಾಗಲಾರದು. ಹಿತವಾಗಿರಬೇಕಾಗಿದ್ದ ಸಂಗೀತ ಇಂದು ಶಬ್ದಮಾಲಿನ್ಯದ ಪ್ರತಿನಿಧಿಯಾಗಿ ಬದಲಾಗುತ್ತಿರುವುದು ನಿಜಕ್ಕೂ ಖೇದಕರ. ಹೆಚ್ಚಿದ ಶಬ್ದಮಾಲಿನ್ಯ , ತೀವ್ರತರನಾದ ಶಬ್ದ ಕಾರಕಗಳ ಬಳಕೆ, ದಿನವೊಂದಕ್ಕೆ ನಾಲ್ಕರಿಂದ ಆರು ತಾಸುಗಳ ಕಾಲ ಇಯರ್ಫೋನ್ ಹೆಡ್ಫೋನ್ ಗಳ ಬಳಕೆಯಿಂದಾಗಿ ಈ ತೊಂದರೆ ಬರುತ್ತದೆ. ಗಟ್ಟಿಧ್ವನಿಯಲ್ಲಿ ಸಂಗೀತ ಆಲಿಸಲು ಹೆಡ್ಫೋನ್ ಉಪಯೋಗಿಸಿದರೆ ಈ ಅಪಾಯ ಹೆಚ್ಚಿರುತ್ತದೆ
ವೈದ್ಯಕೀಯವಾಗಿ 110 ಡೆಸಿಬೆಲ್ಗಿಂತ ಹೆಚ್ಚಿನ ಶಬ್ದವು ಮಾನವನ ಕಿವಿಗೆ ಅಸುರಕ್ಷಿತವಾಗಿರುತ್ತದೆ. ಏಕಾಏಕಿ ಕಿವಿಗಡಚಿಕ್ಕುವ ಶಬ್ದವಾದಾಗ ಕಿವಿ ತಮಟೆಗೆ ಹಾನಿಯಾಗುತ್ತದೆ. ಬ್ರಿಟಿಷ್ ಸ್ಟ್ಯಾಂಡರ್ಡ್ ಪ್ರಕಾರ 80ರಿಂದ 90 ಡೆಸಿಬೆಲ್ ನಷ್ಟು ಶಬ್ದವನ್ನು ಎಂಟು ಗಂಟೆಗಳ ಕಾಲ ಆಲಿಸುವುದು ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಆದರೆ ಈ ಮಿತಿಯನ್ನು ಮೀರಿದರೆ ಅದು ಶ್ರವಣ ಶಕ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚಿನ ವರದಿ ಪ್ರಕಾರ ಹೆಚ್ಚಿನ ಎಲ್ಲಾ ಪಟಾಕಿಗಳ ಶಬ್ದವು 100ಕ್ಕಿಂತ ಮೇಲಿರುತ್ತದೆ ಹಾಗಾಗಿ ಅದು ಶಾಶ್ವತ ಶ್ರವಣದೋಷಕ್ಕೆ ಕಾರಣವಾಗಬಹುದು. ಹಬ್ಬದ ಸಂದರ್ಭದಲ್ಲಿ ಮೋಜುಮಸ್ತಿಯಲ್ಲಿ ಮೈ ಮರೆಯುವಾಗ ಆರೋಗ್ಯದ ಕಾಳಜಿಯನ್ನು ಮರೆಯಬಾರದು.
