ಧೂಮಪಾನ ಸಂಬಂಧಿ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ್ಯ 55 ಲಕ್ಷಕ್ಕೂ ಹೆಚ್ಚು ; ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಪ್ರತಿ ವರ್ಷ ಏಡ್ಸ, ಕ್ಷಯ ಹಾಗೂ ಮಲೇರಿಯಾ ಈ ಮೂರು ಮರಣಾಂತಿಕ ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನಸಂಖ್ಯೆಗಿಂತ ತಂಬಾಕು ಸೇವನೆಯಿಂದ ಸಾಯುವವರು ಭಾರತದಲ್ಲಿ ಹೆಚ್ಚು.
ಸುಖ, ಶಾಂತಿ, ಆನಂದ ಮಾನವ ಜೀವನದ ಪ್ರಬಲ ಆಸೆ, ಆಕರ್ಷಣೆ. ಸುಖಪಡುವುದು ಮನುಷ್ಯನ ಹುಟ್ಟಾಸೆ ಎಂದಿದ್ದಾನೆ ಪ್ರಸಿದ್ದ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್. ಅದರ ಸುತ್ತ ಆಸೆಯ ಬಲೆಯನ್ನು ನೇಯುತ್ತಾ, ಯೋಜನೆಗಳನ್ನು ಹಾಕಿ, ಹಮ್ಮುತ್ತಾ ಅತೀ ಕಡಿಮೆ ಶ್ರಮದಲ್ಲಿ ಅತಿ ಹೆಚ್ಚು ಸುಖವನ್ನು ಅನುಭವಿಸಲು ಪ್ರತಿಯೊಬ್ಬ ಜೀವಿ ತನ್ನ ಜೀವಿತವನ್ನೇ ಮುಡುಪಾಗಿಡುತ್ತಾನೆ. ದೈನಂದಿನ ಜೀವನದ ಕಷ್ಟ-ನಷ್ಟಗಳು, ನೋವು ನಿರಾಶೆಗಳನ್ನು ಮರೆತು, ತಮ್ಮ ಕಲ್ಪನೆಯ ಅಲ್ಪ ಸುಖವನ್ನು ಅನುಭವಿಸಲು ಇಚ್ಛಿಸುವ ಮಾನವ ಧೂಮಪಾನದ (ತಂಬಾಕು ಸೇವನೆ) ಮೊರೆ ಹೊಕ್ಕುದುದು ಇಂದಿನ ಕಥೆಯಲ್ಲ.
ಸಿಗರೇಟು ಮನುಷ್ಯನನ್ನು ಸುಡುತ್ತದೆ
ತಮಾಖ: ತ್ರಿವಿಧಾಪ್ರೋಕ್ತಾ
ಕಲ್ ಭಾಗೀರಥೀ ಯಥಾ
ಕ್ವಚಿತ್ ಹುಕ್ಕಾ ತ್ಸಚಿತ್ ಥುಕ್ಕಾ
ಕ್ವಚಿತ್ ನಾಸಗ್ರಾ ಗಾಮಿನೀ
ತಂಬಾಕು ಸೇವನೆಯ ವಿವಿಧ ರೂಪಗಳನ್ನು ಈ ಸುಭಾಷಿತವು ಹೇಳುತ್ತದೆ.
ಕೆಲವರು ಹುಕ್ಕಾಗಳಲ್ಲಿ ತಂಬಾಕು ಸೇದುವರು. ಕೆಲವರು ಥುಕ್ಕಾ ಅಂದರೆ ತಂಬಾಕದ ಜೊಲ್ಲನ್ನು ನುಂಗುವರು. ಇನ್ನೂ ಕೆಲವರು ಅದರ ನಶ್ಯ ಮಾಡಿ ಮೂಗಿನಲ್ಲಿ ಏರಿಸಿಕೊಳ್ಳುವರು. ಬಹುಶ: ಈ ಶ್ಲೋಕ ರಚಿಸಿದಾಗ ಬೀಡಿ ಸಿಗರೇಟುಗಳು ಬಳಕೆಯಲ್ಲಿ ಇದ್ದಂತೆ ಕಾಣುವುದಿಲ್ಲ. ಸರಳವಾಗಿ ಸ್ನೇಹಿತರಿಂದ ಸಮಯ ಕಳೆಯಲು ಪ್ರಾರಂಭವಾಗುವ ಧೂಮಪಾನದ ಅಭ್ಯಾಸ ಕೊನೆಗೆ ಆತನ ವ್ಯಕ್ತಿತ್ವವನ್ನೇ ಬಲಿ ತೆಗೆದುಕಳ್ಳುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಮನುಷ್ಯ ಸಿಗರೇಟನ್ನು ಸುಟ್ಟರೆ, ಸಿಗರೇಟು ಮನುಷ್ಯನನ್ನು ಸುಡುತ್ತದೆ” ಬಲ್ಲವರು ಹೇಳಿದ ಬೆಲ್ಲದಂಥ ಈ ಮಾತು ಅಕ್ಷರಶಹ ಸತ್ಯ.
ತಂಬಾಕು ಸಂಬಂಧಿ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ್ಯ 55 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ ಪ್ರತಿ ವರ್ಷ ಏಡ್ಸ, ಕ್ಷಯ ಹಾಗೂ ಮಲೇರಿಯಾ ಈ ಮೂರು ಮರಣಾಂತಿಕ ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನಸಂಖ್ಯೆಗಿಂತ ತಂಬಾಕು ಸೇವನೆಯಿಂದ ಸಾಯುವವರು ಭಾರತದಲ್ಲಿ ಹೆಚ್ಚು.
ಇದೀಗ ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ 11 ಕೋಟಿ. ದೇಶದಲ್ಲಿ ಜೀವಕ್ಕೆ ಅಪಾಯ ತಂದೊಡ್ಡುವ ಮೋರನೇ ಅತಿದೊಡ್ಡ ಸಂಗತಿ ಇದಾಗಿದೆ. ಅದಕ್ಕಿಂತ ಆತಂಕದ ಸಂಗತಿಯಂದರೆ 1.21 ಕೋಟಿ ಭಾರತೀಯ ನಾರಿಯರು ಇವತ್ತು ಹೊಗೆಬತ್ತಿಯ ದಾಸರಾಗಿರುವುದು! 1980 ರಲ್ಲಿ ಕೇವಲ 53 ಲಕ್ಷ ಮಹಿಳೆಯರು ಮಾತ್ರ ಸಿಗರೇಟು ಸೇದುತ್ತಿದ್ದರು. ಮೂರು ದಶಕಗಳಲ್ಲಿ ಈ ಪ್ರಮಾಣ ಶೇ 50 ಕ್ಕಿಂತ ಹೆಚ್ಚಾಗಿದೆ. ಅಮೇರಿಕದ ನಂತರ ಅತಿ ಹೆಚ್ಚು ಮಹಿಳಾ ಧೂಮಪಾನಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿ ಭಾರತಕ್ಕೆ!
Also Read: How Passive smoking effects fertility ?
ಬಹಳ ಮುಜುಗುರದ ಸಂಗತಿಯಂದರೆ ಸಿಗರೇಟು ಸೇದುವ ಪುರುಷ ಪ್ರಮಾಣ ಶೇ 33.8 (1980 ರಲ್ಲಿ) ರಿಂದ ಶೇ 23 ಕ್ಕೆ ಕುಸಿದಿದೆ. (2012) ಜಾಗತಿಕವಾಗಿ ನೋಡಿದರೆ ಕಳೆದ ಮೂರು ದಶಕಗಳಲ್ಲಿ ಮಹಿಳೆಯರಲ್ಲಿ ಸಿಗರೇಟು ಸೇದುವ ಪ್ರಮಾಣ ಶೇ 42 ರಷ್ಟು ಕುಸಿದಿದೆ. ಪುರುಷ ಪ್ರಮಾಣವೂ ಶೇ 25 ರಷ್ಟು ತಗ್ಗಿದೆ. ಆದರೆ ಭಾರತದಲ್ಲಿ ಮಾತ್ರ ಮಹಿಳೆಯರು ಧೂಮಪಾನ ವ್ಯಸನಿಗಳಾಗುತ್ತಿರುವುದು ಆತಂಕದ ಸಂಗತಿ ಎನ್ನುತ್ತಿವೆ ಅಧ್ಯಯನ ವರದಿಗಳು.
