ಯುವಜನರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ !!

ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ.
ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದ ವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ ಹಾರ್ಟ್ ಆಟ್ಯಾಕ್ ಹತೋಟಿಗೆ ಬಂದಿದೆ. ಮುಂಜಾಗ್ರತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಿಂದ ಹೃದಯಘಾತವನ್ನು ದೊಡ್ಡ ಮಟ್ಟದಲ್ಲಿ ತಡೆಗಟ್ಟಬಹುದು ಎಂಬುದು ದೃಢಪಟ್ಟಿದೆ. ಭಾರತದಲ್ಲೂ ತುರ್ತಾಗಿ ಈ ಜಾಗೃತಿ ಮತ್ತು ಅರಿವಿನ ಅಗತ್ಯವಿದೆ. ಏಕೆಂದರೆ ಉತ್ಪಾದಕತೆಯ ಜೀವನದ (ಹಣ ಸಂಪಾದನೆಯ) ಗರಿಷ್ಠ ಮಟ್ಟದಲ್ಲಿದ್ದಾಗ ಬಹುತೇಕ ಮಂದಿ ಹೃದಯಘಾತಕ್ಕೆ ತುತ್ತಾಗುತ್ತಿರುವುದರಿಂದ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ. ಆದರೂ ಶೇ. 76ರಷ್ಟು ಜನರು ಸಮಸ್ಯೆ ಅಂತಿಮ ಹಂತಕ್ಕೆ ಹೋಗುವ ತನಕ ವೈದ್ಯರ ತಪಾಸಣೆಗೆ ಒಳಗಾಗುತ್ತಿಲ್ಲ. 20ರಿಂದ 65 ವಯೋಮಾನದ ಶೇ.60ರಷ್ಟು ಭಾರತೀಯರಿಗೆ ಈ ಕುರಿತು ಸೂಕ್ತ ತಿಳುವಳಿಕೆಯೇ ಇಲ್ಲ. 20ರಿಂದ 30ರ ಹರೆಯದ ಯುವ ಜನತೆ, ತಮಗೆ ಹೃದಯಸಂಬಂಧಿ ಸಮಸ್ಯೆ ಬರುವುದಿಲ್ಲ ಎಂಬ ದೃಢನಂಬಿಕೆಯಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ. ಆದರೆ, ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಇತ್ತೀಚೆಗೆ ಆರೋಗ್ಯ ಸಮೀಕ್ಷೆ ತಿಳಿಸಿದ್ದು, ಆಧುನಿಕ ಜೀವನಶೈಲಿಯು ಯುವ ಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾಶ್ರ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ.
ಭಾರತದಲ್ಲಿ ಹೃದಯಾಘಾತ
ಸಂಭವದ ವಯೋಮಿತಿಯು 40ರಿಂದ 30 ವರ್ಷಕ್ಕೆ ಇಳಿದಿದೆ. ಇದೊಂದು ಆತಂಕದ ವಿಷಯ. ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ); ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ 2) ಪ್ರಕಾರ, ಪ್ರಪಂಚದ ನಂಬರ್ ಒನ್ ಕಿಲ್ಲರ್ ಹೃದಯಾಘಾತ.
ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ, ಧೂಮಪಾನ, ಮದ್ಯಪಾನ, ದೈಹಿಕ ಶ್ರಮ ರಹಿತ ಜೀವನ ಹೃದಯಾಘಾತ ಕೊಡುಗೆ ನೀಡುತ್ತಿದ್ದು ಬೋರಲಾಗಿ ಮಲಗುವವರಲ್ಲೂ ಇದರ ಸಂಭವ ಹೆಚ್ಚಿದೆ. ನಿಯಮಿತವಾಗಿ ದೇಹ ತೂಕದ ತಪಾಸಣೆ, ಕೊಬ್ಬು ರಹಿತ ಪದಾರ್ಥಗಳ ಸೇವನೆ ಹಾಗೂ ಪ್ರತಿದಿನಿತ್ಯ 45 ನಿಮಿಷಗಳ ಕಾಲ ವೇಗದ ನಡಿಗೆ ಮಾಡುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು. ಹೃದಯವು ಒಂದು ಅಂಗವಾಗಿದ್ದು, ಅದು ಜೀವದ ಮುಂದುವರಿಕೆಗಾಗಿ ತೀರಾ ಅನಿವಾರ್ಯವಾದ ಅಮ್ಲಜನಕ ಮತ್ತು ಇತರೆ ಪೋಷಕಾಂಶಗಳನ್ನು ಪೂರೈಸಲು ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ನಿರಂತರವಾಗಿ ಪಂಪ್ ಮಾಡುತ್ತಲೇ ಇರುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳ ಅಗತ್ಯತೆಗಳನ್ನು ಪೂರೈಸಲು ಎರಡು ಸಣ್ಣ ರಕ್ತ ನಾಳಗಳ ಮೇಳೆ ಹೃದಯ ಅವಲಂಬಿಸಿರುತ್ತದೆ. ಈ ರಕ್ತ ನಾಳಗಳನ್ನು ಕರೋನರಿ ಆರ್ಟರಿಗಳು ಎಂದು ಕರೆಯಲಾಗುತ್ತದೆ. ವಯಸ್ಸಾಗುವ ಪ್ರಕ್ರಿಯೆ ಮುಂದುವರೆದಂತೆಲ್ಲಾ ಸಣ್ಣ ಪ್ರಮಾಣದ ಕೊಲೆಸ್ಟರಾಲ್ (ಕೊಬ್ಬು) ರಕ್ತ ನಾಳಗಳ ಗೋಡೆಗಳಲ್ಲಿ ಶೇಖರಣೆಯಾಗುತ್ತದೆ ಹಾಗೂ ಕಾಲಕ್ರಮೇಣ ನಾಳಗಳು ದಪ್ಪವಾಗಿ, ಗಟ್ಟಿಯಾಗಿ, ಕಿರಿದಾಗುತ್ತವೆ.
ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು :
ತಂಬಾಕು ಸೇವನೆ : ಧೂಮಪಾನಿಗಳು ಧೂಮಪಾನ ಮಾಡದವರಿಗಿಂತ ಹೃದಯಾಘಾತಕ್ಕೆ ತುತ್ತಾಗುವ ಗಂಡಾಂತರ 3 ರಿಂದ 6 ಪಟ್ಟು ಹೆಚ್ಚಾಗುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್, ಕಾರ್ಬನ್ ಮೊನೊಕ್ಸೈಡ್ ಮತ್ತು ಇತರೆ ವಿಷಯುಕ್ತ ವಸ್ತುಗಳು ರಕ್ತ ನಾಳ ಗೋಡೆಗೆ ಹಾನಿ ಉಂಟು ಮಾಡುತ್ತವೆ, ರಕ್ತದೊತ್ತಡವನ್ನು ಹೆಚ್ಚಿಸುತ್ತೇವೆ ಹಾಗೂ ರಕ್ತದಲ್ಲಿ ಕೊಬ್ಬಿನ ಆಮ್ಲದ ಮಟ್ಟವನ್ನು ಅಧಿಕಗೊಳಿಸುತ್ತವೆ. ಇವೆಲ್ಲವೂ ಅತಿರೋಸ್‍ಸ್ಕೆಲೋರಿಸಿಸ್ (ರಕ್ತನಾಳಗಳನ್ನು ಕಠಿಣಗೊಳಿಸುವಿಕೆ) ಸಮಸ್ಯೆಗೆ ಕಾರಣವಾಗುತ್ತದೆ. ಇವು ಹೃದಯ ಬಡಿತವನ್ನು ಹೆಚ್ಚಿಸುತ್ತವೆ ಹಾಗೂ ಅಸಮರ್ಪಕ ಹೃದಯ ಬಡಿತಕ್ಕೆ ಎಡೆ ಮಾಡಿಕೊಟ್ಟು ಹಠಾತ್ ಸಾವು ಸಂಭವಿಸಲು ಕಾರಣವಾಗುತ್ತದೆ. ಪ್ಯಾಸಿವ್ ಸ್ಮೋಕರ್‍ಗಳಲ್ಲೂ (ನೀವು ಧೂಮಪಾನ ಮಾಡದಿದ್ದರೂ, ಧೂಮಪಾನಿಗಳ ಹೊರ ಸೂಸುವ ತಂಬಾಕಿನ ಹೊಗೆಯನ್ನು ಪಕ್ಕದಲ್ಲಿದ್ದು ಸೇವಿಸುವವರು) ಇದು ಅಷ್ಟೇ ಪ್ರಮಾಣದ ಹಾನಿ ಉಂಟು ಮಾಡುತ್ತದೆ. ಬೀಡಿಗಳು, ಸಿಗಾರ್‍ಗಳು ಮತ್ತು ಪೈಪ್‍ಗಳನ್ನು ಸೇದುವುದು ಸಿಗರೇಟ್ ಸೇದಿದಷ್ಟೇ ಕೆಟ್ಟದ್ದು. ತಂಬಾಕು ಜಗಿಯುವುದು ಹಾಗೆಯೇ ನಶ್ಶೆ ಸೇವಿಸುವುದೂ ಹಾನಿಕಾರಕ.
ಅಧಿಕ ಕೊಲೆಸ್ಟರಾಲ್ : ರಕ್ತದಲ್ಲಿ ಕೊಲೆಸ್ಟರಾಲ್ (ಕೊಬ್ಬು) ಪ್ರಮಾಣ ಹೆಚ್ಚಾಗುವುದರಿಂದ ಕರೋನರಿ ಆರ್ಟರಿಗಳು ಗಟ್ಟಿಯಾಗುತ್ತವೆ ಹಾಗೂ ಇದು ಹೃದಯಾಘಾತ ಸಂಭವಿಸುವ ಅವಕಾಶವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಒಟ್ಟು ಕೊಲೆಸ್ಟರಾಲ್ ಪ್ರಮಾಣ ಮುಖ್ಯವಾದರೂ ವಿವಿಧ ರೀತಿಯ ಕೊಲೆಸ್ಟರಾಲ್‍ನ ಮಟ್ಟವನ್ನು ತಿಳಿಯುವುದು ತುಂಬಾ ಮುಖ್ಯ. ಅತಿರೋಸ್‍ಸ್ಕೆಲೋರಿಸಿಸ್‍ಗೆ ಸಂಬಂಧಪಟ್ಟಂತೆ ಮುಖ್ಯವಾಗಿ ಎರಡು ರೀತಿಯ ಕೊಲೆಸ್ಟರಾಲ್‍ಗಳು ಇವೆ. ಅವುಗಳೆಂದರೆ ಎಲ್‍ಡಿಎಲ್ ಮತ್ತು ಎಚ್‍ಡಿಎಲ್ ಕೊಲೆಸ್ಟರಾಲ್‍ಗಳು.
