ಕಿಡ್ನಿಗಳ ಬಗ್ಗೆ ತಾತ್ಸಾರ ಬೇಡ

ಕಿಡ್ನಿಗಳ ಬಗ್ಗೆ ತಾತ್ಸಾರ ಬೇಡ. ಕಿಡ್ನಿಗಳು ಅಥವಾ ಮೂತ್ರಪಿಂಡಗಳು ನಮ್ಮ ದೇಹದ ಬಹುಮುಖ್ಯ ಅಂಗ. ಆದರೆ, ಇದನ್ನು ಕಡೆಗಣಿಸಿದರೆ ಅಥವಾ ಸರಿಯಾಗಿ ಆರೈಕೆ ಮಾಡದಿದ್ದರೆ ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಕಿಡ್ನಿಗಳೇಕೆ ತುಂಬಾ ಮುಖ್ಯ?

ಕಿಡ್ನಿಗಳ ಬಗ್ಗೆ ತಾತ್ಸಾರ ಬೇಡನಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುಗಳ ಉತ್ಪನ್ನಗಳನ್ನು ಮತ್ತು ಅಧಿಕ ದ್ರವವನ್ನು ಹೊರ ಹಾಕುವುದು ಕಿಡ್ನಿಗಳ ಕಾರ್ಯವೆಂದು ಅನೇಕ ಮಂದಿ ತಿಳಿದಿದ್ದಾರೆ. ಇಂಥ ತ್ಯಾಜ್ಯ ಉತ್ಪನ್ನಗಳು ಮತ್ತು ಅಧಿಕ ದ್ರವವು ಮೂತ್ರದ ಮೂಲಕ ಹೊರ ಹಾಕಲ್ಪಡುತ್ತವೆ. ಕಿಡ್ನಿಯು ಮೂತ್ರ ಉತ್ಪಾದನೆ, ಮಲ ವಿಸರ್ಜನೆ ಮತ್ತು ಮರುಹೀರಿಕೆಯಂಥ ತುಂಬಾ ಕ್ಲಿಷ್ಟಕರ ಸಂಕೀರ್ಣ ಹಂತಗಳನ್ನು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯು ದೇಹದ ರಾಸಾಯನಿಕಗಳ ಸ್ಥಿರ ಸಮತೋಲನವನ್ನು ನಿಯಂತ್ರಿಸುವುದು ಅಗತ್ಯ. ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಕಿಡ್ನಿಗಳು ಪ್ರಬಲ ರಾಸಾಯನಿಕ ಕಾರ್ಖಾನೆಗಳಂತೆ ಕೆಲಸ ಮಾಡುತ್ತವೆ.

1. ದೇಹದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುವುದು.

2. ದೇಹದ ದ್ರವಗಳ ಸಮತೋಲನ.

3. ರಕ್ತದೊತ್ತಡ ನಿಯಂತ್ರಣಕ್ಕೆ ಹಾರ್ಮೋನುಗಳ ಬಿಡುಗಡೆ.

4. ಸದೃಢ ಮೂಳೆಗಳ ಬೆಳವಣಿಗೆಗಾಗಿ ವಿಟಮಿನ್ ಡಿ ರೀತಿಯ ವಸ್ತುಗಳ ಉತ್ಪಾದನೆ.

5. ಹೆಮೊಪೋಸಿಸ್ ಕ್ರಿಯೆಗಾಗಿ ಎರಿಥ್ರೋಪೋಟಿನ್ ರಾಸಾಯನಿಕ ಸ್ರವಿಸುವುದು.

6. ರಕ್ತದೊತ್ತಡದ ನಿಯಂತ್ರಣ

ಕಿಡ್ನಿಗಳು ಮತ್ತು ಅದರ ಕಾರ್ಯಗಳು:

