ಕೆಂಪು ಮಾಂಸ ಪ್ರಿಯರೆ?  ಕಿಡ್ನಿ ಜೋಕೆ!

ಮಾಂಸಾಹಾರ ಇಷ್ಟವಾದವರಿಗೆ ದೇಹಕ್ಕೆ ಅತ್ಯಧಿಕವಾಗಿ ಪ್ರೋಟೀನ್ ಪೂರೈಸುವ ಕಣಜವೇ ಅದು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ವೈದ್ಯಕೀಯ ಮೂಲಗಳು ನಡೆಸಿದ ಸುದೀರ್ಘ ಸಂಶೋಧನೆಯ ಫಲವಾಗಿ ಕೆಂಪು ಮಾಂಸದ ಭಕ್ಷಣೆ ಮೂತ್ರಪಿಂಡಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತದೆಂಬ ಅಚ್ಚರಿಯ ವಿಷಯ ಪ್ರಕಟವಾಗಿದೆ. ದೇಹಕ್ಕೆ ಅಗತ್ಯವಾದ ಪ್ರೋಟೀನ್ ಗಳಿಕೆಗೆ ಸಸ್ಯಮೂಲಗಳನ್ನೇ ಸಾಕಷ್ಟು ಅವಲಂಬಿಸಿ ಎನ್ನುವುದರ ಮೂಲಕ ಈ ತಜ್ಞರು ಸಸ್ಯಾಹಾರದ ಮಹತ್ವವನ್ನು ಎತ್ತಿ ಹಿಡಿಯುತ್ತಿದ್ದಾರೆ.

ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಸ್ಟೀ ಹೊಕ್ ಸಾರ್ವಜನಿಕ ಆರೋಗ್ಯ ಶಾಲೆಯಲ್ಲಿ ಈ ಶಂಶೋಧನಾ ಫಲಿತಾಂಶ ಹೊರಬಿದ್ದಿದೆ. ಡಾ. ವೂನ್ ಪ್ಯುಯ ಕೊಹ್ ಅವರ ತಂಡ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ಬಗೆಗೆ ಈ ಶೋಧನೆಯನ್ನು ನಡೆಸಿತ್ತು. ಹದಿನೈದೂವರೆ ವರ್ಷಗಳ ಕಾಲ ನಡೆದ ಸುದೀರ್ಘ ಸಮಯದ ಪರೀಕ್ಷೆಗಾಗಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 63257 ಚೀನೀ ವಯಸ್ಕರನ್ನು ಆರಿಸಿಕೊಳ್ಳಲಾಗಿತ್ತು. ಅಚ್ಚರಿಯೆಂದರೆ ಇವರಲ್ಲಿ ಶೇ. 97 ಮಂದಿಯೂ ಅಧಿಕವಾಗಿ ಹಂದಿಯ ಮಾಂಸ ಸೇವಿಸುವ ಪರಿಪಾಠವಿರಿಸಿಕೊಂಡಿದ್ದರು. ಉಳಿದವರು ಕೆಂಪುಮಾಂಸದ ಬದಲು ಕೋಳಿ, ಮೀನು ಬಳಸುತ್ತಿದ್ದರು. ಅವರಲ್ಲಿ ರೋಗದ ತೀವ್ರತೆಯೂ ಕಡಮೆ ಕಂಡುಬಂದಿತು. ಮೂತ್ರಪಿಂಡ ವೈಫಲ್ಯಕ್ಕೂ ಕೆಂಪು ಮಾಂಸಕ್ಕೂ ಇರುವ ಸಮೀಪ ಸಂಬಂಧವನ್ನು ಗುರುತಿಸಲು ಇದು ಮೊದಲ ಮೆಟ್ಟಿಲಾಯಿತು. ಈ ದಿಸೆಯಲ್ಲಿ ಮುಂದುವರೆದ ಪರೀಕ್ಷೆಗಳು ಅನುಮಾನವನ್ನು ನಿಸ್ಸಂದೇಹಗೊಳಿಸಿದವು.

