ಮುಟ್ಟಿನ ಮುನ್ನಾದಿನಗಳಲ್ಲಿನ ಸಮಸ್ಯೆಗಳು:ಕಾರಣಗಳು ಏನು?

 “ಹೆಣ್ಣು, ಹೊನ್ನು, ಮಣ್ಣು” ಈ ಮೂರರಲ್ಲಿ ಹೆಣ್ಣು ಮತ್ತು ಮಣ್ಣಿಗೆ ಸರಿಸಮಾನರುಂಟೇ? ಭೂಮಿಗೆ ಬೆಲೆಕಟ್ಟಲು ಸಾಧ್ಯವೇ? ಹಾಗೆ ಹೆಣ್ಣಿನ ಸಹನೆ, ತಾಳ್ಮೆಗೆ ಸರಿಸಾಟಿಯುಂಟೆ? ಭೂಮಿಯಷ್ಟೇ ಸಹನಶೀಲ ಮನಸ್ಸಿರುವವಳು ಹೆಣ್ಣು. ಹೆಣ್ಣಿನ ಜೀವನವೆಲ್ಲಾ ಒಂದಲ್ಲಾ ಒಂದು ನೋವಿನಿಂದ ಕೂಡಿರುತ್ತದೆ. ಕೆಲವೊಂದು ಸಮಸ್ಯೆಗಳು, ನೋವುಗಳು ಹೆಣ್ಣಿಗೆ ಅನುಕೂಲವಾದರೂ ಆ ನೋವು, ಕೆಲವೊಂದು ಸಮಸ್ಯೆಗಳು ಬಂದಾಗ ಪಡುವ ಹಿಂಸೆ (ಪಾಡು) ಅಷ್ಟಿಷ್ಟಲ್ಲ.ಇಂತಹ ನೋವುಗಳಲ್ಲಿ ಮುಟ್ಟಿನ ಮನ್ನಾದಿನದ ನೋವು ಮಹಿಳೆಯರಲ್ಲಿ ಅದರಲ್ಲೂ ತರುಣಿಯರ ಮನಃಶಾಂತಿಯನ್ನು ಕೆಡಿಸುತ್ತದೆ. ಎಷ್ಟೇ ನೋವಿದ್ದರೂ ಇತರರೊಂದಿಗೆ ನಗುನಗುತ್ತಾ ಇರುವ (ಆಕೆಯ) ಸ್ವಭಾವಕ್ಕೆ ನಾವು ಧನ್ಯರಾಗಿರಬೇಕು.
ಮುಟ್ಟಿನ ಮುನ್ನಾದಿನದ ನೋವುಗಳೆಂದರೆ ಮಹಿಳೆಯರಲ್ಲಿ ಆರಂಭವಾಗುವ ಮುಟ್ಟಿನ ಮುನ್ನಾದಿನಗಳಲ್ಲಿ ಅಥವಾ ವಾರಗಳಲ್ಲಿ ಕಂಡುಬರುವಂತಹ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಅಥವಾ ನೋವುಗಳು. ಇಂಗ್ಲಿಷ್‍ನಲ್ಲಿ ಇದನ್ನು Pre Menstrual Syndrome (P.M.S) ಎಂದು ಕರೆಯುತ್ತಾರೆ.
ಮುಟ್ಟಿನ ಮುನ್ನಾದಿನದ ಸಮಸ್ಯೆ
