ಡಿ ಆ್ಯಂಡ್ ಸಿ – ಗರ್ಭಕೋಶದ ತೊಂದರೆಗಳ ಚಿಕಿತ್ಸೆ ನೀಡಲು ಮಾಡುವ ಸುರಕ್ಷಿತ ಪ್ರಕ್ರಿಯೆ

ಡಿ ಆ್ಯಂಡ್ ಸಿ ಗರ್ಭಕೋಶದ ತೊಂದರೆಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಾಡುವ ವಿಧಾನ. ವಿಶೇಷವಾದ ಉಪಕರಣವನ್ನು ಗರ್ಭಾಶಯದ ಒಳಭಾಗಕ್ಕೆ ತೂರಿಸಿ ಗರ್ಭಾಶಯದ ಒಳಭಾಗದ ತೆಳುವಾದ ಪೊರೆ ಅಥವಾ ಇನ್ನಾವುದೇ ಅಂಗಾಂಗವನ್ನು ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ತೆಗೆಯಲಾಗುತ್ತದೆ. 

D-and-C-surgery ಡಿ ಆ್ಯಂಡ್ ಸಿ - ಗರ್ಭಕೋಶದ ತೊಂದರೆಗಳ ಚಿಕಿತ್ಸೆ ನೀಡಲು ಮಾಡುವ ಸುರಕ್ಷಿತ ಪ್ರಕ್ರಿಯೆಮಹಿಳೆ’ ನಮ್ಮ ಜೀವಜಗತ್ತಿನ ಅತ್ಯದ್ಬುತವಾದ ಸೃಷ್ಟಿಯಾಗಿರುತ್ತದೆ. ಪ್ರತಿ ಮಹಿಳೆಯೂ ಋತುಮತಿಯಾದಾಗಿನಿಂದ ಋತುಬಂಧವಾಗುವವರೆಗೆ 22 ರಿಂದ 35 ದಿನಗಳಿಗೊಮ್ಮೆ ಮಾಸಿಕ ಋತುಚಕ್ರ ಉಂಟಾಗುತ್ತದೆ. ಮೆದುಳಿನಿಂದ ಬರುವ ಸಂದೇಶಕ್ಕನುಗುಣವಾಗಿ ದೇಹದಿಂದ ಸ್ರವಿಸಲ್ಪಟ್ಟ ರಸದೂತಗಳ ಕಾರಣದಿಂದಾಗಿ ಗರ್ಭಾಶಯದಲ್ಲಿ; ಗರ್ಭಾಶಯದ ಒಳಪದರದಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ. ಋತುಚಕ್ರ ಆರಂಭವಾದ 14 ರಿಂದ 16ನೇ ದಿನದಲ್ಲಿ ಅಂಡಾಶಯದಿಂದ ಅಂಡೋತ್ಪತ್ತಿಯಾಗುತ್ತದೆ.

ಈ ಋತುಚಕ್ರದಲ್ಲಿ ಸಕಾಲದಲ್ಲಿ ಲೈಂಗಿಕ ಸಂಪರ್ಕದಿಂದ ಅಂಡಾಣು ಮತ್ತು ವಿರ್ಯಾಣುಗಳು ಫಲಿತವಾದಲ್ಲಿ ಗರ್ಭಧಾರಣೆಯಾಗುತ್ತದೆ. ಇಲ್ಲವಾದಲ್ಲಿ ರಸದೂತಗಳಿಂದಾಗಿ ರಚಿತವಾದ ಗರ್ಭಕೋಶದ ಒಳಪದರ ಕಳಚಿ ಬೀಳುತ್ತದೆ. ಇದನ್ನೇ ಮಾಸಿಕ ಋತುಚಕ್ರ ಎನ್ನಲಾಗುತ್ತದೆ. ಕಾರಣಾಂತರಗಳಿಂದ ಈ ರಸದೂತಗಳಲ್ಲಿನ ವೈಪರೀತ್ಯದಿಂದಾಗಿ ಮಹಿಳೆಯ ದೇಹದಲ್ಲಿ ಈ ಪ್ರಕ್ರಿಯೆ ನಡೆಯದೇ ಇರಲೂಬಹುದು. ಒಟ್ಟಿನಲ್ಲಿ ಋತುಚಕ್ರದ ಎಲ್ಲ ಪ್ರಕ್ರಿಯೆಗಳೂ ರಸದೂತದ ನಿಯಂತ್ರಣದಲ್ಲಿ ಇರುತ್ತದೆ. ವೈದ್ಯರು ಗರ್ಭಕೋಶದ ತೊಂದರೆಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಾಡುವ ವಿಧಾನವನ್ನು ‘ಡಿ ಆ್ಯಂಡ್ ಸಿ’ ಎನ್ನುತ್ತಾರೆ.

