ಬದುಕನ್ನು ಹೊಸಕಿ ಹಾಕುವ ಡ್ರಗ್ ಮಾಫಿಯಾ……

ಬದುಕನ್ನು ಹೊಸಕಿ ಹಾಕುವ ಡ್ರಗ್ ಮಾಫಿಯಾ…… ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಸಾಂಕ್ರಾಮಿಕ ರೋಗವಾಗುತ್ತಿರುವ ಮಾದಕವಸ್ತು ಸೇವನೆ  ಸಾಕಷ್ಟು ಆತಂಕಕಾರಿ ಹಾಗೂ ಭಯಾನಕ. 

Drug-Mafia

“You don’t need ,Heroin to be Hero !
Delete Drugs, otherwise they’ll delete
You from the world. Think health, Not drugs”

ಬೆಚ್ಚಿ ಬೀಳಿಸುವ ಸುದ್ದಿರಯೊಂದು ಮಾಧ್ಯಮಗಳಲ್ಲಿ ಸದ್ದು ಮಾಡಿದೆ. ಪೋಲಿಸರು ಮಾದಕ ದ್ರವ್ಯಗಳ ಜಾಲವನ್ನು ಬೇಧಿಸಿದ್ದರು. ದಂದೆಯಲ್ಲಿ ತೊಡಗಿದ ಏಜೆಂಟ್ ಗಳ ಬಂಧಿಸಿದ್ದರು. ಅವರು ಬಾಯಿ ಬಿಟ್ಟಾಗ ಇಡೀ ಸ್ಯಾಂಡಲ್ ವುಡ್ ಒಡಲಲ್ಲಿ ನೆಮ್ಮದಿ ನುಚ್ಚು ನೂರಾಗಿತ್ತು. ಕಾಲೇಜು ಕ್ಯಾಂಪಸ್, ಹಾಸ್ಟೆಲ್ ಬಿಟ್ಟು ಈ ಸಾರಿ ಮಾದಕ ದ್ರವ್ಯಗಳ ಜಾಲ ಹೆಣೆದದ್ದು ನಟ – ನಟಿಯರ ಸುತ್ತ. ಕರೊನಾ ಕಾಲಘಟ್ಟದಲ್ಲಿ ನಡೆದ ವ್ಯವಹಾರ ನಾಲ್ಕು ಕೋಟಿಗೂ ಹೆಚ್ಚು ಎಂಬುದು ಈ ದಂದೆಯ ಆಳ ಅಗಲಗಳ ಮೇಲೆ ಬೆಳಕು ಚೆಲ್ಲುವುದು. ಗ್ರಾಹಕರಿಗೆ ‘ಲವ್ ಡೋಜ ‘, ‘ರೆಡ್ ಬುಲ್ ‘ ‘ರೋಜ್’ ಎಂಬ ‘ಕೋಡ್ ವರ್ಡ್ ‘ ಮುಖಾಂತರ ಸರಬರಾಜು ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.

ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಒಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗವಾಗುತ್ತಿರುವ ಮಾದಕವಸ್ತು ಸೇವನೆ ಈಗಾಗಲೇ ಭಾರತದ ನಗರಗಳನ್ನು ಕಬಳಿಸತೊಡಗಿದೆ. ಸಮಾಜದ ಮಧ್ಯಮವರ್ಗ ಮತ್ತು ಕೆಳವರ್ಗದ ಜನ ಮದ್ಯಪಾನಕ್ಕೆ ಬಲಿಯಾಗುವುದೇ ಸಾಕಷ್ಟು ಆತಂಕಕಾರಿ ಹಾಗೂ ಭಯಾನಕ. ಮಾದಕವಸ್ತುಗಳ ಸೇವನೆಯ ಚಟಕ್ಕೆ ಬಲಿಯಾದರಂತೂ ನಿಜವಾದ ಅರ್ಥದಲ್ಲಿ ತನ್ನ ಬದುಕಿನ ಅಂತ್ಯವನ್ನು ಆರಂಭಿಸಿರುತ್ತಾನೆ. ಮಾದಕವಸ್ತುಗಳ ಸೇವನೆಯ ಪಿಡುಗು ಕೈಮೀರಿ ಹೋಗುವ ಮುನ್ನ ಸರಕಾರ ಮತ್ತು ಜನತೆ ಜಾಗೃತವಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಈ ಸಾಂಕ್ರಾಮಿಕ ರೋಗ ನಮ್ಮ ದೇಶದ ಸಣ್ಣ ಪುಟ್ಟ ಹಳ್ಳಿಗಳಿಗೂ ಹರಡಿ ನಾವು ನಮ್ಮ ಕಣ್ಮುಂದೆಯೇ ಸದಾ ಮಾರಕ ಮಾದಕವಸ್ತುಗಳ ಗುಂಗಿನಲ್ಲಿರುವ ನಿರ್ವೀರ್ಯ, ನಿರುಪಯೋಗಿ ಹಾಗೂ ಸಮಾಜಕ್ಕೆ ಆಪಾಯಕಾರಿಯಾದ ತಲೆಮಾರೊಂದರ ಕರಿನೆರಳಲ್ಲಿಯೇ ಬದುಕಬೇಕಾದೀತು!

ಆಧುನಿಕ ನಾಗರಿಕತೆಯ ಕಾವೇರಿದ ನಗರಗಳಲ್ಲಿ ಮಾದಕವಸ್ತು ಎಲ್ಲಿಲ್ಲದ ಸಂಪತ್ತನ್ನು ಹಾಗೂ ವಿಪತ್ತನ್ನು ತರುವ ತಡೆಯಲಾರದ ಭಯಂಕರ ಆಕರ್ಷಣೆಯಾಗಿದೆ. ಮಾದಕವಸ್ತು ವ್ಯಕ್ತಿಯ ಮಾನವೀಯ ಮೌಲ್ಯಗಳನ್ನು ಅಳಿದು, ಅಸುರೀ ಶಕ್ತಿಯನ್ನು ಉದ್ರೇಕಿಸಿ ಹೀನ ಅಪರಾಧಗಳನ್ನು ಮಾಡಲು ಪ್ರಚೋದಿಸುವ ಭಯಂಕರ ಸಾಧನವಾಗಿದೆ. ಇದಕ್ಕೆ ತನ್ನದೇ ಆದ ಬಹುದೊಡ್ಡ ಚರಿತ್ರೆಯಿದೆ. ಅನಾದಿಕಾಲದಿಂದ, ಇಂದಿನವರೆಗೆ ಅದರ ಆಕರ್ಷಣೆ, ಚೆಲ್ಲಾಟ ನಿರಂತರವಾಗಿ ನಡೆದಿದೆ.

