ಹಲ್ಲಿನ ರಕ್ಷಣೆ ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ.
ಪ್ರತಿ ವರ್ಷ ಮಾರ್ಚ್ 20ರಂದು “ವಿಶ್ವ ಬಾಯಿಯ ಆರೋಗ್ಯ ದಿನ” ಎಂದು ಆಚರಿಸಲಾಗುತ್ತಿದ್ದು, ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಬಾಯಿಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಧನಾತ್ಮಕವಾದ ವಿಚಾರಧಾರೆಗಳನ್ನು ಮೂಡಿಸಲು ಮತ್ತು ಬಾಯಿಯ ಆರೋಗ್ಯದಿಂದ, ದೇಹದ ಆರೋಗ್ಯದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವ ಸಮದ್ದೇಶವನ್ನು ಈ ಆಚರಣೆ ಹೊಂದಿದೆ. ಈ ಆಚರಣೆ 2007ರಲ್ಲಿ FDI (ಅಂತರಾಷ್ಟ್ರೀಯ ದಂತ ಸಂಘ) ಆಚರಣೆಗೆ ತಂದಿತು.
FDI ಇದರ ಜನಕರಾದ ಚಾರ್ಲ್‍ಗೊಡನ್ ಅವರು ಹುಟ್ಟಿದ ದಿನವಾದ ಸೆಪ್ಟಂಬರ್ 12ರಂದು ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆದರೆ 2013ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ “ವಿಶ್ವ ಬಾಯಿ ಆರೋಗ್ಯ ದಿನ”ವನ್ನು ಮಾರ್ಚ್ 20ಕ್ಕೆ ಬದಲಾಯಿಸಲಾಯಿತು. “ಆರೋಗ್ಯವಂತ ಬಾಯಿ, ಆರೋಗ್ಯವಂತ ದೇಹ” [Healthy Mouth, Healthy Body], “ಬುಧ್ಧಿವಂತರಾಗಿ ಬದುಕಿ ಬಾಯಿ ಆರೋಗ್ಯ ರಕ್ಷಿಸಿ” (Live Mouth Smart) ಬಾಯಿ ಆರೋಗ್ಯ ದಿನಾಚರಣೆಯ ಧ್ಯೇಯ ವಾಕ್ಯ.
ಮುಖ ಮನಸ್ಸಿನ ಕನ್ನಡಿ, ಸುಂದರವಾದ ಮುಖದಲ್ಲಿ ಅಂದವಾದ ದಂತ ಪಂಕ್ತಿಗಳಿಂದ ಕೂಡಿದ ಶುಭ್ರ, ನಿಷ್ಕಲ್ಮಶ ನಗು ಮತ್ತು ಆರೋಗ್ಯವಂತ ಬಾಯಿ ದೇಹದ ಅರೋಗ್ಯದ ದಿಕ್ಸೂಚಿ. ಪ್ರತಿಯೊಬ್ಬ ಮನುಷ್ಯನೂ ಬಯಸುವುದು ಕೂಡಾ ಸುಂದರ ನಿಷ್ಕಲ್ಮಶ ನಗುವನ್ನೇ. ಹಲ್ಲುಗಳು ವಜ್ರಕ್ಕಿಂತಲೂ ಅಮೂಲ್ಯವಾದ ಆಸ್ತಿ. ನಮ್ಮ ಹಲ್ಲಿನ ಆರೈಕೆಯು ನಮ್ಮ ಶರೀರದ ಸಾಮಾನ್ಯ ಆರೋಗ್ಯದ ಒಂದು ಪ್ರಮುಖ ಅಂಗವಾಗಿದೆ. ಹಲ್ಲಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ನಮ್ಮ ಸಾಮಾನ್ಯ ಆರೋಗ್ಯದ ಮೇಲೂ ಅದರ ದುಷ್ಪರಿಣಾಮವಾಗಬಹುದು.
