ಹೆಚ್ಚುತ್ತಿದೆ ಮಾದಕ ವ್ಯಸನ, ಯುವಜನತೆ ಮಾದಕ ವಸ್ತುಗಳ ಮೊರೆ ಹೋಗುವುದು ಏಕೆ? ಇದೀಗ ಸ್ಯಾಂಡಲ್‍ವುಡ್ ನಟ ನಟಿಯರೂ ಭಾಗಿಯಾಗಿದ್ದಾರೆ ಎನ್ನುವ ಸುದ್ಧಿ ವ್ಯಾಪಕವಾಗುತ್ತಲೇ ವಿಷಯವು ಬಹಳ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮಕ್ಕಳಲ್ಲಿ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು.
ಚಾಕು ಚೂರಿಯ ಸಂಸ್ಕೃತಿ ಹೋಗಿ ಗನ್, ಹ್ಯಾಕಿಂಗ್‍ಳ ಯುದ್ಧ ಇದೀಗ ಶುರುವಾಗಿದೆ. ರೈಫಲ್ ಗ್ರೆನೇಡ್ ಬಳಸುವ ಭಯೋತ್ಪಾದಕರ ಗ್ಯಾಂಗುಗಳು ಬಂಗಾರದ ಕಳ್ಳಸಾಗಾಣಿಕೆ ಕಡಿಮೆಯಾಗುತ್ತಲೇ ಆಫೀಮು ಗಾಂಜಾದಂತಹ ಮಾದಕ ವಸ್ತುಗಳ ಜಾಲವನ್ನು ಎಗ್ಗಿಲ್ಲದೇ ವಿಸ್ತರಿಸಿಕೊಂಡಿದೆ. ಪ್ಲೇಗು ಪೋಲಿಯೋ ಸಿಡಿಬುಗಳ ಹುಟ್ಟಡಗಿವೆ, ಕ್ಯಾನ್ಸರ್ ,ಅಲ್ಸರ್, ಏಡ್ಸ್ಗಳು ಭುಸುಗುಡುತ್ತಿವೆ. ಶಾಂತಿ ಸಹನೆ ಸಹ ಬಾಳ್ವೆಯ ಯುಗ ಮುಗಿದಿದೆ, ಎಲ್ಲೆಲ್ಲೂ ಆಂತರಿಕ ಕಲಹ ಕಾಣುತ್ತಿದೆ, ಇದಕ್ಕೆಲ್ಲಾ ಕಾಣುವುದೆಂತು ಕೊನೆ? ಅವತರಿಸಬೇಕೆ ಮತ್ತೊಮ್ಮೆ ಆ ಭಗವಂತನೇ? ಎನ್ನೋ ಹಾಗಿದೆ ಸಧ್ಯದ ಪರಿಸ್ಥಿತಿ.!
ಯುವಜನತೆ ಮಾದಕ ವಸ್ತುಗಳ ಮೊರೆ ಹೋಗುವುದು ಏಕೆ?
ಖುಷಿಪಡಲು, ರೋಮಾಂಚನವನ್ನು ಅನುಭವಿಸಲು, ಹೊಸ ಅನುಭವವನ್ನು ಪಡೆಯಲು, ಏನಾದರೂ ಸಾಹಸ ಮಾಡಲು ಹರೆಯದವರು ಹಾತೊರೆಯುತ್ತಾರೆ. ಹಾಗೇ ಏನೂ ತಿಳಿಯದ ಮುಗ್ಧ ಮಕ್ಕಳು ತಾವು ದೊಡ್ಡವರಾಗಿದ್ದೇವೆ. ದೊಡ್ಡವರ ರೀತಿಯಲ್ಲಿ ನಡೆದುಕೊಳ್ಳಬಲ್ಲೆವು ಎಂದು ನಂಬುತ್ತಾರೆ. ಸಹ ವಯಸ್ಕರು ಮಾಡುವ ಯಾವುದೇ ಕೆಲಸ/ಚಟುವಟಿಕೆಯನ್ನು ತಾವೂ ಮಾಡಲು ಇಷ್ಟಪಡುತ್ತಾರೆ. ಜೊತೆಗೆ ತಮಗಾಗುವ ಬೇಸರ, ದುಃಖ, ನೋವನ್ನು ಮರೆಯುವ ಅಗತ್ಯ ಅವರಿಗೆ ಇರುತ್ತದೆ. ಆದರೆ ತಿಳಿದುಕೊಳ್ಳುವ ವಯಸ್ಸಾಗಲಿ, ಪರಿಸ್ಥಿತಿಯನ್ನು ಸಂಭಾಳಿಸುವ ಅನುಭವವಾಗಲಿ, ಅರ್ಥಮಾಡಿಕೊಳ್ಳುವ ತಾಳ್ಮೆಯಾಗಲಿ ಅವರಲ್ಲಿ ಇರುವುದಿಲ್ಲ.