ಮಾದಕವಸ್ತು-  ಅದು ಮಾನವನಿಗೊಂದು ಹೊಸ ಸ್ವರ್ಗೀಯ ಅನುಭವ

ಮಾನವ ಆನಂದದ ಆರಾಧಕ ಮತ್ತು ಆನ್ವೇಷಕ. ಅವನಲ್ಲಿ ಆನಂದದ ಪರಮಾವಧಿ ತಲುಪುವ ತವಕ. ತಾನು ಸಾಧಿಸುವ ಪ್ರತಿಯೊಂದು ಕಾರ್ಯಗಳೂ ಆನಂದ ಪಡೆಯುವುದಕ್ಕಾಗಿಯೇ ಎಂಬ ಭಾವುಕ. ಎಷ್ಟೋ ವಿಷಯಗಳನ್ನು ಕಂಡುಹಿಡಿದರೂ ತೃಪ್ತನಾಗದ ಮಾನವ ಕೊನೆಗೊಂದು ವಸ್ತುವನ್ನು ಸಂಪಾದಿಸಿಯೇ ಬಿಟ್ಟ. ಅದೇ ಮಾದಕವಸ್ತು. ಅಂದು ಅದು ಮಾನವನಿಗೊಂದು ಹೊಸ ಸ್ವರ್ಗೀಯ ಅನುಭವವನ್ನೇ ತೆರೆದಿಟ್ಟಿತು. ಸುಖ, ಶಾಂತಿ, ಆನಂದ ಮಾನವ ಜೀವನದ ಪ್ರಬಲ ಆಸೆಗಳು, ಆಕರ್ಷಣೆಗಳು. ಸುಖ ಪಡುವುದು ಮನಷ್ಯನ ಹುಟ್ಟಾಸೆ ಎಂದಿದ್ದಾನೆ ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ. ಅದರ ಸುತ್ತ ಆಸೆಯ ಬಲೆಯನ್ನು ನೇಯುತ್ತಾ ,ಯೋಜನೆಗಳನ್ನು ಹಾಕಿ ಹಮ್ಮುತ್ತ, ಅತೀ ಕಡಿಮೆ ಕ್ರಮದಲ್ಲಿ ಅತೀ ಹೆಚ್ಚು ಸುಖ ಅನುಭವಿಸಲು ಪ್ರತಿಯೊಬ್ಬ ಜೀವಿ ತನ್ನ ಜೀವಿತವನ್ನೇ ಮುಡುಪಾಗಿಡುತ್ತಾನೆ.

ದೈನಂದಿನ ಜೀವನದ ಕಷ್ಟ ನಷ್ಟಗಳ, ನೋವು ನಿರಾಶೆಗಳ, ಏಕಾಕಿತನ, ಅನಾಥಪ್ರಜ್ಞೆ, ಕೈಗೆಟುಕದ ಪ್ರೀತಿಯ ಮರೀಚಿಕೆ, ಹುಸಿಯಾಗುತ್ತಿರುವ ಮಾನವೀಯ ಮೌಲ್ಯಗಳ ಸಂಬಂಧಗಳ ಬಂಧನಗಳಿಂದ ಬಿಡುಗಡೆಯಾಗಿ ದೂರ ಬಹುದೂರ ಸಾಗಲು, ಅರಗಳಿಗೆ ಮರೆಯಲು, ಮರೆತು ಮೆರೆದಾಡಲು ‘ ಮುಕ್ತತೆ ‘ಯ ಅನುಭವ ಪಡೆಯಲು, ಜಗತ್ತಿನ ಸಂಬಂಧ ಸಡಿಲಿಸಿಕೊಂಡು ಸಿಮೋಲಂಘನ ಮಾಡಿ, ಶೂನ್ಯಸ್ಥಿತಿಯಲ್ಲಿ ಸಂತೋಷದಿಂದ ಸಮಯ ಕಳೆಯಲು ಮಾದಕವಸ್ತುಗಳ ಸೀಮೆಯಲ್ಲಿ ಸಿಕ್ಕು ಶರಣಾಗತರಾಗುವರು. ವಂಚನೆಯಿಲ್ಲದ, ಜಾತಿಭೇದಗಳಿಲ್ಲದ, ಮೇಲುಕೀಳುಗಳಿಲ್ಲದ, ಜನಿವಾರ ಶಿವದಾರಗಳಿಲ್ಲದ ಸೆರೆಮನೆಯಲ್ಲಿ ನಿಧಾನ ಸಾವಿನ ಸುಳಿಯಲ್ಲಿ ಗಿರಕಿ ಹೊಡೆಯುವರು. ಹೊರಬರಲು ಹಾದಿ ಕಾಣದೆ ಹೊರಳಾಡುವರು. ವಿಲಿ ವಿಲಿ ಒದ್ದಾಡುವರು. ಅಮಲಿನ ಅಲ್ಪ ಸುಖಕ್ಕೆ ಮರುಳಾಗಿ ಜೀವನ ಪರ್ಯಂತ ಗೋಲಾಕಾರದ ಗೋಳದಲ್ಲಿ ಗೋಳಾಡುವರು.

“ಮತ್ತಿನ ಹಿರಿಯುಂಡವಗೆ/ಉರಿಯ ಮೇಲುಡುಕುವಗೆ
ಹರಿಯುವ ಹಾವ ಪರನಾರಿ/ಪಡಿದಂಗೆ
ಮರಣದ ನೆರಳು ಸರ್ವಜ್ಞ. “

ಇಂದು ದಾರ್ಶನಿಕ ಕವಿ ಹೇಳಿರುವ ಮಾತುಗಳು ಎಷ್ಟೊಂದು ಅರ್ಥಪೂರ್ಣವಾಗಿವೆಯಲ್ಲವೇ?

ಅರಬರು ನೀಡಿದ ಉಡುಗೊರೆ:

Drug-Mafiya-Kannada

ಮಾದಕವಸ್ತುಗಳನ್ನು ಭಾರತಕ್ಕೆ ತಂದವರಾರು? ಅರಬರು ಇದರ ರುಚಿಯನ್ನು ಭಾರತೀಯರಿಗೆ ಮತ್ತು ಪರ್ಶಿಯನ್ನರಿಗೆ ಹಂಚಿದರು ಎನ್ನಲಾಗಿದೆ. ಮತ್ತಿನವಸ್ತುಗಳನ್ನವರು ಯುದ್ಧದ ಸಮಯದಲ್ಲಿ ಬಳಸುವಂತೆ ಪ್ರೇರೇಪಿಸಿದರು. ಸೈನಿಕರಿಗೆ ಸ್ಪೂರ್ತಿಯ ಸೆಲೆಯಾಗಿ, ಧೈರ್ಯ ತುಂಬುವ ವಸ್ತುವಾಗಿ ಅವು ಬಳಸಲ್ಪಟ್ಟವು. ಈ ಅಭ್ಯಾಸ ಮುಂದೆ ಬಲವಾಯಿತು. ಯುದ್ಧಕಾಲದಲ್ಲಿ ಇವುಗಳ ಬಳಕೆ ಅನಿವಾರ್ಯವೆನ್ನಿಸಿತು. ಮಾದಕವಸ್ತು ಸೇವಿಸಿದ ಬಳಿಕ ಯಾವುದೇ ಗಾಯಗಳಾದರೂ ಆ ವ್ಯಕ್ತಿಗೆ ನೋವಾಗುತ್ತಿರಲಿಲ್ಲ. ಆದರೆ, ಕೆಲಸ ಕಾರ್ಯಗಳಲ್ಲಿ ಉತ್ಸಾಹವೇನೂ ಉಡುಗುತ್ತಿರಲಿಲ್ಲ. ಬರುಬರುತ್ತಾ ತಮ್ಮ ವಿಶಾಲ ಬಾಹುಬಂಧನದಲ್ಲಿ ಉಳಿದವರನ್ನು ಬಂಧಿಸದೇ ಬಿಡಲಿಲ್ಲ.

