ಹೆಚ್ಚು ಸೊಪ್ಪು, ಕಡಿಮೆ ಉಪ್ಪು; ಚೆನ್ನ ತಿನ್ನಿ, ಪುಷ್ಠಿ ಎನ್ನಿ!

 ಬದುಕಲು, ದೇಹ ರಕ್ಷಿಸಲು ದೈಹಿಕ ಚಟುವಟಿಕೆಗಳನ್ನು ಮಾಡಲು, ಪ್ರತಿದಿನ ನಿಗದಿತ ಸಮಯಕ್ಕೆ, ಆವಶ್ಯಕ ಪ್ರಮಾಣದಲ್ಲಿ ಆಹಾರ ತಿನ್ನಲೇಬೇಕು. ಏನನ್ನಾದರೂ ತಿನ್ನಲು, ಕೇವಲ ಹೊಟ್ಟೆ ತುಂಬಿಕೊಳ್ಳಲು, ನಾವು ತಿನ್ನುವುದಿಲ್ಲ. ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ಸಮತೋಲನ ಆಹಾರವಾಗಿ ಸ್ವೀಕರಿಸಲು, ಆಹಾರ ವಿಜ್ಞಾನಿಗಳು, ವೈದ್ಯರು, ಪೋಷಣಶಾಸ್ತ್ರಜ್ಞರು, ಸಲಹೆ ಕೊಡುತ್ತಲೇ ಇದ್ದಾರೆ. ರುಚಿಗಾಗಿ ಹೆಚ್ಚು ಉಪ್ಪು, ನಾಲಿಗೆ ಇಷ್ಟಪಡಲು ನಾನಾ ತರಹದ ಎಣ್ಣೆಗಳು, ಮಸಾಲೆ ಪದಾರ್ಥಗಳನ್ನು ಹೆಚ್ಚು ಹೆಚ್ಚು ಬಳಸುತ್ತೇವೆ. ಆದರೆ ಪ್ರತಿಯೊಬ್ಬರ ಕೈಗಳಲ್ಲಿ ಅರಳುವ, ಪ್ರತಿ ಕುಟುಂಬದ ಅಡಿಗೆ ಮನೆಯಲ್ಲಿ ಬೇಯುವ ಆಹಾರ, ಎಷ್ಟರ ಮಟ್ಟಿಗೆ ಅವರವರ ದೈಹಿಕ, ಮಾನಸಿಕ, ಆರೋಗ್ಯ, ಪೌಷ್ಠಿಕತೆಗೆ ಹಿತವಾಗಿದೆ ಎನ್ನುವುದಕ್ಕಿಂತ, ಅವರವರ ಕೌಟುಂಬಿಕ, ಧಾರ್ಮಿಕ ಹಿನ್ನೆಲೆ, ಹಿಂದಿನಿಂದ ಆಯಾ ಜನರಿಗೆ ರೂಢಿಯಾಗಿರುವ ಪದ್ಧತಿ, ಅವರ ಆರ್ಥಿಕ ಶಕ್ತಿ, ಅವರ ಖರ್ಚು ಮಾಡುವ ಪದ್ಧತಿ, ಐಷಾರಾಮಿ ಜೀವನ ಶೈಲಿ, ಆಹಾರ ಪದ್ಧತಿಯನ್ನು ನಿಗದಿಪಡಿಸುತ್ತೆ, ಪ್ರತಿಯೊಬ್ಬರಿಗೆ ಯಾವುದು ಹಿತ, ಯಾವುದು ಮಿತವಾಗಿರಬೇಕು? ಈ ಹಿತ, ಮಿತಿ ಮುಟ್ಟಲಾಗದಿದ್ದರೆ ಅಥವಾ ಮೀರಿದರೆ, ಏನಾಗುತ್ತೆ ಅಂತ, ನಮ್ಮಲ್ಲಿ ಬಹಳ ಜನಕ್ಕೆ ವೈಜ್ಞಾನಿಕವಾಗಿ ಅರಿವೇ ಇಲ್ಲ.