ಕಿಡ್ನಿಗಳು ಬೆನ್ನುಪಟ್ಟಿಯ ಕೆಳಮಟ್ಟದ ಬೆನ್ನುಹುರಿಯ ಇಕ್ಕೆಲಗಳಿರುವ ದೊಡ್ಡ ಹುರುಳಿ ಬೀಜದ ಆಕಾರದ ಅಂಗವಾಗಿದೆ. ಮುಷ್ಠಿ ಗಾತ್ರದ ಎರಡು ಕಿಡ್ನಿಗಳಿರುತ್ತವೆ. ನೆಫ್ರೋನ್‍ಗಳೆಂಬ ಕಾರ್ಯನಿರ್ವಹಿಸುವ ಲಕ್ಷಾಂತರ ಘಟಕಗಳನ್ನು ಪ್ರತಿ ಕಿಡ್ನಿ ಒಳಗೊಂಡಿರುತ್ತದೆ. ನೆಪ್ರೋನ್ ಒಂದರಲ್ಲಿ ಸಣ್ಣ ನಾಳಕ್ಕೆ ಹೊಂದಿಕೊಂಡ ಗ್ಲೊಮೆರುಲಸ್ ಎಂಬ ಸಣ್ಣ ರಕ್ತನಾಳದ ಸೋಸುವ ಘಟಕವಿರುತ್ತದೆ. ಕಿಡ್ನಿಗಳು ಪ್ರತಿ 24 ಗಂಟೆಗಳಲ್ಲಿ 200 ಗ್ಯಾಲನ್‍ಗಳಷ್ಟು ದ್ರವವನ್ನು ಸೋಸುವ ಮತ್ತು ರಕ್ತವಾಹಿನಿಗೆ ಮರಳುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ. ಇದರಲ್ಲಿ ಎರಡು ಗ್ಯಾಲನ್‍ನಷ್ಟು ದ್ರವವು ಮೂತ್ರದ ರೂಪದಲ್ಲಿ ಹೊರಹಾಕಲ್ಪಡುತ್ತದೆ. 198 ಗ್ಯಾಲನ್ ದ್ರವ ಇರುತ್ತದೆ. ನಾವು ವಿಸರ್ಜಿಸುವ ಮೂತ್ರವು ಮೂತ್ರ ಚೀಲದಲ್ಲಿ 1 ರಿಂದ 8 ಗಂಟೆಗಳ ಕಾಲ ಸಂಗ್ರಹವಾಗಿರುತ್ತದೆ.

ಕಿಡ್ನಿ ಮತ್ತು ಬ್ಲಡ್ ಪ್ರೆಷರ್:

1. ಉಪ್ಪು ಮತ್ತು ನೀರಿನ ನಿಯಂತ್ರಣದಲ್ಲಿ ಕಿಡ್ನಿ ಮಹತ್ವದ ಪಾತ್ರವಹಿಸುತ್ತದೆ.
2. ಅಧಿಕ ಉಪ್ಪು ಮತ್ತು ನೀರನ್ನು ಕಿಡ್ನಿ ತೆಗೆದುಹಾಕುತ್ತದೆ.
3. ಅಧಿಕ ಉಪ್ಪು ಸೇವನೆ ಹೈಪರ್‍ಟೆನ್ಶನ್‍ಗೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
4. ಕಿಡ್ನಿ ವಿಫಲವಾದರೆ ಅನಿಯಂತ್ರಿತ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಅನಿಯಂತ್ರಿತ ರಕ್ತದೊತ್ತಡದಿಂದ ಮೂತ್ರಪಿಂಡ ವಿಫಲವಾಗುತ್ತದೆ.

ಮೂತ್ರಪಿಂಡ ರೋಗಕ್ಕೆ ಕೆಲವು ಕಾರಣಗಳು:

ದೀರ್ಘಕಾಲೀನ ಮೂತ್ರಪಿಂಡ ರೋಗಗಳನ್ನು ಕೆಲವು ರೀತಿಯ ಅಸಾಧಾರಣ ಕಿಡ್ನಿ ದೋಷಗಳು ಅಥವಾ ಮೂತ್ರದಲ್ಲಿ ಪ್ರೊಟೀನ್ ವ್ಯತ್ಯಯ ಮತ್ತು ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಕಿಡ್ನಿ ಕಾರ್ಯದಲ್ಲಿ ಕುಂಠಿತ ಎಂದು ವ್ಯಾಖ್ಯಾನಿಸಬಹುದು. ದೀರ್ಘಕಾಲೀನ ಕಿಡ್ನಿ ಸಮಸ್ಯೆಗೆ ಅನೇಕ ಕಾರಣಗಳಿವೆ. ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಂಥ ರೋಗಗಳಿಂದ ಕಿಡ್ನಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮೂತ್ರಪಿಂಡ ಹಾನಿಗೆ ತೀರಾ ಸಮಾನವಾದ ಕಾರಣ ಮತ್ತು ವಿಧಗಳು ಈ ಕೆಳಕಂಡಂತೆ ಇರುತ್ತದೆ.

1. ಕೆಲ ಮೂತ್ರಪಿಂಡ ರೋಗಗಳಿಗೆ ಅನುವಂಶೀಯತೆ ಕೂಡ ಕಾರಣವಾಗುತ್ತದೆ.ಆಜನ್ಮ, ಸಹಜಾತ ಸಮಸ್ಯೆಗಳಿಂದಲೂ ಕಿಡ್ನಿ ದೋಷಗಳು ಕಂಡುಬರುತ್ತವೆ. ಕೆಲವರಲ್ಲಿ ಹುಟ್ಟಿನಿಂದ ಬಂದ ಅಸಾಧಾರಣ ದೋಷಗಳು ಅವರ ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮ ಬೀರಬಹುದು.

