ದಂತ ಸಂಬಂಧಿ ರೋಗಗಳು ಮಧುಮೇಹಿ ರೋಗಿಗಳಲ್ಲಿ ಹೆಚ್ಚು

ದಂತ ಸಂಬಂಧಿ ರೋಗಗಳು ಮಧುಮೇಹಿ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ. 

ದಂತ ಸಂಬಂಧಿ ರೋಗಗಳು ಮಧುಮೇಹಿ ರೋಗಿಗಳಲ್ಲಿ ಹೆಚ್ಚು

ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗ್ರೀಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ ಎಂಬಾತ ಡಯಬಿಟಿಸ್ ಇನ್‍ಸಿಪಿಡಸ್ (ಅತಿಯಾದ ಮೂತ್ರ) ಮತ್ತು ಡಯಬಿಟಿಸ್ ಮೆಲಿಟಸ್ (ಸಿಹಿಮೂತ್ರ) ಎಂದು ಎರಡು ಪ್ರತ್ಯೇಕ ರೋಗಗಳೆಂದು ಹೇಳಿದನು. ಒಟ್ಟಿನಲ್ಲಿ ಮಧುಮೇಹ, ಸಿಹಿಮೂತ್ರ, ಸಕ್ಕರೆ ಖಾಯಿಲೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಆಧುನಿಕ ಜಗತ್ತಿಗೆ ಈ ಶತಮಾನದ ಕೊಡುಗೆ ಎಂದರೂ ತಪ್ಪಲ್ಲ.

ಭಾರತ ದೇಶಕ್ಕೂ ಮಧುಮೇಹ ರೋಗಕ್ಕೂ ಬಹಳ ನೆಂಟಸ್ತಿಕೆ ಇದೆ ಅನ್ನುವುದು ಬಹಳ ಕಳವಳಕಾರಿ ಅಂಶ. ಇನ್ನೊಂದೆರಡು ವರ್ಷಗಳಲ್ಲಿ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಭಾರತಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇದೆ. ಸಧ್ಯಕ್ಕೆ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಬಾರತೀಯರ ಪಾಲು ಶೇಕಡಾ 20-25ಕ್ಕೂ ಹೆಚ್ಚು. ಸರಿಸುಮಾರು ನಾಲ್ಕು ಕೋಟಿ ಭಾರತೀಯರು ಮಧುಮೇಹಿಗಳು ಎಂಬುದು ಗಮನಾರ್ಹ ಅಂಶ. ಈ ನಾಲ್ಕು ಕೋಟಿಯಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಕೂಡಾ ಇನ್ನೊಂದು ಕಳವಳಕಾರಿ ಅಂಶ (ಸುಮಾರು 50 ಶೇಕಡಾ ಯುವಜನತೆ ಬಿಸಿರಕ್ತದ ಜೊತೆಗೆ ಸಿಹಿರಕ್ತವನ್ನು ಹೊಂದಿರುವುದು ಬಹಳ ಅವಮಾನಕರವಾದ ಬೆಳವಣಿಗೆ.)

ಇದರಿಂದಾಗಿ ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.. ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅಣ್ಣ ತಮ್ಮಂದಿರಂತಯೇ!!! ವಯಸ್ಸಾದಂತೆ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ. 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಜಾಸ್ತಿ ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ.

ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇಕಡಾ 75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು. ಈ ಕಾರಣಕ್ಕಾಗಿಯೇ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗಗಳ ಬಗ್ಗೆ ಮತ್ತು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ, ಅದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸದುದ್ದೇಶವನ್ನು ಹೊಂದಿದೆ.

