ಕಿಡ್ನಿ ಸ್ಟೋನ್‍ಗೆ ಕಾರಣ ಕಡಿಮೆ ನೀರು ಅಥವಾ ಕಡಿಮೆ ದ್ರವಾಹಾರ ಸೇವನೆ, ಹೆಚ್ಚು ಉಪ್ಪು ಬಳಕೆ ಮಾಡುವುದು ಹಾಗೂ ಹೆಚ್ಚಿನ ಸಕ್ಕರೆ ಬಳಕೆ. ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದು. ಹಾಗಾದರೆ ಈ ಕಿಡ್ನಿ ಸ್ಟೋನ್‍ಗೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ.
ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದು. ಹೊಟ್ಟೆಯ ಪಕ್ಕದ ಕೆಳಭಾಗದಲ್ಲಿ ಹೆಚ್ಚು ನೋವು ಕಂಡುಬರುತ್ತದೆ. ತೀವ್ರತರವಾದ ನೋವು ಕಿಬ್ಬೊಟ್ಟೆಯಿಂದ ಸೊಂಟದ ಕಡೆಗೆ ಹರಿಯುತ್ತದೆ. ಕಿಡ್ನಿ ಸ್ಟೋನ್‍ಗೆ ಸಂಬಂಧಿಸಿ ನೋವಾದಾಗ ಕೆಲವರಿಗೆ ಮೂತ್ರ ಮಾಡುವಾಗ ಬಹಳ ತೊಂದರೆಯಾಗುತ್ತದೆ. ಕೆಲವರಿಗೆ ವಾಂತಿ ಬಂದಂತೆ ಭಾಸವಾಗುತ್ತದೆ. ಮಲವಿಸರ್ಜನೆ ಮಾಡಬೇಕು ಎನ್ನಿಸುತ್ತದೆ. ತೀವ್ರವಾದ ನೋವು ಕಂಡುಬರುತ್ತದೆ.
ಕಿಡ್ನಿ ಸ್ಟೋನ್ ಉಂಟಾಗಲು ಕಾರಣವೇನು?
ಭಾರತದಲ್ಲಿ ಶೇ.10 ಪ್ರತಿಶತ ಜನರು ಕಿಡ್ನಿ ಸ್ಟೋನ್ ತೊಂದರೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ಸ್ಟೋನ್‍ಗಳು ಮುಖ್ಯವಾಗಿ ಮೂರುವಿಧಗಳಲ್ಲಿ ಕಂಡುಬರುತ್ತದೆ. ಮೊದಲನೆಯದು ಕ್ಯಾಲ್ಸಿಯಂ ಆಕ್ಸಾಲೇಟ್ ಸ್ಟೋನ್. ಎರಡನೆಯದು ಕ್ಯಾಲ್ಸಿಯಂ ಫಾಸ್ಫೇಟ್ ಸ್ಟೋನ್, ಮೂರನೆಯದು ಯೂರಿಕ್ ಆಕ್ಸಲೇಟ್ ಸ್ಟೋನ್. ಹೆಚ್ಚಾಗಿ ಕಿಡ್ನಿ ಸ್ಟೋನ್ ತೊಂದರೆಯಿಂದ ಬಳಲುತ್ತಿರುವವರ ಮೂತ್ರದಲ್ಲಿ ಹೆಚ್ಚು ಕ್ಯಾಲ್ಶಿಯಂ ಸ್ರವಿಸುತ್ತದೆ. ನಮ್ಮ ಕಿಡ್ನಿಯು ನಮ್ಮ ದೇಹಕ್ಕೆ ಬೇಡವಾದ ಎಲ್ಲವನ್ನು ಸೋಸಿ ವಿಸರ್ಜಿಸುವಂತಹ ಕಾರ್ಯವನ್ನು ಮಾಡುತ್ತದೆ. ಕಾಲ್ಶಿಯಂ ಒಂದು ರೀತಿಯ ಖನಿಜವಾಗಿದ್ದು, ಅದು ಕಿಡ್ನಿಯಲ್ಲಿ ಕ್ರಿಸ್ಟಲ್ ಆಗಿ (ಹರಳಿನ ರೂಪ ಪಡೆದು) ಸಂಗ್ರಹಣೆಯಾದರೆ ಅದನ್ನು ಕಿಡ್ನಿಸ್ಟೋನ್ ಎಂದು ಕರೆಯಲಾಗುತ್ತದೆ. ಅದೇ ನಾವು ಹೆಚ್ಚೆಚ್ಚು ನೀರು ಕುಡಿಯುವುದರಿಂದ, ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಯಾವುದೇ ರೀತಿಯ ಖನಿಜಗಳು ಸಂಗ್ರಹಣೆಯಾಗದೇ ವಿಸರ್ಜಿಸಲ್ಪಡುತ್ತದೆ.