ಮುಟ್ಟಿನ ನೋವು ಅಥವಾ ಸಮಸ್ಯೆ ಮುಟ್ಟು ಪ್ರಾರಂಭವಾದ ದಿನಗಳಲ್ಲಿ ಮಾತ್ರ ಇರುವುದಿಲ್ಲ. ಅದು ಮುಟ್ಟು ಆರಂಭವಾಗುವ ಮೊದಲ ದಿನಗಳಲ್ಲಿಯೂ ಕಂಡು ಬರುತ್ತದೆ. ಇದು ಮುಟ್ಟು ಪ್ರಾರಂಭವಾಗುವ ಒಂದು ವಾರದ ಮೊದಲಿಗೆ ಕೆಲವರಲ್ಲಿ ಕಂಡು ಬಂದರೆ ಮತ್ತೆ ಕೆಲವರಲ್ಲಿ ಹದಿನೈದು ದಿನಗಳ ಮೊದಲೇ ನೋವು ಕಾಣಿಸಿಕೊಳ್ಳಬಹುದು. ಈ ನೋವು ‘ಋತುಬಂಧ’ ಅಥವಾ ‘ಮುಟ್ಟು ಬಂಧ’ ವಾದ ನಂತರ ನಿಂತುಹೋಗುತ್ತದೆ.
ಹದಿಹರೆಯದ ಯುವತಿಯರಿಂದ 55 ವರ್ಷದ ಮಹಿಳೆಯರಲ್ಲಿ ತಮ್ಮ ಜೀವಿತಾವಧಿಯಲ್ಲಿ ಈ ಸಮಸ್ಯೆಯನ್ನು ಒಂದಲ್ಲಾ ಒಂದು ಸಮಯದಲ್ಲಿ ಅನುಭವಿಸಿಯೇ ಇರುತ್ತಾರೆ. ಕೆಲವರಲ್ಲಿ ಸಮಸ್ಯೆ ಕ್ಷೀಣವಾಗಿದ್ದು, ಕಡಿಮೆ ಅವಧಿಯಲ್ಲಿ ಕೂಡಿದ್ದು ನಿತ್ಯ ಚಟುವಟಿಕೆಗಳಿಗೆ ಯಾವುದೇ ತೊಂದರೆಯನ್ನುಂಟುಮಾಡಿರುವುದಿಲ್ಲ. ಮತ್ತೆ ಕೆಲವರಿಗೆ ಸಮಸ್ಯೆ ಹೆಚ್ಚು ತೀವ್ರವಾಗಿದ್ದು, ದೀರ್ಘಾವಧಿಯಲ್ಲಿದ್ದು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುತ್ತದೆ. ಇದಕ್ಕೆ ಒಂದೇ ನಿರ್ದಿಷ್ಟ ಕಾರಣವೆಂದು ಹೇಳಲಾಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಾರಣದಿಂದ ಬರಬಹುದು.
ಮುಟ್ಟಿನ ಮುನ್ನಾದಿನದ ಸಮಸ್ಯೆಗೆ ಕಾರಣಗಳು ಏನು?

