ಹಲ್ಲು ಕೀಳುವುದು – ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?

ಹಲ್ಲು ಕೀಳುವುದು – ನೋವಿಲ್ಲದ ಚಿಕಿತ್ಸೆ.  ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಹಲ್ಲು ಕಿತ್ತ ಬಳಿಕ ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.

Teeth-removal ಹಲ್ಲು ಕೀಳುವುದು - ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?

ಹಲ್ಲು ಕೀಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಚಿಕಿತ್ಸಾ ವಿಧಾನವಾಗಿದ್ದು, ಹಲ್ಲುಹುಳುಕಾಗಿ ಪೂರ್ತಿಯಾಗಿ ಹಾಳಾಗಿ ಹೋಗಿದ್ದಲ್ಲಿ ಅಂತಹ ಹಲ್ಲುಗಳನ್ನು ಸ್ಥಳೀಯ ಅರಿವಳಿಕೆ ಚುಚ್ಚುಮದ್ದು ನೀಡಿ ಕೀಳಲಾಗುತ್ತದೆ. ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಆದರೆ ಹಲ್ಲು ಕಿತ್ತ ಬಳಿಕ ಉಂಟಾದ ರಕ್ತಸ್ರಾವ, ರೋಗಿಯ ದೇಹಸ್ಥಿತಿ, ಮನೋಸ್ಥಿತಿ ಮತ್ತು ಹಲ್ಲು ಕಿತ್ತ ವಿಧಾನ ಇವೆಲ್ಲವನ್ನು ದಂತ ವೈದ್ಯರು ಪರಾಮರ್ಶಿಸಿ ಹೊಲಿಗೆ ಹಾಕಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

ಯಾವಾಗ ಹೊಲಿಗೆ ಹಾಕುತ್ತಾರೆ?

1) ರೋಗಿಯ ರಕ್ತದ ಒತ್ತಡ ಜಾಸ್ತಿ ಇದ್ದಾಗ ಹೆಚ್ಚಿನ ರಕ್ತಸ್ರಾವವನ್ನು ತಡೆಯಲು ಹೊಲಿಗೆ ಹಾಕಲಾಗುತ್ತದೆ. ಹಲ್ಲು ಕಿತ್ತ ಬಳಿಕ ಹೆಚ್ಚು ರಕ್ತಸ್ರಾವವಾಗದಿದ್ದರೂ ಒಂದೆರಡು ಗಂಟೆಗಳ ಬಳಿಕ ರೋಗಿಯ ರಕ್ತದೊತ್ತಡ ಏರಿದ್ದಲ್ಲಿ ತೀವ್ರ ರಕ್ತಸ್ರಾವ ಉಂಟಾಗಬಹುದು. ಹೆಪ್ಪುಗಟ್ಟಿದ ರಕ್ತದ ಉಂಡೆ ಕಳಚಿಕೊಂಡು ಪುನ: ರಕ್ತಸ್ರಾವ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಈ ಕಾರಣಕ್ಕೆ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಹಲ್ಲು ಕಿತ್ತ ಬಳಿಕ ಹೊಲಿಗೆ ಕಡ್ಡಾಯವಾಗಿ ಹಾಕಲಾಗುತ್ತದೆ.

2) ರೋಗಿಯ ಯಾವುದಾದರೂ ರಕ್ತಸಂಬಂಧಿ ರೋಗದಿಂದ ಬಳಲುತ್ತಿದ್ದಲ್ಲಿ ಹಲ್ಲು ಕಿತ್ತ ಬಳಿಕ ರಕ್ತಸ್ರಾವವನ್ನು ಕಡಿಮೆಗೊಳಿಸಲು ಹೊಲಿಗೆ ಹಾಕಲಾಗುತ್ತದೆ. ಕುಸುವ ರೋಗ, ಕ್ರಿಸ್‍ಮನ್ ರೋಗ ಮುಂತಾದ ರಕ್ತ ಹೆಪ್ಪುಗಟ್ಟದಿರುವ ರೋಗಗಳಿರುವ ವ್ಯಕ್ತಿಗಳಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲಾಗುತ್ತದೆ.

