ವಿವಾಹ ಬಂಧನ ಹಾಗೂ ಪ್ರಥಮ ರಾತ್ರಿ:ಸಮಸ್ಯೆಗಳು ಏನು?

“ಪ್ರಥಮ ಚುಂಬನಂ ದಂತಭಗ್ನಂ” ಎನ್ನುವಂತೆ ಮೊದಲ ರಾತ್ರಿಯೇ ದಂಪತಿಗಳಲ್ಲಿ ಆಶಾಭಂಗವಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಹಾಗಾದರೆ ಪ್ರಥಮ ರಾತ್ರಿಯೆಂದರೇನು? ವಧು-ವರರಿಬ್ಬರು ಯಾವ ರೀತಿ ಪ್ರಥಮ ಮಿಲನವನ್ನು ಸ್ವಾಗತಿಸಬೇಕು? ಎಂಬುದನ್ನು ತಿಳಿಯಬೇಕು.

ವಿವಾಹವು ಮಾನವ ಉಗಮವಾದಾಗಿನಿಂದ ಜೊತೆಯಲ್ಲಿಯೇ ಬೆಳೆದು ಬಂದಿದೆ. ವೈವಾಹಿಕ ಸಂಬಂಧ ಅಳಿಸಲಾಗದ ಸಂಬಂಧ. ಇದು ಜೀವಂತವಾದುದು. ಇಲ್ಲಿಂದಲೇ ಹೆಣ್ಣು-ಗಂಡಿನ ದಾಂಪತ್ಯ ಜೀವನ ಪ್ರಾರಂಭವಾಗುವುದು. ವಧು-ವರರಿಬ್ಬರೂ ದೇವರು ಮತ್ತು ಹಿರಿಯರ ಮುಂದೆ ಸಾಂಪ್ರದಾಯಿಕವಾಗಿ ವಾಗ್ದಾನ ಮಾಡುವುದರ ಜೊತೆಗೆ ಮುಖ್ಯವಾಗಿ ತಮ್ಮ ಮನಸ್ಸಿನ ಜೊತೆ ವಾಗ್ದಾನ ಮಾಡಬೇಕು. ಎಂದೆಂದಿಗೂ ತಮ್ಮ ಸಂಗಾತಿಗೆ ಬೇಸರ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ದಂಪತಿಗಳಿಬ್ಬರೂ ಜೀವಂತವಾದ ಪ್ರೀತಿಯನ್ನು ಬದುಕಿನ ಅಂತ್ಯದವರೆಗೆ ಮೈಗೂಡಿಸಿಕೊಂಡಿರಬೇಕು.
ಕೆ. ಎಸ್. ನರಸಿಂಹಸ್ವಾಮಿ ಅವರು “ತಾರೆಗಳ ಮೀಟುವೆವು, ಚಂದಿರನ ದಾಟುವೆವು, ಒಲುಮೆಯೊಳಗೊಂದು ನಾವು: ನಮಗಿಲ್ಲ ನೋವು, ಸಾವು”. ಎಂದು ತಮ್ಮ ಕವನವೊಂದರಲ್ಲಿ ಬರೆದಿದ್ದಾರೆ. ಅಂದರೆ ದಾಂಪತ್ಯ ಜೀವನದಲ್ಲಿ ಪ್ರಾಯ, ಮುಪ್ಪು, ನಂತರ ಸಾವು ಬಂದರೂ ಸಹ; ಇವನ್ನು ಮೀರಿದ್ದು. “ಒಲುಮೆ” ಎಂದರೆ ಪ್ರೀತಿ. ದಾಂಪತ್ಯ ಬದುಕಿನಲ್ಲಿ ಏನೇ ಕಷ್ಟ ಕೋಟಲೆಗಳು, ದುಃಖ ದುಮ್ಮಾನಗಳು, ಸಾವು ಬಂದರೂ ಇವೆಲ್ಲವನ್ನೂ ಎದುರಿಸಿ ‘ಪ್ರೀತಿ’ ಎಂಬುದನ್ನು ಅವರು ಉಳಿಸಿಕೊಳ್ಳುವುದು ಮುಖ್ಯ. ಈ ಒಲುಮೆಗೆ ಯಾವಾಗಲೂ ನೋವು-ಸಾವು ಇಲ್ಲ. ದಾಂಪತ್ಯ ಜೀವನದಲ್ಲಿ ಎಲ್ಲವನ್ನೂ ಮೀರಿದ್ದು ಒಲುಮೆ ಎಂಬುದನ್ಜು ವ್ಯಕ್ತಪಡಿಸಿದ್ದಾರೆ. ಈ ದಾಂಪತ್ಯ ಜೀವನ ಪ್ರಾರಂಭವಾಗುವುದು ಪ್ರಥಮ ರಾತ್ರಿಯಿಂದ. ಈ ರಾತ್ರಿಯೇ ಅಮರ, ಮಧುರ ರಾತ್ರಿ.