ವಿಶ್ವ ಆರೋಗ್ಯ ಸಂಸ್ಥೆಯ ಸಂದೇಶಗಳು:
ದಶಕದಲ್ಲಿ ಕಂಡ ಎರಡು ಚಿಹ್ನೆಗಳು, ಆರೋಗ್ಯ ಸಂದೇಶಗಳು ಧೂಮಪಾನ ತೆಗೆದುಕೊಂಡ ತಿರುವುಗಳನ್ನು ತೋರಿಸುತ್ತದೆ. 1979ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಧೂಮಪಾನ ಅಥವಾ ಆರೋಗ್ಯ ಆಯ್ಕೆ ನಿಮ್ಮದು”ಎಂಬ ಸಂದೇಶವನ್ನು ಚಿತ್ರದ ಮೂಲಕ ಸಾರಿ ಜನರಿಗೆ ಎಚ್ಚರಿಕೆ ನೀಡಿತ್ತು. 1988ರಲ್ಲಿ ಧೂಮಪಾನ ಅಥವಾ ಆರೋಗ್ಯ: ಆರೋಗ್ಯವನ್ನೇ ಆರಿಸಿಕೊಳ್ಳಿ”ಎಂದು ಒತ್ತಿ ಹೇಳುವ ಪ್ರಸಂಗ ಜಾಗತಿಕ ಆರೋಗ್ಯ ಸಂಸ್ಥೆಗೆ ಒದಗಿ ಬಂದಿದೆಯೆಂದರೆ ಧೂಮಪಾನದ ದುಷ್ಪರಿಣಾಮ ಎಷ್ಟಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು.
ಬಿಳಿಯ ಭಸ್ಮಾಸುರ:
ಲಭ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ ಧೂಮಪಾನದಿಂದಾಗುವ ಪರಿಣಾಮಗಳು, ಸರ್ಕಾರದ ಸುತ್ತೋಲೆಗಳು, ವೈದ್ಯರುಗಳ ಬುದ್ದಿವಾದಗಳು, ಎಚ್ಚರಿಕೆಗಳು ಅಚ್ಚರಿಯೆನ್ನುವಂತ ರೀತಿಯಲ್ಲಿ ಮಣ್ಣು ಮುಕ್ಕಿವೆ. ವಿರೋಧ, ತೆರಿಗೆ ಹೇರಿಕೆ, ಅಡ್ಡಿಆತಂಕಗಳನ್ನು ಒಡ್ಡಿದರೂ ಧೂಮಪಾನದ ಜನಪ್ರಿಯತೆ ಕುಗ್ಗಲಿಲ್ಲ. ಜಗತ್ತಿನಲ್ಲಿ ಎಲ್ಲಾ ಬೆಂಕಿ ಅನಾಹುತ, ಅಪಘಾತಗಳಿಂದ ಸುಟ್ಟು ಸತ್ತವರ ಸಂಖ್ಯೆಗಿಂತ, ಸಿಗರೇಟು ಸೇವನೆಯಿಂದ ಸತ್ತವರ ಸಂಖ್ಯೆ ಹೆಚ್ಚು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಅರಿತಿದೆ.
ಪ್ರತಿವರ್ಷ 2.5 ಮಿಲಿಯನ್ ಜನರು ಧೂಮಪಾನಕ್ಕೆ ಸಂಬಂಧಿಸಿದ ರೋಗಗಳಿಗೆ ಆಹುತಿಯಾಗುತ್ತಿದ್ದಾರೆ. ಧೂಮಪಾನವು 80% ಸಂಬಂಧವನ್ನು ಪುಪ್ಪುಸ ಕ್ಯಾನ್ಸರಿಗೂ, 75% ಸಂಬಂಧವನ್ನು ದೀರ್ಘಕಾಲಿಕ ಬ್ರೊಂಕೈಟಿಸಗೂ, 22% ಸಂಬಂಧವನ್ನೂ ಹೃದಯ ರೋಗಗಳೊಂದಿಗೂ ಹೊಂದಿದೆ ಎಂಬುದು ಸಂಶೋಧನೆಗಳಿಂದ ಜಾಗತಿಕ ಆರೋಗ್ಯ ಸಂಸ್ಥೆಯ ಗಮನಕ್ಕೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ದಿನಾಚರಣೆ ಸಂದೇಶವನ್ನು ಆ ದಿನವನ್ನು ಧೂಮಪಾನ ರಹಿತ ದಿನವೆಂದು ಆಚರಿಸಲು ಕರೆಕೊಟ್ಟಿತು.
ಜಾಹಿರಾತುಗಳ ಮೋಡಿ:
ಧೂಮಪಾನ ಇಂದು ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ವಯಸ್ಸಿಗೆ ಬಂದಿದ್ದೇನೆ ”ಸ್ವತ: ಸಂಪಾದಿಸುತ್ತಿರುವೆ” ಎಂಬವುಗಳನ್ನು ಸಾರುವ ಸಂಕೇತವಾಗಿ ಸಮಾಜದಲ್ಲಿ ನಿಂತಿದೆ. ನಮ್ಮಲ್ಲಿಯ ದುರ್ಬಲತೆಯನ್ನೇ ಬಂಡವಾಳವಾಗಿಸಿಕೊಂಡು ಅಬ್ಬರದ ಪ್ರಚಾರ ಮಾಡುವ ಕಂಪನಿಗಳ ಮೋಡಿಗಳು ಎಂಥವರನ್ನೂ ಮರುಳು ಮಾಡುತ್ತವೆ. ಅ ”ಬ್ರಾಂಡಿನ ಸಿಗರೇಟು ಸೇದಿರಿ, ರಾಜರಂತೆ ಠೀವಿಯಿಂದ ಬಾಳಿರಿ” ಸ್ವಾದಿಷ್ಟ , ರುಚಿಕರ ಬ್ರಾಂಡ್ ಸಿಗರೇಟು ಸೇದುವ ಯುವಕರನ್ನು ಎಲ್ಲ ಹುಡುಗಿಯರು ಮೆಚ್ಚುತ್ತಾರೆ .. ನೀವು ? ಸಂಪನ್ನ ನೈಜ ಹಾಗು ನೀಲ ಫಿಲ್ಟರ್ ಸಿಗರೇಟನ್ನೇ ಕ್ರಿಯಾಶೀಲರು ಸೇದುತ್ತಾರೆ.,.,…ಇತ್ಯಾದಿ ಜಾಹೀರಾತುಗಳು ಯಾರನ್ನು ಮರುಳು ಮಾಡುವುದಿಲ್ಲ.? ಮರುಳು ಮಾಡುವುದಷ್ಟೇ ಅಲ್ಲ, ಜಾಹೀರಾತು ಜಗತ್ತು ಬಿತ್ತರಿಸುವುದೆಲ್ಲಾ ಸತ್ಯ ಸಂಗತಿಗಳು ಎಂಬುದನ್ನು ಚಿತ್ತದಲ್ಲಿ ಅಚ್ಚೊತ್ತುವಂತೆ ಮಾಡುತ್ತವೆ. ಹದಿವಯಸ್ಸಿನಲ್ಲಿ ಗರಿಬಿಚ್ಚಿಕೊಳ್ಳುವ ಹುಚ್ಚು ವಿಚಾರಗಳಿಗೆ ಹಸಿರು ಬಣ್ಣ ಬಳಿಯುತ್ತವೆ. ಧೂಮಪಾನ ಆರೋಗ್ಯಕ್ಕೆ ಅಪಾಯಕಾರಿ ಇದು ಶಾಸನ ವಿಧಿಸಿದ ಎಚ್ಚರಿಕೆ ಎಂದು ಪ್ರತಿ ಸಿಗರೇಟ್ ಪ್ಯಾಕಿನ ಮೇಲೆ ಮುದ್ರಿಸಿದ್ದರೂ, ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆ ಆಗಿಲ್ಲ . ಅದೇ ರೀತಿ ಸೇದುವ ಸಿಗರೇಟು ಅಥವಾ ಬೀಡಿಗಳ ಸಂಖ್ಯೆಯೂ ಕುಗ್ಗಿಲ್ಲ.