ಕೆಂಪು ಮಾಂಸದ ಭಕ್ಷಣೆ ವಿಪರೀತವಾಗಿದ್ದ ಈ ರೋಗಿಗಳಲ್ಲಿ ಹೆಚ್ಚಿನವರು ಡಯಾಲಿಸಿಸ್ ಇಲ್ಲದೆ ಬದುಕಲು ಸಾಧ್ಯವಿರಲಿಲ್ಲ. ಕೆಲವರಿಗೆ ಕಿಡ್ನಿ ಕಸಿ ಅನಿವಾರ್ಯವಾಗಿತ್ತು. ಅಂಥವರಲ್ಲಿ ಈ ಆಹಾರ ಕ್ರಮದ ಬದಲಾವಣೆಗೆ ಸೂಚಿಸಿದ ಪರಿಣಾಮ ಶೇ. 49ರಷ್ಟು ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತೆಂದು ಡಾ. ಕೊಹ್ ಹೇಳಿದ್ದಾರೆ. ಈ ವ್ಯಾಧಿಯ ಸಮಸ್ಯೆ ಅಭಿವೃದ್ಧಿಶೀಲ ದೇಶಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದೆ. 20 ಮಿಲಿಯನ್ ಅಮೆರಿಕನ್ ಜನ ಇಂದು ಇದರಿಂದಲೇ ಬಳಲುತ್ತಿದ್ದಾರೆ. ಮೂತ್ರಪಿಂಡದ ವೈಫಲ್ಯವೊಂದೇಅಲ್ಲ, ಬೇರೆ ವಿಧದ ಹಲವು ಸಮಸ್ಯೆಗಳು ಅವರನ್ನು ಬಾಧಿಸುತ್ತ ಬಂದಿವೆ. ಇವರಲ್ಲಿ ಶೇ. 60ರಷ್ಟು ಮಂದಿ ದಿನದಲ್ಲಿ ನೂರು ಗ್ರಾಮ್‍ಗಿಂತ ಅಧಿಕವಾಗಿ ಕೆಂಪುಮಾಂಸವನ್ನು ತಿನ್ನುವವರು. ಕೆಂಪುಮಾಂಸ ತಿನ್ನದ ದೇಶಗಳಿಗೆ ಹೋಲಿಸಿದರೆ ಅದರ ಉಪಯೋಗವಿರುವ ದೇಶಗಳಲ್ಲಿ ಕಿಡ್ನಿ ವೈಫಲ್ಯದ ಪ್ರಮಾಣ ಶೇ. 40ಕ್ಕಿಂತ ಹೆಚ್ಚಾಗಿದೆ ಎಂಬುದು ಹೊಸ ಶೋಧನೆಗಳು ಹೇಳುವ ವಿಚಾರ.

ಅಮೆರಿಕದ ನೆಫ್ತಾಲಜಿ ಸೊಸಾಯಿಟಿಯ ವಿಜ್ಞಾನಿಗಳು ಕೂಡ ಈ ದಿಸೆಯಲ್ಲಿ ಅಧ್ಯಯನ ಮಾಡಿದ್ದಾರೆ. ಅವರೂ ಹೇಳುವ ಪ್ರಕಾರ ಕೆಂಪು ಮಾಂಸ ಖಂಡಿತ ನಿರಪಾಯಕರವಲ್ಲ, ಅದು ಮೂತ್ರಪಿಂಡವನ್ನು ಹದಗೆಡಿಸಲು ಸಮರ್ಥವಾದ ಆಹಾರವೇ ಆಗಿದೆ. ಡಯಾಲಿಸಿಸ್ ತಾಪತ್ರಯ ಬೇಡವೆಂದಾದರೆ ಈ ಆಹಾರದಿಂದ ದೂರವಿರಿ ಎಂಬುದು ಅವರ ಸಲಹೆ. ಈ ಸೊಸಾಯಿಟಿಯು 1966ರಿಂದಲೂ ಮೂತ್ರಪಿಂಡ ಸಮಸ್ಯೆ ನಿವಾರಣೆಯ ಬಗೆಗೆ ಅಧ್ಯಯನ ಮಾಡಿಕೊಂಡು ಬಂದಿದ್ದು ಜನರ ಕಣ್ತೆರೆಸುವ ಶಿಕ್ಷಣ ಕ್ರಮಗಳನ್ನು ರೂಪಿಸಿದೆ. 112 ದೇಶಗಳ 11 ಸಾವಿರ ಸದಸ್ಯರು ಅದರೊಂದಿಗಿದ್ದಾರೆ.