  • ಹಾರ್ಮೋನ್‍ಗಳ ವೈಪರೀತ್ಯದಿಂದ
  • ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂನ ಏರಿಳಿತದಿಂದ
  • ಜನನೇಂದ್ರಿಯಗಳ ಸೋಂಕಿನಿಂದ
  • ಅಂಡಾಶಯದಲ್ಲಿ ಕಂಡುಬರುವ ಗಡ್ಡೆ, ಗಂಟು, ದುರ್ಮಾಂಸಗಳಿಂದ
  • ಹುಟ್ಟಿನಿಂದಲೇ (ಇರುವಂತಹ) ಕಂಡುಬರುವ ಕೆಲವೊಂದು ಶಾರೀರಿಕ ದೋಷಗಳಿಂದ ಸಮಸ್ಯೆಗಳು ಉಂಟಾಗಬಹುದು.

ಮುಟ್ಟಿನ ಮುನ್ನಾದಿನದ ಸಮಸ್ಯೆಯ ಚಿಹ್ನೆಗಳು ಮತ್ತು ದುಷ್ಪರಿಣಾಮಗಳು ಯಾವುವು?

1.ತಲೆನೋವು, ಮೈ ಭಾರವಾಗುವುದು

2.ಹೊಟ್ಟೆಯಲ್ಲಿ ವಿಪರೀತ ನೋವು ಕಂಡುಬರುವುದು,

3.ಹೊಟ್ಟೆ ಹಿಚುಕಿದಂತಾಗುವುದು

4.ಕೆಳಹೊಟ್ಟೆಯಲ್ಲಿ ಬಿಟ್ಟು ಬಿಟ್ಟು ನೋವು ಕಂಡುಬರುವುದು

5.ಹೊಟ್ಟೆ ಉಬ್ಬಿದಂತಾಗುವುದು ಮತ್ತು ಭಾರವಾಗಿರುವಂತೆ ಭಾಸವಾಗುವುದು,

6.ಸ್ತನಗಳಲ್ಲಿ ನೋವು, ಸ್ತನ ಭಾರವಾಗುವುದು

7.ಸೊಂಟನೋವು, ಕೈ- ಕಾಲುಗಳಲ್ಲಿ ಶಕ್ತಿಯಿಲ್ಲದಂತಾಗುವುದು

8.ಮುಖ ಮತ್ತು ಮೈ ಮೇಲೆ ಮೊಡವೆಗಳಾಗುವುದು

9.ಮಾನಸಿಕ ಕ್ಲೇಶಕ್ಕೊಳಗಾಗುವುದು

1o. ಆಲಸಿತನ,ಅಸಹನೆ,ಅಶಾಂತಿ, ಯಾವ ಕೆಲಸದಲ್ಲಿಯೂ ಶ್ರದ್ಧೆಯಿಲ್ಲದಿರುವುದು

11.ಏನೂ ಬೇಡವೆನ್ನಿಸಿ ಸುಮ್ಮನೆ ಇರುವಂತಾಗುವುದು,

12ನೆಮ್ಮದಿ, ಸಮಾಧಾನ ಇಲ್ಲದಿರುವುದು ಮುಂತಾದ ಸೂಚನೆಗಳು ಕಂಡುಬರುತ್ತವೆ.

ಒಟ್ಟಿನಲ್ಲಿ ಯಾಕಾದರೂ ಈ ಮುಟ್ಟು ಬರುತ್ತದೆಯೋ ಎಂದು ಅನ್ನಿಸುತ್ತದೆ.

ಸಮಸ್ಯೆ ಪತ್ತೆ ಹಚ್ಚಲು ಇರುವ ತಪಾಸಣಾ ವಿಧಾನಗಳು ಯಾವುವು?

ಸಮಸ್ಯೆಯ ತೀವ್ರತೆಯ ಆಧಾರದ ಮೇಲೆ ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಲಾಗುತ್ತದೆ.

  • ರಕ್ತ ಮತ್ತು ಮೂತ್ರ ಪರೀಕ್ಷೆ
  • ಹಾರ್ಮೋನ್ ಪರೀಕ್ಷೆ
  • ಅಲ್ಟ್ರಾಸೌಂಡ್ ಸ್ಕ್ಯಾನಿಂಗ್
  • ಕೆಲವು ಸಾರಿ ಈ ಮೇಲ್ಕಂಡ ಪರೀಕ್ಷೆಗಳಿಂದ ನೋವಿಗೆ ಕಾರಣವನ್ನು ಕಂಡುಹಿಡಿಯಲು ಮತ್ತು ಗುಣಪಡಿಸಲು ಆಗದೇ ಇದ್ದಂತಹ ಸಂದರ್ಭದಲ್ಲಿ ಉದರದರ್ಶಕ (ಲ್ಯಾಪ್ರೊಸ್ಕೋಪಿ)ಪರೀಕ್ಷೆ ಮತ್ತು ಗರ್ಭಕೋಶದರ್ಶಕ (ಹಿಸ್ಟಿರೋಸ್ಕೋಪಿ) ಪರೀಕ್ಷೆಗಳನ್ನು ಮಾಡಬೇಕಾಗಬಹುದು.