ಮಾದಕವಸ್ತುಗಳ ಸೇವನೆ ಭಾರತಕ್ಕೆ ಹೊಸದೇನೂ ಅಲ್ಲ. ಸಾಧುಸಂತರು ಗಾಂಜಾ ಹೊಡೆದು, ಕಳ್ಳು ಕುಡಿದು, ಆತ್ಮ- ಪರಮಾತ್ಮನ ನಡುವಿನ ಸಂಬಂಧಗಳ ಬಗ್ಗೆ ಮಾತಾಡುತ್ತಿದ್ದ ದೇಶ ಇದು. ಇಂದಿಗೂ ಕೂಡ ಮನಸ್ಸಿನ ಏಕಾಗ್ರತೆಗಾಗಿ ಕೆಲವು ಆಧ್ಯಾತ್ಮವಾದಿಗಳು ಗಾಂಜಾದಂಥ ಮತ್ತಿನ ವಸ್ತುಗಳ ಸೇವನೆ ಮಾಡುತ್ತಾರೆ ! ಆಧ್ಯಾತ್ಮವಾದಿಗಳ ಸೇವನೆಗೆ ಮಾತ್ರ ಸೀಮಿತವಾಗಿದ್ದ ಮಾದಕವಸ್ತುಗಳು ಶಾಲಾ ಕಾಲೇಜುಗಳಂಥ ಶೈಕ್ಷಣಿಕ ಕೇಂದ್ರಗಳಿಗೆ ಲಗ್ಗೆ ಹಾಕುವುದರ ಜೊತೆಗೆ ಕರೊನಾ ಕಾಲಘಟ್ಟದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರನ್ನು ತನ್ನ ಕದಂಬ ಬಾಹುಗಳಲ್ಲಿ ಬಂಧಿಸಿ ಸಮಾಜದ ಆರೋಗ್ಯಕ್ಕೆ ಭಾರೀ ಸವಾಲಾಗಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ.

ಚಟಾದೀನರಾಗುವವರು ಯಾರು ?

” ಕಲಿತ ಚಟಕ್ಕೆ ಕಲ್ಲು ಹಾಕಿದರೂ ಬಿಡುವುದಿಲ್ಲ ” ಎಂಬುದು ಮತ್ತಿನವಸ್ತುಗಳ ವಿಷಯದಲ್ಲಂತೂ ಸತ್ಯ. ಬಹಳ ಮಂದಿ ಆಗೊಮ್ಮೆ ಈಗೊಮ್ಮೆ ಮೋಜಿಗಾಗಿ, ಕುತೂಹಲಕ್ಕಾಗಿ,ಖುಷಿಗಾಗಿ ಮಾದಕವಸ್ತುಗಳನ್ನು ಸೇವಿಸುತ್ತಾರೆ. ಕೆಲವರು ಅದರ ದಾಸಾನುದಾಸರಾಗುತ್ತಾರೆ. ಮಾದಕವಸ್ತುಗಳ ಮನಮೋಹಕ ಮಾಯಾಜಾಲದಲ್ಲಿ ವ್ಯಾಮೋಹಕ್ಕೆ ಬಲಿಯಾಗಿ ಚಟಾದೀನರಾಗುವವರು. ಅವರು ಯಾರು? ಅವರ ಸಾಮಾನ್ಯ ಲಕ್ಷಣಗಳೇನು? ಅವರಲ್ಲಿ ಏನು ಕೊರತೆಯಿರುತ್ತದೆ. ಅವನ್ನು ಮೊದಲೇ ಗಮನಿಸಿ, ಎಚ್ಚರ ವಹಿಸಿ, ಅವರು ಚಟಕ್ಕೆ ಬೀಳದಂತೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಚಟಕ್ಕೆ ತುತ್ತಾಗುವವರನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು —

1.ಅಸಹಾಯಕರು ಮತ್ತುದುಃಖಿತರು :

ಕೌಟುಂಬಿಕ ಕಾರಣಗಳು, ವ್ಯಕ್ತಿಗಳ ನಡುವಿನ ಮನಸ್ತಾಪಗಳು, ಹಲವು ಬಗೆಯ ನೋವು, ನಿರಾಶೆಗಳು, ಹಣಕಾಸಿನ ಮುಗ್ಗಟ್ಟು, ಉದ್ಯೋಗದಲ್ಲಿನ ಸಮಸ್ಯೆಗಳು, ಅತೃಪ್ತಿ, ಲೈಂಗಿಕ ಸಮಸ್ಯೆಗಳು ಇತ್ಯಾದಿ ನಾನಾ ಬಗೆಯ ಕಾರಣಗಳಿಂದ ದು:ಖಿತರಾಗುವ, ಅಸಹಾಯಕರಾಗುವ ಜನ ಮಾದಕವಸ್ತುಗಳು ಮರುಳು ಮಾಡುವ ಮೋಡಿಗೆ, ಮಾಯಾಜಾಲಕ್ಕೆ ಸುಲಭವಾಗಿ ಸೋತು, ತಮ್ಮನ್ನು ತಾವೇ ಅವುಗಳಿಗೆ ಅರ್ಪಿಸಿಕೊಳ್ಳುತ್ತಾರೆ .ಈ ಮಾದಕವಸ್ತುಗಳು ಉಂಟುಮಾಡುವ ಸುಖದ ಭ್ರಮೆಯಲ್ಲಿ ತಮ್ಮ ನೋವು ದು:ಖವನ್ನು ಮರೆಯುವ ವಿಫಲ ಪ್ರಯತ್ನ ಮಾಡುತ್ತಾರೆ.

2.ಮಾನಸಿಕ ಅಸ್ವಸ್ಥರು:

ವಿವಿಧ ಮಾನಸಿಕ ಕಾಯಿಲೆಗಳಾದ ಮೇನಿಯಾ, ಒಳಜನ್ಯ ಖಿನ್ನತೆ, ಸಿಜೋಫ್ರೀನಿಯಾ, ಅಂಗದೋಷದ ಚಿತ್ತ ವಿಕಲತೆ, ಮತಿಹೀನ ಸ್ಥಿತಿಯಲ್ಲಿ ರೋಗಿ ತನ್ನ ವಿವೇಚನೆ ಕಳೆದುಕೊಂಡು, ಕಾಯಿಲೆಯು ಉಂಟು ಮಾಡುವ ಭಯಾನಕ ಭ್ರಮೆಗಳಿಂದ ದೂರವಾಗಲು ಮಾದಕವಸ್ತುಗಳ ಮೊರೆ ಹೋಗಬಹುದು. ತನ್ನ ನಡವಳಿಕೆ, ನಿರ್ಧಾರ ಕೈಕೊಳ್ಳುವ ಶಕ್ತಿಯ ಮೇಲೆ ಹತೋಟಿ ಕಳೆದುಕೊಂಡು ಅನಿಯಂತ್ರಿತವಾಗಿ ಸೇವಿಸತೊಡಗುತ್ತಾರೆ.

3. ವ್ಯಕ್ತಿತ್ವ ದೋಷವುಳ್ಳವರು :

