ಜೀರಿಗೆ ನೀರು ಅಥವಾ ಜಲಜೀರ ಸೇವನೆ – ಹತ್ತು ಹಲವು ರೋಗಗಳ ಶಮನ

ಜೀರಿಗೆ ನೀರು ಅಥವಾ ಜಲಜೀರ ಒಂದು ರೀತಿಯಲ್ಲಿ ಅಮೃತ ಸದೃಶ ನೀರು ಎಂದರೂ ತಪ್ಪಾಗಲಾರದು. ದೇಹದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಪ್ರಚೋದಿಸಿ ಶ್ವಾಸಕೋಶಗಳ, ಮೂತ್ರ ಪಿಂಡಗಳ ಆರೋಗ್ಯವೃದ್ಧಿಸಿ ಪಚನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಈ ಜಲಜೀರ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದ ಪ್ರತಿದಿನ ‘ಜಲಜೀರ’ ಸೇವನೆ ಮಾಡಿದರೆ ಹತ್ತು ಹಲವು ರೋಗ ಬರದಂತೆ ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.

jeera-neeru ಜೀರಿಗೆ ನೀರು ಅಥವಾ ಜಲಜೀರ ಸೇವನೆ - ಹತ್ತು ಹಲವು ರೋಗಗಳ ಶಮನ

ಜೀರಿಗೆ ಅಥವಾ ಕ್ಯೂಮಿನ್‍ಗೆ ನಮ್ಮ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಈ ಜೀರಿಗೆ ಪ್ರತಿ ಮನೆಯಲ್ಲೂ ಲಭ್ಯವಿದ್ದು, ಹತ್ತು ಹಲವು ಆರೋಗ್ಯಪೂರಕ ಗುಣವನ್ನು ಹೊಂದಿದೆ. ‘ಕುಮಿನಮ್ ಸಿಮಿನಮ್’ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಜೀರಿಗೆಗೆ ನಮ್ಮ ಅಡುಗೆ ಮನೆಯಲ್ಲಿ ವಿಶೇಷವಾದ ಸ್ಥಾನವಿದೆ. ಹೆಚ್ಚಿನ ಎಲ್ಲಾ ಅಡುಗೆ ತಯಾರಿಯಲ್ಲಿ ಈ ಜೀರಿಗೆಯನ್ನು ಪೂರ್ಣವಾಗಿ ಅಥವಾ ರುಬ್ಬಿದ ರೂಪದಲ್ಲಿ ಬಳಸಲಾಗುತ್ತದೆ. ಅತೀ ಕಡಿಮೆ ಸೋಡಿಯಂ, ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿರುತ್ತದೆ. ಮತ್ತು ಸೋಂಕು ನಿವಾರಕ, ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿಯಂತ್ರಿಸುವ ವಿಶೇಷ ಗುಣವನ್ನು ಜೀರಿಗೆ ಹೊಂದಿರುತ್ತದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಜಲಜೀರಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಜಲಜೀರವನ್ನು ಹೇಗೆ ತಯಾರಿಸಲಾಗುತ್ತದೆ?

ಒಂದು ಪಾತ್ರೆಯಲ್ಲಿ ಒಂದು ಕಪ್ ನೀರಿಗೆ ಒಂದು ಚಮಚ ಜೀರಿಗೆ ಪುಡಿ ಅಥವಾ ಇಡೀ ಜೀರಿಗೆ ಹಾಕಿ ಕುದಿಸಬೇಕು. ಹತ್ತು ನಿಮಿಷದ ಬಳಿಕ ಈ ನೀರನ್ನು ಸೋಸಿ, ಬಿಸಿಯಾಗಿಯೇ ಕುಡಿಯಬಹುದು. ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಈ ಜಲಜೀರವನ್ನು ಕುಡಿಯುವುದು ಅತೀ ಉತ್ತಮ ಎಂದು ತಿಳಿದು ಬಂದಿದೆ. ಕೆಲವರು ಜೀರಿಗೆಯನ್ನು ರಾತ್ರಿ ಹೊತ್ತು ಬಿಸಿ ನೀರಿಗೆ ಹಾಕಿ ಬೆಳಗ್ಗೆ ಎದ್ದ ಕೂಡಲೇ ಕುಡಿಯುತ್ತಾರೆ. ದಿನದ ಯಾವುದೇ ಹೊತ್ತಿನಲ್ಲಿಯೂ ಕುಡಿಯಬಹುದಾಗಿದೆ. ಈ ಜಲಜೀರದಲ್ಲಿರುವ ಸೋಂಕುನಾಶಕ ಮತ್ತು ತಂಪುಕಾರಕ, ಉರಿಯೂತ ನಿಯಂತ್ರಕ ಗುಣದಿಂದಾಗಿ ಮಕ್ಕಳು, ಹಿರಿಯರು, ಮಧ್ಯವಯಸ್ಕರು ಹೀಗೆ ಎಲ್ಲರೂ ಸೇವಿಸಬಹುದಾಗಿದೆ.

