ಶಾಸ್ತ್ರೋಕ್ತ ವಿಧಿಯಲ್ಲಿ ಸ್ತನ್ಯಪಾನ ಮಾಡಿಸುವುದು ಹೇಗೆ?

ಆಯುರ್ವೇದದಿಂದ ಸ್ತನ್ಯಪಾನದಿಂದಾಗುವ ಪ್ರಯೋಜನಗಳು ಮತ್ತು ಮಗುವಿಗೆ ನೀಡಬಹುದಾದ ಪೂರಕ ಆಹಾರಗಳು

ತಾಯಿ ಹಾಲು ಕುಡಿಯುವುದು ಸಹಜಧರ್ಮ , ತಾಯಿ ಹಾಲು ಕುಡಿಸುವುದು ಪರಧರ್ಮ
ತಾನೂ, ತಾಯಿ ಹಾಲು ಕುಡಿದು, ಮಗುವಿಗೂ ತನ್ನ ಹಾಲು ಕುಡಿಸುವುದು ಪರಮಧರ್ಮ
ತಾಯಿ ಹಾಲಿನ ಜೊತೆ ಮಗುವಿಗೆ ಪೂರಕ ಆಹಾರ ಮತ್ತು ಪ್ರೀತಿ ಧಾರೆ ಎರೆಯುವುದು ಮನುಷ್ಯ ಧರ್ಮ.

ಪೂರಕ ಆಹಾರ, ಪ್ರೀತಿಯ ಧಾರೆ ಪ್ರಸನ್ನಾರವಿಂದದ ಮಂದಸ್ಮಿತ ಮಗುವಿನ ಬೆಳವಣಿಗೆಗೆ ಕಾರಣವಾಗುತ್ತದೆ. ಬನ್ನಿ ಮಹಿಳೆಯರೇ ನಗುಮುಖದಿಂದ, ಹೃತ್ಪೂರ್ವಕವಾಗಿ ತಾಯಿ ಧರ್ಮವ ಪಾಲಿಸಲು ಹಾಗೂ ಪಾಲಿಸುವಂತೆ ಮಾಡಲು ಮತ್ತು ಮಗುವಿನ ಕಿಲ ಕಿಲ ನಗುವಿನ ತರಂಗವನ್ನು ಕೇಳಲು ಒಂದಾಗಿ ಬುನಾದಿಯ ನಾಂದಿ ಹಾಡೋಣ.

