ದೀರ್ಘಕಾಲೀನ ರೋಗಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮಹತ್ವ ಹೆಚ್ಚಿನದು. ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಮುದ್ರೆಗಳು ಇವೆಲ್ಲಕ್ಕೂ ಶಾಶ್ವತ ಪರಿಹಾರವನ್ನು ಹೇಳುತ್ತವೆ.
ಬೊಜ್ಜು, ಮಧುಮೇಹ, ಆಮಮಾತ, ಸಂಧಿವಾತ, ಚರ್ಮದ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸಂತಾನ ಹೀನತೆ, ಐಬಿಎಸ್ ಮುಂತಾದ ದೀರ್ಘಕಾಲಿನ ಖಾಯಿಲೆಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವರದಾನವಾಗಿವೆ. ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಮುದ್ರೆಗಳು ಇವೆಲ್ಲಕ್ಕೂ ಶಾಶ್ವತ ಪರಿಹಾರವನ್ನು ಹೇಳುತ್ತವೆ. ಇವು ಇಂತಹ ಹಲವಾರು ದೀರ್ಘಕಾಲಿನ ಖಾಯಿಲೆಗಳನ್ನು ಬುಡಸಮೇತವಾಗಿ ನಿವಾರಿಸುತ್ತವೆ. ಹಾಗಾಗಿ ಇಂದು ಈ ಚಿಕಿತ್ಸಾ ಪದ್ಧತಿಗಳ ಮಹತ್ವ ಮತ್ತು ದೀರ್ಘಕಾಲೀನ ಖಾಯಿಲೆಗಳಲ್ಲಿ ಯಾವ ರೀತಿಯಲ್ಲಿ ಇವು ಸಹಾಯಕ ಎಂಬುದನ್ನು ತಿಳಿದುಕೊಳ್ಳೋಣ. ಇಂತಹ ಸಮಸ್ಯೆಗಳಲ್ಲಿ ಆಹಾರ ಕ್ರಮ ಅಥವಾ ಪಥ್ಯ ಚಿಕಿತ್ಸೆಯು ಅಡಿಪಾಯವಾದರೆ ಯೋಗವು ಕಂಬಗಳಾಗಿ, ಆಯುರ್ವೇದ ಚಿಕಿತ್ಸೆಗಳು ಮೇಲ್ಚಾವಣಿಯಾಗಿ ನಮಗೆ ಆರೋಗ್ಯದ ಸೂರನ್ನು ನೀಡುತ್ತವೆ.
ಬೊಜ್ಜು, ಮಧುಮೇಹ, ಪಿಸಿಓಡಿಯಂತಹ ಖಾಯಿಲೆಗಳಲ್ಲಿ ಆಹಾರವೇ ಔಷಧವಾಗಬಲ್ಲದು ಎಂದರೆ ತಪ್ಪಾಗಲಾರದು. ಸರಿಯಾದ ಆಹಾರ ಪದ್ಧತಿ ಮತ್ತು ಆಯಾ ಖಾಯಿಲೆಗಳಲ್ಲಿ ನಾವು ಹೇಳುವ ಆಹಾರ ಕ್ರಮಗಳನ್ನು ಪಾಲಿಸಿದರೆ ಈ ಸಮಸ್ಯೆಗಳನ್ನು ನಿವಾರಿಸುವುದು ಕಷ್ಟಕರವಲ್ಲ. ಉದಾಹರಣೆಗೆ ಕಾರ್ಬೋಹೈಡ್ರೇಟ್ ರಹಿತವಾದ, ಪ್ರೋಟೀನ್ ಮತ್ತು ಕೊಬ್ಬು ಹೆಚ್ಚಿರುವ ಆಹಾರ ಕ್ರಮ ಮತ್ತು ವಿವಿಧ ರೀತಿಯ ಉಪವಾಸಗಳನ್ನು ಅನುಸರಿಸಿ ನೂರಾರು ಜನ ಇಂತಹ ಖಾಯಿಲೆಗಳಿಂದ ಶಾಶ್ವತವಾಗಿ ಬಿಡುಗಡೆ ಕಂಡಿದ್ದಾರೆ. ಜೊತೆಗೆ ಸಣ್ಣ ನೆಗಡಿಯಿಂದ ಹಿಡಿದು ಕ್ಯಾನ್ಸರ್ ನಂತಹ ರೋಗದವರೆಗೆ ಹಲವು ಖಾಯಿಲೆಗಳು ಕಡಿಮೆಯಾಗಲು ಅಥವಾ ಹೆಚ್ಚಾಗಲು ಆಹಾರ ತುಂಬಾ ದೊಡ್ಡ ಕಾರಣವಾಗುತ್ತದೆ. ಹಾಗಾಗಿ ನಾವು ಎಂತಹ ಆಹಾರವನ್ನು ಸೇವಿಸಬೇಕು, ಎಂಥವನ್ನು ಸೇವಿಸಬಾರದು ಎಂಬುದನ್ನು ಪ್ರಕೃತಿ ಚಿಕಿತ್ಸೆ ಅಥವಾ ಆಯುರ್ವೇದದ ಶಾಸ್ತ್ರಗಳು ಹೇಳುತ್ತವೆ. ಇವುಗಳನ್ನು ಸರಿಯಾಗಿ ಪಾಲಿಸಿದರೆ ಸಾಕು, ಬಹುತೇಕ ರೋಗಗಳು ಬರುವುದೇ ಇಲ್ಲ. ಸೋರಿಯಾಸಿಸ್, ಡರ್ಮಟೈಟಿಸ್ ಮುಂತಾದ ಚರ್ಮದ ಖಾಯಿಲೆಗಳು, ಮೈಗ್ರೇನ್, ನಿದ್ರಾಹೀನತೆ, ಬೊಜ್ಜು ಮುಂತಾದ ಸಮಸ್ಯೆಗಳಲ್ಲಿ ಮಣ್ಣಿನ ಚಿಕಿತ್ಸೆ, ಜಲ ಚಿಕಿತ್ಸೆ, ಶಿರೋಧಾರಾ, ಮಸಾಜ್ ನಂತಹ ಪ್ರಕೃತಿ ಚಿಕಿತ್ಸೆಗಳು ತುಂಬಾ ಫಲಪ್ರದವಾಗಿವೆ. ಯಾವುದೇ ಔಷಧವಿಲ್ಲದೇ ಅಡ್ಡ ಪರಿಣಾಮಗಳಿಲ್ಲದೆ ಬುಡಸಹಿತ ಇಂತಹ ರೋಗಗಳನ್ನು ಕಿತ್ತೆಸೆಯುವ ಸಾಮರ್ಥ್ಯವನ್ನು ಹೊಂದಿವೆ.