2. ಡಯಾಬಿಟಿಸ್ ಮೆಲಿಟಸ್ ಅಥವಾ ಮಧುಮೇಹ  ಮೂತ್ರಪಿಂಡ ವೈಫಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ನಿಮ್ಮ ದೇಹ ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗುವ ಅಥವಾ ಸಾಮಾನ್ಯ ಪ್ರಮಾಣದ ಇನ್ಸುಲಿನ್‍ನನ್ನು ಸಮರ್ಪಕವಾಗಿ ಬಳಸಿಕೊಳ್ಳದ ಸ್ಥಿತಿಯನ್ನು ಡಯಾಬಿಟಿಸ್  ಎನ್ನುತ್ತಾರೆ. ಇದು ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣಕ್ಕೆ ಕಾರಣವಾಗಿ,  ದೇಹದ ಅನೇಕ ಭಾಗಗಳಲ್ಲಿ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಮೂತ್ರಪಿಂಡ ಕಾಯಿಲೆಗೆ ಡಯಾಬಿಟಿಸ್ ಮುಖ್ಯ ಕಾರಣವಾಗುತ್ತದೆ. ಭಾರತದಲ್ಲಿ ಒಂದು ಸಾವಿರ ಜನಸಂಖ್ಯೆಯಲ್ಲಿ ಶೇ.8ರಿಂದ 12ರಷ್ಟು ಮಂದಿ ಮಧುಮೇಹ ರೋಗಿಗಳಿರುತ್ತಾರೆ. ಭಾರತದಲ್ಲಿ ದೀರ್ಘಕಾಲೀನ ಮೂತ್ರಪಿಂಡ ರೋಗಕ್ಕೆ ಇದು ತೀರಾ ಸಾಮಾನ್ಯ ಕಾರಣವಾಗಿದ್ದು, ಡಯಾಬಿಟಿಸ್ ಚಿಕಿತ್ಸೆಗೆ ಒಳಪಡುತ್ತಿರುವ ಕೊನೆ ಹಂತದ ಮೂತ್ರಜನಕಾಂಗ ರೋಗಿಗಳ ಸಂಖ್ಯೆ ಶೇ.25ರಿಂದ 50ರಷ್ಟಿದೆ.

3. ಅಧಿಕ ರಕ್ತದೊತ್ತಡ (ಹೈಪರ್ ಟೆನ್ಶನ್), ಮೂತ್ರಪಿಂಡ ಕಾಯಿಲೆಗೆ ಮತ್ತೊಂದು ತೀರಾ ಸಾಮಾನ್ಯವಾದ ಕಾರಣವಾಗಿದೆ. ಇದು ಕಿಡ್ನಿ ವೈಫಲ್ಯ ಸಮಸ್ಯೆ ಜೊತೆಗೆ ಹೃದಯಾಘಾತ ಮತ್ತು ಪಾಶ್ರ್ವವಾಯುಗಳಂಥ ತೊಂದರೆಗೂ ಎಡೆಮಾಡಿಕೊಡುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮೂತ್ರಪಿಂಡ ರೋಗಗಳ ತೊಂದರೆ ಕಡಿಮೆಯಾಗುತ್ತದೆ. ಎಲ್ಲ ರೀತಿಯ ಮೂತ್ರಪಿಂಡ ರೋಗದ ಶೇ.18-35ರಷ್ಟು ಸಮಸ್ಯೆಗೆ ಅನಿಯಂತ್ರಿತ ರಕ್ತದೊತ್ತಡ ಕಾರಣವಾಗುತ್ತದೆ.

4. ಔಷಧಿಗಳು ಮತ್ತು ವಿಷಯುಕ್ತ ವಸ್ತುಗಳು: ಇವುಗಳು ಕೂಡ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ. ದೀರ್ಘಕಾಲ ನೋವು ಉಪಶಮನ ಔಷಧಿಗಳನ್ನು ವಿಪರೀತ ಬಳಸುವುದು ಕಿಡ್ನಿಗಳಿಗೆ ಅಪಾಯಕಾರಿಯಾಗಬಹುದು. ಇತರ ಔಷಧಿಗಳು, ವಿಷಯುಕ್ತ ವಸ್ತುಗಳು, ಕೀಟನಾಶಕಗಳು ಹಾಗೂ ಹೆರಾಯಿನ್‍ನಂಥ ಮಾದಕವಸ್ತುಗಳು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತವೆ.