ಸಾಲದ ಅಥವಾ ಅಸಮತೋಲ ಆಹಾರದಿಂದ ಉಂಟಾಗುವ ಪೌಷ್ಠಿಕತೆಯ ಕೊರತೆ ಹಾಗೂ ಬಡ ಸ್ಥಿತಿಯೇ ಅಪೌಷ್ಠಿಕತೆ. ಅಭಿವೃದ್ಧಿಪರ ದೇಶಗಳಲ್ಲಿಯ ಶಿಶುಗಳು, ಮಕ್ಕಳ ಮರಣದ ಮೂರನೇ ಒಂದು ಭಾಗ ಈ ಕಾರಣದಿಂದ. ಅಪೌಷ್ಠಿಕ ಆಹಾರ ಪಡೆಯುವ ಪಡೆಯುವ, 3 ಮಕ್ಕಳಲ್ಲಿ ಒಂದು, ನಮ್ಮ ದೇಶದಲ್ಲಿದೆ. ಮನುಷ್ಯರ ಆರೋಗ್ಯ ಅಭಿವೃದ್ಧಿ ಮೇಲೆ, ಅಪೌಷ್ಠಿಕತೆಯ ದಾಳಿಯ ಪರಿಣಾಮಗಳು, ಉತ್ಪಾದಕತೆಯ ನಷ್ಟ ಹಾಗೂ ಆರ್ಥಿಕ ಹಿಂದುಳಿಯುವಿಕೆ. ಆರೋಗ್ಯ ಹಾಗೂ ಉತ್ತಮ ಜೀವನದ ಮುಖ್ಯ ಕೇಂದ್ರ ಪೌಷ್ಠಿಕತೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ “ದೇಹದ ಆಹಾರ ಆವಶ್ಯಕತೆಗಳಿಗೆ ತಕ್ಕಂತೆ, ಸ್ವೀಕರಿಸುವ ಆಹಾರವೇ ಪೌಷ್ಠಿಕತೆ”. ಸದ್ಯದ ಹಾಗೂ ಭಾವೀ ತಲೆಮಾರುಗಳ ಉಳಿಯುವಿಕೆ, ಆರೋಗ್ಯ ಹಾಗೂ ಅಭಿವೃದ್ಧಿಗಳಿಗೆ ಇದು ಬೇಕೇ ಬೇಕು. ಸರಿಯಾಗಿ ತಿನ್ನಬೇಕೆಂಬ ಸೂತ್ರ, ತಮ್ಮ ದೇಹದ ತೂಕ ಇಳಿಸಬೇಕು ಅಥವಾ ತಮ್ಮ ದೇಹದ ಆಕಾರ ಹಿಂದಿನಂತಾಗಬೇಕು ಎಂದು ಪ್ರಯತ್ನ ಮಾಡುವವರಿಗಾಗಿ ಮಾತ್ರವಲ್ಲ. ರೋಗಗಳನ್ನು ದೂರವಿಟ್ಟು ದೈಹಿಕ ಅರ್ಹತೆಗಾಗಿ ಪ್ರತಿಯೊಬ್ಬರ ಜೀವನ ಶೈಲಿಯಲ್ಲೂ ಇದನ್ನು ಅಳವಡಿಸಿಕೊಳ್ಳಬೇಕಾಗಿದೆ. ನೀವು ಯಾರೆಂದು ತಿಳಿಯಲು, ನೀವು ತಿನ್ನುವುದನ್ನು ಗಮನಿಸಿ ಎನ್ನುತ್ತದೆ ಅನುಭವ. ಒಳ್ಳೆಯ ಆರೋಗ್ಯದ ಗುಟ್ಟು, ಉತ್ತಮ ಪೋಷಕಾಂಶ ಹಾಗೂ ನಿತ್ಯ ಶಾರೀರಿಕ ಚಟುವಟಿಕೆ. ಆರೋಗ್ಯವಂತ ಮಕ್ಕಳು ಬೇಗ ಕಲಿಯುತ್ತಾರೆ. ಪೋಷಕಾಂಶ ಸಾಕಷ್ಟಿದ್ದರೆ ಉತ್ಪಾದಕತೆ ಹೆಚ್ಚುತ್ತದೆ. ಅಪೌಷ್ಠಿಕತೆ ಅಥವಾ ಪುಷ್ಟಿ ಆಹಾರದ ಕೊರತೆ, ದೇಹದ ಪ್ರತಿರೊಧಕ ಶಕ್ತಿ ಕಡಿಮೆ ಮಾಡುತ್ತದೆ, ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಶಾರೀರಿಕ ಮತ್ತು ಮಾನಸಿಕ ಅಭಿವೃದ್ಧಿ ಕುಂಠಿತಗೊಂಡು, ಉತ್ಪಾದಕತೆ ಕಡಿಮೆಯಾಗಿರುತ್ತದೆ. ಒಳ್ಳೆಯ ಪೌಷ್ಠಿಕ ಆಹಾರ, ಆರೋಗ್ಯವಂತ ವ್ಯಕ್ತಿಗಳನ್ನು ನಿರ್ಮಿಸಿ, ಆರೋಗ್ಯಯುತ ದೇಶಕ್ಕೆ ತಳಪಾಯವಾಗುತ್ತದೆ.

