ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ – ಇದು ನಮಗೆ ಏಕೆ ಮುಖ್ಯ?

ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ದೇಹವನ್ನು ರಕ್ಷಿಸುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ. 

ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ - ಇದು ನಮಗೆ ಏಕೆ ಮುಖ್ಯ?ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಸೈನಿಕನಂತೆ ಕೆಲಸ ಮಾಡುವ ರಕ್ಷಣಾ ವ್ಯವಸ್ಥೆಯನ್ನು ಒಟ್ಟಾಗಿ ಇಮ್ಯುನ್ ಸಿಸ್ಟಮ್ ಅಥವಾ ರೋಗ ಪ್ರತಿರೋಧ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ವಿವಿಧ ರೀತಿಯ ಪ್ರೋಟಿನ್‍ಗಳು, ಬಿಳಿರಕ್ತಕಣಗಳು, ಆಂಟಿಬಾಡಿಗಳು ಈ ರಕ್ಷಣಾ ವ್ಯವಸ್ಥೆಯ ಸೂತ್ರದಾರಿಗಳು. ಪ್ರತಿ ಕ್ಷಣವೂ ದೇಹವನ್ನು ರಕ್ಷಿಸುವ ಗುರುತರ ಜವಾಬ್ದಾರಿ ಈ ರಕ್ಷಣಾ ವ್ಯವಸ್ಥೆಗೆ ಇರುತ್ತದೆ. ನಮ್ಮ ದೇಹವನ್ನು ಇತರ ರೋಗಾಣುಗಳಾದ ಬ್ಯಾಕ್ಟಿರೀಯಾ, ವೈರಸ್‍ಗಳು, ಫಂಗಸ್‍ಗಳು, ಶಿಲೀಂದ್ರಗಳು ಅಥವಾ ಇನ್ನಾವುದೇ ಅಪಾಯಕಾರಿ ಅಪರಿಚಿತ ವಸ್ತುಗಳು ಪರಕಾಯ ಪ್ರವೇಶ ಮಾಡಿದ ಕೂಡಲೇ ಈ ರಕ್ಷಣಾ ವ್ಯವಸ್ಥೆ ಎದ್ದು ನಿಲ್ಲುತ್ತದೆ ಮತ್ತು ಹೊರಗಡೆಯಿಂದ ದೇಹಕ್ಕೆ ಸೇರಿದ ಈ ಅಪರಿಚಿತ ವಸ್ತುಗಳ ಮೇಲೆ ದಾಳಿಮಾಡಿ ನಾಶ ಮಾಡಿ ದೇಹವನ್ನು ರಕ್ಷಿಸುತ್ತದೆ. ಈ ರಕ್ಷಣಾ ವ್ಯವಸ್ಥೆಯನ್ನು ಮುಖ್ಯವಾಗಿ ಆಟಿಕ್ಟಿವ್ ಮತ್ತು ಪಾಸಿವ್ (ಕ್ರಿಯಾತ್ಮಕ ಮತ್ತು ನಿಯಂತ್ರಿತ) ರಕ್ಷಣಾ ವ್ಯವಸ್ಥೆ ಎಂದು ವಿಂಗಡಿಸಲಾಗಿದೆ.