ಚಿಕಿತ್ಸೆಗಳು ಹೇಗೆ?
ಮುಟ್ಟಿನ ಮುನ್ನಾದಿನದ ಸಮಸ್ಯೆಗೆ ಈ ಕೆಳಕಂಡ ಕೆಲವು ಚಿಕಿತ್ಸೆಗಳನ್ನು ನೀಡಬಹುದಾಗಿದೆ.
ಸ್ವಯಂ ಚಿಕಿತ್ಸೆ
1.ದೈನಂದಿನ ಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

2.ನಿಯಮಿತ ವ್ಯಾಯಾಮ, ಏರೋಬಿಕ್ಸ್, ಯೋಗಾಸನಗಳನ್ನು ಮಾಡಬೇಕು.
3.ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು.
4.ವಿಟಮಿನ್ ‘ಬಿ’ ಇರುವಂತಹ ಮತ್ತು ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಯುಕ್ತ ಆಹಾರ ಸೇವಿಸಬೇಕು.
5.ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
6.ಪ್ರಿಮ್‍ರೋಸ್‍ನ (Prim Rose Oil) ಬಳಕೆಯಿಂದ ನೋವನ್ನು ಕಡಿಮೆ ಮಾಡಲಾಗುವುದು
7.ನೋವಿರುವ ಸ್ಥಳಕ್ಕೆ ಅಂಗಮರ್ದನ (Massage) ಮಾಡುವುದರಿಂದ ನೋವು ನಿವಾರಿಸಬಹುದು.
ವೈದ್ಯಕೀಯ ಚಿಕಿತ್ಸೆ:
ನೋವು ನಿರೋಧಕ ಔಷಧಿಗಳು,ಗರ್ಭನಿರೋಧಕ ಮಾತ್ರೆಗಳು,ಮೂತ್ರವರ್ಧಕ ಮಾತ್ರೆಗಳು, ಆತಂಕ ಕಡಿಮೆಮಾಡಲು ಮಾತ್ರೆಗಳನ್ನು ತೆಗೆದುಕೊಳ್ಳಬಹುದು.ಈ ಮಾತ್ರೆಯ ಸೇವನೆಯಿಂದ ಕೆಲವರಿಗೆ ವಾಕರಿಕೆ, ನಿದ್ರಾಹೀನತೆ ಮತ್ತು ತಲೆನೋವು ಬರಬಹುದು.ಇದನ್ನು ದೀರ್ಘಕಾಲ ತೆಗೆದುಕೊಳ್ಳಬಾರದು ಮತ್ತು ಈಸ್ಟ್ರೋಜೆನ್ ಹಾರ್ಮೋನ್‍ನನ್ನು ಕಡಿಮೆ ಮಾಡುವುದರಿಂದ ನೋವು ನಿವಾರಣೆ ಮಾಡಬಹುದು. ಗಮನವಿರಲಿ ಈ ಎಲ್ಲಾ ಔಷಧಿಗಳನ್ನು ಸೇವಿಸುವ ಮುನ್ನ ತಜ್ಞವೈದ್ಯರ ಸಲಹೆ ಅತ್ಯಗತ್ಯ.

ಪರ್ಯಾಯ ಚಿಕಿತ್ಸೆ:

ಇದಲ್ಲದೆ ಪರ್ಯಾಯ ಚಿಕಿತ್ಸೆಯೂ ಇದೆ. ಮಿರೇನಾ ವಂಕಿ ಅಳವಡಿಕೆ, ಡೆನಿಜ್ಹೋಲ್ ಮತ್ತು ಚಿಕಿತ್ಸೆಗಳೂ ಸಹ ಲಭ್ಯವಿದೆ.
ಯೋಗದ ಮೂಲಕ ಚಿಕಿತ್ಸೆ
ಯೋಗ ಮನುಕುಲಕ್ಕೆ ನಮ್ಮ ಪ್ರಾಚೀನ ಕಾಲದ ಋಷಿ ಮುನಿಗಳಿತ್ತ ಅಪೂರ್ವ ಕೊಡುಗೆ.
ಮಾನಸಿಕ ಒತ್ತಡ, ಹಾರ್ಮೋನ್ ವೈಪರೀತ್ಯ ಮತ್ತು ಬೊಜ್ಜುತನಗಳು ಬಂಜೆತನಕ್ಕೆ ಪ್ರಮುಖ ಕಾರಣಗಳು. ಯೋಗ ಚಿಕಿತ್ಸೆಯಿಂದ ಸಹ ಈ ತೊಂದರೆಗಳನ್ನು ನಿವಾರಿಸಬಹುದು.
ಪಶ್ಚಿಮೋತ್ತನಾಸನ:
ಈ ಆಸನ ನಡು ನೋವು, ಬೆನ್ನುನೋವುಗಳ ನಿವಾರಣೆಗೆ ರಾಮಬಾಣವಾಗಿದೆಯಲ್ಲದೆ ಬೆನ್ನು ಮೂಳೆಯಲ್ಲಿ ತಾರುಣ್ಯವನ್ನು ಮೂಡಿಸುವಲ್ಲಿ ಹಾಗೂ ಜೀರ್ಣಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನಪುಂಸಕತ್ವ ನಿವಾರಣೆಗೂ ಈ ಆಸನ ಸಹಕಾರಿಯಾಗಿದೆ. ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ತುಂಬಾ ನೆರವಾಗುತ್ತದೆ. ಇದಲ್ಲದೆ ಮೂತ್ರ ಜನಕಾಂಗ ಹಾಗೂ ಮೇದೋಜೀರಕಗಳಿಗೆ ಸಮರ್ಪಕ ರಕ್ತ ಪೂರೈಕೆಯಾಗುವಂತೆ ಅವು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಕಿಬ್ಬೊಬ್ಬೆಗೆ ರಕ್ತ ಪೂರೈಕೆ ಹೆಚ್ಚಾಗಿ ಆಗುತ್ತದೆ. ಸೊಂಟ, ಹೊಟ್ಟೆಗಳಲ್ಲಿ ಶೇಖರವಾದ ಕೊಬ್ಬನ್ನು ಕರಗಿಸಿ ದೇಹ ಸುಂದರವಾಗಿಡಲು ನೆರವಾಗುತ್ತದೆ.
ನೋವು, ಸಮಸ್ಯೆಗಳು ಯಾರಿಗಿರುವುದಿಲ್ಲ? ಎಲ್ಲರಿಗೂ ಒಂದಲ್ಲಾ ಒಂದು ನೋವಿರುತ್ತದೆ. ಆದ್ದರಿಂದ ನೋವಿನ ಬಗ್ಗೆ ಸಂಕಟಪಡದೇ, ಸಂಕೋಚಗೊಳ್ಳದೇ, ತಜ್ಞವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಜೊತೆಗೆ ನೋವು ಇರುವಾಗ ಮನಸ್ಸಿಗೆ ಮುದನೀಡುವಂತಹ ಕಾರ್ಯಗಳಲ್ಲಿ ಭಾಗವಹಿಸಬೇಕು. ಸಂಗೀತ, ನಾಟ್ಯ, ಧ್ಯಾನ, ಪುಸ್ತಕ ಓದುವುದು, ಸಿನಿಮಾ ನೋಡುವುದು ಮುಂತಾದ ಮನರಂಜನೆಯಲ್ಲಿ ತೊಡಗಿಕೊಂಡು ಜೀವನವನ್ನು ಆರೋಗ್ಯವಾಗಿ, ಆನಂದವಾಗಿ ನಗುನಗುತ್ತಾ ಜೀವನ ಸಾಗಿಸಬೇಕು.
ನೋವಿಗೆ ನಲಿವೊಂದೇ ದಾರಿ

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!