ಪ್ರಯೋಜನಗಳು?

1) ದೇಹವನ್ನು ತಂಪಾಗಿಸುತ್ತದೆ: ದೇಹಕ್ಕೆ ಉಷ್ಣವಾದರೂ ದೇಹ ತಂಪಾಗಿಸಲು ಜಲಜೀರ ಅತೀ ಉಪಯುಕ್ತ ಎಂದು ಸಾಬೀತಾಗಿದೆ.

2) ಜೀರ್ಣಕ್ರಿಯೆಗೆ ಸಹಕಾರಿ: ಜೀರಿಗೆಯಲ್ಲಿ ಹೆಚ್ಚಿನ ನಾರಿನಾಂಶ ಇರುವ ಕಾರಣ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

3) ತೂಕ ನಿಯಂತ್ರಣ: ದೇಹದಲ್ಲಿನ ವಿಷಕಾರಕ ಮತ್ತು ಜೈವಿಕ ಕ್ರಿಯೆಗಳಿಂದ ಉಂಟಾಗುವ ತ್ಯಾಜ್ಯಗಳನ್ನು ಹೊರಹಾಕಲು ಜಲಜೀರ ಬಹಳ ಉಪಯುಕ್ತ. ಜೀವಕೋಶಗಳ ಜೈವಿಕ ಕ್ರಿಯೆಗಳನ್ನು ಪಕ್ವವಾಗುತ್ತದೆ ಮತ್ತು ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಬೆಳಗ್ಗಿನ ಹೊತ್ತು ಜಲಜೀರಕ್ಕೆ ಒಂದು ಸ್ವಲ್ಪ ಲಿಂಬೆ ರಸ ಸೇರಿಸಿ ಕುಡಿಯುವುದು ಸೂಕ್ತ ಎನ್ನಲಾಗಿದೆ.

4) ಹಸಿವನ್ನು ಹೆಚ್ಚಿಸುತ್ತದೆ: ಜಲಜೀರದಲ್ಲಿರುವ ಜೀರ್ಣಕ್ಕೆ ಪೂರಕವಾದ ಕಿಣ್ವಗಳು ದೇಹದಲ್ಲಿನ ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೊಟೀನ್‍ಗಳ ಪಚನಕ್ರಿಯೆಗೆ ಸಹಕಾರ ನೀಡುತ್ತಾರೆ. ಹಸಿವನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಸುತ್ತದೆ.

5) ದೇಹದ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ: ಜೀರಿಗೆ ನೀರಿನಲ್ಲಿರುವ ಕಬ್ಬಿಣ, ಮ್ಯಾಂಗನೀಸ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ತಾಮ್ರ, ಸತು, ಪೊಟಾಸಿಯಂ ಹಾಗೂ ವಿಟಮಿನ್ A, C, E, K, B, B2 B5, B6  ನಿಂದಾಗಿ ದೇಹದ ರಕ್ಷಣಾ ವ್ಯವಸ್ಥೆ ವೃದ್ಧಿಸುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ ಜೀವಕೋಶಗಳನ್ನು ಕ್ರಿಯಾತ್ಮಕವಾಗಿ ಇಡಲು ಪ್ರಚೋದಿಸಿ ದೇಹದ ಆರೋಗ್ಯವನ್ನು ಕಾಯುತ್ತದೆ.

Please watch: ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

6) ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ: ಹೊಟ್ಟೆಯಲ್ಲಿ ಅಸಿಡಿಟಿ ತೊಂದರೆ, ಗ್ಯಾಸ್ಟ್ರಿಕ್ ಸಮಸ್ಯೆ, ಗ್ಯಾಸ್ ತೊಂದರೆ ಇರುವವರಿಗೆ ಜೀರಿಗೆ ನೀರು ರಾಮಬಾಣದಂತೆ ಪ್ರತಿ ದಿನ ಜಲಜೀರವನ್ನು ಕುಡಿಯುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು.

7) ಗಂಟಲು ಕೆರೆತ ಮತ್ತು ಶೀತ ನಿವಾರಕ: ಜಲಜೀರದಲ್ಲಿರುವ ರಾಸಾಯನಿಕಗಳು ಉರಿಯೂತ ಶಮನಕ್ಕಾಗಿ, ಸೋಂಕು ನಿವಾರಕ ಮತ್ತು ಶೀಂದ್ರ ನಿವಾರಕ ಗುಣದಿಂದಾಗಿ ಶೀತವನ್ನು ನಿಯಂತ್ರಿಸುತ್ತದೆ. ಗಂಟಲ ಕೆರೆತವನ್ನು ಶಮನಗೊಳಿಸುತ್ತದೆ ಉಗುರು ಬೆಚ್ಚಗಿನ ಜಲಜೀರದಿಂದ ಗಂಟಲು ಕಟ್ಟುವಿಕೆ ನಿಯಂತ್ರಿಸಲ್ಪಡುತ್ತದೆ. ಮೂಗು ಮತ್ತು ಗಂಟಲುಗಳಲ್ಲಿ ಸೇರಿಕೊಂಡು ದಪ್ಪಗಿನ ಮ್ಯೂಖಸ್ ದ್ರವವನ್ನು ಹೊರಹಾಕಲು ಜಲಜೀರ ಸಹಾಯ ಮಾಡುತ್ತದೆ.