ಆದ್ದರಿಂದ ನೀರು ಕಡಿಮೆ ಕುಡಿಯುವುದೇ ಈ ಕಿಡ್ನಿಸ್ಟೋನ್‍ಗೆ ಕಾರಣ. ದ್ರವರೂಪದ ಪದಾರ್ಥಗಳ ಕೊರತೆಯಿಂದ ಕಿಡ್ನಿಯಲ್ಲಿ ಕ್ರಿಸ್ಟಲ್ ರೀತಿಯಲ್ಲಿ ಖನಿಜಗಳು ಶೇಖರಣೆಗೊಂಡು ಕಿಡ್ನಿಸ್ಟೋನ್ ಉಂಟಾಗುತ್ತದೆ. ಇನ್ನೊಂದು ಮುಖ್ಯ ಅಂಶವೆಂದರೆ ಟೊಮ್ಯಾಟೋ, ಬೀಟ್‍ರೂಟ್ ಹಾಗೂ ಪಾಲಕ್‍ಗಳಲ್ಲಿ ಆಕ್ಸಾಲೇಟ್ ಪದಾರ್ಥಗಳನ್ನು ಹೆಚ್ಚು ತೆಗೆದುಕೊಂಡಾಗ ಕ್ಯಾಲ್ಶಿಯಂ ಆಕ್ಸಾಲೇಟ್ ಸ್ಟೋನ್ ಉಂಟಾಗುತ್ತದೆ. ಹಾಗಾಗಿ ಕಿಡ್ನಿಸ್ಟೋನ್ ಇರುವಾಗ ಟೊಮ್ಯಾಟೋ, ಬೀಟ್‍ರೂಟ್ ಹಾಗೂ ಪಾಲಕ್‍ನ್ನು ಸೇವಿಸಬಾರದು ಎಂಬುದಾಗಿ ಹೇಳುವುದು ರೂಡಿಯಲ್ಲಿದೆ. ಆದರೆ ನಾವು ಬೀಟ್‍ರೂಟ್ ಅಥವಾ ಟೊಮ್ಯಾಟೋ ಅಥವಾ ಇನ್ನಿತರ ಆಕ್ಸಾಲೇಟ್ ಹೊಂದಿರುವ ಆಹಾರ ಪದಾರ್ಥವನ್ನು ತೆಗೆದುಕೊಂಡ ನಂತರದಲ್ಲಿ ಹಾಲನ್ನು ಕುಡಿಯುವುದರಿಂದ ಈ ಆಕ್ಸಾಲೇಟ್ ಸಂಗ್ರಹವಾಗದೇ ವಿಸರ್ಜಿಸಲ್ಪಡುತ್ತದೆ.
