ಅರಿತು ಬಳಸಿದರೆ ಹೊಟ್ಟೆಯ ಮಿತ್ರ ಅಜವಾನ್

ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ.  ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ

aritu-baḷasidare-hoṭṭeya-mitra-ajwainತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು. ಏಕೆಂದರೆ ಅಡುಗೆ ಮನೆಯಲ್ಲಿರುವ ಎಲ್ಲಾ ಪದಾರ್ಥಗಳು ಅದ್ಭುತ ಔಷಧಿ ಗುಣವನ್ನು ಹೊಂದಿರುವಂಥವು. ನಮ್ಮ ಹಿರಿಯರು ಕೇವಲ ರುಚಿಗಾಗಿಯಷ್ಟೇ ಅಲ್ಲದೇ ಆರೋಗ್ಯ ವೃದ್ಧಿಗಾಗಿ ಮತ್ತು ಬಹಳಷ್ಟು ಖಾಯಿಲೆಗಳು ಬರದಂತೆ ತಡೆಯುವ ಸಲುವಾಗಿ ಈ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸುತ್ತಿದ್ದರು. ಅಂತಹ ಒಂದು ಅದ್ಭುತ ಔಷಧಿ ದ್ರವ್ಯವಾದ ಅಜವಾನ್ ಅಥವಾ ಓಮಿನ ಬಗ್ಗೆ ಇಂದು ತಿಳಿದುಕೊಳ್ಳೋಣ.

ಇದಕ್ಕೆ ದೀಪನ ಮತ್ತು ಪಾಚನ ಗುಣಗಳಿವೆ ಅಂದರೆ ಜಠರಾಗ್ನಿಯನ್ನು ದೀಪ್ತಗೊಳಿಸುವ ಗುಣ ಮತ್ತು ಜೀರ್ಣವಾಗದೇ ಉಳಿದಿರುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಪಚನ ಮಾಡುವ ಗುಣ ಇದಕ್ಕಿದೆ ಎಂದರ್ಥ. ಈ ಎರಡು ಗುಣಗಳಿರುವ ಆಹಾರ ಅಥವಾ ಔಷಧವನ್ನು ಸೇವಿಸಿದರೆ ಅಜೀರ್ಣವಾಗಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿಯೇ ಹಿರಿಯರು ಜೀರ್ಣಕ್ಕೆ ಕಷ್ಟಕರವಾದ ಪದಾರ್ಥಗಳನ್ನು ತಯಾರಿಸುವಾಗ ಅಜವಾನದ ಬಳಕೆಯನ್ನು ತಪ್ಪದೇ ಮಾಡುತ್ತಿದ್ದರು. ನಮ್ಮ ಬಹುತೇಕ ಖಾಯಿಲೆಗಳಿಗೆ ಹೊಟ್ಟೆಯೇ ಮೂಲ. ಹಾಗಾಗಿ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ಅಜವಾನ್ ತುಂಬಾ ಸಹಕಾರಿ.

ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ. ಬಾಯಿ ರುಚಿಯನ್ನು ಹೆಚ್ಚಿಸುವುದಲ್ಲದೇ ತೂಕ ಕಡಿಮೆ ಮಾಡುವಲ್ಲಿಯೂ ಕೂಡ ಇದು ಸಹಕಾರಿ. ಹೊಟ್ಟೆಯ ಉಬ್ಬರ, ಅಜೀರ್ಣದ ಕಾರಣದಿಂದಾಗಿ ಆಗುವ ಮಲಬದ್ಧತೆ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳಲ್ಲಿ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಎಷ್ಟೋ ಬಾರಿ ಹೊಟ್ಟೆಯ ಕಾರಣದಿಂದಾಗಿಯೇ ಮೈ ಕೈ ನೋವಿನಂತಹ ತೊಂದರೆಗಳು ಕಾಡುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಈ ಅಜ್ವಾನ್ ಅತ್ಯಂತ ಉಪಕಾರಿ.