8) ಮಧುಮೇಹ ನಿಯಂತ್ರಣ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ: ಖಾಲಿ ಹೊಟ್ಟೆಯಲ್ಲಿ ‘ಜಲಜೀರ’ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಡಯಾಬಿಟಿಸ್ –ಟೈಪ್ 2 ರೋಗಿಗಳಿಗೆ ಇದು ಬಹಳ ಉಪಯುಕ್ತ ಎಂದೂ ಸಾಬೀತಾಗಿದೆ. ಅದೇ ರೀತಿ ದೇಹದಲ್ಲಿನ ಹೆಚ್ಚಿದ ಕೊಲೆಸ್ಟ್ರಾಲ್ LDL ಮತ್ತು ಟ್ರೆಗ್ಗಾಸ್‍ರೈಟ್ ನಿಯಂತ್ರಣಕ್ಕೆ ಈ ಜಲಜೀರ ಪೂರಕ ಎಂದೂ ತಿಳಿದುಬಂದಿದೆ.

9) ಅಸ್ತಮಾ ಮತ್ತು ಎದೆಗೂಡಿನ ರೋಗ ನಿಯಂತ್ರಣ: ಕಫಗಟ್ಟುವುದನ್ನು ನಿಯಂತ್ರಿಸುವ ಶಕ್ತಿ ಜಲಜೀರಕ್ಕೆ ಇರುವ ಕಾರಣದಿಂದ ಅಸ್ತಮಾ ಮತ್ತು ಉಸಿರಾಟ ಸಮಸ್ಯೆ ಇರುವವರಿಗೆ ಜಲಜೀರ ಬಹಳ ಉತ್ತಮ ಎಂದೂ ತಿಳಿದುಬಂದಿದೆ.

10) ರಕ್ತಹೀನತೆಯನ್ನು ಪರಿಹರಿಸುತ್ತದೆ: ಜೀರಿಗೆ ಕಾಳುಗಳಲ್ಲಿ ಕಬ್ಬಿಣಾಂಶ ಇರುವ ಕಾರಣದಿಂದ ಹಿಮೋಗ್ಲೋಬಿನ್ ಮಟ್ಟ ವೃದ್ಧಿಸಿಕೊಳ್ಳಲು ಜೀರಿಗೆ ಕಾಳುಗಳ ಸೇವನೆ ಅಥವಾ ಜಲಜೀರ ಸೇವನೆ ಉತ್ತಮ.

ಕೊನೆಮಾತು: ಜೀರಿಗೆ ಇಡಿಯಾಗಿ ಜಗಿಯುವುದು ಅಥವಾ ಜೀರಿಗೆ ನೀರನ್ನು ಬಳಸುವುದರಿಂದ ನಮ್ಮ ದೇಹದ ಜೀವಕೋಶಗಳ ಚಯಾಪಚಯ ಕ್ರಿಯೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಹತ್ತು ಹಲವು ರೋಗಗಳನ್ನು ಶಮನಗೊಳಿಸುತ್ತದೆ ಎಂದು ಸಾಬೀತಾಗಿದೆ. ಅತೀ ಕಡಿಮೆ ಕ್ಯಾಲರಿ ಇರುವ ಈ ಜಲಜೀರ ಒಂದು ರೀತಿಯಲ್ಲಿ ಅಮೃತ ಸದೃಶ ನೀರು ಎಂದರೂ ತಪ್ಪಾಗಲಾರದು. ದೇಹದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಪ್ರಚೋದಿಸಿ ಶ್ವಾಸಕೋಶಗಳ, ಮೂತ್ರ ಪಿಂಡಗಳ ಆರೋಗ್ಯವೃದ್ಧಿಸಿ ಪಚನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಈ ಜಲಜೀರ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದ ಪ್ರತಿದಿನ ‘ಜಲಜೀರ’ ಸೇವನೆ ಮಾಡಿದರೆ ಹತ್ತು ಹಲವು ರೋಗ ಬರದಂತೆ ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ ಮತ್ತು ನೂರು ಕಾಲ ಸುಖವಾಗಿ ಬದುಕಬಹುದು.

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಮೊ : 98451 35787
drmuraleechoontharu@gmail.com
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!