ಮಹಿಳೆಯರ ಗರ್ಭಕೋಶದ ಒಳಭಾಗದಲ್ಲಿನ ತೆಳುವಾದ ಪದರ ಅಥವಾ ಇನ್ನಾವುದೇ ಅಂಗಾಂಶವನ್ನು ತೆಗೆಯುವ ಪ್ರಕ್ರಿಯೆಗೆ ಡಯಲೇಶನ್ ಮತ್ತು ಕ್ಯುರಟಾಜ್ ಎಂದು ಸಂಭೋದಿಸಲಾಗುತ್ತದೆ. ಸಂಕ್ಷಿಪ್ತವಾಗಿ ವೈದ್ಯಕೀಯ ಭಾಷೆಯಲ್ಲಿ ‘ಡಿ ಆ್ಯಂಡ್ ಸಿ’ ಎನ್ನಲಾಗುತ್ತದೆ. ಈ ಪ್ರಕ್ರಿಯೆಯನ್ನು ನುರಿತ ಸ್ತ್ರೀ ರೋಗ ತಜ್ಞರು ಮತ್ತು ಪ್ರಸೂತಿ ತಜ್ಞರು ಮಾತ್ರವೇ ಸುರಕ್ಷಿತವಾಗಿ ಮಾಡಬಹುದಾಗಿದ್ದು, ಕೆಲವೊಂದು ರೋಗಗಳ ಪತ್ತೆಗೆ ಹಾಗೂ ಕೆಲವೊಮ್ಮೆ ರೋಗದ ಚಿಕಿತ್ಸೆಗಾಗಿಯೂ ಮಾಡಲಾಗುತ್ತದೆ.

ಗರ್ಭಾಶಯದ ಕೊರಳನ್ನು ಸರ್ವಿಕ್ಸ್ ಎಂದು ಕರೆಯುತ್ತಾರೆ. ಈ ಕೊರಳಿನ ಭಾಗ ಬಹಳ ಕಿರಿದಾಗಿರುತ್ತದೆ. ವಿಶೇಷವಾದ ಉಪಕರಣವನ್ನು ಬಳಸಿ ಈ ಕಿರಿದಾದ ಗರ್ಭಾಶಯದ ಕೆಳಭಾಗವಾದ ಕೊರಳನ್ನು ಡಯಲೇಷನ್ ಮಾಡಿ ಅಥವಾ ಹಿಗ್ಗಿಸಲಾಗುತ್ತದೆ. ಹೀಗೆ ಹಿಗ್ಗಿಸಿದ ಕೊರಳಿನ ಮುಖಾಂತರ ಕ್ಯುರೆಟ್ ಎನ್ನುವ ವಿಶೇಷವಾದ ಉಪಕರಣವನ್ನು ಗರ್ಭಾಶಯದ ಒಳಭಾಗಕ್ಕೆ ತೂರಿಸಿ ಗರ್ಭಾಶಯದ ಒಳಭಾಗದ ತೆಳುವಾದ ಪೊರೆ ಅಥವಾ ಇನ್ನಾವುದೇ ಅಂಗಾಂಗವನ್ನು ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ತೆಗೆಯಲಾಗುತ್ತದೆ. ಈ ಎರಡೂ ಪ್ರಕ್ರಿಯೆಗಳನ್ನು ಒಟ್ಟಾಗಿ ‘ಡಿ ಆ್ಯಂಡ್ ಸಿ’ ಎಂದು ಕರೆಯುತ್ತಾರೆ.

ಯಾಕಾಗಿ ಮಾಡುತ್ತಾರೆ?