ಕಿಡ್ನಿಸ್ಟೋನ್‍ಗೆ ಇನ್ನೊಂದು ಮುಖ್ಯ ಕಾರಣ ಹೆಚ್ಚು ಉಪ್ಪಿನ ಸೇವನೆ. ನಮಗೆ ಪ್ರತಿನಿತ್ಯ 2-3ಗ್ರಾಂ ಉಪ್ಪು ಸಾಕು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಹೇಳಿದೆ. ಆದರೆ ನಾವು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ 10-15ಗ್ರಾಂ ಉಪ್ಪನ್ನು ಸೇವಿಸುತ್ತಿದ್ದೇವೆ. ಈ ಹೆಚ್ಚು ಉಪ್ಪಿನ ಸೇವನೆಯಿಂದಾಗಿ ದೇಹವು ಹೆಚ್ಚು ಆಮ್ಲೀಯ (ಆ್ಯಸಿಡಿಕ್) ರಕ್ತದಲ್ಲಿ ಉಂಟಾಗುತ್ತದೆ. ಈ ಆಮ್ಲೀಯತೆಯನ್ನು ಸರಿದೂಗಿಸಲು, ದೇಹವನ್ನು ಸಮತೋಲನಗೊಳಿಸಲು ನಮ್ಮ ಮೂಳೆಗಳಿಂದ ಹೆಚ್ಚೆಚ್ಚು ಕ್ಯಾಲ್ಶಿಯಂ ರಕ್ತಕ್ಕೆ ಬರುತ್ತದೆ. ರಕ್ತದಲ್ಲಿ ಹೆಚ್ಚಾದ ಕ್ಯಾಲ್ಸಿಯಂ ಮೂತ್ರಕೋಶದಲ್ಲಿ ಸರಿಯಾಗಿ ವಿಸರ್ಜನೆಯಾಗದೇ ಸಂಗ್ರಹವಾಗಿ ಕಿಡ್ನಿಸ್ಟೋನ್‍ಗೆ ಕಾರಣವಾಗುತ್ತದೆ. ಅದೇ ರೀತಿ ಹೆಚ್ಚಿನ ಸಕ್ಕರೆಯೂ ಸಹ ಕಿಡ್ನಿಸ್ಟೋನ್‍ಗೆ ಕಾರಣ ಎಂಬುದಾಗಿ ಇಂದಿನ ಸಂಶೋಧನೆಗಳು ಸಾಬೀತುಪಡಿಸಿವೆ.
Also Read: ಕೆಂಪು ಮಾಂಸ ಪ್ರಿಯರೆ? ಕಿಡ್ನಿ ಜೋಕೆ!
ಕಿಡ್ನಿಸ್ಟೋನ್‍ಗೆ ಪರಿಹಾರ
ಹೇಗೆ ಮಣ್ಣಿನಲ್ಲಿ ಆಮ್ಲೀಯತೆ ಜಾಸ್ತಿ ಆದಾಗ ಸುಣ್ಣವನ್ನು (ಕ್ಯಾಲ್ಸಿಯಂ) ಅನ್ನು ಹಾಕಿ ಮಣ್ಣನ್ನು ಸಮತೋಲನಗೊಳಿಸುತ್ತಾರೆಯೋ ಅದೇ ರೀತಿ ರಕ್ತದಲ್ಲಿ ಆಮ್ಲೀಯತೆ ಜಾಸ್ತಿ ಆದಾಗ ಅದನ್ನು ಸರಿದೂಗಿಸಲು ಎಲುಬಿನಲ್ಲಿನ ಕ್ಯಾಲ್ಶಿಯಂ ರಕ್ತಕ್ಕೆ ಬರುತ್ತದೆ. ಈ ಕ್ಯಾಲ್ಶಿಯಂ ಮೂತ್ರದ ಮೂಲಕ ವಿಸರ್ಜನೆಯಾಗುವ ಸಂದರ್ಭದಲ್ಲಿ ಕೆಲವರಲ್ಲಿ ಹರಳಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದನ್ನು