ಪ್ರಥಮ ರಾತ್ರಿ:
ವಧುವರರಿಬ್ಬರು ಜೀವನ ಸಂಗಾತಿಗಳಾಗಿ ಭಾಷೆ ನೀಡಿ ಮೊದಲ ಬಾರಿ ದೈಹಿಕ ಸಮ್ಮಿಲನ ನಡೆಯುವ ರಾತ್ರಿಗೆ ಮೊದಲ ರಾತ್ರಿ ಅಥವಾ ಪ್ರಥಮ ರಾತ್ರಿ ಎಂದು ಹೆಸರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗೂ ಕಾನೂನುಬದ್ಧವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅನುಮತಿ ನೀಡುವುದು ಎಂಬರ್ಥವೂ ಇದೆ. ಇದಕ್ಕೆ ಪ್ರಸ್ಥ, ಸುಹಾಗ್ ರಾತ್, ಗೋಲ್ಟನ್ ನೈಟ್, ಫಸ್ಟ ನೈಟ್, ಶೋಭನ ಇನ್ನೂ ಮುಂತಾದ ಹಲವಾರು ಹೆಸರುಗಳಿವೆ.

ಪ್ರಥಮ ರಾತ್ರಿ ಎಂದ ಮಾತ್ರಕ್ಕೆ ಆ ದಿನವೇ ಸಂಪೂರ್ಣ ದೈಹಿಕ ಸಂಪರ್ಕ ನಡೆಯಬೇಕೆನ್ನುವ ನಿಯಮ, ನಿಬಂಧನೆಗಳೇನೂ ಇಲ್ಲ. ಹಾಗೆ ಒತ್ತಾಯಪೂರ್ವಕವಾಗಿ ಮಾಡಿದರೆ ಅದು ಬಲಾತ್ಕಾರವಾಗುತ್ತದೆ. ಪ್ರಥಮ ರಾತ್ರಿಯೆಂದರೆ ಎರಡೂ ಮನಸ್ಸುಗಳು ಒಂದಾಗಿ ಆ ಒಪ್ಪಿಗೆಯ ದೈಹಿಕ ಸಂಪರ್ಕಕ್ಕೆ ನಾಂದಿಯಾಗಬೇಕು. ಹಾಗಾದರೆ ಮಾತ್ರ ಅದು ಪ್ರಥಮ ರಾತ್ರಿಯಾಗುತ್ತದೆ. ಆ ರಾತ್ರಿ ಜೀವನದ ಕೊನೆಯವರೆಗೂ ಅಳಿಯದೆ ಉಳಿಯುವ ರಾತ್ರಿಯಾಗಿರುತ್ತದೆ.