ಆದ್ದರಿಂದ ಹಲ್ಲಿನ ಆರೈಕೆಯನ್ನು ಚೆನ್ನಾಗಿ ಮಾಡಿದರೆ ಅವು ನಮ್ಮ ಆರೋಗ್ಯದ ಆರೈಕೆ ಮಾಡುತ್ತದೆ. ಸುಂದರವಾದ ಸದೃಢವಾದ ಹಲ್ಲುಗಳು ಆಹಾರವನ್ನು ಸರಿಯಾಗಿ ಜಗಿಯಲು ಅನುಕೂಲ ಮಾಡಿಕೊಟ್ಟು ದೇಹದ ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ಸದೃಢವಾದ ಆರೋಗ್ಯವಂತ ಹಲ್ಲುಗಳು ಮನುಷ್ಯನಿಗೆ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು, ಗೆಡ್ಡೆಗೆಣಸುಗಳನ್ನು, ನಾರುಯುಕ್ತ, ಪೌಷ್ಟಿಕಾಂಶಯುಕ್ತ ಹಸಿ ತರಕಾರಿ, ಹಣ್ಣು- ಹಂಪಲುಗಳನ್ನು ತಿನ್ನಲು ಸಹಾಯ ಮಾಡಿ, ದೇಹದ ಆರೋಗ್ಯದ ಮೇಲೆ ಹತೋಟಿ ಇಡುತ್ತದೆ.
ನಮ್ಮ ದೇಹಕ್ಕೆ ಬೇಕಾದ ಪೌಷ್ಠಿಕ ಆಹಾರ ಬಾಯಿಯ ಮೂಲಕವೇ ಜಠರವನ್ನು ತಲುಪಬೇಕು. ತಿಂದ ಆಹಾರ ದೇಹಕ್ಕೆ ಹಿಡಿಯಬೇಕಾದರೆ ಅದನ್ನು ಸರಿಯಾಗಿ ಜಗಿದು ತಿಂದಿರಬೇಕು. ಈ ಕೆಲಸಕ್ಕೆ ಸ್ವಸ್ಥವಾದ ಹಲ್ಲುಗಳು ಅತೀ ಅಗತ್ಯ. ಹಲ್ಲುಗಳು ಮಾತನಾಡಲು ಕೂಡಾ ಅವಶ್ಯಕ. ಕೃತಕ ಹಲ್ಲುಗಳಿಂದ ಸ್ಪಷ್ಟಉಚ್ಛಾರದಲ್ಲಿ ಮೊದಮೊದಲು ಕಷ್ಟವಾಗಬಹುದು. ಹಲ್ಲುಗಳಿಲ್ಲದಿದ್ದರೆ ಕೆಲವು ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು ಅಸಾಧ್ಯ.
ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಹೆಚ್ಚಿನ ಬಲ ನಿಡುತ್ತದೆ. ಆದ್ದರಿಂದಲೇ ಹಲ್ಲಿನ ಜೋಪಾನವೇ ಸುಖ ಜೀವನಕ್ಕೆ ಸೋಪಾನವಾಗುತ್ತದೆ. ಒಟ್ಟಿನಲ್ಲಿ ಸುಂದರವಾದ ಸದೃಢವಾದ ಹಲ್ಲುಗಳು, ಮನುಷ್ಯನ ಆತ್ಮವಿಶ್ವಾಸದ ಪ್ರತೀಕ. ಸುಂದರವಾಗಿ ನಗಲು, ಆಹಾರವನ್ನು ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಯ್ದಕೊಳ್ಳಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ.