5. ಆಜನ್ಮ ಸಹಜಾತ ರೋಗಗಳು: ಅಜನ್ಮಸಹಜಾತ ಅಥವ ಹುಟ್ಟಿನಿಂದ ಬರುವ ರೋಗಗಳು ಮತ್ತು ದೋಷಗಳು ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ತಾಯಿಯ ಗರ್ಭದಲ್ಲಿ ಮಗು ಬೆಳೆಯುವಾಗ ಯೂರಿನರಿ ಟ್ರಾಕ್ಟ್‍ನಲ್ಲಿ ಕಾಣಿಸಿಕೊಳ್ಳುವ ಕೆಲ ಸಮಸ್ಯೆಯನ್ನು ಇದು ಸಾಮಾನ್ಯವಾಗಿ ಒಳಗೊಂಡಿರುತ್ತದೆ. ಮೂತ್ರಕೋಶ ಮತ್ತು ಮೂತ್ರ ಪ್ರನಾಳದ ನಡುವೆ ಇರುವ ಕವಾಟದಂತಹ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡಲು ವಿಫಲವಾದಾಗ ಮೂತ್ರ ಮತ್ತೆ ಕಿಡ್ನಿಗಳಿಗೆ ಹಿಂದಿರುಗುತ್ತದೆ. ಇದರಿಂದ ಸೋಂಕು ಉಂಟಾಗಿ ಮೂತ್ರಪಿಂಡಕ್ಕೆ ಹಾನಿಯಾಗುತ್ತದೆ. ಶೇ.1 ರಿಂದ 2ರಷ್ಟು ಮಂದಿ ಹುಟ್ಟಿದಾಗಿನಿಂದ ಒಂದೇ ಮೂತ್ರಪಿಂಡ ಅಥವ ದೋಷಪೂರಿತ ಕಿಡ್ನಿ ಹೊಂದಿರುತ್ತಾರೆ. ಇದರ ಜೊತೆಗಿರುವ ಬೇರೆ ಯಾವುದೇ ತೊಂದರೆಗಳ ಬಗ್ಗೆ ಅವರು ತಪಾಸಣೆಗೆ ಒಳಪಡಬೇಕು. ಇಂಥ ಮಂದಿ ಬಗ್ಗೆ ನಿಗಾವಹಿಸಬೇಕು.

ಕಿಡ್ನಿ ಸಮಸ್ಯೆ ರೋಗಗಳು :

1. ಗ್ಲೊಮೆರುಲೊನಿಫ್ರಿಟಿಸ್: ಗ್ಲೊಮಿರುಲಿ ಎಂಬ ಮೂತ್ರಪಿಂಡದ ಪುಟ್ಟ ಸೋಸುವ ಘಟಕದ(ಫಿಲ್ಟರಿಂಗ್ ಯೂನಿಟ್) ಉರಿತಕ್ಕೆ ಕಾರಣವಾಗುವ ಸಮಸ್ಯೆಯೇ ಗ್ಲೊಮೆರುಲೊನಿಫ್ರಿಟಿಸ್. ಈ ತೊಂದರೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಗಂಟಲು ಸಮಸ್ಯೆ ನಂತರ ವ್ಯಕ್ತಿ ಗುಣಮುಖವಾಗಬಹುದು. ಅದಾಗ್ಯೂ, ಹಲವಾರು ವರ್ಷಗಳ ಕಾಲ ನಿಧಾನವಾಗಿ ರೋಗ ವೃದ್ಧಿಯಾಗಿ ಇದು ಕಿಡ್ನಿ ಕಾರ್ಯಗಳ ವಿಫಲತೆಗೆ ಕಾರಣವಾಗಬಹುದು. ಗ್ಲೊಮೆರುಲೊನಿಫ್ರಿಟಿಸ್ ಸಾಮಾನ್ಯವಾಗಿ ಯುವ ಜನಾಂಗದಲ್ಲಿ ಕಂಡುಬರುತ್ತದೆ. ಇದು ಎಡಿಮಾ, ಅಧಿಕ ರಕ್ತದೊತ್ತಡ, ಮೂತ್ರ ವಿಸರ್ಜನೆ ಇಳಿಮುಖ ಮತ್ತು ಹಿಮಾಚುರಿಯಾದಂಥ ಸಮಸ್ಯೆಗಳೊಂದಿಗೆ ಕಂಡುಬರುತ್ತದೆ. ಆರಂಭದಲ್ಲೇ ಈ ಸಮಸ್ಯೆಯನ್ನು ಪತ್ತೆಹಚ್ಚುವುದರಿಂದ ಕಾಯಿಲೆ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದು. ಭಾರತದಲ್ಲಿ ದೀರ್ಘಕಾಲೀನ ಕಿಡ್ನಿ ರೋಗಗಳಿಗೆ ಇದು ಶೇ.8ರಿಂದ 12ರಷ್ಟು ಕಾರಣವಾಗುತ್ತದೆ.

2. ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆ: ಇದು ಅನುವಂಶೀಯ ಕಿಡ್ನಿ ರೋಗದಲ್ಲಿ ತೀರಾ ಸಾಮಾನ್ಯವಾದುದು. ಈ ಸಮಸ್ಯೆಯಲ್ಲಿ ಮೂತ್ರಪಿಂಡ ಮೂತ್ರಾಶಯ(ಮೂತ್ರಕೋಶ) ದೊಡ್ಡದಾಗಿ ಗಂಭೀರ ಸ್ವರೂಪದ ಕಿಡ್ನಿ ಹಾನಿಗೆ ಕಾರಣವಾಗಿ, ಮೂತ್ರಪಿಂಡ ವೈಫಲ್ಯಕ್ಕೆ ಎಡೆಮಾಡಿಕೊಡುತ್ತದೆ. ಕಿಡ್ನಿ ಮೇಲೆ ದುಪ್ಷರಿಣಾಮ ಉಂಟುಮಾಡುವ ಇತರ ವಂಶವಾಹಿ ರೋಗಗಳೆಂದರೆ ಅಲ್‍ಫೋಟ್ರ್ಸ ಸಿಂಡ್ರೋಮ್, ಹೈಪರೊಕ್ಸಲುರಿಯಾ ಮತ್ತು ಸಿಸ್ಟಿನುರಿಯಾ. ಇದು ನಿಧಾನವಾಗಿ ಬೆಳವಣಿಗೆ ಹೊಂದುವ ಸಮಸ್ಯೆಯಾಗಿದ್ದು, ಐದು ಅಥವಾ ಆರನೇ ದಶಕದಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ಸಾವಿರ ಜನಸಂಖ್ಯೆ ಪೈಕಿ 2-3ರಲ್ಲಿ ಪಾಲಿಸಿಸ್ಟಿಕ್ ರೋಗ ಕಂಡುಬರುತ್ತದೆ.

3. ಕಿಡ್ನಿ ಸ್ಟೋನ್(ಮೂತ್ರಪಿಂಡ ಕಲ್ಲುಗಳು): ಇದು ತೀರಾ ಸಾಮಾನ್ಯವಾಗಿ ಕಂಡು ಬರುವ ಮೂತ್ರಪಿಂಡ ಸಮಸ್ಯೆಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಬೆನ್ನು ಮತ್ತು ಒಂದು ಪಾಶ್ರ್ವದಲ್ಲಿ ವಿಪರೀತ ನೋವು ಉಂಟಾಗುತ್ತದೆ. ಈ ಸಮಸ್ಯೆಗೆ ಅನೇಕ ಕಾರಣಗಳಿವೆ. ಅನುವಂಶೀಯ ದೋಷಗಳೊಂದಿಗೆ ಆಹಾರದಿಂದ ವಿಪರೀತ ಕ್ಯಾಲ್ಶಿಯಂ ಹೀರಿಕೊಳ್ಳುವಿಕೆ, ಮೂತ್ರ ಪ್ರದೇಶ ಸೋಂಕು ಅಥವ ಅಡಚಣೆಗಳಿಂದ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ಕೆಲವೊಮ್ಮೆ ಮೂತ್ರಪಿಂಡ ಕಲ್ಲುಗಳು ದೊಡ್ಡದಾಗಿದ್ದರೆ ಅವುಗಳನ್ನು ತೆಗೆಯಲು ಅಥವ ಅವುಗಳನ್ನು ಪುಟ್ಟ ತುಣುಕುಗಳಾಗಿ ಮಾಡಿ ದೇಹದಿಂದ ಹೊರ ಹಾಕಲು ಚಿಕಿತ್ಸೆ ನೀಡಬೇಕಾಗುತ್ತದೆ.

4. ಮೂತ್ರ ಪ್ರದೇಶ ಸೋಂಕುಗಳು: ಸೂಕ್ಷ್ಮ ಕೀಟಾಣುಗಳು ಮೂತ್ರ ಪ್ರದೇಶವನ್ನು ಪ್ರವೇಶಿಸಿದಾಗ ಯೂರಿನರಿ ಟ್ರಾಕ್ಟ್ ಸೋಂಕು ಕಂಡುಬರುತ್ತದೆ. ನೋವು, ಮೂತ್ರ ವಿಸರ್ಜನೆ ವೇಳೆ ಉರಿ ಮತ್ತು ಪದೇ ಪದೇ ಮೂತ್ರ ವಿಸರ್ಜನೆ – ಈ ರೋಗದ ಲಕ್ಷಣವಾಗಿರುತ್ತದೆ. ಇದು ಮೂತ್ರ ಕೋಶದ ಮೇಲೆ ಅಪರೂಪಕ್ಕೆ ಸೋಂಕು ಉಂಟು ಮಾಡುತ್ತಾದಾದರೂ, ಕೆಲವೊಮ್ಮೆ ಸೋಂಕು ಕಿಡ್ನಿಗೂ ಹರಡುತ್ತದೆ. ಇದು ತೀವ್ರ ಜ್ವರ ಮತ್ತು ಬೆನ್ನು ನೋವಿಗೆ ಕಾರಣವಾಗುತ್ತದೆ. ಉಸಿರಾಟ ಮತ್ತು ದೊಡ್ಡಕರುಳಿನ ನಂತರ ತೀರಾ ಸಾಮಾನ್ಯವಾಗಿ ಕಂಡುಬರುವ ಮೂರನೇ ಸೋಂಕು ಎಂದರೆ ಯೂರಿನರಿ ಟ್ರಾಕ್ಟ್ ಇನ್‍ಫೆಕ್ಷನ್. ಇದು ತೀರಾ ಸಾಮಾನ್ಯವಾಗಿ ಮಹಿಳೆಯರಲ್ಲಿ, ಮಧುಮೇಹ ರೋಗಿಗಳಲ್ಲಿ ಮತ್ತು ಅಸಾಧಾರಣ ಮೂತ್ರ ಪ್ರದೇಶ ಹೊಂದಿರುವವರಲ್ಲಿ ಗೋಚರಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಇದು ಗಂಡಾಂತರಕಾರಿಯಾಗಿ ಪರಿಣಮಿಸುತ್ತದೆ.