‘ಡಿ ಆ್ಯಂಡ್ ಸಿ’ ಪ್ರಕ್ರಿಯೆಯನ್ನು ನುರಿತ ವೈದ್ಯರು ರೋಗದ ಪತ್ತೆಗೆ ಮತ್ತು ರೋಗದ ಚಿಕಿತ್ಸೆಗೆ ಬಳಸುತ್ತಾರೆ. ಒಬ್ಬ ಮಹಿಳೆ ಋತುವತಿಯಾದ ನಂತರ ಋತುಬಂಧವಾಗುವವರೆಗೆ ಹಲವಾರು ಗರ್ಭಕೋಶದ ಸಮಸ್ಯೆಗಳಿಂದ ಬಳಸುವ ಸಾಧ್ಯತೆ ಇದ್ದು, ರೋಗಿಯ ರೋಗದ ಗುಣಲಕ್ಷಣಗಳನ್ನು ಆಧರಿಸಿ ವೈದ್ಯರು ಸೂಕ್ತ ನಿರ್ಣಯ ಸಕಾಲದಲ್ಲಿ ಮಾಡುತ್ತಾರೆ.

ರೋಗ ಪತ್ತೆ ಹಚ್ಚುವ ಸಲುವಾಗಿ

(1) ಗರ್ಭಕೋಶದಿಂದ ಅತಿಯಾದ ರಕ್ತಸ್ರಾವವಾಗುತ್ತಿದ್ದಲ್ಲಿ, ಯಾವ ಕಾರಣದಿಂದಾಗಿ ರಕ್ತಸ್ರಾವವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು.
(2) ಋತುಬಂಧವಾದ ಬಳಿಕವೂ ಬಹಳಷ್ಟು ರಕ್ತಸ್ರಾವವಾಗುತ್ತಿದ್ದಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ.
(3) ಗರ್ಭಕೋಶದ ಕೊರಳಿನ ಪರೀಕ್ಷೆ ಸಂದರ್ಭದಲ್ಲಿ ನಿಮ್ಮ ವೈದ್ಯರು ಅಸಹಜವಾದ ಜೀವಕೋಶಗಳನ್ನು ಗರ್ಭಾಶಯದ ಕೊರಳಿನ ಭಾಗದಲ್ಲಿ ಕಂಡುಬಂದಲ್ಲಿ ಹೆಚ್ಚಿನ ಮಾಹಿತಿಗಾಗಿ ‘ಡಿ ಆ್ಯಂಡ್ ಸಿ’ ಮಾಡಿಸಲು ನಿರ್ದೇಶಿಸಬಹುದು.
(4)  ನಿಮ್ಮ ಗರ್ಭಾಶಯದ ಒಳಪದರ ದಪ್ಪಗಾಗಿರುವುದನ್ನು ಸಂದೇಹಿಸಿದಲ್ಲಿ ನಿಮಗೆ ‘ಡಿ ಆ್ಯಂಡ್ ಸಿ’ ಮಾಡಿಸಲು ಆದೇಶಿಸಬಹುದು.
(5) ವಿಕಿರಣ ಚಿಕಿತ್ಸೆಯ ಮೊದಲು ಮತ್ತು ಹಿಸ್ಟರೋಸ್ಕೋಪಿ ಎಂಬ ಗರ್ಭಾಶಯದ ರೋಗ ಪತ್ತೆಹಚ್ಚುವ ಪ್ರಕ್ರಿಯೆಯ ಮೊದಲು ‘ಡಿ ಆ್ಯಂಡ್ ಸಿ’ ಮಾಡಲಾಗುತ್ತದೆ.

ರೋಗದ ಚಿಕಿತ್ಸೆಯ ಉದ್ದೇಶಕ್ಕಾಗಿ

ರೋಗದ ಚಿಕಿತ್ಸೆಗಾಗಿ ‘ಡಿ ಆ್ಯಂಡ್ ಸಿ’ ಮಾಡುವಾಗ ವೈದ್ಯರು ಗರ್ಭಾಶಯದ ಒಳಭಾಗದ ಪದರವನ್ನು ಸಂಪೂರ್ಣವಾಗಿ ತೆಗೆಯುತ್ತಾರೆ.
1) ಅಬಾರ್ಷನ್ ಆದ ಬಳಿಕ ಗರ್ಭಾಶಯದ ಒಳಭಾಗದಲ್ಲಿ ಉಳಿದಿರಬಹುದಾದ ಅಂಗಾಂಶಗಳನ್ನು ತೆಗೆಯುವ ಉದ್ದೇಶದಿಂದ ‘ಡಿ ಆ್ಯಂಡ್ ಸಿ’ ಮಾಡಲಾಗುತ್ತದೆ. ಹೀಗೆ ಉಳಿದು ಹೋದ ಅಂಗಾಂಶಗಳಿಂದ ತೀವ್ರ ರಕ್ತಸ್ರಾವ ಅಥವಾ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
2) ಗರ್ಭಾಶಯದ ಒಳಗೆ ಬೆಳೆದಿರಬಹುದಾದ ಅಪಾಯಕಾರಿಯಲ್ಲದ ಗರ್ಭಾಶಯದ ಸಣ್ಣಪುಟ್ಟ ಗಡ್ಡೆಗಳನ್ನು (ಪಾಲಿಪ್) ತೆಗೆಯುವುದಕ್ಕಾಗಿ ‘ಡಿ ಆ್ಯಂಡ್ ಸಿ’ ಮಾಡಲಾಗುತ್ತದೆ.
3) ಮಗು ಜನಿಸಿದ ಬಳಿಕ ಅತಿಯಾದ ರಕ್ತಸ್ರಾವ ಇದ್ದಲ್ಲಿ ಗರ್ಭಾಶಯದೊಳಗೆ ಇರಬಹುದಾದ ಪ್ಲಾಸೆಂಟಾ ಅಂಗಾಂಶವನ್ನು ಪೂರ್ತಿಯಾಗಿ ತೆಗೆಯಲು ‘ಡಿ ಆ್ಯಂಡ್ ಸಿ’ ಮಾಡಲಾಗುತ್ತದೆ.
4) ಗರ್ಭಕೋಶದ ಕೊರಳು ಮುಚ್ಚಿಹೋಗಿ ಗರ್ಭಾಶಯದೊಳಗೆ ರಕ್ತ ಅಥವಾ ಕೀವು ಹೆಪ್ಪುಗಟ್ಟಿದಾಗ ‘ಡಿ ಆ್ಯಂಡ್ ಸಿ’ ಮಾಡಿ ರಕ್ತಸ್ರಾವ ನಿಲ್ಲಿಸಲಾಗುತ್ತದೆ ಮತ್ತು ಸೋಂಕು ಹರಡದಂತೆ ಮಾಡುತ್ತಾರೆ.

ತೊಂದರೆಗಳು ಏನು?

‘ಡಿ ಆ್ಯಂಡ್ ಸಿ’ ಅತ್ಯಂತ ಸುರಕ್ಷಿತವಾದ ಪ್ರಕ್ರಿಯೆಯಾಗಿದ್ದು, ನುರಿತ ವೈದ್ಯರು ಯಾವುದೇ ತೊಂದರೆ ಇಲ್ಲದಂತೆ ನಿರ್ವಹಿಸುತ್ತಾರೆ. ಆದರೆ ಕೆಲವೊಮ್ಮೆ ತೊಂದರೆಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ.
1) ಗರ್ಭಾಶಯ ಹರಿದು ಹೋಗುವುದು.
2) ಗರ್ಭಕೋಶದ ಕೊರಳು ಹರಿಯುವುದು
3) ಸುರಕ್ಷಿತವಾದ ಸೋಂಕು ರಹಿತವಾದ ಆಪರೇಷನ್ ಥಿಯೇಟರ್‍ನಲ್ಲಿ ‘ಡಿ ಆ್ಯಂಡ್ ಸಿ’ ಮಾಡಿಸದಿದ್ದಲ್ಲಿ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಇದು ಬಹಳ ವಿರಳವಾಗಿರುತ್ತದೆ.
4) ಅತ್ಯಧಿಕ ರಕ್ತಸ್ರಾವ, ಕೆಲವೊಮ್ಮೆ ರಕ್ತನಾಳಗಳು ಹರಿದು ಮತ್ತಷ್ಟು ರಕ್ತಸ್ರಾವ ಉಂಟಾಗುವ ಸಾಧ್ಯತೆಯೂ ಇರುತ್ತದೆ.
5) ಅತಿಯಾದ ಬಲಪ್ರಯೋಗ ಮಾಡಿ ‘ಡಿ ಆ್ಯಂಡ್ ಸಿ’ ಮಾಡಿದಲ್ಲಿ ಗರ್ಭಾಶಯದ ಒಳ ಗೋಡೆಗಳು ಒಂದಕ್ಕೊಂದು ಕೂಡಿಕೊಂಡು ಬಂಜೆತನಕ್ಕೂ ಕಾರಣವಾಗಬಹುದು.