ಪ್ರಥಮ ರಾತ್ರಿಯೆನ್ನುವುದು ಮದುವೆಯ ದಿನವೇ ಇರುವ ರಾತ್ರಿಯೇ ಅಥವಾ ನಂತರ ದಿನಗಳಲ್ಲಿ ನಡೆಯುವ ರಾತ್ರಿಯೇ ಎನ್ನುವುದು ಹಲವಾರು ಜನರಿಗೆ ಸಂದೇಹವಾಗಿದೆ. ಹೌದು, ಕೆಲವು ಪಂಗಡಗಳಲ್ಲಿ ಮದುವೆಯ ದಿನವೇ ಮೊದಲ ರಾತ್ರಿ ಏರ್ಪಡಿಸಿರುತ್ತಾರೆ. ಮತ್ತೆ ಕೆಲವು ಪಂಗಡಗಳಲ್ಲಿ ಮದುವೆಯೆಲ್ಲಾ ಮುಗಿದ ಮೇಲೆ ಹುಡುಗ-ಹುಡುಗಿಯರಲ್ಲಿ ಮುಕ್ತವಾದ ವಾತಾವರಣ ಸೃಷ್ಟಿಸುತ್ತಾರೆÉ. ಪ್ರಥಮ ರಾತ್ರಿ ಯಾವಾಗ ಏರ್ಪಡಿಸಿದರೆನ್ನುವುದು ಮುಖ್ಯವಾಗಿರುವುದಿಲ್ಲ. ಆ ರಾತ್ರಿ ವಧುವರರಿಬ್ಬರಲ್ಲಿ ನಡೆಯುವ ಮಾನಸಿಕ ಹಾಗೂ ದೈಹಿಕ ಮಿಲನ ಮಾತ್ರ ಮುಖ್ಯವಾಗಿರುತ್ತದೆ.

ಪ್ರಥಮ ರಾತ್ರಿಯ ವರ್ಣನೆ:

ಪುರಾತನ ಕೃತಿಗಳಲ್ಲಿ ಪ್ರಥಮ ರಾತ್ರಿ: ನಮ್ಮ ಹಲವಾರು ಪುರಾತನ ಕೃತಿಗಳಲ್ಲಿ ಪ್ರಥಮ ರಾತ್ರಿಯ ವರ್ಣನೆಯನ್ನು ವಿಧವಿಧವಾಗಿ ವರ್ಣರಂಜಿತವಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಕಾಳಿದಾಸನ- ಕುಮಾರಸಂಭವ, ವಾತ್ಸ್ಯಾಯನನ ಕಾಮಸೂತ್ರ ಮುಂತಾದ ಗ್ರಂಥಗಳಲ್ಲಿ ಪ್ರಥಮ ರಾತ್ರಿಯ ಪ್ರೇಮ ಸಲ್ಲಾಪಗಳನ್ನು ಮನಮೋಹಕವಾಗಿ ವರ್ಣಿಸಲಾಗಿದೆ.