ಎಲ್‍ಡಿಎಲ್ ಕೊಲೆಸ್ಟರಾಲ್ : ಇದನ್ನು ಕೆಟ್ಟ ಕೊಲೆಸ್ಟರಾಲ್ ಎಂದು ಕರೆಯಲಾಗುತ್ತದೆ. ಪ್ರಾಣಿ ಮೂಲಗಳಿಂದ ಪಡೆದ ಕೊಬ್ಬಿನ ಪದಾರ್ಥಗಳ ವಿಪರೀತ ಸೇವನೆಯಿಂದ ಎಲ್‍ಡಿಎಲ್ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುತ್ತದೆ. ಪ್ರಾಣಿ ಜನ್ಯ ಕೊಬ್ಬಿನಂಶದ ಆಹಾರ ಪದಾರ್ಥಗಳೆಂದರೆ ಹಾಲಿನ ಕೆನೆ, ಬೆಣ್ಣೆ, ತುಪ್ಪ, ಮೊಸರು, ಐಸ್ ಕ್ರಿಮ್, ಮೊಟ್ಟೆಯ ಹಳದಿ ಭಾಗ, ಲಿವರ್, ಬ್ರೇನ್ ಮತ್ತು ಕಿಡ್ನಿಗಳಂಥ ಅಂಗಾಂಗ ಮಾಂಸಗಳು, ಸಿಗಡಿ ಮತ್ತು ಏಡಿಯಂಥ ಶೆಲ್ ಫಿಶ್‍ಗಳು. ಕೊಬ್ಬರಿ ಎಣ್ಣೆಯಲ್ಲೂ ಅಧಿಕ ಪ್ರಮಾಣದ ಕೊಬ್ಬಿನಂಶದ ಪದಾರ್ಥಗಳಿರುತ್ತವೆ. ಏಳ್ಳೆಣ್ಣೆ ಮತ್ತು ಸೂರ್ಯಕಾಂತಿ ಎಣ್ಣಿಗಳು ಅಧಿಕ ಪ್ರಮಾಣದ ಅನ್‍ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‍ಗಳಿದ್ದು, ಇದು ಬಳಕೆ ಆಯ್ಕೆಗೆ ಸೂಕ್ತ.
ಎಚ್‍ಡಿಎಲ್ ಕೊಲೆಸ್ಟರಾಲ್ : ಇದು ಆರೋಗ್ಯಕ್ಕೆ ಪೂರಕವಾದ ಒಳ್ಳೆಯ ಕೊಲೆಸ್ಟರಾಲ್. ಎಚ್‍ಡಿಎಲ್ ಕೊಲೆಸ್ಟರಾಲ್‍ನನ್ನು ನಿಯಮಿತ ದೈಹಿಕ ವ್ಯಾಯಾಮದ ಮೂಲಕ ಹೆಚ್ಚಿಸಿಕೊಳ್ಳಬಹುದು. ಎಚ್‍ಡಿಎಲ್ ಕೊಲೆಸ್ಟರಾಲ್ ಮಟ್ಟದ ಹೆಚ್ಚಳವು ಹೃದಯವನ್ನು ರಕ್ಷಿಸುತ್ತದೆ.
ಅಧಿಕ ಬ್ಲಡ್ ಷುಗರ್ : ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಪ್ರಮಾಣ ಅತಿರೋಸ್‍ಸ್ಕೆಲೋರಿಸಿಸ್ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂದು ದೃಢಪಟ್ಟಿದೆ. ಇದರೊಂದಿಗೆ ಹತೋಟಿ ಇಲ್ಲದ ಡಯಾಬಿಟಿಸ್ ಅತಿಯಾದ ತೂಕ ಮತ್ತು ಅಧಿಕ ಕೊಲೆಸ್ಟರಾಲ್‍ಗೆ ಎಡೆ ಮಾಡಿಕೊಡುತ್ತದೆ. ಇವೆಲ್ಲವೂ ಹೃದಯಾಘಾತ ಗಂಡಾಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಅಧಿಕ ರಕ್ತದೊತ್ತಡ : ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ. ಇದು ಕೇವಲ ಕರೋನರಿ ರಕ್ತ ನಾಳಗಳ ಮೇಲೆ ಮಾತ್ರ ದುಷ್ಪರಿಣಾಮ ಉಂಟು ಮಾಡುವುದಲ್ಲದೇ ಮೆದುಳಿನ ಹಾಗೂ ಮೂತ್ರಪಿಂಡಗಳ ರಕ್ತ ನಾಳಗಳಿಗೂ(ಇದು ಪಾಶ್ರ್ವವಾಯು ಮತ್ತು ಕಿಡ್ನಿ ವೈಫ್ಯಲಕ್ಕೆ ಎಡೆ ಮಾಡಿಕೊಡುತ್ತದೆ). ತೊಂದರೆ ನೀಡುತ್ತದೆ. ಅಧಿಕ ರಕ್ತದೊತ್ತಡದಿಂದ ಹೃದಯ ದೊಡ್ಡದಾಗಿ ಹಾರ್ಟ್ ಆಟ್ಯಾಕ್‍ಗೆ ಕಾರಣವಾಗುತ್ತದೆ.