ಧೂಮಪಾನಕ್ಕೆ ನಾಂದಿ
ಧೂಮಪಾನದ ಪ್ರಾರಂಭಕ್ಕೆ ಪ್ರಚೋದನೆ ಏನು? ಈ ಪ್ರಶ್ನೆಗೆ ಮನೋವಿಜ್ಞಾನಿಗಳಿಂದ ಕರಾರುವಕ್ಕಾದ ಉತ್ತರವಿಲ್ಲದಿದ್ದರೂ ಸಮಾಧಾನಕರ ವಿವರಣೆ ಖಂಡಿತ ಇದೆ. ಸರ್ವಸಾಮಾನ್ಯವಾಗಿ ಇತರ ಎಲ್ಲ ಕ್ರಿಯೆಗಳಂತೆ ಇದು ಅನುಕರಣೆಯಿಂದ ಆರಂಭವಾಗುತ್ತದೆ. ನಮ್ಮ ಸಮಾಜದಲ್ಲಿ , ಮನೆಯಲ್ಲಿಯ ಹಿರಿಯರ ವಿಚಿತ್ರ ಧೋರಣೆ ಹೇಳುವುದು ಶಾಸ್ತ್ರ, ತಿನ್ನುವುದು ಬದನೆಕಾಯಿ” ಕಿರಿಯರಲ್ಲಿ ಧೂಮಪಾನದ ಬಗ್ಗೆ ಕುತೂಹಲ ಕೆರಳಿಸುತ್ತದೆ. ಇಚ್ಛೆ, ಆಸೆಗಳ ತಿರುಗಣೆ ಮಡುವಿನಲ್ಲಿ ಗಿರಕಿ ಹೊಡೆಯುತ್ತಾರೆ. ಅರಿವಿಲ್ಲದೇ ಧೂಮಪಾನಕ್ಕೆ ನಾಂದಿ ಹಾಡುತ್ತಾರೆ. ಆಸೆಯಿಂದಲೋ, ಅನುಕರಣೆಯಿಂದಲೋ, ಪ್ರತಿಭಟನೆ ಮಾಡುವುದಕ್ಕೋ, ದೊಡ್ಡವರಾಗಿದ್ದೇವೆಂದು ಸಾರುವುದಕ್ಕೋ, ಪುರುಷತನ ಪ್ರದರ್ಶಿಸುವುದಕ್ಕೋ ಅಥವಾ ಕುತೂಹಲಕ್ಕೋ ಧೂಮಪಾನ ಮಾಡಲಾರಂಭಿಸಿ, ಕ್ರಮೇಣ ಪದೇ ಪದೇ ಪುನರಾವರ್ತನೆ ಮಾಡಿ ಅಭ್ಯಾಸ ಮಾಡಿಕೊಳ್ಳುತ್ತಾರೆ ಚಟಕ್ಕೆ ಅಂಟಿಕೊಳ್ಳುತ್ತಾರೆ
ಧೂಮಪಾನ ಮನಸ್ಸಿಗೆ ಸಮಾಧಾನ ನೀಡುತ್ತದೆ. ಆತಂಕ, ಗಾಬರಿ, ಕಳವಳಗಳ ಹುಟ್ಟಡಗಿಸುತ್ತದೆ. ಮನಸ್ಸಿನ ಉದ್ವೇಗ ಕಡಿಮೆ ಮಾಡುತ್ತದೆ. ಮೆದುಳಿಗೆ ಮೇವಾಗಿ ವಿಚಾರ ಶಕ್ತಿ ಹೆಚ್ಚಿಸುತ್ತದೆ. ಜಟಿಲ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ….ಎಂದು ಧೂಮಪಾನಿಗಳು ಹೇಳುತ್ತಾರೆ. ದೇಶದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಲ್ಲೀನರಾದ ಉನ್ನತ ಅಧಿಕಾರಿಗಳು ಆಶ್ ಟ್ರೇ ತುಂಬುವಂತೆ ಧೂಮಪಾನ ಮಾಡುವುದು, ಬುದ್ದಿಜೀವಿಗಳೆನಿಸಿಕೊಂಡ ಕೆಲವೇ ಜನರ ಸಂದರ್ಶನದಲ್ಲೂ ಸಹ ಧೂಮಪಾನದ ಧೂಮ್ರವಲಯಗಳ ನಡುವೆ ಹಲ್ಲುಗಿಂಜುವ ಪೋಜುಗಳನ್ನು ಬೆಳ್ಳಿತೆರೆಯ ಮೇಲೆ ಕಂಡು, ಪತ್ರಿಕಾ ಪ್ರಪಂಚದಲ್ಲಿ ಅಚ್ಚಾದದ್ದನ್ನು ಓದಿ, ಟೀವಿ, ರೇಡಿಯೋ ಮಾಧ್ಯಮದ ಜಾಹೀರಾತಿನ ವೈಖರಿ…. ಇತ್ಯಾದಿಗಳು ಧೂಮಪಾನಿಗಳಾಗುವುದಕ್ಕೆ ಪೂರಕ, ಪೋಷಕವಾಗಿ ಪ್ರಚೋದನೆ ನೀಡುತ್ತವೆ.
Also Read: Cigarette smoking increases the risk of severe TB infection
ಕೆಟ್ಟ ವಿಷ
ತಂಬಾಕಿನಲ್ಲಿರುವ ನಿಕೋಟಿನ್ ಸ್ವಲ್ಪ ಮಟ್ಟಿಗೆ ಉತ್ತೇಜನಕಾರಿ. ಮನಸ್ಸಿನ ಸಹನ ಶಕ್ತಿಯನ್ನು ಸ್ವಲ್ಪಮಟ್ಟಿಗಾದರೂ ಹೆಚ್ಚಿಸಿ, ತನ್ಮೂಲಕ ಉದ್ವೇಗವನ್ನು ಕಡಿಮೆ ಮಾಡಬಲ್ಲದು- ಎಂದು ಒಂದು ವಿವರಣೆ ಇದೆ. ಆದರೆ ಧೂಮಪಾನದಿಂದ ಉಂಟಾಗುತ್ತದೆ ಎನ್ನುವ ಸಮಾಧಾನ ಬಹುಮಟ್ಟಿಗೆ ಮಾನಸಿಕ ಜನ್ಯವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ಸಾಗರದಲ್ಲಿ ಸಾಯುತ್ತಿರುವವನು ಹುಲ್ಲುಕಡ್ಡಿಯ ಆಸರೆಗೆ ಹಾತೊರೆದು ಬದುಕಲು ಪ್ರಯತ್ನಿಸುವಂತೆ ಆತಂಕಕ್ಕೀಡಾದ ವ್ಯಕ್ತಿ ಧೂಮಪಾನದ ಬತ್ತಿಯನ್ನು ಅವಲಂಬಿಸುತ್ತಾನೆ. ಸಂಕಷ್ಟ ಸಮಸ್ಯೆಗಳು ಧೂಮಪಾನ ಮಾಡಲು ಎಂದೂ ಪ್ರಚೋದಿಸುವುದಿಲ್ಲ. ನಮ್ಮ ಮನಸ್ಸೇ ಅದರ ಮೇಲೆ ಹೋಗಲು ಕಾರಣ ಎಂಬುದನ್ನು ನೆನಪಿನಲ್ಲಿಡಬೇಕು.