ಇದರ ಪರಿಣಾಮವೇ ಹದಿಹರೆಯದವರು ಅನೇಕ ಪದಾರ್ಥಗಳನ್ನು ನಶೆ ತರಿಸುವ ವಸ್ತುಗಳನ್ನು ಉಪಯೋಗಿಸಲು ಸಜ್ಜಾಗುತ್ತಾರೆ ಹಾಗೂ ಅತಿಯಾಗಿ ವ್ಯಸನಕ್ಕೆ ಬಲಿಯಾಗುತ್ತಾರೆ. ಅವರು ಉಪಯೋಗಿಸುವ ಬೀಡಿ/ಸಿಗರೇಟು, ಪಾನ್ ಮಸಾಲಗಳು, ಗುಟ್ಕಾ ಖೈನಿಗಳು, ಬೀರ್, ಬ್ರಾಂದಿ, ವಿಸ್ಕಿ, ವೈನ್, ವೋಡ್ಕಾಗಳಂತಹ ಮದ್ಯಸಾರವಿರುವ ಪಾನೀಯಗಳು, `ಕೋಲಾದಂತಹ ತಂಪು ಪಾನೀಯಗಳು, ಗಾಂಜಾ, ಭಂಗಿಸೊಪ್ಪು, ಹಶೀಶ್, ಚರಸ್‍ನಂತಹ, ಕೇನಾಬಿಸ್ ಪದಾರ್ಥಗಳು, ಬ್ರೌನ್‍ಶುಗರ್, ಹೆರಾಯಿನ್‍ನಂತಹ ಅಫೀಮು ಪದಾರ್ಥಗಳು, ಕೆಮ್ಮಿನ ಸಿರಪ್‍ಗಳು, ನೋವು ಶಮನ ಮಾಡುವ ಮಾತ್ರೆಗಳು, ಇಂಜೆಕ್ಷನ್‍ಗಳು, ಕೊಕೇನ್, ಮಾಂಡ್ರಾಕ್ಸ್ ಅಂತಹ ನಶೆ ಪದಾರ್ಥಗಳು, ಡಯಾಜೆಪಾಂ, ಆಲ್ಟ್ರೋಜೆಲಾಂ ನೈಟ್ರೊಜೆಪಾಂ ನಂತಹ ನಿದ್ರಾ ಮಾತ್ರೆಗಳು, ಜೆರಾಕ್ಸ್ ಇಂಕ್, ನೇಲ್‍ಪಾಲೀಶ್ ರಿಮೂವರ್, ಗ್ಲೂ, ಪೆಟ್ರೋಲ್, ಅಯೋಡೆಕ್ಸ್ ನಂತಹ ವಸ್ತುಗಳು ಹರೆಯದ ಯುವಕಯು ವತಿಯರಲ್ಲಿ ನಶೆ ಏರಿಸುವ ಪದಾರ್ಥಗಳಾಗಿವೆ.
ಸ್ಯಾಂಡಲ್‍ವುಡ್ ನಟ ನಟಿಯರೂ ಈ ದಂಧೆಯಲ್ಲಿ !?
ಇಲ್ಲಿಯವರೆಗೆ ಕೇವಲ ಕಾಲೇಜಿನ ಹುಡುಗರಲ್ಲಿ, ಶ್ರೀಮಂತಿಕೆಯಲ್ಲಿ ಕ್ಲಬ್ಬು, ಪಬ್ಬು ಎಂದುಅಲೆಯುವ ಹುಡುಗರಲ್ಲಿ, ಹಾಲಿವುಡ್, ಬಾಲಿವುಡ್‍ನಂತಹ ಸಿನಿಮಾ ಕ್ಷೇತ್ರದಲ್ಲಿ ಮಾತ್ರವೇ ಈ ಘೀಳು ಎಂದುಕೊಂಡಿದ್ದವರಿಗೆ ಇದೀಗ ಈ ಪಿಡುಗು ನಮ್ಮ ಕರ್ನಾಟಕದಲ್ಲಿ, ಕನ್ನಡ ಸಿನಿಮಾಕ್ಷೇತ್ರದಲ್ಲಿಯೂ ಬಹಳಷ್ಟು ವ್ಯಾಪಿಸಿಕೊಂಡಿದೆ ಎಂದು ದಿನಕ್ಕೊಂದರಂತೆ ಸುದ್ಧಿಗಳು ಬರುತ್ತಿರುವುದು ಅಚ್ಚರಿಗೀಡು ಮಾಡಿದೆ. ರಾಜ್ಯದಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಲ್ಲಿ ಪ್ರತಿವರ್ಷ ಶೇ 25ರಷ್ಟು ಹೆಚ್ಚಾಗುತ್ತಿದೆ. 16 ರಿಂದ 30 ವರ್ಷದೊಳಗಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಈ ಮಾಯಜಾಲಕ್ಕೆ ಬೀಳುತ್ತಿರುವವರಲ್ಲಿ ಹೆಚ್ಚು. ರಾಜಧಾನಿ ಬೆಂಗಳೂರು ಒಂದರಲ್ಲಿಯೇ ಶೇ 30 ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯ ದಾಸರಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿತ್ತು.