3) ರೋಗಿಯು ‘ಅಸ್ಟರಿನ್’ ಎಂಬ ಔಷಧಿ ತೆಗೆದುಕೊಳ್ಳುತ್ತಿದ್ದಲ್ಲಿ ಹೆಚ್ಚಿನ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಅಸ್ಟರಿನ್ ಸೇವಿಸುತ್ತಿರುವ ರೋಗಿಗಳಲ್ಲಿ ರಕ್ತ ನಿಧಾನವಾಗಿ ಹೆಪ್ಪುಗಟ್ಟುತ್ತದೆ. ಹಲ್ಲು ಕೀಳುವ ಒಂದೆರಡು ದಿನಗಳ ಮೊದಲು ಈ ಔಷಧಿ ನಿಲ್ಲಿಸಿ ನಂತರ ಹಲ್ಲು ಕಿತ್ತ ಬಳಿ ಹೊಲಿಗೆ ಹಾಕಲಾಗುತ್ತದೆ.

4) ರೋಗಿಯು ಹೃದಯಾಘಾತ, ಹೃದಯ ವೈಫಲ್ಯ, ಸ್ಟ್ರೋಕ್ ಮುಂತಾದ ರೋಗಗಳಿಂದ ಬಳಲುತ್ತಿದ್ದು, ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟದಿರಲೆಂಬ ಉದ್ದೇಶದಿಂದ ರಕ್ತವನ್ನು ತಿಳಿಯಾಗಿಸುವ ಮತ್ತು ತೆಳುವಾಗಿಸುವ ಔಷಧಿಗಳನ್ನು ಬಳಸುತ್ತಿದ್ದಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಅವಶ್ಯಕ. ಹೆಚ್ಚಾಗಿ ‘ಕ್ಲೊಪಿಡೋಗ್ರಿಲ್’ ಎಂಬ ಔಷಧಿ ಬಳಸುತ್ತಿರುವವರಲ್ಲಿ ಹೊಲಿಗೆ ಹಾಕಲೇ ಬೇಕಾಗುತ್ತದೆ.

5) ಬುದ್ಧಿ ಹಲ್ಲು ಅಥವಾ ಮೂರನೇ ದವಡೆ ಹಲ್ಲನ್ನು ಆಪರೇಷನ್ ಮಾಡಿ ಎಲುಬು ಕೊರೆದು ಹಲ್ಲು ತೆಗೆದಿದ್ದಲ್ಲಿ ಹೊಲಿಗೆ ಅನಿವಾರ್ಯವಾಗಿರುತ್ತದೆ.

6) ಬುದ್ಧಿಮಾಂದ್ಯ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇಬೇಕು. ಇಲ್ಲವಾದಲ್ಲಿ ಹಲ್ಲು ಕಿತ್ತ ಜಾಗದಲ್ಲಿ ಅವರು ತಿಂದ ಆಹಾರ ಸೇರಿಕೊಂಡು ಸೋಂಕು ಉಂಟಾಗಬಹುದು. ಅವರಿಗೆ ಬಾಯಿಯ ಶುಚಿತ್ವ ಉಳಿಸಿಕೊಳ್ಳುವಷ್ಟು ಬುದ್ಧಿ ಬೆಳವಣಿಗೆ ಆಗಿರುವುದಿಲ್ಲ.

7) ಹಲವಾರು ಹಲ್ಲುಗಳನ್ನು ಒಂದೇ ಸಮಯದಲ್ಲಿ ತೆಗೆದಿದ್ದಲ್ಲಿ ಗಾಯ ಬೇಗ ಒಣಗುವ ಉದ್ದೇಶದಿಂದ ಮತ್ತು ಸೋಂಕು ಆಗದಿರಲಿ ಎಂಬ ಉದ್ದೇಶದಿಂದ ಹೊಲಿಗೆ ಹಾಕುತ್ತಾರೆ.