ಸುಂದರ ನಗುವಿನ ಹಿಂದಿನ ರಹಸ್ಯಗಳು:
ಸುಂದರವಾದ ನಗು ಅಂದವಾದ ಮುಖಕ್ಕೆ ಮೌಲ್ಯ ಮತ್ತು ಮೆರುಗನ್ನು ನೀಡುತ್ತದೆ. ಆರೋಗ್ಯವಂತವಾದ, ಸದೃಢವಾದ, ಚಂದವಾದ ಹಾಗೆಯೇ ಆರೋಗ್ಯವಂತಬಾಯಿ ಆರೋಗ್ಯವಂತ ದೇಹಕ್ಕೆ ಮೂಲ ಆಧಾರ ಮತ್ತು ಮನುಷ್ಯನ ಆತ್ಮ ವಿಶ್ವಾಸಕ್ಕೆ ಭದ್ರ ತಳ-ಪಾಯ ಹಾಕುತ್ತದೆ. ಇಷ್ಟೆಲ್ಲಾ ಹಿನ್ನೆಲೆಯಿಂದ ಬರಬಲ್ಲ ಆರೋಗ್ಯವಂತ ಆಕರ್ಷಕ ನಗು ಮನುಷ್ಯನ ಯಶಸ್ಸಿಗೆ ಸೋಪಾನವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತಾನು ತಿನ್ನುವ ಆಹಾರದ ಬಗ್ಗೆ ಶಿಸ್ತನ್ನು ಹೊಂದಿರಬೇಕು. ತಾನು ಏನು ತಿನ್ನುತ್ತಿದ್ದೇನೆ, ಯಾಕಾಗಿ ತಿನ್ನುತ್ತಿದ್ದೇನೆ ಎಂಬುದರ ಅರಿವು ಇರಬೇಕು. ಹಾಗಿದ್ದಲ್ಲಿ ಮಾತ್ರ ಆತ ತನ್ನ ಆರೋಗ್ಯವನ್ನು ಸೀಮಿತದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ನೂರಾರು ಖಾಯಿಲೆಗಳ ದಾಸನಾಗುವುದರಲ್ಲಿ ಎರಡು ಮಾತಿಲ್ಲ.
ಅದಕ್ಕಾಗಿಯೇ ಬಲ್ಲವರು/ಜ್ಞಾನಿಗಳು ಹೇಳುತ್ತಾರೆ, “ತಿನ್ನುವುದೇ ಒಂದು ರೋಗ.” ನಾವು ನಮ್ಮ ನಾಲಗೆ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ನಾವು ರೋಗ ರೋಗರುಜಿನಗಳಿಲ್ಲದೆ ಬದುಕಬಹುದು. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ, “ನಾಲಗೆ ದಾಸನಾದರೆ ರೋಗ ರುಜಿನಗಳಿಗೆ ರಹದಾರಿ ನೀಡಿದಂತೆ” ಈ ನಿಟ್ಟಿನಲ್ಲಿ ನಮ್ಮ ಆರೋಗ್ಯವಂತ ಹಲ್ಲುಗಳು ಮತ್ತು ನಮ್ಮ ಸುಂದರವಾದ ನಗು ಹಲ್ಲುಗಳು ನಮ್ಮ ನಿಜವಾದ ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ.
ನಾಗರಿಕತೆ, ವಿಜ್ಞಾನ ಬೆಳೆದಂತೆಲ್ಲಾ ಕಳೆದ ನಾಲ್ಕೈದು ದಶಕಗಳಲ್ಲಿ ದಂತ ಸಂರಕ್ಷಣೆಗೆ ಸಂಬಂಧಿಸಿದಂತೆ ಟೂತ್‍ಪೇಸ್ಟ್ ಮತ್ತು ಟೂತ್‍ಬ್ರಶ್ (ದಂತ ಕುಂಚಗಳ) ಉತ್ಪಾದನೆಯಲ್ಲಿ ಅದ್ಭುತವಾದ (ಭಯಂಕರ) ಕ್ರಾಂತಿಯಾಗಿದೆ. ನಮ್ಮ ಪೂರ್ವಜರು ಬೇವಿನಸೊಪ್ಪು, ಮಾವು, ಗೇರು ಎಲೆ, ತೆಂಗಿನನಾರು, ಉಪ್ಪು, ಮಸಿ ಮುಂತಾದ ನೈಸರ್ಗಿಕ ಬಳುವಳಿಗಳನ್ನು ದಂತ ರಕ್ಷಣೆಗೆ ಉಪಯೋಗಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅಂತಹ ವಸ್ತುಗಳ ಅಗತ್ಯ ನಮಗಿಲ್ಲ.