ಆದರೆ ಇದೀಗ ಸ್ಯಾಂಡಲ್‍ವುಡ್ ನಟ ನಟಿಯರೂ ಭಾಗಿಯಾಗಿದ್ದಾರೆ ಎನ್ನುವ ಸುದ್ಧಿ ವ್ಯಾಪಕವಾಗುತ್ತಲೇ ವಿಷಯವು ಬಹಳ ಚರ್ಚೆಗೆ ಗ್ರಾಸವಾಗಿದೆ. ಡ್ರಗ್ ಫೆಡ್ಲರ್‍ಗಳ ಜೊತೆಗೆ ಕನ್ನಡ ಚಿತ್ರರಂಗದ ಕೆಲವರ ನಂಟು ಇರುವುದು ನಿಜಕ್ಕೂ ಆಘಾತಕಾರಿ. ಖ್ಯಾತ ನಟ-ನಟಿಯರು ಮಾತ್ರವಲ್ಲದೆ, ಸಂಗೀತ ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರ ಹೆಸರುಗಳೂ ಈ ದಂಧೆಯಲ್ಲಿ ಕೇಳಿಬರುತ್ತಿದ್ದು ಕೊರೋನಾದಿಂದ ಕಳೆಗುಂದಿರುವ ಚಿತ್ರರಂಗಕ್ಕೆ ಮತ್ತಷ್ಟು ಕೆಟ್ಟ ಹೆಸರನ್ನು ತರುವ ಎಲ್ಲ ಸಾಧ್ಯತೆಗಳಿವೆ. ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‍ಸಿಬಿ) ಸಧ್ಯದ ಈ ಹಗರಣವನ್ನು ತನಿಖೆ ನಡೆಸುತ್ತಿದ್ದು ಮತ್ತಷ್ಟು ಸಂಚಲನ ಸೃಷ್ಟಿಸುವಂತಹ ವಿಷಯಗಳು ಹೊರಬಂದರೂ ಅಚ್ಚರಿಯಿಲ್ಲ.
ಸಮಾಜದ ಜವಾಬ್ದಾರಿಯೇನು?
ರಾಜ್ಯದೆಲ್ಲೆಡೆ ವ್ಯವಸ್ಥಿತವಾಗಿ ಹರಡಿಕೊಂಡಿರುವ ಮಾದಕ ವಸ್ತು ಜಾಲವನ್ನು ಮಟ್ಟ ಹಾಕಬೇಕಾದ ಅಗತ್ಯವಿದೆ.ನಮ್ಮ ಪೊಲೀಸರು ಈಗಾಗಲೇ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದು,ಈ ಬಗ್ಗೆ ಪಾಲಕರೂ, ಸಾರ್ವಜನಿಕರೂ ಸಹಾ ಕೈ ಜೋಡಿಸದೆ ಕೇವಲ ಪೊಲೀಸರ ಮೇಲೆ ಒತ್ತಡ ಹೇರಿದರೆ ಪ್ರಯೋಜನವಾಗದು. ಮಾದಕ ವ್ಯಸನಕ್ಕೆ ಅತೀ ಹೆಚ್ಚು ಬಲಿಯಾಗುವುದೇ ಯುವ ಸಮುದಾಯ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮಕ್ಕಳಲ್ಲಿ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು. ಜೊತೆಗೆ ನೈತಿಕವಾಗಿ ಯುವಜನತೆಯ ಆಶೋತ್ತರಗಳನ್ನು ಕೇಳಿಸಿಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಜರೂರತ್ತು ಕೂಡ ಮಾಧ್ಯಮ ಕ್ಷೇತ್ರ ಹಾಗೂ ಸಮಾಜದ ಎಲ್ಲಾ ನಾಗರಿಕರ ಮೇಲಿದೆ.
Also read: ಬದುಕನ್ನು ಹೊಸಕಿ ಹಾಕುವ ಡ್ರಗ್ ಮಾಫಿಯಾ.
ಸಚಿನ್ ಶರ್ಮಾ ಬೆಂಗಳೂರು
ಮೊ: 9036723369