ಮೂತ್ರಪಿಂಡ ರೋಗ ಪತ್ತೆ:

ಕಿಡ್ನಿಗಳ ಬಗ್ಗೆ ತಾತ್ಸಾರ ಬೇಡಮೂತ್ರಪಿಂಡ ರೋಗವು, ಕಿಡ್ನಿ ವೈಫಲ್ಯಕ್ಕೆ ಉಲ್ಬಣಗೊಳ್ಳುವುದನ್ನು ತಡೆಯಬೇಕಾದರೆ ಈ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಕಿಡ್ನಿ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಕೆಲವು ಸರಳ ಪರೀಕ್ಷೆಗಳಿವೆ. ಅವುಗಳೆಂದರೆ:

1. ರಕ್ತದೊತ್ತಡ ಮಾಪನ

2. ಮೂತ್ರದಲ್ಲಿನ ಪ್ರೊಟೀನ್ ಪರೀಕ್ಷೆ – ನಿಮ್ಮ ಮೂತ್ರದಲ್ಲಿ ತೀರಾ ಅಧಿಕ ಪ್ರಮಾಣದ ಪ್ರೊಟೀನ್ ಕಂಡುಬಂದರೆ, ರೋಗದಿಂದ ಮೂತ್ರಪಿಂಡದ ಸೋಸುವ ಫಟಕಗಳಿಗೆ ಹಾನಿಯಾಗಿದೆ ಎಂದರ್ಥ.

3. ರಕ್ತದ ಕ್ರಿಯೆಟಿನಿನ್ ಪರೀಕ್ಷೆ

4. ನಿಮ್ಮ ವಯಸ್ಸು ಜನಾಂಗ, ಅಂಗ ಮತ್ತು ಇತರ ಅಂಶಗಳೊಂದಿಗೆ ನಿಮ್ಮ ಗ್ಲೊಮೆರುಲರ್ ಫಿಲ್ಟರೇಷನ್ ಪ್ರಮಾಣ (ಜಿಎಫ್‍ಆರ್) ಮಾಪನ ಮಾಡಲು ವೈದ್ಯರು ನಿಮ್ಮ ಫಲಿತಾಂಶಗಳನ್ನು ಬಳಸಿಕೊಳ್ಳುತ್ತಾರೆ. ನಿಮ್ಮ ಜಿಎಫ್‍ಆರ್ ನಿಮ್ಮ ಮೂತ್ರಪಿಂಡದ ಕಾರ್ಯಸಾಮಥ್ರ್ಯವನ್ನು ತಿಳಿಸುತ್ತದೆ. ಜಿಎಫ್‍ಆರ್ ಮೌಲ್ಯಮಾಪನ ಮಾಡಲು, ನಿಮಗೆ ಈ ಕಾರಣಗಳಿದ್ದರೆ – ವಯಸ್ಸಾಗಿದ್ದರೆ, ಡಯಾಬಿಟಿಸ್ ಇದ್ದರೆ, ಅಧಿಕ ರಕ್ತದೊತ್ತಡವಿದ್ದರೆ, ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಮೂತ್ರಪಿಂಡ ರೋಗವಿದ್ದರೆ ಕಿಡ್ನಿ ರೋಗದ ಸಾಧ್ಯತೆ ಹೆಚ್ಚಾಗಿರುತ್ತದೆ.