ಅಧಿಕ ತೂಕ : ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಸಮೃದ್ದ ಆಹಾರಗಳ (ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಪದಾರ್ಥಗಳು) ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಸಾಮಾನ್ಯವಾಗಿ ತೂಕ ಅತಿಯಾಗಿ ಹೆಚ್ಚಾಗುತ್ತದೆ. ಇದರಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ಅತಿರೋಸ್‍ಸ್ಕೆಲೋರಿಸಿಸ್ ಗಂಡಾಂತರವನ್ನು ಅಧಿಕಗೊಳಿಸುತ್ತದೆ.
ಐಷಾರಾಮಿ ಅಭ್ಯಾಸಗಳು : ಎಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ ದೈಹಿಕವಾಗಿ ಕ್ರಿಯಾಶೀಲವಾಗಿರುವ ಅಥ್ಲೇಟ್‍ಗಳಿಗೆ ಹೃದಯಾಘಾತವಾಗುವ ಸಂಭವ ತೀರಾ ಕಡಿಮೆ. ಅದೇ ರೀತಿ ದೈಹಿಕ ಜಡತ್ವದ ಐಷಾರಾಮಿ ವ್ಯಕ್ತಿ ಹಾರ್ಟ್ ಆಟ್ಯಾಕ್ ಗಂಡಾಂತರಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.ಐಷಾರಾಮಿ ಅಭ್ಯಾಸಗಳು ಮತ್ತು ಸ್ಥೂಲಕಾಯ, ಬೊಜ್ಜು ಹಾಗೂ ಕೊಬ್ಬನ್ನು ಕರಗಿಸುವಲ್ಲಿ ಕಡಿಮೆ ಸಾಮಥ್ರ್ಯಕ್ಕೆ ಕಾರಣವಾಗಿ ಅಧಿಕ ಕೊಲೆಸ್ಟರಾಲ್‍ಗೆ
ಎಡೆ ಮಾಡಿಕೊಡುತ್ತದೆ.
ಉದ್ವೇಗದ ಒತ್ತಡ ಮತ್ತು ಆಯಾಸ: ಉದ್ವೇಗದಿಂದ ಉಂಟಾಗುವ ಒತ್ತಡ ಮತ್ತು ಆಯಾಸವು ಅತಿರೋಸ್‍ಸ್ಕಲೋರಿಸಿಸ್ ಗಂಡಾಂತರವನ್ನು ಹೆಚ್ಚಿಸುತ್ತದೆ. ಯಾವಾಗಲೂ ಉದ್ವೇಗ, ಒತ್ತಡ, ಕೋಪ, ಆವೇಶಕ್ಕೆ ಒಳಗಾಗುವ ವ್ಯಕ್ತಿಗಳು ಹಾಗೂ ಆತುರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ತವಕಿಸುವ ಮಂದಿ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ವ್ಯಕ್ತಿಗಳನ್ನು ನಡವಳಿಕೆ ನಮೂನೆ ರೀತಿಯವರು ಎಂದು ಕರೆಯಲಾಗುತ್ತದೆ. ಶಾಂತ ಸ್ವಭಾವದವರು, ಪ್ರಶಾಂತ ಚಿತ್ತ ಗುಣದವರು, ಮಾನಸಿಕವಾಗಿ ದೃಢವಾಗಿರುವವರು ಹಾಗೂ ತಾಳ್ಮೆಯಿಂದ ಸಮಸ್ಯೆಗಳನ್ನು ನಿಭಾಯಿಸುವವರು ದೀರ್ಘಾಯುಷಿಗಳಾಗಿರುತ್ತಾರೆ. ಮಹಿಳೆಯರಲ್ಲಿ ಮಾಸಿಕ ಋತು ಕೊನೆಗೊಳ್ಳುವ ತನಕ (ಮೆನೊಪಾಸ್) ಅವರಿಗೆ ಸಾಮಾನ್ಯವಾಗಿ ಹೃದಯಾಘಾತದಿಂದ ರಕ್ಷಣೆ ದೊರೆಯುತ್ತದೆ. ಆದರೆ, ಮಹಿಳೆಯರು ದೀರ್ಘಕಾಲ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಮತ್ತು ತಂಬಾಕು ಉಪಯೋಗಿಸಿದರೆ ಈ ರಕ್ಷಣೆ ಕೊನೆಗೊಳ್ಳುತ್ತದೆ.
