ಇಳಿಕೆಯಾಗುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ ! ಕಳೆದ 14 ದಿನಗಳ ವರದಿಯ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ದೇಶದ ಜನರ ದೈಹಿಕ ಕ್ಷಮತೆ ನಿಧಾನವಾಗಿ ಉತ್ತಮವಾಗುತ್ತಿದ್ದು, ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದೆ.
ಕೊರೋನಾ ಹಾವಳಿ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆ ಹಾಗೂ ಸಾವಿಗೀಡಾಗುವವರ ಸಂಖ್ಯೆ ನಾಗಾಲೋಟದಲ್ಲಿ ಏರುಗತಿಯಲ್ಲಿವೆ ಎಂಬ ಸುದ್ಧಿಯನ್ನು ಕೇಳಿ ಕೇಳಿ ತಲ್ಲಣಿಸಿದ ಹೃದಯಗಳಿಗೆ ಕೊಂಚ ಸಾಂತ್ವನ ನೀಡುವ ಸುದ್ಧಿ ಇಲ್ಲಿದೆ. ಆ ಒಂದು ಆಶಾದಾಯಕ ಸಂಗತಿ ಏನೆಂದರೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗೀಗ ಕೊಂಚ ಇಳಿಮುಖವಾಗುತ್ತಿದೆ ಎನ್ನುವುದು.
ರಾಪಿಡ್ ಟೆಸ್ಟ್‍ಗಳ ಹೊರತಾಗಿಯೂ ಸಹಾ ಪಾಸಿಟಿವ್ ವರದಿಗಳು ಕಡಿಮೆಯಾಗುತ್ತಿರುವುದು ಎಲ್ಲೋ ಸ್ವಲ್ಪ ನೆಮ್ಮದಿಗೆ ಕಾರಣವಾಗುತ್ತಿರುವ ಅಂಶವಾಗಿದೆ. ನಮ್ಮದೇಶದಲ್ಲಿ ಜನರೂ ಸಹಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಕಳೆದ 14 ದಿನಗಳ ವರದಿಯ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ದೇಶದ ಜನರ ದೈಹಿಕ ಕ್ಷಮತೆ ನಿಧಾನವಾಗಿ ಉತ್ತಮವಾಗುತ್ತಿದ್ದು, ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದೆ. ಹೀಗಾಗಿ ನೂರಾರು ರೋಗಿಗಳು 7 ರಿಂದ 8 ದಿನದೊಳಗೆ ಚೇತರಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲೂ ಇಳಿಕೆಯಾದ ಸೋಂಕಿನ ಪ್ರಕರಣಗಳು
ಕೆಲ ದಿನಗಳಿಂದ ನಾಲ್ಕು ಸಾವಿರದ ಹಾದಿಯಲ್ಲಿ ಸಾಗುತ್ತಿದ್ದ ಕೊರೋನಾ ಸೋಂಕು ಪ್ರಕರಣಗಳು ಇದೀಗ ಎರಡು ಸಾವಿರಕ್ಕೆ ಇಳಿಕೆಯಾಗಿವೆ. ಸೋಮವಾರ 2189 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಮವಾರದಂದು ಸಾವಿಗೀಡಾದವರ ಸಂಖ್ಯೆ 34 ಆಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕಿತರ ಹೊಸ ಪ್ರಕರಣಗಳು 2151ಕ್ಕೆ ಇಳಿಕೆಯಾಗಿವೆ. ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 2.52 ಲಕ್ಷದಷ್ಟಾಗಿದೆ. ಇದರಲ್ಲಿಗುಣಮುಖರ ಸಂಖ್ಯೆ 1.95 ಲಕ್ಷಕ್ಕೆಏರಿದೆ. 54112 ಜನರು ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶ್ವಆರೋಗ್ಯ ಸಂಸ್ಥೆ ಮಾಹಿತಿ ಏನು?
ಜಾಗತಿಕವಾಗಿ ಪ್ರತಿ 10 ಜನರಲ್ಲಿ ಒಬ್ಬರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವಿಶ್ವಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ಪ್ರಸ್ತುತ ದೃಢವಾಗಿರುವ ಸೋಂಕಿತರಿಗಿಂತ 20 ಪಟ್ಟು ಹೆಚ್ಚು ಜನರು ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ ಎಂದು ಡಬ್ಲ್ಯೂಎಚ್‍ಒನ ತುರ್ತುಪರಿಸ್ಥಿತಿಗಳ ಮುಖ್ಯಸ್ಥ ಡಾ.ಮೈಕೆಲ್ ರಯಾನ್ ತಿಳಿಸಿದ್ದಾರೆ. ವಿಶ್ವದಲ್ಲಿ 760 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ 76 ಕೋಟಿ ಜನರು ಸೊಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಪ್ರಮಾಣವು ಹಳ್ಳಿ ಮತ್ತು ನಗರಗಳಲ್ಲಿ ವಿಭಿನ್ನವಾಗಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ಸೋಂಕು ಹೆಚ್ಚುತ್ತಿದೆ. ಯುರೋಪ್ ಮತ್ತು ಪೂರ್ವ ಮೆಡಿಟೇರಿಯನ್ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣಆಫ್ರಿಕಾ ಮತ್ತು ಪಶ್ಚಿಮ ಪೆಸಿಫಿಕ್ ಭಾಗದಲ್ಲಿ ಸೋಂಕು ಕಡಿಮೆಯಿದೆ ಎಂದು ಮೈಕಲ್ ಹೇಳಿದ್ದಾರೆ. ಈಗಾಗಲೇ ಸಾವಿನ ಪ್ರಮಾಣವನ್ನು ಸಾಕಷ್ಟು ನಿಯಂತ್ರಿಸಲಾಗಿದೆ. ಆದರೆ ಅದನ್ನು ಇನ್ನಷ್ಟು ನಿಯಂತ್ರಿಸಬಹುದಾದ ಸಾಮಥ್ರ್ಯ ನಮ್ಮಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಲಸಿಕೆ ದೊರಕುವುದು ಯಾವಾಗಾ?