ಹೆಣ್ಣು ಪರಿಪೂರ್ಣ ಮಹಿಳೆಯಾಗುವುದು ಮಹತ್ತರವಾದ ತಾಯ್ತನದ ಮೆಟ್ಟಿಲನ್ನು ಏರಿದಾಗ. ಬರಿ ಮೆಟ್ಟಿಲನ್ನು ಏರಿದರೆ ಸಾಲದು. ಅದಕ್ಕೆ ಸರಿಯಾಗಿ, ತನ್ನ ಮಗುವಿಗೆ ಎದೆಯ ಹಾಲುಣಿಸಿದಾಗ ಮಾತ್ರ ಆ ತಾಯ್ತನ ಸಾಕಾರವಾಗುವುದು. ಇಡೀ ಪ್ರಪಂಚದಲ್ಲಿ ತನ್ನದೆ ಆದ ಒಂದು ವಿಶಿಷ್ಟ ಸಂಸ್ಕøತಿಗೆ ನಮ್ಮ ಭಾರತ ದೇಶ ಮಾದರಿಯಾಗಿದೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಂತಹ ಈ ಸಂಸ್ಕøತಿಯಲ್ಲಿ ಸ್ತನ್ಯಪಾನವು ವಿಶಿಷ್ಟತೆಯನ್ನು ಪಡೆದಿದೆ. ಇದರ ಮಹತ್ವದ ಬಗ್ಗೆ ನಮ್ಮ ಆಯುರ್ವೇದದಲ್ಲಿ ಈ ರೀತಿ ಹೇಳಿದ್ದಾರೆ.
ಚತ್ವಾರ: ಸಾಗರಸ್ತುಭ್ಯಂ ಸ್ತನಯೋಃ ಕ್ಷೀರ ವಾಹಿನಃ |
ಭವಂತು ಸುಭಗೆ ನಿತ್ಯಂ ಬಾಲಸ್ಯ ಬಲವೃದ್ದಯೇ
ಪಯೋ ಅಮೃತರಸಂ ಪೀತ್ವಾ ಕುಮಾರಸ್ತೆ ಶುಭಾನನೇ |
ಧೀರ್ಘಾಯುರಾವಾಪ್ನೋತು ದೇವಾಃ ಪ್ರಾಶ್ಯಾಮೃತಂ ಯಥಾ ||
ನಾಲ್ಕು ಸಾಗರಗಳು ಸೇರಿ, ಸಮೃದ್ಧವಾಗಿ ಉತ್ಪನ್ನವಾಗಿ ಅಮೃತವಾಹಿನಿಯಾಗಿ ಹರಿದು ಬಂದಂತಹ ಸ್ತನ್ಯವನ್ನು ದಿನ ನಿತ್ಯವೂ ತಾಯಿ ಪ್ರಸನ್ನಚಿತ್ತಳಾಗಿ ಉಣಿಸಿದಲ್ಲಿ ಮಗುವು ಸದ್ಗುಣ ಸಂಪನ್ನನಾಗಿ, ದೃಢನಾಗಿ (ದೈಹಿಕ ಮತ್ತು ಮಾನಸಿಕ) ನಿರೋಗಿಯಾಗಿ, ದೀರ್ಘಾಯುಷಿಯಾಗುತ್ತಾನೆ.
ಪಯಃ ಪುತ್ರಸ್ಯ ಸಂಸ್ಪರ್ಶಾದ್ ದರ್ಶನಾತ್ ಸ್ಮರಣಾತ್ ಅಪಿ ಗೃಹಣಾದ್
ಅಪ್ಯುರೋಜಸ್ಯ ಸಂಪ್ರವೃತ್ತತೆ | ಸ್ನೇಹ ನಿರಂತರಸ್ತಸ್ಯ ಪ್ರವಾಹೇ ಹೇತುರುಚ್ಯತೆ|
ಭಾವ ಪ್ರಕಾಶ ಪೂರ್ವ
ಅಂದರೆ ತಾಯಿಗೆ ಮಗುವಿನ ಸ್ಪರ್ಶ (ಎತ್ತಿಕೊಂಡಾಗ) ದರ್ಶನ (ಆ ಪುಟ್ಟ ಕಂದಮ್ಮನ ಆಟಪಾಟಗಳ ಕೇಕೆ), ಸ್ಮರಣೆ (ಮಗುವಿನಿಂದ ದೂರವಾದಾಗ ತನ್ನ ಭಾವನಾ ಲೋಕದಲ್ಲಿ ಮಗುವನ್ನು ನೆನೆಸಿಕೊಳ್ಳುವುದು, ಅಥವಾ ಗತಿಸಿದ ದಿನಗಳ ಮೆಲಕು ಹಾಕುವಿಕೆ) ಮತ್ತು ಬಾಚಿ, ತಬ್ಬಿ ಮಗುವಿನ ಸುತ್ತ ಕೈ ಬಳಸಿ ಹಿಡಿದು ಹಾಲುಣಿಸುವುದು ಇವೆಲ್ಲವುಗಳಿಂದ ಓಜಸ್ಸಿನ ಸಮಾನ ಸ್ತನ್ಯವು ಪ್ರವೃತ್ತಿಯಾಗುತ್ತದೆ. ಮಗುವಿನ ಮೇಲಿನ ಮಮತೆಯೇ, ಸ್ತನ್ಯವು ನಿರಂತರವಾಗಿ ಹರಿಯಲು ಕಾರಣವಾಗುತ್ತದೆ.
ಮಾತು ರೇವ ಪಿಬೆತ್ ಸ್ತನ್ಯಂ ಪರಂ ದೇಹವೃದ್ದಯೇ
ಸ್ತನ್ಯ ಧಾತ್ರ ಯಾವುಭೇ ಕಾರ್ಯೇ ||
ಅಷ್ಟಾಂಗ ಹೃದಯ ಉತ್ತರ ಸ್ಥಾನ