ಮುಂದುವರೆದ ಅಧ್ಯಯನಗಳ ಹೇಳುವ ಪ್ರಕಾರ ಕೆಂಪು ಮಾಂಸದ ಸೇವನೆ ಕೇವಲ ಒಂದು ಸಮಸ್ಯೆಯ ಹುಟ್ಟಿಗಷ್ಟೇ ಕಾರಣವಲ್ಲ. ಕರುಳಿನ ಚಯಾಪಚಯಕ್ಕೆ ಅನುಕೂಲವಾದ ಬ್ಯಾಕ್ಟೀರಿಯಾಗಳನ್ನು ಅದು ನಾಶ ಮಾಡಬಹುದು. ಅದರಿಂದ ಹೃದಯದ ಸ್ನಾಯುಗಳಿಗೆ ಪೋಷಕಾಂಶಗಳು, ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯುಂಟಾಗಬಹುದು. ಆಗ ಸಾಕಷ್ಟು ರಕ್ತವನ್ನು ತಳ್ಳಲಾಗದೆ ಹೃದಯವು ವಿಫಲಗೊಂಡು ಸಾವು ಬರಬಹುದು ಎಂದು ಅವು ಹೇಳುತ್ತವೆ. ಕ್ರೀಡೆಯಂತಹ ಶ್ರಮದಾಯಕ ಕೆಲಸಗಳನ್ನು ಮಾಡುವ 30ರೊಳಗಿನ ವಯಸ್ಸಿನವರ ಹೃದಯಕ್ಕೆ ಇದರಿಂದ ಅಷ್ಟೊಂದು ಹಾನಿಯಾಗದಿದ್ದರೂ ವಯಸ್ಸಾದವರಿಗೆ ಮಾಂಸದಲ್ಲಿರುವ ಅನಪೇಕ್ಷಿತ ಅಂಶಗಳು ಹಾನಿ ತರುವುದು ನಿಶ್ಚಯವೆಂದೇ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ ಮೀಸಲಾದ ಲೀಸೆಸ್ಟರ್ ಯುನಿವರ್ಸಿಟಿಯ ಹೃದಯ ವಿಜ್ಞಾನ ವಿಭಾಗದ ಆರೋಗ್ಯ ಶಾಸ್ತ್ರಜ್ಞ ಪ್ರೊಫೆಸರ್ ಟೋರು ಸುಜಿಕಿಯವರು ಹೇಳುತ್ತಾರೆ.

ಪ್ರತಿ 384 ಹೃದಯಾಘಾತ ಸಂದರ್ಭಗಳಲ್ಲಿ ಶೇ. 72 ಮಂದಿ ಚಿಕಿತ್ಸಾಲಯ ಸೇರುವ ಮೊದಲೇ ಅಸು ನೀಗುತ್ತಾರೆ. ಇವರಲ್ಲಿ ತೀವ್ರವಾಗಿ ಮಾಂಸ ಭಕ್ಷಣೆಯ ಹವ್ಯಾಸ ಅರ್ಧಕ್ಕಿಂತ ಹೆಚ್ಚು ಮಂದಿಗೆ ಕಂಡುಬಂದಿದೆಯೆಂದು ಈ ವರದಿಗಳು ಹೇಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ 2015ರ ವರದಿ ಕೂಡ ಕೆಂಪು ಮಾಂಸ ಮತ್ತು ಕರುಳಿನ ಕ್ಯಾನ್ಸರ್ ರೋಗದ ಸಂಭಾವ್ಯ ಕೊಂಡಿಯ ಬಗೆಗೂ ಎಚ್ಚರಿಸಿದೆ. ತಂಬಾಕು ಸೇವನೆಯಿಂದ ಶೇ. 86ರಷ್ಟು ಕ್ಯಾನ್ಸರ್ ಬರುತ್ತದಾದರೆ ಶೇ. 21ರಷ್ಟು ಪ್ರಸಂಗಗಳಲ್ಲಿ ಕೆಂಪು ಮಾಂಸವೂ ಈ ಮಾರಣಾಂತಿಕ ರೋಗಕ್ಕೆ ಮೂಲವಾಗಬಹುದೆಂಬುದನ್ನು ಒತ್ತಿ ಹೇಳಿದೆ. ಅತಿ ಉಷ್ಣದಲ್ಲಿ ಮಾಂಸ ಬೇಯುವುದು ಕೂಡ ಇಂತಹ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಮೂಲವೆಂಬುದು ವಿಶ್ವಸಂಸ್ಥೆಯ ನಿಲುಮೆಯಾಗಿದೆ. ಶೇ. 18ರಷ್ಟು ಕೊಲೆಸ್ಟರಲ್ ಕ್ಯಾನ್ಸರ್ ಕೂಡ ಇದೇ ಮಾಂಸಾಹಾರದ ಕೊಡುಗೆ ಎಂಬುದು ವೈದ್ಯ ತಜ್ಞರ ಅಭಿಮತ.