ಜೈವಿಕ ಕಾರಣಗಳಿಂದ ಅಥವಾ ಬೆಳೆದ ವಾತಾವರಣದಲ್ಲಿನ ಕೆಟ್ಟ ಮಾದರಿ- ನ್ಯೂನತೆಗಳಿಂದ ಅಥವಾ ತಂದೆತಾಯಿಗಳ, ಪೋಷಕರ, ಹಿರಿಯರ ಅನಾರೋಗ್ಯಕರ ದ್ವಂದ್ವ ಧೋರಣೆಯ ಮತ್ತು ತಪ್ಪು ಪ್ರೋತ್ಸಾಹ, ಮಾರ್ಗದರ್ಶನಗಳಿಂದ ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಾಗಿ, ಆರೋಗ್ಯಕರವಾಗಿ ವಿಕಾಸವಾಗುವುದಿಲ್ಲ. ಅವನ ವ್ಯಕ್ತಿತ್ವ ದೋಷಪೂರ್ಣವಾಗಿ ದುರ್ಬಲವಾಗುತ್ತದೆ. ಆತ ವಿಪರೀತ ಸ್ವಾರ್ಥಿ, ಸುಖಲೋಲನಾಗಬಹುದು. ಮೈಮನಸ್ಸುಗಳ ಕಾಮನೆಗಳನ್ನು ಹತೋಟಿಯಲ್ಲಿಡಲು ವಿಫಲನಾಗಬಹುದು. ಹಿಂದಿನ ಅನುಭವಗಳಿಂದ, ಪಡೆದ ಶಿಕ್ಷೆಗಳಿಂದ ಪಾಠ ಕಲಿಯುವುದಿಲ್ಲ. ಸಾಮಾಜಿಕ, ನೈತಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಆತ ಕಲಿಯುವುದಿಲ್ಲ. ಅವುಗಳಿಗೆ ಗೌರವವನ್ನೂ ಕೊಡುವುದಿಲ್ಲ .ಇಂಥ ವ್ಯಕ್ತಿ ಮಾದಕವಸ್ತುವನ್ನು ಸೇವಿಸಲಾರಂಭಿಸಿದರೆ ಸೀಮೆಎಣ್ಣೆ, ಬೆಂಕಿ ಜೊತೆ ಸೇರಿದಂತಾಗುತ್ತದೆ.

ಮತ್ತಿನವಸ್ತುಗಳು ಎಷ್ಟು ಸುಲಭವಾಗಿ, ವ್ಯಾಪಕವಾಗಿ ದೊರೆಯುತ್ತವೆ, ಜೊತೆಗಾರರು ಮತ್ತು ಪರಿಸರ ಇವುಗಳ ಸೇವನೆಗೆ ಎಷ್ಟು ಒತ್ತಾಸೆ ನೀಡುತ್ತಾರೆ ಎನ್ನುವುದೂ ಚಟ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾಜಿಕ ಅವ್ಯವಸ್ಥೆ, ಅನೀತಿ, ಅಸಮತೆ, ನಿರುದ್ಯೋಗಗಳೂ ಇದಕ್ಕೆ ಪುಟ ಕೊಡುತ್ತವೆ. ಅನುವಂಶೀಯವಾಗಿ ಬರುವ ‘ ದುರ್ಬಲತೆ ‘ ಕೂಡ ಚಟ ಬೆಳೆಯುವುದಕ್ಕೆ ಕಾರಣ ಎಂದು ನಂಬಲಾಗಿದೆ. ಏಕೆಂದರೆ, ಮಾದಕವಸ್ತುವಿನ ವ್ಯಸನಿಯ ಮಕ್ಕಳನ್ನು ಆತನಿಂದ ಬೇರ್ಪಡಿಸಿ, ಆರೋಗ್ಯಕರ ವಾತಾವರಣದಲ್ಲಿ ಬೆಳೆಸಿದರೂ, ಅವರು ವ್ಯಸನಿಗಳಾಗುವ ಸಂಭವವೇ ಜಾಸ್ತಿ.

ದೇವನೊಬ್ಬ ನಾಮ ಹಲವು:

ಸರ್ವಸಾಮಾನ್ಯವಾಗಿ ಎಲ್ಲಡೆ ಉಪಯೋಗದಲ್ಲಿರುವ ಮಾದಕವಸ್ತುಗಳೆಂದರೆ—
1.ಕೇವಲ ಮಾನಸಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿಗಳು:

ಕೊಕೇನ್, ಎಲ್.ಎಸ್. ಡಿ, ಸೈಲೋಸೈಬಿನ್, ಮಸ್ಕಾಲಿನ್, ಕೆನಾಬಿಸ್, ನಿಕೋಟಿನ್, ಕೆಫೀನ್

2.ಸಂಪೂರ್ಣ ಮಾನಸಿಕ ಹಾಗೂ ಸಂದೇಹಾಸ್ಪದ ದೈಹಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿ ಗಳು.

ಅ.ಅಪೀಮ ಪ್ರತಿರೋಧಕಗಳು(Opiate antagonists)
ನಲಾರ್ಫಿನ್, ಲೆವಾಲಾರಫೆನ್, ಸೈಕ್ಲಜೋಸಿನ್.
ಬ.ಆಂಫಿಟಮಿನ್ ಗಳು: ಆಂಫಿಟಮಿನ್, ಮೆಥಾಂಫಿಟಮಿನ್, ಫೆನ್ ಮೆಟ್ರಾಜೈನ್, ಮೀಥೈಲ್ ಫ್ಲೆನಿಡೇಟ್, ಪಿಪ್ರಡಾಲ್

3.ಸಂಪೂರ್ಣ ಮಾನಸಿಕ ಹಾಗೂ ದೈಹಿಕ ದಾಸ್ಯತ್ವವನ್ನುಂಟು ಮಾಡುವ ಔಷಧಿಗಳು :

ಅ.ಅಪೀಮ ತರಹದವು : ಮಾರ್ಫಿನ್,ಕೋಡಿನ್,ಡೈಹೈಡ್ರೋ ಮಾರ್ಫಿನಾನ್, ಹೆರಾಯಿನ್, ಪೆಥಡಿನ್, ಮೆಥಾಡೋನ್ , ಫೆನಾಜೋಸಿನ್ ,ಲೋಮೋಟಿಲ್ .

ಬ.ಮದ್ಯಸಾರ – ಬಾರ್ಬಿಚುರೇಟ್ ತರಹದವು : ಈಥೈಲ್ ಆಲ್ಕೋಹಾಲ್, ಬಾರ್ಬಿಚುರೇಟ್, ಪೆರಾಲ್ಡಿಹೈಡ್, ಕ್ಲೋರಾಲ್ ಹೈಡ್ರೇಟ್ ,ಮೆಪ್ರೋಬಮೇಟ್ ,ಗ್ಲುಟಥೆಮಿಡ್ ,ಮೀಥೈಲ್ ಫ್ರೈಲಾನ್ ,ಎಥೀನ್ ಮೈಟ್, ಎಥಾಕ್ಲೋರ್ ವೈನಾಲ್, ಬೆಂಜೋಡಯಾಜಿಪೈನ್ಸ್, ಮೆಥಾಕ್ವಾಲೋನ್ .

ಇಂದು ಸಾಮಾನ್ಯವಾಗಿ ದುರುಪಯೋಗವಾಗುತ್ತಿರುವ ಔಷಧಿಗಳಲ್ಲಿ ಮುಖ್ಯವಾದವು ಆರು– ಆಂಫಿಟಮಿನ್, ಕೊಕೇನ್, ಕೆನಾಬಿಸ್ , ಬಾರ್ಬಿಚುರೇಟ್, ಅಪೀಮು, ಎಲ್.ಎಸ್.ಡಿ.

ಕಾರ್ಯನಿರ್ವಹಣೆ :

ಇಂಜೆಕ್ಷನ್ ಮೂಲಕವಾಗಲಿ, ಗುಳಿಗೆಗಳನ್ನು ನುಂಗುವುದರಿಂದಾಗಲಿ, ಪಾನೀಯ ಸೇವಿಸುವುದರಿಂದಾಗಲಿ ದೇಹ ಸೇರುವ ಮಾದಕವಸ್ತುಗಳು ಅಂತಿಮ ಹಂತದಲ್ಲಿ ರಕ್ತದಲ್ಲಿ ಸಂಚರಿಸಿ, ಕಾರ್ಯನಿರ್ವಹಣೆಯ ಕ್ಷೇತ್ರದ ಕೇಂದ್ರಗಳಿಗೆ ಲಗ್ಗೆ ಹಾಕುವವು. ನಿದ್ರಾಜನಕಗಳು ನಡುಮಿದುಳಿನಲ್ಲಿರುವ ನಿದ್ರಾಕೇಂದ್ರದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಮಿದುಳಿನ ಹೊರಾವರಣದಲ್ಲಿಯ ಜೀವಕೋಶಗಳನ್ನು ನಿರುತ್ಸಾಹ ಗೊಳಿಸುತ್ತವೆ. ಇವೆರಡರ ಪೂರಕ, ಪೋಷಕ, ಪರಿಪೂರಕ ಪ್ರೇರಣೆಯಿಂದ ಸೇವಿಸಿದ ವ್ಯಕ್ತಿ ನಿದ್ರಾದೇವಿಯ ಮಡಿಲಲ್ಲಿ ಮಲಗುತ್ತಾನೆ.