ಅಂದರೆ, ತಾಯಿಯ ಹಾಲೇ ಮಗುವಿನ ದೇಹವೃದ್ದಿಗೆ ಶ್ರೇಷ್ಠವಾದದ್ದು. ತಾಯಿಯ ಅನುಪಸ್ಥಿತಿಯಲ್ಲಿ ಉಪಮಾತೆಯನ್ನು (ಧಾತ್ರಿ) ನೇಮಿಸಲು ನಮ್ಮ ಆಚಾರ್ಯರು ಹೇಳಿರುತ್ತಾರೆ. ಧಾತ್ರಿಯ ಹಾಲು ಈ ಕಾರ್ಯವನ್ನು ನಿರ್ವಹಿಸುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ನಮ್ಮ ಪೂರ್ವಜರು ತಾಯಿ ಹಾಲಿಗೆ ಅದೆಷ್ಟು ಪ್ರಾಮುಖ್ಯತೆಯನ್ನು ನೀಡಿದ್ದರೆಂದರೆ ತಾಯಿಯ ಹಾಲಿಗೆ ಬದಲಾಗಿ ಮತ್ತೊಬ್ಬ ತಾಯಿಯೇ ಬೇಕು. ಬೇರೆ ಯಾವ ತರಹದ ವ್ಯವಸ್ಥೆಯು (ಡಬ್ಬಿ ಹಾಲು, ಬಾಟಲಿ ಹಾಲು, ಆಕಳ ಹಾಲು) ಇದಕ್ಕೆ ಸರಿಸಾಟಿಯಾಗುವುದಿಲ್ಲ. ವಿಶ್ವಮಾತೆಯೆಂದರೆ, ಬರೀ ತನ್ನ ಮಗುವಿಗೆ ಅಷ್ಟೇ ಅಲ್ಲದೆ, ಬೇರೊಂದು ಮಗುವಿಗೆ ಹಾಲುಣಿಸಿ, ಜೀವದಾನ ಮಾಡಿದಂತಹ ಕೀರ್ತಿ ಈ ವಿಶ್ವಮಾತೆಗೆ ಸಲ್ಲುತ್ತದೆ. ಉದಾಹರಣೆಗೆ ನಮ್ಮ ಪುರಾಣಗಳಲ್ಲಿ ಬಂದಿರತಕ್ಕಂಥಹ ಶ್ರೀ ಕೃಷ್ಣ ಪರಮಾತ್ಮರ ಜನುಮಕ್ಕೆ ದೇವಕಿ ಕಾರಣಳಾದರೂ, ಎದೆ ಹಾಲುಣಿಸಿ, ಪ್ರೀತಿಯ ಧಾರೆಯನ್ನೆರೆದ ಯಶೋದ ಮಾತೆ ಎಲ್ಲರ ಬಾಯಲ್ಲೂ ಜಗಜನಿತೆಯಾದಳು.
ಅತೋ ಅನ್ಯಥಾ ನಾನಸ್ತನ್ಯೋಪಯೋಗಸ್ಯ ಅಸಾತ್ಮ್ಯದ್ ವ್ಯಾಧಿ ಜನ್ಮ ಭವತಿ ||
ಸುಶ್ರುತಾ ಶಾರೀರ ಸ್ಥಾನ
ಅಂದರೆ, ತಾಯಿಯ ಅಥವಾ ಧಾತ್ರಿಯ ಹಾಲನ್ನು ತ್ಯಜಿಸಿ, ಬೇರೆ ಹಾಲನ್ನು ಉಣಿಸಿದಲ್ಲಿ ಮಗುವಿಗೆ ಅದು ಆಸಾತ್ಮ್ಯ. ಅಂದರೆ ಅಪಥ್ಯವಾಗಿ ಪರಿಣಮಿಸಿ, ವ್ಯಾಧಿ ಉತ್ಪತ್ತಿಯನ್ನುಂಟು ಮಾಡುತ್ತದೆ. ದುಷ್ಪರಿಣಾಮಗಳನ್ನು ಬೀರತಕ್ಕಂತಹ ದುಬಾರಿಯಾದ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವಂತಹ ಡಬ್ಬಿ ಹಾಲು, ಬಾಟಲಿ ಹಾಲು ಇವುಗಳ ಮೋಹಕ್ಕೆ ಒಳಗಾಗದಿರಿ. ಉತ್ಪಾದಕರ ಆಕರ್ಷಕ ಜಾಹೀರಾತುಗಳಿಗೆ ತಾಯಂದಿರೇ ಮರಳು ಹೋಗದಿರಿ.
ಒಮ್ಮೆ ನಮ್ಮ ಸುತ್ತಮುತ್ತಲಿನ ಪರಿಸರ, ಪ್ರಾಣಿ ಸಂಕುಲದ ಸೂಕ್ಷ್ಮ ಅವಲೋಕನ ಮಾಡಿದರೆ ಪ್ರಾಣಿಗಳು ತಮ್ಮ ಮರಿಗಳಿಗೆ ಹುಟ್ಟಿದ ತಕ್ಷಣವೇ ತನ್ನ ನಾಲಿಗೆಯಿಂದ ಮರಿಯನ್ನು ಮುದ್ದಿಸಿ, ಹಾಲನ್ನು ಕುಡಿಸುತ್ತವೆ. ಇಡೀ ಪ್ರಾಣಿ ಕುಲದಲ್ಲಿ ಮಾನವ ಶ್ರೇಷ್ಟ. ಅವರಿಗೆ ಬುದ್ದಿವಂತಿಕೆ ಹೆಚ್ಚು. ಆದರೆ ಈ ವಿಷಯದಲ್ಲಿ ಮಾನವ ಬಹಳ ಹಿಂದೆ. ಪ್ರಕೃತಿದತ್ತವಾದ ಈ ಕೊಡುಗೆಯನ್ನು ಸ್ತ್ರೀ ತನ್ನ ಮಗುವಿಗೆ ಕೊಡಬೇಕು. ಕೊಡುವುದು ಸಹಜಧರ್ಮ.
ಶಾಸ್ತ್ರೋಕ್ತ ಸ್ತನ್ಯ ಪಾನ ವಿಧಿ:

  • ಮಗು ಹುಟ್ಟಿದ ತಕ್ಷಣ, ಎದೆಯನ್ನು ಶುಚಿಗೊಳಿಸಿ, ಎದೆಹಾಲನ್ನು ಮಗುವಿಗೆ ಉಣಿಸಬೇಕು.
  • ದೇಹ ಶುದ್ಧಿಯಾದ ಮೇಲೆ ಒಳ್ಳೆಯ ಸುಗಂಧಿತ ವಸ್ತ್ರಗಳನ್ನು ಧರಿಸಿ, ಪ್ರಸನ್ನಚಿತ್ತಳಾಗಿ, ಪೂರ್ವಾಭಿಮುಖವಾಗಿ ಕುಳಿತು, ಮಗುವನ್ನು ಮಡಿಲಲ್ಲಿ ಎತ್ತಿಕೊಂಡು ಸ್ವಲ್ಪ ಸ್ತನ್ಯವನ್ನು ಹೊರಗೆ ಚೆಲ್ಲಿ, ನಂತರ ಸ್ತನದ ತೊಟ್ಟು ಮತ್ತು ಸ್ತನ ಮಂಡಲ (ಸುತ್ತ ಇರುವ ಕಪ್ಪು ಭಾಗ)ವನ್ನು ಮಗುವಿನ ಬಾಯಿಯಲ್ಲಿ ಇಡಬೇಕು.
  • ಮಗು ಹಾಲು ಕುಡಿಯುವಾಗ, ಮಗುವಿನ ಉಸಿರಾಟಕ್ಕೆ ತೊಂದರೆಯಾಗದಂತೆ ಇರಬೇಕು. ತಲೆಯನ್ನು, ಬೆನ್ನನ್ನು ನೇವರಿಸುತ್ತಿರಬೇಕು.
  • ಈ ತರಹ ಒಂದು ಸಲ ಬಲ ಭಾಗದಿಂದ ಮತ್ತೊಮ್ಮೆ ಎಡಭಾಗದಿಂದ ಪ್ರತಿ 2, 3 ತಾಸಿಗೊಮ್ಮೆ ಕುಡಿಸಬೇಕು.
  • ಈ ಅಪ್ಪುಗೆಯಲ್ಲಿ, ನೇವರಿಸುವುದರಲ್ಲಿ ಮಗುವಿಗೂ ತಾನು ಸುರಕ್ಷಿತವಾಗಿರುವೆ ಎಂಬ ಭಾವನೆ ಮೂಡಿಸುತ್ತದೆ. ಈ ಸುರಕ್ಷಿತತೆ ಮಗುವಿನ ಶಾರೀರಿಕ ಹಾಗೂ ಮಾನಸಿಕ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವರ್ಣಿಸಲಸಾಧ್ಯವಾದ ತಾಯಿ ಮತ್ತು ಮಗುವಿನ ಮಧುರ ಬಾಂಧವ್ಯ ಹೆಮ್ಮರವಾಗುತ್ತದೆ.