ಹುಟ್ಟಿದ ಮಗು ಒಂದೆರಡು ವರ್ಷದವರೆಗೆ ರೋಗಾಣುಗಳಿಂದ ಪಾರಾಗಲು ತಾಯಿಯಿಂದ ಪ್ಲಾಸೆಂಟಾದ ಮುಖಾಂತರ ರಕ್ತದಲ್ಲಿ ತಾಯಿಯ ರಕ್ತದಿಂದಲೇ ಆಂಟಿಬಾಡಿಗಳನ್ನು ಪಡೆದಿರುತ್ತದೆ. ಇದನ್ನು ಪಾಸಿವ್ ಅಥವಾ ನಿಯಂತ್ರಿತ, ಇಮ್ಯುನಿಟಿ ಎನ್ನುತ್ತಾರೆ. ಇನ್ನು ನಿಷ್ಕ್ರಿಯಗೊಂಡ ರೋಗಾಣುಗಳ ನಿಷ್ಕ್ರಿಯ ವಿಷರಹಿತ ಪ್ರೋಟಿನ್‍ನನ್ನು ದೇಹಕ್ಕೆ ಲಸಿಕೆ ಮುಖಾಂತರ ನೀಡಿ ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುವಂತೆ ಮಾಡಲಾಗುತ್ತದೆ. ಇದನ್ನು ಆಕ್ಟಿವ್ ಅಥವಾ ಕ್ರಿಯಾತ್ಮಕ ಇಮ್ಯುನಿಟಿ ಎನ್ನುತ್ತಾರೆ. ಆಕ್ಟಿವ್ ಇಮ್ಯುನಿಟಿಯಲ್ಲಿ ಎರಡು ವಿಧಗಳಿವೆ. ನಮಗರಿವಿಲ್ಲದೆ ರೋಗ ಬಂದು ನಮ್ಮ ದೇಹದ ರಕ್ಷಣಾ ವ್ಯವಸ್ಥೆ ರೋಗಾಣುಗಳ ವಿರುದ್ಧ ಹೋರಾಡಿ ಆ ರೋಗಾಣುವಿನ ವಿರುದ್ಧ ಸಮರ ಸಾರಿ, ಆಂಟಿಬಾಡಿಗಳನ್ನು ಉತ್ಪತ್ತಿ ಮಾಡಿ ಮಗದೊಮ್ಮೆ ಆ ರೋಗಬಾರದಂತೆ ಮಾಡುತ್ತದೆ. ಇದು ಬಹಳ ಉತ್ತಮವಾದ ರೀತಿಯ ನೈಸರ್ಗಿಕ ಕ್ರಿಯಾತ್ಮಕ ಇಮ್ಯುನಿಟಿಯಾಗಿರುತ್ತದೆ.

ಉದಾಹರಣೆಗೆ ಒಮ್ಮೆ ಚಿಕನ್ ಪಾಕ್ಸ್ (ಸಿತಾಳೆ ಸಿಡುಬು) ರೋಗ ಬಂದರೆ ಜೀವನ ಪರ್ಯಂತ ಮಗದೊಮ್ಮೆ ಆ ರೋಗ ಬರುವುದಿಲ್ಲ. ಕಾರಣ ಆ ವೈರಾಣುಗಳ ವಿರುದ್ಧ ದೇಹ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತದೆ. ಇನ್ನು ಕೆಲವೊಮ್ಮೆ ರೋಗ ಬರುವ ಮೊದಲೇ ರೋಗ ಬಾರದಂತೆ ತಡೆಯಲು ವೈದ್ಯರ ಬಳಿ ಲಸಿಕೆ ಹಾಕಿ ರೋಗಾಣುಗಳ ವಿರುದ್ಧ ಆಂಟಿಬಾಡಿ ಉತ್ಪಾಧನೆಯಾಗುವಂತೆ ಮಾಡಲಾತ್ತದೆ. ಹಾಗೇ ಮಾಡಿದಲ್ಲಿ ಮುಂದೆ ರೋಗ ಬರುವ ಸಾಧ್ಯತೆ ಬಹಳ ಕಡಿಮೆಯಿರುತ್ತದೆ. ಉದಾಹರಣೆ ಹೆಪಟೈಟಿಸ್ ಲಸಿಕೆ ಆದರೆ ಪ್ರತಿ ಐದು ವರ್ಷಗಳಿಗೊಮ್ಮೆ ಆಂಟಿಬಾಡಿಗಳ ಸಾಂದ್ರತೆ ನೋಡಿ ಬೂಸ್ಟರ್ ಡೋಸ್ ಹಾಕಬೇಕಾದ ಸಾಧ್ಯತೆ ಇರಲೂಬಹುದು. ಒಟ್ಟಿನಲ್ಲಿ ಈ ರೀತಿ ಲಸಿಕೆ ಹಾಕಿ ರೋಗ ಬಾರದಂತೆ ಮಾಡುವುದರಿಂದ ರೋಗದಿಂದ ಉಂಟಾಗುವ ನೋವು, ಜೀವಹಾನಿ ಮತ್ತು ಇತರ ತೊಂದರೆಗಳನ್ನು ತಪ್ಪಿಸಲು ಸಾಧ್ಯವಿದೆ. ಈ ರೀತಿಯ ಇಮ್ಯುನಿಟಿಗೆ ಕ್ರಿಯಾತ್ಮಕ ಕೃತಕ ಇಮ್ಯುನಿಟಿ ಎನ್ನುತ್ತಾರೆ.