ಮಧುಮೇಹ ಮತ್ತು ದಂತ ಆರೋಗ್ಯ

ನಮ್ಮ ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಾಗಳು ನಮ್ಮ ಬಾಯಿಯೊಳಗೆ ಮನೆ ಮಾಡಿಕೊಂಡು ನಿರುಪದ್ರವಿಯಾಗಿ ಬಾಳಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋದಾಗ ನಿರುಪದ್ರವಿ ರೋಗಾಣುಗಳು ತಮ್ಮ ನೈಜ ಬುದ್ಧಿಯನ್ನು ತೋರಿಸಿಕೊಂಡು ವಸಡಿನ ತೊಂದರೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಧುಮೇಹಿ ರೋಗಿಗಳಲ್ಲಿ ನ್ಯೂಟ್ರೋಫಿಲ್ ಎಂಬ ಬಿಳಿರಕ್ತಕಣ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದರ ರಚನೆಯಲ್ಲಿ ವ್ಯತ್ಯಾಸವಿರುತ್ತದೆ. ಈ ಕಾರಣದಿಂದಲೇ ಮಧುಮೇಹಿ ರೋಗಿಗಳಲ್ಲಿ ಗಾಯ ಒಣಗಲು ಬಹಳ ಸಮಯ ಹಿಡಿಯುತ್ತದೆ. ಮಧುಮೇಹಿ ರೋಗಿಗಳಲ್ಲಿ ಈ ಕಾರಣದಿಂದಾಗಿ ದಂತ ಸಂಬಂಧಿ ರೋಗಗಳು ಹೆಚ್ಚು ಕಂಡು ಬರುತ್ತದೆ.

diabetes-and-teeth

1. ವಸಡಿನ ತೊಂದರೆ : ಮಧುಮೇಹಿ ರೋಗಿಗಳ ವಸಡಿನಲ್ಲಿ ಪದೇ ಪದೇ ಸೋಂಕು ಉಂಟಾಗಿ, ಕೀವು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪಯೋರಿಯ ಎಂಬ ವಸಡಿನ ರೋಗ ಸುಮಾರು 80 ಶೇಕಡಾ ಮಧುಮೇಹಿಗಳಲ್ಲಿ ಕಂಡು ಬರುತ್ತದೆ.

2. ಬಾಯಿ ವಾಸನೆ : ಮಧುಮೇಹಿ ರೋಗಿಗಳು ಬಹಳ ಅಸಹ್ಯವಾದ ಬಾಯಿ ವಾಸನೆಯಿಂದ ಬಳಲುತ್ತಾರೆ. ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿಕೊಂಡು ವಸಡಿನ ನಡುವೆ ಕೀವು ತುಂಬಿಕೊಂಡು ಬಾಯಿಯಿಂದ ಅಸಹನೀಯವಾದ ವಾಸನೆ ಬರುತ್ತಿರುತ್ತದೆ.

3. ಪದೇ ಪದೇ ಸೋಂಕು : ದೇಹದಲ್ಲಿನ ರಕ್ಷಣಾ ಪ್ರಕ್ರಿಯೆ ಸರಿಯಾಗಿ ಸ್ಪಂಧಿಸದ ಕಾರಣದಿಂದ ಬಾಯಿಯಲ್ಲಿ ಪದೇ ಪದೇ ಸೋಂಕು ಉಂಟಾಗುವ ಸಾಧ್ಯತೆ ಮಧುಮೇಹ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ.

4. ಗಾಯ ಒಣಗುವುದು ನಿಧಾನ : ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಜಾಸ್ತಿಯಾಗಿ, ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿದಾಗ ಒಂದು ವಾರದಲ್ಲಿ ಒಣಗಬೇಕಾದ ಗಾಯ ನಾಲೈದು ವಾರಗಳಾದರೂ ಒಣಗುವುದೇ ಇಲ್ಲ. ಹಲ್ಲು ಕೀಳುವಾಗ ಮಧುಮೇಹ ರೋಗಿಗಳಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು. ಆಂಟಿಬಯೋಟಿಕ್ ಔಷಧಿ ನೀಡಿ, ದೇಹದಲ್ಲಿನ ಗ್ಲೂಕೋಸ್ ಅಂಶವನ್ನು ಔಷಧಿಗಳಿಂದ ನಿಯಂತ್ರಿಸಿ ಹಲ್ಲು ಕಿತ್ತ ಜಾಗದಲ್ಲಿ ಸೋಂಕು ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.

5. ಹಲ್ಲು ಅಲುಗಾಡುವುದು : ಮಧುಮೇಹ ರೋಗಿಗಳ ವಸಡು ಬಹಳ ಕ್ಷಿಣವಾಗಿರುತ್ತದೆ ಮತ್ತು ಹಲ್ಲಿನ ಸುತ್ತಲಿರುವ ಎಲುಬು ಬಹಳ ಬೇಗ ಕರಗುತ್ತದೆ. ಈ ಕಾರಣದಿಂದ ಮಧುಮೇಹಿ ರೋಗಿಗಳಲ್ಲಿ ಹೆಚ್ಚಾಗಿ ಹಲ್ಲುಗಳು ಸದೃಢವಾಗಿರುವುದಿಲ್ಲ. ಹಲ್ಲುಗಳು ನಿಧಾನವಾಗಿ ಅಲುಗಾಡಲು ಆರಂಭವಾಗಿ ಕ್ರಮೇಣ ಬಿದ್ದು ಹೋಗುತ್ತದೆ. ನಿರಂತರ ವೈದ್ಯಕೀಯ ಸಲಹೆ, ಶುಶ್ರೂಷೆ ಮತ್ತು ಬಾಯಿ ಸ್ವಚ್ಚಗೊಳಿಸುವುದರ ಮುಖಾಂತರ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