ಕಿಡ್ನಿಸ್ಟೋನ್ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಕಂಡುಬರುತ್ತಿರುವ ಕ್ಯಾಲ್ಸಿಯಂ ಅಕ್ಸಾಲೇಟ್ ಹರಳುಗಳಿಗೆ ಮೂಲಕಾರಣ ನಾವು ಹೆಚ್ಚು ಹೆಚ್ಚು ಸೇವಿಸುತ್ತಿರುವ ಕರಿದ ಆಹಾರ, ಬೇಕರಿ ಆಹಾರ, ಉಪ್ಪಿನಕಾಯಿ, ಉಪ್ಪು ಇವು ಆಮ್ಲೀಯತೆ ಹೆಚ್ಚಿಸಿ ಎಲುಬಿನಿಂದ ಕ್ಯಾಲ್ಸಿಯಂ ರಕ್ತಕ್ಕೆ ಬರುವಂತೆ ಮಾಡಿ ಇದು ವಿಸರ್ಜನೆಯಲ್ಲಿ ಸಮಸ್ಯೆಯಾಗಿ ಕಲ್ಲುಗಳಾಗಿ ಮಾರ್ಪಡುತ್ತದೆ. ಇದಾಗಲು ಅಕ್ಸಲೇಟ್ ಬೇಕು. ಇದು ಹೆಚ್ಚಾಗಿ ಪಾಲಕ್, ಟೊಮ್ಯಾಟೊಗಳಲ್ಲಿ ಇದೆ. ಆದುದರಿಂದ ಪದೇ ಪದೇ ಮೂತ್ರಕೋಶದಲ್ಲಿ ಕಲ್ಲುಗಳ ಸಮಸ್ಯೆಯಿಂದ ಬಳಲುವವರು ಅಕ್ಸಲೇಟ್ ಹೆಚ್ಚಿರುವ ಆಹಾರ ಕಡಿಮೆ ಮಾಡಬೇಕು.
1. ಮೂತ್ರಕೋಶದಲ್ಲಿ ಕಲ್ಲು ಇರುವಾಗ ಆ ಕಲ್ಲನ್ನು ಕರಗಿಸುವ ಅಥವಾ ಒಡೆಯುವ ಅಥವಾ ಅದು ಅತೀ ಚಿಕ್ಕದಾಗಿದ್ದಲ್ಲಿ ಅದನ್ನು ವಿಸರ್ಜಿಸುವ ಕಾರ್ಯ ಆಗಬೇಕು. ಅದಕ್ಕೆ ಹೆಚ್ಚು ದ್ರವಾಹಾರದ ಬಳಕೆ ಮಾಡಬೇಕು.
2. ಸಿಟ್ರಿಕ್ ಆಮ್ಲ ಅಥವಾ ಸಿಟ್ರೇಟ್ ಅಂಶವು ಕ್ಯಾಲ್ಸಿಯಂ ಹಾಗೂ ಅಕ್ಸಾಲೇಟ್‍ಗಳು ಕೂಡಿ ಕ್ಯಾಲ್ಸಿಯಂ ಅಕ್ಸಾಲೇಟ್ ಕಲ್ಲು ತಯಾರಾಗುವುದನ್ನು ತಡೆಯುತ್ತದೆ. ಕ್ಯಾಲ್ಸಿಯಂ ಹಾಗೂ ಆಕ್ಸಾಲೇಟ್‍ಗಳ ಜೋಡುವಿಕೆಯಿಂದ ಕಿಡ್ನಿ ಸ್ಟೋನ್ (ಕ್ಯಾಲ್ಸಿಯಂ ಅಕ್ಸಾಲೇಟ್ ಸ್ಟೋನ್) ಉಂಟಾಗುವುದರಿಂದ ತಡೆಯನ್ನುಂಟುಮಾಡಲು ಸಿಟ್ರಿಕ್ ಆಮ್ಲವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಮಾಡಬೇಕು. ನಿಂಬು ಇದಕ್ಕೆ ಸಹಕಾರಿ. ಎಸಿಡಿಟಿ ಸಮಸ್ಯೆ ಇದ್ದಲ್ಲಿ ಎಚ್ಚರ ವಹಿಸಬೇಕು.
3. ಬಾಳೆದಿಂಡಿನ ರಸ ಹೆಚ್ಚು ಸಹಾಯಕಾರಿ. ಒಮ್ಮೆಲೇ 3-4 ಗ್ಲಾಸ್ ಬಾಳೆದಿಂಡಿನ ರಸವನ್ನು ಕುಡಿಯಬೇಕು. ಬಾರ್ಲಿ ನೀರು ಉತ್ತಮ.