ಆ ಕಾಲದ ಆಹಾರ ಪದಾರ್ಥಕ್ಕೂ ಜೀವನಶೈಲಿಗೂ, ಮೇಲೆ ತಿಳಿಸಿದ ನೈಸರ್ಗಿಕ ಪರಿಕರಗಳು ಪೂರಕವಾಗಿತ್ತು .ಇಂದಿನ ಜನಾಂಗಕ್ಕೆ, ನಮ್ಮ ಆಹಾರ ಪದಾರ್ಥಗಳಿಗೆ, ಜೀವನ ಶೈಲಿಗೆ, ಹಿಂದಿನ ಕಾಲದ ವಸ್ತುಗಳು ಅನಗತ್ಯ. ನಮ್ಮ ಪೂರ್ವಜರು ಹಸಿ ತರಕಾರಿ, ಗಡ್ಡೆಗೆಣಸು, ಕಬ್ಬು, ಜೋಳ ಮುಂತಾದ ನಾರುಯುಕ್ತ ವಸ್ತುಗಳನ್ನು ಮುಖ್ಯ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಆದರೆ ಇಂದಿನ ನಮ್ಮ ಜನಾಂಗ ಕಬ್ಬು, ಜೋಳ, ಗಡ್ಡೆಗೆಣಸು, ಮುಂತಾದ ಹಸಿ ತರಕಾರಿಗಳನ್ನು ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡಿ ಗೊತ್ತೇ ಹೊರತು ತಿನ್ನುವ ಗೋಜಿಗೆ ಹೋಗುವುದಿಲ್ಲ.
ಈಗ ನಾವು ಹೆಚ್ಚು ಹೆಚ್ಚು ರೆಡಿಮೇಡ್ ಆಹಾರ ಪದಾರ್ಥಗಳನ್ನು ತಿನ್ನುವುದೇ ಜಾಸ್ತಿ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗಿತ್ತು ಮತ್ತು ಆಹಾರ ಸೇವನೆಯಿಂದಲೇ ಹಲ್ಲು ಶುಚಿಯಾಗುತ್ತಿತ್ತು. ಆದರೆ ಈಗಿನ ಜನಾಂಗ ತಿನ್ನುವ ಆಹಾರ ಹಲ್ಲುಗಳ ಆರೋಗ್ಯಕ್ಕೆ ಮಾರಕವಾಗಿದೆ. ಚಾಕೋಲೇಟ್, ಕುರುಕುರೆ ಮುಂತಾದ ಅಂಟು ಪದಾರ್ಥ ತಿಂದಲ್ಲಿ ಹಲ್ಲು ಶುಚಿಯಾಗುವ ಬದಲು ಹಲ್ಲಿನ ರೋಗ ರುಜಿನಗಳಿಗೆ ನಾಂದಿ ಹಾಡುತ್ತದೆ. ಅಲ್ಲದೆ ನಮ್ಮ ಇಂದಿನ ಜನಾಂಗ ತಿನ್ನುವ ಪರಿ ನೋಡಿದರೆ ಅದಕ್ಕಾಗಿಯೇ ಹುಟ್ಟಿದ್ದಾರೆಂದು ಭಾಸವಾಗುತ್ತದೆ. ಹಿರಿಯರು ಹೇಳಿದ ಮಾತು, “ಬದುಕುವುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ” ಎಂಬ ಮಾತು ಎಲ್ಲರೂ ಮರೆತೇ ಬಿಟ್ಟಿರುವುದು ವಿಚಿತ್ರವಾದರೂ ಸತ್ಯ.