ನೆಮ್ಮದಿಕಾರಕಗಳು (Tranquilizers) ನರಮಂಡಲದ ಮೇಲೆ ಪ್ರಭಾವ ಬೀರುವ  ನಿಶ್ಚಿತ ಕೇಂದ್ರ ನಿಖರವಾಗಿ ತಿಳಿದು ಬಂದಿಲ್ಲ. ಭ್ರಾಂತಿಜನಕವಾದ ಲೈಸರ್ಜಿಕ್ ಆಸಿಡ್ ಡೈ ಇಥೈಲ್ ಅಮೈಡ್ ಗೆ ಅಡ್ಡಿಯನ್ನೊಡ್ಡಿ ಅಳಿಯದೇ ಉಳಿಯುವಂತೆ ಮಾಡುವ ಮೂಲಕ ಭ್ರಮಾಲೋಕದ ಬ್ರಹ್ಮಾಂಡದಲ್ಲಿ ವಿಹರಿಸುವಂತೆ ಮಾಡುತ್ತವೆ. ಬುದ್ದಿಮತ್ತೆಯ ಕಾರ್ಯಕಲಾಪಗಳ ಕೇಂದ್ರಗಳಿಗೆ ಕೀಲಿಹಾಕಿ, ಭಾವಾವೇಶದ ಬಾನಿನಲ್ಲಿ ಗೊತ್ತುಗುರಿಯಿಲ್ಲದೇ ಗರಿಬಿಚ್ಚಿ ಹಾರಾಡುವ ವಾತಾವರಣ ನಿರ್ಮಿಸುವುದರಿಂದಾಗಿ ಇದಕ್ಕೆ “ವೈದ್ಯಕೀಯ ನಿರ್ವಾಣ ” ಎನ್ನುವರು. ನಿದ್ರಾಜನಕಗಳ ಪರಿಣಾಮಗಳು ಪ್ರಭಾವಶಾಲಿಯಾಗುವಲ್ಲಿ ನೆಮ್ಮದಿಕಾರಕಗಳು ನೆರವಾಗುತ್ತವೆ.

ಮಂಪರಿಕಗಳು (Narcotics) ಬೇಸಲ್ ಗ್ಯಾಂಗ್ಲಿಯಾದಿಂದ ಹೊರಟು ಮಿದುಳಿನ ಹೊರವಲಯದತ್ತ ಹರಡುವ ನರಗಳ ಹಾದಿಯಲ್ಲಿ ಅಡ್ಡಿಯನ್ನೊಡ್ಡುವುದರಿಂದ ಸರ್ವೋಚ್ಚ ಕೇಂದ್ರಗಳಿಗೆ ನೋವಿನ ಅರಿವು ಆಗುವುದಿಲ್ಲ. ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತವೆ. ಪ್ರಶ್ನಾವಳಿಗಳ ಪ್ರವಾಹ ಬತ್ತುವಂತೆ ಮಾಡಿ, ವಿಚಾರ ವಿನಿಮಯಗಳ ಚಾಕಚಕ್ಯತೆಯ ಚಕಮಕಿಗಳಿಗೆ ತೆರೆ ಎಳೆಯುವುದರಿಂದಾಗಿ ನಿದ್ರಾದೇವಿ ಮಡಿಲಲ್ಲಿ ಖುಷಿ ನೀಡುವ ಕನಸು ಕಾಣುವಂತೆ ಮಾಡುತ್ತವೆ.ಶ್ವಾಸೋಛ್ವಾಸ ಕೇಂದ್ರ ನಿರುತ್ಸಾಹಗೊಳ್ಳುವುದು. ಪರಿಣಾಮವಾಗಿ ಉಸಿರಾಟದ ತಾಳ ತಪ್ಪುವುದು. ‘ವೇಗಲ್ ಕೇಂದ್ರ ‘ ಪ್ರಚೋದನೆಗೊಳಪಡುವುದರಿಂದ ಸ್ನಾಯು ನರಗಳ ಕೂಟದಲ್ಲಿ ‘ಆಸಿಟೈಲ್ ಕೋಲಿನ್ ‘ಬಿಡುಗಡೆಯಾಗುವುದು .ಹೃದಯ ಬಡಿತ ಕುಗ್ಗುವುದು. ಮಾರ್ಫಿನ್ ಮತ್ತು ಹೈಯೋಸಿನ್ ಒಟ್ಟಿಗೆ ತೆಗೆದುಕೊಂಡಾಗ “ಅಪೂರ್ಣ ಪ್ರಜ್ಞಾ” ಸ್ಥಿತಿಯನ್ನು ಬಳುವಳಿಯಾಗಿ ನೀಡುತ್ತವೆ .

ಮಾದಕ ಪಾನೀಯಗಳು ಯಕೃತ್ ನಲ್ಲಿ ಉತ್ಕರ್ಷಣೆಗೊಳಗಾಗಿ ಪೆರಾಲ್ಡಿಹೈಡ್ ಆಗಿ ರೂಪಾಂತರಗೊಳ್ಳುವವು. ರಕ್ತದಲ್ಲಿ ಸಂಚರಿಸಿ, ಕೇಂದ್ರ ನರಮಂಡಲದ ಜೀವಕೋಶಗಳಿಗೆ ಮುತ್ತಿಗೆಹಾಕಿ, ದೈಹಿಕ ಮಾನಸಿಕ ಚಟುವಟಿಕಾ ಕೇಂದ್ರ, ವಿಚಾರಿಸುವ ಕೇಂದ್ರ, ಮಾತನಾಡುವ ಕೇಂದ್ರ, ಉಷ್ಣ ನಿಯಂತ್ರಣ ಕೇಂದ್ರಗಳ ಮೇಲೆ ಪ್ರಭಾವ ಬೀರಿ, ಕಾರ್ಯನಿರ್ವಹಣೆಯ ನಿಯಂತ್ರಣ ತಪ್ಪಿಸುತ್ತವೆ.

ಆಯಸ್ಕಾಂತದ ಆಕರ್ಷಣೆ:

ಜಗದ ಜಂಜಾಟವನ್ನು ಮರೆಸಿ, ರಂಗುರಂಗಿನ ರಮ್ಯ ರಮಣೀಯ ಲೋಕಕ್ಕೆ ಕೊಂಡೊಯ್ದು, ಊಹಾತೀತವಾದ ಚಿತ್ರ ವಿಚಿತ್ರ ಅನುಭವಗಳನ್ನಿತ್ತು, ಆನಂದಾನುಭೂತಿಯನ್ನು ನೀಡಿ, ಮನಸ್ಸನ್ನು ಆಯಸ್ಕಾಂತದಂತೆ ಆಕರ್ಷಿಸಿ, ವ್ಯಕ್ತಿಗಳ ದೌರ್ಬಲ್ಯ ದಮನಮಾಡುವಂತೆ ನಟಿಸಿ, ಆ ದೌರ್ಬಲ್ಯದ ಸುತ್ತ ನೂಲು ನೇಯ್ದು, ಮರಳು ಮಾಡಿ, ಹೆಡಮುರಿಗೆ ಕಟ್ಟಿ ಅತ್ತಿತ್ತ ಮಿಸುಕದಂತೆ ಮಾಡುತ್ತವೆ.