ಹೃದಯ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಅದನ್ನು ಉತ್ತೇಜಿಸುವ ಕಾರ್ಯವನ್ನು ಅಜ್ವಾಯನ್ ಮಾಡುತ್ತದೆ. ಕಪ ದೋಷವನ್ನು ನಿಯಂತ್ರಿಸುವ ಗುಣವಿರುವ ಕಾರಣ ಅಸ್ತಮಾ, ಬಹುದಿನಗಳಿಂದ ಕಾಡುತ್ತಿರುವ ಕೆಮ್ಮು ಮುಂತಾದ ತೊಂದರೆಗಳಲ್ಲಿ ಅಜವಾನಿನ ಪುಡಿ, ಹಿಪ್ಪಲಿ ಪುಡಿಗಳನ್ನು ಅರ್ಧರ್ಧ ಚಮಚ ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಹಾಕಿ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ. ಉರಿಯುತ್ತಿರುವ ಕೆಂಡಕ್ಕೆ ಅರಿಶಿನ ಮತ್ತು ಅಜವಾನಿನ ಪುಡಿಗಳನ್ನು ಹಾಕಿ ಬರುವ ಹೊಗೆಯನ್ನು ಸೇವಿಸಿದರೂ ಶ್ವಾಸಂಗವ್ಯೂಹಕ್ಕೆ ಸಂಬಂಧಿಸಿದ ಹಲವು ತೊಂದರೆಗಳು ತಕ್ಷಣಕ್ಕೆ ಹತೋಟಿಗೆ ಬರುತ್ತವೆ. ಮೂತ್ರ ಪ್ರವೃತ್ತಿಯನ್ನು ಉತ್ತೇಜಿಸುವ ಗುಣವಿರುವ ಕಾರಣ ಮೂತ್ರತಡೆ ಇದ್ದಾಗ ಅದರಲ್ಲಿಯೂ ವಿಶೇಷವಾಗಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಂತಾಗಿ ಮೂತ್ರ ಸರಾಗವಾಗಿ ವಿಸರ್ಜನೆ ಆಗದಿದ್ದಾಗ ಇದರ ಕಷಾಯವನ್ನು ಸೇವಿಸಿದರೆ ಸಹಾಯವಾಗುತ್ತದೆ.

ಜ್ವರವಿದ್ದಾಗ ಬಾಯಿ ರುಚಿ ಬಹುತೇಕವಾಗಿ ಕಡಿಮೆ ಆಗುತ್ತದೆ. ಹಾಗಾಗಿ ಜ್ವರ, ಬಾಯಿ ರುಚಿ ಇಲ್ಲದಿರುವಿಕೆ, ಮೈಕೈ ನೋವು, ಅಜೀರ್ಣದ ತೊಂದರೆಗಳು ಕಾಡುತ್ತಿದ್ದಾಗ ಧನಿಯಾ, ಶುಂಠಿ, ಜೀರಿಗೆ ಮತ್ತು ಅಜವಾನಿನ ಕಷಾಯವನ್ನು ಆಗಾಗ ಕುಡಿಯುತ್ತಿರುವುದರಿಂದ ಜ್ವರದಿಂದ ಬಳಲುತ್ತಿರುವವರಿಗೆ ತುಂಬಾ ಅನುಕೂಲವಾಗುತ್ತದೆ. ಪದೇ ಪದೇ ಹೊಟ್ಟೆ ಉಬ್ಬರ, ಅಜೀರ್ಣ, ಗ್ಯಾಸ್ ತುಂಬಿಕೊಂಡಂತೆನಿಸುವುದು, ಹೊಟ್ಟೆಯುಬ್ಬರ ಆದಾಗ ಮೈಕೈ ನೋವು ಬರುವುದು ಮುಂತಾದ ತೊಂದರೆಗಳನ್ನು ಅನುಭವಿಸುತ್ತಿರುವವರು ಪ್ರತಿ ಬಾರಿ ಊಟವಾದ ನಂತರ ಒಂದು ಚಿಟಿಕೆಯಷ್ಟು ಅಜವಾನನ್ನು ತೆಗೆದುಕೊಂಡು ಜಗಿದು ನುಂಗಬೇಕು.

ಉಷ್ಣ-ತೀಕ್ಷ್ಣ ಗುಣವನ್ನು ಹೊಂದಿರುವ ಅಜ್ವಾಯನ್ ಹೆಚ್ಚು ಸೇವಿಸಿದರೆ ಪಿತ್ತದೋಷವನ್ನು ಹೆಚ್ಚಿಸುತ್ತದೆ. ಇದು ಶುಕ್ರ ಧಾತುವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಹಾಗಾಗಿ ಜೀರ್ಣಕ್ರಿಯೆಗೆ ಅನುಕೂಲಕರವೆಂದು ಮನಸ್ಸಿಗೆ ಬಂದಂತೆ ಇದನ್ನು ಸೇವಿಸುವುದು ಸರಿಯಲ್ಲ. ಹೆಚ್ಚೆಂದರೆ ದಿನಕ್ಕೆ 3 ಗ್ರಾಂ ನಷ್ಟು ಅಜ್ವಾನನ್ನು ಸೇವಿಸಬಹುದು.

ಒಟ್ಟಿನಲ್ಲಿ ಅರಿತು ಬಳಸಿದರೆ ವಾತ, ಕಫ, ಅಜೀರ್ಣ, ಅಗ್ನಿಮಾಂದ್ಯದಂತಹ ಹಲವು ಖಾಯಿಲೆಗಳನ್ನು ನಿಯಂತ್ರಿಸುವ ಮತ್ತು ಬರೆದಂತೆ ತಡೆಯುವ ಅಜವಾನನ್ನು ಅಡುಗೆಯಲ್ಲಿ ತಪ್ಪದೇ ಬಳಸಬೇಕು.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!