ಸ್ತನ್ಯದ ಅನುಕೂಲತೆಗಳು :

  • ಸ್ತನ್ಯ – ಪ್ರಕೃತಿದತ್ತವಾದ ಕೊಡುಗೆ
  • ಸ್ತನ್ಯ – ಅತಿ ಸುಲಭವಾಗಿ ಮತ್ತು ಪರಿಶುದ್ಧವಾಗಿಯೇ ಎಲ್ಲಾ ವರ್ಗದವರಿಗೂ ನಿಲುಕುವಂತಹದ್ದು.
  • ಸ್ತನ್ಯವು – ಪರಿಪೂರ್ಣವಾದ ಮತ್ತು ಸುಲಭವಾಗಿ ಪಚನವಾಗುವಂತಹ ಆಹಾರ.
  • ಎದೆ ಹಾಲುಣಿಸುವುದರಿಂದ ಬಾಟಲಿಯನ್ನು ತೊಳೆಯುವುದು, ಕುದಿಸುವುದು, ಹಾಲನ್ನು ಕಾಯಿಸುವುದು ಮತ್ತು ಕಲಬೆರಕೆ ಇವುಗಳ ತಾಪತ್ರಯ ಇರುವುದಿಲ್ಲ.

ಸ್ತನ್ಯ ಶುದ್ಧತೆಯ ಪರೀಕ್ಷೆ :
ಸ್ವಲ್ಪ ಸ್ತನ್ಯವನ್ನು ನೀರಿನಲ್ಲಿ ಬೆರೆಸಿ ನೋಡಿ, ಅದು ಸುಲಭವಾಗಿ ಬೆರೆತುಕೊಂಡರೆ ಅದು ಪರಿಶುದ್ಧವಾಗಿದೆ ಎಂದರ್ಥ.
ಸ್ತನ್ಯ ನಾಶಕ್ಕೆ ಕಾರಣಗಳು :
ಕ್ರೋಧ ಶೋಕ ಅವಾತ್ಸಲ್ಯಾದಿಭಿಶ್ಚ ಸ್ತ್ರೀಯಾ: ಸ್ತನ್ಯ ನಾಶೋ ಭವತಿ|
ಕ್ರೋಧದಿಂದ ಶೋಕದಿಂದ, ಮಗುವಿನ ಬಗ್ಗೆ ಮಮತೆ ಕಡಿಮೆಯಾದಲ್ಲಿ ಸ್ತ್ರೀಯರಲ್ಲಿ ಸ್ತನ್ಯವು ಕಡಿಮೆಯಾಗುತ್ತದೆ. ಆದ್ದರಿಂದ ತಾಯಿ ಮಗುವಿಗೆ ವಾತ್ಸಲ್ಯಮಯಿಯಾಗಿ ಹಾಲುಣಿಸಬೇಕು.
ಮಗುವಿಗೆ ಪೂರಕ ಆಹಾರ
ಅಥೈನಂ ಜಾತದಶನಂ ಕ್ರಮೇಣಾಪನಯೇತ್ ಸ್ತನಾತ್ |
ಪೂವೋಕ್ತಂ ಯೋಜಯೇತ್ ಕ್ಷೀರಮನ್ನಂ ಚ ಲಘು ಬೃಂಹಣಮ್ ||
-ವಾಗ್ಭಟ
ಸುಮಾರು ವರ್ಷಗಳ ಹಿಂದೆಯೇ ವಾಗ್ಭಟರು, ಮಗುವಿಗೆ ದಂತೋತ್ಪತ್ತಿಯಾದ ಮೇಲೆ ಅಂದರೆ ಸುಮಾರು 6 ತಿಂಗಳ ನಂತರ ಕ್ರಮೇಣವಾಗಿ ಎದೆ ಹಾಲಿನ ಜೊತೆಗೆ ಹಾಲು, ಅನ್ನ ಲಘು ಆಹಾರವನ್ನು ದೇಹದ ಬೆಳವಣಿಗೆಗೆ ಕೊಡತಕ್ಕದ್ದು ಎಂದು ಹೇಳಿರುತ್ತಾರೆ.
ಅದರ ಜೊತೆಗೆ ಆಯುರ್ವೇದದಲ್ಲಿ ಹೇಳಿರತಕ್ಕಂಥ ಪ್ರಮುಖ ರಸವಾಕಗಳು:

  • ಜೇಷ್ಟಮಧು ಚೂರ್ಣ, ಜೇನುತುಪ್ಪ, ಅರಳು, ಕಲ್ಲುಸಕ್ಕರೆ ಇವೆಲ್ಲವನ್ನೂ ಸೇರಿಸಿ, ಮೋದಕ ರೂಪದಲ್ಲಿ ಕೊಡಬೇಕು.
  • ವಿಘ್ನೇಶ್ವರನಿಗೆ ಪ್ರಿಯವಾದಂತಹ ಬಿಲ್ವ ಫಲದ ತಿರುಳಿನ ಮೋದಕ, ಏಲಕ್ಕಿ, ಕಲ್ಲುಸಕ್ಕರೆ, ಅರಳಿನ ಪುಡಿ ಇವುಗಳನ್ನೂ ಸಹ ಕೊಡಬಹುದು.
  • ಧಾತಕಿ ಪುಷ್ಪ, ಕಲ್ಲುಸಕ್ಕರೆ, ಅರಳು ಇವುಗಳನ್ನು ಸೇರಿಸಿ ಪಾನಕ ಮಾಡಿ ಕೊಡಬೇಕು.
  • ಸರಸ್ವತ ಘೃತ ಅಥವಾ ವಚಾದ್ಯ ಘೃತ ಇವುಗಳನ್ನು ತಿಲ ಪ್ರಮಾಣದಲ್ಲಿ ಕೊಡುವುದರಿಂದ ಮಗುವಿನ ಮಾತು ಸ್ಪಷ್ಟವಾಗುತ್ತದೆ. ಬುದ್ಧಿ ಮತ್ತು ದೈಹಿಕ ಬೆಳವಣಿಗೆಗೆ ಅನುಕೂಲಕಾರಿಯಾಗಿದೆ.
  • ಎಲ್ಲಾ ತರಹದ ಬೇಳೆ ಕಾಳುಗಳನ್ನು ಮೊಳಕೆ ಕಟ್ಟಿಸಿ, ರಾಗಿ ಹಿಟ್ಟಿನ ಜೊತೆ ಸೇರಿಸಿ ಮಾಲ್ಟ್ ಮಾಡಿ ಕುಡಿಸಬಹುದು.
  • ವಿವಿಧ ತರಹದ ತರಕಾರಿಗಳನ್ನು ಮೆತ್ತಗೆ ಬೇಯಿಸಿ, ಅನ್ನದ ಜೊತೆ ತಿನ್ನಿಸಬಹುದು.
  • ತಾಜಾ ಹಣ್ಣಿನ ರಸವನ್ನು ಕುಡಿಸಬಹುದು.

ಮೇಲೆ ಹೇಳಿದ ಆಹಾರವನ್ನು ಮಗುವಿಗೆ ಪ್ರಾರಂಭಿಸುವಾಗ ಕಡಿಮೆ ಪ್ರಮಾಣದಿಂದ ಶುರುಮಾಡಿ ದಿನ ಕ್ರಮೇಣ ಹಂತ ಹಂತವಾಗಿ ಹೆಚ್ಚಿಸುತ್ತಾ ಹೋಗಬೇಕು.
******
ಈ ನಿಟ್ಟಿನಲ್ಲಿ ನಮ್ಮ ಮುಂದಿನ ಜನಾಂಗವು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬ ಮಾತೆಯು, ತನ್ನ ಮಗುವಿಗೆ ಸಂಪೂರ್ಣ 2 ವರ್ಷ ಹಾಲುಣಿಸಬೇಕು ಹಾಗೂ ಮನೆಯಲ್ಲಿಯೇ ತಯಾರಿಸಿದ ಪೂರಕ ಆಹಾರವನ್ನು ಕೊಡಬೇಕು. ಇದರ ಜೊತೆಗೆ ಕುಟುಂಬದ ಸರ್ವ ಸದಸ್ಯರು ಪ್ರೋತ್ಸಾಹ ನೀಡಿ ಸಹಕರಿಸಬೇಕು.

ಡಾ. ಭಾರತಿ ಡಿ.ವಿ.
ವಿಭಾಗ ಮುಖ್ಯಸ್ಥರು, ಪ್ರಸೂತಿ ತಂತ್ರ ಹಾಗೂ
ಸ್ತ್ರೀ ರೋಗ, ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರು-74
ದೂ.: 080- 22718025 ಮೊ.: 9886410690

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!