ಆರೋಗ್ಯಯುತ ಆಹಾರ:

ಸಮತೋಲ ಆಹಾರದಲ್ಲಿ ಸಸಾರಜನಕ, ಪಿಷ್ಠ, ಕೊಬ್ಬು, ಜೀವಸತ್ವಗಳು, ಖನಿಜಗಳು ಹಾಗೂ ನೀರು ಇದ್ದು, ಇವು ಜೀವನ, ಬೆಳವಣಿಗೆ, ದೇಹದ ಕ್ರಿಯೆಗಳಿಗೆ, ಅಂಗಾಂಶಗಳ ದುರಸ್ತಿಗೆ, ಆವಶ್ಯಕ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೇರುಗಳು, ಬೀಜಗಳು, ದ್ವಿದಳ ಧಾನ್ಯಗಳು, ಇವೆಲ್ಲ ಇರಬೇಕು. ಸಮತೋಲ ಆಹಾರದ ಒಟ್ಟೂ ಕ್ಯಾಲರಿಗಳಲ್ಲಿ (ಶಾಖದ ಮಾನದಲ್ಲಿ) ಶೇಕಡಾ 50ರಿಂದ 60 ಭಾಗ ಪಿಷ್ಠದಿಂದ, ಶೇಕಡಾ 10-15 ಭಾಗ ಸಸಾರಜನಕ ಹಾಗೂ ಶೇಕಡಾ 20ರಿಂದ 30 ಭಾಗ ಕಾಣುವ ಹಾಗೂ ಕಾಣಿಸದ ಕೊಬ್ಬನ್ನು ಪೂರೈಸಬೇಕು. ಕೃತಕ ಸಿಹಿ ನೀಡುವ ಪದಾರ್ಥಗಳು ಸಕ್ಕರೆ, ಕೆಫಿನ್ ಹಾಗೂ ಸುವಾಸನೆಗಳನ್ನು ಹೊಂದಿದ್ದು, ಯಾವುದೇ ಪೋಷಕಾಂಶ ಕೊಡದಿದ್ದರೂ ಹಾನಿ ಉಂಟು ಮಾಡಬಹುದು. ತಾಜಾ ಹಣ್ಣಿನ ರಸಗಳಲ್ಲಿ ವಿಟಮಿನ್-ಸಿ, ನಾರಿನಂಶ ಇದ್ದು, ಮಲವಿಸರ್ಜನೆ ಸುಲಭವಾಗುತ್ತದೆ. ಜೀವಸತ್ವಗಳು, ಖನಿಜಗಳು, ಸಕ್ಕರೆ, ಸಸಾರಜನಕವಿರುವ, ತಾಜಾ ಹಣ್ಣಿನ ರಸಗಳು ರಕ್ತ ಪ್ರವಾಹದಲ್ಲಿ ಬೇಗ ಸೇರಿಕೊಳ್ಳುತ್ತವೆ. ಇದು ಜೀರ್ಣಾಂಗ ವ್ಯವಸ್ಠೆಯ ಮೇಲೆ ಕಡಿಮೆ ಹೊರೆ ಹಾಕುತ್ತವೆ. ಕ್ಯಾಲ್ಸಿಯಂನಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ. ಇದರ ಶ್ರೀಮಂತ ಮೂಲಗಳು, ಹಾಲು ಹಾಗೂ ಹಾಲಿನ ಉತ್ಪಾದನೆಗಳು, ಹಸಿರು ಸೊಪ್ಪು, ತರಕಾರಿಗಳು ಹಾಗೂ ಮೊಟ್ಟೆ. ಅಡಿಗೆ ಎಣ್ಣೆಗಳಲ್ಲಿ ಶೇಂಗಾ ಎಣ್ಣೆ, ಅಕ್ಕಿ ತೌಡಿನ ಎಣ್ಣೆ, ಆಲಿವ್ ಎಣ್ಣೆ ಮುಂತಾದವುಗಳಿದ್ದು, ಇವುಗಳ ಮಿಶ್ರಣ ಅಥವಾ ಪರ್ಯಾಯ ಬಳಕೆಯಿಂದ ಒಳ್ಳೆಯ ಪರಿಣಮವಾಗುತ್ತದೆ. ಈಗಾಗಲೇ ಮೂತ್ರಪಿಂಡಗಳಲ್ಲಿ ಹರಳುಗಳ ಸಮಸ್ಯೆ ಇದ್ದವರನ್ನು ಬಿಟ್ಟು, ಉಳಿದವರು ಟಮೇಟೋ, ಪಾಲಾಕ್ ತಿನ್ನಬಹುದು. ಉಪ್ಪಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುವ ದೇಹ ಹೊಂದಿದವರು, ಮಿತವಾಗಿ ಉಪ್ಪು ಬಳಸಬೇಕು. ಶಿಶುಗಳಿಗೆ ತಾಯಿ ಹಾಲೇ ಅತ್ಯುತ್ತಮ ಆಹಾರ.

ತಜ್ಞರ ಕೆಲವು ಸಲಹೆಗಳು:
  1. ತಾಜಾ ಆಹಾರ ತಿನ್ನಿ, ಸಂಸ್ಕರಿಸಲಾದ ಆಹಾರ ಬಿಟ್ಟು ಬಿಡಿ ಅಥವಾ ತೀರ ಕಡಿಮೆ ಮಾಡಿ. ತಾಜಾ ಹಣ್ಣುಗಳನ್ನು ತರಕಾರಿಗಳನ್ನು ತಿನ್ನಿ.
  2. ಯಿಸುವಾಗ ಕಡಿಮೆ ನೀರನ್ನು ಬಳಸಿ. ಅತಿಯಾದ ಶಾಖ ಅಥವಾ ಕುದಿಯುವ ನೀರಿನಲ್ಲಿ ಪೌಷ್ಠಿಕಾಂಶಗಳು ನಾಶವಾಗುತ್ತವೆ.
  3. ಸಿಪ್ಪೆ ಸಹಿತ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನಿ. ಗಜ್ಜರಿಗಳು ಮಣ್ಣಿನಿಂದ ವಿಷಕಾರಿ ಪದಾರ್ಥಗಳನ್ನು ಹೀರಿಕೊಂಡಿರುವದರಿಂದ ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ತಿನ್ನಿ.
  4. ತಿನ್ನಲು ಕೂರುವ ಮೊದಲು ಹಣ್ಣುಗಳನ್ನು ಕತ್ತರಿಸಿ. ತೊಳೆದು, ನೀರಲ್ಲಿ ಮುಳುಗಿಸಿ ಇಡಬೇಡಿ.
  5. ಸಾಂಪ್ರದಾಯಿಕವಾಗಿ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನೇ ತಿನ್ನಿ. ರಸ್ತೆಯಲ್ಲಿಯ ಶೀಘ್ರ ಆಹಾರ ತಿನ್ನಬೇಡಿ.
  6. ಊಟ ಬಿಟ್ಟು ಏನೇನೋ ತಿಂಡಿ ತಿನ್ನಬೇಡಿ.
  7. ಸಕ್ಕರೆ ಹಾಗೂ ಅನಾರೋಗ್ಯಕಾರಿ ಸಂಸ್ಕರಿತ ಆಹಾರ ಮಿತಗೊಳಿಸಿ.