ತಂಬಾಕಿನ ನಿಕೋಟಿನ್’ಚಟ ಹಿಡಿಸುವ ವಸ್ತು. ದಿನ ಕಳೆದಂತೆ ದೇಹ ನಿಕೋಟಿನ್ ಗೆ ಹೊಂದಿಕೊಂಡು ಬಿಡುವುದರಿಂದ ಮೊದಲಿನ ಉತ್ತೇಜನ ಕೊಡಲು ಹೆಚ್ಚು ಹೆಚ್ಚು ಪ್ರಮಾಣದ ನಿಕೋಟಿನ್ ಬೇಕಾಗುತ್ತದೆ. ಅದು ಆಕಸ್ಮಾತ್ ದೊರೆಯದಿದ್ದರೆ ಉದ್ವೇಗ, ಚಡಪಡಿಕೆ , ಚಂಚಲತೆ , ಮುಂತಾದ ಮಾನಸಿಕ ಚಿಹ್ನೆಗಳೂ, ತಲೆನೋವು ,ಸುಸ್ತು ಇತ್ಯಾದಿ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿ ಮಾನಸಿಕವಾಗಿ ಸಂಕಷ್ಟದ ಸುಳಿಯಲ್ಲಿ ಸಿಕ್ಕಾಗ ಶರೀರದ ನಿಕೋಟಿನ್ ಮೂತ್ರದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊರ ಹಾಕಲ್ಪಡುತ್ತದೆ. ಈ ನಷ್ಟವನ್ನು ಭರ್ತಿಮಾಡಲು ವ್ಯಕ್ತಿ ಹೆಚ್ಚು ಧೂಮಪಾನ ಮಾಡಬೇಕಾಗುತ್ತದೆ. ಅಂದರೆ ಕಾರ್ಯದ ಒತ್ತಡ, ಸಮಸ್ಯೆಯ ಒತ್ತಡಕ್ಕೆ ಒಳಗಾದ ವ್ಯಕ್ತಿ ಹೆಚ್ಚು ಧೂಮಪಾನ ಮಾಡಲು ಮಾನಸಿಕ ಕಾರಣಗಳ ಜೊತೆಗೆ , ದೇಹದಲ್ಲಿಯ ನಿಕೋಟಿನ್ ಪ್ರಮಾಣದ ಕೊರತೆಯೂ ಕಾರಣ ಎಂಬುದರಲ್ಲಿ ಸಂಶಯವಿಲ್ಲ.
ಕೇವಲ ಒಂದು ಸಿಗರೇಟಿನಲ್ಲಿರುವ ನಿಕೋಟಿನ್ ಪ್ರಮಾಣವನ್ನು ಒಬ್ಬ ಯುವಕನ ಶಿರದಲ್ಲಿ ನೇರವಾಗಿ ಚುಚ್ಚಿದರೆ ಅವನು ಸತ್ತೇ ಹೋಗುತ್ತಾನೆ . ಇಷ್ಟು ಕೆಟ್ಟ ವಿಷ ಇನ್ನೊಂದಿಲ್ಲ. ಧೂಮಪಾನದ ಹೊಗೆಗಿಂತ ಮಿಗಿಲಾದ ಹಗೆ ಇನ್ನೊಂದಿಲ್ಲ. ಎಲ್ಲಿ ಧೂಮಪಾನದ ಹೊಗೆ ಇದೆಯೋ ಅಲ್ಲಿ ಅನಾರೋಗ್ಯದ ಕಿಚ್ಚು ನಿಗಿನಿಗಿ ಅನ್ನುವುದನ್ನು 50,000 ಅಧ್ಯಯನಗಳು ಧೃಡಪಡಿಸಿವೆ. ಧೂಮಪಾನದಿಂದ ಬರುವ ನಾನಾ ಬಗೆಯ ರೋಗಗಳ ಪಟ್ಟಿಯನ್ನು ನೋಡಿದರೆ ಧೂಮಪಾನವೇ ವಿಶ್ವದ ನಂಬರ್ ಒನ್ ನಿಶ್ಯಬ್ದ ಹಂತಕ . ಪ್ರಪಂಚದಲ್ಲಿ ಪ್ರತಿ ಹದಿಮೂರು ಸೆಕೆಂಡಿಗೊಂದು ಆಹುತಿ.
ಕತ್ತೆ , ನರಿ, ನಾಯಿಗಳು ಮುಟ್ಟದಂಥ
ಕೆಟ್ಟ ವಿಷವ ತಂದು ಜನರು
ಹೊಟ್ಟೆಯಲ್ಲಿ ತುಂಬುತಿಹುದು. . , , “
ಎಂದು ಕವಿಗಳು ಹೇಳಿರುವುದು ಅರ್ಥಪೂರ್ಣವಾಗಿದೆ.
ಮೃತ್ಯುವಿಗೆ ಆಹ್ವಾನ:
ಪ್ರಪಂಚದ ಜನಸಂಖ್ಯೆಯಲ್ಲಿ ಸುಮಾರು 1/9 ಭಾಗದಷ್ಟು ಜನರು ಪ್ರತಿದಿನ 5ರಿಂದ 20 ಸಿಗರೇಟುಗಳನ್ನು ಸೇದುವರೆಂದುಅಂದಾಜು ಮಾಡಲಾಗಿದೆ. ಒಂದು ಸಿಗರೇಟನ್ನು ಸುಡಲು ಅಗತ್ಯವಾದ ಆಮ್ಲಜನಕವು ಅಷ್ಟೇ ಅವಧಿಯಲ್ಲಿ ನಾಲ್ಕು ಜನರು ಉಸಿರಾಡಲು ಅಗತ್ಯವಾದ ಆಮ್ಲಜನಕಕ್ಕೆ ಸಮವೆಂದು ತಿಳಿದು ಬಂದಿದೆ. ಪ್ರಾಣಾಧಾರವಾದ ಪ್ರಾಣವಾಯುವಿನ ಕೊರತೆ, ಪ್ರಾಣಾಂತಿಕವಾದ ವಿಷಾನಿಲದ ಉತ್ಪಾದನೆ. ಕ್ಯಾನ್ಸರ್ ರೋಗದ ಬೀಜಾಂಕುರ ಇವಿಷ್ಟೂ ದುಷ್ಪರಿಣಾಮಗಳು ಧೂಮಪಾನದಿಂದ ತಲೆದೋರುತ್ತವೆಂದು ಧೂಮಪಾನಾಸಕ್ತರು ಮನಗಾಣಬೇಕು. ಇತರರಿಗೆ ಉಂಟಾಗುವ ಹಾನಿ, ಅನ್ಯಾಯದ ಅರಿವು ಅವರಿಗೆ ಅವಶ್ಯವಾಗಿ ಇರಬೇಕು.
ಧೂಮಪಾನದ ಹೊಗೆ ಒಳಗೆ ಹೊಕ್ಕರೂ ಕಷ್ಟ, (ಸೇದುವವರಿಗೆ) ಹೊರಗೆ ಬಿಟ್ಟರೂ ಕಷ್ಟ( ಬೇರೆಯವರಿಗೆ). ಹೊಗೆ ಮಿಶ್ರಿತ ಹವೆಯನ್ನು ಉಸಿರಾಡಿಸುವುದು ಇಂದಿನ ಪರಿಸರದಲ್ಲಿ ಧೂಮಪಾನ ವಿರೋದಿಗಳಿಗೂ ಅನಿವಾರ್ಯ. ಈ ದೃಷ್ಟಿಯಲ್ಲಿ ಅವರೂ ಧೂಮಪಾನಗಳೇ, ಇದನ್ನು ಪರೋಕ್ಷ ಧೂಮಪಾನ ಎಂದು ಕರೆಯುತ್ತಾರೆ. ಧೂಮಪಾನದ ಹೊಗೆಯಿಂದ ಸೇದುವವರಿಗಿಂತ , ಅಕ್ಕಪಕ್ಕದಲ್ಲಿರುವವರಿಗೆ ಅಪಾಯ ಹೆಚ್ಚು. ಸನ್ಯಾಸಿ ಪಾಪ ಸರ್ವರಿಗೆ ಎಂಬಂತೆ ಧೂಮಪಾನ ಮಾಡದವರು ಧೂಮಪಾನಕ್ಕೆ ಸಂಬಂದಿಸಿದ ರೋಗಗಳ ಕಪಿಮುಷ್ಟಿಯಲ್ಲಿ ಬಂದಿತರಾಗುತ್ತಾರೆ. ಪ್ರತಿವರ್ಷ 4000-5000 ಜನರು ಅಮೆರಿಕೆಯೊಂದರಲ್ಲಿಯೇ ಪರೋಕ್ಷ ಧೂಮಪಾನದಿಂದ ಅಸುನೀಗುತ್ತಾರೆ.