ಅನುವಂಶಿಯ ಅಂಶಗಳು: ಕುಟುಂಬದ ಯಾರಾದರೂ ಒಬ್ಬರಿಗೆ ಯೌವ್ವನದಲ್ಲಿ ಹೃದಯಾಘಾತವಾಗಿದ್ದರೆ ಆ ಕುಟಂಬದಲ್ಲಿ ಯಾವುದೇ ವ್ಯಕ್ತಿ ಹಾರ್ಟ್ ಆಟ್ಯಾಕ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ಗಂಡಾಂತರದ ಅಧಿಕ ಸಾಧ್ಯತೆ ಇರುವ ಮಂದಿ ಧೂಮಪಾನ, ಐಷಾರಾಮಿ ಅಭ್ಯಾಸ ಹಾಗೂ ಅಧಿಕ ಪ್ರಮಾಣದ ಕೊಬ್ಬಿನಂಶವಿರುವ ಆಹಾರ ಪದಾರ್ಥಗಳ ಸೇವನೆಯಂಥ ಪರಿವರ್ತಿತ ಗಂಡಾಂತರಕಾರಿ ಅಂಶಗಳನ್ನು ತಪ್ಪಿಸಬೇಕಾಗುತ್ತದೆ. ಇಂಥ ವ್ಯಕ್ತಿಗಳು ಆರಂಭಿಕ ವರ್ಷದಲ್ಲೇ ಅಗಾಗ ತಪಾಸಣೆಗೆ ಒಳಗಾಗಬೇಕು.
ಜೀವನಶೈಲಿ ಬದಲಾವಣೆ
ಒತ್ತಡಕ್ಕೆ ಸಂಬಂಧಿಸಿದ ಹೃದ್ರೋಗ ತಡೆಗಟ್ಟಲು ಜೀವನಶೈಲಿ ಬದಲಾವಣೆಯೂ ಅಗತ್ಯ.