ಇದೀಗ ಟ್ರೆಂಡ್ ಆಗಿರುವಂತಹ ಡಿಜೆ ನೈಟ್ ಗಳಲ್ಲಿ ಬಳಸುವ ಶಬ್ದ ಕಾರಕಗಳು ಕಿವಿಗೆ ತೀವ್ರತರನಾದ ಹಾನಿಯನ್ನುಂಟುಮಾಡುತ್ತದೆ. ಮುಚ್ಚಿದ ಸ್ಥಳಗಳಲ್ಲಿನ ಅಬ್ಬರದ ಶಬ್ದಗಳು ಕಿವಿಗಳಿಗೆ ತೀರಾ ಅಪಾಯಕಾರಿ. ದೀರ್ಘಕಾಲ ಏರು ದ್ವನಿಯ ಶಬ್ದವನ್ನು ಆಲಿಸುವುದರಿಂದ ಕಿವಿಯಿಂದ ಮೆದುಳಿಗೆ ಸಂಕೇತಗಳನ್ನು ರವಾನಿಸುವ ನರತಂತುಗಳ ಕವಚವು ಹರಿದು ಹೋಗಬಹುದು, ಇದು ಒಂದು ಅಥವಾ ಎರಡೂ ಕಿವಿಗಳ ಆಲಿಸುವ ಸಾಮರ್ಥ್ಯದ ಕುಂಠಿತಕ್ಕೆ ಕಾರಣ ವಾಗಬಹುದು. ಶಬ್ದ ಪ್ರೇರಿತ ಶ್ರವಣದೋಷ ವನ್ನು ಎರಡು ವಿಧವಾಗಿ ವಿಂಗಡಿಸಬಹುದು; ತಾತ್ಕಾಲಿಕ ಶಬ್ದ ಪ್ರೇರಿತ ದೋಷ ಹಾಗೂ ಶಾಶ್ವತ ಶಬ್ದ ಪ್ರೇರಿತ ದೋಷ. ತಾತ್ಕಾಲಿಕ ವೆಂದರೆ ಹಿಂಪಡೆಯ ಬಹುದಾದಂತಹ ಶ್ರವಣದೋಷ ಆದರೆ ಶಾಶ್ವತ ಶ್ರವಣದೋಷಕ್ಕೆ ಶ್ರವಣ ಸಂರಕ್ಷಕ ಸಾಧನ ಬಳಸುವುದು ಒಂದೇ ಮಾರ್ಗವಾಗಿರುತ್ತದೆ .
ಲಭ್ಯವಿರುವ ಪರಿಹಾರೋಪಾಯಗಳು
1. ಸೋಂಕು ಮತ್ತು ಹಿಂದಿರುಗಿಸಬಹುದು ಆದಂತಹ ಶ್ರವಣ ತೊಂದರೆಗೆ ಔಷಧಿ ಮತ್ತು ಗುಳಿಗೆಗಳು ಇರುತ್ತದೆ
2. ಶ್ರವಣ ನಷ್ಟಕ್ಕೆ (ಒಳ ಕಿವಿ ತೊಂದರೆ ಇದ್ದಲ್ಲಿ ) ಶ್ರವಣ ಸಾಧನ ಅಥವಾ ಶ್ರವಣ ಸಹಾಯಕ ಸಾಧನೆಗಳನ್ನು ಬಳಸಬಹುದಾಗಿದೆ. ಇದೀಗ ಮುಂದುವರೆದ ತಂತ್ರಜ್ಞಾನದಿಂದಾಗಿ ವಿವಿಧ ರೀತಿಯ ಶ್ರವಣ ಸಾಧನಗಳನ್ನು ಬಳಕೆದಾರರ ಅನುಕೂಲಕ್ಕೆ ತಕ್ಕಂತ್ತೆ ಗ್ರಾಹಕೀಯಗೊಳಿಸಬಹುದಾಗಿದೆ.
3. ಹಾನಿಕಾರಕ ಶಬ್ದ ಕಾರಕಗಳನ್ನು ಉಪಯೋಗಿಸದೆ ಇರುವುದು ಉತ್ತಮ ಅಥವಾ ಅಂತಹ ಸಂದರ್ಭದಲ್ಲಿ ಶ್ರವಣ ಸಂರಕ್ಷಕಗಳ ನ್ನು ಮುನ್ನೆಚ್ಚರಿಕಾ ಕ್ರಮವಾಗಿ ಉಪಯೋಗಿಸಬೇಕು.