ಭಾರತೀಯ ಚಲನಚಿತ್ರಗಳಲ್ಲಂತೂ ಪ್ರಥಮ ರಾತ್ರಿಯ ವರ್ಣನೆ ಅದರಲ್ಲೂ ಶಯನಾ ಗೃಹದ ವರ್ಣನೆ ವಿವಿಧ ರೀತಿಯಲ್ಲಿ ಕಂಡುಬರುತ್ತದೆ. ವಿವಿಧ ರೀತಿಯ ಹೂಗಳಿಂದ ಅಲಂಕೃತಗೊಳಿಸುವುದು, ನಾನಾ ರೀತಿಯ ಭಕ್ಷ್ಯ ಭೋಜನಗÀಳಿಂದ, ಪಾನೀಯಗಳಿಂದ ಅಲಂಕರಿಸಿ ವಿಶೇಷ ರೀತಿಯಲ್ಲಿ ಸಿದ್ಧಪಡಿಸಿರುವ ಚಿತ್ರಣಗಳನ್ನು ತೋರಿಸಲಾಗುತ್ತದೆ. ಹಾಗೆಯೇ ಲೈಂಗಿಕ ಪ್ರಚೋದಕ ಪುಸ್ತಕಗಳು, ಪತ್ರಿಕೆಗಳು, ಲೈಂಗಿಕ ಚಿತ್ರಗಳು (Blue Films), ಕಥೆ, ಕಾದಂಬರಿಗಳಲ್ಲಿ ಹಲವಾರು ರೀತಿಯಲ್ಲಿ ವರ್ಣನೆಮಾಡಿ ನೈಜತೆಗಿಂತ ವಿಭಿನ್ನವಾಗಿ ಚಿತ್ರಿಸಲಾಗಿರುತ್ತದೆ. ಈ ಬಗ್ಗೆ ಯುವಕ-ಯುವತಿಯರಿಗೆ ಪ್ರಥಮ ರಾತ್ರಿಯ ಬಗ್ಗೆ ಇಲ್ಲಸಲ್ಲದ ಕಲ್ಪನೆ ಮಾಡಿಕೊಂಡು ತಪ್ಪು ದಾರಿಗಳನ್ನು ತುಳಿಯಲು ಸಹಾಯ ಮಾಡುತ್ತವೆ. ಈ ರೀತಿಯ ಕಲ್ಪನೆಗಳು ಸಂಪ್ರದಾಯವಾದಿ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ಕಲ್ಪನೆಗಳು ಕಂಡುಬರುವುದು ಅತಿ ಕಡಿಮೆ. ಏಕೆಂದರೆ ಅವರಲ್ಲಿ ಮುಕ್ತ ವಾತಾವರಣವಿರುತ್ತದೆ. ಯುವಕ/ಯುವತಿಯರು ಆಟೋಟಗಳಲ್ಲಿ, ಪಾಠಕಲಿಕೆಗಳಲ್ಲಿಒಟ್ಟಿಗೆ ಕಲಿಯುತ್ತಾರೆ. ಹಾಗೆಯೇ ಮುಕ್ತ ಲೈಂಗಿಕ ಕ್ರಿಯೆ, ವಿವಾಹಪೂರ್ವ ಲೈಂಗಿಕ ಕ್ರಿಯೆಗೂ ಅವಕಾಶವಿರುತ್ತದೆ. ಅದಕ್ಕೆ ಅಲ್ಲಿನ ಸಮಾಜ, ಕಾನೂನು ಸಮ್ಮತಿ ನೀಡಿರುತ್ತದೆ. ಆದ್ದರಿಂದ ಪ್ರಥಮ ರಾತ್ರಿಯು ವಿಫಲವಾಯಿತೆಂದು ಆ ದೇಶಗಳಲ್ಲಿ ವೈದ್ಯರ ಹತ್ತಿರ ಸಲಹೆ, ಚಿಕಿತ್ಸೆ ಪಡೆಯಲು ಹೋಗುವುದು ಇಲ್ಲವೇ ಇಲ್ಲ.

ಸಮಸ್ಯೆಗಳು ಏನು?

ಪ್ರಥಮ ರಾತ್ರಿಯಂದು ವಧುವರರಿಬ್ಬರಿಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಸಮಸ್ಯೆಗಳಿರುತ್ತವೆ.
ವಧುವಿಗೆ: ತಾನು ಇದುವರೆಗೂ ಇದ್ದ ಪರಿಸರ, ತನ್ನವರೆಲ್ಲರನ್ನೂ ಬಿಟ್ಟು ಏಕಾಂಗಿಯಾಗಿ ಪತಿಯನ್ನಾಶ್ರಯಿಸಿ ಬಂದಿರುತ್ತಾಳೆ. ಸಾಮಾನ್ಯವಾಗಿ ವಧುವಿಗೆ ಆತಂಕ, ದುಗುಡ, ನೋವು, ಸ್ತನಗಳ ಗಾತ್ರಗಳ ಬಗ್ಗೆ ಚಿಂತೆ, ಮುಟ್ಟಿನ ದಿನಗಳ ಬಗ್ಗೆ ಚಿಂತೆ, ಗರ್ಭ ಧರಿಸುವ ಬಗ್ಗೆ ಆತಂಕ, ಕನ್ಯಾಪೊರೆ ಹರಿಯುವ ಬಗ್ಗೆ, ತನ್ನ ಗಂಡನಿಗೆ ತೃಪ್ತಿ ನೀಡುತ್ತೇನೆಯೋ ಇಲ್ಲವೋ ಎಂಬ ಭಯ ಇತ್ಯಾದಿ ಸಮಸ್ಯೆಗಳಿರುತ್ತವೆ. ಕೆಲವು ಪಂಗಡಗಳಲ್ಲಿ ಹುಡುಗಿಯ ಶೀಲತ್ವದ ಬಗ್ಗೆ ಮಿರಿಮೀರಿದ ಮಹತ್ವವನ್ನು ಕೊಡಲಾಗುತ್ತದೆ. ಇಂತಹ ಪಂಗಡಗಳಲ್ಲಿ ಪ್ರಥಮ ರಾತ್ರಿಯಂದೇ ವಧುವು ತನ್ನ ಕನ್ಯತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ಕನ್ಯಾಪೊರೆ ಹರಿದಿರುವುದಕ್ಕೆ ಉಡುಪಗಳ ಮೇಲೆ ಹಾಸಿಗೆ, ಹೊದಿಕೆಗಳ ಮೇಲೆ ರಕ್ತದ ಕಲೆಯನ್ನು ತೋರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಒತ್ತಡಕ್ಕೆ ಬಿದ್ದು, ಆಕೆ ಮಾನಸಿಕವಾಗಿ ಹಿಂಸೆಗೆ ಗುರಿಯಾಗುತ್ತಾಳೆ. ಒಂದು ವೇಳೆ ತನ್ನ ಶೀಲತ್ವದ ಬಗ್ಗೆ ಸಾಬೀತುಪಡಿಸದಿದ್ದರೆ, ಹಲವಾರು ದೂಷಣೆಗಳಿಗೆ ಗುರಿಯಾಗಬೇಕಾಗುತ್ತದೆ.