ಹೆಚ್ಚು ಗಿಡಮೂಲಿಕೆ, ಸೊಪ್ಪು ಹಾಗೂ ಕಡಿಮೆ ಉಪ್ಪು:

ಕಡಿಮೆ ಉಪ್ಪಿಗಾಗಿ ದಿನ ನಿತ್ಯದ ನಿಮ್ಮ ಆಹಾರದ ಪುನಃ ಪರಿಷ್ಕರಣೆ ಮಾಡಿ. ಮನೆಯಲ್ಲಿ ತಯಾರಿಸಿದ ಸೊಪ್ಪು ಹಾಗೂ ಮೂಲಿಕೆಗಳು ಬಳಕೆಯನ್ನು ಹೆಚ್ಚಿಸಿ. ಗಸಗಸೆ ಎಣ್ಣೆ, ಅಜವಾನ, ಪುದೀನಾ, ತುಳಸಿ ಇವುಗಳಿಂದ ರುಚಿ ಹೆಚ್ಚುತ್ತದೆ. ಹೆಚ್ಚು ಉಪ್ಪು ಹಾಕಿದ ಆಹಾರ, ಹೆಚ್ಚು ಬೆಣ್ಣೆ ಸವರಿದ ಬ್ರೆಡ್ ತಿನ್ನಬೇಡಿ. ಎಂದಾದರೂ ನಿಮ್ಮ ವೈದ್ಯರು ಹೆಚ್ಚು ಉಪ್ಪು ತಿನ್ನಲು ಹೇಳಿದರೆ, ಅದು ನಿಮ್ಮ ಕನಸಿರಬಹುದಾ ಎಂದು ಚಿವುಟಿ ನೋಡಿಕೊಳ್ಳಿ. ಸ್ವಾದಿಷ್ಠತೆ ಹೆಚ್ಚದರೂ, ಆಹಾರ ಹೆಚ್ಚು ರುಚಿಕಾರಕ ಎನ್ನಿಸಿದರೂ, ಅದು ದೇಹಕ್ಕೆ ಹಾನಿಕಾರಕ. ಕೊತ್ತಂಬರಿ ಸೊಪ್ಪು ಮರುಗಗಳಿಂದ, ತುಳಸಿಯಿಂದ, ಗಸಗಸೆ, ಅಜವಾನ, ಪುದೀನಾ ನಿಂಬೆಯ ವಾಸನೆ ಮತ್ತು ರುಚಿಯ ಎಳೆಗಳುಳ್ಳ ಪೊದೆಯ ಸೊಪ್ಪು, ನಿಂಬೆಹುಲ್ಲು, ನಿಂಬೆವಾಸನೆಯ ಎಲೆಗಳುಳ್ಳ ಬೇರು, ದ್ರಾಕ್ಷಿ ಸೇಬುಗಳ ಕಟು ಹುಳಿರಸ, ಪುಂಡಿ ಸೊಪ್ಪಿನಿಂದ, ಗೊಂಗೂರಾದಿಂದ, ಪಚ್ಚಡಿಯಿಂದ, ಕಾಳುಗಳ ಮೊಳಕೆಗಳಿಂದ, ಹರಿವೆ ಸೊಪ್ಪಿನಿಂದ, ಕಾದ ಬಾಣಲೆಯಲ್ಲಿ ಸ್ವಲ್ಪವೇ ಎಣ್ಣೆ ಹಾಕಿ, ಬೇಗ ಹುರಿಯುವದರಿಂದ, ಅಡಿಗೆ ರುಚಿಕಟ್ಟಾಗಿರುತ್ತದೆ. ಅಲ್ಲದೆ ಉಪ್ಪು ಕಡಿಮೆ ಬಳಸಿ.