2021ರ ಜುಲೈ ವೇಳೆಗೆ ದೇಶದಲ್ಲಿ 40ರಿಂದ 50 ಕೋಟಿ ಡೋಸ್‍ಗಳಷ್ಟು ಕೊರೋನಾ ಲಸಿಕೆಯು ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವರಾಗಿರುವ ಡಾ.ಹರ್ಷವರ್ಧನ್ ಮಾಹಿತಿಯನ್ನು ನೀಡಿದ್ದಾರೆ. ಆದ್ಯತೆಯ ಮೇರೆಗೆ ಲಸಿಕೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು, ಅಂತವರ ಪಟ್ಟಿಯನ್ನು ಅಕ್ಟೋಬರ್ ಅಂತ್ಯದ ಒಳಗೆ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಇದರಿಂದ ಸುಮಾರು 20 ಕೋಟಿಯಷ್ಟು ಜನರಿಗೆ ಕೊರೋನಾ ಲಸಿಕೆ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ಕೊಡಲಾಗುತ್ತಿದ್ದು, ಲಸಿಕೆಯನ್ನು ನ್ಯಾಯ ಸಮ್ಮತವಾಗಿ, ಪಾರದರ್ಶಕವಾಗಿ ವಿತರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
ಸೆಪ್ಟೆಂಬರ್‍ನಲ್ಲೇ ಹೆಚ್ಚು ಕೊರೋನಾ ಉಪಟಳ
ಭಾರತದಲ್ಲಿ ಕರೊನಾ ಸೋಂಕು ಸೆಪ್ಟೆಂಬರ್ ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ಒಂದು ವಾರದಿಂದ ಸೋಂಕು ಇಳಿಮುಖವಾಗಿದೆ. ಎಲ್ಲ ರಾಜ್ಯಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಇಳಿಕೆಯಾಗಿದೆ. ಕಳೆದ ವಾರ ಪ್ರತಿದಿನ ಸರಾಸರಿ 93 ಸಾವಿರ ಪ್ರಕರಣ ಪತ್ತೆಯಾಗುತ್ತಿತ್ತು. ಈ ವಾರದಲ್ಲಿಅದು 83 ಸಾವಿರಕ್ಕೆ ಇಳಿದಿದೆ. ಪರೀಕ್ಷೆಯ ಪ್ರಮಾಣವೂ ಹೆಚ್ಚಳವಾಗಿದೆ. ದತ್ತಾಂಶಗಳನ್ನು ಗಮನಿಸಿದರೆ ಸೋಂಕು ಸೆಪ್ಟೆಂಬರ್‍ನಲ್ಲಿ ಗರಿಷ್ಠಮಟ್ಟ ತಲುಪಿರುವುದು ತಿಳಿದುಬರುತ್ತದೆ.
ಹಾಗೆಂದ ಮಾತ್ರಕ್ಕೆ ಸೋಂಕಿನಿಂದ ನಾವು ಮುಕ್ತರಾಗಿದ್ದೇವೆ ಎಂದರ್ಥವಲ್ಲ ಎಂದು ಸಚಿವಾಲಯ ಹೇಳಿದೆ. ಭಾನುವಾರ ದೇಶದಲ್ಲಿ 74,500 ಪ್ರಕರಣಗಳು ದೃಢವಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 66 ಲಕ್ಷಕ್ಕೂ ಅಧಿಕವಾಗಿದೆ. ಒಂದೇ ದಿನ 76,700ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 55.9 ಲಕ್ಷದಷ್ಟಾಗಿದೆ. 9.34 ಲಕ್ಷ ಸಕ್ರಿಯ ಪ್ರಕರಣ ಬಾಕಿಯಿದೆ. 24 ಗಂಟೆಗಳಲ್ಲಿ 903 ಸೋಂಕಿತರು ಮೃತರಾಗಿದ್ದು, ಮೃತರ ಸಂಖ್ಯೆ 1.02 ಲಕ್ಷ ಮೀರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.