ವರನಿಗೆ: ತಾನು ಆಕೆಯೊಂದಿಗೆ ಸರಿಯಾಗಿ ವರ್ತಿಸುತ್ತೇನೋ ಇಲ್ಲವೋ, ಆಕೆಗೆ ತೃಪ್ತಿ ಸಿಗುತ್ತದೆಯೋ ಹೇಗೆ? ಶೀಘ್ರಸ್ಖಲನ, ಶಿಶ್ನ ನಿಮಿರುವಿಕೆ, ಶಿಶ್ನ-ವೃಷಣಗಳ ಗಾತ್ರ, ಉದ್ದ, ಗಡಸುತನ ಇವುಗಳ ಬಗ್ಗೆ ಚಿಂತೆ ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತವೆ.
ಈ ಆತಂಕಗಳಿಗೆ, ಸಮಸ್ಯೆಗಳಿಗೆ ಹಲವಾರು ಕಾರಣಗಳಿರುತ್ತವೆ. ಅವುಗಳೆಂದರೆ ವಧುವಿಗೆ, ಜನನಾಂಗಗಳು ಹಾಗೂ ಸ್ತನಗಳ ಬೆಳವಣಿಗೆಯಾಗಿರುವುದು, ಸೋಂಕು, ಲೈಂಗಿಕ ಅರಿವಿಲ್ಲದಿರುವುದು ಇತ್ಯಾದಿ. ಹಾಗೆಯೇ ವರನಿಗೆ ಶಿಶ್ನದಲ್ಲಿನ ದೋಷ, ಹಸ್ತಮೈಥುನ, ಸಲಿಂಗಕಾಮ ಶಿಶ್ನದ ಚರ್ಮ ಹಿಂದೆ ಸರಿಯದಿರುವುದು, ಹಿಂದಿನ ಅನೈತಿಕ ಸಂಬಂಧ ಇತ್ಯಾದಿ ಅಂಶಗಳು ಕಾರಣವಾಗುತ್ತದೆ.