ಆಲಸ್ಯ, ಆಯಾಸಗಳನ್ನು ಅಳಿಸಿ, ಹಸಿವನ್ನು ಹೆಚ್ಚಿಸಿ, ಲವಲವಿಕೆ ಲಾಸ್ಯವಾಡುವಂತೆ ಮದ್ಯ ಮಾಡಬಲ್ಲುದಾದರೆ, ಪೆಡಂಭೂತಗಳಂತೆ ಪೀಡಿಸುವ ನೋವನ್ನು ನಿವಾರಿಸಿ ಕಣ್ತುಂಬ ನಿದ್ರೆ ತರಬಲ್ಲವು ಬಾರ್ಬಿಚುರೇಟ್, ಮಾರ್ಫಿನ್ ಗುಂಪಿನ ಮದ್ದುಗಳು. ಮನಸ್ಸಿನ ವ್ಯಾಕುಲತೆ, ಉದ್ರೇಕ, ಉದ್ವೇಗವನ್ನು ನೆಮ್ಮದಿಕಾರಿ ಔಷಧಿಗಳು ಬಗ್ಗುಬಡಿದರೆ, ಗಾಂಜಾ, ಎಲ್. ಎಸ್. ಡಿ.ಗಳು ಭ್ರಮೆಯ ಕಿನ್ನರ ಲೋಕವನ್ನೇ ಸೃಷ್ಟಿಸುತ್ತವೆ. ಸೇವಿಸುವವರಿಗೆ ಮೊದಮೊದಲು ಹಿತವನ್ನು ನೀಡಿ, ಬುಟ್ಟಿಗೆ ಹಾಕಿಕೊಳ್ಳುತ್ತವೆ. ಕ್ರಮೇಣ ತಮ್ಮ ಶರಪಂಜರದಲ್ಲಿ ಬಂದಿಸಿ ಅವರ ಮೇಲೆ ಸವಾರಿ ಮಾಡಿ, ಅವರನ್ನೇ ನುಂಗಿ ನೀರು ಕುಡಿಯುತ್ತವೆ–ಕಾಲು ಬಿದ್ದು ಕಾಲುಂಗರ ಬಿಚ್ಚಿಕೊಳ್ಳುವ ಹಾಗೆ.

ಪ್ರಾರಂಭದಲ್ಲಿ ಅಲ್ಪ ಸ್ವಲ್ಪ ಪ್ರಮಾಣಕ್ಕೆ ಖುಷಿ ಕೊಡುವ ಮಾದಕವಸ್ತುಗಳು ಆ ಖುಷಿಯನ್ನು ದಿನಗಳೆದಂತೆ ಕೊಡುವಲ್ಲಿ ವಿಫಲವಾಗುವವು. ಮೊದಲಿನ ಖುಷಿಯನ್ನು ಪಡೆಯುವ ಮನೋಭಾವಕ್ಕೆ ಮಣಿದು ಹೆಚ್ಚು ಹೆಚ್ಚು ಪ್ರಮಾಣ ಸೇವಿಸುತ್ತ ಹೋಗುವುದು ಅನಿವಾರ್ಯವಾಗುತ್ತದೆ. ತಾಳಿಕೆ (Tolerance), ಮಾನಸಿಕ ಅವಲಬನೆ (Dependency)ಯ ನಂತರ, ವ್ಯಸನಿಗಳಾಗುವರು.

ಆಹಾರವಿಲ್ಲದಾಗ ಹಸುವಿನಿಂದ ಹಪಹಪಿಸಿ ಕಂಗೆಡುವಂತೆ ಮಾದಕವಸ್ತುಗಳು ಮರೀಚಿಕೆಯಾದಾಗ ವ್ಯಸನಿ ಪರಿತಪಿಸಿ ಕಂಗೆಡುವರು. ಮಾದಕವಸ್ತುಗಳ ಮೋಹದ ಆಳ, ಊಹೆಗೆ ನಿಲುಕದ್ದು. ಅದನ್ನು ಪಡೆಯಲು ತಮ್ಮಲ್ಲಿಯ ಯುಕ್ತಿ, ಶಕ್ತಿ ಸಾಮರ್ಥ್ಯಗಳನ್ನೆಲ್ಲ ಬಳಸುವರು. ಈ ಆಸೆಯ ಮುಂದೆ ವೈಯಕ್ತಿಕ, ಸಾಮಾಜಿಕ, ನೈತಿಕ ಕಟ್ಟು ನಿಟ್ಟುಗಳು ಕರಗಿ ಹೋಗುವವು– ಬಿಸಿಗಿಟ್ಟ ಬರ್ಪದಂತೆ. ಯಾವ ಮಾರ್ಗವಾದರೂ ಸರಿ, ಅದನ್ನು ಪಡೆಯುವುದೇ ವ್ಯಕ್ತಿಯ ಪರಮ ಗುರಿಯಾಗುತ್ತದೆ. ಇದಕ್ಕಾಗಿ ಎಂಥಹ ಹೇಯ ಕೃತ್ಯಕ್ಕೂ ಹೇಸುವುದಿಲ್ಲ.

” ಮತ್ತ ಪಸ್ಯ: ಕತ: ಸುಖಮ್ “ಮತ್ತಿನ ಔಷಧಿ ಸೇವಿಸುವವಗೆ ಸುಖ ಎಲ್ಲಿ ಎಂಬ ಮಾತು ಅಕ್ಷರ ಸಹ ಸತ್ಯ. ಮಾದಕವಸ್ತುಗಳ ಪ್ರಭಾವಕ್ಕೆ ಸಿಕ್ಕ ದೇಹ ಗೆದ್ದಲು ಹತ್ತಿದ ಮರದಂತಾಗುತ್ತದೆ. ಶರೀರದ ವಿವಿಧ ಜೈವಿಕ ಹಾಗೂ ರಸಾಯನಿಕ ಕ್ರಿಯೆಗಳ ತಾಳ ತಪ್ಪಿ ಆಹಾರದ ಚಯಾಪಚಯ, ಸಂಸ್ಕರಣ, ಶೇಖರಣೆಗಳಲ್ಲಿ, ಮಲಿನ ವಸ್ತುಗಳ ಹೊರಹಾಕುವಿಕೆ ಮುಂತಾದ ದೈನಂದಿನ ಚಟುವಟಿಕೆಗಳಲ್ಲಿ ವೈಪರಿತ್ಯಗಳು ತಲೆದೋರುತ್ತವೆ. ಅಮಲಿನ ಆನಂದದ ಗುಂಗಿನಲ್ಲಿ ಆಹಾರ ಸೇವಿಸುವುದಿಲ್ಲ. ಪೋಷಕಾಂಶಗಳ, ಪೌಷ್ಟಿಕಾಂಶಗಳ, ಜೀವಸತ್ವಗಳ ಕೊರತೆಯ ಕೊರಗಿನ ಕಳೆ ಚಿಗಿಯುತ್ತದೆ. ರಕ್ತಹೀನತೆ ಮುತ್ತುತ್ತದೆ. ನಿಶ್ಯಕ್ತಿ, ನಿರಾಶಕ್ತಿ ನರ್ತನಗೈಯುವವು. ರೋಗ ಪ್ರತಿರೋಧಕ ಶಕ್ತಿ ಕುಗ್ಗುವುದು. ಇದರ ದುರುಪಯೋಗ ಪಡೆಯಲು ಸೂಕ್ಷ್ಮಾಣುಗಳ ದಂಡು ಹಿರಿ ಹಿರಿ ಹಿಗ್ಗುವುದು. ವ್ಯಸನಿ ರೋಗಾಣುಗಳನ್ನು, ರೋಗಗಳನ್ನು ಆದರದಿಂದ ಸ್ವಾಗತಿಸುವ ” ರಿಸೆಪ್ಸನಿಸ್ಟ್ ” ಆಗುವನು.