ಮೂತ್ರಪಿಂಡ ರೋಗದ ಎಚ್ಚರಿಕೆ ಚಿಹ್ನೆಗಳು:
ಮೂತ್ರಪಿಂಡ ರೋಗ ಸಾಮಾನ್ಯವಾಗಿ ಎರಡೂ ಕಿಡ್ನಿಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತವನ್ನು ಶುದ್ಧೀಕರಿಸುವ ಮೂತ್ರಪಿಂಡಗಳ ಸಾಮಥ್ರ್ಯವು ರೋಗದಿಂದ ತೀವ್ರ ಹಾನಿಗೆ ಒಳಗಾಗಿದ್ದರೆ, ತ್ಯಾಜ್ಯ ವಸ್ತುಗಳು ಮತ್ತು ಅಧಿಕ ದ್ರವ ದೇಹದಲ್ಲೇ ಉಳಿದು ಬಿಡುತ್ತದೆ. ಮೂತ್ರಪಿಂಡ ರೋಗದ ಅನೇಕ ರೂಪಗಳು ಕಾಯಿಲೆಯ ಕೊನೆ ಹಂತದವರೆಗೆ ಯಾವುದೇ ಲಕ್ಷಣಗಳನ್ನು ತೋರ್ಪಡಿಸದಿದ್ದರೂ. ಆರು ಎಚ್ಚರಿಕೆ ಚಿಹ್ನೆಗಳಿವೆ.
1. ಅಧಿಕ ರಕ್ತದೊತ್ತಡ
2. ಮೂತ್ರದಲ್ಲಿ ರಕ್ತ ಮತ್ತು / ಅಥವ ಪ್ರೊಟೀನ್
3. ಗ್ಲೊಮೆರುಲರ್ ಫಿಲ್ಟರೇಷನ್ ಪ್ರಮಾಣ (ಜಿಎಫ್‍ಆರ್) ಇಳಿಮುಖ
4. ಪದೇ ಪದೇ ಮೂತ್ರ ವಿಸರ್ಜನೆ; ಮೂತ್ರ ವಿಸರ್ಜಿಸುವಾಗ ನೋವು ಅಥವ ತೊಂದರೆ
5. ಕಣ್ಣುಗಳ ಸುತ್ತ ಮತ್ತು ಕೈ ಕಾಲುಗಳಲ್ಲಿ ಊತ
6. ಕಿಡ್ನಿಯ ಕಾರ್ಯ ಕ್ಷೀಣಿಸಿದಾಗ ಬಡ್ಲ್ ಯೂರಿಯಾ ನೈಟ್ರೋಜೆನ್(BUN) ಮತ್ತು ಕ್ರಿಯೆಟಿನಿನ್‍ನ ತ್ಯಾಜ್ಯಗಳು ದೇಹದಲ್ಲಿ ಸಂಗ್ರಹವಾಗುತ್ತದೆ. ಇಂಥ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಕ್ರಿಯೇಟಿನಿನ್ ಮತ್ತು BUN ರಕ್ತ ಪರೀಕ್ಷೆ ಮಾಡಲಾಗುತ್ತದೆ.

ಮೂತ್ರಪಿಂಡ ರೋಗಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು:

ಮೂತ್ರಪಿಂಡ ರೋಗ ಉಲ್ಬಣವಾಗುವುದನ್ನು ತಪ್ಪಿಸಲು ಅಥವ ಅದು ಇನ್ನಷ್ಟು ಬಿಗಡಾಯಿಸುವುದನ್ನು ತಡೆಗಟ್ಟಲು ನೀವು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬಹುದು.

1. `ACE Inhibitor’ ರಕ್ತದೊತ್ತಡ ನಿಯಂತ್ರಣ ಔಷಧಿಗಳೊಂದಿಗೆ ನಿಮ್ಮ ವೈದ್ಯರ ಸಲಹೆ ಮೇರೆಗೆ ಎಸಿಇಗಳು ಕಿಡ್ನಿಯ ಕೆಲಸವನ್ನು ರಕ್ಷಿಸುವ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ ಇಲ್ಲದಿದ್ದರೂ, ಮೂತ್ರಪಿಂಡಗಳನ್ನು ರಕ್ಷಿಸಿಕೊಳ್ಳಲು ಮಧುಮೇಹ ರೋಗಿಗಳು ಕೂಡ ಎಸಿಇಯನ್ನು ತೆಗೆದುಕೊಳ್ಳಬೇಕು. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಮೂತ್ರದಲ್ಲಿ ಪ್ರೊಟೀನ್ ಕಂಡು ಬಂದರೆ, ಆಹಾರ ತಜ್ಞರನ್ನು ಭೇಟಿ ಮಾಡಿ,  ಡಯಾಬಿಟಿಸ್‍ನನ್ನು ನಿಯಂತ್ರಣದಲ್ಲಿಟ್ಟುಕೊಂಡು, ಕಡಿಮೆ ಪ್ರೊಟೀನ್ ಆಹಾರ ಸೇವಿಸಬೇಕಾಗುತ್ತದೆ.

2. ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ದೈಹಿಕವಾಗಿ ಸಮರ್ಥರಾಗಿರುವುದು ಕೂಡ ಮುಖ್ಯ. ವ್ಯಾಯಾಮಗಳಿಂದ ಅನೇಕ ಪ್ರಯೋಜನಗಳುಂಟು. ಇದು ಕಿಡ್ನಿ ಕಾಯಿಲೆಯ ಉಲ್ಬಣತೆಯನ್ನು ಕಡಿಮೆ ಮಾಡುತ್ತದೆ. ವ್ಯಾಯಾಮದಿಂದ ಮಾಂಸಖಂಡಗಳ ಕಾರ್ಯ ಹೆಚ್ಚುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ, ಕೊಲೆಸ್ಟರಾಲ್ ಪ್ರಮಾಣ ತಗ್ಗುತ್ತದೆ. ಆರೋಗ್ಯಕರ ದೇಹತೂಕ ಹೊಂದಲು ನೆರವಾಗುತ್ತದೆ ಮತ್ತು ನಿದ್ರೆಯನ್ನು ಹೆಚ್ಚಿಸುತ್ತದೆ. ವಾಕಿಂಗ್, ಈಜು, ಸೈಕಲ್ ಸವಾರಿ ಅಥವ ನೃತ್ಯದಂಥ ನಿಮಗೆ ಇಷ್ಟವಾದ ವ್ಯಾಯಾಮದೊಂದಿಗೆ ಸಕ್ರಿಯರಾಗಿರಿ. ಕನಿಷ್ಟ ಒಂದು ವಾರಕ್ಕೆ ಮೂರು ಬಾರಿಯಾದರೂ ವ್ಯಾಯಾಮ ಮಾಡಬೇಕು.

3. ನೋವು ನಿವಾರಕ ಔಷಧಿಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು. ಸಂಧಿವಾತದಂಥ ದೀರ್ಘಾವಧಿ ನೋವಿನ ಸಮಸ್ಯೆ ಇರುವುದರಿಂದ 10 ದಿನಗಳಿಗಿಂತ ಹೆಚ್ಚು ಕಾಲ ನೋವು ನಿವಾರಕ ಔಷಧಿಗಳನ್ನು ಸೇವಿಸಬೇಕಾದರೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

4. Acetanubiogebm BSAUDs ಮತ್ತು caffeine ನಂಥ ಸಂಯೋಜನೆಯ ಮಾತ್ರೆಗಳನ್ನು ಆದಷ್ಟೂ ತಪ್ಪಿಸಿ. ಇಂಥ ಮಾತ್ರೆಗಳನ್ನು ಸೇವಿಸಿದರೆ ದಿನಕ್ಕೆ ಕನಿಷ್ಟ 6 ರಿಂದ 8 ಲೋಟ ನೀರು ಕುಡಿಯಿರಿ.

ಅನೇಕ ಮೂತ್ರಪಿಂಡ ರೋಗಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಂಥ ಕಾಯಿಲೆಗಳನ್ನು ಎಚ್ಚರಿಕೆಯಿಂದ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಿಡ್ನಿ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಅಥವಾ ರೋಗ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದು. ಕಿಡ್ನಿ ಸ್ಟೋನ್ ಮತ್ತು ಯೂರಿನರಿ ಟ್ರ್ಯಾಕ್ಟ್ ಸೋಂಕುಗಳಿಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ದುರದೃಷ್ಟವೆಂದರೆ ಕೆಲವು ಕಿಡ್ನಿ ಕಾಯಿಲೆಗಳಿಗೆ ಸೂಕ್ತ ಕಾರಣಗಳೇನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಇವುಗಳಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಾಗಿಲ್ಲ. ಕೆಲವೊಮ್ಮೆ ದೀರ್ಘಕಾಲದ ಮೂತ್ರಪಿಂಡ ರೋಗವು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಮೂತ್ರಪಿಂಡ ಜೋಡಣೆ ಅಥವ ಡಯಾಲಿಸ್ ಮಾಡಿಸಬೇಕಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುವ ವಿಶೇಷ ಔಷಧಿಯಾದ Angioensin Converting Enzyme(ACE) inhibitor ಗಳು ದೀರ್ಘಾವಧಿ ಮೂತ್ರಪಿಂಡ ರೋಗ ಉಲ್ಬಣಗೊಳ್ಳುವುದನ್ನು ಕ್ಷೀಣಿಸುತ್ತದೆ. ದೀರ್ಘಕಾಲೀನ ಮೂತ್ರಪಿಂಡ ರೋಗಕ್ಕೆ ಕಾರಣವಾಗುವ ಎಲ್ಲ ಪರಿಸ್ಥಿತಿಗಳಿಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವ ಕುರಿತು ಸಂಶೋಧನೆಗಳು ನಡೆಯುತ್ತಲೇ ಇರುವುದು ಸಮಾಧಾನಕರ ಸಂಗತಿ.

Dr-Dinakar

ಡಾ. ದಿನಕರ್

ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366     ಮೊ.: 97422 74849
http://www.vims.ac.in/

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!