ಪ್ರಥಮ ರಾತ್ರಿಯ ಸೋಲು ಅಥವಾ ವಿಫಲ:
ಪ್ರಥಮ ರಾತ್ರಿಯಲ್ಲಿ ವಧುವರರಲ್ಲಿ ಸಕ್ರಿಯ ಆರೋಗ್ಯಕರ ಲೈಂಗಿಕ ಕ್ರಿಯೆ ನಡೆಯದೇ ಇದ್ದರೆ ಅದನ್ನು ‘ಪ್ರಥಮ ರಾತ್ರಿಯ ಸೋಲು’ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಶೇ.20-30 ರಷ್ಟು ನವದಂಪತಿಗಳಲ್ಲಿ ಈ ಸೋಲು ಉಂಟಾಗುತ್ತದೆ. ಪ್ರಥಮ ರಾತ್ರಿಯ ಸೋಲಿಗೆ ನಾನಾ ಕಾರಣಗಳಿರುತ್ತವೆ. ಅವುಗಳಲ್ಲಿ ಬಹಳ ಮುಖ್ಯವಾಗಿ ವಧುವರರಲ್ಲಿ ಲೈಂಗಿಕ ಜ್ಞಾನದ ಅರಿವು ಸರಿಯಾಗಿ ಇಲ್ಲದೆ ಇರುವುದು. ಪುರುಷ ಮತ್ತು ಮಹಿಳೆಯರ ಜನನೇಂದ್ರಿಯಗಳ ರಚನೆಯ ಬಗ್ಗೆ ಉತ್ತಮ ಮಾಹಿತಿ, ತಿಳಿವಳಿಕೆ ಇಲ್ಲದಿರುವುದು. ಇದರ ಜೊತೆಗೆ ಜನನೇಂದ್ರಿಯಗಳ ಬೆಳವಣಿಗೆಯಲ್ಲಿನ ದೋಷ ಅದರಲ್ಲೂ ಪುರುಷರಲ್ಲಿ ಶಿಶ್ನವಿನ ಬಿಗಿಯಾದ ಮುಂದೊಗಲು ಹಾಗೂ ಶೀಘ್ರಸ್ಖಲನ, ಮಹಿಳೆಯರಲ್ಲಿ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು ಪ್ರಥಮ ರಾತ್ರಿಯ ಸೋಲಿಗೆ (ವಿಫಲತೆಗೆ) ಕಾರಣವಾಗುತ್ತದೆ. ಇದರ ಜೊತೆಗೆ ಈ ಹಿಂದೆ ಆಗಿದ್ದಂತಹ ಭಯಾನಕ ಘಟನೆಗಳು, ಅನುಭವಗಳು ಇದಕ್ಕೆ ಕಾರಣವಾಗಬಹುದು. ಕೆಲವರಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಅಸಹ್ಯವಿರಬಹುದು. ಅದು ಕೆಟ್ಟದ್ದೆಂಬ ಭಾವನೆ ಇರಬಹುದು, ಅದನ್ನು ಮಾಡುವುದು ಪಾಪ, ಕೊಳಕು ಎಂಬ ಭಾವನೆ ಕಾರಣವಾಗುತ್ತದೆ. ಸೋದರ ಸಂಬಂಧಿಗಳಲ್ಲಿನ ವಿವಾಹದಲ್ಲಿ ಅಣ್ಣ-ತಂಗಿಯರ ನಡುವೆ ಇರುವಂತಹ ವಾತ್ಸಲ್ಯಮಯ ಭಾವನೆ ಮೂಡುವುದು, ಬಲವಂತ ಮದುವೆಗಳಲ್ಲಿ ದಂಪತಿಗಳಲ್ಲಿ ವಿರಸವುಂಟಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗದೇ ಇರುವುದು ಪ್ರಥಮ ರಾತ್ರಿಯ ಸೋಲಿಗೆ ಕಾರಣವಾಗುತ್ತದೆ. ಮತ್ತೆ ಕೆಲವು ಪಂಗಡಗಳಲ್ಲಿ ಅದರಲ್ಲೂ ಸಹ ಮದುವೆ ದಿನವೇ ಪ್ರಥಮ ರಾತ್ರಿಯನ್ನು ಏರ್ಪಡಿಸಿರುತ್ತಾರೆ. ಇದರಿಂದ ವಧುವರರಿಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಧಾರ್ಮಿಕ ವಿಧಿವಿಧಾನಗಳಿಂದ ಬಳಲಿ ಬೆಂಡಾಗಿರುತ್ತಾರೆ. ಇದರಿಂದ ಅವರಿಬ್ಬರಲ್ಲಿ ಲೈಂಗಿಕ ಕ್ರಿಯೆ ನಡೆಯಲು ಸಾಧ್ಯವಾಗುವುದಿಲ್ಲ.