ಧೂಮಪಾನ ವರ್ಜಿಸಿ : ಧೂಮಪಾನ ಅಥವಾ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಪಟ್ಟಿ ಮಾಡಿ. ನಂತರ ನಾನೇಕೆ ಧೂಮಪಾನ ಬಿಡಬೇಕು ಎಂಬುದನ್ನು ಬರೆಯಿರಿ. ಧೂಮಪಾನ ತ್ಯಜಿಸಲು ಸೂಕ್ತ ದಿನವನ್ನು ಗೊತ್ತು ಮಾಡಿ ದೃಢಸಂಕಲ್ಪದಿಂದ ಆ ದುಶ್ಚಟದಿಂದ ದೂರವಿರಿ. ನೀವು ಧೂಮಪಾನ ವರ್ಜಿಸಲು ನಿರ್ಧರಿಸಿದ ತಕ್ಷಣ ಸಿಗರೇಟ್‍ಗಳು, ಆ್ಯಷ್‍ಟ್ರೇ ಮತ್ತು ಲೈಟರ್‍ನನ್ನು ಹೊರಗೆ ಎಸೆಯಿರಿ.ವೈದ್ಯರೊಂದಿಗೆ ಈ ಕುರಿತು ಮುಕ್ತ ಚರ್ಚೆ ನಡೆಸಿರಿ. ಧೂಮಪಾನ ವರ್ಜಿಸಿದ ನಂತರ  ದೇಹದಲ್ಲಿ ಕೆಲವು ಪ್ರತಿಕ್ರಿಯೆಗಳು ಕಂಡುಬಂದರೆ ಔಷಧಿ ನೀಡಬೇಕಾಗುತ್ತದೆ. ನಿಕೋಟಿನ್ ಪರ್ಯಾಯದ ಅಗತ್ಯವಿದಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ಗಮ್, ಇನ್‍ಹೇರಲ್ ಮೊದಲಾದ ರೂಪದಲ್ಲಿ ಬರುತ್ತದೆ.
ಆರೋಗ್ಯಕರ ಆಹಾರ : ಆರೋಗ್ಯ ರಕ್ಷಣೆ ಹಾಗೂ ದೈಹಿಕ-ಮಾನಸಿಕ ಸಾಮಥ್ರ್ಯ ಹೆಚ್ಚಳದಲ್ಲಿ ಉತ್ತಮ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಸಂತುಲಿತ ಮತ್ತು ಪೌಷ್ಟಿಕ ಆಹಾರ ದೇಹವನ್ನು ಸಮತೋಲನದಲ್ಲಿ ಇಡುತ್ತದೆ. ಆದರೆ ಸಕಾಲದಲ್ಲಿ ಸೇವನೆ ಮತ್ತು ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಮುಖ್ಯ.
ಉತ್ತಮ ನಿದ್ರೆ : ಮನುಷ್ಯನ ಆರೋಗ್ಯ ಸ್ಥಿತಿಗೆ ಸೂಕ್ತ ನಿದ್ರೆಯೂ ಅತ್ಯಗತ್ಯ. ಸಾಕಷ್ಟು ನಿದ್ರೆಯ ಮಹತ್ವದ ಬಗ್ಗೆ ಜನರಲ್ಲಿ ಅನೇಕ ತಪ್ಪು ತಿಳುವಳಿಕೆ ಇದೆ. ಸೂಕ್ತ ಸಮಯದಲ್ಲಿ ನಿದ್ರೆ ಮಾಡುವುದು ಒಳ್ಳೆಯದು. ಬೇಗನೆ ಮಲಗಿ ಬೇಗನೆ ಏಳುವುದು ಉತ್ತಮ ಅಭ್ಯಾಸ. ಆದಾಗ್ಯೂ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಕೆಲವೊಂದು ತೊಂದರೆಗಳಿಗೆ ಕಾರಣವಾಗುತ್ತದೆ. ಅನಿದ್ರತೆ, ತಲೆನೋವು, ನಿರುತ್ಸಾಹ, ಮಂಕು ಇತ್ಯಾದಿ. ಕೆಲವೊಮ್ಮೆ ಇದು ಬೊಜ್ಜು, ಅಜೀರ್ಣ, ಜ್ಞಾಪಕ ಶಕ್ತಿ ನಷ್ಟದಂಥ ಗಂಭೀರ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು.
ಹೃದಯಾಘಾತದ ಸಾಮಾನ್ಯ ಲಕ್ಷಣಗಳು :

  • ಎದೆನೋವು, ಹೃದಯ ಭಾರವಾಗುವಿಕೆ
  • ಉಸಿರಾಟದಲ್ಲಿ ತೊಂದರೆ
  • ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Magazines

SUBSCRIBE MAGAZINE

Click Here