8) ಕೆಲವೊಮ್ಮೆ ಹಲ್ಲು ಬಹಳವಾಗಿ ಹಾಳಾಗಿ ಹಲ್ಲಿನ ಒಳಭಾಗದಲ್ಲಿ ಮಾಂಸ ಬೆಳೆದುಕೊಂಡಿದ್ದಲ್ಲಿ ಅಥವಾ ಹಲ್ಲಿನ ಬೇರಿನ ಜಾಗದಲ್ಲಿ ಮಾಂಸ ಬೆಳೆದುಕೊಂಡಿದ್ದಲ್ಲಿ ಹೊಲಿಗೆ ಹಾಕಲೇಬೇಕಾಗುತ್ತದೆ. ಇಲ್ಲವಾದಲ್ಲಿ ಹಲ್ಲು ಕಿತ್ತ ಬಳಿಕ ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.

9) ವಿಪರೀತವಾಗಿ ಚಿಂತೆ ಮಾಡುವ ಮತ್ತು ಮನೋವ್ಯಾಧಿಯಿಂದ ಬಳಲುತ್ತಿರುವವರಲ್ಲಿಯೂ ಹಲ್ಲು ಕಿತ್ತ ಬಳಿಕ ಯಾವುದೇ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಹೊಲಿಗೆ ಹಾಕಲಾಗುತ್ತದೆ.

10) ಸ್ಟಿರಾಯ್ಡು ಔಷಧಿ ಸೇವಿಸುವವರಲ್ಲಿ, ವಿಕಿರಣ ಚಿಕಿತ್ಸೆ ಪಡೆದವರಲ್ಲಿ ಮತ್ತು ಮಧುಮೇಹ ರೋಗ ಇರುವವರಲ್ಲಿ ಹಲ್ಲು ಕಿತ್ತ ಬಳಿಕ ಸೋಂಕು ಉಂಟಾಗುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ಬೇಗನೆ ಸೋಂಕು ಉಂಟಾಗಬಹುದು. ಈ ಕಾರಣದಿಂದ ಇಂತಹಾ ರೋಗಿಗಳಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕಾಗುತ್ತದೆ.

ಯಾವಾಗ ಹೊಲಿಗೆ ಅಗತ್ಯವಿರುವುದಿಲ್ಲ?

1) ಮಕ್ಕಳಲ್ಲಿ ಅಲುಗಾಡುವ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕುವುದಿಲ್ಲ.

2) ವಯಸ್ಕರಲ್ಲಿ ಅಲುಗಾಡುತ್ತಿರುವ ಹಲ್ಲು ತೆಗೆದ ಬಳಿಕ ಹೊಲಿಗೆ ಅವಶ್ಯಕತೆ ಇರುವುದಿಲ್ಲ.

3) ಒಂದೇ ಬೇರು ಇರುವ ಮುಂಭಾಗದ ಹಲ್ಲು ಕಿತ್ತ ಬಳಿಕ ಸಾಮಾನ್ಯವಾಗಿ ಹೊಲಿಗೆ ಅವಶ್ಯಕತೆ ಇರುವುದಿಲ್ಲ. ದವಡೆ ಹಲ್ಲುಗಳಿಗೆ 2 ಅಥವಾ 3 ಬೇರು ಇರುವ ಕಾರಣ ಹೆಚ್ಚಾಗಿ ಹೊಲಿಗೆ ಹಾಕಲಾಗುತ್ತದೆ.

4) ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಹಲ್ಲು ಕಿತ್ತಾಗ, ಸುತ್ತಲಿನ ಎಲುಬು ಮತ್ತು ವಸಡಿಗೆ ಹಾನಿಯಾಗದಿದ್ದ ಪಕ್ಷದಲ್ಲಿ ಹೊಲಿಗೆ ಅವಶ್ಯಕತೆ ಇರುವುದಿಲ್ಲ.

ಹೊಲಿಗೆ ಹಾಕುವುದರಿಂದ ಏನು ಲಾಭಗಳು?

1) ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಿದ್ದಲ್ಲಿ ಗಾಯ ಬೇಗನೆ ಯಾವುದೇ ತೊಂದರೆ ಇಲ್ಲದೆ ಒಣಗುತ್ತದೆ.

2) ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಿದಾಗ ಬೇಗನೆ ರಕ್ತ ಹೆಪ್ಪುಗಟ್ಟಿಕೊಂಡು ಹಲ್ಲು ಕಿತ್ತ ಜಾಗ ತುಂಬಿಕೊಳ್ಳುತ್ತದೆ ಮತ್ತು ಆಹಾರ ಪದಾರ್ಥ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಕ್ಷೀಣಿಸುತ್ತದೆ ಮತ್ತು ಸೋಂಕು ತಗಲುವ ಸಾಧ್ಯತೆ ಇಲ್ಲದಾಗುತ್ತದೆ.

3) ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಿದಾಗ ಹೆಪ್ಪುಗಟ್ಟಿ ರಕ್ತಕ್ಕೆ ರಕ್ಷಣೆ ದೊರೆತು ಗಾಯ ಬೇಗನೆ ಗುಣವಾಗಲು ಸಾಧ್ಯವಾಗುತ್ತದೆ ಮತ್ತು ನೋವು ಬರುವ  ಸಾಧ್ಯತೆ ಬಹುಬೇಗ ಇಲ್ಲದಾಗುತ್ತದೆ.

4) ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕುವುದರಿಂದ ರಕ್ತಸ್ರಾವವಾಗುವ ಸಾಧ್ಯತೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಹಲ್ಲು ಕಿತ್ತ ಬಳಿಕ ವ್ಯಕ್ತಿಗಳು ಪದೇ ಪದೇ ಉಗುಳುವುದು, ಬಾಯಿ ಮುಕ್ಕಳಿಸುವುದು ಮಾಡುವುದರಿಂದ ಹೊಲಿಗೆ ಹಾಕದಿದ್ದ ಪಕ್ಷದಲ್ಲಿ ಹೆಪ್ಪುಗಟ್ಟಿದ ರಕ್ತ ಜಾರಿಕೊಂಡು ಡೈಸೋಕೆಟ್ ಸೋಂಕು, ನೋವು ಉಂಟಾಗುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿರುತ್ತದೆ.

 ಹಲ್ಲು ಕೀಳುವುದು ಒಂದು ಸರಳವಾದ ಚಿಕಿತ್ಸೆ 

Teeth-removing.