ನಮ್ಮ ಅಜ್ಜಿ-ತಾಯಂದಿರು, ನಳ-ಭೀಮರ ಪರಂಪರೆಯ ಅಜ್ಜ-ತಂದೆಯರು, ಸಾಂಪ್ರದಾಯಿಕ ಅಡಿಗೆ ಮಾಡುವುವರು, ಕುಟುಂಬದ ಸದಸ್ಯರಿಗಾಗಿ, ಕೆಲಸ ಕೊಟ್ಟ ಕುಟುಂಬ ಹಾಗೂ ಸಮಾಜಕ್ಕಾಗಿ, ಶುಚಿಯಾಗಿ-ರುಚಿಯಾಗಿ, ವೈವಿಧ್ಯಮಯವಾಗಿ ಆಹಾರ ಪದಾರ್ಥಗಳನ್ನು ನೂರಾರು ವರ್ಷಗಳಿಂದ ಪ್ರತಿ ನಿತ್ಯ ಬೆಳಗ್ಗೆ, ಸಂಜೆ ತಯಾರಿಸುತ್ತಲೇ ಇದ್ದಾರೆ. ತಾವು ಮಾಡುವ ಅಡಿಗೆಯಲ್ಲಿ ಮಮತೆ, ಪ್ರೀತಿ, ವಿಶ್ವಾಸ, ನಂಬಿಕೆಗಳ ಹಿನ್ನೆಲೆಯಲ್ಲಿ, ಅನುಭವ ಧಾರೆ ಎರೆದು ತಯಾರಿಸಿದ, ಮನೆ ಆಹಾರದ ರುಚಿ ಬಲ್ಲವರೇ ಬಲ್ಲರು!. ಒಟ್ಟಾಗಿ ಕುಳಿತು, ಹಬ್ಬ, ಉತ್ಸವ ಸಮಾರಂಭಗಳಲ್ಲಿ ಸವಿಯುವ ಸಾವಿರಾರು ಭಕ್ಷ್ಯಗಳು, ಅಡಿಗೆ ತಿನಿಸು ಹಾಗೂ ಆಹಾರಗಳನ್ನು, ದಿಢೀರ್ ತಿಂಡಿ-ಆಹಾರ ನುಂಗುವ ಇಂದಿನ ತಲೆಮಾರಿನವರು ಗಮನಿಸಿರಲಿಕ್ಕಿಲ್ಲ. ಈಗಿನ ಕುಕ್ಕರ್, ಮಿಕ್ಷಿ, ಗ್ಯಾಸ್, ಕಟರ್ ಇಲ್ಲದ ಕಾಲದಲ್ಲೂ, ಸೌದೆ ಒಲೆಯ ಮೇಲೆ ತಯಾರಿಸಿ ಬಡಿಸುತ್ತ್ತಿದ್ದ ಪಕ್ಷಾನ್ನಗಳು, ಇಡೀ ವರ್ಷ ಮತ್ತೆ ಮತ್ತೆ ಆ ಹಬ್ಬ, ಉತ್ಸವ, ಆಚರಣೆ ಯಾವಾಗ ಬರುವುದೋ, ಯಾವಾಗ ನಾವು ಸವಿಯುತ್ತೇವೋ, ಎಂದು ನಮ್ಮನ್ನು ತುದಿಗಾಲ ಮೇಲೆ ಕೂರಿಸಿ, ಕಾಯಿಸುತ್ತಿತ್ತು.

ಬಿಸಿ ಒಬ್ಬಟ್ಟಿನ ಮೇಲೆ ಹಾಕಿದ ಕರಗಿಸಿದ ತುಪ್ಪ, ಹೂರ್ಣಗಡುಬು, ಚಿರೋಟಿ, ಫೇಣಿ, ತರತರಹದ ಹೋಳಿಗೆಗಳು, ವಿವಿಧ ಪಾಯಸಗಳು, ಸಿಹಿ ಖಾರಾ ಪದಾರ್ಥಗಳು, ಪಲ್ಯ, ಕೂಟು, ಸಾರು, ಸಾಂಬಾರುಗಳು, ತರಹಾವರಿ ಬಾತ್‍ಗಳು, ಒಂದೆ ಎರಡೇ! ಮಸಾಲೆ ಪದಾರ್ಥಗಳಿಗಿಂತ, ಭಾರತೀಯ ಸಂಬಾರ ಪದಾರ್ಥಗಳ ಹದವಾದ ತಾಜಾ ಮಿಶ್ರಣ ಅಲ್ಲಿರುತ್ತಿತ್ತು. ರುಬ್ಬು ಗುಂಡಿನಿಂದ ರುಬ್ಬಿದ ಇಡ್ಲಿ, ದೋಸೆ, ಕಾಯಿ ಚಟ್ನಿ ಮಾಡುವವರಿಗೂ ಖುಷಿ, ತಿನ್ನುವವರಿಗೂ ಸಂಭ್ರಮ. ಆಗ ಮಾಡುವವರೂ ಗಟ್ಟಿ, ತಿಂದು ಜೀರ್ಣಿಸಿಕೊಳ್ಳುವವರೂ ಗಟ್ಟಿ. ಆ ಕಾಲ ಈಗಿಲ್ಲ. ಕಾತುರದ ಅಡಿಗೆ – ಆತುರದ ಊಟ. ರುಚಿ, ವೈವಿಧ್ಯತೆ, ಪೌಷ್ಠಿಕತೆಗಳನ್ನು ನಿಧಾನವಾಗಿ ಸವಿಯುವ ಆನಂದ, ಅಪರೂಪ. ಅವಸರವಸರದಿಂದ ಬೇಗ ಬೇಗ ತುರುಕಿ ತಿಂದು, ಓಡುವ ಆತುರದಲ್ಲಿ ಪೌಷ್ಠಿಕತೆ, ಸೊಪ್ಪು, ಗಿಡಮೂಲಿಕೆಗಳತ್ತ ಎಲ್ಲಿ ಇಣುಕುವುದು! ಹುಡುಕಿ ತಂದು, ಸ್ವಚ್ಛ ಮಾಡಿ, ಸಿದ್ಧ ಮಾಡಿ, ಹದವಾಗಿ ಬೆರೆಸಿ, ಸೇರಿಸಿ, ಮಿಶ್ರ ಮಾಡಿ, ತರತರಹದ ಅಡುಗೆ ತಯಾರಿಸಲು ಹಾಗೂ ಪಳಗಲು ಯಾರಿಗೂ ತಾಳ್ಮೆ ಇಲ್ಲ.