ಯಾರು ಮಾಡುತ್ತಾರೆ?

‘ಡಿ ಆ್ಯಂಡ್ ಸಿ’ ಅತ್ಯಂತ ನಾಜೂಕಿನ ಆಪರೇಷನ್ ಆಗಿದ್ದು, ನುರಿತ ಪ್ರಸೂತಿ ವೈದ್ಯರು ಈ ಪ್ರಕ್ರಿಯೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಮತ್ತು ಬರಿಸುವ ಔಷಧಿ ಅಥವಾ ಅರಿವಳಿಕೆ ಔಷಧಿ ನೀಡಿ ಮಾಡಲಾಗುತ್ತದೆ. ಸುಸಜ್ಜಿತವಾದ ಸೋಂಕುರಹಿತವಾದ ಆಪರೇಷನ್ ಕೊಠಡಿಯಲ್ಲಿ ಅರಿವಳಿಕೆ ತಜ್ಞರ ಸಹಾಯದಿಂದ ಮಾಡಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸೋಂಕು ಉಂಟಾಗದಂತೆ ಮಾಡುವ ಉದ್ದೇಶದಿಂದ ಸುರಕ್ಷಿತವಾದ ಆಂಟಿಬಯೋಟಿಕ್ ಔಷಧಿ ಬಳಸಿ, ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಒಟ್ಟಿನಲ್ಲಿ ಯಾರು, ಯಾರಿಗೆ, ಯಾವಾಗ, ಹೇಗೆ ಮಾಡಬೇಕು ಎಂಬುದನ್ನು ನಿಮ್ಮ ವೈದ್ಯರು ಸಕಾಲದಲ್ಲಿ ನಿರ್ಧರಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ.

ಯಾವಾಗ ವೈದ್ಯರನ್ನು ಕಾಣಬೇಕು?

d-and-c-surgery1ನೀವು ‘ಡಿ ಆ್ಯಂಡ್ ಸಿ’ ಮಾಡಿಸಿದ ಬಳಿಕವೂ ನಿಮಗೆ ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
1) ಆಪರೇಷನ್ ಬಳಿಕವೂ ಅತಿಯಾದ ರಕ್ತಸ್ರಾವ ಇದ್ದಲ್ಲಿ
2) ನಿಮಗೆ ಜ್ವರ ಬಂದಲ್ಲಿ
3) 48 ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಹೊಟ್ಟೆಯ ಸುತ್ತ ಸ್ನಾಯು ಸೆಳೆತ ಇದ್ದಲ್ಲಿ
4) ನೋವು ಜಾಸ್ತಿಯಾಗುತ್ತಲೇ ಹೋದಲ್ಲಿ
5) ವಾಸನಾಯುಕ್ತವಾದ ದಪ್ಪ ದ್ರವ ನಿಮ್ಮ ಯೋನಿಯ ಸುತ್ತ ಸ್ರವಿಸುತ್ತಿದ್ದಲ್ಲಿ

ಕೊನೆಮಾತು:

ಇದೊಂದು ಸ್ತ್ರೀರೋಗ ತಜ್ಞರ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರ ಎಂದರೂ ತಪ್ಪಲ್ಲ. ಈ ಅಸ್ತ್ರವನ್ನು ಹೇಗೆ, ಎಲ್ಲಿ, ಯಾವಾಗ ಬಳಸಬೇಕು ಎನ್ನುವುದು ವೈದ್ಯರಿಗೆ ಬಿಟ್ಟಿದ್ದು. ಸಕಾಲದಲ್ಲಿ ಸೂಕ್ತ ರೀತಿಯಲ್ಲಿ ಬಳಸಿದಲ್ಲಿ ರೋಗಿಗೆ ವರದಾನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Murali-Mohan-Chuntar ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!