ಹಲ್ಲಿನ ರಕ್ಷಣೆಗೆ ಹತ್ತು ಹಲವು ಮಾರ್ಗಗಳು ಮತ್ತು ಸೂತ್ರಗಳು:
ನೈಸರ್ಗಿಕ ಹಲ್ಲನ್ನು ಉಳಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಚಾಚೂತಪ್ಪದೆ ಅನುಸರಿಸಬೇಕು.
1. ಹಲ್ಲುಗಳನ್ನು ಕಡೇ ಪಕ್ಷ ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಬ್ರಶ್ ಮಾಡಬೇಕಾದ ಕನಿಷ್ಠ ಅವಧಿ ಎರಡು ನಿಮಿಷ. ಸರಿಯಾದ ಕ್ರಮದಲ್ಲಿ ಬ್ರಶ್ ಮಾಡುವುದು ಅತೀ ಅವಶ್ಯಕ. ಗೊತ್ತಿಲ್ಲದಿದ್ದರೆ ಸಮೀಪದ ದಂತ ವೈದ್ಯರಲ್ಲಿ ವಿಚಾರಿಸಿ. ಊಟ ತಿಂಡಿಯ ಬಳಿಕ ಬ್ರಶ್ ಮಾಡಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ರಾತ್ರಿಯಂತೂ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ.
2. ಹಲ್ಲು ಉಜ್ಜುವ ಅವಧಿಗಿಂತ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ದಿನಕ್ಕೆ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಹಲ್ಲು ಹಾಳಾಗಬಹುದು. (ಸವೆದು ಹೋಗಬಹುದು) ದಿನಕ್ಕೆರಡು ಬಾರಿ ಸರಿಯಾದ ಉದ್ದೇಶದಿಂದ ಹಲ್ಲು ತಿಕ್ಕಬೇಕು. ಸಾಮಾನ್ಯವಾಗಿ ಬ್ರಶ್‍ಗೆ ಮೇಲೆ ಕೆಳಗೆ ಚಾಲನೆ ನೀಡಬೇಕು. ಬಹಳ ಜೋರಾಗಿ ಅಡ್ಡ ಹಲ್ಲುಜ್ಜಬಾರದು. ಅತಿಯಾದ ಶಕ್ತಿ ಬಲ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿಗೆ ಹಾನಿಯಾಗಬಹುದು.
3. ಬ್ರಶ್‍ಗಳನ್ನು ಆರಿಸುವಾಗ ಜಾಗ್ರತೆವಹಿಸಿ. ಉಚಿತವಾಗಿ ಸಿಕ್ಕಿದೆ (ಟೂತ್‍ಪೇಸ್ಟ್ ಜೊತೆಗೆ) ಎಂದು ಉಪಯೋಗಿಸಬೇಡಿ. ಸ್ವಲ್ಪ ಬಾಗಿದ (Angulaled) ಬ್ರಶ್‍ನಿಂದ ದವಡೆ ಹಲ್ಲುಗಳನ್ನು ಚೆನ್ನಾಗಿ ಬ್ರಶ್ ಮಾಡಬಹುದು. ನೇರವಾದ ಬ್ರಶ್‍ನಿಂದ ಹಿಂಭಾಗದ ಹಲ್ಲು ತಲುಪುವುದು ಮತ್ತು ಸ್ವಚ್ಛಗೊಳಿಸುವುದು ಬಹಳ ಕಷ್ಟ. ಬ್ರಶ್‍ಗಳಲ್ಲಿ ಮೃದು, ಮೀಡಿಯಂ ಮತ್ತು ಹಾರ್ಡ್ ಎಂದು ಮೂರು ವಿಧಗಳಿವೆ. ದಯವಿಟ್ಟು ಮೆದು (Soft) ಅಥವಾ ಮಿಡಿಯಮ್ ಬ್ರಶ್‍ಗಳನ್ನೇ ಉಪಯೋಗಿಸಿ. Hartd (ಕಠಿಣ) ಬ್ರಶ್‍ಗಳಿಂದ ಹಲ್ಲು ಸವೆಯುವುದು ಖಚಿತ.
4. ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ. ಟಿ.ವಿ/ ದಿನ ಪತ್ರಿಕೆಗಳಲ್ಲಿ ಬರುವ ಜಾಹೀರಾತಿಗೆ ಮಾರು ಹೋಗಿ ಬ್ರಶ್ ಅಥವಾ ಟೂತ್‍ಪೇಸ್ಟ್ (ದಂತ ಚೂರ್ಣ) ಖರೀದಿಸಬೇಡಿ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದ್ಯರ ಸಲಹೆ ಪಡೆದು ಬ್ರಶ್ ಹಾಗೂ ದಂತಚೂರ್ಣ ಖರೀದಿಸಿ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದರ ಸಲಹೆ ಪಡೆದು ಬ್ರಶ್ ಹಾಗೂ ದಂತ ಚೂರ್ಣದ ಆಯ್ಕೆ ಹಲ್ಲುಜ್ಜುವ ವಿಧಾನ, ಬ್ರಶ್‍ನ ಆಯ್ಕೆ ಇತ್ಯಾದಿಗಳ ಬಗ್ಗೆ ದಂತ ವೈದ್ಯರ ಸಲಹೆ ಕೇಳುವುದು ಸೂಕ್ತ.
5. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ದಂತ ಚೂರ್ಣಗಳು ಫ್ಲೋರೈಡ್‍ನಿಂದ ಕೂಡಿದ್ದು ಹುಳುಕಾಗದಂತೆ ಹಲ್ಲನ್ನು ಕಾಪಾಡುತ್ತದೆ. ದುಬಾಯಿಂದ ತಂದಿದ್ದು, ಉಚಿತವಾಗಿ ಸಿಕ್ಕಿದ್ದು, ಟಿ.ವಿ. ನೋಡಿ / ಜಾಹೀರಾತು ನೋಡಿ ದಯವಿಟ್ಟು ದಂತ ಚೂರ್ಣ ಉಪಯೋಗಿಸಬೇಡಿ. ಪಾರ್ಮಸಿಗಳಲ್ಲಿ ದೊರೆಯುವ ಮೆಡಿಕೇಟೇಡ್ (ಮದ್ದುಯುಕ್ತ) ದಂತ ಚೂರ್ಣಗಳನ್ನು ದಂತ ವೈದ್ಯರು ಸೂಚಿಸಿದರೆ ಮಾತ್ರ ಖರೀದಿಸಿ ಅನಗತ್ಯ ಉಪಯೋಗಿಸಬೇಡಿ.
6. ಪದೇ ಪದೇ ಬ್ರಶ್ ಹಾಗೂ ಪೇಸ್ಟ್ ಬದಲಾಯಿಸಬೇಡಿ. ಇದರಿಂದ ಬಾಯಿಯಲ್ಲಿ ಹುಣ್ಣು, ಅಲರ್ಜಿ, ತುರಿಕೆ ಬರಬಹುದು. ಬ್ರಾಂಡ್ ಅಥವಾ ಕಂಪೆನಿ ಬದಲಾಯಿಸುವಾಗ ದಂತ ವೈದ್ಯರ ಸಲಹೆ ಪಡೆಯಿರಿ. ಹಲ್ಲು ಬೆಳ್ಳಗಾಗಿಸುವ ಯಾವುದೇ ರಾಸಾಯನಿಕಗಳನ್ನು ದಯವಿಟ್ಟು ದಂತ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ. ಇದರಲ್ಲಿ Abrasives ಜಾಸ್ತಿ ಇರುವುದರಿಂದ ಹಲ್ಲು ಸವೆಯುತ್ತದೆಯೇ ಹೊರತು ಹಲ್ಲು ಬಿಳಿಯಾಗುವುದಿಲ್ಲ.
7. ನಿಮ್ಮ ವಸಡುಗಳನ್ನು ಬ್ರಶ್ ಆದ ಬಳಿಕ ಬೆರಳಿನಿಂದ ಗಟ್ಟಿಯಾಗಿ ತಿಕ್ಕಿ ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷ ವಸಡನ್ನು ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ಮತ್ತು ವಸಡಿನ ಆರೋಗ್ಯವನ್ನು ವೃದ್ಧಿಸುತ್ತವೆ.