ಮನಸ್ಸಿದ್ದರೆ ಮಾತ್ರ ಮಾರ್ಗ:

ಸ್ವಭಾವತಃ ಯಾರೂ ವ್ಯಸನಿಗಳಲ್ಲ. ಅವರು ಪರಿಸ್ಥಿತಿಯ ಕೈಗೊಂಬೆಯಾಗಿರುವುದು ಸಹಜ. ಮಾದಕವಸ್ತುಗಳು ಸೃಷ್ಟಿಸಿರುವ ಸಮಸ್ಯೆಗಳಿಗೆ ಏಕೈಕ ಉತ್ತರ ತಡೆಗಟ್ಟುವಿಕೆ. ಜಗದ ಜಂಜಾಟದ ಬದುಕಿನಲ್ಲಿ ಜರ್ಜಿರಿತರಾಗಿ ಮಾದಕವಸ್ತುಗಳ ದಾಳಿಯ ಗಾಳಕ್ಕೆ ಸಿಕ್ಕಿಕೊಳ್ಳಬಾರದು. ” ಕೆಲಸದಲ್ಲಿಯ ಬದಲಾವಣೆಯಿಂದ ಬೇಸರ ಕಳೆಯಲು ಸಾಧ್ಯ ” ಎಂಬ ಹಿರಿಯರ ಹೇಳಿಕೆ ನಮಗೆ ಆಸ್ತಿಯಾಗಬೇಕು. ಕ್ಷಣಿಕ ಸುಖಕ್ಕೆ ಬಾಳು ಹಾಳು ಮಾಡಿಕೊಳ್ಳಬಾರದು. ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಲೇಬೇಕು. ಸಾಧನೆ ಸರಳವಲ್ಲ. ನಿಜ. ಆ ದಿಶೆಯಲ್ಲಿಯ ಪ್ರಯತ್ನದಿಂದ ಅಸಾಧ್ಯವೇನಲ್ಲ ಎಂಬುದು ಸತ್ಯ. ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು. ಇದರಿಂದ ಅಸ್ತಿತ್ವ ಗಟ್ಟಿಗೊಳ್ಳುವುದು. ವ್ಯಕ್ತಿತ್ವ ವಿಕಾಸಗೊಳ್ಳುವುದು.

ಮೊದಲು ಮಾದಕವಸ್ತುಗಳ ಚಕ್ರವ್ಯೂಹ ಭೇದಿಸಿ ಹೊರಗೆ ಬರಲು ಮನೋನಿರ್ಧಾರ ಅತ್ಯಗತ್ಯ. ಮನಸ್ಸಿದ್ದಲ್ಲಿ ಮಾರ್ಗವಿದೆ. ಹಿಂದೆಗೆತದ ಚಿನ್ಹೆ (Withdrawal Symptom)ಗಳನ್ನು ಸಂಯಮ ಹಾಗೂ ತಾಳ್ಮೆಯಿಂದ ತಗೆದುಕೊಳ್ಳುವ ದೃಢಸಂಕಲ್ಪ ಬೇಕು. ಚಿಕಿತ್ಸೆ ಎಷ್ಟರಮಟ್ಟಿಗೆ ಯಶಸ್ವಿಯಾಯಿತು ಅನ್ನುವುದು—
*ರೋಗಿ ಯಾವ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾನೆ
*ಚಟ ಬಿಡಲು ಪ್ರಾಮಾಣಿಕ ಪ್ರಯತ್ನ ಮತ್ತು ಆಸೆ ಎಷ್ಟಿದೆ?
*ರೋಗಿಯ ಸಂಬಂಧಿಕರು, ಮಿತ್ರರು ಎಷ್ಟು ಸಹಾಯ, ಸಹಾನುಭೂತಿ ತೋರಿ ಚಿಕಿತ್ಸೆಯಲ್ಲಿ ಭಾಗವಹಿಸಬಲ್ಲರು.
*ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು.
*ಪರಿಸರ ಎಷ್ಟು ಅನುಕೂಲಕರ ಹಾಗೂ ಆರೋಗ್ಯಕರ ಆಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಡ್ರಗ್ ದಂದೆ…….

drug-mafiaಡ್ರಗ್ ದಂದೆಯಲ್ಲಿ ವಿದೇಶಿಯರ ಕೈವಾಡ. ಎಲ್ಲವೂ ಡಾರ್ಕನೆಟ್ ಮೂಲಕ. ಇದು ಗೌಪ್ಯ ದಂದೆ. ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಸರಬರಾಜು. ಎಲ್ಲೂ ಸುಳಿವು ಸಿಗದಂತೆ ನಡೆವ ದಂದೆ. ಡ್ರಗ್ ಪೆಡ್ಲರ್ ಗಳಿಂದ ದಾಳಿ ವೇಳೆ ಪೋಲೀಸರಿಗೆ ಸಿಕ್ಕ ಮಾಹಿತಿ. ಹಾಗೆ ನೋಡಿದರೆ ಡ್ರಗ್ ಮಾಫಿಯಾ ಈ ದೇಶದ ಹೊಸ ದಂದೆ ಏನಲ್ಲ….ಇದು ಬಹಳ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ಪೋಲಿಸ್ ದಾಳಿಗಳು, ವಶಪಡಿಸಿಕೊಳ್ಳುವಿಕೆ, ಬಂಧನ, ವಿಚಾರಣೆ, ಬಿಡುಗಡೆ, ಪ್ರತಷ್ಠಿತರ ಹೆಸರುಗಳು ಎಲ್ಲವೂ ಹಳಸಲು ಸುದ್ದಿಗಳೇ……ಬ್ರೇಕಿಂಗ್ ನ್ಯೂಸ್ ಗಳಿಗೆ ವಿಷಯಗಳು ಮಾತ್ರ…….

ಈ ಡ್ರಗ್ ಸಮಾಚಾರ ಆಗಾಗ ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡು ಬಹು ಚರ್ಚಿತವಾಗಿ ಮತ್ತೆ ತೆರೆಯಮರೆಗೆ ಸರಿಯುತ್ತದೆ. ಎಲ್ಲರೂ ಮರೆತಾಗ ಮತ್ತೆ ಸ್ವಚ್ಚಂದವಾಗಿ ತನ್ನ ಕದಂಬ ಬಾಹು ಚಾಚಿ ನಿರಾಳವಾಗಿ ತನ್ನ ವ್ಯವಹಾರ ಮುಂದುವರೆಸುತ್ತದೆ. ಡ್ರಗ್ ಗೆ ದಾಸರಾದವರು ಹೇಗಾದರೂ ಪಡೆದುಕೊಳ್ಳುತ್ತಾರೆ. ಅದಕ್ಕೆ ಕೆಲವೊಮ್ಮೆ ಕಾನೂನು ವ್ಯವಸ್ಥೆ ಕಾಪಾಡುವವರ ಕೃಪಾಕಟಾಕ್ಷವೂ ಇರುತ್ತದೆ. ಡ್ರಗ್ ಮಾಫಿಯಾವನ್ನು ಬೇರು ಸಹಿತ ಕಿತ್ತೊಗೆಯುವುದು ಬಲು ಕಷ್ಟ. ಇದರ ಕಡಿವಾಣಕ್ಕೆ , ಬಳಸುವವರೇ ಮನಸ್ಸನ್ನು ಬದಲಾಯಿಸಿ ತಿರಸ್ಕರಿಸಬೇಕು. ಆಗ ಇದರ ಜಾಲ ಬೇರು ಸಮೇತ ನಾಶವಾಗಬಹುದು.