ಧೂಮಪಾನ ಮಾನವನ ಪ್ರತಿಯೊಂದು ಅಂಗಾಂಗಗಳ ಮೇಲೆ ಒಂದಿಲ್ಲೊಂದು ದುಷ್ಪರಿಣಾಮ ಬೀರುವುದರ ಪ್ರಯುಕ್ತ ಶರೀರ ಗೆದ್ದಲು ಹತ್ತಿದ ಮರದಂತಾಗಿ ಮೃತ್ಯುವಿಗೆ ಆಹ್ವಾನವೀಯುತ್ತದೆ. ಧೂಮಪಾನದಿಂದಾಗುವ ದುಷ್ಪರಿಣಾಮಗಳನ್ನು ಕಂಡು ಹಿಡಿಯುವ ಸಲುವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕಷ್ಟು ಸಂಶೋಧನಾ ಕಾರ್ಯ ನಡೆದಿದೆ. ಅಮೆರಿಕೆಯ ಕ್ಯಾನ್ಸರ್ ಸಂಸ್ಥೆ , ಅಮೆರಿಕೆಯ ಹೃದ್ರೋಗ ಸಂಘ, ಕೆನಡಾದ ರಾಷ್ಟ್ರೀಯ ಆರೋಗ್ಯ ಮತ್ತು ಕ್ಚೇಮಾಭಿವೃಧ್ದಿ ಇಲಾಖೆ , ಗ್ರೇಟ್ ಬ್ರಿಟನ್ನಿನ ವೈದ್ಯಕೀಯ ಸಂಶೋಧನಾ ಮಹಾಮಂಡಳಿ ಮತ್ತು ಕ್ಷಯ ರೋಗ ನಿವಾರಣಾ ಸಂಘ ಇತ್ಯಾದಿ ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ಹಲವಾರು ಅಂಶಗಳು ಬೆಳಕಿಗೆ ಬಂದಿವೆ.
ಧೂಮಪಾನದ ಹೊಗೆ ಬಾಯಿಯ ಹಾಗು ಗಂಟಲಲ್ಲಿರುವ ಲೋಳ್ಪರೆಯ ಜೀವಕೋಶಗಳಿಗೆ ಬಿಸಿಯನ್ನು ಮುಟ್ಟಿಸಿ ಅವು ನಶಿಸುವಂತೆ ಮಾಡುತ್ತದೆ. ಉರಿಯೂತವನ್ನುಂಟುಮಾಡುತ್ತದೆ. ಹೀಗಾಗಿ ಬಾಯಿಯೆಲ್ಲಾ ಕೆಂಪಾಗಿ ಖಾರ ಪದಾರ್ಥ ತಿನ್ನಲಾಗುವುದಿಲ್ಲ. ಒಮ್ಮೊಮ್ಮೆ ಹುಣ್ಣುಗಳು ಸಹ ಆಗುತ್ತವೆ. ಗಂಟಲುರಿತವಂತೂ ಸರ್ವಸಾಮಾನ್ಯ. ಇದರಿಂದ ಗಂಟಲುಕೆರೆತ , ಕೆಮ್ಮು ಕಾಣಿಸುತ್ತದೆ. ಜಠರದಲ್ಲಿಯ ಲೋಳ್ಪರೆಯ ಉರಿಯೂತದಿಂದಾಗಿ ಆಮ್ಲದ ಸ್ರವಿಕೆ ಹೆಚ್ಚಾಗಿ ಎದೆಯಲ್ಲಿ ಹುಳಸಿಡುವುದು, ಉರಿತ ಉಂಟಾಗಬಹುದು. ಹೊಟ್ಟೆಹುಣ್ಣು ಉಂಟಾಗಿ ತಿಂದಕೂಳು ದಕ್ಕದೇ ಕಕ್ಕಿ ಕಕ್ಕಿ ಕ್ಷೀಣಿಸಬಹುದು. ಹೊಟ್ಟೆಯ ಕ್ಯಾನ್ಸರಿನ ಬೆಳವಣಿಗೆಗೆ ಇದು ಅಡಿಪಾಯ ಹಾಕಬಹುದು. ಶ್ವಾಸಕೋಶದ ಕ್ಯಾನ್ಸರಿನ ಹಾವಳಿ, ಹಾಹಾಕಾರ ಧೂಮಪಾನಿಗಳಲ್ಲಿ ಅತಿ ಹೆಚ್ಚು. ಧೂಮಪಾನ ಕೇವಲ ಶ್ವಾಸಕೋಶದ ಕ್ಯಾನ್ಸರ್ ಅಷ್ಟೇ ಅಲ್ಲ, ತುಟಿಯ, ನಾಲಿಗೆಯ , ಗಂಟಲಿನ ಮತ್ತು ಅನ್ನನಾಳದ ಕ್ಯಾನ್ಸರನ್ನೂ ಸಹ ಉಂಟುಮಾಡುತ್ತದೆ. ಆದ್ದರಿಂದ ಧೂಮಪಾನ ಕೇವಲ ಶ್ವಾಸಕೋಶಗಳಿಗಷ್ಟೇ ಅಲ್ಲ , ತುಟಿ , ನಾಲಿಗೆ , ಗಂಟಲು ಮತ್ತು ಅನ್ನನಾಳಗಳಿಗೂ ಅಪಾಯಕಾರಿ.
ಸಿಗರೇಟುಗಳಲ್ಲಿ 3-4 ಬೆಂಜಪೈರಿನ್ , 1-12 ಬೆಂಜಪೈರಿಲಿನ್ ಮುಂತಾದ ಕ್ಯಾನ್ಸರ್ ಜನಕ ರಸಾಯನಿಕ ವಸ್ತುಗಳಿವೆ. ಆದ್ದರಿಂದ ಯಾವುದೇ ರೀತಿಯ ಫಿಲ್ಟರ್ ಸಿಗರೇಟನ್ನು ಸೇವಿಸಿದರೂ ಸÀಹ ಅದು ದೇಹಕ್ಕೆ ಹಾನಿಕರ ಎನ್ನುವುದರಲ್ಲಿ ಸಂದೇಹವಿಲ್ಲ. ನಿಕೋಟಿನ್ ನರಮಂಡಲಕ್ಕೆ ಮುತ್ತಿಗೆ ಹಾಕಿ , ಜೀವಕೋಶಗಳ ಚಟುವಟಿಕೆಗೆ ಅವಶ್ಯವಿರುವ ಜೀವಸತ್ವಗಳ ವಿಸರ್ಜನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಧೂಮಪಾನಿಯು ಜೀವಸತ್ವಗಳ ಕೊರತೆಯ ಖಣಿಯಾಗುವುದರಿಂದ ಕೈಕಾಲುಗಳಲ್ಲಿ ಸೆಳೆತ , ನೋವು ಕಾಣಿಸಿಕೊಂಡು ಜೋಮು ಹಿಡಿಯುತ್ತದೆ. ರಕ್ತನಾಳಗಳಲ್ಲಿ ಪೆಡಸುತನ , ಉಂಟಾಗುವುದರಿಂದ ರಕ್ತ ಸಂಚಾರಕ್ಕೆ ಅಡ್ಡಿಯೊಡ್ಡುತ್ತದೆ.