ಯಾವಾಗ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ?

ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ - ಇದು ನಮಗೆ ಏಕೆ ಮುಖ್ಯ?1. ನಮ್ಮ ಜೀವನಶೈಲಿ :- ಪ್ರತಿ ಮನುಷ್ಯನಿಗೆ ದಿನವೊಂದರಲ್ಲಿ 6ರಿಂದ 8 ಗಂಟೆಗಳ ನಿದ್ರೆ ಅತಿ ಅಗತ್ಯ. ನಿದ್ರಾಹೀನತೆ ಮತ್ತು ನಿದ್ರೆ ಕಡಿಮೆ ಮಾಡುವುದರಿಂದ ದೇಹದ ರಕ್ಷಣಾ ವ್ಯವಸ್ಥೆ ಮೇಲೆ ಬಹುದೊಡ್ಡ ಹೊಡೆತ ಬೀಳುತ್ತದೆ. ಒತ್ತಡದ ಜೀವನಶೈಲಿಯಿಂದಾಗಿ ನಿದ್ರಾ ಹೀನತೆ ಉಂಟಾಗಿ ರಕ್ಷಣಾ ವ್ಯವಸ್ಥೆ ಹದಗೆಟ್ಟು ಹಲವು ರೋಗಗಳಿಗೆ ಕಾರಣವಾಗಬಹುದು. ನಿದ್ರಾ ಸಮಯದಲ್ಲಿಯೇ ದೇಹದಲ್ಲಿ ಬಹಳಷ್ಟು ಪ್ರೋಟಿನ್‍ಗಳು ಉತ್ಪಾದನೆಯಾಗುವುದೇ ಇದಕ್ಕೆ ಮೂಲ ಕಾರಣ ಎಂದರೂ ತಪ್ಪಲ್ಲ.

2. ನಮ್ಮ ಆಹಾರ ಪದ್ಧತಿ:- ನಾವು ತಿನ್ನುವ ಆಹಾರದಲ್ಲಿ ಸಾಕಷ್ಟು ಪ್ರೋಟಿನ್‍ಗಳು ಜೀವಸತ್ವಗಳು ಇರತಕ್ಕದ್ದು. ಅಂಟಿಬಾಡಿಗಳು ಮತ್ತು ರಕ್ತಕಣಗಳ ಉತ್ಪಾಧನೆಗೆ ಪ್ರೋಟಿನ್‍ಗಳು ಅತಿ ಅವಶ್ಯಕ. ಜಂಕ್ ಆಹಾರ ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಕುಸಿಯುತ್ತದೆ. ಜಂಕ್ ಆಹಾರದಲ್ಲಿನ ರಾಸಾಯನಿಕ, ಬಣ್ಣ ಬರಲು ಬಳಸುವ ವಸ್ತುಗಳು, ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಕ್ಯಾನ್ಸರ್‍ಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಂಕ್ ಪುಡ್‍ಗಳಲ್ಲಿ ಲವಣ, ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ ಇರುತ್ತದೆ. ಪ್ರೋಟಿನ್ ಅಂಶ ಬಹಳ ಕಡಿಮೆ ಇರುತ್ತದೆ. ಈ ಕಾರಣದಿಂದಲೇ ಜಂಕ್ ಆಹಾರ ಸೇವಿಸುವ ಮಕ್ಕಳಿಗೆ ಪದೇ ಪದೇ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ವ್ಯಾಯಾಮ ರಹಿತ ವಿಲಾಸಿ ಜೀವನಶೈಲಿ :- ಯಾವುದೇ ಕಾರಣಕ್ಕೂ ದೈಹಿಕ ವ್ಯಾಯಾಮ, ಬಿರುಸು ನಡಿಗೆ, ಸ್ವಿಮ್ಮಿಂಗ್, ವಾಕಿಂಗ್, ಸೈಕ್ಲಿಂಗ್ ತಪ್ಪಿಸಬೇಡಿ, ದಿನವೊಂದರ 30 ನಿಮಿಷಗಳ ಬಿರುಸು ನಡಿಗೆ ಇದ್ದಲ್ಲಿ, ಬಿಳಿರಕ್ತ ಕಣಗಳ ಸಂಖ್ಯೆ ಜಾಸ್ತಿಯಾಗಿ ದೇಹದ ರಕ್ಷಣಾ ವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ.