ಡ್ರಗ್ ಎಂಬುದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಭಾರತದಲ್ಲಿ ನಿಷೇಧಿಸಲೇ ಬೇಕಾದ ಮಾದಕ ದ್ರವ್ಯ.ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ಮತ್ತು ಅದರ ಬಗ್ಗೆ ಗಂಭೀರ ಆಕ್ರೋಶ ವ್ಯಕ್ತಪಡಿಸುವ ವಿಷಯವಿದು. ಆಡಳಿತ ವ್ಯವಸ್ಥೆಗೆ ಏನಾಗಿದೆ? ಉತ್ಪಾದನೆಯ ಮೂಲಗಳನ್ನು, ವಿದೇಶಿ ಮೂಲಗಳನ್ನು ನಿಯಂತ್ರಿಸುವ ಬದಲು ಅದರ ವ್ಯಾಪಾರ ಮತ್ತು ಗ್ರಾಹಕರನ್ನು ನಿಯಂತ್ರಿಸಲು ತಮ್ಮ ಶ್ರಮವನ್ನು ವ್ಯರ್ಥ ಮಾಡುತ್ತಿದ್ದಾರೆ. ಮಾದಕವಸ್ತುಗಳ ಉತ್ಪಾದಕರನ್ನು ಭಯೋತ್ಪಾದಕರೆಂದೇ ಪರಿಗಣಿಸಬೇಕು. ದೃಶ್ಯ ಮಾಧ್ಯಮಗಳು ಈ ಸಮಸ್ಯೆಯ ಆಳ, ಅಗಲ ಮತ್ತು ಪರಿಹಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಅದನ್ನು ಜನಪ್ರೀಯ ಮತ್ತು ಗ್ಲಾಮರಸ್ ಮಾಡಲು ಯತ್ನಿಸುತ್ತಿವೆ. ಇದು ವೈಯಕ್ತಿಕ ಸಮಸ್ಯೆಯಲ್ಲ. ಮಾದಕವಸ್ತುಗಳ ಮುಕ್ತ ರಾಷ್ಟ್ರ ಮಾಡಲು ಉಪಾಯ ಹುಡುಕ ಬೇಕಿದೆ. ಇದು ಇಂದಿನ ಅವಶ್ಯಕತೆ ಕೂಡ .

ಮೊದಲು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಇದರ ದಾಸರಾಗಿದ್ದರು. ಆದರೆ, ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್ ವುಡ್ ಗಳಿಗೆ ಇದರ ಕರಿ ಛಾಯೆ ಮೂಡಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಗೂಢವಾಗಿ ಉಳಿಯುತ್ತಿದೆ. ಅದರ ಬಗ್ಗೆ ಯಾರಾದರೂ ಬಾಯಿ ಬಿಟ್ಟರು ಸಹಾ ಅವರನ್ನು ಮುಗಿಸಿ ಹಾಕುವ ಸ್ಕೆಚ್ ಹಾಕುತ್ತಾರೆ ಎಂಬುದರ ಗುಮಾನಿಯಿದೆ. ಹಾಗೂ ಇದೇ ಕಾರಣಕ್ಕೆ ಯಾವ ವಿಷಯವೂ ಇನ್ನೂ ಬಹಿರಂಗಗೊಳ್ಳುತ್ತಿಲ್ಲ. ಅದರ ಹಿಂದೆ ಇರುವ ದೊಡ್ಡ ಕಾರಣವೇ ‘ ಡ್ರಗ್ ಮಾಫಿಯಾ ‘.ದೊಡ್ಡ ದೊಡ್ಡ ಕುಳಗಳೇ ಇದರಲ್ಲಿ ಭಾಗಿಯಾಗುವುದರಿಂದ ವಿಷಯಗಳು ಬಹಿರಂಗವಾಗುತ್ತಿಲ್ಲ ಎಂಬುದು ಸಹ ಅಷ್ಟೇ ಕಟು ಸತ್ಯ. ಎಷ್ಟೋ ಅಪರಾಧ ಪ್ರಕರಣಗಳು ಡ್ರಗ್ ಅಡಿಕ್ಟ್ ನಿಂದ ಆಗುತ್ತಿವೆ.

ಏನು ಮಾಡಬೇಕು?

ಮೊಟ್ಟ ಮೊದಲು ಇಚ್ಛಾಶಕ್ತಿ ಬೇಕು. ಮುಂದಾಗುವ ಅನಾಹುತಗಳನ್ನು, ಅಪಾಯಗಳನ್ನು, ಗಂಡಾಂತರಗಳನ್ನು ತಡೆಗಟ್ಟಬೇಕಾದರೆ, ಅಗತ್ಯ ಕ್ರಮಗಳನ್ನು ತ್ವರಿತವಾಗಿ ತಗೆದುಕೊಂಡು ಅಕ್ರಮ ಜಾಲ ಭೇದಿಸುವುದು ಅನಿವಾರ್ಯವಾಗಿದೆ. ಇಡೀ ದೇಶವನ್ನು ಪಂಜಾಬ್ (ಮಾದಕವಸ್ತುಗಳ ರಾಜಧಾನಿ) ಮಾಡದೇ,ಆರೋಗ್ಯವಾಗಿ ಇಡಬೇಕಾದದ್ದು ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲಿದೆ. ದೇಶದಲ್ಲಿಯ ಕಾನೂನುಗಳು ಬೆದರುಗೊಂಬೆ ಆಗದಿರಲಿ. ನಿಷ್ಪಕ್ಷವಾಗಿ, ನಿರ್ಧಾಕ್ಷಿಣ್ಯವಾಗಿ ಸಮಗ್ರ ತನಿಖೆಯಾಗಿ, ಸರಿಯಾದ ನ್ಯಾಯ ಒದಗಿಸಿ ಜನರಿಗೂ ಅವುಗಳ ಮೇಲೆ ಭರವಸೆ ಮೂಡುವ ಹಾಗೆ ಮಾಡಿ, ಜನರು ನಿಟ್ಟುಸಿರು ಬಿಟ್ಟು, ನೆಮ್ಮದಿಯಿಂದ ಬದುಕುವ ಹಾಗೆ ಮಾಡಲಿ. ಎಚ್ಚರ…..ನಿಮ್ಮ ಶತ್ರು ” ಮಾದಕವಸ್ತುವಿನ ರೂಪದಲ್ಲಿ ಬಂದು ನಿಮ್ಮ ಮನೆ ಬಾಗಿಲು ತಟ್ಟಿದರೆ, ಬಾಗಿಲು ತೆರೆಯದಿರಿ. ಜೋಕೆ! ತೆರೆದಿದ್ದೇ ಆದರೆ ನಿಮ್ಮ ಮನವನ್ನು, ನಿಮ್ಮ ಮನೆಯನ್ನೂ ನಾಶ ಮಾಡುವುದು ಖಂಡಿತ…..”

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ – 587201
ಜಿಲ್ಲಾ: ಬಾಗಲಕೋಟೆ
ಮೊ: 9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!