ದೇಹದ ಎಲ್ಲಾ ಭಾಗಗಳಿಗೆ ಪ್ರಾಣವಾಯುವಿನ ಪೂರೈಕೆ ಕಡಿಮೆಯಾಗುತ್ತದೆ. ವ್ಯಕ್ತಿ ಅಶಕ್ತಿಯ ಆಗರವಾಗುತ್ತಾನೆ. ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕಿರೀಟನಾಳಗಳಲ್ಲಿ ಪೆಡಸುತನ ಉಂಟಾದಾಗ ಎದೆನೋವು, ಹೃದ್ರೋಗ, ಹೃದಯ ಸೋಲುವಿಕೆ ಹಣಕಿಹಾಕಿ ಹೆದರಿಸುತ್ತವೆ. ಧೂಮಪಾನ ಮಾಡುವ ಗರ್ಭಿಣಿಯರು ಸರಾಸರಿ ಕಡಿಮೆ ತೂಕವುಳ್ಳ ಮಕ್ಕಳನ್ನು ಹಡೆಯುವರು. ಧೂಮಪಾನ ಮಾಡುವುದರಿಂದ ರಕ್ತದ ಒತ್ತಡ ಹೆಚ್ಚಿ ಪಾಶ್ರ್ವವಾಯು ಬಡಿಯುವ ಸಾಧ್ಯತೆಯುಂಟು. ಧೂಮಪಾನ ಮಾಡುವವರ ಮಕ್ಕಳು ರೋಗನಿರೋದಕ ಶಕ್ತಿಯನ್ನು ಕಳೆದುಕೊಳ್ಳುವರು. ಆದುದರಿಂದ ಧೂಮಪಾನದಿಂದಾಗುವ ಕೇಡು ಒಂದು ತಲೆಮಾರಿಗೆ ಸೀಮಿತವಾದುದಲ್ಲ. ಕಾಲಜ್ಞಾನಿ ಸರ್ವಜ್ಞ ಅಂದು ಹೇಳಿದ್ದು, ಇಂದೂ ಸಹ ಅಕ್ಷರ±ಹ ಸತ್ಯ-
ಹೊಗೆಯ ನುಂಗುವುದೊಂದು ಸುಗುಣವೆಂದನಬೇಡ
ಹೊಗೆಯ ನುಂಗುವವನ ಬಾಯಿ ಸಿಂದಿಯ
ಲಗೆಳೆಯಂತಿಹುದು ಸರ್ವಜ್ಞ”
ಕಂಪನಿಗಳ ಕೈವಾಡ
ಕೆನಡಾದ 5.5 ಮಿಲಿಯನ್ ಧೂಮಪಾನಿಗಳು , ಬ್ರಿಟನ್ನಿನ 10 ಮಿಲಿಯನ್ ಅಮೆರಿಕದ 40 ಮಿಲಿಯನ್ ಧೂಮಪಾನಿಗಳು ಈಗಾಗಲೇ ಧೂಮಪಾನಕ್ಕೆ ವಿದಾಯ ಹೇಳಿದ್ದಾರೆ. ಧೂಮಪಾನದ ವಿರುದ್ದ ಸಮರ ಸಾರಿದ್ದಾರೆ. ಈ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಧೂಮಪಾನ ವಿರೋಧಿ ಚಳುವಳಿ ಜಗತ್ತಿನ ನಾನಾ ಭಾಗಗಳಲ್ಲಿ ಬೆಳೆಯುತ್ತಿರುವಾಗ ತಂಬಾಕು ಉದ್ಯಮವೇನೂ ಕೈಕಟ್ಟಿ ಕೂಡಲು ಸಾಧ್ಯವಿಲ್ಲ. ವಿರೋದಿ ಪ್ರಚಾರವನ್ನು ಹತ್ತಿಕ್ಕಲು ಏನೆಲ್ಲಾ ಕಸರತ್ತು ಕಮಾಯಿ ಮಾಡುತ್ತದೆ. ಇದಕ್ಕಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತದೆ. ಅಮೆರಿಕಾದಲ್ಲಿ ಸಿಗರೇಟು ಕಂಪನಿಗಳು ತಂಬಾಕು ಪ್ರಚಾರಕ್ಕೆ ಪ್ರತಿವರ್ಷ ಖರ್ಚು ಮಾಡುವ 2500 ದಶಲಕ್ಷ ಡಾಲರು ಹಣದಲ್ಲಿ ಜಗತ್ತಿನ ಎಲ್ಲಾ ಮಕ್ಕಳಿಗೂ ಸಂಪೂರ್ಣ ರೋಗನಿರೋದಕ ಚುಚ್ಚುಮದ್ದನ್ನು ಹಾಕಿಸಬಹುದಿತ್ತು. ಸಿಗರೇಟು, ಬೀಡಿ ಕಂಪನಿಗಳ ಕಮಾಂಡರುಗಳು ಕಪ್ಪುಹಣದಲ್ಲಿ ರಾಜಕಾರಣಿಗಳನ್ನು ಖರೀದಿಸುವುದಷ್ಟೇ ಅಲ್ಲ, ಸರಕಾರದ ಅಡಿಗಲ್ಲನ್ನೇ ಬುಡಮೇಲು ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ತಂಬಾಕು ಉದ್ಯಮ ಸರಕಾರಕ್ಕೆ ಚಿನ್ನದ ಗಣಿಯಾಗಿರುವುದರಿಂದ , ಸರಕಾರಕ ಒಂದು ಕೈ ನಿಷೇಧ ತಂದರೆ ಇನ್ನೊಂದು ಕೈ ಸಡಿಲ ಮಾಡುತ್ತದೆ.
ತಂಬಾಕು ಉದ್ದಿಮೆಯ ಬುದ್ದಿಜೀವಿಗಳಿಗೆ ಮುಂದುವರಿದ ರಾಷ್ಟ್ರಗಳಲ್ಲಿಯ ಧೂಮಪಾನ ವಿರೋಧಿ ಚಳುವಳಿಯ ಬಿಸಿ ತಟ್ಟಿದಾಗ ಬೇರೆ ಕಡೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ವ್ಯೂಹಗಳನ್ನು ರಚಿಸುತ್ತವೆ. ಮೂರನೆಯ ಜಗತ್ತಿನ ದೇಶಗಳ ಮೇಲೆ ಇವರ ಕಾಕದೃಷ್ಟಿ ಬಿದ್ದಿದೆ. ಅಲ್ಲಿ ಧೂಮಪಾನವನ್ನು ಆದಷ್ಟು ಹೆಚ್ಚಿಸುವುದು ಅವುಗಳ ಪರಮಗುರಿ . ಅನಕ್ಷರತೆ, ಅಜ್ಞಾನ, ಮೂಡನಂಬಿಕೆ, ಮಡುಗಟ್ಟಿ ಮಲೆತು ನಿಂತಿರುವ ಈ ದೇಶಗಳಲ್ಲಿ ಧೂಮಪಾನದ ಅಪಾಯಗಳ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ. ಈ ದೌರ್ಬಲ್ಯವನ್ನೇ ಬಂಡವಾಳವಾಗಿ ತಂಬಾಕು ಕಂಪನಿಗಳು ಬಳಸಿಕೊಳ್ಳುತ್ತಿರುವುದರಿಂದಾಗಿ ತಂಬಾಕು ಸೇವನೆಯ ಪ್ರಮಾಣ ಪ್ರತಿಶತ 2.1 ರಷ್ಟು ಪ್ರತಿವರ್ಷ ಈ ದೇಶಗಳಲ್ಲಿ ಹೆಚ್ಚುತ್ತಿರುವುದು ಶೋಚನೀಯ.
ಸಮರದ ಸೈರನ್
ಧೂಮಪಾನದ ವಿರುದ್ದ ಸಮರ ಯಶಸ್ವಿಯಾಗಬೇಕಾದರೆ ಎಲ್ಲಾ ಹಂತಗಳಲ್ಲೂ, ಎಲ್ಲರೂ ಸಮರದ ಸೈರನ್ ಊದಿದರೆ ಮಾತ್ರ ಸಾಧ್ಯ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಹೇಳಿರುವುದು ಸ್ವಾಗತಾರ್ಹ.