4. ಕೆಟ್ಟ ಹವ್ಯಾಸಗಳು :- ಮದ್ಯಪಾನ ಮತ್ತು ಧೂಮಪಾನದಿಂದ ದೇಹದ ರಕ್ಷಣಾ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಮದ್ಯಪಾನದಿಂದ ದೇಹದ ಯಕೃತಿನ ಮೇಲೆ ಮಾರಕ ಪರಿಣಾಮ ಉಂಟಾಗಿ ದೇಹದಲ್ಲಿ ಪ್ರೋಟಿನ್ ಉತ್ಪಾದನೆ ಕಡಿಮೆಯಾಗಿ ಪ್ರತಿರೋಧಕ ಶಕ್ತಿ ಕುಂದುತ್ತದೆ.

5. ಅತಿಯಾದ ಔಷಧಿ ಸೇವನೆ:- ಅತಿಯಾದ ಔಷಧಿ ಸೇವನೆ, ಆಂಟಿಬಯೋಟಿಕ್‍ಗಳ ಅನಗತ್ಯ ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸಣ್ಣ ಪುಟ್ಟ ಶೀತ ನೆಗಡಿಗಳಿಗೆಲ್ಲ ಅಂಟಿಬಯೋಟಿಕ್‍ನನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೂ ತಮ್ಮ ಕೆಲಸ ಮಾಡಲು ಸಾಕಷ್ಟು ಅವಕಾಶ ನೀಡತಕ್ಕದ್ದು.

ರೋಗ ನಿರೋಧಕ ಶಕ್ತಿ ಕಡಮೆಯಾದಾಗ ಏನಾಗುತ್ತದೆ?

1. ಪದೇ ಪದೇ ಜ್ವರ ಬರುವುದು. ದೇಹದ ಉಷ್ಣತೆಯಲ್ಲಿ ಏರಿಳಿತವಾಗುವುದು.

2. ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಶ್ವಾಸಕೋಶದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ಪದೇ ಪದೇ ಶೀತ ನೆಗಡಿ ಕೆಮ್ಮು ಉಂಟಾಗುತ್ತದೆ.

4. ಪದೇ ಪದೇ ಅಲರ್ಜಿ, ತುರಿಕೆ ಉಂಟಾಗುತ್ತದೆ. ಸಣ್ಣ ಪುಟ್ಟ ಆಹಾರ ವ್ಯತ್ಯಾಸವಾದರೂ ತುರಿಕೆ ನೆಗಡಿ ಅಲರ್ಜಿ ಉಂಟಾಗುತ್ತದೆ.

5. ಪದೇ ಪದೇ ಮೂತ್ರನಾಳದ ಸೋಂಕು, ತುರಿಕೆ, ಉರಿತ ಉಂಟಾಗುತ್ತದೆ.

6. ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ.

7. ರಕ್ತ ಸಂಬಂಧಿ ಖಾಯಿಲೆಗಳು, ಪ್ಲೆಟ್‍ಲೆಟ್‍ಗಳ ಸಂಖ್ಯೆ ಕಡಿಮೆಯಾಗುವುದು, ರಕ್ತಹೀನತೆ ಅಥವಾ ಹೀಮೊಗ್ಲೋಬಿನ್ ಅಂಶ ಕಡಿಮೆಯಾಗುವ ಸಾದ್ಯತೆ ಹೆಚ್ಚಾಗುತ್ತದೆ.