ಅಷ್ಟಾಂಗ ಯೋಗವಂತೂ ಮನುಷ್ಯನ ಉದ್ಧಾರಕ್ಕಾಗಿಯೇ ಇರುವುದು ಎಂದರೆ ತಪ್ಪಾಗಲಾರದು.ಯೋಗದ ಅಂಗಗಳಾದ ಆಸನ, ಪ್ರಾಣಾಯಾಮಗಳಿಂದ ಸೊಂಟ ನೋವು, ಮಂಡಿ ನೋವು, ಅಸ್ತಮಾ, ಮೈಗ್ರೇನ್, ನಿದ್ರಾಹೀನತೆ, ಕಣ್ಣು-ಕಿವಿಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಅಲರ್ಜಿ, ಮಲಬದ್ಧತೆಗಳಂತಹ ಹಲವು ರೀತಿಯ ರೋಗಗಳನ್ನು ಗುಣಪಡಿಸಿಕೊಳ್ಳಬಹುದು ಮತ್ತು ಸರಿಯಾಗಿ ನಿತ್ಯವೂ ಅಭ್ಯಾಸ ಮಾಡುವವರಿಗೆ ಯಾವ ರೋಗವೂ ಬರಲಾರದು. ಇಂತಹ ಅದ್ಭುತ ವಿಜ್ಞಾನವನ್ನು ನಮ್ಮ ದೇಶ ಜಗತ್ತಿಗೆ ಕೊಟ್ಟಿದೆ. ಇದನ್ನು ನಾವು ಸರಿಯಾಗಿ ಬಳಸಿಕೊಂಡರೆ ಸದಾ ನಿರೋಗಿಗಳಾಗಿ ಬದುಕಲು ಸಾಧ್ಯವಿದೆ.
ಆಯುರ್ವೇದದಲ್ಲಿ ಹೇಳಿದ ದಿನಚರ್ಯ, ಋತುಚರ್ಯ ಮತ್ತು ಹಲವು ರೀತಿಯ ರೋಗನಿರೋಧಕ ವಿಧಾನಗಳನ್ನು ನಾವು ಸರಿಯಾಗಿ ಪಾಲಿಸಿದರೆ ರೋಗವೇ ಬರುವುದಿಲ್ಲ. ಇನ್ನು ಬಂದರೂ ಕೂಡ ಪ್ರಾರಂಭಿಕ ಹಂತದಲ್ಲಿಯೇ ಆಯುರ್ವೇದ ಔಷಧಗಳ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬಹುದು. ರೋಗ ಉಲ್ಬಣಗೊಂಡರೂ ಪಂಚಕರ್ಮ ಚಿಕಿತ್ಸೆಗಳ ಮೂಲಕ ಅವುಗಳನ್ನು ನಿವಾರಿಸಲು ಸಾಧ್ಯವಿದೆ. ಹಾಗಾಗಿ ಆಮವಾತ, ಸೋರಿಯಾಸಿಸ್, ಸಂತಾನ ಹೀನತೆ, ಅಸ್ತಮಾ, ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪಾರ್ಶ್ವವಾಯು ಹೀಗೆ ನೂರಾರು ದೀರ್ಘಕಾಲೀನ ಖಾಯಿಲೆಗಳನ್ನು ಪಂಚಕರ್ಮ ಚಿಕಿತ್ಸೆಗಳಿಂದ ಗುಣಪಡಿಸಲು ಸಾಧ್ಯವಿದೆ. ಅಷ್ಟೇ ಅಲ್ಲದೇ ನಿಯಮಿತವಾಗಿ ಪಂಚಕರ್ಮ ಚಿಕಿತ್ಸೆಗಳನ್ನು ಪಡೆಯುವವರಿಗೆ ಸುಲಭದಲ್ಲಿ ರೋಗ ಬರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮೂಲಕ ನಾವು ಬಹುತೇಕ ಎಲ್ಲಾ ದೀರ್ಘಕಾಲೀನ ಖಾಯಿಲೆಗಳನ್ನು ಬರದಂತೆ ತಡೆಯಬಹುದು; ಬಂದರೂ ಸುಲಭವಾಗಿ ನಿವಾರಿಸಿಕೊಳ್ಳಬಹುದು.
Also read: ಹೊಟ್ಟೆಯ ಬೊಜ್ಜ