ಹೋಸ್ಟನ್‍ನ ಮೆಡಿಕಲ್ ಕಾಲೇಜಿನ ನೆಫ್ತಾಲಜಿ ವಿಣಾಗದ ಪ್ರಾಧ್ಯಾಪಕ, ಸಂಶೋಧಕ ಡಾ. ವಿಲಿಯಮ್ ಮಿಚ್ ಬಾಯ್ಲರ್ ಕಡಮೆ ಪ್ರೋಟೀನ್ ತಿಂದಷ್ಟೂ ನಾವು ಹಲವು ರೋಗಗಳಿಂದ ದೂರವಿರಲು ಸಾಧ್ಯ ಎನ್ನುತ್ತಾರೆ. ಸಾಸೇಜ್, ಬೇಕನ್. ಉಪ್ಪು ಹಾಕಿದ ಗೋಮಾಂಸದಂತಹ ಸಂಸ್ಕರಿತ ಮಾಂಸಾಹಾರಗಳು ಕಿಡ್ನಿಯನ್ನು ಕೆಡಿಸುತ್ತವೆ ಎಂದು ಪ್ರಕಟಿಸಿದ್ದಾರೆ. ಹಾಗಾದರೆ ಪ್ರೊಟೀನ್ ಕೊರತೆ ನಿವಾರಿಸಲು ಮಾಂಸಾಹಾರ ಪ್ರಿಯರು ಏನು ತಿನ್ನಬಹುದು? ಎಂಬ ಪ್ರಶ್ನೆಗೆ ಇವರು ನೀಡುವ ಸಲಹೆಯೆಂದರೆ ಕೋಳಿಯ ಮಾಂಸ ಈ ದೃಷ್ಟಿಯಲ್ಲಿ ಶೇ. 62ರಷ್ಟು ನಿರಪಾಯಕರ. ಮೀನು, ಚಿಪ್ಪು, ಸೋಯಾ, ಕಾಳುಗಳು, ಮೊಟ್ಟೆ, ಡೈರಿ ಉತ್ಪನ್ನಗಳಂತಹ ಸಸ್ಯಮೂಲದ ಪ್ರೋಟೀನ್‍ಯುಕ್ತ ಆಹಾರವನ್ನೇ ಅಧಿಕವಾಗಿ ಬಳಸಿ. ಕೆಂಪು ಮಾಂಸದಿಂದ ದೂರವಿದ್ದು ಮೂತ್ರಪಿಂಡವನ್ನು ರಕ್ಷಿಸಿಕೊಳ್ಳಿ. ಇಂಥ ಆಹಾರ ಪದ್ಧತಿಯಿಂದ ಮೂತ್ರಪಿಂಡದ ವೈಫಲ್ಯದಿಂದ ಸುರಕ್ಷಿತರಾಗಬಲ್ಲಿರಿ ಎಂದು ಅವರು ಹೇಳುತ್ತಾರೆ.

ಪ.ರಾಮಕೃಷ್ಣ ಶಾಸ್ತ್ರಿ
9483352306

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!