8. ಪದೇ ಪದೇ ಕಿವಿಯಲ್ಲಿ ನೋವು, ಗಂಟಲು ನೋವು ಮತ್ತು ಕೆಲವು ಸೈನುಸೈಟಿಸ್ ತೊಂದರೆ ಉಂಟಾಗುತ್ತದೆ.

9. ಚರ್ಮದಲ್ಲಿ ಸೋಂಕು, ಚರ್ಮದಲ್ಲಿ ತುರಿಕೆ, ಕಜ್ಜಿ ಉಂಟಾಗುತ್ತದೆ. ಯಾವುದೇ ಔಷಧಿಗೂ ಗುಣವಾಗದೆ ಇರಬಹುದು.

10. ಹೊಟ್ಟೆ ಉರಿ, ಎದೆ ಉರಿ, ಆಹಾರ ಸೇವಿಸುವಾಗ ಹೊಟ್ಟೆಯಲ್ಲಿ ವಿಪರೀತ ಉರಿಯೂತ ಉಂಟಾಗಬಹುದು.

ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?

nutritious-foo1. ದಿನವೊಂದರಲ್ಲಿ ಕನಿಷ್ಠ ಪಕ್ಷ 6ರಿಂದ ಗಂಟೆಗಳ ನಿದ್ರೆ ಮಾಡತಕ್ಕದ್ದು ಯಾವುದೇ ಕಾರಣಕ್ಕೆ ನಿದ್ರೆ ಕಡಿಮೆಯಾಗದಂತೆ ನೋಡಿಕೊಳ್ಳಿ.

2. ಯಾವುದೇ ಕಾರಣಕ್ಕೂ ದೈಹಿಕ ವ್ಯಾಯಮ ತಪ್ಪಿಸಬಾರದು, ದಿನವೊಂದರಲ್ಲಿ 30 ರಿಂದ 40 ನಿಮಿಷಗಳ ದೈಹಿಕ ಕಸರತ್ತು ದೇಹದ ಪ್ರತಿರೋಧ ಶಕ್ತಿಯನ್ನು ವೃದ್ದಿಸುತ್ತದೆ.

3. ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಳ್ಳಿ. ವ್ಯಾಯಾಮ, ದ್ಯಾನ ಪ್ರಾಣಯಾಮದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕೆಲಸದ ವಾತಾವರಣದಲ್ಲಿ ಒತ್ತಡ ಜಾಸ್ತಿ ಇದ್ದಲ್ಲಿ ಬೇರೆ ಕೆಲಸ ನೋಡುವುದು ಉತ್ತಮ. ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರಾಗಿ ಪ್ರತೀರೋಧಕ ಶಕ್ತಿ ಕುಂದುತ್ತದೆ.

4. ಸಮತೋಲಿತ ಆಹಾರ ತಿನ್ನಿ. ಜಂಕ್ ಆಹಾರ ತ್ಯಜಿಸಿ ತಾಜಾ ಹಣ್ಣುಗಳು, ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಕೃತಕ ಪೇಯಗಳನ್ನು ವರ್ಜಿಸಿ, ನೈಸರ್ಗಿಕ ಪೇಯಗಳನ್ನು ಸೇವಿಸಿ. ವಿಟಮಿನ್ ಎ, ಡಿ, ಯಿ ಮತ್ತು ಖನಿಜಾಂಶಗಳು ಜಾಸ್ತಿಯಿರುವ ಆಹಾರ ಹೇರಳವಾಗಿ ಸೇವಿಸಿ. ಕೊಬ್ಬು, ಕ್ಯಾಲರಿ ಲವಣಗಳಿರುವ ಜಂಕ್ ಆಹಾರ ಬೇಡವೇ ಬೇಡ. ಒಳ್ಳೆ ಪ್ರೋಟಿನ್ ಮತ್ತು ನಾರುಯಕ್ತ ಆಹಾರ ಹೆಚ್ಚು ಸೇವಿಸ ಬೇಕು.