4. ಅತಿಯಾಗಿ ಶಬ್ದವನ್ನು ಉಂಟುಮಾಡುವ ಕಾರ್ಖಾನೆಗಳು ಊರ ಹೊರವಲಯದಲ್ಲಿ ಇರಬೇಕು ಮತ್ತು ಪ್ರತಿಯೊಬ್ಬ ಕಾರ್ಮಿಕನು ನಿಯಮಿತವಾಗಿ ಕಿವಿ ಪರೀಕ್ಷೆಗೆ ಒಳಗಾಗಬೇಕು.
5. ಕೆಲಸ ಮಾಡುವ ಜಾಗದಲ್ಲಿ ಹೆಚ್ಚು ಗದ್ದಲವಿದ್ದಲ್ಲಿ ಮೂರು ಸೂಚನೆಗಳನ್ನು ಪಾಲಿಸುವುದು ಬಹುಮುಖ್ಯವಾಗಿದೆ. ಮೊದಲನೆಯದಾಗಿ ಸದ್ದುಗದ್ದಲದ ಜಾಗದಿಂದ ದೂರವಿರಿ. ಎರಡನೆಯದು, ಆದಷ್ಟು ಸದ್ದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಮೊದಲೆರಡು ಹಂತಗಳನ್ನು ಅನುಸರಿಸಲು ಆಗುತ್ತಿಲ್ಲ ಎಂದಾಗ ಕಿವಿ ಸಂರಕ್ಷಕ ಸಾಧನಗಳನ್ನು ಅಗತ್ಯವಾಗಿ ಬಳಸಿ.
6. ಯಾವುದೇ ರೀತಿಯ ಕಿವಿ ತೊಂದರೆಗಳಿಗೆ ಸ್ವಚಿಕಿತ್ಸೆ ಮಾಡದೆ ಹತ್ತಿರವಿರುವ ವೈದ್ಯರ ಸಲಹೆ ಪಡೆಯಬೇಕು
Also Read: ಎಳೆ ಮಕ್ಕಳಲ್ಲಿ ಶ್ರವಣದೋಷ ಕಂಡುಹಿಡಿಯುವುದು ಹೇಗೆ?
ಕೊನೆ ಮಾತು
ಜಗತ್ತಿನಲ್ಲಿ 360 ದಶಲಕ್ಷಕ್ಕೂ ಹೆಚ್ಚು ಜನ ಶ್ರವಣ ತೊಂದರೆಯಿಂದ ಬಳಲುತ್ತಿದ್ದರೂ, ಶ್ರವಣ ನಷ್ಟ ಮತ್ತು ಕಿವಿ ತೊಂದರೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿರದೆ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಇದೀಗ ಬದಲಾಗುತ್ತಿರುವ ಜೀವನ ಶೈಲಿಯೂ ಅನೇಕ ವಿಧದ ಕಿವಿ ತೊಂದರೆಗಳನ್ನು ಉಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂದಾಜಿನ ಪ್ರಕಾರ 2050 ರ ಹೊತ್ತಿಗೆ 2.5 ಬಿಲಿಯನ್ ಜನರು ಶ್ರವಣ ದೋಷಕ್ಕೆ ತುತ್ತಾಗುವ ಸಾಧ್ಯತೆ ಇದೆ. ಶ್ರವಣದೋಷ ಒಂದು ಅಗೋಚರ ಅಂಗವೈಕಲ್ಯ. ಕಿವಿ ತೊಂದರೆಗಳು ಕೆಲವೇ ಸಂದರ್ಭಗಳಲ್ಲಿ ಮಾರಕವೇ ಹೊರತು ಎಲ್ಲಾ ಸಂದರ್ಭದಲ್ಲೂ ಅಲ್ಲ.