ಹಲ್ಲು ಕೀಳುವುದು ಒಂದು ಅತ್ಯಂತ ಸೂಕ್ತವಾದ ಮತ್ತು ಸರಳವಾದ ದಂತ ಚಿಕಿತ್ಸೆ ವಿಧಾನವಾಗಿದ್ದು, ಬಾಯಿಯೊಳಗೆ ಚುಚ್ಚುಮದ್ದು ನೀಡುವ ಕಾರಣದಿಂದ ಹೆಚ್ಚಿನ ಎಲ್ಲಾ ರೋಗಿಗಳು ಈ ಪ್ರಕ್ರಿಯೆಗೆ ಬಹಳ ಅಂಜುತ್ತಾರೆ. ಸ್ಥಳೀಯ ಅರಿವಳಿಕೆ ನೀಡಿ ಮಾಡಬಹುದಾದ ನೋವಿಲ್ಲದ ಚಿಕಿತ್ಸೆ ಇದಾಗಿದ್ದರೂ ಶತಶತಮಾನದಿಂದ ಹಲ್ಲು ಕೀಳುವುದು ಎಂದಾಗ ಎಲ್ಲರೂ ಒಮ್ಮೆಗೆ ಬೆಚ್ಚಿ ಬೀಳುತ್ತಾರೆ. ಹಲ್ಲು ಕೀಳುವ ವಿಧಾನದಲ್ಲಿ ಎರಡು ವಿಧಾನಗಳಿದ್ದು, ಓಪನ್ ಮೆಥಡ್ ಅಥವಾ ಸಂಕೀರ್ಣ ವಿಧಾನ ಮತ್ತು ಸರಳ ವಿಧಾನ ಅಥವಾ ಕ್ಲೋಸ್ಡ್ ಮೆಥಡ್ ಎಂಬುದಾಗಿರುತ್ತದೆ. ಓಪನ್ ವಿಧಾನದಲ್ಲಿ ಹಲ್ಲಿನ ಸುತ್ತಲಿನ ವಸಡನ್ನು ನಿಧಾನವಾಗಿ ಸರಿಸಿ ಎಲುಬು ಕೊರೆದು ಹಲ್ಲು ತೆಗೆಯಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇಬೇಕಾಗುತ್ತದೆ.

ಇನ್ನೂ ಕ್ಲೋಸ್ಡ್ ವಿಧಾನದಲ್ಲಿ ವಸಡನ್ನು ಸರಿಸಿ ಎಲುಬು ಕೊರೆಯದೇ ಬರೀ ಇಕ್ಕಳದಿಂದ ಹಲ್ಲನ್ನು ಕೀಳಲಾಗುತ್ತದೆ. ಇಂತಹಾ ಸರಳ ವಿಧಾನಗಳಲ್ಲಿ ಹೆಚ್ಚಾಗಿ ಹಲ್ಲು ಕಿತ್ತ ಬಳಿಕ ಹೊಲಿಗೆ ಅವಶ್ಯವಿರುವುದಿಲ್ಲ. ಹಲ್ಲು ಕಿತ್ತ 24 ಗಂಟೆಯೊಳಗೆ ರಕ್ತ ಹೆಪ್ಪುಗಟ್ಟಿಕೊಂಡು ಅದರಲ್ಲಿ ಅಂಗಾಂಶ ಬೆಳೆದು ಒಂದು ವಾರದಲ್ಲಿ ಹಲ್ಲು ಕಿತ್ತ ಜಾಗ ತುಂಬಿಕೊಳ್ಳುತ್ತದೆ. ಒಂದು ವರ್ಷದಲ್ಲಿ ಎಲುಬು ಕೂಡಿಕೊಳ್ಳುತ್ತದೆ. ಸರಳ ವಿಧಾನದಲ್ಲಿ ಹಲ್ಲು ಕಿತ್ತರೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹೊಲಿಗೆ ಹಾಕಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ರೋಗಿಗೆ, ಯಾವಾಗ, ಹೇಗೆ, ಎಲ್ಲಿ, ಯಾವ ರೀತಿಯ ಹೊಲಿಗೆ ಹಾಕಬೇಕು ಎಂಬುದನ್ನು ದಂತ ವೈದ್ಯರೇ ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಿದ್ದಲ್ಲಿ ಗಾಯ ಬೇಗನೆ ಕೂಡಿಕೊಂಡು ಸೋಂಕು ಉಂಟಾಗುವ ಸಾಧ್ಯತೆ ಬಹುತೇಕ ಕ್ಷೀಣಿಸಿಕೊಂಡು ರೋಗಿ ಯಾವುದೇ ನೋವಿಲ್ಲದೆ ನಗುತ್ತಾ ಇರುವ ಸಾಧ್ಯತೆ ಹೆಚ್ಚು ಎಂಬುದಂತೂ ಸತ್ಯವಾದ ಮಾತು.

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!