5. ಅಲ್ಕೋಹಾಲ್ ಮತ್ತು ಮಧ್ಯಪಾನ ಸೇವನೆ ಸಂಪೂರ್ಣ ವರ್ಜಿಸಬೇಕು. ರಾಸಾಯನಿಕಯುಕ್ತ ದಿಡೀರ್ ಆಹಾರ ಮತ್ತು ಸಿದ್ಧ ಆಹಾರಗಳನ್ನು ವರ್ಜಿಸಲೇಬೇಕು.

6. ಅತಿಯಾದ ಔಷಧಿ ಸೇವನೆ, ಕೃತಕ ಹಾರ್ಮೋನ್‍ಗಳ ಸೇವನೆ, ಸೌಂದರ್ಯವರ್ಧಕ ಔಷಧಿಗಳು ದೇಹದ ಪ್ರತಿರೋಧಕತೆಯನ್ನು ಕುಗ್ಗಿಸುತ್ತದೆ. ದೇಹದ ಸೌಂದರ್ಯ ಹೆಚ್ಚಿಸಲು ನೈಸರ್ಗಿಕ ವಿಧಾನಕ್ಕೆ ಒತ್ತು ಕೊಡಬೇಕು.

7. ದಿನವೊಂದರಲ್ಲಿ 3ರಿಂದ 4ಲೀಟರ್ ನೀರು ಸೇವಿಸುವುದರಿಂದಲೂ ದೇಹದಲ್ಲಿನ ವಿಷಕಾರಕ ವಸ್ತು ವಿಸರ್ಜಿಸಲ್ಪಟ್ಟು ಪ್ರತಿರೋಧಕ ಶಕ್ತಿ ವರ್ಧಿಸುತ್ತದೆ.

8. ದೇಹದ ಜೀರ್ಣ ಪ್ರಕ್ರಿಯೆಗೆ ಮತ್ತು ಜೀರ್ಣಾಂಗ ವ್ಯೂಹಕ್ಕೆ ಪೂರಕವಾಗುವ ಆಹಾರವನ್ನು ಸೇವಿಸಿ. ಜೀರ್ಣಾಂಗವ್ಯೂಹದ ಬ್ಯಾಕ್ಟೀರಿಯಾಗಳಿಗೆ ಪೂರಕವಾದ ಆಹಾರಗಳಾದ ಮೊಸರು, ಯೋಗಾರ್ಟ್, ಬ್ರೋಕೋಲಿ, ಹಸಿ ತರಕಾರಿ ಜಾಸ್ತಿ ಸೇವಿಸಬೇಕು.

Also Watch our Youtube Video: ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಕೊನೆ ಮಾತು

ಎಲ್ಲಿಯು ವ್ಯಾಪಾರೀಕರಣವಾಗುತ್ತಿರುವ ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ  ಪ್ರತಿಯೊಬ್ಬರು ಒತ್ತಡದ ಜೀವನ ನಡೆಸುತ್ತಿರುವುದೆಂದರೆ ತಪ್ಪಾಗಲಾರದು. ಅತ್ಯಂತ ಸ್ಪರ್ಧಾತ್ಮಕ ಮತ್ತು ಪೈಪೋಟಿಯ ಜಗತ್ತಿನಲ್ಲಿ ಎಲ್ಲವೂ ಬಹಳ ವೇಗವಾಗಿ ಯಾಂತ್ರಿಕವಾಗಿ ನಡೆಯುತ್ತಿರುತ್ತದೆ. ಇಂತಹ ಒತ್ತಡದ, ಆಂತಕದ ಜಗತ್ತಿನಲ್ಲಿ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳಾದ ಉತ್ತಮ ಆಹಾರ ಮತ್ತು ನೆಮ್ಮದಿಗೆ ಜಾಗವಿಲ್ಲದಾಗಿರುವುದು ಬಹಳ ಸೋಜಿಗ ಮತ್ತು ವಿಪರ್ಯಾಸದ ವಿಚಾರವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಯಾವತ್ತೂ ಯಾವುದಾದರೊಂದು ಕೆಲಸದಲ್ಲಿ ಮಗ್ನನಾಗಿರುತ್ತಾನೆ. ಮನಸ್ಸಿಗೆ ವಿರಾಮ ಎನ್ನುವುದೇ ಇಲ್ಲ. ದೈಹಿಕ ದುಡಿಮೆಯ ಜೊತೆಗೆ ಮಾನಸಿಕವಾಗಿಯೂ ನಿರಂತರ ಒತ್ತಡದ ಜೀವನಶೈಲಿ. ಮನುಷ್ಯ ಈ ಜೀವನಶೈಲಿಗೆ ಒಗ್ಗಿ ಹೋಗಿರುವುದೇ ಬಹಳ ವಿಷದರ ಸಂಗತಿ. ನಿದ್ದೆಯಿಲ್ಲದ ನೆಮ್ಮದಿ ಇಲ್ಲದ ನಿರಂತರ ಕೆಲಸ, ಹೊತ್ತು ಹೊತ್ತಿಗೆ ಆಹಾರವಿಲ್ಲದೆ ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವನೆ, ಜೈವಿಕ ಗಡಿಯಾರಕ್ಕೂ ಬಾಹ್ಯ ಜಗತ್ತಿಗೂ ಯಾವುದೇ ಸಂಬಂಧವಿಲ್ಲದೆ ಕತ್ತೆಯಂತೆ 24 ಗಂಟೆಗಳ ದುಡಿತ, ನಿದ್ರಾಹೀನತೆ ಮುಂತಾದವುಗಳಿಂದಾಗಿ ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ.