6. ಹೆಚ್ಚು ರಕ್ತಸ್ರಾವದ ಸಾಧ್ಯತೆ : ಬಹಳ ವರ್ಷಗಳಿಂದ ಮಧುಮೇಹ ನಿಯಂತ್ರಿಸಲು ಔಷಧಿ ತೆಗೆದುಕೊಂಡಿದ್ದಲ್ಲಿ, ಔಷಧಿಯ ಅಡ್ಡ ಪರಿಣಾಮದಿಂದಾಗಿ ರಕ್ತದಲ್ಲಿನ ಬಿಳಿ, ಕೆಂಪು ರಕ್ತಕಣಗಳು ಮತ್ತು ರಕ್ತ ತಟ್ಟಿಗಳು ಸಂಖ್ಯೆ ಕ್ಷಿಣವಾಗಿ ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಚಿಕಿತ್ಸೆ ಹೇಗೆ?

ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲ ಹೀಗೆ ಎಲ್ಲವನ್ನು ಆಪೋಶನ ತೆಗೆದುಕೊಂಡು, ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ‘ಮಧುಮೇಹ’ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ. ಮಧುಮೇಹ ರೋಗದ ಚಿಕಿತ್ಸೆಯ ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡಿ. ನೀವು ಯಾವತ್ತೂ ನಿಮ್ಮ ಇಚ್ಛೆಯಂತೆ ಅಥವಾ ಅನುಕೂಲಕ್ಕೆ ತಕ್ಕಂತೆ ಔಷಧಿಗಳನ್ನು ಸೇವಿಸಬಾರದು.

diabetes-day

ಸ್ವಯಂ ಮದ್ದುಗಾರಿಕೆ ಮತ್ತು ನಿಮ್ಮಿಷ್ಟದಂತೆ ಔಷಧಿಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಯಾವತ್ತೂ ಅಪಾಯಕಾರಿ. ಪದೇ ಪದೇ ವೈದ್ಯರನ್ನು ಬದಲಿಸಬೇಡಿ. ನಿಮ್ಮ ಕೆಲಸ ಏನಿದ್ದರೂ ದೇಹದ ತೂಕವನ್ನು ನಿಯಂತ್ರಿಸುವುದು, ಸರಿಯಾದ ಸಮತೋಲಿತ ವೈದ್ಯರು ತಿಳಿಸಿದ ಆಹಾರವನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಮತ್ತು ನಿರಂತರ, ನಿಯಮಿತ ದೈಹಿಕ ವ್ಯಾಯಾಮ ಮಾಡಿಕೊಂಡು ದೇಹದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸೀಮಿತವಾಗಿರಬೇಕು. ವೈದ್ಯರ ಸಲಹೆ ಇಲ್ಲದೆ ನಿಮ್ಮ ಮಧುಮೇಹ ರೋಗದ ಮಾತ್ರೆಯ ಪ್ರಮಾಣ ಮತ್ತು ಇನ್ಸುಲಿನ್ ರಸದೂತದ ಪ್ರಮಾಣವನ್ನು ಬದಲಾಯಿಸಬಾರದು. ಚಿಕಿತ್ಸೆಯ ಹೊಣೆಗಾರಿಕೆಯನ್ನು ನಿಮ್ಮ ವೈದ್ಯರಿಗೆ ಬಿಟ್ಟುಕೊಟ್ಟಲ್ಲಿ, ಹೆಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು. ಅದರಲ್ಲಿಯೇ ನಿಮ್ಮ ಹಿತ ಮತ್ತು ಆರೋಗ್ಯದ ಗುಟ್ಟು ಅಡಗಿದೆ.

ಮಧುಮೇಹ ನಿಯಂತ್ರಿಸುವುದು ಹೇಗೆ?

1. ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತದೆ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯು ರಕ್ತದಲ್ಲಿರುವ ಗ್ಲೂಕೋಸ್‍ನಿಂದ ಸ್ನಾಯುಗಳಿಗೆ ಸರಬರಾಜು ಆಗುತ್ತದೆ. ವ್ಯಾಯಾಮದಿಂದ ಜೀವಕೋಶಗಳು ಚಯಾಪಚಯ ಕ್ರಿಯೆಗಳು ವೇಗವಾಗುತ್ತ ಹಾಗಾದಾಗ ಹೆಚ್ಚಿನ ಕ್ಯಾಲರಿ (ಶಕ್ತಿ)ಯ ಅವಶ್ಯಕತೆ ಉಂಟಾಗಿ, ಗ್ಲೂಕೋಸ್‍ನಿಂದ ಶಕ್ತಿ ದೊರಕಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.

2. ನೀವು ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲಿನ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‍ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ಕೇವಲ ಶರ್ಕರ ಪಿಷ್ಟಗಳು ಹೆಚ್ಚಾಗಿರುವ ಆಹಾರ ಒಳ್ಳೆಯದಲ್ಲ. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನೀವು ಸೇವಿಸುವ ಆಹಾರ ನಿಮ್ಮ ದೇಹದ ಗಾತ್ರ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿರಲಿ. ಆಹಾರ ಬರೀ ರುಚಿಗಾಗಿ ಇರದೆ, ದೇಹದ ಆರೋಗ್ಯಕ್ಕೆ ಪೂರಕವಾಗಿರಲಿ ನಾರುಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.

3. ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾಗಬಹುದು. ಬಿಡುವಿಲ್ಲದ ಒತ್ತಡದ ದೈಹಿಕ ವ್ಯಾಯಾಮವಿಲ್ಲದ ಜೀವನ ಶೈಲಿಯು ‘ಮಧುಮೇಹ’ ರೋಗಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹಕ್ಕೆ ಮತ್ತು ಮನಸ್ಸಿಗೂ ಹಿತವಾದ ಸಂಗೀತ ಆಲಿಸುವುದು, ಯೋಗ, ಧ್ಯಾನ, ಪ್ರಾಣಯಾಮ ಇತ್ಯಾದಿಗಳಿಂದ ಮಾನಸಿಕ ಉದ್ವೇಗ, ತುಮುಲತೆಯನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿ, ಶಾಂತಿ ದೊರೆತಲ್ಲಿ ಮಧುಮೇಹ ಮಾತ್ರÀ್ರವಲ್ಲ ಇನ್ನೂ ಹತ್ತು ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು.

4. ತಜ್ಞ ವೈದ್ಯರ ಸಲಹೆಯಂತೆ ಚಾಚುತಪ್ಪದೆ ಔಷಧಿಯನ್ನು ಸೇವಿಸಬೇಕು. ಔಷಧಿಗಳ ಪ್ರಮಾಣ ಮತ್ತು ಹೊತ್ತುಗಾರಿಕೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಚಿಕಿತ್ಸೆಯ ಉದ್ದೇಶ ರೋಗವನ್ನು ಗುಣಪಡಿಸುವುದು ಆಗಿರದೆ, ರೋಗವನ್ನು ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿದಲ್ಲಿ ಬರಬಹುದಾದ ಎಲ್ಲಾ ಅಡ್ಡ ಪರಿಣಾಮಗಳನ್ನು ಮತ್ತು ಅಪಾಯವನ್ನು ತಡೆಗಟ್ಟಬಹುದು.