ಪ್ರಥಮ ರಾತ್ರಿಯ ಸೋಲಿನಿಂದಾಗುವ ದುಷ್ಪರಿಣಾಮಗಳು:
ಪ್ರಥಮ ರಾತ್ರಿ ಸೋಲಿನಿಂದಾಗಿ ದಂಪತಿಗಳಲ್ಲಿ ಬಾಹ್ಯಾಂತರಿಕವಾಗಿ ನಾನಾ ರೀತಿಯ ದುಷ್ಪರಿಣಾಮಗಳು ಉಂಟಾಗಬಹುದು. ಪ್ರಪ್ರಥಮವಾಗಿ ಕೀಳರಿಮೆ ಉಂಟಾಗಿ, ಮುಂದೆಯೂ ಸಂಭೋಗ ಮಾಡಲಾಗದಂತಹ ಸ್ಥಿತಿ ಉಂಟಾಗಬಹುದು. ಇದರಿಂದ ಮಾನಸಿಕ ಖಿನ್ನತೆ, ಒತ್ತಡ, ದುಗುಡ, ಆತಂಕ ಉಂಟಾಗಬಹುದು. ಲೈಂಗಿಕ ನಿಷ್ಕ್ರಿಯತೆ, ಬಂಜೆತನ ಸಮಸ್ಯೆಗೂ ತುತ್ತಾಗಬಹುದು. ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಬಹುದು.

ತಪಾಸಣಾ ಕ್ರಮಗಳು ಯಾವುವು?

ಪ್ರಥಮ ರಾತ್ರಿಯ ಸೋಲನ್ನು ಕಂಡು ಹಿಡಿಯಲು ಈ ಕೆಲವೊಂದು ತಪಾಸಣಾ ಕ್ರಮಗಳಿಂದ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬಹುದು.

  • ದೇಹ ತಪಾಸಣೆ
  • ಜನನೇಂದ್ರಿಯಗಳ ತಪಾಸಣೆ
  • ಹಾರ್ಮೋನ್ ಪರೀಕ್ಷೆ
  • ಜನನೇಂದ್ರಿಯಗಳ ಸ್ಕ್ಯಾನಿಂಗ್ ಮುಂತಾದ ಪರೀಕ್ಷೆಗಳನ್ನು ಮಾಡಬಹುದು.

ಚಿಕಿತ್ಸೆ ಏನು?

ವರನಿಗೆ: ಶಿಶ್ನವಿನ ಮುಂದೊಗಲಿನ ಶಸ್ತ್ರಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆ, ಲೈಂಗಿಕ ಶಿಕ್ಷಣದ ಅರಿವು.
ವಧುವಿಗೆ: ಯೋನಿಪೊರೆ ಹರಿಯದಿದ್ದರೆ, ವೈಬ್ರೇಟರ್ ಅಥವಾ ಶಸ್ತ್ರಚಿಕಿತ್ಸೆ ಮುಖಾಂತರ ಸರಿಪಡಿಸುವುದು, ಸೋಂಕಿಗೆ ಸೂಕ್ತ ಚಿಕಿತ್ಸೆ ನೀಡಬಹುದು.

ಪರಸ್ಪರ ಸಮಾಲೋಚನೆ:
ವಧುವರರಿಬ್ಬರೂ ಸೇರಿ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ, ಚಿಕಿತ್ಸೆಯನ್ನು ಪಡೆದ ನಂತರ ಮುಕ್ತ ಸಮಾಲೋಚನೆಯ ಮುಖಾಂತರ ಶೇ.90 ರಿಂದ 95 ರಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇಬ್ಬರಿಗೂ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ.

ಮುಂಜಾಗ್ರತಾ ಕ್ರಮಗಳು ಯಾವುವು?

ವಿವಾಹಪೂರ್ವ ಸಮಾಲೋಚನೆ: ವಿವಾಹವಾಗಬೇಕೆಂದು ನಿರ್ಧರಿಸಿರುವ ವಧುವರರು ಒಮ್ಮೆ ತಜ್ಞ ವೈದ್ಯರನ್ನು ಭೇಟಿ ಮಾಡಿ, ತಮ್ಮ ಮುಂದಿನ ವೈವಾಹಿಕ ಜೀವನದ ಬಗ್ಗೆ ಚರ್ಚಿಸಿ, ಲೈಂಗಿಕ ತಿಳಿವಳಿಕೆ ಹೆಚ್ಚಿಸಿಕೊಳ್ಳುವುದು ಒಳ್ಳೆಯದು. ಹಾಗೆ ಏನಾದರೂ ಶಾರೀರಿಕ ನ್ಯೂನತೆಗಳಿದೆಯೇ, ಇಲ್ಲವೇ ಎಂಬುದನ್ನು ತಪಾಸಣೆಗಳ ಮೂಲಕ ತಿಳಿದುಕೊಳ್ಳುವುದು ಹೆಚ್ಚು ಸೂಕ್ತ.