4. ಓಡುವುದು ಕಿಡ್ನಿ ಸ್ಟೋನ್ ತೊಂದರೆಯನ್ನು ನಿವಾರಿಸಲು ಇರುವ ಅತ್ಯುತ್ತಮ ಉಪಾಯ. ವ್ಯಾಯಾಮವೂ ಸಹ ಒಳ್ಳೆಯದು. ಸ್ಕಿಪ್ಪಿಂಗ್ ಸಹ ಉತ್ತಮ. ಇದು ದೇಹದಲ್ಲಿ ಬ್ಲಾಕ್ ಉಂಟಾಗುವುದನ್ನು ತಡೆಯುತ್ತದೆ. ಹಣ್ಣಿನ ಸೇವನೆ ಅಥವಾ ಹಣ್ಣಿನ ಜ್ಯೂಸ್ ಸಹಾಯಕಾರಿ.
5. 100 ಗ್ರಾಂ ನುಗ್ಗೆ ಗಿಡದ ಬೇರನ್ನು ತೆಗೆದುಕೊಂಡು 3-4 ಗ್ಲಾಸ್ ನೀರನ್ನು ಹಾಕಿ ಅದು ಅರ್ಧದಷ್ಟಾಗುವವರೆಗೆ ಕುದಿಸಬೇಕು. ಇದನ್ನು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ಕುಡಿಯುತ್ತ ಬಂದರೆ ಕಿಡ್ನಿ ಸ್ಟೋನ್ ಕಡಿಮೆಯಾಗುತ್ತದೆ.
6. ನಮ್ಮ ಆಹಾರ ಪದ್ಧತಿಯಲ್ಲಿ ಉಪ್ಪನ್ನು ಕಡಿಮೆ ಮಾಡಿ. ಉಪ್ಪಿನಕಾಯಿ ತ್ಯಜಿಸಿ. ಸಕ್ಕರೆಯನ್ನೂ ಸಹ ಕಡಿಮೆ ಮಾಡಬೇಕು. ಸಾಪ್ಟ್ ಡ್ರಿಂಕ್ಸ್‍ಗಳ ಸೇವನೆ ಬೇಡ.
ಹೀಗೆ ಈ ಎಲ್ಲವುಗಳನ್ನು ಗಮನಿಸಿ ನಮ್ಮ ಆಹಾರ ಪದ್ಧತಿಯನ್ನು ಹಾಗೂ ಜೀವನಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಒಮ್ಮೆಲೇ ಹೆಚ್ಚು ದ್ರವಾಹಾರವನ್ನು (ಬಾರ್ಲಿನೀರು, ಬಾಳೆದಿಂಡಿನ ರಸ ಇತ್ಯಾದಿ) ಇವುಗಳನ್ನು ಸೇವಿಸುವುದರಿಂದ ಮೂತ್ರಕೋಶದಲ್ಲಿ ಒತ್ತಡ ಉಂಟಾಗಿ ಕಲ್ಲು ವಿಸರ್ಜಿಸಲ್ಪಡುತ್ತದೆ. ನಮ್ಮ ಜೀವನ ಪದ್ಧತಿ, ಆಹಾರ ಪದ್ಧತಿಯಲ್ಲಿ ನೀರಿನ ಬಳಕೆ ಹೆಚ್ಚು ಮಾಡಬೇಕು. ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯುವುದು ನಮ್ಮ ಹಲವಾರು ತೊಂದರೆಗಳನ್ನು, ರೋಗಗಳನ್ನು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ. ಆರೋಗ್ಯವೃದ್ಧಿಗೆ ಕಾರಣವಾಗುತ್ತದೆ. ಮೂತ್ರಕೋಶದಲ್ಲಿ ಕಲ್ಲು ಉಂಟಾಗದಿರಲು ಹಾಗೂ ಇದ್ದರೆ ಅದಕ್ಕೆ ಪರಿಹಾರವಾಗಿ ನೀರು ಬೇಕು. ದ್ರವಾಹಾರವನ್ನು ಹೆಚ್ಚುಗೊಳಿಸಿಕೊಳ್ಳಬೇಕು.
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com