1) ವೈದ್ಯರು ವೃತ್ತಿಬಾಂದವರೆಲ್ಲರೂ ತಂಬಾಕು ಸೇವನೆಯನ್ನು ಎಲ್ಲಾ ಹಂತಗಳಲ್ಲೂ ನಿಷೇಧಿಸಿ, ಉತ್ತಮ ಉದಾಹರಣೆಯಾಗಿ ನಿಲ್ಲುವರು ಎಂದು ಪ್ರತಿಜ್ಞೆ ಮಾಡಿ.
2) ಕ್ರೀಡಾಪಟುಗಳು , ಚಿತ್ರ ತಾರಾಂಗಣ “ ನೀವು ಯುವ ಜನಾಂಗದ ಆದರ್ಶಮೂರ್ತಿಗಳು, ತಂಬಾಕು ಸೇವನೆ ಬಹಿಷ್ಕರಿಸಿ, ಅವರ ಆರೋಗ್ಯ ಉತ್ತಮಪಡಿಸಲು ಸಹಕರಿಸಿ.
3) ಮಹಿಳಾ ಪತ್ರಿಕಾ ಸಂಪಾದಕರು ಧೂಮಪಾನದತ್ತ ಒಲವು ತೋರಿಸುತ್ತಿರುವ ಮಹಿಳಾ ಮನೋಭಾವವನ್ನು ಧಿಕ್ಕರಿಸುವ ಉತ್ತವ ಲೇಖನಗಳನ್ನು ಪ್ರಕಟಿಸಿ.
4) ವಾರ್ತಾ ಮತ್ತು ಪ್ರಸಾರಾಂಗ ಲಭ್ಯವಿರುವ ಎಲ್ಲಾ ಸಂಪರ್ಕ ಸಾಧನಗಳನ್ನು ಜಾಣ್ಮೆಯಿಂದ ಬಳಸಿ, “ ಧೂಮಪಾನದ ಹೊಗೆ, ್ಯಕ್ಕೆ ಹಗೆ ” ಎಂಬ ಪ್ರಜ್ಞೆ ಜನರಲ್ಲಿ ಜಾಗೃತವಾಗುವಂತೆ ಮಾಡಿ.
“5) ಸಂಸತ್ತ್ ಸದಸ್ಯರು ಪ್ರಜೆಗಳು ಧೂಮಪಾನ ಹೊಗೆರಹಿತ ಹವಾಸೇವನೆಯ ಹಕ್ಕು ಪಡೆದಿದ್ದಾರೆ, ಎಂಬುದನ್ನು ಪರಿಗಣಿಸಿ, “ಧೂಮಪಾನ ನಿಷೇಧ ಮಸೂದೆ ಕಾಯ್ದೆ “ ಕಾನೂನು ಜಾರಿಗೆ ತರುವಲ್ಲಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು.
6) ಯೋಜನಾಧಿಕಾರಿಗಳು ದೇಶದ ಆರ್ಥಿಕ ಸಂಪತ್ತನ್ನು ಸಮೃದ್ದಗೊಳಿಸುವಲ್ಲಿ, ತಂಬಾಕು ಉದ್ಯಮವನ್ನು ಅವಲಂಬಿಸದೇ ಬೇರೆ ಏರ್ಪಾಡುಗಳನ್ನು ಮಾಡುವಲ್ಲಿ , ಉಪಾಯಗಳನ್ನು ಹಾದಿಗಳನ್ನು ಹುಡುಕುವಲ್ಲಿ ತಮ್ಮ ಜಾಣ್ಮೆ ಚತುರತೆಯನ್ನು ಚಾಣಕ್ಷತನದಿಂದ ಬಳಸಿಕೊಳ್ಳಬೇಕು.
7) ಧೂಮಪಾನಿಗಳು ತಂಬಾಕು ಸೇವನೆಯನ್ನು ತ್ಯಜಿಸಬೇಕು ಕಡಿಮೆ ಮಾಡಿ ಹೋರಾಟಕ್ಕೆ ಹೆಚ್ಚಿನ ಶಕ್ತಿ ನೀಡಬೇಕು.”
8) ಸಂಘ ಸಂಸ್ಥೆಗಳು ತಂಬಾಕು ಸೇವನೆಯ ವಿರುದ್ದದ ಹೋರಾಟ ಅಡ್ಡಿ ಆತಂಕವಿಲ್ಲದೆ ಮುಂದುವರಿಯಲು ಮುಂಚೂಣಿಯಲ್ಲಿ ನಿಲ್ಲಬೇಕು
ಮುಂದುವರಿದ ದೇಶಗಳಲ್ಲಿ ಧೂಮಪಾನದ ವಿರುದ್ದ ಈಗಾಗಲೇ ಎದ್ದಿರುವ ಪ್ರಕೋಪವನ್ನು ಪ್ರಬಲಗೊಳಿಸಲು ಮೂರನೆಯ ಜಗತ್ತಿನ ರಾಷ್ಟ್ರಗಳು ಕೈಜೋಡಿಸಬೇಕು. ಸಮಾಜ, ಸಮಾಜ ಜೀವಿಗಳು ಸಕ್ರಿಯವಾಗಿ ಸಹಕರಿಸಬೇಕು. 21ನೆಯ ಶತಮಾನವನ್ನು ಧೂಮಪಾನ ಸಂಬಂದಿತ ರೋಗರುಜಿನಗಳಿಂದ ಸಂಪೂರ್ಣ ಮುಕ್ತಗೊಳಿಸುವುದು ಸಾಧ್ಯ”ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಕರೆಕೊಟ್ಟಿರುವುದು ಅರ್ಥಪೂರ್ಣವಾಗಿದೆ.
ಧೂಮಪಾನಕ್ಕೆ ವಿದಾಯ
ಮೃತ್ಯುವಿಗೆ ಆಹ್ವಾನ ನೀಡುವ ಧೂಮಪಾನ ಬಿಡಲು ಉಪಾಯ ಉಂಟೆ? ಯಾವುದಾದರೂ ಚಿಕಿತ್ಸೆ, ಔಷಧಿ ಇದೆಯೇ? ಧೂಮಪಾನ ಬಿಡಿಸಲು ಯಾವುದೇ ಔಷಧಿ ಇಲ್ಲ ಎಂಬ ಕಟು ಸತ್ಯದ ಅರಿವು ಧೂಮಪಾನಿಗಳಿಗೆ ಅವಶ್ಯ ಇರಬೇಕು. ಧೂಮಪಾನ ನಿಷೇಧ ವೈಯಕ್ತಿಕ ಮನೋನಿರ್ಧಾರ, ನೈತಿಕ ಬಲ, ಸಂಪರ್ಕ, ಸಂಸ್ಕಾರ ಸಂಸ್ಕøತಿಗಳ ಇತ್ಯಾದಿಗಳನ್ನು ಅವಲಂಬಿಸಿದೆಯೇ ಹೊರತು, ಕಾಯ್ದೆ, ಕಾನೂನು, ಕಟ್ಟುನಿಟ್ಟುಗಳ ಕಟ್ಟಳೆಗಳಿಂದ ಆಗದು ಎಂಬುದು ಖಚಿತವಾಗಿದೆ.
ಜನರಿಗೆ ಧೂಮಪಾನಗಳ ಇತಿಮಿತಿಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿ ಅದರಿಂದಾಗು ಹಾನಿ, ಅನರ್ಥಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ತಿಳುವಳಿಕೆಯಿಂದ ಮಾತ್ರ ಧೂಮಪಾನ ತೊಲಗಿಸಲು ಸಾಧ್ಯ ಎಂದು ಅರಿತ ವಿಶ್ವ ಆರೋಗ್ಯ ಸಂಸ್ಥೆ ಧೂಮಪಾನ ರಹಿತ ದಿನಾಚರಣೆಗೆ ಕರೆಕೊಟ್ಟಿದೆ. ವಿಶ್ವ ಆರೋಗ್ಯ ದಿನದಂದು ಇದನ್ನಷ್ಟು ಆಚರಿಸಿ, ಕೂಡಿದ ಜನರಿಂದ ಚಪ್ಪಾಳೆ ಗಿಟ್ಟಿಸಿ, ಪೇಪರಿನ ಮುಖಪುಟದಲ್ಲಿ ದಪ್ಪಕ್ಷರದಲ್ಲಿ ಅಚ್ಚುಹಾಕಿಸಿ ಖುಷಿಪಟ್ಟರೆ ದಿನಾಚರಣೆ ಸಾರ್ಥಕತೆಯ ಸೋಂಕನ್ನು ಸಹ ಪಡೆಯುವುದಿಲ್ಲ.ಬೆಳೆಯುವ ಮಕ್ಕಳು, ಹದಿವಯಸ್ಸಿನವರು, ಯುವಕರು ಈ ಅನಿಷ್ಟದ ಬಗ್ಗೆ ಜಾಗೃತಗೊಳ್ಳಬೇಕು. ಈ ವಿಷಯದ ಬಗ್ಗೆ ಸರಿಯಾದ ತಿಳುವಳಿಕೆ, ಮಾರ್ಗದರ್ಶನ ಮಾದರಿ ದೊಡ್ಡವರಿಂದ ಅವರಿಗೆ ದೊರೆಯಬೇಕು.