ನವಜಾತ ಶಿಶುಗಳಲ್ಲಿ ಕಂಡುಬರುವಂತಹ ಜನ್ಮಜಾತ ಕಿವಿ ತೊಂದರೆಗಳನ್ನು, ಮಗು ಜನಿಸಿದ ಒಂದು ತಿಂಗಳೊಳಗಾಗಿ ಪತ್ತೆಹಚ್ಚಿ , ಎರಡು ತಿಂಗಳು ತುಂಬುವ ಹೊತ್ತಿಗೆ ಶ್ರವಣ ದೋಷವನ್ನು ದೃಢೀಕರಿಸಿ, ಮೂರು ತಿಂಗಳ ಒಳಗೆ ಶ್ರವಣ ಸಾಧನದ ಸಹಾಯದಿಂದ ತರಬೇತಿಯನ್ನು ಪ್ರಾರಂಭಿಸಬೇಕು ಎಂಬ ನಿಯಮವನ್ನು ಯು ಏನ್ ಎಚ್ ಯಸ್ (ಯೂನಿವರ್ಸಲ್ ನ್ಯೂ ಬಾರ್ನ್ ಹಿಯರಿಂಗ್ ಸ್ಕ್ರೀನಿಂಗ್ ) ಹೊರಡಿಸಿದೆ. ಇದರ ಅನ್ವಯ ಕಿವಿ ತೊಂದರೆಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ತರಬೇತಿ ಪಡೆದುಕೊಂಡಲ್ಲಿ ಶ್ರವಣ ದೋಷದಿಂದ ಬಳಲುವ ಮಗುವು ಇತರ ಸಾಮಾನ್ಯ ಮಗುವಿನಂತೆ ಮಾತನಾಡಬಲ್ಲದು ಮತ್ತು ಭಾಷಾ ಬೆಳವಣಿಗೆಯಲ್ಲೂ ಶೀಘ್ರ ಪ್ರಗತಿಯನ್ನು ಹೊಂದಬಹುದು.
ಸಂವಹನ ಪ್ರಕ್ರಿಯೆಯಲ್ಲಿ ಕಿವಿ ಪ್ರಮುಖ ಪಾತ್ರವನ್ನುವಹಿಸುತ್ತದೆ. ಒಂದೊಮ್ಮೆ ಶ್ರವಣ ಶಕ್ತಿ ಕುಂಠಿತವಾದಲ್ಲಿ ಅದು ಸಂವಹನ ಸ್ಥಗಿತಕ್ಕೂ ಕಾರಣವಾಗಬಹುದು. ಇದು ಪರೋಕ್ಷವಾಗಿ ಜೀವನದ ಗುಣಮಟ್ಟವನ್ನು ಕುಗ್ಗಿಸಬಲ್ಲದು. ಆದುದರಿಂದ ಈ ಕುರಿತು ಜನಜಾಗೃತಿ ಹೆಚ್ಚಾಗಿ ಅವಶ್ಯಕತೆ ಇರುವವರೆಲ್ಲರೂ ಶ್ರವಣ ಸಾಧನವನ್ನು ಬಳಸುವಂತಾಗಿ , ಸರ್ವರೂ ಖುಷಿಯಿಂದ ಜೀವಿಸುವಂತಾಗಲಿ. “ಶ್ರವಣ ಸಾಧನ ಧರಿಸಿ ಮೌಲ್ಯಯುತ ಜೀವನ ನಡೆಸಿ “.
ಕಿವಿ ಸಂಬಂದಿತ ತೊಂದರೆಗೆ ಯಾರನ್ನು ಸಂಪರ್ಕಿಸಬೇಕು?
ಎಲ್ಲಾ ರೀತಿಯ ಕಿವಿ ತೊಂದರೆಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಇ ಎನ್ ಟಿ ತಜ್ಞ ವೈದ್ಯರು ಅಥವಾ ಶ್ರವಣ ತಜ್ಞರನ್ನು ಸಂಪರ್ಕಿಸುವುದು ಅವಶ್ಯಕ.
Also Read: Hearing impairment in Elderly couples : Impact on marital adjustments
ದೀಪಿಕಾ ಕೆ
ಕ್ಲಿನಿಕಲ್ ಸೂಪರ್ವೈಸರ್
ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗ
ಎಂಸಿಎಚ್ ಪಿ -ಮಣಿಪಾಲ