8. ಎರಡು ಊಟದ ಮಧ್ಯೆ ಸಿಹಿ ಪದಾರ್ಥ ಅಂಟಾದ ಪದಾರ್ಥ (ಚಾಕೊಲೇಟ್) ಇತ್ಯಾದಿಗಳನ್ನು ಸೇವಿಸಬೇಡಿ. ಅನಿವಾರ್ಯವಾದಲ್ಲಿ ತಿಂದ ಬಳಿಕ ಚೆನ್ನಾಗಿ ಹಲ್ಲು ಉಜ್ಜಬೇಕು. ಬಾಯಿಯನ್ನು ಪ್ರತಿ ಸಲ ಆಹಾರ ತಿಂದ ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು ಸೂಕ್ತ.
9. ವಿಟಮಿನ್ ಮತ್ತು ಖನಿಜಾಂಶಗಳುಳ್ಳ ಸತ್ವಯುಕ್ತ ಆಹಾರವನ್ನು ಸೇವಿಸಿರಿ. ಕಬ್ಬು, ಆಪಲ್, ಕ್ಯಾರೆಟ್, ಮೂಲಂಗಿ ಇತ್ಯಾದಿ ನಾರುಯುಕ್ತ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿದರೆ ಹಲ್ಲುಗಳು ಸದೃಢವಾಗುತ್ತದೆ. ಸೌತೆಕಾಯಿ, ಟೊಮೆಟೊ ಇತ್ಯಾದಿ ಹಸಿ ತರಕಾರಿಗಳನ್ನು ಜಾಸ್ತಿ ಉಪಯೋಗಿಸಿದ್ದಲ್ಲಿ ಹಲ್ಲಿನ ಆರೋಗ್ಯz ಜೊತೆ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.
10. ನಿಮ್ಮ ದಂತ ವೈದ್ಯರನ್ನು ನಿಯಮಿತವಾಗಿ 6 ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ. ಇದು ನಿಮ್ಮ ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಹಾಗೂ ಗುಣಪಡಿಸಲು ಸಹಕಾರಿ. ಈ ಹತ್ತು ಸೂತ್ರಗಳನ್ನು ಸರಿಯಾಗಿ ಅನುಸರಿಸಿದಲ್ಲಿ ನಿಮ್ಮ ಹಲ್ಲು ನಿಮ್ಮ ನಗು ಆಸ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಆರೋಗ್ಯವಂತ ಹಲ್ಲುಗಳು, ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ನಾವು ನಮ್ಮ ಬಾಯಿಯ ಸ್ವಚ್ಛತೆ, ಹಲ್ಲುಗಳ ಭದ್ರತೆ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡದಿದ್ದಲ್ಲಿ ಹತ್ತು ಹಲವಾರು ರೋಗಗಳಿಗೆ ರಹದಾರಿಯಾಗಬಲ್ಲುದು. ನಾವು ತಿನ್ನುವ ಆಹಾರದ ಪಚನಕ್ಕೆ ಮತ್ತು ಜೀರ್ಣ ಕ್ರಿಯೆಗಳಿಗೆ ಆರೋಗ್ಯ ಪೂರ್ಣ ಹಲ್ಲುಗಳು ಅತೀ ಅವಶ್ಯಕ. ಇಲ್ಲವಾದಲ್ಲಿ ಒಂದಕ್ಕೊಂದು ಸಮಸ್ಯೆಗಳು ಕೂಡಿಕೊಂಡು ವ್ಯಕ್ತಿಯು ರೋಗರುಜಿನಗಳ ಹಂದರವಾಗಬಹುದು. ಅಪೂರ್ಣ ಜೀರ್ಣ ಕ್ರಿಯೆಯಿಂದ ರಕ್ತಹೀನತೆ ಬರಬಹುದು. ರಕ್ತಹೀನತೆಯಿಂದ ಇನ್ಯಾವುದೋ ರೋಗಕ್ಕೆ ಮೂಲವಾಗಬಹುದು. ಅದೇ ರೀತಿ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವಸಡು ರೋಗಗಳು ಹುಟ್ಟಿಕೊಳ್ಳಬಹುದು.