30ರ ಹರೆಯದಲ್ಲಿಯೇ ಮಧುಮೇಹ, ರಕ್ತದೊತ್ತಡ, ಮಾನಸಿಕ ವ್ಯಕಲತೆ ಮುಂತಾದವುಗಳಿಗೆ ಬಲಿಯಾಗುತ್ತಿದ್ದಾನೆ. ಕಾರಣವಿಲ್ಲದೆ ಸಿಡುಕುವುದು, ವಿಪರೀತ ಸುಸ್ತು, ಪದೇ ಪದೇ ಕಾಡುವ ನೆಗಡಿ ಕೆಮ್ಮು, ತಲೆ ಬಾರ, ಕಣ್ಣು ಮಂಜಾಗುವುದು, ಆಯಾಸ, ಕೈಕಾಲು ನೋವು, ನಿರಾಸಕ್ತಿ ಇವೆಲ್ಲವೂ ಆಧುನಿಕ ಜಗತ್ತಿನ ಯಾಂತ್ರಿಕ ಬದುಕಿನ ಬಳುವಳಿ ಎಂದರೂ ತಪ್ಪಾಗಲ್ಲಿಕ್ಕಿಲ್ಲ. ಮನುಷ್ಯ ಕೇವಲ ಹಣದ ವ್ಯಾಮೋಹಕ್ಕೆ ಬಿದ್ದು, ಆರೋಗ್ಯ, ನಿರ್ಲಕ್ಷಿಸಿದಲ್ಲಿ 40-50 ಹರೆಯದಲ್ಲಿಯೇ ಆಹಾರದ ಬದಲು, ಔಷಧಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಬರಲೂಬಹುದು. ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಂಡು, ಒತ್ತಡದ ಬದುಕಿಗೆ ತಿಲಾಂಜಲಿ ಇಟ್ಟು ಆರೋಗ್ಯಪೂರ್ಣ ಜೀವನಶೈಲಿಗೆ ಬದಲಿಸಿಕೊಂಡು, ಸಮತೋಲಿನ ಪ್ರೋಟಿನ್‍ಯುಕ್ತ ಆಹಾರ ಸೇವಿಸಿ ನಿರಂತರ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಸಮಯ ಇನ್ನು ಮಿಂಚಿಲ್ಲ. ಆರೋಗ್ಯಪೂರ್ಣ ಜೀವನಶೈಲಿ ಹೊಂದಿಸಿಕೊಂಡು ಸದೃಡ ಸುಂದರ ಸಮಾಜ ನಿರ್ಮಿಸೋಣ. ಅದರಲ್ಲಿಯೇ ಮನುಕುಲದ ಹಿತ ಅಡಗಿದೆ.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!