ಕೊಂಚ ಯೋಚಿಸಿ. ಭಾರತೀಯ ನೆಲದಲ್ಲಿ ಲಭ್ಯವಿರುವ, ಸತ್ವಯುತ ಆಹಾರದ ಅವಿಭಾಜ್ಯ ಭಾಗಗಳಾಗಬಹುದಾದ ಈ ಮುಂದಿನ ಪಟ್ಟಿ ಗಮನಿಸಿ. ರುಚಿ ಹಾಗೂ ಜೀರ್ಣಕ್ಕಾಗಿ ಬಳಸುವ ಇಂಗು, ಬೆಳ್ಳುಳ್ಳಿ, ಶುಂಠಿ, ಅಜವಾನ, ಆರೋಗ್ಯ ರಕ್ಷಣೆ ಹಾಗೂ ಪೋಷಣೆಗಾಗಿ ಬಳಸುವ ಕೇಸರಿ, ಧನಿಯಾ, ಮೆಂತ್ಯೆಕಾಳು, ಅರಿಶಿನ ಪುಡಿ, ಓಮ, ಗಸಗಸೆ, ಎಳ್ಳು, ಕಾಳು ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸುವಾಸನೆ – ರುಚಿ ಹಾಗೂ ಆರೋಗ್ಯಕ್ಕೆ ಬಳಸುವ ಏಲಕ್ಕಿ, ಸಾಸಿವೆ, ಬಡೇಸೊಪ್ಪು, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಕೃಷ್ಣ ಜೀರಿಗೆ, ಹೆಚ್ಚಿನ ಆಕರ್ಷಣೆಗೆ ಬಳಸುವ ಮಾವಿನ ಪುಡಿ, ದಾಳಿಂಬೆ ಬೀಜಗಳು, ಜಾಯಿಕಾಯಿ, ಆರೋಗ್ಯ ಹಾಗೂ ದೇಹದ ರಕ್ಷಣೆಗೆ ಬಳಸುವ, ಆಯುರ್ವೇದ ಸಾರುವ ಜೇನುತುಪ್ಪ, ನೆಲ್ಲಿಕಾಯಿ, ತುಪ್ಪ, ಬೂದುಗುಂಬಳಕಾಯಿ, ನವಿಲು ಕೋಲು, ಕೋಸು, ಮೂಲಂಗಿ, ಜೇಷ್ಠಮಧು, ಪೇರಲ ಚಕ್ಕೋತ ಮರಸೇಬು, ಬಾಳೆ ಹಣ್ಣುಗಳು ಮೊಳಕೆಯೊಡೆದ ಕಾಳುಗಳು. ಇದನ್ನೆಲ್ಲಾ ಓದಿದ ಮೇಲೆ ಮರೆಯದೇ, ದಿನನಿತ್ಯ ಸ್ವಲ್ಪವಾದರೂ ಬಳಸಿ.

ಎನ್.ವ್ಹಿ ರಮೇಶ್, ಮೈಸೂರು

ಮೊ: 9845565238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!