ವಸಡು ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಮಧುಮೇಹ ರೋಗಿಗಳಿಗೆ ಕೂಡಾ ವಸಡು ರೋಗದಿಂದ ಹೆಚ್ಚು ಬಳಲುತ್ತಾರೆ ಎಂದು ಅಂಕಿಅಂಶಗಳು ಸಾರಿ ಹೇಳುತ್ತದೆ. ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ದೊಡ್ಡ ಕಾರ್ಖಾನೆ ಇದ್ದಂತೆ. ಇಲ್ಲಿ ಲಕ್ಷಾಂತರ ಸೂಕ್ಷಾಣು ಜೀವಿಗಳು ತಮ್ಮ ಅಸ್ಥಿತ್ವವನ್ನು ಕಂಡು ಕೊಂಡಿದೆ. ಕಾರಣಾಂತರಗಳಿಂದ ವ್ಯಕ್ತಿಯ ದೈಹಿಕ ರೋಗ ನಿರೋಧಕ ಶಕ್ತಿ ಕುಂಠಿತವಾದಲ್ಲಿ, ಈ ರೋಗಾಣುಗಳು ತಮ್ಮ ರುದ್ರನರ್ತನವನ್ನು ಆರಂಭಿಸುತ್ತವೆ.
ಹಿಂದೊಮ್ಮೆ ಮುದ್ದುಕೃಷ್ಣ ತನ್ನ ತಾಯಿ ಯಶೋದೆಗೆ, ಬಾಯಿ ತೆರೆದು ಬ್ರಹ್ಮಾಂಡವನ್ನು ತೋರಿಸಿದ ಕಥೆಯನ್ನು ನಾವು ಪುರಾಣ ಕಥೆಗಳಲ್ಲಿ ಕೇಳಿ ತಿಳಿದಿದ್ದೇವೆ. ಅದೇ ರೀತಿ ರೋಗಗ್ರಸ್ಥ ಬಾಯಿಯನ್ನು ರೋಗಿ ತೆರೆದೊಡನೆ ದಂತ ವೈದ್ಯರು ರೋಗಿಯ ಬಾಯಿಯೊಳಗೆ ಬ್ಯಾಕ್ಟೀರಿಯಾ ಜಗತ್ತಿನ ಬಹ್ಮಾಂಡವನ್ನೇ ಕಾಣುತ್ತಾರೆ ಎಂದರೂ ತಪ್ಪಲ್ಲ. ಬ್ಯಾಕ್ಟೀರಿಯಾ ಇಲ್ಲದ, ರೋಗವಿಲ್ಲದ ಬಾಯಿ ಇರಲ್ಲಿಕ್ಕಿಲ್ಲ. ನಿರುಪದ್ರವಿ ಬ್ಯಾಕ್ಟೀರಿಯಾಗಳು ಬಾಯಿಯೊಳಗೆ ಇರುತ್ತವೆ. ನಮ್ಮ ಬಾಯಿಯ ಆರೋಗ್ಯ ಮತ್ತು ದೇಹದ ಆರೋಗ್ಯವನ್ನು ಸಮತೋಲದಲಲ್ಲಿ ಇಟ್ಟುಕೊಂಡಲ್ಲಿ ಈ ಬ್ಯಾಕ್ಟೀರಿಯಾಗಳು ತಮ್ಮ ಪಾಡಿಗೆ ತಾವಿದ್ದು ಯಾವೂದೇ ರೀತಿಯ ತೊಂದರೆ ಮಾಡಲ್ಲಿಕ್ಕಿಲ್ಲ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com