ಆರೋಗ್ಯಪಾಲನೆಯಲ್ಲಿ ಶುಶ್ರೂಶಕಿಯರು ಬಹು ಮುಖ್ಯ ಭೂಮಿಕೆ

ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನವೆಂಬರ್ 14 ರಂದು ಇನ್‍ಸುಲಿನ್ ಕಂಡು ಹಿಡಿದ ಶ್ರೀ ಸರ್ ಪ್ರೆಡ್ರಿಕ್ ಬಂಟಿಂಗ್ ಇವರು ಹುಟ್ಟಿದ ದಿನವಾಗಿದೆ. 2006 ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಗಿತ್ತು. 2020 ನವೆಂಬರ್ 14 ರ ಈ ಆಚರಣೆಯ ಧ್ಯೇಯವಾಕ್ಯ ‘ಶುಶ್ರೂಷಕಿಯರು ಮತ್ತು ಮಧುಮೇಹ’ ಎಂಬುದಾಗಿದೆ. ಮಧುಮೇಹ ರೋಗದಿಂದ ಬಳಲುತ್ತಿರುವವರ ಆರೋಗ್ಯಪಾಲನೆಯಲ್ಲಿ ಶುಶ್ರೂಶಕಿಯರು ಬಹು ಮುಖ್ಯ ಭೂಮಿಕೆ ವಹಿಸುತ್ತಿದ್ದು, ಇದರ ಬಗ್ಗೆ ಜನರಲ್ಲಿ ಅತೀ ಹೆಚ್ಚು ತಿಳುವಳಿಕೆ ಮೂಡಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಇದೇ ರೀತಿ ನಮ್ಮ ಭಾರತ ದೇಶದಲ್ಲಿ ನವೆಂಬರ್ ತಿಂಗಳನ್ನು ಮಧುಮೇಹ ತಿಳುವಳಿಕಾ ತಿಂಗಳು ಎಂದೂ ಆಚರಿಸಲಾಗುತ್ತಿದೆ.

nursing

ಚೀನ ದೇಶವೊಂದರಲ್ಲಿಯೇ ಅತೀ ಹೆಚ್ಚು 116 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಎಪ್ಪತ್ತೇಳು (77) ಮಿಲಿಯನ್ ಆಗಿದ್ದು, 2045 ರಲ್ಲಿ ಈ ಸಂಖ್ಯೆ 135 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿ 2020 ಹೊತ್ತಿಗೆ ಸುಮಾರು 460 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಸಾವಿಗೆ ಕಾರಣವಾಗುವ ರೋಗಿಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದೆ. ಇದರಲ್ಲಿ ಟೈಪ್ –2 ಡಯಾಬಿಟಿಸ್ 90 ರಿಂದ 95 ಶೇಕಡಾ ಜನರಲ್ಲಿ ಕಂಡು ಬಂದಿದೆ. 5 ರಿಂದ 10 ಶೇಕಡಾ ಮಂದಿಯಲ್ಲಿ ಟೈಪ್-1 ಡಯಾಬಿಟಿಸ್ ಕಂಡು ಬರುತ್ತದೆ. ಐರ್ಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳು ಕನಿಷ್ಟ 5 ಶೇಕಡಾಕ್ಕಿಂತಲೂ ಕಡಿಮೆ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಟೈಪ್-4 ಡಯಾಬಿಟಿಸ್ ಅನ್ನು ಹೆಸರಿಸಿದ್ದು, ಇಳಿ ವಯಸ್ಸಿನ ನೀಳಕಾಯದ ವಯಸ್ಕರಲ್ಲಿ, ಇನ್‍ಸುಲಿನ್ ಪ್ರತಿರೋಧ ಬಳಸಿಕೊಂಡ ಜನರಲ್ಲಿ ಈ ರೀತಿ ಮಧುಮೇಹ ಬರುತ್ತದೆ ಎಂದು ತಿಳಿದುಬಂದಿದೆ.

ಕೊನೆಮಾತು

ಮಧುಮೇಹ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ ಮುಂದೆ ಬಂದೊದಗುವ ಮರಣಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ರೋಗವನ್ನು ಹತೋಟಿಯಲ್ಲಿಡುವ ಮತ್ತು ರೋಗದಿಂದಾಗುವ ಅಪಾಯಗಳನ್ನು ನಿಭಾಯಿಸುವುದಕ್ಕೆ ಹೆಚ್ಚಿನ ಆದ್ಯತೆ ಅತೀ ಅವಶ್ಯಕ. ರೋಗಗಳ ರಾಜ್ಯದಲ್ಲಿ ಅನಭಿಷಿಕ್ತ ದೊರೆಯಾಗಿ ರಾರಾಜಿಸುತ್ತಿರುವ ಮಧುಮೇಹವನ್ನು ನಿರ್ಲಕ್ಷಿಸದೇ, ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮಾತ್ರ ಈ ರೋಗದ ಅಟ್ಟಹಾಸಕ್ಕೆ ಲಗಾಮು ಹಾಕಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಹುಟ್ಟುತ್ತಲೇ ಮಧುಮೇಹಿಗಳಾಗಿರಬಹುದು ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ರೋಗ ಮನುಕುಲದ ಬಹುದೊಡ್ಡ ವೈರಿಯಾಗುವುದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ.

Dr.-Murali-Mohana-Chuntaru.

ಡಾ|| ಮುರಲೀ ಮೋಹನ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323
ದೂ: 04998-273 544, 235 111  ಮೊ: 98451 35787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!