ವಧು ಈ ಕೆಲವೊಂದು ಅಂಶಗಳ ಬಗ್ಗೆ ಗಮನಹರಿಸಬೇಕು:

  • ಮುಟ್ಟಿನ ದಿನಗಳ ಬಗ್ಗೆ ಎಚ್ಚರಿಕೆ
  • ಮುಟ್ಟನ್ನು ಮುಂದಕ್ಕೆ, ಹಿಂದಕ್ಕೆ ಹಾಕಲು ಮಾತ್ರೆಗಳು
  • ಫಲವತ್ತಾದ ದಿನಗಳ ಬಗ್ಗೆ ಅರಿವು, ನೋವು ನಿವಾರಕ ಮಾತ್ರೆ, ಮುಲಾಮು, ಗರ್ಭನಿರೋಧಕ ಮಾತ್ರೆಗಳು.
  • ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಲೈಂಗಿಕ ತಿಳಿವಳಿಕೆ.

ವರನು ಈ ಕೆಳಕಂಡ ಅಂಶಗಳನ್ನು ಗಮನಿಸಬೇಕು:

  • ಶಿಶ್ನದ ಚರ್ಮದ ಬಿಗಿಯಾದ ಮುಂದೊಗಲು, ಶೀಘ್ರಸ್ಖಲನ, ಲೈಂಗಿಕ ಕ್ರಿಯೆ ಬಗ್ಗೆ ಅರಿವು, ನಿರೋಧ್ ಬಳಕೆಯ ಬಗ್ಗೆ ಅರಿವು.
  • ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಲೈಂಗಿಕ ತಿಳಿವಳಿಕೆ.
  • ಪ್ರಥಮ ರಾತ್ರಿ ಕನ್ಯಾಪೊರೆಯನ್ನು ಭೇದಿಸಲಾಗುವುದೋ ಇಲ್ಲವೋ, ಸಂಭೋಗ ಮಾಡಲಾಗುತ್ತದೆಯೋ ಇಲ್ಲವೋ ಎಂಬ ಭಯದಿಂದ ಎಷ್ಟೋ ಯುವಕರು ಮದುವೆ ಆಗಲು ಭಯಪಡುತ್ತಾರೆ.

ಸರ್ವಜ್ಞ ತನ್ನ ವಚನವೊಂದರಲ್ಲಿ
ಮನಬಂದ ಹೆಣ್ಣನ್ನು ವಿನಯದಲಿ ಕರೆದಿತ್ತು
ಮನಮುಟ್ಟಿ ಬಾಳ್ವೆ ಮಾಡಿದರೆ ಅಮೃತದ
ಕೆನೆಯ ಸವಿದಂತೆ ಸರ್ವಜ್ಞ
ತಾನು ಬಯಸಿದ ಹೆಣ್ಣನ್ನು ವಿನಯದಲಿ ಕೇಳಿ ಮದುವೆಯಾಗಿ ಮನಸಾರೆ ಮುಟ್ಟಿ ಪ್ರೀತಿಸಿ ಸಂಸಾರ ಮಾಡಿದರೆ ಅಮೃತದ ಕೆನೆಯನ್ನು ಸವಿದಂತಾಗುವುದು ಎಂದು ಹೇಳಿದ್ದಾನೆ. ಎರಡು ಮನಸ್ಸುಗಳನ್ನು ಬೆಸೆಯುವ ಮಧುರವಾದ ಬಾಂಧವ್ಯವೇ “ಮದುವೆ” ಎಂಬುದು ಇದರರ್ಥ.

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!