ಇದು ಒಂದು ದಿನದ ಆಚರಣೆಯಾಗದೇ ಪ್ರತಿದಿನ ಅರಿತು ಆಚರಿಸುವ ಆಚರಣೆಯಾಗಬೇಕು. ಧೂಮಪಾನದ ಚಟ ಬೆಳೆಸಿಕೊಂಡು, ಆಮೇಲೆ ಅದನ್ನು ಬಿಡಲು ಒದ್ದಾಡುವುದಕ್ಕಿಂತ , ಇದರ ಅಭ್ಯಾಸ ಅಥವಾ ಚಟ ಹತ್ತದಂತೆ ನಿವಾರೋಣಪಾಯ ಮಾಡುವುದೇ ಜಾಣತನ. ವ್ಯಕ್ತ ತನ್ನ ಮನಸ್ಸಿನ ಉದ್ವೇಗವನ್ನು ಕಡಿಮೆಮಾಡಿಕೊಳ್ಳಬೇಕು. ಮನಸ್ಸಿನ ನೆಮ್ಮದಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಮನಸ್ಸಿಗೆ ಹಿತಮಿತ ತೃಪ್ತಿಯನ್ನು ತಂದು ಕೊಡಬಲ್ಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಈ ದಿಸೆಯಲ್ಲಿ ಕೆಳಗಿನ ಸಲಹೆಗಳು ಸಹಾಯಕವಾಗುತ್ತವೆ.
1) ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು. ನಮ್ಮ ಸಾಮಥ್ರ್ಯ ಎಷ್ಟಿದೆ, ಕೊರತೆ , ನ್ಯೂನ್ಯತೆ ಏನಿದೆ ಎಂದು ತಿಳಿದು ನಮ್ಮ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ, ಕಾರ್ಯಚಟುವಟಿಕೆಗಳನ್ನು ಈ ಮಿತಿಯೊಳಗೇ ಸೀಮಿತಗೊಳಿಸಬೇಕು.
2) ಸಾಧಿಸಲಾಗದ ಗುರಿ, ಎಟುಕದ ಮಹತ್ವಕಾಂಕ್ಷೆ ಬೇಡ. ಇತರರಿಂದ ಆದಷ್ಟು ಕಡಿಮೆ ಪ್ರಮಾಣದ ನಿರೀಕ್ಷೆಯೇ ಹೆಚ್ಚು ಸುರಕ್ಷಿತ ಎಂಬುದನ್ನು ಮರೆಯಬಾರದು.
3) ಕಷ್ಟದಲ್ಲಿ ಕುಗ್ಗದೇ, ಹಿಗ್ಗಿನಲ್ಲಿ ಹಿಗ್ಗದೇ ಸಮಸ್ಯೆಯ ಪರಿಹಾರಕ್ಕೇ ಪ್ರಮಾಣಿಕ ಪ್ರಯತ್ನ ಮಾಡಿ , ಫಲಿತಾಂಶದ ಬಗ್ಗೇ ಚಿಂತಿಸದಿರುವುದು. ಆತ್ಮೀಯರೊಂದಿಗೆ ಕಷ್ಟನಷ್ಟಗಳನ್ನು ಹಂಚಿಕೊಳ್ಳುವುದು ಒಳ್ಳೆಯದು.
4) ಅತೃಪ್ತಿಯನ್ನು ದೂರಮಾಡಿ, ಆತ್ಮವಿಶ್ವಾಸ ಹಾಗು ಮನೋಬಲವನ್ನು ವೃದ್ದಿಸಿಕೊಳ್ಳಬೇಕು. ಮೈಮನಸ್ಸುಗಳು ವಿರಮಿಸುವ ಕಲೆಯನ್ನ ಕರಗತಮಾಡಿಕೊಳ್ಳಬೇಕು.
5) ಓದು, ಸಂಗೀತ, ಲಲಿತಕಲೆಗಳು ವ್ಯಾಯಾಮ ಆಟ, ಯೋಗ, ಧ್ಯಾನ ಇತರ ಆರೋಗ್ಯಕರ ಹವ್ಯಾಸಗಳ ಮೂಲಕ, ವಿರಮಿಸಲು ಮನೋರಂಜನೆ ಪಡೆಯಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು.
6) ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಧೂಮಪಾನ ಮಾಡುವುದನ್ನು ಅಪರಾದವೆಂದು ಸಾರಬೇಕು. ಇಂಗ್ಲೆಂಡ್, ಅಮೆರಿಕ , ಫ್ರಾನ್ಸ್ ಈ ನಿಟ್ಟಿನಲ್ಲಿ ಈಗಾಗಲೇ ದಿಟ್ಟ ಹೆಜ್ಜೆಯನ್ನಿಟ್ಟಿವೆ. ನಾವಿಂದು ಅದನ್ನು ತೀವ್ರವೇ ಅನುಸರಿಸುವುದು ಒಳ್ಳೆಯದು.
Also Read: ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ
ಸಿಗರೇಟು ಬೀಡಿ ತಂಬಾಕು ಸೇವನೆಗಳಿಂದ ಸರಕಾರಕ್ಕೆ ಕೋಟಿಗಟ್ಟಲೆ ಆದಾಯವಿದೆ. ಕೇವಲ ಹಣಕ್ಕಾಗಿ ಸರಕಾರ ಜನರ ಬದುಕನ್ನೇ ಸುಟ್ಟುಬಿಡುತ್ತಿರುವುದು ಅಮಾನವೀಯ. ಧೂಮಪಾನವನ್ನು ಜಾಹೀರಾತಿನ ಮೂಲಕ ಸಿನಿಮಾದ ಮೂಲಕ ವೈಭವೀಕರಿಸುವುದನ್ನು ನಿಲ್ಲಿಸಬೇಕು. ಪ್ರತಿಯೊಬ್ಬರೂ ಈ ಪಿಡುಗನ್ನು ಗಂಭೀರವಾಗಿ ಪರಿಗಣಿಸಿ, ಎಚ್ಚರದಿಂದ ಅರ್ಥವತ್ತಾಗಿ ನಡೆದುಕೊಂಡರೆ, ಮಾತ್ರ ಧೂಮಪಾನ ನಿಷೇಧ ಹಾಗು ನಮ್ಮ ಆರೋಗ್ಯದ ಉಳಿವು ಸಾಧ್ಯ. ಈ ಪಿಡುಗಿನಿಂದ ಮೇಲೆ ಬಾರದ ರಾಷ್ಟ್ರಕ್ಕೆ ಖಂಡಿತ ಭವಿಷ್ಯವಿಲ್ಲ.
ಡಾ|| ಕರವೀರಪ್ರಭು ಕ್ಯಾಲಕೊಂಡ.
ಕ್ಯಾಲಕೊಂಡ ಆಸ್ಪತ್ರೆ,
ಕಾಲೇಜ ರೋಡ.
ಬಾದಾಮಿ-587201
ಜಿಲ್ಲಾ: ಬಾಗಲಕೋಟ.
ಮೋ: 9448036207
ಇ-ಮೇಲ್: drkvkyalakond@gmail.com